ಮಲೆನಾಡಲ್ಲಿ ನೀರಿಲ್ಲ ಭಾಗ 2 / ಮಳೆ ಊರಲ್ಲಿಯು ಜೀವಜಲಕ್ಕೆ ಬರಗಾಲ! ಆಗುಂಬೆಯಲ್ಲೀಗ ರಣ ಬಿಸಿಲು, ನೀರಿಗೆ ತತ್ವಾರ!

no water in Malenadu Part 2 / There is a drought in Agumbe in Theerthahalli!

ಮಲೆನಾಡಲ್ಲಿ ನೀರಿಲ್ಲ ಭಾಗ 2 /  ಮಳೆ ಊರಲ್ಲಿಯು ಜೀವಜಲಕ್ಕೆ ಬರಗಾಲ! ಆಗುಂಬೆಯಲ್ಲೀಗ ರಣ ಬಿಸಿಲು,  ನೀರಿಗೆ ತತ್ವಾರ!

KARNATAKA NEWS/ ONLINE / Malenadu today/ May 27, 2023 SHIVAMOGGA NEWS

ಆಗುಂಬೆ/ ದಕ್ಷಿಣ ಭಾರತದ ಚಿರಾಪುಂಜಿ ಎಂಬ ಹೆಗ್ಗಳಿಕೆ ಪಡೆದಿರುವ ಆಗುಂಬೆಯಲ್ಲಿ ನೀರಿಗೆ ಹಾಹಾಕಾರ ಎದುರಾಗಿದೆ.,ನದಿ ಹಳ್ಳಕೊಳ್ಳ ಬಾವಿಗಳೆಲ್ಲಾ ಬತ್ತಿ ಬರಿದಾಗಿದೆ. ತುಂಗಾನದಿಯ ಒಡಲು ತುಂಬಿಸುವ ಮಾಲತಿ ನದಿ ತನ್ನ ಹರಿವನ್ನೇ ನಿಲ್ಲಿಸಿದೆ .ಮಳೆಯ ಬೀಡಿನಲ್ಲಿ ಜನರು ನೀರಿಗಾಗಿ ಪರದಾಡುವಂತಾಗಿದೆ. ಪಶ್ಚಿಮಘಟ್ಟ ಸೆಲೆಯಲ್ಲಿಯೇ ಈ ರೀತಿ ನೀರಿಗೆ ಸಮಸ್ಯೆ ಎದುರಾಗಿರುವುದು ಜನರಲ್ಲಿ ಆತಂಕವನ್ನು ಸೃಷ್ಟಿಸಿದೆ.

ಪಶ್ಚಿಮಘಟ್ಟ ತಪ್ಪಲಿನಲ್ಲಿ ಬತ್ತಿದೆ ಅಂತರ್ಜಲ

ದಕ್ಷಿಣ ಭಾರತದ ಚಿರಾಪುಂಜಿ ಆಗುಂಬೆಯಲ್ಲಿ ಈ ಬಾರಿ ತುಸು ಜಾಸ್ತಿಯೇ  ನದಿ ಹಳ್ಳ ಕೊಳ್ಳಗಳು ಭತ್ತಿಹೋಗಿದ್ದು,ಅಂತರ್ಜಲ ಕುಸಿದುಹೋಗಿದೆ. ಮಲೆನಾಡಿನ ಗುಡ್ಡಗಳನ್ನು ಓವರ್ ಹೆಡ್ ಟ್ಯಾಂಕ್ ಗಳು ಎನ್ನುತ್ತಿದ್ದ ವಿಜ್ಞಾನಿಗಳ ಮಾತು ಈಗ ಅಪವಾದ ಎಂಬಂತಾಗಿದೆ.  ಆಗುಂಬೆ ಸೇರಿದಂತೆ ಸುತ್ತಮುತ್ತಲ ಗ್ರಾಮದ ಜನರು ನೀರಿಗಾಗಿ ಪರಿತಪಿಸುವಂತಾಗಿದೆ.ನೀರಿಗಾಗಿ ಕಿಲೋಮೀಟರ್ ಗಟ್ಟಲೆ ನಡೆಯುವಂತ ದಯನೀಯ ಪರಿಸ್ಥಿತಿ  ಸಹ್ಯಾದ್ರಿಯ ತಪ್ಪಲಿನಲ್ಲಿ ಸೃಷ್ಟಿಯಾಗಿದೆ. 

ಬತ್ತಿ ಹೋದ ಮಾಲತಿ ನದಿ 

ಆಗುಂಬೆಯ ಗ್ರಾಮದ ಮಲ್ಲಂದೂರು ಬಳಿ ಜೋಗಿಗುಂಡಿ ದಟ್ಟಾರಣ್ಯದಲ್ಲಿ ಹುಟ್ಟುವ, ಮಾಲತಿ ನದಿ ಇಲ್ಲಿನ ಸುತ್ತಮುತ್ತಲ ಗ್ರಾಮಗಳ ಜೀವನಾಡಿಯಾಗಿದೆ.ಜೋಗಿಗುಂಡಿಯಲ್ಲಿ ಹುಟ್ಟಿ, ಸುಮಾರು 35 ಕಿಲೋಮೀಟರ್ ಹರಿದು ಭೀಮನಕಟ್ಟೆ ಬಳಿ ತುಂಗಾನದಿ ಸೇರುವ ಮಾಲತಿ ನದಿ, ತುಂಗೆಯ ಜಲರಾಶಿಯ ಒಡಲು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ .ಮಾಲತಿ ನದಿ ವರ್ಷಪೂರ್ತಿ ಹರಿಯುವ ಪರಿಣಾಮವಾಗಿ ತುಂಗಾನದಿ ಒಡಲು ಶ್ರೀಮಂತವಾಗಿದೆ. 

ಆಗುಂಬೆಯಲ್ಲಿ ಆತಂಕ

ತುಂಗಾ ನದಿ ಹರಿವಿಗೆ, ಪ್ರಾಕೃತಿಕವಾಗಿ ಮಾಲತಿ ನದಿ ಪ್ರೇರಕ ಶಕ್ತಿಯಾಗಿದೆ. ಹೀಗಾಗಿಯೇ ತುಂಗಾನದಿ ಒಡಲು ಬರಿದಾದಾಗೋದಿಲ್ಲ, ಆದರೆ ಈ ಬಾರಿ ತುಂಗಾ ನದಿ ಹರಿವವನ್ನು ನಿಲ್ಲಿಸಿದೆ.  ಕಾರಣ ತುಂಗಾನದಿಯ ಒಡಲನ್ನ ತುಂಬಿಸುವ,ನೀರಿನ ಸೃಷ್ಠಿಯ ನೆಲೆಯಾಗಿರುವ ಮಾಲತಿ ನದಿಯೂ ಈಗ ಬತ್ತಿ ಹೋಗಿದೆ.  ಪ್ರಾಕೃತಿಕ ಮುನಿಸೋ..,ಮಾನವ ತಾನಾಗಿಯೇ ತಂದುಕೊಂಡ ಗಂಡಾಂತರವೋ ಗೊತ್ತಿಲ್ಲ ಆದರೆ ಎಂದೂ ಬತ್ತದ ಮಾಲತಿ ನದಿ ಇತ್ತಿಚ್ಚಿನ ವರ್ಷಗಳಲ್ಲಿ ಬೇಸಿಗೆಯಲ್ಲಿ  ಬತ್ತಿ ಹೋಗಿರುವುದಕ್ಕೆ ಆಗುಂಬೆ ಜನ ಆತಂಕ ವ್ಯಕ್ತಪಡಿಸಿದ್ದಾರೆ.

ಮಾಲತಿ ನದಿ ಹುಟ್ಟುವ ಜಾಗದಿಂದ ನಾಲ್ಕೈದು ಕಿಲೋಮೀಟರ್ ವರೆಗೆ ನೀರು ಯಾವುದೇ ಕಾರಣಕ್ಕೂ ಬತ್ತುವುದಿಲ್ಲ. ಆದರೆ ಆದರಾಚೆ ಮಾಲತಿ ನದಿಯ ಹರಿವು ಪೆಬ್ರವರಿ ನಂತರವೇ ನಿಂತುಹೋಗುತ್ತದೆ. ಮತ್ತೆ ಮಳೆ ಪ್ರಾರಂಭವಾದಗಲೇ ಮಾಲತಿ ನದಿಗೆ ಹೊಂದಿಕೊಂಡಿರುವ ಹಳ್ಳಕೊಳ್ಳಗಳಿಗೆ ಜೀವ ಕಳೆ ಬಂದು..,ತುಂಗಾ ನದಿಯನ್ನು ಸೇರುತ್ತದೆ. 

ಪಶ್ಚಿಮಘಟ್ಟದ ವನಸಿರಿ,ಗಿಡಮೂಲಿಕೆ ಸಸ್ಯ ಬೇರುಗಂಟಿಗಳನ್ನು  ಟಿಸಿಲೊಡೆದುಕೊಂಡು ಹರಿಯುವ ಮಾಲತಿ ನದಿ ನೀರು ಸಿಹಿಯಾಗಿರುತ್ತದೆ .ಆಗುಂಬೆ ಭಾಗದ ಜನರು ನದಿ ನೀರನ್ನು ನೇರವಾಗಿಯೇ ಸೇವಿಸುತ್ತಾರೆ . .ಕೃಷಿ ಚಟುವಟಿಕೆಗೂ ಸಹ ಮಾಲತಿ ನದಿಯೇ ಜೀವಾಳವಾಗಿದೆ..ನದಿಗೆ ಪಂಪ್ ಸೆಟ್ ಗಳನ್ನು ಅಳವಡಿಸಿಕೊಂಡು ಕೃಷಿ ಬದುಕನ್ನು ಕಟ್ಟಿಕೊಂಡಿರುವ ಇಲ್ಲಿನ ಸ್ಥಳೀಯರು,ಈ ಬಾರಿಯ ಬೇಸಿಗೆಗೆ ತತ್ತರಿಸಿ ಹೋಗಿದ್ದಾರೆ.

ಬೇಸಿಗೆಯ ಬರ

ಮಾಲತಿ ನದಿ ಬತ್ತಿಹೋದ ಮೇಲೆ ಇನ್ನು ಕೆರೆ ಮತ್ತು ಬಾವಿಗಳ ಸ್ಥಿತಿಯನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ . ಬಾವಿ ಕೆರೆಗಳ ಮೇಲೆ ಅವಂಲಂಬಿತವಾಗಿರುವ ಆಗುಂಬೆಯ ಸುತ್ತಮುತ್ತಲ ಗ್ರಾಮಸ್ಥರು ಬೇಸಿಗೆಯಲ್ಲಿ ಇಷ್ಟು ನೀರಿನ ಸಮಸ್ಯೆ ಎದುರಿಸಿದವರಲ್ಲ. ಕಳೆದ ನಾಲ್ಕೈದು ವರ್ಷಗಳಿಂದ ಬೇಸಿಗೆಯಲ್ಲಿ ಬಾವಿಗಳು ಬತ್ತುವ ಹಂತಕ್ಕೆ ತಲುಪಿದರೂ,ತಕ್ಷಣ ಮಳೆಯಾದ ಕಾರಣ ,ಬಾವಿಗಳು ತುಂಬಿದ್ದವು .ಆದರೆ ಈ ಬಾರಿ ಬೇಸಿಗೆಯಲ್ಲಿ ಆಗುಂಬೆಯಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ.

ಆಗುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತ್ತಮುತ್ತಲ ಪ್ರದೇಶ ಗೋಣಿಬೈಲು,  ಹೊಸೂರು, ಮಲ್ಲಂದೂರು,ತಲ್ಲೂರು ಅಂಗಡಿ,ತಲ್ಲೂರು-ಮಳಲಿ,ಚೊಕ್ಕಡಬೈಲು,ನಾಬಳ,ಗುಡ್ಡೆಕೇರಿ ಸೇರಿದಂತೆ ಹಲವು ಗ್ರಾಮಗಳಲ್ಲಿ ನೀರಿನ ಹಾಹಾಕಾರ ತಲೆದೋರಿದೆ. ಆಗುಂಬೆ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮಗಳಿಗೆ ಮಾಲತಿ ನದಿಯ ಸೆಲೆಯಿಂದ ನೀರಿನ ಮೋಟಾರ್ ಅಳವಡಿಸಿ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಟ್ಯಾಂಕರ್ ಗಳಲ್ಲಿ ಪ್ರತಿ ಮಂಗಳವಾರ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಈ ನೀರಿನ ಸೌಲಭ್ಯದ ವ್ಯವಸ್ಥೆ ಇನ್ನು 15 ದಿನಗಳು ಮಾತ್ರ, ಸಕಾಲದಲ್ಲಿ ಮಳೆಯಾಗದೆ ಹೋದರೆ..,ಆಗುಂಬೆ ಜನರ ಸ್ಥಿತಿ ಊಹಿಸಿಕೊಳ್ಳುವುದಕ್ಕೂ ಸಾದ್ಯವಿಲ್ಲ.ಕಾಡಿನ ನೀರಿನ ಜಾಡನ್ನು ಹಿಡಿದು ಹೊರಡಬೇಕಷ್ಟೆ ಎನ್ನುತ್ತಾರೆ ಇಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷರು.

ಕಾಡು ಪ್ರಾಣಿಗಳಿಗೂ ನೀರಿಲ್ಲ

ಆಗುಂಬೆ ಜೀವವೈವಿದ್ಯತೆಯಲ್ಲಿ ಉಂಟಾದ ಸಮಸ್ಯೆ ಕೇವಲ ಜನರಿಗಷ್ಟೆ ಅಲ್ಲ...ಇಲ್ಲಿನ ಪ್ರಕೃತಿ ಜೀವಸಂಕುಲದ ಮೇಲೆ ವನ್ಯಮೃಗಗಳ ಮೇಲೆ ಗಂಭೀರ ಪರಿಣಾಮ ಬೀರಿದೆ ಕಾಡಿನಲ್ಲಿ ನೀರಿನ ಸಮಸ್ಯೆ ತಲೆದೋರಿರುವುದರಿಂದ ಕಾಡುಪ್ರಾಣಿಗಳು ,ರೈತರ ತೋಟಗಳಿಗೆ ಘೀಳಿಡುತ್ತಿವೆ. ಬೆಳೆಯನ್ನು ಹಾನಿ ಮಾಡುತ್ತಿವೆ. ಮಂಗಗಳ ಹಾವಳಿಯಂತೂ ಹೇಳತೀರದಾಗಿದೆ .ಅಡಿಕೆಯ ಹಿಂಗಾರವನ್ನು ಬಿಡದೆ ಮಂಗಗಳು ಮುಕ್ಕುತ್ತಿರುವುದು ರೈತರಿಗೆ ಬೆಳೆ ಉಳಿಸಿಕೊಳ್ಳುವುದು ಮತ್ತೊಂದು ಸವಾಲಾಗಿದೆ.

ತಾಪಮಾನಕ್ಕೆ ಜನ ತತ್ತರ

ಆಗುಂಬೆಯಲ್ಲಿ ಈ ಸಂದರ್ಭದಲ್ಲಿ ಮೂರುಸಲವಾದರೂ ಮಳೆ ಬೀಳಬೇಕಿತ್ತು.ಆದರೆ ಬೇಸಿಗೆಯ ಮಳೆ ಆಗುಂಬೆಯನ್ನು ಸ್ಪರ್ಷಿಸಿಲ್ಲ , ಇದು  ತಾಪಮಾನ ಹೆಚ್ಚಳಕ್ಕೆ ಕಾರಣವಾಗಿದೆ. ಆಗುಂಬೆಯ ತಾಪಮಾನ 38 ಡಿಗ್ರಿಯಿಂದ 40 ಡಿಗ್ರಿವರೆಗೆ ದಾಖಲಾಗುತ್ತೆ. ಇಲ್ಲಿನ ತಾಪಮಾನ ಜನರ ಬದುಕನ್ನು ಹೈರಾಣಾಗಿಸಿದೆ.

ಮಳೆಗಾಲದಲ್ಲಿ ಮಳೆಯ ಆರ್ಭಟಕ್ಕೆ ಇಲ್ಲಿನ ಜನರ ಬದುಕು ಹೇಗೆ ನಲುಗಿ ಹೋಗುತ್ತೋ ಅದೇ ರೀತಿ ಬೇಸಿಗೆಯಲ್ಲಿ ಕೂಡ ಅದೇ ವಾತಾವರಣ ಮರುಕಳಿಸುವಂತೆ ಮಾಡಿದೆ. ಮಳೆಗಾಲದಲ್ಲಿ ಹೆಚ್ಚು ಮಳೆಯಿಂದಾಗಿ ಬೆಳೆ ಉಳಿಸಿಕೊಳ್ಳಲು ಹೇಗೆ ಪರದಾಡುತ್ತಿದ್ದರೋ ಅದೇ ರೀತಿ ಬೇಸಿಗೆಯಲ್ಲಿ ಪರದಾಡಬೇಕಿದೆ. ಮಳೆಗಾಲದಲ್ಲಿ ಹೇಗೆ ಮನೆಯಿಂದ ಹೊರಬಾರದ ಸ್ಥಿತಿ ಇರುತ್ತೋ ಬೇಸಿಗೆಯಲ್ಲೂ ಕೂಡ ಹೆಚ್ಚಿದ ತಾಪಮಾನಕ್ಕೆ ಜನರು ಮನೆಯಿಂದ ಹೊರಬರಲು ಹಿಂದೇಟಾಕುವಂತೆ ಮಾಡಿದೆ.

ಹಸಿರುಗಟ್ಟಿದೆ ಕಾಡು.ಆದರಲ್ಲಿ ಉಸಿರಿಲ್ಲ

ಈಗ ಆಗುಂಬೆಗೆ ಹೋದರೂ...., ಅದೇ ಹಸಿರಿನ ಸಿರಿ ನಿಮ್ಮನ್ನು ಸ್ವಾಗತಿಸುತ್ತ ದೆ,ವಸಂತಕಾಲದ ಹಸಿರು ಚಿಗುರೊಡೆದು ನಿತ್ಯ ಹರಿದ್ವರ್ಣ ಕಾಡಿನಂತೆ ಆಗುಂಬೆ ಪರಿಸರ ಕಂಗೊಳಿಸುತ್ತಿದೆ .ಆದರೆ ಈ ಪರಿಸರದಲ್ಲಿ ನಿಂತರೆ ನಿಮಗೆ ಬಿಸಿ ಗಾಳಿಯ ಅನುಭವವಾಗುತ್ತದೆ .ಸೂರ್ಯನ ಕಿರಣ ನೆತ್ತಿಯನ್ನು ಸುಡುತ್ತದೆ .ಬಿಸಿಲಿನ ದಗೆ ಕ್ಷಣಕಾಲ ಉಸಿರುಗಟ್ಟುವಂತೆ ಮಾಡುತ್ತೆ...ಇನ್ನು ಆಗುಂಬೆ ಪರಿಸರದಲ್ಲಿ ನದಿ ಹಳ್ಳಕೊಳ್ಳಗಳು ಬತ್ತುವುದು ಸಹಜವೇ..,ಲ್ಯಾಟ್ರ್ಯಾಡ್(Latroid Soil) ಮಣ್ಣಿನ ಗುಣ ಹೊಂದಿರುವುದರಿಂದ ಜೌಗು ಪ್ರದೇಶದಲ್ಲಿ ನೀರು ಹರಿದುಹೋಗುವುದರಿಂದ ಇಲ್ಲಿ ನೀರು ಸಂಗ್ರಹಗೊಳ್ಳುವುದಿಲ್ಲ.ಇಂಗು ಗುಂಡಿಗಳನ್ನು ಮಾಡಿದರೂ ..,ನೀರು ಬತ್ತಿಹೋಗುತ್ತದೆ.

ಅಂತರ್ಜಲ ಕುಸಿತ

ಅರೇ ಅರಣ್ಯವಿದ್ದರೂ ಆಗುಂಬೆ ಪರಿಸರದಲ್ಲಿ ಈ ಪರಿಸ್ಥಿತಿಯೇ ಎಂದು ನೀವು ಭಾವಿಸಬಹುದು,.ಹೌದು ಆಗುಂಬೆಯ ಪರಿಸರದಲ್ಲಿ ಕೆರೆ ಕಟ್ಟೆಗಳು ಬಾವಿಗಳು ಬತ್ತಿಹೋಗಲು ಪ್ರಮುಖ ಕಾರಣ ಅಂತರ್ಜಲ ಕುಸಿತ..,ಪ್ರಪಂಚದ 18 ಅತೀ ಸೂಕ್ಷ್ಮ ಜೀವವೈವಿದ್ಯತೆ ತಾಣಗಳಲ್ಲಿ ಪಶ್ಚಿಮಘಟ್ಟ ಪ್ರದೇಶ ಒಂದು.ಇಂತಹ ಪಶ್ಚಿಮಘಟ್ಟ ಪ್ರದೇಶದ ಸಹ್ಯಾದ್ರಿಯ ಸಾಲಿನಲ್ಲಿ ಅಂತರ್ಜಲ ಕುಸಿದಿದೆ ಎಂದರೆ ಇದು ವಿಶ್ವಕ್ಕೆ ಎಚ್ಚರಿಕೆಯ ಸಂದೇಶವೆಂದರೇ ತಪ್ಪಾಗುವುದಿಲ್ಲ.

ಅಂತರ್ಜಲ ಕುಸಿಯಲು ಕಾರಣವೇನು

ಆಗುಂಬೆಯಲ್ಲಿ ಅಂತರ್ಜಲ ವರ್ಷ ವರ್ಷಕ್ಕೂ ಕುಸಿಯುತ್ತಿದೆ. ಕಾಡನ್ನು ಬೆಳೆಸಿ ನಾಡನ್ನು ಉಳಿಸಿ ಎನ್ನುವ ಅರಣ್ಯ ಇಲಾಖೆ ತಾನಿಟ್ಟ ತಪ್ಪು ಹೆಜ್ಜೆಗಳಿಂದಾಗಿಯೇ ಇಂದು ಪರಿಸರದಲ್ಲಿ ವೈಪರಿತ್ಯಗಳುಂಟಾಗಲು ಕಾರಣವಾಗಿದೆ. ಅಂತರಾಷ್ಟ್ರೀಯ ನೀತಿ ನಿರೂಪಣೆಗಳ ಒಪ್ಪಂದಕ್ಕೆ ಸಹಿ ಹಾಕಿದ ಪರಿಣಾಮ ಇಂದು ದಟ್ಟ ಕಾಡುಗಳು ಏಕಜಾತಿ ನೆಡುತೋಪುಗಳಾಗಿ ಮಾರ್ಪಟ್ಟಿದೆ .JICA,OECD,FDA, ವಿದೇಶಿ ಕಂಪನಿಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದದಿಂದಾಗಿ ನೈಸರ್ಗಿಕ ಕಾಡು ನಾಶವಾಗಿದೆ.

ಅರಣ್ಯಇಲಾಖೆ ಮಾಡಲ್ 4 ಅಡಿಯಲ್ಲಿ ಪ್ಯುವಲ್ ವುಡ್ ಗಳೆಂದು ಕರೆಯಲ್ಪಡುವ ಆಸ್ಟ್ರೇಲಿಯ ಮೂಲದ ಅಕೇಷಿಯ,ನೀಲಗಿರಿ,ಸಿಲ್ವರ್ ವುಡ್ ಮರಗಳ  ಏಕಜಾತಿ ನೆಡುತೋಪು ನ್ನೇ ಬೆಳೆದಿದೆ.ಆಗುಂಬೆ ಪರಿಸರದಲ್ಲಿ ಮೈಸೂರು ಪೇಪರ್ ಮಿಲ್ಸ್ ಕಾರ್ಖಾನೆಗೆ ಸರ್ಕಾರ ನೀಡುವ ಅರಣ್ಯ ಭೂಮಿಯಲ್ಲಿ ಹೆಚ್ಚಾಗಿ ಅಕೇಷಿಯ ಬೆಳೆಯಲಾಗುತ್ತಿದೆ.  ಈ ಜಾತಿಯ ಮರಗಳು ನೀರಿನ ಮೂಲವನ್ನು ಹುಡುಕಿಕೊಂಡು ನೀರು ಬಸಿಯುತ್ತವೆ ಎಂದರೆ ಇನ್ನು ಅಂತರ್ಜಲ ಉಳಿಯಲು ಸಾಧ್ಯನಾ..

ಗುಡ್ಡಗಳಲ್ಲಿ ಜೆಸಿಬಿ ಯಂತ್ರಗಳ ಡಿಗ್ಗಿಂಗ್

ಮಲೆನಾಡು ಗುಡ್ಡಗಳನ್ನು ಓವರ್ ಹೆಡ್ ಟ್ಯಾಂಕ್ ಗಳೆಂದು ಕರೆಯುತ್ತಾರೆ.ಇಲ್ಲಿನ ಗುಡ್ಡಗಳಿಗೆ ನೀರನ್ನು ಸ್ಪಾಂಜಿನಂತೆ ಹೀರಿ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿದೆ .ಅತೀ ಆಳದವರೆಗೆ ನೀರು ಹಿಡಿದಿಟ್ಟುಕೊಳ್ಳುವ ಗುಡ್ಡಗಳು ಅಂತರ್ಜಲ ಸಂರಕ್ಷನಂತೆ ಕೆಲಸ ಮಾಡುತ್ತದೆ. ಗುಡ್ಡದಲ್ಲಿ ಸಂಗ್ರಹಗೊಂಡ ನೀರು..,ನೀರಿನ ಸೆಲೆಗೆ ತಕ್ಕಂತೆ ಜಲಕಿಂಡಿಗಳ ಮೂಲಕ ಹರಿದು ಹೋಗುವಂತೆ, ಭೂಮಿಯ ತಳಹದಿಯಲ್ಲಿ ತನ್ನದೇ ಆದ ನೀರು ಸರಬರಾಜು ವ್ಯವಸ್ಥೆಯನ್ನು ಪ್ರಕೃತಿ ಮಾಡಿಕೊಂಡಿದೆ.

ಗುಡ್ಡ ಅಗೆದಾಗ ನೋಡಬಹುದು..ಬಿಲದ ರೂಪದಲ್ಲಿ ಕಾಣುವ ಕಿಂಡಿಗಳೇ ನೈಸರ್ಗಿಕ ಜಲಕಿಂಡಿಗಳು..,ಆದರೆ ಇತ್ತಿಚ್ಚಿನ ದಿನಗಳಲ್ಲಿ ಬೆಟ್ಟಗುಡ್ಡಗಳನ್ನು ಜೆಸಿಬಿ ಯಂತ್ರಗಳ ಮೂಲಕ ಅವ್ಯಾಹಿತವಾಗಿ ಅಗೆಯುತ್ತಿರುವುದರಿಂದ ಜಲಕಿಂಡಿಗಳ ಸಂಪರ್ಕವೇ ಕಡಿದು ಹೋಗಿದೆ. ಕಾಡನ್ನ ಅವ್ಯಾಹತವಾಗಿ ಕಡಿಯುವುದು ಮತ್ತೆ ಅದೇ ಅಕೇಶಿಯ ಗಿಡಗಳನ್ನು ನೆಡುವುದರಿಂದ ಪ್ರಾಕೃತಿಕ ಸೊಬಗು ಹಾಳಾಗುತ್ತಿದೆ.

ಏಕ ಜಾತಿ ನೆಡುತೋಪಿನಿಂದಾಗಿ ಕಾಡಿನಲ್ಲಿ ಆಹಾರವಿಲ್ಲ

ಆಗುಂಬೆ ಭಾಗದಲ್ಲಿ ಇದೊಂದು ಅತ್ಯಂತ ಗಂಭೀರ ಸಮಸ್ಯೆ.ಕಾಡುಪ್ರಾಣಿಗಳ ಹಾವಳಿಗೆ ಕೆಲ ರೈತರು ಕೃಷಿ ಬದುಕಿಗೆ ವಿದಾಯ ಹೇಳಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಮತ್ತದೇ ಏಕಜಾತಿ ನೆಡುತೋಪನ್ನೇ ಬೊಟ್ಟು ಮಾಡಿ ತೋರಿಸುತ್ತದೆ.  ಕಾಡಿನಲ್ಲಿ ಅಕೇಷಿಯ ಬಿಟ್ಟರೆ ಬೇರೆ ಯಾವ ಹಣ್ಣುಹಂಪಲು ಗಿಡಗಳು ಕಾಣುತ್ತಿಲ್ಲ .ಅಕೇಷಿಯ ಮರದ ಕೆಳಗೆ ಒಂದು ಗಿಡಸಸಿಗಳು ಬೆಳೆಯುವುದಿಲ್ಲ .ಹೀಗಾಗಿ ಇಲ್ಲಿ ಜಿಂಕೆ ಕಡವೆಗಳ ಸಂತತಿ ಕ್ಷೀಣಿಸಿದೆ . ಕಾಡುಕೋಣಗಳು ರೈತರ ತೋಟಗಳಿಗೆ ಲಗ್ಗೆ ಇಡುತ್ತಿವೆ. ನಾಡಿನಲ್ಲಿ ಹಿಡಿದ ಮಂಗಗಳನ್ನು ಕಾಡಿಗೆ ಬಿಡಲಾಗುತ್ತಿದೆ .ಆದರೆ ಅವುಗಳಿಗೆ ಕಾಡಿನಲ್ಲೂ ಕೂಡ ಆಹಾರ ಸಿಗುತ್ತಿಲ್ಲ . ಪರಿಣಾಮ ಮತ್ತದೇ ರೈತರ ಹೊಲಗದ್ದೆಗಳ ಬೆಳೆಗಳೇ ಪ್ರಾಣಿಗಳಿಗೆ ಆಹಾರವಾಗಬೇಕಿದೆ.

ಅರಣ್ಯ ಒತ್ತುವರಿ,ಕಾಡುನಾಶ

ಜೀವವೈವಿದ್ಯತೆಯನ್ನು ಕಾಪಾಡುವಲ್ಲಿ ಪಶ್ಚಿಮ ಘಟ್ಟ ಪ್ರದೇಶಗಳು ಪ್ರಮುಖ ಪಾತ್ರ ವಹಿಸುತ್ತವೆ. ಪರಿಸರ ಸಮತೋಲನದ ಅಡಿಗಲ್ಲು ಕೂಡ ಅರಣ್ಯ ಪ್ರದೇಶಗಳೇ . ಅಳಿವಿನಂಚಿನಲ್ಲಿರುವ ಸಸ್ಯ ಪ್ರಾಣಿ ಕೀಟ ಪ್ರಭೇದಗಳಿಗೆ ಜೀವ ರಕ್ಷಣೆ ನೀಡುವುದರ ಜೊತೆಗೆ ಮೋಡಗಳನ್ನು ತಡೆದು ಮಳೆಸುರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಅದರೆ ಇತ್ತೀಚ್ಚಿನ ದಳಕಗಳಲ್ಲಿ ಮಲೆನಾಡಿನ ಗುಡ್ಡಗಳು ಎಲ್ಲಿ ನೋಡಿದರಲ್ಲಿ ಎಂಪಿಎಂ ನ ಅಕೇಷಿಯ,ನೀಲಗಿರಿ,ತೇಗ, ನೆಡುತೋಪುಗಳು ಕಾಣಸಿಗುತ್ತವೆ. ಅರಣ್ಯ ಸಂರಕ್ಷಣೆಗಾಗಿ ಜನಪದದಲ್ಲಿ ದೇವರಗುಡ್ಡ,ಹುಲಿಬನ, ಸೋಪ್ಪುಗುಡ್ಡೆ,ಎಂಬ ಪರಿಕಲ್ಪನೆಯಿತ್ತು .ಅದರೆ ಅದೆಲ್ಲಾ ಈಗ ಮಾಯವಾಗಿದೆ.

ಜೀವವೈವಿದ್ಯತೆಯ ತಾಣದಲ್ಲಿಯೇ ಮಳೆ ಕಡಿಮೆಯಾಗಿ ತಾಪಮಾನ ಹೆಚ್ಚಾಗಿದೆ ಎಂದರೆ ಇದು ಯಾರ ಎಡವಟ್ಟಿನ ಪ್ರತಿಫಲ ಎಂದು ಮತ್ತೊಮ್ಮೆ ಹೇಳಬೇಕಾಗಿಲ್ಲ.ಆದರೆ ರಾಜ್ಯದಲ್ಲಿ ಬರ ಆವರಿಸಿರುವ ಸಂದರ್ಭದಲ್ಲಿ ನೀರಿನ ಮೌಲ್ಯದ ಮರ್ಮ ಹುಡುಕುತ್ತಾ ಹೋದಾಗ, ಪ್ರಕೃತಿ ವಿನಾಶದ ಸತ್ಯ ದರ್ಶನವಾಗುತ್ತೆ .ಆಗುಂಬೆಯಂತಹ ಜೀವ ವೈವಿದ್ಯತೆಯ ತಾಣದಲ್ಲಿ ಅಂತರ್ಜಲ ಕುಸಿದು ನೀರಿಗೆ ಹಾಹಾಕಾರ ತಲೆದೋರಿರುವುದು ಪ್ರಕೃತಿಯ ಮುನಿಸು ಎನ್ನಬಹುದೇನೋ ಗೊತ್ತಿಲ್ಲ.