ಚೋರಡಿ ಅಪಘಾತ/ಅಮ್ಮಾ ರಾಘಣ್ಣ ಮಾತಾಡ್ತಿದ್ದೀನಿ! / ದೇವರಾದ ಮೆಗ್ಗಾನ್ ಸಿಬ್ಬಂದಿ/ ಜೀವಕ್ಕೆ ಜೀವ ಕೊಟ್ಟ ಶಿವಮೊಗ್ಗ ಜನ! ಕುಮದ್ವತಿ ಸೇತುವೆ ಮೇಲೆ ನಡೆದ ಘಟನೆಯ ಪೂರ್ತಿ ಚಿತ್ರಣ

Choradi Accident/ Full report of the events that took place after yesterday's bus accident

ಚೋರಡಿ ಅಪಘಾತ/ಅಮ್ಮಾ ರಾಘಣ್ಣ ಮಾತಾಡ್ತಿದ್ದೀನಿ! / ದೇವರಾದ ಮೆಗ್ಗಾನ್ ಸಿಬ್ಬಂದಿ/ ಜೀವಕ್ಕೆ ಜೀವ ಕೊಟ್ಟ ಶಿವಮೊಗ್ಗ ಜನ! ಕುಮದ್ವತಿ ಸೇತುವೆ  ಮೇಲೆ ನಡೆದ ಘಟನೆಯ ಪೂರ್ತಿ ಚಿತ್ರಣ

KARNATAKA NEWS/ ONLINE / Malenadu today/ May 11, 2023 GOOGLE NEWS  

ಶಿವಮೊಗ್ಗ ನಿನ್ನೆ ಯಾವುದು ಗೃಹಣ ಇರಲಿಲ್ಲ, ಕಾಳ ಅಮಾವಾಸ್ಯೆಯು ಆಗಿರಲಿಲ್ಲ. ಆದಾಗ್ಯು ಶಿವಮೊಗ್ಗ ಜಿಲ್ಲೆ ಚೋರಡಿಯ ಆ ತಿರುವಿನಲ್ಲಿ ಭೀಕರ ಅಪಘಾತವೊಂದು ಸಂಭವಿಸಿತ್ತು. ಕುಮದ್ವತಿ ಸೇತುವೆಯ ಅಗಲವಾದ ಟರ್ನಿಂಗ್​ನಲ್ಲಿ ಎರಡು ಖಾಸಗಿ ಬಸ್​ಗಳು ಭೀಭತ್ಸವಾಗಿ ಡಿಕ್ಕಿ ಹೊಡೆದಿವೆ. ಅಲ್ಲಿ ನಡೆದಿದ್ದೇನು? ಘಟನೆ ನಂತರ ಇಡೀ ಶಿವಮೊಗ್ಗ ಹಲವರ ಜೀವ ಉಳಿಸಿದ್ದು ಹೇಗೆ ಎಂಬುದೇ ಈ ಬರಹ… 

ಕುಮದ್ವತಿ ಸೇತುವೆ ಮೇಲೆ

ಕುಮದ್ವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಹಿಂದಿನಿಂದಲೂ ಡೇಂಜರಸ್​ ಸ್ಪಾಟ್. ಹಳೇಸೇತುವೆ ಪಕ್ಕದಲ್ಲಿ ಅಗಲವಾದ ಹೊಸಸೇತುವೆ ಕಟ್ಟಿ, ಹೈವೆ ಮಾಡಿದರೂ ಇಲ್ಲಿ ಅಪಘಾತ ತಪ್ಪಿಲ್ಲ. ಹತ್ತಿರದಲ್ಲಿಯೇ ಚೌಡೇಶ್ವರಿಯ ಗುಡಿಯಿದೆ. ಆ ತಾಯಿ ಆಶೀರ್ವಾದದ ಹೊರತಾಗಿ, ನಿನ್ನೆ ಭೀಕರ ಬಸ್ ಅಪಘಾತವೊಂದು ಸಂಭವಿಸಿದೆ. 

ಬುಕ್ಕಾಬುಕ್ಕಾ ಡಿಕ್ಕಿ

ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಹಾಗೂ ಅದೇ ಸಮಯದಲ್ಲಿ ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಬರುತ್ತಿದ್ದ ಖಾಸಗಿ ಬಸ್​ಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಎರಡು ಬಸ್​ಗಳು ಅರ್ಧಕರ್ಧ ಒಂದರೊಳಗೆ ಒಂದು ಹೋಗಿದ್ದವು ಅಂದರೆ, ಅದೆಷ್ಟು ಸ್ಪೀಡ್​ನಲ್ಲಿ ಬಸ್​ಗಳು ಡಿಕ್ಕಿಯಾಗಿರಬಹುದು ಎಂಬುದನ್ನ ನೀವೇ ಯೋಚಿಸಿ ನೋಡಿ. ಎರಡು ಬಸ್​ಗಳನ್ನ ಬೇರ್ಪಡಿಸಲು ಜೆಸಿಬಿಯೇ ಬರಬೇಕಾಯ್ತು. 

ಜೀವಕ್ಕೆ ಜೀವ ಕೊಟ್ಟ  ಜನ 

 ಕುಮದ್ವತಿ ಸೇತುವೆ ಬಳಿ ಸಂಭವಿಸಿದ ಅಪಘಾತದ ಬೆನ್ನಲ್ಲೆ ಇಡೀ ಶಿವಮೊಗ್ಗ ಕ್ಷಿಪ್ರ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಪೊಲೀಸ್ ಇಲಾಖೆ, ಜಿಲ್ಲಾಡಳಿತ, ಆ್ಯಂಬುಲೆನ್ಸ್​ ಚಾಲಕರು ಹಾಗೂ ಸ್ಥಳೀಯರು, ಜನಪ್ರತಿನಿಧಿಗಳು ಅಷ್ಟೆಯೇಕೆ ದಾರಿಯಲ್ಲಿ ಸಾಗುತ್ತಿದ್ದ ಕಾರಿನ ಮಾಲೀಕರು ಸಹ ನಿನ್ನೆಯ ಘಟನೆಯಲ್ಲಿ ನೆರವಿಗೆ ನಿಂತಿದ್ದರು. ಒಂದು ಜೀವವನ್ನು ಉಳಿಸಲು ಕೇವಲ ಅರ್ಧಗಂಟೆಯ ಹೊತ್ತಿನಲ್ಲಿ ನಡೆಸಿದ ಪ್ರಯತ್ನಗಳು ನಿಜಕ್ಕೂ ವಿಶೇಷವಾಗಿತ್ತು.. 

ಸಂಜೆ ಆರು ಗಂಟೆಯ ಸುಮಾರಿಗೆ ಸಂಭವಿಸಿದ ಅಪಘಾತ

ನಿನ್ನೆ ಸಂಜೆ ಆರು ಗಂಟೆಯ ಮೇಲೆ ಕೆಲ ನಿಮಿಷಗಳು ಕಳೆದಿದ್ದವು, ಆ ಕಡೆ ಹಿತ್ಲಾ ದಾಟಿಕೊಂಡು ಕಟ್ಟಿಗೆಹಳ್ಳ, ಮರಾಠಿ ಕ್ಯಾಂಪ್ ಮೂಲಕ ಚೋರಡಿಗೆ ಬಂದಿದ್ದ ಬಸ್​ ಶಿವಮೊಗ್ಗದ ಕಡೆಗೆ ಹೊರಟಿತ್ತು. ಬಸ್​ ಓವರ್​ ಸ್ಪೀಡ್​ನಲ್ಲಿತ್ತು, ಚಾಲಕ ಅರುಣ್​ ಗಡಿಬಿಡಿಯಲ್ಲಿದ್ದ. ಏಳು ಗಂಟೆಗೆಲ್ಲಾ ಶಿವಮೊಗ್ಗ ಮುಟ್ಟುವ ಆತುರದಲ್ಲಿದ್ದ. 

ಕುಮದ್ವತಿ ಸೇತುವೆ ಅಪಘಾತ ವಲಯ

ಹಾಗಾಗಿ ಸಾಗರ ಹೈವೆ ಸಿಗುತ್ತಲೇ ಶಿವಮೊಗ್ಗದ ಕಡೆಗೆ ಬಸ್​ ವೇಗವನ್ನು ಹೆಚ್ಚಿಸಿದ್ದ,. ಆದರೆ ಕುಮಧ್ವತಿ ಸೇತುವೆ ತಿರುವು ಅಂದುಕೊಂಡಂತೆ ಎಂದಿಗೂ ಇಲ್ಲ. ಇಲ್ಲಿ ಮಳೆಗಾಲ ಕಳೆದವರಿಗೆ ಕುಮದ್ವತಿ ಹಾಗೂ ಅದರ ಸೇತುವೆ ಅದೆಷ್ಟೂ ಭೀಭತ್ಸ ಎಂಬುದು ಅನುಭವಕ್ಕೆ ಬಂದಿರುತ್ತದೆ. ಇದುವರೆಗೂ ಈ ತಿರುವಿನಲ್ಲಿ ಆದ ಅಪಘಾತಗಳಿಗೆ ಲೆಕ್ಕವಿಲ್ಲ. ದಡ್ ಅಂತಾ ಶಬ್ದ ಬಂತೆಂದರೆ, ಊರೆವರೆಲ್ಲಾ ಮೊದಲು ಇಲ್ಲಿಗೆ ಓಡಿ ಬರುತ್ತಾರೆ. ಸ್ಥಳ ಮಹಿಮೆಯೋ ಅಥವಾ ಜನರ ಅಚಾತುರ್ಯವೋ ಆಕ್ಸಿಡೆಂಟ್​ಗಳು ಇಲ್ಲಿ ಸಂಭವಿಸುತ್ತಿರುತ್ತದೆ. 

ಪ್ರತ್ಯಕ್ಷ ದರ್ಶಿ ಹೇಳಿದ್ದೇನು?

ನಿನ್ನೆಯು ಸಹ ಆಕ್ಸಿಡೆಂಟ್​ ಸಂಭವಿಸಿದೆ. ಚೋರಡಿಯ ಬಳಿ ನಡೆದ ಅಪಘಾತದ ಘಟನೆಯನ್ನು ಪ್ರತ್ಯಕ್ಷ ದರ್ಶಿ ಹಾಗು ಗಾಯಾಳು ಒಬ್ಬರು ವಿವರಿಸಿದ್ದಾರೆ ಅವರು ಹೇಳುವ ಪ್ರಕಾರ, ಶಿಕಾರಿಪುರದಿಂದ ಬರುತ್ತಿದ್ದ ಬಸ್ ಸಂಜೆ ಏಳು ಗಂಟೆಯೊಳಗೆ ಶಿವಮೊಗ್ಗ ತಲುಪಬೇಕಿತ್ತಂತೆ. ಆ ಕಾರಣಕ್ಕೆ ಹಿತ್ಲಾ ದಾಟುತ್ತಲೇ ಚಾಲಕ ಓವರ್ ಸ್ಪಿಡ್​​ ನಲ್ಲಿ ಬಸ್ ಚಲಾಯಿಸಿದ್ದಾನೆ. 

ಓವರ್ ಟೇಕ್ ಮಾಡುವಾಗ ಡಿಕ್ಕಿ

ಕುಮದ್ವತಿ ಸೇತುವೆಯ ಬಳಿ ಓವರ್​ ಟೇಕ್​ ಮಾಡುತ್ತಿದ್ದಾಗ ಎದುರಿನಿಂದ ಇನ್ನೊಂದು ಬಸ್​ ಬಂದಿದೆ. ಗಾಡಿ ಕಂಟ್ರೋಲ್​ಗೆ ಸಿಗಲಿಲ್ಲ. ಎದುರಿನ ಬಸ್​ ನೇರವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಆಕ್ಸಿಡೆಂಟ್ ಆಗಿದೆ ಎನ್ನುತ್ತಾರೆ. 

ಓವರ್​ ಸ್ಪೀಡ್ ಕಾರಣ!

ಅತಿವೇಗ ಅಪಾಯಕಾರಿ ಎಂದು ಗೊತ್ತಿದ್ದರೂ ಖಾಸಗಿ ಬಸ್​ ಗಳು ತಮ್ಮ ರೂಟ್ ಟೈಮಿಂಗ್ಸ್​ನ್ನ ಹೇಗಾದರೂ ರೀಚ್ ಮಾಡಬೇಕು ಎಂಬ ಕಾರಣಕ್ಕೆ ಓವರ್​ ಸ್ಪೀಡ್​ನಲ್ಲಿ ಚಲಾಯಿಸುವುದು ಹೊಸದೇನಲ್ಲ . ಇದರ ಪರಿಣಾಮ ಎನಾಗುತ್ತದೆ ಎಂಬುದಕ್ಕೆ ನಿನ್ನೆ ಘಟನೆ ಸಾಕ್ಷಿಯಾಗಿದೆ.

ಒಂದಾಯ್ತು ಶಿವಮೊಗ್ಗ

ಘಟನೆಯೊಂದು ನಡೆದೋಯ್ತು, ಎರಡು ಬಸ್​ಗಳು ಒಂದಕ್ಕೊಂದು ಸುಮಾರು 8-9 ಅಡಿ ಒಳಕ್ಕೆ ಹೋಗಿ ಸಿಲುಕಿಕೊಂಡಿದೆ. ಡ್ರೈವರ್​ ಬಸ್​ನಲ್ಲಿಯೇ ನರಳಾಡ್ತಿದ್ದಾರೆ.  ಎರಡು ಬಸ್​ಗಳಲ್ಲಿ ಬರೋಬ್ಬರಿ ಜನರು. ಎಲ್ಲರಿಗೂ ಪೆಟ್ಟಾಗಿದೆ. ಚೋರಡಿ ಊರಿನವರು ಎದ್ನೋ ಬಿದ್ನೋ ಅಂತಾ ಮೊದಲು ಓಡಿ ಬಂದು ನೋಡುತ್ತಾರೆ. ಆದರೆ, ಅವರಿಗೆ ಕೈ ಕಾಲು ಆಡುವುದಿಲ್ಲ. ಏಕೆಂದರೆ, ಯಾರನ್ನ ಅಂತಾ ಕಾಪಾಡೋದು! ಏನು ಮಾಡೋದು ಒಂದು ಗೊತ್ತಾಗುತ್ತಿಲ್ಲ... ಶಿವ..ದೇವಾ ಅಂದುಕೊಂಡು ಸಿಕ್ಕವರಿಗೆಲ್ಲಾ ಫೋನಾಯಿಸುತ್ತಾರೆ. 

ಕೆಲವೇ ನಿಮಿಷದಲ್ಲಿ ಆ್ಯಂಬುಲೆನ್ಸ್ ರವಾನೆ

ದೇವರ ಕರೆಯೋ ಏನೋ, ಚೋರಡಿ ಮಂದಿಯ ಫೋನ್​ ಕಾಲ್ ಕೇಳಿ ಪ್ರತಿಯೊಬ್ಬರು ಘಟನೆ ಸ್ಥಳಕ್ಕೆ ಓಡಿ ಬರುತ್ತಾರೆ. ಇತ್ತ ಶಿವಮೊಗ್ಗದಲ್ಲಿ ಘಟನೆ ನಡೆದ ಕೆಲವೇ ನಿಮಿಷದಲ್ಲಿ ಮಾಜಿ ಜನಪ್ರತಿನಿಧಿ ತಮ್ಮಡಿಹಳ್ಳಿ ನಾಗರಾಜ್​ರಿಗೆ ವಿಷಯ ತಿಳಿಯುತ್ತದೆ. ಬಿಜೆಪಿ ಕಚೇರಿಯಿಂದ ಸೀದಾ ಮೆಗ್ಗಾನ್​ಗೆ ದೌಡಾಯಿಸಿ, ಅಲ್ಲಿದ್ದ ಆ್ಯಂಬುಲೆನ್ಸ್​ ಚಾಲಕರಿಗೆ ಸಹಾಯ ಮಾಡುವಂತೆ ಕೋರುತ್ತಾರೆ. ಚಾಲಕರು ಕೂಡ , ಕ್ಷಣ ಮಾತ್ರವೂ ತಡಮಾಡದೇ ಸೈರನ್ ಆನ್ ಮಾಡಿಕೊಂಡು ಚೋರಡಿ ತಲುಪಿದ್ಧಾರೆ. 

ಸಿಕ್ಕ ಸಿಕ್ಕ ಕಾರಿನಲ್ಲಿ ಗಾಯಾಳು ರವಾನೆ

ಅಷ್ಟರಲ್ಲಿ ಅಲ್ಲಿದ್ದ ಸ್ಥಳೀಯರು ಗಾಯಾಳುಗಳಿಗೆ ತಮ್ಮ ಗೊತ್ತಿರುವ ರೀತಿಯಲ್ಲಿ ಆರೈಕೆಯಲ್ಲಿ, ಸಿಕ್ಕ ಕಾರಿನಲ್ಲಿ ಶಿವಮೊಗ್ಗ ಕಳುಹಿಸಲು ಆರಂಭಿಸಿದ್ದರು. ಇನ್ನೊಂದೆಡೆ ಸಾಲು ಸಾಲು ಆ್ಯಂಬುಲೆನ್ಸ್​ಗಳು ಸ್ಥಳಕ್ಕೆ ಬರುತ್ತಲೇ  ಗಾಯಾಳುಗಳನ್ನು ಅದರಲ್ಲಿ ಶಿವಮೊಗ್ಗಕ್ಕೆ ರವಾನಿಸುವ ಕೆಲಸ ಆರಂಭವಾಯ್ತು. ಆ್ಯಂಬುಲೆನ್ಸ್​ ಸಂಖ್ಯೆ ಕಡಿಮೆಯಾಗುತ್ತೆ ಎಂದು ಅನಿಸುವಾಗಲೇ ಖಾಸಗಿ ಆ್ಯಂಬುಲೆನ್ಸ್​ಗಳು ಚೋರಡಿಯತ್ತ ದೌಡಾಯಿಸಿದವು.  20-30 ನಿಮಿಷದಲ್ಲಿ ಚೋರಡಿಯಿಂದ ಗಾಯಾಳುಗಳು ಶಿವಮೊಗ್ಗದ ಮೆಗ್ಗಾನ್​ಗೆ ಶಿಪ್ಟ್ ಆಗಿದ್ದರು. 

ಆನಂದಪುರದಿಂದಲೂ ಆ್ಯಂಬುಲೆನ್ಸ್​ ಸೇವೆ/ ಕುಂಸಿ ಪೊಲೀಸರ ಹರಸಾಹಸ

ಈ ಕಡೆ ಶಿವಮೊಗ್ಗದಿಂದಷ್ಟೆ ಅಲ್ಲದೆ, ಆ ಕಡೆ ಆನಂದಪುರದ ಕಡೆಯಿಂದಲೂ ಆ್ಯಂಬುಲೆನ್ಸ್​ಗಳು ಸ್ಥಳಕ್ಕೆ ದೌಡಾಯಿಸಿದ್ದವು, ಚಾಲಕರು ತಮ್ಮ ಚಿಂತೆಯನ್ನ ಕಿಂಚಿತ್ತು ಮಾಡದೇ ಶಿವಮೊಗ್ಗಕ್ಕೆ ತಮ್ಮ ವಾಹನವನ್ನು ಓಡಿಸಿದ್ದರು. ಆ ಸ್ಪೀಡ್​ನಲ್ಲಿ ಗಾಯಾಳುಗಳನ್ನ ಮೆಗ್ಗಾನ್ ಆಸ್ಪತ್ರೆಗೆ ಕರೆತಂದ ಚಾಲಕರ ದೈರ್ಯ ಹಾಗೂ ಸಹಾಯದಿಂದಲೇ ಹಲವರ ಜೀವ ನಿನ್ನೆ ಉಳಿದಿತ್ತು. ಇನ್ನೂ ಕುಂಸಿ ಪೊಲೀಸರಂತೂ, ಸ್ಥಳದಲ್ಲಿ ಹರಸಾಹಸವನ್ನೆ ನಡೆಸಿದ್ದರು. ಅಗ್ನಿಶಾಮಕ ಸಿಬ್ಬಂದಿ ತಮ್ಮೆಲ್ಲಾ ಶ್ರಮ ಹಾಕಿ ರಕ್ಷಣಾ ಕಾರ್ಯಾಚರಣೆಯನ್ನ ಕ್ಷಿಪ್ರಗತಿಯಲ್ಲಿ ನಡೆಸಿದ್ರು.

ಸಮರ ಸಿದ್ಧತೆ 

ಇತ್ತ ಮೆಗ್ಗಾನ್ ಆಸ್ಪತ್ರೆಯಲ್ಲಿ ವಿಷಯ ತಿಳಿಯುತ್ತಲೇ ಮಾರ್ನಿಂಗ್​ ಶಿಫ್ಟ್​ ಸಿಬ್ಬಂದಿಯನ್ನು ಸಹ ಮನೆಗೆ ತೆರಳದಂತೆ ಇರಿಸಿಕೊಳ್ಳಲಾಗಿತ್ತು. ವಿಶೇಷ ವೈದ್ಯರ ತಂಡ ತುರ್ತು ಚಿಕಿತ್ಸೆಗೆ ಬೇಕಿದ್ದ ಎಲ್ಲಾ ವ್ಯವಸ್ಥೆಗಳನ್ನು  ಮಾಡಿಕೊಂಡಿತು. ಆಸ್ಪತ್ರೆಗೆ ಆ್ಯಂಬುಲೆನ್ಸ್ ವಾಹನ ಬರುತ್ತಲೆ ಅಲ್ಲಿದ್ದ ಸಾರ್ವಜನಿಕರು ಸಹ ಗಾಯಾಳುಗಳನ್ನ ಆಸ್ಪತ್ರೆಯೊಳಗೆ ಶಿಫ್ಟ್ ಮಾಡಲು ನೆರವಾದರು. 

 ಓಡಿ ಬಂದ ಜನಪ್ರತಿನಿಧಿಗಳು

ಚುನಾವಣೆ ಮೊನ್ನೆ ಮುಗಿದಿದೆ. ರಾಜಕಾರಣಕ್ಕಿನ್ನೂ ಸಮಯವಿದೆ. ಎಲೆಕ್ಷನ್​ ಓಡಾಟದ ಸುಸ್ತು ಅಂತಾ  ಜನಪ್ರತಿನಿಧಿಗಳು ಘಟನೆಯ ಬಗ್ಗೆ ತಿಳಿದು ಸುಮ್ಮನೆ ಕೂರಲಿಲ್ಲ. ತಕ್ಷಣವೇ ಮೆಗ್ಗಾನ್​ಗೆ ಓಡಿ ಬಂದಿದ್ರು. ಅಶೋಕ್​ ನಾಯ್ಕ್​. ಬಿವೈ ವಿಜಯೇಂದ್ರ, ಬಿವೈ ರಾಘವೇಂದ್ರ, ಸೇರಿದಂತೆ ಹಲವರು ಆಸ್ಪತ್ರೆಗೆ ಬಂದು ಏನಾಗಬೇಕು ಅಂತಾ ವಿಚಾರಿಸಿದ್ರು. ರೋಗಿಗಳ ಬಳಿ ಅವರ ಪೂರ್ವ ಪರ ವಿಚಾರಿಸಿ ಅವಶ್ಯಕತೆ ಇರುವ ವ್ಯವಸ್ಥೆಯನ್ನು ಕಲ್ಪಿಸಲು ಪ್ರಯತ್ನಿಸಿದ್ರು. 

ಅಮ್ಮಾ ನಾನಮ್ಮ ರಾಘಣ್ಣ ಮಾತಾಡ್ತಿದ್ದೇನೆ

ಹೇಳಿಕೇಳಿ ಆಕ್ಸಿಡೆಂಟ್​ ಆಗಿದ್ದು ಶಿಕಾರಿಪುರದ ಬಸ್​ಗಳು, ಬಿವೈ ಸಹೋದರರು ಮೆಗ್ಗಾನ್​ನಲ್ಲಿಯೇ ಮೊಕ್ಕಾಂ ಹೂಡಿದ್ರು . ಅದರಲ್ಲಿಯು ಸಂಸದ ಬಿ.ವೈ ರಾಘವೇಂದ್ರ ಗಾಯಗೊಂಡವರನ್ನ ಎಲ್ಲಿಯವರು? ಏನು? ಎಂಬುದು ಕೇಳಿ ತಿಳಿದು ಕೊಂಡು ಅವರ ಸಂಬಂಧಿಕರ ನಂಬರ್ ತೆಗೆದುಕೊಂಡು ಖುದ್ದು ಕರೆಮಾಡದ್ರು. 

ಒಬ್ಬ ತಾಯಿಗೆ ಕರೆ ಮಾಡಿ, ಅಮ್ಮ ನಾನಮ್ಮ ರಾಘಣ್ಣ ಮಾತನಾಡ್ತಿದ್ಧಾನೆ. ನಿಮ್ಮವರು ಒಬ್ಬರನ್ನ ಇಲ್ಲಿ ಆಸ್ಪತ್ರೆಗೆ ಅಡ್ಮಿಟ್​ ಮಾಡಿದ್ದೇವೆ. ಎನಾಗಿಲ್ಲ ಗಾಬರಿ ಪಡಬೇಡಿ, ಆಕ್ಸಿಡೆಂಟ್ ಆಗಿತ್ತು, ನಾನಿಲ್ಲಿದ್ದೇನೆ . ಟ್ರೀಟ್ಮೆಂಟ್ ಆಗ್ತಿದೆ.. ಏನೂ ತೊಂದರೆ ಇಲ್ಲ ಆರಾಮಿದ್ದಾರೆ.. ಎನ್ನುತ್ತಾ  ದೈರ್ಯ ತುಂಬುತ್ತಿದ್ದರು.. 

ಏನಾಯ್ತೋ ಎಂಬುದೇ ಗೊತ್ತಿಲ್ಲದ ಸಂದರ್ಭದಲ್ಲಿ ಅಮ್ಮಾ ನಾನಿದ್ದೇನೆ, ಯೋಚಿಸ್ಬೇಡಿ,, ಎಲ್ಲಾ ಆರಾಮಿದ್ಧಾರೆ ಎನ್ನುತ್ತಿದ್ದ ರಾಘವೇಂದ್ರರವರ ನುಡಿ ನಡೆ ಎರಡೂ ಸಹ ವಿಶೇಷ ಅನ್ನಿಸಿತ್ತು. ಪ್ರತಿಯೊಬ್ಬರನ್ನು ಯಾವ ಊರು, ಎಲ್ಲಿ ಮನೆ ಎನ್ನುತ್ತಾ ತಮ್ಮ ಸಹಾಯಕರಿಗೆ ಅವರ ವಿವರ ತಿಳಿದು ಸಹಾಯ ಮಾಡುವಂತೆ ಅವರು ತಿಳಿಸ್ತಿದ್ದರು.

ಆಕ್ಷನ್​ಗೆ ಇಳಿದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ

ಇನ್ನೂ ಖಾಸಗಿ ಬಸ್​ಗಳು ಡಿಕ್ಕಿಯಾಗಿವೆ ಬಹಳಷ್ಟು ಜನರು ಸಾವನ್ನಪ್ಪಿರುವ ಶಂಕೆ ಎಂಬ ಸುದ್ದಿಗಳು ಹರಿದಾಡುತ್ತಲೇ ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್​ ಸೆಲ್ವಮಣಿ ಹಾಗೂ ಎಸ್​​ಪಿ ಮಿಥುನ್ ಕುಮಾರ್ ಸ್ಥಳಕ್ಕೆ ದೌಡಾಯಿಸಿದ್ದಾರೆ. ಮುಖ್ಯವಾಗಿ ಪಾನಿಕ್ ಮೂಮೆಂಟ್​ನ್ನ ಸರಿಪಡಿಸಲು ನಿರ್ದಿಷ್ಟ ಮಾಹಿತಿಯನ್ನ ಎಸ್​ಪಿ ಮಿಥುನ್ ಕುಮಾರ್​ ಪೊಲೀಸ್ ವಾಟ್ಸ್ಯಾಪ್​ ಗ್ರೂಪ್​ನಲ್ಲಿ ಪತ್ರಕರ್ತರಿಗೆ ತಿಳಿಸಿದರು.  ಸ್ಥಳಕ್ಕೆ ಹೆಚ್ಚುವರಿ ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆಸಿಕೊಂಡು, ರಕ್ಷಣಾ ಕಾರ್ಯಾಚರಣೆಗೆ ವ್ಯವಸ್ಥೆ ಮಾಡಿದ್ಧಾರೆ.  ಮುಖ್ಯವಾಗಿ ಸ್ಥಳಕ್ಕೆ ಜೆಸಿಬಿ ತರಿಸಿ,  ಕಾರ್ಯಾಚರಣೆ ಆರಂಭಿಸಿದ್ಧಾರೆ. ಎಸ್​ಪಿ ಮಿಥುನ್ ಕುಮಾರ್​ ಒಂದು ಕಡೆ ಘಟನೆಯ ಸಾವು ನೋವಿನ ಬಗ್ಗೆ ಸ್ಪಷ್ಟನೆ ನೀಡುವುದರ ಜೊತೆ ಆ್ಯಂಬುಲೆನ್ಸ್​ ಗಳಲ್ಲಿ ಗಾಯಾಳುಗಳ ರವಾನೆಗೆ ಗಮನ ಕೊಟ್ಟಿದ್ದರು.  ಜಿಲ್ಲಾಧಿಕಾರಿ ಸೆಲ್ವಮಣಿಯವರು, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಗಾಯಾಗಳಿಗೆ ಯಾವುದರ ಅಡಿಯಲ್ಲಿ ಉಚಿತ ನೆರವು ಕೊಡಲು ಸಾಧ್ಯ ಎಂಬುದನ್ನ ನೋಡಿಕೊಂಡು ಅಧಿಕಾರಿಗಳಿಗೆ ಆ ನಿಟ್ಟಿನಲ್ಲಿ ತಕ್ಷಣ ಕ್ರಮವಹಿಸಿ ಎಂದು ಸೂಚನೆ ನೀಡುತ್ತಿದ್ರು. 

ಒಟ್ಟಾರೆ, ಚೋರಡಿಯಲ್ಲಿ ನಿನ್ನೆ ನಡೆದ ಘಟನೆಯಲ್ಲಿ  ಅರುಣ್​ ಹಾಗೂ ತಿಪ್ಪೆಸ್ವಾಮಿ ಸಾವನ್ನಪ್ಪಿದ್ದರು. ದುರಾದೃಷ್ಟವಶಾತ್ ಅವರನ್ನ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲವಾದರೂ ಇನ್ನಷ್ಟು ಸಾವು ನೋವುಗಳು ತಪ್ಪಿದ್ದು, ಶಿವಮೊಗ್ಗದ ಕ್ಷಿಪ್ರ ಪ್ರಜ್ಞೆಯಿಂದಾಗಿ.. ಘಟನೆ ಆದ ಬೆನ್ನಲ್ಲೆ ಆ್ಯಂಬುಲೆನ್ಸ್​ ಕಳಿಸಿದ್ದರಿಂದಲೋ? ತುರ್ತು ವಾಹನಗಳ ಚಾಲಕರು ತಮ್ಮ ಜೀವದ ಹಂಗು ತೊರೆದು ಕೆಲ ನಿಮಿಷಗಳ ಅಂತರದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದರಿಂದಲೋ? ಮೆಗ್ಗಾನ್ ವೈದ್ಯರು, ನರ್ಸ್​ , ಸಿಬ್ಬಂದಿಗಳ ಮುತುವರ್ಜಿಯಿಂದಲೋ? ಜನಪ್ರತಿನಿಧಿಗಳು, ಪೊಲೀಸ್ ಇಲಾಖೆ, ಜಿಲ್ಲಾಡಳಿತದ ಕ್ವಿಕ್ ಆ್ಯಕ್ಷನ್​ನಿಂದಲೋ? ದೊಡ್ಡದಾಗಬಹುದಿದ್ದ ದುರಂತ ಚಿಕ್ಕದರಲ್ಲಿ ಮುಗಿದಿದೆ,.. ಇನ್ನೇನಿದ್ದರೂ ಘಟನೆಯ ಪೋಸ್ಟ್ ಮಾರ್ಟಮ್​ ಆಗಬೇಕಿದೆ. ನಡೆದಿದ್ದಕ್ಕೆ ಕಾರಣ ಎಲ್ಲರಿಗೂ ಗೊತ್ತಿರುವುದೇ! ಅದಕ್ಕೊಂದು ರಿಪೋರ್ಟ್​ ಸಿಕ್ಕಿ, ಜಿಲ್ಲಾಡಳಿತ ಅತಿವೇಗಕ್ಕೆ ಬ್ರೇಕ್ ಹಾಕಬೇಕಿದೆ. 

Read/ Bhadravati/  ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್ 

Malenadutoday.com Social media