ಮಲೆನಾಡು ಶಿವಮೊಗ್ಗದಲ್ಲಿ ತಮಿಳು ಪ್ರತಿಧ್ವನಿ | ಬಿಜೆಪಿಗೆ ಅಣ್ಣಾಮಲೈ , ಕಾಂಗ್ರೆಸ್‌ಗೆ ಶಿವಣ್ಣ , ಈಶ್ವರಪ್ಪರಿಗೆ ಓಂಶಕ್ತಿ? ಹೌದಾ

tamil echo in malenadu Shimoga | K Annamalai, KS Eshwarappa, Sivarajakumar, Omshakti Shimoga, Tamil Community,

ಮಲೆನಾಡು ಶಿವಮೊಗ್ಗದಲ್ಲಿ ತಮಿಳು ಪ್ರತಿಧ್ವನಿ  | ಬಿಜೆಪಿಗೆ ಅಣ್ಣಾಮಲೈ , ಕಾಂಗ್ರೆಸ್‌ಗೆ ಶಿವಣ್ಣ , ಈಶ್ವರಪ್ಪರಿಗೆ ಓಂಶಕ್ತಿ?  ಹೌದಾ
Annamalai, KS Eshwarappa, Sivarajakumar, Omshakti Shimoga, Tamil Community,

SHIVAMOGGA | MALENADUTODAY NEWS | Apr 26, 2024      

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿನ ಎಲೆಕ್ಷನ್‌ ಓಡಾಟ ಈ ಸಲ ಸ್ವಲ್ಪ ಹೆಚ್ಚೆ ಬಿಗಿ ಕಾಣ್ತಿದೆ. ಕಣದಲ್ಲಿರುವ ಅಭ್ಯರ್ಥಿಗಳು ನಾನಾ ಸಮುದಾಯದ ಮತದಾರರನ್ನ ಒಲಿಸಿಕೊಳ್ಳಲು ವಿವಿಧ ರೀತಿಯ ಸರ್ಕಸ್‌ ಮಾಡುತ್ತಿದ್ದಾರೆ.

ಕೆಲವರು ಮನೆ ಮನೆ ಭೇಟಿ ಮಾಡಿದ್ರೆ, ಮತ್ತೆ ಕೆಲವರು ಹಳ್ಳಿ ಸುತ್ತಾಟ ನಡೆಸ್ತಿದ್ದಾರೆ. ಮತ್ತೊಬ್ಬರು ವಿವಿಧ ವೃತ್ತಿಯಲ್ಲಿರುವವರನ್ನ ಅಲ್ಲಿಯೇ ಹೋಗಿ ಭೇಟಿ ಮಾಡ್ತಿದ್ದಾರೆ. ಇದೆಲ್ಲದರ ನಡುವೆ ಕಾಂಗ್ರೆಸ್‌, ಬಿಜೆಪಿ  ಹಾಗೂ ಪಕ್ಷೇತರ ಅಭ್ಯರ್ಥಿ ಕೆಎಸ್‌ ಈಶ್ವರಪ್ಪ ನವರ ಗಮನ ಶಿವಮೊಗ್ಗ ಜಿಲ್ಲೆ ತಮಿಳು ಮತದಾರರ ಮೇಲೆ ನೆಟ್ಟಿದೆ. ಈ ಕಾರಣಕ್ಕೆ ಒಬ್ಬರ ನಂತರ ಮತ್ತೊಬ್ಬರು ತಮಿಳು ಸಮುದಾಯದ ಮತಗಳನ್ನ ಒಲಿಸಿಕೊಳ್ಳಲು ಮುಂದಾಗಿದ್ದಾರೆ. 

ತಮಿಳು ಸಮುದಾಯಕ್ಕೆ ಜೈ

ಪಕ್ಷೇತರವಾಗಿ ಸ್ಪರ್ಧಿಸಿರುವ ಕಬ್ಬುಬೆಳೆಗಾರನ ಚಿಹ್ನೆ ಹೊಂದಿರುವ ಕೆಎಸ್‌ ಈಶ್ವರಪ್ಪ ನಾಮಪತ್ರ ಸಲ್ಲಿಸುವುದಕ್ಕೂ ಮೊದಲೇ ತಮಿಳು ಸಮುದಾಯದ ಸಮಾವೇಶದಲ್ಲಿ ಪಾಲ್ಗೊಂಡು ಮತಯಾಚನೆ ಮಾಡಿದ್ದಾರೆ. ರಾಷ್ಟ್ರಭಕ್ತ ಬಳಗದ ಹೆಸರಲ್ಲಿ ಶಿವಮೊಗ್ಗದ ತಮಿಳಿಗರನ್ನ ಒಂದೂಗೂಡಿಸ್ತಿರುವ ಈಶ್ವರಪ್ಪನವರ ಬೆಂಬಲಿಗರು ಜಿಲ್ಲೆಯ ಗಮನಾರ್ಹ ಸಮುದಾಯದ ಮತವನ್ನು ಶತಾಯಗತಾಯ ಸೆಳೆಯಲು ಮುಂದಾಗಿದೆ. ಅದರಲ್ಲಿಯು ವಿಶೇಷವಾಗಿ ಓಂಶಕ್ತಿಯ ಭಕ್ತರ ಮತ ಸೆಳೆಯುವ ಪ್ರಯತ್ನ ನಡೆಯುತ್ತಿದೆ. 

ಬಿಜೆಪಿಯಿಂದ ಅಣ್ಣಾಮಲೈ ಎಂಟ್ರಿ

ಅತ್ತ ಕೆಎಸ್‌ ಈಶ್ವರಪ್ಪ ಸ್ಥಳೀಯವಾಗಿ ತಮಿಳು ಸಮುದಾಯದ ಮೇಲೆ ಪ್ರಭಾವ ಬೀರಲು ಮುಂದಾದರೆ, ಇತ್ತ ಬಿಜೆಪಿ ನಾಯಕರು ಶಿವಮೊಗ್ಗಕ್ಕೆ ಚಿರಪರಿಚಿತವೇ ಆಗಿರುವ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ  ಅಣ್ಣಾಮಲೈರನ್ನೆ ಜಿಲ್ಲೆಗೆ ಕರೆಸಿದ್ದರು. ಭದ್ರಾವತಿ ಹಾಗೂ ಮಿಳಘಟ್ಟದಲ್ಲಿ ಸಮಾವೇಶ ನಡೆಸಿದ ಅಣ್ಣಾಮಲೈ ಏಕಕಾಲದಲ್ಲಿ ಕನ್ನಡದಲ್ಲಿಯು, ತಮಿಳುನಲ್ಲಿಯು ಮಾತನಾಡಿ, ಮತಯಾಚನೆ ನಡೆಸಿದರು. ತಮಿಳ್‌ ಮಕ್ಕಳ್‌ ಎನ್ನುತ್ತಲೇ, ನನ್ನೆಲ್ಲಾ ಸಹೋದರರೇ ಎನ್ನುತ್ತಿದ್ದ ಅ‍ಣ್ಣಾಮಲೈರ ಭಾಷಾ ಪ್ರಾವಿಣ್ಯತೆ ಶಿವಮೊಗ್ಗದಲ್ಲಿ ವರ್ಕೌಟ್‌ ಆಗುತ್ತಿದೆ. 

ಅಣ್ಣಾಮಲೈ ಸದ್ಯ ಟ್ರೆಂಡಿಂಗ್‌ ರಾಜಕಾರಣಿ, ಯಾವುದೇ ವಿಷಯದಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ಅವರು ಭವಿಷ್ಯದ ತಮಿಳುನಾಡು ಚೀಫ್‌ ಮಿನಿಸ್ಟರ್‌ ಎಂದೇ ಬಿಂಬಿತವಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ಅಣ್ಣಾಮಲೈರನ್ನೇ ಕರೆತಂದು ಶಿವಮೊಗ್ಗದಲ್ಲಿ ತಮಿಳು ಸಮುದಾಯದ ಮತವನ್ನು ಸೆಳೆಯುವ ಪ್ರಯತ್ನ ನಡೆಸಿದ್ದಾರೆ. 

ಶಿವಣ್ಣ ತಮಿಳು ಮಾತು

ಇನ್ನೂ ಶಿವಮೊಗ್ಗದ ತಮಿಳು ಸಮುದಾಯದವರನ್ನು ಸೆಳೆಯುವ ನಿಟ್ಟಿನಲ್ಲಿ ನಟ ಶಿವಣ್ಣ ಕೂಡ ತಮಿಳು ಮಾತನಾಡಿದ್ದಾರೆ. ನಿನ್ನೆ ತೀರ್ಥಹಳ್ಳಿಯಲ್ಲಿ ಒಂದು ಕಡೆ ನಡೆದ ಮತಯಾಚನೆ ಸಭೆಯಲ್ಲಿ ಮಾತನಾಡಿದ ಶಿವರಾಜ್‌ ಕುಮಾರ್‌ ಇಲ್ಲಿ ತಮಿಳಿನವರು  ಜಾಸ್ತಿ ಇದ್ದಾರೆ ಎಂದು ಕೇಳಿದ್ದೇನೆ. ಎಲ್ಲರಿಗೂ ನಮಸ್ಕಾರಗಳು. ಜೈಲರ್ ನೋಡಿದ್ದೀರಾ, ಕ್ಯಾಪ್ಟನ್ ನೋಡಿದ್ರಾ? ಚೆನ್ನಾಗಿ ಇತ್ತಾ? ನಾನೂ ಓದಿದ್ದು ಚೆನ್ನೈ ನಲ್ಲೇ ನಾನಷ್ಟೆ  ಅಲ್ಲಾ ತಂದೆ ರಾಜಕುಮಾರರವರ ಎಲ್ಲಾ ಮಕ್ಕಳು ಅಲ್ಲೇ ಓದಿದ್ದು. ನಾನೂ, ಪುನೀತ್, ರಾಘು, ಲಕ್ಷ್ಮಿ ಹಾಗೂ ಪೂರ್ಣಿಮಾ ಎಲ್ಲರೂ ಅಲ್ಲೇ ಓದಿದ್ದು, ಬೆಳೆದಿದ್ದು.  ಅಲ್ಲಿ ನಮ್ದು ಒಂದು ಮನೆ ಇದೆ. ನಾವು ಅಲ್ಲಿ ಇರಬೇಕಾದಾಗ ತಮಿಳು ಮಾತನಾಡುತ್ತಿದ್ದೆವು. ನೀವು, ಇಲ್ಲಿಗೆ ಬಂದಾಗ ಕನ್ನಡ ಮಾತನಾಡುತ್ತೀರಾ?. ನಾವು ಎಲ್ಲಿ ಹೋಗುತ್ತೇವೋ ಆ ಭಾಷೆಯನ್ನು ಕಲಿಯ ಬೇಕು. ಅದು ಆ ಭಾಷೆಗೆ ಕೊಡುವ ಮರ್ಯಾದೆ. ನಾವೆಲ್ಲರೂ ಅಣ್ಣ ತಮ್ಮಂದಿರು ಎಂದಿದ್ದಾರೆ. ಈ ಮೂಲಕ ತಮಿಳು ಮತಗಳನ್ನ ಸೆಳೆಯುವ ಪ್ರಯತ್ನದಲ್ಲಿ ಕಾಂಗ್ರೆಸ್‌ ಪಕ್ಷವೂ ಪ್ರಮುಖ ಹೆಜ್ಜೆಯಿಟ್ಟಿದೆ. 

ಓಂಶಕ್ತಿ

ಶಿವಮೊಗ್ಗ ಜಿಲ್ಲೆಯಲ್ಲಿ ತಮಿಳು ಸಮುದಾಯ ದೊಡ್ಡಸಂಖ್ಯೆಯಲ್ಲಿದೆ. ದೈವಭಕ್ತರಾದ ತಮಿಳು ಸಮುದಾಯವರು ಬಹುತೇಕ ಶಿವಮೊಗ್ಗದವರೇ ಆಗಿ ಹೋಗಿದ್ದು ತಮ್ಮನ್ನು ಶಿವಮೊಗ್ಗದವರು ಎಂದೇ ಗುರುತಿಸಿಕೊಳ್ಳುತ್ತಾರೆ. ಇಲ್ಲಿನ ನೆಲಜಲದ ಜೊತೆಗೆ ಆರಾಧ್ಯದೈವವನ್ನು ಪೂಜಿಸುವ ಅವರುಗಳು ಸಂಘಟನಾತ್ಮಕವಾಗಿಯು ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ. ಎಲೆಕ್ಷನ್‌ನಲ್ಲಿ  ಸಮುದಾಯದ ಶಕ್ತಿ ಪ್ರದರ್ಶನ ಮಾಡಲಾಗದಿದ್ದರೂ ಅವಶ್ಯಕ ಹಂತದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವ ಶಕ್ತಿಯನ್ನು ಈ ತಮಿಳು ಸಮುದಾಯ ಹೊಂದಿದೆ. ಈ ವಿಚಾರ ರಾಜಕೀಯ ನಾಯಕರಿಗೂ ಗೊತ್ತಿದೆ.

ಅದೇ ಕಾರಣಕ್ಕೆ ಮಲೆನಾಡಲ್ಲಿ ತಮಿಳು ಮಾತುಗಳು ಧ್ವನಿಸುತ್ತಿವೆ. ಇನ್ನೂ ಶಿವಮೊಗ್ಗದಿಂದ ವರ್ಷವರ್ಷ ಓಂಶಕ್ತಿ ದರ್ಶನಕ್ಕೆ ತೆರಳುವವರ ಸಂಖ್ಯೆ ದೊಡ್ಡದಾಗಿದ್ದು, ಚುನಾವಣೆಯಲ್ಲಿ ಇದು ಸಹ ಟ್ರಂಪ್‌ ಕಾರ್ಡ್‌ ಆಗಿದೆ. ಓಂಶಕ್ತಿಯಾತ್ರೆಗೆ ಹಲವು ರಾಜಕಾರಣಿಗಳು ಸಂಘಟನಾತ್ಮಕ ನೆರವುಗಳನ್ನ ನೀಡುತ್ತಾ ಬಂದಿದ್ದು, ಅದನ್ನೀಗ ಎನ್‌ಕ್ಯಾಶ್‌ ಮಾಡಿಕೊಳ್ಳುವ ಪ್ರಯತ್ನಗಳು ಸಾಗಿವೆ. ಇದೆಲ್ಲದರ ಹೊರತಾಗಿ ಮಲೆನಾಡ ತಮಿಳಿಗ ಯಾರನ್ನ ಬೆಂಬಲಿಸುತ್ತಾನೆ ಎಂಬ ಕುತೂಹಲಕ್ಕೆ ಉತ್ತರ ಸಿಗೋದು ತುಸುತಡವಿದೆ.