6 ಪುಟದ ಡೆತ್‌ ನೋಟ್‌ & 85 ಕೋಟಿ ದುಡ್ಡು ಮಾಯವಾದ ಕಥೆ | ಅನುಮಾನ ಏನು? ಅಕ್ರಮವೇನು? ಯಾರು ಹೇಳದ Full ಸತ್ಯ

Chandrashekharan P, the superintendent of Karnataka Maharshi Valmiki Scheduled Tribes Development Corporation Limited, committed suicide. The case has now turned into a political uproar. Malenadu Today is making an effort to explain the details of the fraud involved in the case to the general public

6 ಪುಟದ ಡೆತ್‌ ನೋಟ್‌ & 85 ಕೋಟಿ ದುಡ್ಡು ಮಾಯವಾದ ಕಥೆ | ಅನುಮಾನ ಏನು? ಅಕ್ರಮವೇನು? ಯಾರು ಹೇಳದ Full ಸತ್ಯ
chandrasekharan p death case scam

SHIVAMOGGA | MALENADUTODAY NEWS | May 29, 2024  ಮಲೆನಾಡು ಟುಡೆ 

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತ ಇದರ ಅಧೀಕ್ಷರು ಚಂದ್ರಶೇಖರನ್‌ ಪಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕೇಸ್‌ ಇದೀಗ ರಾಜಕೀಯ ದಾಳವಾಗಿದೆ. ಆದರೆ ಪ್ರಕರಣದಲ್ಲಿ ಏನು ವಂಚನೆಯಾಗಿದೆ? ವಂಚನೆ ಅಂದರೆ ಹೇಗೆ? ಅದರ ವಿವರ ಏನು ಎನ್ನುವುದನ್ನ ಡಿಟೇಲ್‌ ಆಗಿ ಜನಸಾಮಾನ್ಯರಿಗೆ ತಿಳಿಯುತ್ತಿಲ್ಲ. ಆ ನಿಟ್ಟಿನಲ್ಲಿ ಒಂದು ಪ್ರಯತ್ನವನ್ನು ಮಲೆನಾಡು ಟುಡೆ ಮಾಡುತ್ತಿದೆ. 

ಅಧಿಕಾರಿಯ ಆತ್ಮಹತ್ಯೆ ಬೆನ್ನಲ್ಲೆ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಬಂದಿದ್ದ ಹಣದ ಅಂದಾಜು 85 ಕೋಟಿ ರೂಪಾಯಿಯನ್ನು ಹಣವನ್ನು ಯಾವುದೋ ಖಾತೆಗೆ ವರ್ಗಾವಣೆ ಮಾಡಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿದೆ. ಆ ಸತ್ಯವನ್ನು ಚಂದ್ರಶೇಖರನ್ನ ತಮ್ಮ ಆರು ಪುಟಗಳ ಡೆತ್‌ನೋಟ್‌ನಲ್ಲಿ ತಿಳಿಸಿದ್ದಾರೆ. ಡೆತ್‌ನೋಟ್‌ನ ಪ್ರತಿಪುಟಕ್ಕೂ ಛೋಟಾ ಸಹಿ ಮಾಡಿರುವ ಅವರು ಅವ್ಯವಹಾರಕ್ಕೆ ಸಂಬಂಧಿಸಿದ ಅಧಿಕಾರಿಗಳ ಹೆಸರು ಹಾಗೂ ಅವರ ಪದನಾಮವನ್ನು ಸಹ ನಮೂದಿಸಿದ್ದಾರೆ. 

ಅವರ ಡೆತ್‌ನೋಟ್‌ನಲ್ಲಿ ಇರುವಂತೆ ನೋಡುವುದಾದರೆ, ಕಳೆದ ಮಾರ್ಚ್‌ ಆರಂಭದಲ್ಲಿ ಇದೆಲ್ಲಾ ಆರಂಭವಾಗಿದೆ. ಲೋಕಸಭಾ ಚುನಾವಣೆಯ ನೀತಿ ಸಂಹಿತೆಯು ಲಾಗುವಾಗಿರುವ ಸಂದರ್ಭ ಅದು. ತೀರಾ ಅವಶ್ಯಕತೆಗೆ ಹೊರತುಪಡಿಸಿ ಸರ್ಕಾರದ ಅಕೌಂಟ್‌ಗಳಿಂದ ಹಣ ವರ್ಗಾವಣೆ ಸಲ್ಲದು ಮತ್ತದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. 

ಚಂದ್ರಶೇಖರನ್‌ರವರು ನಮೂದಿಸಿದಂತೆ ಮಾರ್ಚ್‌ ತಿಂಗಳಿನಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ವಸಂತ ನಗರ ಶಾಖೆಯ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಸ್ವೀಪ್‌ ಇನ್‌ , ಸ್ವೀಪ್‌ ಓಟ್‌ ಖಾತೆಯನ್ನು ಎಂಜಿ ರಸ್ತೆಯ ಶಾಖೆಗೆ ವರ್ಗಾಯಿಸುವಂತೆ ಪತ್ರ ಬರೆಯಲು ಸೂಚಿಸಿ ಮಾನ್ಯ ಸಚಿವರು ಮೌಖಿಕ ಆದೇಶ ನೀಡಿದ್ದರಂತೆ. (ಇದನ್ನೆ ಮೌಖಿಕ ಆದೇಶ ಎಂದು ಪ್ರತಿಪಕ್ಷಗಳ ಆರೋಪಿಸ್ತಿರುವುದು) ಆದರೆ ಇದಕ್ಕೆ ವಸಂತ ನಗರ ಬ್ಯಾಂಕ್‌ ಶಾಖೆಯ ವ್ಯವಸ್ಥಾಪಕರು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉಪಖಾತೆಯನ್ನು ಎಂಜಿ ರಸ್ತೆಯಲ್ಲಿರುವ ಬ್ಯಾಂಕ್‌ ಖಾತೆಗೆ ವರ್ಗಾಯಿಸಿ, ವಿವಿಧ ಹಂತಗಳಲ್ಲಿ 187.33 ಕೋಟಿ ರೂಪಪಾಯಿಗಳನ್ನು ವರ್ಗಾಯಿಸಲಾಗಿದೆ ಎಂದು ಡೆತ್‌ ನೋಟ್‌ನಲ್ಲಿ ವಿವರಿಸಿದ್ದಾರೆ ಚಂದ್ರಶೇಖರನ್ನು. 

ಅಭಿವೃದ್ದಿ ನಿಗಮ ಹೊಂದಿದ ವಿವಿಧ ಖಾತೆಗಳು ಹಾಗೂ ರಾಜ್ಯ ಖಜಾನೆಯಿಂದ ಎಂಜಿ ರೋಡ್‌ ಶಾಖೆಯಲ್ಲಿನ ಉಪಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದು ಹೇಳಿರುವ ಚಂದ್ರಶೇಖರನ್‌ ಅಲ್ಲಿನ ಖಾತೆಯ ಚೆಕ್‌ ಪುಸ್ತಕ ಹಾಗೂ ಪಾಸ್‌ ಪುಸ್ತಕವನ್ನು ಬ್ಯಾಂಕ್‌ನವರು ಕೊಟ್ಟಿಲ್ಲ ಎಂದಿದ್ದಾರೆ. ಆನಂತರ ಕೆಲಸದ ಒತ್ತಡದಿಂದ ಬ್ಯಾಂಕ್‌ನ್ನ ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದು ಬರೆದುಕೊಂಡಿರುವ ಚಂದ್ರಶೇಖರನ್‌, ಕೋಡ್‌ ಆಫ್‌ ಕಂಡೆಕ್ಟ್‌ ಹಿನ್ನೆಲೆಯಲ್ಲಿ ಯಾವುದೇ ಬಿಲ್ ಪಾವತಿ ಮಾಡುವ ಸನ್ನಿವೇಶವೂ ಸೃಷ್ಟಿಯಾಗಿರಲಿಲ್ಲ ಎನ್ನುತ್ತಾರೆ. ಈ ವೇಳೆ ಅನುದಾನ ವರ್ಗಾವಣೆಯ ಮೇಲಾಧಿಕಾರಿಗಳು ಸಂಚು ಅರ್ಥವಾಗಿರಲಿಲ್ಲ ಅಂತಾ ಬರೆದುಕೊಂಡಿದ್ದಾರೆ. 

ಮುಂದುವರಿದು, ದಿನಾಂಕ 21-05-2024 ರಂದು ಐವತ್ತು ಕೋಟಿ ರೂಪಾಯಿಗಳ ಚೆಕ್‌ ಯಾರಿಗೂ ತಿಳಿಯದ ಹಾಗೆ ಕಾನ್ಫಿಡೆನ್ಶಿಯಲ್‌ ಆಗಿ ಬರೆದು ತರಲು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿರುವ ವಿಷಯವೂ ಚಂದ್ರಶೇಖರ್‌ಗೆ ಲೆಕ್ಕಾಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಚಂದ್ರಶೇಖರನ್‌ ನಿರಾಕರಿಸಿದ್ದಾರೆ. ಆಗ ಒತ್ತಡ ಹೇರಿ ಚಂದ್ರಶೇಖರನ್‌ರವರಿಗೆ ನೀವೆ ಬ್ಯಾಂಕ್‌ಗೆ ಹೋಗಿ ಆರ್‌ಟಿಜಿಎಸ್‌ ಮಾಡಿಸಿ ತಮಗೆ ತಿಳಿಸುವಂತೆ ಸೂಚಿಸಿದ್ದರಂತೆ. ಅದರಂತೆ ಚಂದ್ರಶೇಖರ್‌ ಎಂಜಿ ರಸ್ತೆಯ ಬ್ಯಾಂಕ್‌ ಶಾಖೆಯ ಮ್ಯಾನೇಜರ್‌ಗೆ ಹೋಗಿ ಭೇಟಿಯಾಗಿದ್ದಾರೆ. ಅವರ ಬಳಿ ಖಾತೆಗೆ ಸಂಬಂಧಿಸಿದ ಪಾಸ್‌ ಬುಕ್‌, ಚೆಕ್‌ಬುಕ್‌ ,ಬ್ಯಾಲೇನ್ಸ್‌ ಇನ್ಫಾರ್ಮೇನ್‌ ಮೆಸೇಜ್‌ ಕೊಡಲು ತಿಳಿಸಿದ್ದಾರೆ. 

ಆದರೆ ಬ್ಯಾಂಕ್‌ ಮ್ಯಾನೇಜರ್‌ ದಾಖಲೆಗಳನ್ನು ಕೊಡಲು ನಿರಾಕರಿಸಿ, ಯಾರು ಖತೆಯ ಅದೀಕೃತ ಸಹಿದಾರರು ಇರುತ್ತಾರೋ ಅವರೇ ಖುದ್ದಾಗಿ ಬರಬೇಕು, ಅಥವಾ ಅವರಿಂದ ಪತ್ರವನ್ನು ತರಬೇಕು ಎಂದು ಸೂಚಿಸಿದ್ದಾರೆ. ಆಗ ಚಂದ್ರಶೇಖರನ್‌ ರವರು, ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆಗ ಅವರು ನಾನೇ ಖುದ್ದಾಗಿ ನಾಳೆ ಬ್ಯಾಂಕ್‌ಗೆ ಬರುವುದಾಗಿ ತಿಳಿಸಿದ್ದರು ಎಂಬುವುದರೊಂದಿಗೆ ಚಂದ್ರಶೇಖರನ್‌ರವರ ಮೈ ಡೆತ್‌ ನೋಟ್‌ನ ಮೂರನೇ ಪುಟ ಮುಕ್ತಾಯಗೊಳ್ಳುತ್ತದೆ. 

ಇದಾದ ಬಳಿಕ ಬ್ಯಾಂಕ್‌ನಿಂದ ನಿಗಮದ ಪರವಾಗಿ ಈಗಾಗಲೇ ಚೆಕ್‌ ಪುಸ್ತಕ ಪಡೆದಿರುವುದಾಗಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ. ಚಂದ್ರಶೇಖರ್‌ ತಮ್ಮ ಸಿಬ್ಬಂದಿ ಮತ್ತೊಮ್ಮೆ ಪರಿಶೀಲನೆ ಮಾಡಿ ಚೆಕ್‌ ಬುಕ್‌ ಆಗಲಿ , ಪಾಸ್‌ ಬುಕ್‌ ಆಗಲಿ ಪಡೆದಿಲ್ಲ ಎಂದು ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿದ್ದಾರೆ. ಇದಾದ ಬಳಿಕ ಚಂದ್ರಶೇಖರನ್‌ ಇನ್ನೊಬ್ಬ ಅಧಿಕಾರಿ ಜೊತೆಗೆ ಬ್ಯಾಂಕ್‌ಗೆ ಹೋಗಿ ಪರಿಶೀಲನೆ ನಡಸಿದ್ದಾರೆ (ಇನ್ನೊಬ್ಬರು ಇಲ್ಲಿ ಸಾಕ್ಷಿಯಾಗುವ ಸಾಧ್ಯತೆ ಇದೆ). 

ಯಾವಾಗ ಚಂದ್ರಶೇಖರನ್‌ ಬ್ಯಾಂಕ್‌ಗೆ ಹೋಗಿ ಪರಿಶೀಲನೆ ನಡೆಸಿದರೋ ಆಗ ಹಣ ಅಕ್ರಮವಾಗಿ ವರ್ಗಾವಣೆ ಆಗಿರುವುದು ಗೊತ್ತಾಗಿದೆ. ಅಲ್ಲದೆ ಅವರು ಹೇಳುವಂತೆ ವರ್ಗಾವಣೆಗೆ ಮ್ಯಾನೇಜಿಂಗ್‌ ಡೈರಕ್ಟರ್‌ ಹಾಗೂ ಅಕೌಂಟ್‌ ಆಫಿಸರ್‌ರವರ ಜಂಟಿ ಸಹಿ ವರ್ಗಾವಣೆಗೆ ಇರುವುದು ಗಮನಿಸಿದ್ದಾರೆ. 

ಈ ಬೆಳವಣಿಗೆ ಬಳಿಕ 23-05-2024 ರಂದು ಚಂದ್ರಶೇಖರನ್‌ ಹಾಗೂ ಲೆಕ್ಕಾಧಿಕಾರಿ ಹಾಗೂ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಬ್ಯಾಂಕ್‌ಗೆ ಹೋಗಿದ್ದಾರೆ. ಅಲ್ಲಿಂದ ಪ್ರಾದೇಶಿಕ ಮುಖ್ಯಸ್ಥರನ್ನು ಸಂಪರ್ಕಿಸಿ ವಿಷಯ ತಿಳಿಸಿ, ದೂರು ನೀಡಿದ್ದಾರೆ. ಈ ವೇಳೆಯಲ್ಲಿ ಎಂಡಿಯವರು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರ ಕಚೇರಿಯ ಸಿಬ್ಬಂದಿಯ ಬಳಿ ಮಾತನಾಡಿದ್ದು, ಅಲ್ಲಿಯವರೆಗೂ ವಿಷಯ ಗೌಪ್ಯವಾಗಿ ಇಡುವಂತೆ ಸೂಚಿಸಿದ್ದರು ಎಂದು ಚಂದ್ರಶೇಖರನ್‌ ಬರೆದುಕೊಂಡಿದ್ದಾರೆ. ಅಲ್ಲದೆ ಅದೇದಿನ ಸಂಜೆ ಐದು ಕೋಟಿ ರೂಪಾಯಿ ರಿಟರ್ನ್‌ ಆಗಿದೆ ಎಂದು ಸಹ ತಿಳಿಸಿದ್ದರಂತೆ. 

ಈ ಬಳಿಕ 24-05-2024 ರಂದು  ಈ ವಿಚಾರವನ್ನು ನಿಗಮದ ಅಧ್ಯಕ್ಷರಿಗೆ ತಿಳಿಸಿದ್ದಾರೆ ಚಂದ್ರಶೇಖರ್‌. ಎರಡು ದಿನಗಳ ನಂತರ ದೂರು ದಾಖಲಿಸುವುದಾಗಿ ಅವರು ತಮಗೆ ತಿಳಿಸಿದ್ದರು ಎಂದು ಚಂದ್ರಶೇಖರನ್‌ ತಮ್ಮ ಡೆತ್‌ ನೋಟ್‌ನ ಐದನೇ ಪುಟದಲ್ಲಿ ಬರೆದುಕೊಂಡಿದ್ದಾರೆ. 

ಇಷ್ಟೊಂದು ವಿವರಿಸಿರುವ ಚಂದ್ರಶೇಖರನ್‌ ಪರಿಶಿಷ್ಟ ವರ್ಗಗಳ ಅನುದಾನ 80-85 ಕೋಟಿ  ರೂಪಾಯಿಗಳು ಅಕ್ರಮವಾಗಿರುವುದು ಕಂಡು ಬಂದಿದೆ. ಇದರಲ್ಲಿ ನನ್ನ ತಪ್ಪು, ಚೆಕ್‌ ಪುಸ್ತಕ ಹಾಗೂ ಪಾಸ್‌ ಪುಸ್ತಕ ಪಡೆಯದೇ ಇರುವುದು ಎಂದು ಡೆತ್‌ ನೋಟ್‌ನಲ್ಲಿ ಬರೆದಿದ್ದಾರೆ. 

ಇದಿಷ್ಟು ಚಂದ್ರಶೇಖರನ್‌ರವರ ಡೆತ್‌ನೋಟ್‌ನ ಸಾರಾಂಶವಾಗಿದ್ದು ಇಲ್ಲಿ ಕೆಲವೊಂದು ಅನುಮಾನಗಳು ಸಹ ಸ್ಪಷ್ಟವಾಗುತ್ತದೆ. 

  • ಚಂದ್ರಶೇಖರನ್‌ರವರದ್ದು ಚೆಕ್‌ ಪುಸ್ತಕ ಹಾಗೂ ಪಾಸ್‌ ಪುಸ್ತಕ ಪಡೆಯದಿರುವುದಷ್ಟೆ ತಪ್ಪಾಗಿದ್ದಲ್ಲಿ ಅವರ ಬಳಿಯಲ್ಲಿ ಹಲವು ಆಯ್ಕೆಗಳಿದ್ದವು. ವಿಚಾರವನ್ನು ಮೀಡಿಯಾಗಳಿಗೆ ಲೀಕ್‌ ಮಾಡಬಹುದಿತ್ತು, ಸಚಿವರು, ಮುಖ್ಯಮಂತ್ರಿಗಳನ್ನು ಸಂಪರ್ಕಿಸಬಹುದಿತ್ತು. 

  • ವಿಚಾರ ಬಹಿರಂಗ ಪಡಿಸದೇ ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳಲು ನಿರ್ಧರಿಸಿದ್ದ ಚಂದ್ರಶೇಖರನ್‌ರವರಿಗೆ ಒತ್ತಡಗಳಿತ್ತಾ? ಅವರನ್ನ ಈ ಪ್ರಕರಣದಲ್ಲಿ ಅಪರಾಧಿಯಾಗಿಸುವ ಹುನ್ನಾರ ನಡೆದಿತ್ತಾ? ಅದರಿಂದಲೇ ಅವರು ಇಂತಹದ್ದೊಂದು ಕೃತ್ಯಕ್ಕೆ ಶರಣಾದರಾ? 

  • ಒಂದು ಸ್ಕ್ಯಾಮ್‌ ಆದ ಸಂದರ್ಭದಲ್ಲಿ ಯಾವುದೇ ಒಬ್ಬ ವ್ಯಕ್ತಿಯನ್ನು ಗುರಿಮಾಡಿ ಅವರದ್ದೆ ತಲೆಮೇಲೆ ಎಲ್ಲವನ್ನು ಹೊಣೆ ಹೊರಿಸಲು ಬರುವುದಿಲ್ಲ. ಅದರಲ್ಲಿ ಪಾಲುದಾರರಾದ ಸಣ್ಣ ವ್ಯಕ್ತಿಯು ಅಪರಾಧಿಯಾಗುತ್ತಾರೆ. ಹಾಗಿರುವಾಗ ಚಂದ್ರಶೇಖರನ್‌ ಹೆದರಿದ್ರಾ? 

  • ಸುವಿಸ್ತೃತವಾಗಿ ಇಡೀ ಹಗರಣ ನಡೆದಿರುವುದನ್ನ ತಮ್ಮ ವಿವರಣೆಯಲ್ಲಿ ನೀಡಿರುವ ಚಂದ್ರಶೇಖರನ್‌ಗೆ ಒತ್ತಡ ಆತಂಕ ಬೆದರಿಕೆ ಇದ್ದಿದ್ದರೇ ಅವರು ಅದರ ಬಗ್ಗೆಯು ಉಲ್ಲೇಖಿಸುವ ಸಾಧ್ಯತೆ ಇತ್ತು. 

  • ನಾನು ಹೇಡಿಯಲ್ಲ ಆದರೆ ಅವಮಾನ ಸಹಿಸಲಾರೆ ಎಂದು ಬರೆದುಕೊಂಡಿರುವ ಚಂದ್ರಶೇಖರನ್‌ ನನಗೆ ಬೇರೆ ದಾರಿ ಕಾಣುತ್ತಿಲ್ಲ ಎಂದು ಬರೆದು ತಮ್ಮ ಸಹ ಹಾಗಿ ಡೆತ್‌ ನೋಟ್‌ ಮುಗಿಸಿದ್ದಾರೆ. ಅರ್ಥಾತ್‌ ಈ ಪ್ರಕರಣದಲ್ಲಿ ಅವರನ್ನ ಸಿಲುಕಿಸುವ ಅಥವಾ ಹೊಣೆಗಾರರನ್ನಾಗಿಸುವ  ಪ್ರಯತ್ನ ಅದಾಗಲೇ ನಡೆದಿತ್ತು ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. 

  • ಒಟ್ಟಾರೆ ಇಡೀ ಪ್ರಕರಣ ಚಂದ್ರಶೇಖರನ್‌ ವರ್ಷನ್‌ನಲ್ಲಿ ಅಂದಾಜು 85 ಕೋಟಿ ರೂಪಾಯಿಗಳ ವರ್ಗಾವಣೆ ಸ್ಕ್ಯಾಮ್‌ ಆಗಿದ್ದು, ಇದರಲ್ಲಿ ದೊಡ್ಡ ದೊಡ್ಡ ಸರ್ಕಾರಿ ನೌಕರರ ಪಾಲು ಇರುವುದು ಡೆತ್‌ನೋಟ್‌ನಲ್ಲಿ ಕಾಣುತ್ತದೆ. ಅದಕ್ಕೆ ಪೂರಕವಾಗಿ ಸ್ಕ್ಯಾಮ್‌ ಆಗಿದ್ದು ಗೊತ್ತಾದ ಮೇಲೂ ದೂರು ನೀಡದೇ ವಿಷಯ ಗೌಪ್ಯವಾಗಿ ಇಡಲು ತಿಳಿಸಿದ್ದಕ್ಕೆ ಕಾರಣವೇನು ಎಂಬುದು ಪ್ರಶ್ನೆಯಾಗುತ್ತದೆ. 

  • ಪ್ರಸ್ತುತ ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ ಎಂದು ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ಆಗಿದೆ. ಬ್ಯಾಂಕ್‌ ಅಧಿಕಾರಿಗಳಿಂದಲೇ ಅಕ್ರಮವಾಗಿದ್ದಲ್ಲಿ ಮೇಲಾಧಿಕಾರಿಗಳು ಯಾವ ಮುಲಾಜು ನೋಡದೇ ಚಂದ್ರಶೇಖರನ್‌ ವಿಷಯ ತಿಳಿಸದಾಗಲೇ ಸಚಿವರ ಗಮನಕ್ಕೆ ತಂದು ದೂರು ಕೊಡಬಹುದಾದ ಎಲ್ಲಾ ಸಾಧ್ಯತೆಗಳು ಇತ್ತು ಎಂಬುದನ್ನ ಅಧಿಕಾರಿಯ ಡೆತ್‌ ನೋಟ್‌ ತಿಳಿಸುತ್ತದೆ. 

  • ಸಚಿವರು ಖಾತೆ ವರ್ಗಾವಣೆಗೆ ಮೌಖಿಕ ಆದೇಶ ನೀಡಿದ್ರು, ವ್ಯವಸ್ಥಾಪಕ ನಿರ್ದೇಶಕರು 50 ಕೋಟಿ ವರ್ಗಾವಣೆ ಮಾಡಲು ಮತ್ತು  ಚೆಕ್‌ ಹಾಗೂ ಪಾಸ್‌ ಬುಕ್‌ ಪಡೆದಿರುವುದಾಗಿ ತಿಳಿಸಿದ್ರು ಎಂದು ಚಂದ್ರಶೇಖರನ್‌ ಹೇಳಿದ್ದಾರೆ. ಇದಲ್ಲದೆ, ನಿಗಮದ ಅಧ್ಯಕ್ಷರ ಗಮನಕ್ಕೂ ವಿಷಯ ತಲುಪಿತ್ತು. ರಿಜಿನಲ್‌ ಎಂಡಿಯವರಿಗೆ ದೂರು ನೀಡಲಾಗಿತ್ತು ಎಂದು ಚಂದ್ರಶೇಖರನ್‌ ಬರೆದುಕೊಂಡಿದ್ದಾರೆ. ಇದೆಲ್ಲವೂ ಚಂದ್ರಶೇಖರನ್‌ ರವರ ಹೇಳಿಕೆಗಳು. ಹೀಗೆ ನಡೆದಿದ್ದ ಪಕ್ಷದಲ್ಲಿ ಅವರನ್ನು ಕಳ್ಳರಾಗಿಸುವ ಹುನ್ನಾರವೇ ಅವರ ಸಾವಿಗೆ ಕಾರಣವಾಯ್ತಾ ಎಂಬ ಶಂಕೆ ದೊಡ್ಡಮಟ್ಟದಲ್ಲಿ ವ್ಯಕ್ತವಾಗುತ್ತಿದೆ.

  • ಅಂತಿಮವಾಗಿ ಹಣ ಎಲ್ಲಿಗೆ ವರ್ಗಾವಣೆಯಾಗಿದೆ, ಯಾರ ಹೆಸರಿಗೆ ವರ್ಗಾವಣೆಯಾಗಿದೆ ಎಂಬುದನ್ನ ಚಂದ್ರಶೇಖರನ್‌ ಹೇಳಿಲ್ಲ. ಯಾರಿಗೆ ಲಾಭವೋ ಅವರೇ ಅಪರಾಧಿಗಳು ಎಂಬ ಕ್ರೈಂ ಮೋಟೋದ ಉವಾಚದಂತೆ, ಯಾರಿಗೆ ಹಣ ವರ್ಗಾವಣೆಯಾಗಿದೆ ಎಂಬುದು ಸ್ಪಷ್ಟವಾದರೆ ಅಕ್ರಮದ ಅಪರಾಧಿಗಳೆಲ್ಲರೂ ಸಿಕ್ಕಿಬೀಳುತ್ತಾರೆ ಎನ್ನುತ್ತಾರೆ ತನಿಖಾ ತಜ್ಞರು