ಗಾಂಧಿ ಬಜಾರ್‌ ಬಟ್ಟೆ ಮಾರ್ಕೆಟ್‌ ನಲ್ಲಿ ಬೆಂಕಿ | 100 ಕ್ಕೂ ಹೆಚ್ಚು ಅಂಗಡಿಗಳಿಗೆ ಕಾದಿತ್ತು ಅಪಾಯ | ನಿಜಕ್ಕೂ ನಡೆದಿದ್ದೇನು?

Full details of yesterday's incident at Gandhi Bazar cloth market in Shivamogga

ಗಾಂಧಿ ಬಜಾರ್‌ ಬಟ್ಟೆ ಮಾರ್ಕೆಟ್‌ ನಲ್ಲಿ ಬೆಂಕಿ | 100 ಕ್ಕೂ ಹೆಚ್ಚು ಅಂಗಡಿಗಳಿಗೆ ಕಾದಿತ್ತು ಅಪಾಯ | ನಿಜಕ್ಕೂ ನಡೆದಿದ್ದೇನು?
Gandhi Bazar , batte market in Shivamogga

 SHIVAMOGGA | MALENADUTODAY NEWS | Jul 2, 2024  ಮಲೆನಾಡು ಟುಡೆ   

ಶಿವಮೊಗ್ಗ ನಗರದ ಬಸವೇಶ್ವರ ದೇವಸ್ತಾನದ ಹಿಂಭಾಗದ ಬಟ್ಟೆ ಮಾರ್ಕೆಟ್‌ನ ಮಳಿಗೆಗಳಲ್ಲಿ ನಿನ್ನೆ ರಾತ್ರಿ ಬೆಂಕಿ ಕಾಣಿಸಿಕೊಂಡಿತ್ತು. ಹತ್ತು ಗಂಟೆಹೊತ್ತಿಗೆ ಕಾಣಿಸಿಕೊಂಡಿದ್ದ ಬೆಂಕಿ ಎಂಟು ಅಂಗಡಿಗಳಿಗೆ ವ್ಯಾಪಿಸಿತ್ತು. ಶಿವಮೊಗ್ಗದ ಮಟ್ಟಿಗೆ ಈ ಘಟನೆ ದೊಡ್ಡ ದುರಂತವೇ ಆಗುವ ಎಲ್ಲಾ ಸಂಭವವಿತ್ತು. ಏಕೆಂದರೆ ರಬ್ಬರ್‌ ಶೀಟ್‌, ಟಾರ್ಪಲ್‌ ಬಳಸಿದ್ದಂತಹ ಸ್ಟಾಲ್‌ ರೀತಿಯ ಅಂಗಡಿಗಳ ಪೈಕಿ ಒಂದು ಅಂಗಡಿಯಲ್ಲಿ ಹೊತ್ತಿಕೊಂಡ ಬೆಂಕಿ, ಇಡೀ ಬಟ್ಟೆ ಮಾರ್ಕೆಟ್‌ಗೆ ವ್ಯಾಪಿಸುವ ಎಲ್ಲಾ ಅಪಾಯಗಳಿದ್ದವು. ಅಲ್ಲದೆ ಒತ್ತೊತ್ತಾಗಿರುವ ಮನೆಗಳಿಗೂ ಇದರಿಂದ ಅಪಾಯವಾಗುವ ಸಂಭವವಿತ್ತು. ಹೊತ್ತಿಕೊಂಡ ಬೆಂಕಿಯ ಹೊಗೆ ಅದಾಗಲೇ ಅಲ್ಲಿದ್ದ ಮನೆಗಳಲ್ಲಿ ತುಂಬಿಕೊಂಡು ಜನರು ಉಸಿರಾಡುವುದು ಸಹ ಕಷ್ಟ ಎಂಬಂತ ಸನ್ನಿವೇಶ ನಿರ್ಮಾಣವಾಗಿತ್ತು. ಇಂತಹ ಸನ್ನಿವೇಶದಲ್ಲಿ ದೇವರಂತೆ ಕಾಪಾಡಿದ್ದು ಅಗ್ನಿಶಾಮಕ ಸಿಬ್ಬಂದಿ. 

 

ಗಾಂಧಿ ಬಜಾರ್‌ ಬಟ್ಟೆ ಮಾರ್ಕೆಟ್

ಗಾಂಧಿ ಬಜಾರ್‌ ಬಟ್ಟೆ ಮಾರ್ಕೆಟ್

ದೇವರಾದ ಅಗ್ನಿಶಾಮಕ ಸಿಬ್ಬಂದಿ

 

ವಿಷಯ ತಿಳಿದು ಬೂಸರ್‌, ಟೆಂಡರ್‌ ವಾಹನಗಳಲ್ಲಿ ಬಂದ 16 ಜನ ಸಿಬ್ಬಂದಿಗೆ ಇಕ್ಕಟ್ಟಾದ ದಾರಿಯು ಸಮಸ್ಯೆಯಾಗಿತ್ತು. ಆದಾಗ್ಯು ಅಡ್ಡಿಯಾಗಿದ್ದ ಬೋರ್ಡ್‌, ವಯರ್‌, ಕಲ್ಲುಗಳನ್ನ ಸರಿಸಿಕೊಂಡೇ ಸ್ಥಳಕ್ಕೆ ಬಂದ ಅಗ್ನಿಶಾಮಕ ತುರ್ತು ಪರಿಸ್ಥಿತಿಯನ್ನ ದಿಟ್ಟತನದಿಂದ ಎದುರಿಸಿದರು. ಬೆಂಕಿ ಬಿದ್ದ ಸ್ಥಳಕ್ಕೆ ಹೋಗುವುದು ಜೀವಕ್ಕೆ ಹಾನಿಯಾಗುವಂತ ಸನ್ನಿವೇಶವಿತ್ತು. ಏಕೆಂದರೆ ಬೆಂಕಿ ಬಿದ್ದ ಅಂಗಡಿಗಳಲ್ಲಿ ಚಪ್ಪಲಿಗಳು ಸೇರಿದಂತೆ ಬೆಂಕಿ ಜ್ವಾಲೆಯನ್ನು ಹೆಚ್ಚಿಸ ಬಲ್ಲ ವಸ್ತುಗಳೆ ಹೆಚ್ಚಾಗಿದ್ದವು. ಸಾಲದ್ದಕ್ಕೆ ಸಣ್ಣ ಸಣ್ಣ ಸ್ಟಾಲ್‌ಗಳಿಗೆ ಮಳೆಯಿಂದ ಹಾನಿಯಾಗದಿರಲಿ ಎಂದು ಮೇಲುಗಡೆ ಹಾಕಲಾಗಿದ್ದ ತಗಡು ಶೀಟ್‌ಗಳಿಂದ ಹೊಗೆಯು ಬಟ್ಟೆ ಮಾರ್ಕೆಟ್‌ನ ಆವರಣದಲ್ಲಿ ದಟ್ಟವಾಗಿ ಹರಡಿತ್ತು. 

ಗಾಂಧಿ ಬಜಾರ್‌ ಬಟ್ಟೆ ಮಾರ್ಕೆಟ್

 

ಆಕ್ಸಿಜನ್‌ ಕಿಟ್‌ 

 

ಉಸಿರು ಆಡದಂತಹ ಸಂದರ್ಭದಲ್ಲಿ  ಸ್ಥಳದಲ್ಲಿದ್ದ ಅಗ್ನಿಶಾಮಕ ಸಿಬ್ಬಂದಿ, ಆಕ್ಸಿಜನ್‌ ಕಿಟ್‌ ಹಾಕಿಕೊಂಡು ಬೆಂಕಿ ದಗದಗಿಸುತ್ತಿದ್ದ ಸ್ಥಳಕ್ಕೆ ಹೊಕ್ಕರು. ಅಲ್ಲಿಂದ ಒಂದು ಮುಕ್ಕಾಲು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಆದರೆ ಇಷ್ಟಕ್ಕೆ ಕಾರ್ಯಾಚರಣೆ ಮುಗಿದಿರಲಿಲ್ಲ. ಹೊತ್ತಿದ್ದ ಬೆಂಕಿ ಆರಿಸಲಾಯ್ತಾದರೂ, ರಬ್ಬರ್‌ ಚಪ್ಪಲಿ, ಕಾಸ್ಪಿಟಿಕ್‌ ಅಂಗಡಿಗಳ ಸುಟ್ಟ ವಸ್ತುಗಳ ನಡುವೆ ಮಗುಮ್ಮಾಗಿದ್ದ ಬೆಂಕಿ ಕಿಡಿಯನ್ನ ನಂದಿಸಬೇಕಾಗಿತ್ತು. ಹಾಗಾಗಿ ಕರಲಾಗಿದ್ದ ಅಂಗಡಿಗಳ ಲಾಕರ್‌ ಮುರಿದು ಡೋರ್‌ ಮಾಡಿದ ಸಿಬ್ಬಂದಿ ಒಳಗಡೆಯಿರುವ ವಸ್ತುಗಳನ್ನ ಸರಿಸಿ ನೀರು ಸುರಿದು ಸಂಪೂರ್ಣವಾಗಿ ಬೆಂಕಿಯನ್ನ ಆರಿಸಿದರು. 

ಗಾಂಧಿ ಬಜಾರ್‌ ಬಟ್ಟೆ ಮಾರ್ಕೆಟ್

ಗಾಂಧಿ ಬಜಾರ್‌ ಬಟ್ಟೆ ಮಾರ್ಕೆಟ್

ವರ್ತಕರ ಆತಂಕ

 

ಈ ನಡುವೆ ತಮ್ಮ ಅಂಗಡಿಗೆ ಬೆಂಕಿ ಬಿತ್ತೋ ಏನೋ ಅಂತಾ ಗಾಬರಿಗೊಂಡಿದ್ದ ವರ್ತಕರು ಅಗ್ನಿಶಾಮಕ ಸಿಬ್ಬಂದಿ ಪೊಲೀಸ್‌ ಭದ್ರತೆಯ ನಡುವೆಯು ಮಾರ್ಕೆಟ್‌ ಒಳಗೆ ಬಂದು ತಮ್ಮ ತಮ್ಮ ಅಂಗಡಿಗಳಲ್ಲಿದ್ದ ಸಾಮಗ್ರಿಗಳನ್ನ ದೊಡ್ಡ ದೊಡ್ಡ ಚೀಲಕ್ಕೆ ತುಂಬಿಕೊಂಡು ಖಾಲಿ ಮಾಡುತ್ತಿದ್ದರು. ಅಲ್ಲದೆ ಅಂಗಡಿ ಭದ್ರತೆ ಬಳಸಿದ್ದ ಶೀಟ್‌ಗಳನ್ನ, ಟಾರ್ಪಲ್‌ಗಳನ್ನ ತೆಗೆದರು. ಸಂಬಂಧಿಕರನ್ನ ಕರೆದುಕೊಂಡು ಬಂದು ಅಂಗಡಿಗಳನ್ನ ಖಾಲಿ ಮಾಡುತ್ತಿದ್ದ ವರ್ತಕರದ್ದು ಜೀವಭಯದ ನಡುವೆ ದುಡಿಮೆಯ ಬಂಡಾವಾಳವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿಯಾಗಿತ್ತು. 

ಗಾಂಧಿ ಬಜಾರ್‌ ಬಟ್ಟೆ ಮಾರ್ಕೆಟ್

ಗಾಂಧಿ ಬಜಾರ್‌ ಬಟ್ಟೆ ಮಾರ್ಕೆಟ್

ಮೊಬೈಲ್‌ಗಳ ಹಾವಳಿ

ಇವೆಲ್ಲದರ ನಡುವೆ ಏನೋ ಆಯ್ತು ಅಂತಾ ಬಸವೇಶ್ವರ ದೇವಸ್ಥಾನದ ಹಿಂದೆ ಜಮಾಯಿಸಿದ ಜನರು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು. ಇದು ಕಾರ್ಯಾಚರಣೆಗೆ ಅಕ್ಷರಶಃ ಅಡ್ಡಿಯಾಗಿತ್ತು. ದೊಡ್ಡಪೇಟೆ ಪೊಲೀಸರು ಎಷ್ಟೆ ನಿಯಂತ್ರಣ ಮಾಡಿದರೂ ಸ್ತಳದಲ್ಲಿಯೇ ನಿಲ್ಲುತ್ತಿದ್ದ ಕೆಲವರು ವಿಡಿಯೋ ಚಿತ್ರೀಕರಣದಲ್ಲಿ ಮುಳುಗಿದ್ದರು. ಅದೃಷ್ಟಕ್ಕೆ ಅತ್ತಿಂದಿತ್ತ ತುಂಬಿಕೊಳ್ಳುತ್ತಿದ್ದ ಹೊಗೆಯಿಂದ ಯಾರಿಗೂ ಅಪಾಯವಾಗಿಲ್ಲ.  

ಗಾಂಧಿ ಬಜಾರ್‌ ಬಟ್ಟೆ ಮಾರ್ಕೆಟ್

ಧರ್ಮಬೇದ ಮರೆತು ಸಹಕಾರ 

ಗಾಂಧಿಬಜಾರ್‌ನ ಬಟ್ಟೆಮಾರ್ಕೆಟ್‌ನಲ್ಲಿ 200 ಕ್ಕೂ ಹೆಚ್ಚು ಅಂಗಡಿಗಳಿವೆ. ಎಲ್ಲಾ ಸಮುದಾಯಕ್ಕೆ ಸೇರಿದ ವರ್ತಕರು ಇಲ್ಲಿ ವ್ಯಾಪಾರ ಮಾಡುತ್ತಾರೆ.  ನಿನ್ನೆ ಅಲ್ಲಿ ನಡೆದಿದ್ದ ವಿಧಿಯಾಟ. ಇಂತಹ ಸಂದರ್ಭದಲ್ಲಿ ಕಾಣಿಸಿದ್ದು ಧರ್ಮಬೇದವಿಲ್ಲದ ಪ್ರಕೃತಿಯ ಜೊತೆಗಿನ ಹೋರಾಟ. ಹೌದು, ತಮ್ಮ ತಮ್ಮ ಅಂಗಡಿಗಳನ್ನ ಉಳಿಸಿಕೊಳ್ಳಲು ಆತಂಕದಲ್ಲಿಯೇ ಮುಂದಾಗಿದ್ದ ವರ್ತಕರಿಗೆ ಅಲ್ಲಿದ್ದವರೆಲ್ಲರೂ ಸಹಾಯಕ್ಕೆ ನಿಂತಿದ್ದರು. ಸುಟ್ಟು ಹೋದ ಅಂಗಡಿಯ ಮಾಲೀಕರಿಗೆ ಆಗಿದ್ದಾಯ್ತು ದೇವರ ಆಟ, ನಾಳೆ ಏನಾದರೂ ಮಾಡೋಣ ಅಂತಾ ಸಮಾಧಾನ ಹೇಳುತ್ತಿದ್ದರು. ತಮ್ಮವರದ್ದು ನಮ್ಮವರದ್ದು ಎಂದು ನೋಡದ ಸ್ಥಳೀಯ ವರ್ತಕರು, ಪ್ರತಿ ಅಂಗಡಿಯನ್ನು ಸೂಕ್ಷ್ಮವಾಗಿ ಗಮನಿಸಿ ಎಲ್ಲಾದರೂ ಕಿಡಿ ಹತ್ತಿದ್ಯಾ ಎಂದು ಪರೀಕ್ಷಿಸುತ್ತಿದ್ದರು. ಸುತ್ತಮುತ್ತಲಿನ ಪರಿಸರ ವಿದ್ಯುತ್‌ ಕಡಿತಗೊಳಿಸುವಂತೆ ಮೆಸ್ಕಾಂನವರಿಗೆ ಮನವಿ ಮಾಡಿ ಪುನಃ ಕರೆಂಟ್‌ ಕೊಡುವಾಗಲು ಪ್ರತಿ ಮಳಿಗೆಯಲ್ಲಿಯು ಪರಿಶೀಲನೆ ನಡೆಸಿದರು. ಬೆಂಕಿ ಹೊತ್ತಿಕೊಂಡಿದ್ದ ಅಂಗಡಿಗಳ ಅಕ್ಕಪಕ್ಕದ ಮಳಿಗೆಳ ಮಾಲೀಕರನ್ನ ಕರೆತಂದು, ಸಾಮಾಗ್ರಿಗಳನು ಸ್ಥಳಾಂತರ ಮಾಡಲು ನೆರವಾದರು. 

ಗಾಂಧಿ ಬಜಾರ್‌ ಬಟ್ಟೆ ಮಾರ್ಕೆಟ್

ಗಾಂಧಿ ಬಜಾರ್‌ ಬಟ್ಟೆ ಮಾರ್ಕೆಟ್

ಕಟ್ಟೆ ಹುಡುಗರ ಸಮಯಪ್ರಜ್ಞೆ 

ಸಾಮಾನ್ಯವಾಗಿ ಬಟ್ಟೆ ಮಾರ್ಕೆಟ್‌ ಕ್ಲೋಸ್‌ ಆದರೂ ಸಹ ಅಲ್ಲಿಂದ ಒಂದಷ್ಟು ಮಂದಿ ದಿನವಿಡಿಯ ಸಮಾಚಾರಗಳನ್ನ ಮಾತನಾಡುತ್ತಿರುತ್ತಾರೆ. ಹೀಗೆ ಮಾತನಾಡುತ್ತಿದ್ದ ಯುವಕರಿಗೆ ಹೊಗೆ ಬರುತ್ತಿರುವ ವಾಸನೆ ಮೂಗಿಗೆ ಬಡಿದಿದೆ. ಅವರ ಸಮಯಪ್ರಜ್ಞೆ ದೊಡ್ಡ ದುರಂತವನ್ನ ತಪ್ಪಿಸಿದೆ. ಸುಟ್ಟ ವಾಸನೆ ಬರುತ್ತಲೇ ಪರಿಶೀಲಿಸಿದ ಯುವಕರಿಗೆ ಬೆಂಕಿಯ ಕಿಡಿ ಕಾಣಿಸಿದೆ. ತಕ್ಷಣವೇ ಬಟ್ಟೆ ಮಾರ್ಕೆಟ್‌ನ ಪರಿಚಯಸ್ಥ ವರ್ತಕರಿಗೆ ಫೋನಾಯಿಸಿದ್ದಾರೆ. ಅಲ್ಲದೆ ಅಗ್ನಿಶಾಮಕ ಸಿಬ್ಬಂದಿಗೂ ಕರೆ ಮಾಡಿದ್ದಾರೆ. ಹಾಗೊಂದು ವೇಳೆ ಮಾಹಿತಿ ತಿಳಿಯುವುದು ತಡವಾಗಿದ್ದರೂ ಸಹ ನಿನ್ನೆ ಹಿಂದೆ ಚೋರ್‌ ಬಜಾರ್‌ ಅಂತಾ ಕರೆಸಿಕೊಳ್ತಿದ್ದ ಸ್ಥಳದಲ್ಲಿ ನಡೆಯುತ್ತಿದ್ದಿದ್ದು ದೊಡ್ಡ ಅನಾಹುತ. 

 

ಗಾಂಧಿ ಬಜಾರ್‌ ಬಟ್ಟೆ ಮಾರ್ಕೆಟ್

ಗಾಂಧಿ ಬಜಾರ್‌ ಬಟ್ಟೆ ಮಾರ್ಕೆಟ್

ಗಾಂಧಿ ಬಜಾರ್‌ ಬಟ್ಟೆ ಮಾರ್ಕೆಟ್

ಮಲೆನಾಡು ಟುಡೆ ಫೋಟೋಸ್‌