VISL ಗೆ ನಿಜಕ್ಕೂ ಸಿಗುತ್ತಾ ಹೊಸ ದಾರಿ? ಕುಮಾರಣ್ಣನ ಭೇಟಿ ಮತ್ತು ಭದ್ರಾವತಿ ಪ್ಯಾಕ್ಟರಿ ಬಗ್ಗೆ ಇಲ್ಲಿದೆ ವಿಶೇಷ ಸಂಗತಿ

Is VISL really getting a new way? Here is a special fact about Kumaranna's visit and Bhadravati Factory

VISL ಗೆ ನಿಜಕ್ಕೂ ಸಿಗುತ್ತಾ ಹೊಸ ದಾರಿ? ಕುಮಾರಣ್ಣನ ಭೇಟಿ ಮತ್ತು ಭದ್ರಾವತಿ ಪ್ಯಾಕ್ಟರಿ ಬಗ್ಗೆ ಇಲ್ಲಿದೆ ವಿಶೇಷ ಸಂಗತಿ
Bhadravati Factory, VISL

SHIVAMOGGA | MALENADUTODAY NEWS | Jul 1, 2024  ಮಲೆನಾಡು ಟುಡೆ   

ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವರಾಗಿರುವ ಹೆಚ್ ಡಿ ಕುಮಾರಸ್ವಾಮಿ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಗೆ ಭೇಟಿ ನೀಡಿರುವುದು ಕಾರ್ಮಿಕರಲ್ಲಿ ಹೊಸ ಜೀವಕಳೆ ತಂದಿದೆ. ಹೆಚ್ ಡಿ ಕೆ ಭೇಟಿಯಿಂದ ಪುನಃ ಕಾರ್ಖಾನೆಯ ಆರಂಭಕ್ಕೆ ವೇಗ ಸಿಗಲಿದೆ ಎಂಬ ಆಶಾವಾದ ಭದ್ರಾವತಿಯ ಜನತೆಯಲ್ಲಿದೆ.

ವಿಐಎಸ್‌ಎಲ್‌ ಭದ್ರಾವತಿ

ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠೆಯಾಗಿದ್ದ ಭದ್ರಾವತಿ ವಿಐಎಸ್ಎಲ್ ಕಾರ್ಖಾನೆ ಬಹುತೇಕ ಸ್ಥಗಿತಗೊಂಡು ವರ್ಷಗಳೇ ಕಳೆದಿದೆ. ಇದೀಗ  ಕಾರ್ಖಾನೆಗೆ ಮರು ಜೀವ ನೀಡಲು ಕೇಂದ್ರ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್,ಡಿ ಕುಮಾರಸ್ವಾಮಿ ಪ್ರಯತ್ನ ಆರಂಭಿಸಿದ್ದಾರೆ. ನಿನ್ನೆ ದಿನ  ಕಾರ್ಖಾನೆಗೆ ಅವರು ಭೇಟಿ ನೀಡಿ ಪರಿಶೀಲಿಸಿದರು. ಕಾರ್ಖಾನೆಯ ವಿವಿಧ ಘಟಕಗಳಿಗೆ ಭೇಟಿ ನೀಡಿ ಅವುಗಳ ಸ್ಥಿತಿಗತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಕಾರ್ಮಿಕರೊಂದಿಗೆ ಚರ್ಚಿಸಿದರು. ಸೇಲ್ ಅಧಿಕಾರಿಗಳಿಂದಲೂ ಸಮಾಲೋಚಿಸಿದರು. ಸಾಕಷ್ಟು ಮಾಹಿತಿ ಕಲೆ ಹಾಕಿದರು. 

ವಿಐಎಸ್‌ಎಲ್‌ ಗೆ ಮರುಜೀವ?

ನಷ್ಟದಲ್ಲಿರುವ ಕಾರ್ಖಾನೆಯನ್ನು ಸರ್ಕಾರ ಖಾಸಗೀಕರಣಗೊಳಿಸಲು ಈ ಹಿಂದೆ ಯೋಜಿಸಲಾಗಿತ್ತು. ಅದರಂತೆ 2019 ರ ಜುಲೈನಲ್ಲಿ ಕಾರ್ಖಾನೆಯ ಎಲ್ಲ ಪಾಲನ್ನು ಮಾರಾಟ ಮಾಡಲು ಟೆಂಡರ್ ಕರೆಯಲಾಗಿತ್ತು. ಆದರೆ, ನಷ್ಟದಲ್ಲಿರುವ ಘಟಕವನ್ನು ಮುನ್ನಡೆಸಲು ಯಾರೂ ಮುಂದೆ ಬರಲಿಲ್ಲ. ಹೀಗಾಗಿ ಘಟಕವನ್ನು ಬಂದ್ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿತ್ತು. ಹಳೆಯ ಯಂತ್ರಗಳು, ಆರ್ಥಿಕ ನಷ್ಟ, ದೀರ್ಘಕಾಲದವರೆಗೆ ಇಲ್ಲಿನ ಯಂತ್ರಗಳು ಸ್ಥಗಿತಗೊಂಡಿರುವ ಕಾರಣ, ಘಟಕ ಮರು ಬಳಕಿಗೆ ಯೋಗ್ಯವಲ್ಲ  ಮುಚ್ಚುವುದೊಂದೇ ಈಗಿರುವ ದಾರಿ ಎಂದು ಅಂದಿನ ಸಚಿವರು ಹೇಳಿದ್ದು, ಕಾರ್ಖಾನೆಗೆ ಕೊನೆ ಮೊಳೆ ಹೊಡೆದಂತೆ ಎಂಬಂತೆ ಭಾವಿಸಲಾಗಿತ್ತು.

ಚುನಾವಣೆ ಹಾಗೂ ಕುಮಾರಸ್ವಾಮಿ

ಆದರೆ ಕೇಂದ್ರ ಉಕ್ಕು ಖಾತೆಯ ಸಚಿವರು ಆಗಿರುವ ಹೆಚ್ ಡಿ ಕುಮಾರಸ್ವಾಮಿ ಹಲವು ಭಾರಿ ಭದ್ರಾವತಿಗೆ ಆಗಮಿಸಿದ ಸಂದರ್ಭದಲ್ಲಿ ಕಾರ್ಖಾನೆಯ ಪುನಶ್ಚೇತನಕ್ಕೆ ಎಲ್ಲಾ ರೀತಿಯ ಪ್ರಯತ್ನ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು. ಕಾಕತಾಳೀಯ ಎಂಬಂತೆ ಅವರಿಗೆ ಉಕ್ಕಿನ ಕಾತೆ ಒಲಿದಿದೆ., ಕೇಂದ್ರದಲ್ಲಿ ಮಂತ್ರಿಯಾಗುತ್ತಿದ್ದಂತೆ ಮೊದಲ ಬಾರಿಗೆ ಭದ್ರಾವತಿ ವಿಐಎಸ್ ಎಲ್ ಕಾರ್ಖಾನೆಗೆ ಭೇಟಿ ನೀಡಿದ ಅವರು ಕಾರ್ಖಾನೆಯ ಪುನರಾರಂಭಕ್ಕೆ ತೊಡಕಾಗಿರುವ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡಬಲ್ಲರು ಎಂಬ ನಂಬಿಕೆ ಕಾರ್ಮಿಕರಲ್ಲಿದೆ.

ಮಾಜಿ ಸಿಎಂ ಕುಮಾರಸ್ವಾಮಿ 

ನಷ್ಟದಲ್ಲಿರುವ ಕಾರ್ಖಾನೆಗೆ ಸ್ವಂತ ಗಣಿ ಒದಗಿಸಬೇಕೆಂಬ ಉದ್ದೇಶದಿಂದ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ ಕುಮಾರಸ್ವಾಮಿ ಸಂಡೂರು ತಾಲೂಕಿನಲ್ಲಿ 140 ಹೆಕ್ಟೇರ್ ಗಣಿ ಪ್ರದೇಶ ಗುರುತಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದರು.ಆದರೆ ಖಾಸಗಿ ವ್ಯಕ್ತಿಗಳು ಇದರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮ್ಮೆ ಹೂಡಿ ಅಡ್ಡಿಯಾದರು.ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ಸಂಡೂರು ತಾಲೂಕು ರಮಣದುರ್ಗ ಪ್ರದೇಶದಲ್ಲಿ 245 ಹೆಕ್ಚೇರ್ ಪ್ರದೇಶ ಗುರುತಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು. ಆದರೆ ರಾಜಕೀಯ ಹಿತಾಸಕ್ತಿಗಳು,ಒತ್ತಡ ಹೇರುವುದಲ್ಲಿ ವಿಫಲರಾದರು.ನಂತರ ಯಡಿಯೂರಪ್ಪ ಅಧಿಕಾರ ಕಳೆದುಕೊಂಡರು.

ಸ್ವಂತ ಗಣಿಯಿಲ್ಲ.ಕಾರ್ಮಿಕರ ಹೋರಾಟಕ್ಕೆ ಕಿಮ್ಮತ್ತಿಲ್ಲ

ವಿ.ಐ.ಎಸ್ ಎಲ್ ಕಾರ್ಖಾನೆಗೆ ಜಾಗತೀಕ ಮಟ್ಟದಲ್ಲಿ ದೊಡ್ಡ ಹೆಸರಿತ್ತು..ಆದರೆ ಕಾಲ ಕ್ರಮೇಣ ಜಾಗತೀಕ ಮಾರುಕಟ್ಟೆಲ್ಲಿ ಸ್ಟೀಲ್ ದರ ಏರಿಳಿತ ಕಂಡಿದ್ದರಿಂದ ಮತ್ತು ಪೈಪೋಟಿ ಎದುರಿಸಲಾಗದೆ ಕಾರ್ಖಾನೆ ನಷ್ಟದ ಹಾದಿಯಲ್ಲಿ ನಡೆಯಲಾರಂಭಿಸಿತು. ಜೊತೆಗೆ ಪಶ್ಚಿಮಘಟ್ಟದಲ್ಲಿ ಗಣಿಗಾರಿಕೆಗೆ ಸುಪ್ರಿಂ ಕೋರ್ಟ್‌ನ ನಿಷೇಧ ಹೇರಿದ್ದು,ಕಾರ್ಖಾನೆಯ ಭವಿಷ್ಯಕ್ಕೆ ಕೊಡಲಿಪೆಟ್ಟು ಬಿದ್ದಂತಾಯಿತು.ಕಾರಣ ಕೆಮ್ಮಣ್ಣುಗುಂಡಿ ಗಣಿಯ ಬಾಗಿಲು ಶಾಶ್ವತವಾಗಿ ಮುಚ್ಚುವಂತಾಯಿತು.ಆಂದಿನಿಂದ ಇಂದಿನಿವರಿಗೂ ಕಾರ್ಖಾನೆಗೆ ಹೊಸಗಣಿಗಾರಿಕೆಗೆ ಸ್ವಂತ ಗಣಿ ಲಭ್ಯವಾಗಲಿಲ್ಲ.

ಕಾರ್ಖಾನೆ ಪುನಶ್ಚೇತನದ ಬಗ್ಗೆ ಸೇಲ್ ನಿರ್ಲಕ್ಷ್ಯ

ನಷ್ಟದಲ್ಲಿದ್ದ ಕಾರ್ಖಾನೆಯನ್ನು ಸೇಲ್ ವಹಿಸಿಕೊಂಡು 30 ವರ್ಷವಾದರೂ ಅಧುನೀಕರಣಗೊಳಿಸಿಲ್ಲ.ಸ್ವಂತ ಗಣಿಯಿಲ್ಲದಿರುವುದು ಹಾಗು ಅತ್ಯಾಧುನಿಕ ತಂತ್ರಜ್ಞಾನವಿಲ್ಲದಿರುವುದರಿಂದ ಕಾರ್ಖಾನೆಯಲ್ಲಿ ಉತ್ಪಾದನೆಯಾಗುವ ಕಬ್ಬಿಣವನ್ನು ಮಾರುಕಟ್ಟೆ ದರದಲ್ಲಿ ಮಾರಲು ಸಾಧ್ಯವಾಗುತ್ತಿರಲಿಲ್ಲ. ಈ ಎಲ್ಲಾ ಕಾರಣದಿಂದ ಸೇಲ್,ಕಾರ್ಖಾನೆಯನ್ನು ಖಾಸಗಿ ಸಹಭಾಗಿತ್ವದ ಮೂಲಕ ನಡೆಸಲು,ಈ ಮೂಲಕ ನಷ್ಟ ಸರಿದೂಗಿಸುವ ಪ್ರಯತ್ನಕ್ಕೆ ಮುಂದಾಯಿತು.

ಸೇಲ್ ಮಲತಾಯಿ ಧೋರಣೆ,

ಸೇಲ್ ಉತ್ತರ ಭಾರತದ ಕಬ್ಬಿಣ ಕಾರ್ಖಾನೆಗಳನ್ನು ನೋಡಿಕೊಳ್ಳುವ ರೀತಿಗೂ ದಕ್ಷಿಣ ಭಾರತದ ಕಾರ್ಖಾನೆಗಳನ್ನು ನೋಡಿಕೊಳ್ಳುವ ರೀತಿ ಮಲತಾಯಿ ಧೋರಣೆಯಿಂದ ಕೂಡಿದೆ.ಉತ್ತರ ಭಾರತದ ಬಹುತೇಕ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗಳು ನಷ್ಟದಲ್ಲಿದೆ.ಅಲ್ಲಿ ಖಾಸಗಿಕರಣದ ಪ್ರಸ್ಥಾಪವಿಲ್ ಲ.2013 ರಲ್ಲಿ  ಸೇಲಂ ಸ್ವೀಲ್ ಪ್ಲಾಂಟ್ ಕೂಡ 400 ಕೋಟಿ ರೂಪಾಯಿ ನಷ್ಟದಲ್ಲಿತ್ತು.ಆದರೆ ಇಲ್ಲಿ ಕೇಂದ್ರದಲ್ಲಿ ರಾಜಕೀಯ ಪ್ರಭಾವ ಹೆಚ್ಚಿರುವುದರಿಂದ ಖಾಸಗಿಕರಣ ಸಾಧ್ಯವಾಗಿಲ್ಲ.ತಮಿಳುನಾಡು ಸಂಸದರ ರೀತಿ ರಾಜ್ಯದ ಸಂಸದರು ಮತ್ತು ಜನಪ್ರತಿನಿಧಿಗಳು ಕೇಂದ್ರದ ಮೇಲೆ ಒತ್ತಡ ಹೇರಿದ್ದರೆ ಕಾರ್ಖಾನೆಗೆ ಈ ದುಸ್ಥಿತಿ ಬರುತ್ತಿರಲಿಲ್ಲ.ಖಾಸಗಿಯವರ ಪ್ರವೇಶಕ್ಕೆ ಬಹುತೇಕ ಕಾರ್ಮಿಕರು ಮತ್ತು ಕಾರ್ಮಿಕ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದ್ದವು.

ಈ ಹಿಂದೆ ಕೇಂದ್ರ ಉಕ್ಕು ಸಚಿವರ ಭೇಟಿ ಫಲಿಸಲಿಲ್ಲ

ನಷ್ಟದಲ್ಲಿರುವ  ಕಾರ್ಖಾನೆಗೆ ಹಲವು ಬಾರಿ ಭೇಟಿ ನೀಡಿರುವ ಉಕ್ಕು ಸಚಿವರು ಕಾರ್ಖಾನೆ ಉಳಿವಿಗೆ ಬದ್ದ ಎನ್ನುತ್ತಾರೆ..ಆದರೆ ಬಂಡವಾಳ ಹೂಡುವ ವಿಚಾರ ಮಾತ್ರ ಘೋಷಣೆಯಲ್ಲಿದೆ ಬಿಟ್ಟರೆ ಕೊನೆಗೂ ಅನುಷ್ಟಾನಗೊಳ್ಳಲಿಲ್ಲ. 2015 ರಲ್ಲಿ ಕಾರ್ಖಾನೆಗೆ ಭೇಟಿ ನೀಡಿದ್ದ ಉಕ್ಕು ಸಚಿವ ನರೇಂದ್ರ ಸಿಂಗ್ ತೋಮರ್ ಒಂದು ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡುವುದಾಗಿ ಘೋಷಿಸಿದ್ದರು. ಇದಾದ ನಂತರ ಕಾರ್ಖಾನೆಗೆ ಭೇಟಿ ನೀಡಿದ ಉಕ್ಕು ಸಚಿವ ಚೌದರಿ ಬಿರೇಂದರ್ ಸಿಂಗ್ ಸಹ ಒಂದು ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡುವುದಾಗಿ ಹೇಳಿದ್ದು  ಕಾರ್ಮಿಕರ ಪಾಲಿಗೆ ಕಹಿ ಅನುಭವವೇ ಆಯಿತು..

ಹಿಂದಿನ ವರದಿ

ಕಾರ್ಖಾನೆ ವಸ್ತುಸ್ಥಿತಿ ಅರಿಯಲು ಈ ಹಿಂದೆ ಮೆಕಾಲೆ ಸಂಸ್ಥೆ ಸರ್ವೆ ನಡೆಸಿ ಉಕ್ಕು ಪ್ರಾಧಿಕಾರಕ್ಕೆ ವರದಿ ಸಲ್ಲಿಸಿತ್ತು. .ಅದರಲ್ಲಿ ಕಾರ್ಖಾನೆ ಪುನರಾರಂಭಕ್ಕೆ ತಕ್ಷಣದ ಬಂಡವಾಳವಾಗಿ 1200 ಕೋಟಿ ರೂಪಾಯಿ ಮತ್ತು ಅಧುನೀಕರಣಕ್ಕೆ ಮೂರು ಸಾವಿರ ಕೋಟಿ ರೂಪಾಯಿ ಹಣ ಬೇಕಾಗುತ್ತದೆ ಎಂದು ವರದಿ ಸಲ್ಲಿಸಿತ್ತು..ಹೀಗಿರುವಾಗ  ಉಕ್ಕು ಸಚಿವರು ಮತ್ತೊಂದು ಸರ್ವೆ ಮಾಡುವ ಬಗ್ಗೆ ಪ್ರಸ್ಥಾಪಿಸಿದ್ದು ಕೂಡ ಕಾರ್ಮಿಕರನ್ನು ಹೈರಾಣಿಗಿಸಿತ್ತು. ಇದೆಲ್ಲದರ ಬೆಳವಣಿಗೆಯ ಮುಂದುವರೆದ ಭಾಗವಾಗಿ ನಷ್ಟದಲ್ಲಿರುವ ಕಾರ್ಖಾನೆಯನ್ನು ಮುನ್ನೆಡೆಸಲು ಯಾರು ಮುಂದೆ ಬರದಿಲ್ಲ..ಯಂತ್ರೋಪಕರಣಗಳು ಮರುಬಳಕೆಗೆ ಯೋಗ್ಯವಲ್ಲ ಎಂದು ಸಬೂಬು ನೀಡಿ ಕಾರ್ಖಾನೆ ಸ್ಥಗಿತಗೊಳಿಸುವುದು ಯಾವ ನ್ಯಾಯ..ಕೇಂದ್ರ ಸರ್ಕಾರ ಮನಸ್ಸು ಮಾಡಿದ್ರೆ...ನಷ್ಟವೆಂಬ ಪದಕ್ಕೆ ತಾರ್ಕಿಕ ಅಂತ್ಯ ಹಾಡಿ ವಿ.ಐ.ಎಸ್.ಎಲ್ ಕಾಯಕಲ್ಪಕ್ಕೆ ಮುಂದಾಗಬಹುದು..ಈ ನಿಟ್ಟಿನಲ್ಲಿ ಇಂದು ಹೆಚ್ ಡಿ ಕುಮಾರಸ್ನಾಮಿಯವರ ಭೇಟಿ ಕಾರ್ಖಾನೆಯ ಕಾಯಕಲ್ಪಕ್ಕೆ ಮುನ್ನುಡಿ ಬರೆಯಲಿ ಎಂಬುದು ಎಲ್ಲರ ಆಶಾದಾಯಕವಾಗಿದೆ.