ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನಲ್ಲೀಗ ಮಧು ಬಂಗಾರಪ್ಪನವರೇ ಸುಪ್ರೀಂ! ಶೀಘ್ರದಲ್ಲಿಯೇ ಇನ್ನೊಂದು ಬದಲಾವಣೆ! ಏನದು ರಾಜಕಾರಣ

Madhu Bangarappa is the supreme in Shivamogga district Congress. Another change soon! What is politics

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನಲ್ಲೀಗ ಮಧು ಬಂಗಾರಪ್ಪನವರೇ ಸುಪ್ರೀಂ!  ಶೀಘ್ರದಲ್ಲಿಯೇ ಇನ್ನೊಂದು ಬದಲಾವಣೆ! ಏನದು ರಾಜಕಾರಣ
Madhu Bangarappa,Shivamogga district Congress

shivamogga Mar 23, 2024 Madhu Bangarappa,Shivamogga district Congress ಶಿವಮೊಗ್ಗ ರಾಜ್ಯ ರಾಜಕಾರಣದ ಪವರ್‌ ಫುಲ್‌ ಪ್ಲೇಸ್‌. ಇಲ್ಲಿನ ರಾಜಕೀಯವೇ ವಿಶಿಷ್ಟ.. ಮಾಜಿ ಸಿಎಂಗಳ ತವರು, ಕರ್ಮ ಭೂಮಿಯು ಆಗಿರುವ ಶಿವಮೊಗ್ಗ ಜಿಲ್ಲೆಯಲ್ಲೀಗ ಎಲೆಕ್ಷನ್ ಜ್ವರ ಕಾಣಿಸಿಕೊಳ್ತಿದೆ… ಒಂದು ಕಡೆ ಮಾಜಿ ಡಿಸಿಎಂರ ಬಂಡಾಯ, ಇನ್ನೊಂದು ಕಡೆ ಮಾಜಿ ಸಿಎಂ ಮಕ್ಕಳ ನಡುವಿನ ಪೈಪೋಟಿ..ಅಭಿವೃದ್ಧಿ , ಹಿಂದೂತ್ವ ಮತ್ತು ಗ್ಯಾರಂಟಿ ನಡುವೆ ಶಿವಮೊಗ್ಗದ ಮತದಾರ ನಡೆಯುತ್ತಿರುವ ಶಿವಮೊಗ್ಗ ರಾಜಕಾರಣವನ್ನು ಕುತೂಹಲದ ಕಣ್ಣುಗಳಿಂದ ನೋಡುತ್ತಿದ್ದಾನೆ. 

ಮಧು ಬಂಗಾರಪ್ಪರವರ ಮೇಲುಗೈ

ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನ ಬೆಳವಣಿಗೆಗಳು ಹಲವು ಸಂದೇಶಗಳನ್ನ ರವಾನಿಸುತ್ತಿದೆ. ಅದರಲ್ಲಿ ಬಹುಮುಖ್ಯವಾದ ಮೆಸೇಜ್‌ ಅಂದರೆ, ಜಿಲ್ಲೆಯಲ್ಲಿ ಸಚಿವ ಮಧು ಬಂಗಾರಪ್ಪನವರೇ ಸುಪ್ರೀಂ ಎಂಬುದು..ಹೇಗೆ? ಅನ್ನೋದಕ್ಕೂ ಉತ್ತರ ರಾಜಕೀಯದ ಬಗ್ಗೆ ಗೊತ್ತಿದ್ದವರು ಹತ್ತಿರದಿಂದ ನೋಡಿದವರು ಹೇಳುತ್ತಿದ್ದಾರೆ. 

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನಲ್ಲಿ ತೀರಾ ಮೊನ್ನೆ ಮೊನ್ನೆ ವರೆಗೂ ಸಣ್ಣ ಮಟ್ಟದ ಬಂಡಾಯವಿತ್ತು ಶಾಸಕ ಸಂಗಮೇಶ್‌ ಹಾಗೂ ಬೇಳೂರು ಗೋಪಾಲಕೃಷ್ಣರು ಸಚಿವರಿಗೆ ತುಸು ವಿರೋಧವಾಗಿದ್ದರು.. ಅದರಲ್ಲಿಯು ಬೇಳೂರು ಗೋಪಾಲಕೃಷ್ಣರವರು ಸಂಸತ್‌ ಚುನಾವಣೆಯ ಟಿಕೆಟ್‌ ಆಕಾಂಕ್ಷಿ ಎಂದು ಬಹಿರಂಗವಾಗಿಯೇ ಹೇಳಿದ್ದರು. ಆ ಕಡೆ ಜಿಲ್ಲಾಧ್ಯಕ್ಷ ಸುಂದರೇಶ್‌ ಸಹ ಟಿಕೆಟ್‌ ಆಕಾಂಕ್ಷಿ ಎಂದು ಘೋಷಿಸಿದ್ದರು

ಗೀತಾ ಶಿವರಾಜ್‌ ಕುಮಾರ್‌ಗೆ ಟಿಕೆಟ್

ಆದರೆ ಈ ವಿಚಾರದಲ್ಲಿ ತಮ್ಮ ಸಹೋದರಿ ಗೀತಾ ಶಿವರಾಜ್‌ ಕುಮಾರ್‌ ರವರಿಗೆ ಟಿಕೆಟ್‌ ಕೊಡಿಸುವಲ್ಲಿ ಮಧು ಬಂಗಾರಪ್ಪ ಯಶಸ್ವಿಯಾಗಿದ್ದಾರೆ. ಅಲ್ಲದೆ ಅಸಮಾಧಾನವನ್ನು ಕಾಂಗ್ರೆಸ್‌ ನಾಯಕರ ಮಡಿಲಿಗಿಟ್ಟ ಮಧು ಬಂಗಾರಪ್ಪ ಬೇಗುದಿಯನ್ನು ಶಮನ ಮಾಡುವಲ್ಲಿಯು ಯಶಸ್ವಿಯಾಗಿದ್ದರು. ನಿಗಮ ಮಂಡಳಿ ಅಧ್ಯಕ್ಷ ಸ್ಥಾನವೂ ಶಿವಮೊಗ್ಗದ ಆಯ್ದ ನಾಯಕರಿಗೆ ಲಭ್ಯವಾದ ಬೆನ್ನಲ್ಲೆ ಬೇಳೂರು ಗೋಪಾಲಕೃಷ್ಣ ಮಧು ಬಂಗಾರಪ್ಪರವರು ಸೂಚಿಸಿದ ವ್ಯಕ್ತಿಯನ್ನ ಗೆಲ್ಲಿಸಿಕೊಂಡು ಬರುವುದಾಗಿ ತಿಳಿಸಿದ್ದರು. ಇದು ಆಂತರಿಕ ರಾಜಕಾರಣದಲ್ಲಿ ಮಧು ಬಂಗಾರಪ್ಪರವರ ಬಹುಮುಖ್ಯ ಗೆಲುವಾಗಿತ್ತು. 

ಆಯನೂರು ಮಂಜುನಾಥ್‌‌ 

ಇನ್ನೂ ಮಧು ಬಂಗಾರಪ್ಪರವರು ಕಾಂಗ್ರೆಸ್‌ಗೆ ಬಂದ ಮೇಲೆ ಹಲವರನ್ನ ಬೇರೆ ಪಕ್ಷದಿಂದ ತಮ್ಮ ಪಕ್ಷಕ್ಕೆ ಸ್ವಾಗಿತಿಸಿ ಬರಮಾಡಿಕೊಂಡಿದ್ದರು. ಈ ಪೈಕಿ ಆಯನೂರು ಮಂಜುನಾಥ್‌ ನೈರುತ್ಯ ಪದವೀಧರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿಯೇ ಪಕ್ಷದೊಳಗೆ ಕಾಲಿಟ್ಟಿದ್ದರು. ಎಂಎಲ್‌ಎ ಚುನಾವಣೆಯಲ್ಲಿ ಸೋತಿದ್ದ ಆಯನೂರು ಮಂಜುನಾಥ್‌ರವರಿಗೆ ಟಿಕೆಟ್‌ ಹಾಗೂ ಪಕ್ಷದಲ್ಲಿ ಹೆಚ್ಚಿನ ಸ್ಥಾನಮಾನ ನೀಡುವುದಕ್ಕೆ ಸ್ವತಃ  ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಹೆಚ್‌ಸಿ ಯೋಗೇಶ್‌ ವಿರೋಧ ಮಾಡಿದ್ದರು. ಜಿಲ್ಲಾ ಕಾಂಗ್ರೆಸ್‌ನಲ್ಲಿ ಆಯನೂರು ಮಂಜುನಾಥ್‌ ಕಾರಣಕ್ಕೆ ಎರಡು ಬಣ ಆಗಿದ್ದು, ಆ ಬಣಗಳ ನಡುವೆ ನಡೆದ ವಾಕ್ಸಮರ ನೀವೆಲ್ಲಾ ಗಮನಿಸಿಯೇ ಇರುತ್ತೀರಿ. 

ನೈರುತ್ಯ ಪದವೀಧರ ಕ್ಷೇತ್ರದ  ಟಿಕೆಟ್‌ 

ಆದಾಗ್ಯು ಮಧು ಬಂಗಾರಪ್ಪ ಈ ವಿಚಾರದಲ್ಲಿ ಮೌನಿಯಾಗಿಯೇ ಕೆಲಸ ಮಾಡಿದ್ದರು. ಅಸಮಾಧಾನ ಟೀಕೆಗಳಿಗೆ ಕಾಮೆಂಟ್ಸ್‌ ಮಾಡದ ಅವರು ಆಯನೂರು ಮಂಜುನಾಥ್‌ರವರಿಗೆ ವಕ್ತಾರಿಕೆಯ ಜವಾಬ್ದಾರಿಕೆಯನ್ನು ರಾಜ್ಯ ನಾಯಕರ ಮೂಲಕ ಕೊಡಿಸಿದರು. ಪ್ರೆಸ್‌ ಮೀಟ್‌ಗಳಲ್ಲಿ ಮಾತುಗಳಲ್ಲಿಯೇ ಕೆಂಡ ಕಾರುವ ಆಯನೂರು ಮಂಜುನಾಥ್‌ರವರನ್ನ ಜಿಲ್ಲಾ ಕಾಂಗ್ರೆಸ್‌ನ ಮುಖವಾಣಿಯಾಗಿಸಿ ಬಿಜೆಪಿ ಜೆಡಿಎಸ್‌ ವಿರುದ್ಧ ವಾಗ್ಬಾಣಗಳನ್ನು ಹೂಡುವಂತೆ ಮಾಡಿದ್ರು.. 

ಇದರ ನಡುವೆ ಎಸ್‌ಪಿ ದಿನೇಶ್‌ ನೈರುತ್ಯ ಪದವೀಧರ ಕ್ಷೇತ್ರದ ಸ್ಟ್ರಾಂಗ್‌ ಕ್ಯಾಂಡಿಡೇಟ್‌ ಆಗಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಇವರಿಗೆ ಕಾಂಗ್ರೆಸ್‌ ಸೇರಿದ್ದ ಆಯನೂರು ಮಂಜುನಾಥ್‌ ನೇರ ಸ್ಪರ್ಧಿಯಾದರು. ಇಬ್ಬರ ನಡುವೆ ಮಾತಿನ ಚಕಮಕಿಯ ಸುದ್ದಿಗೋಷ್ಟಿಗಳು ನಡೆದವು. ಅಂತಿಮವಾಗಿ ಮಧು ಬಂಗಾರಪ್ಪರವರು ಈ ವಿಚಾರದಲ್ಲಿಯು ಗೆದ್ದರು. ಆಯನೂರು ಮಂಜುನಾಥ್‌ರವರಿಗೆ ನೈರುತ್ಯ ಪದವೀಧರ ಕ್ಷೇತ್ರದ ಟಿಕೆಟ್‌ ಕೊಡಿಸುವ ಮೂಲಕ ಮಧು ಬಂಗಾರಪ್ಪ ಅಸಮಾಧಾನಕ್ಕೆ ಇತೀಶ್ರಿ ಹಾಡಿದ್ದಷ್ಟೆ ಅಲ್ಲದೆ, ನಿರ್ಣಾಯಕ ನಾನೆ ಎಂಬ ಸಂದೇಶವನ್ನು ರವಾನಿಸಿದ್ದಾರೆ. 

ಶಿವಮೊಗ್ಗ ಜಿಲ್ಲಾಧ್ಯಕ್ಷ ಸ್ಥಾನ ಬದಲಾವಣೆ

ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ವಿಚಾರದಲ್ಲಿಯು ಜಿಲ್ಲಾ ಕಾಂಗ್ರೆಸ್‌ನ ಪ್ರಭಾವಕ್ಕೂ ಮೀರಿ ಮಧು ಬಂಗಾರಪ್ಪರವರ ಅಭಿಪ್ರಾಯಗಳು ಕೆಲಸ ಮಾಡಿವೆ ಎನ್ನಲಾಗುತ್ತಿದೆ. ಇನ್ನೂ ಇದೆಲ್ಲದರ ನಡುವೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನಲ್ಲಿ ಸದ್ಯದಲ್ಲಿಯೇ ಮತ್ತೊಂದು ಬದಲಾವಣೆ ಆಗುವುದು ಬಹುತೇಕ ಗ್ಯಾರಂಟಿ ಎನ್ನಲಾಗಿದೆ. ಇವತ್ತು ಅಥವಾ ನಾಳೆ ಅಥವಾ ನಾಡಿದ್ದು ಈ ಮೂರು ದಿನಗಳಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ಸಹ ಬದಲಾಗುವ ಸಾಧ್ಯತೆ ಇದೆ. ಈ ಸಂಬಂಧ ಕೆಪಿಸಿಸಿ ಸುತ್ತೋಲೆ ಹೊರಬೀಳಬೇಕಿದೆಯಷ್ಟೆ ಎನ್ನಲಾಗುತ್ತಿದೆ. 

ಮಲೆನಾಡು ಟುಡೆಗೆ ಲಭ್ಯವಾದ ಮಾಹಿತಿ ಪ್ರಕಾರ, ಆರ್‌ ಪ್ರಸನ್ನಕುಮಾರ್‌ ರವರಿಗೆ ಜಿಲ್ಲಾಧ್ಯಕ್ಷ ಸ್ಥಾನ ಒಲಿಯುವ ನಿರೀಕ್ಷೆಯಿದೆ. ಈ ನಿಟ್ಟಿನಲ್ಲಿಯು ಮಧು ಬಂಗಾರಪ್ಪನವರ ಪ್ರಭಾವ ಕೆಲಸ ಮಾಡುತ್ತಿದೆ ಎನ್ನಲಾಗುತ್ತಿದೆ. ತಮ್ಮ ಉಸ್ತುವಾರಿ ಜಿಲ್ಲೆಯಲ್ಲಿ ರಾಜಕಾರಣ ಹಾಗೂ ಪಕ್ಷವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಮಧು ಬಂಗಾರಪ್ಪನವರು ನಿಧಾನವಾಗಿಯಾದರೂ ಯಶಸ್ವಿಯಾಗುತ್ತಿದ್ದಾರೆ ಎಂಬುದನ್ನ ಬೆಳವಣಿಗೆಗಳು ಹೇಳುತ್ತಿವೆ.