Agumbe robbery case ನಕ್ಸಲರ ಹೆಸರಲ್ಲಿ ಶಿವಮೊಗ್ಗದಲ್ಲಿಯೇ ನಡೆದಿತ್ತು ಮಹಾ ದರೋಡೆ! ಸೂಪರ್​ ಕಾಪ್​ ಬಾಲ್​ರಾಜ್​

The great robbery took place in Shimoga in the name of Naxals. FLASHBACK story of the 2007 Agumbe robbery case

Agumbe robbery case ನಕ್ಸಲರ ಹೆಸರಲ್ಲಿ ಶಿವಮೊಗ್ಗದಲ್ಲಿಯೇ ನಡೆದಿತ್ತು ಮಹಾ ದರೋಡೆ! ಸೂಪರ್​ ಕಾಪ್​ ಬಾಲ್​ರಾಜ್​
Agumbe robbery case

2003-2007 ಮಲೆನಾಡಿನಲ್ಲಿ ನಕ್ಸಲರ ಕ್ರಾಂತಿಕಾರಿ ಸಂಘರ್ಷ ಹೆಚ್ಚಿದ್ದ ಸಂದರ್ಭ..ನಕ್ಸಲರು ಪೊಲೀಸರೊಂದಿಗೆ ನೇರ ಸಂಘರ್ಷಕ್ಕಿಳಿದಿದ್ರು. ಕಾಡಿನಲ್ಲಿ ಗುಂಡಿನ ಮೊರೆತ ಕೇಳಿ ಬರ್ತಿತ್ತು. ನಕ್ಸಲರು ಪೊಲೀಸ್ ಮಾಹಿತಿದಾರರನ್ನು ಕೊಲ್ಲುವ ಮಟ್ಟಿಗೆ ಉಗ್ರರೂಪ ತಾಳಿದ್ರು ,ಸರ್ಕಾರಕ್ಕೆ ಎಚ್ಚರಿಕೆ ನೀಡಲು ಬಸ್ಸು,. ಜೀಪು,ಚೆಕ್ ಪೋಸ್ಟ್ ಗಳನ್ನೇ ಸುಟ್ಟು ಹಾಕಿದ್ರು.ಇಂತಹ ಸಂದರ್ಭದಲ್ಲಿಯೇ ಆಗುಂಬೆ ಸಮೀಪದ ತಲ್ಲೂರು ಅಂಗಡಿಯಲ್ಲಿ, ನಕ್ಸಲರು ನಾಲ್ಕು ಮನೆಗಳನ್ನು ರಾತ್ರೋರಾತ್ರಿ ದರೋಡೆ ಮಾಡಿದ್ರು. ಸಿದ್ದಾಂತ ಹೇಳೋ ನಕ್ಸಲರು ದರೋಡೆಕೋರರಾದ್ರ? .ಅಂತಾ ಜನರು ಭಯಭೀತರಾದ್ರು.

ರಾಜ್ಯ ಸರ್ಕಾರಕ್ಕೆ ಸವಾಲಾಗಿದ್ದ, ತಲ್ಲೂರು ಅಂಗಡಿ ದರೋಡೆ ಪ್ರಕರಣ, ಭೇದಿಸೋದಕ್ಕೆ ಹೊರಟ ಪೊಲೀಸರಿಗೆ ಕೊನೆಗೆ ಸಿಕ್ಕವರಾರು ಎಂಬುದೇ ಈ ಸ್ಟೋರಿಯ ಕ್ಷಣ ಕ್ಷಣದ ರೋಚಕ ತಿರುವು.  2007 ಜುಲೈ ತಿಂಗಳಲ್ಲಿ ನಕ್ಸಲರು ಕೆ.ಎಸ್.ಆರ್.ಟಿ.ಸಿ ಬಸ್ ಗೆ ಬೆಂಕಿ ಹಚ್ಚಿದ್ರು. ಇದಾದ 20 ದಿನದ ನಂತ್ರ ಅಂದ್ರೆ 2007 ಜುಲೈ 14 ರ ರಾತ್ರಿ ತಲ್ಲೂರು ಅಂಗಡಿ ಬಳಿ ನಕ್ಸಲರಿಂದ ಸರಣಿ ದರೋಡೆ ಪ್ರಕರಣ ನಡೆಯಿತು. 2007 ಜುಲೈ 7 ರಲ್ಲಿ ANF ಕ್ಯಾಂಪ್ ಸಮೀಪವೇ,  ಆ ಗ್ರಾಮದಲ್ಲಿ ದರೋಡೆ.

ಬಸ್​ ಸುಟ್ಟವರು ದರೋಡೆ ಮಾಡಿದ್ರಾ? 

ಬಸ್ ಸುಟ್ಟ ಪ್ರಕರಣ ಇನ್ನು ಹಸಿರಾಗಿರುವಾಗ್ಲೆ..,ಕೇವಲ ಒಂದು ತಿಂಗಳ ಅಂತರದಲ್ಲಿ ಅದೇ ಗ್ರಾಮದಲ್ಲಿ ರಾತ್ರೋರಾತ್ರಿ ನಕ್ಸಲರು ಪ್ರತ್ಯಕ್ಷರಾಗಿದ್ರು. ತಲ್ಲೂರು ಅಂಗಡಿ ಗ್ರಾಮದ ಸಮೀಪದಲ್ಲಿ ಕೆಲವರ ಮನೆಗೆ ನಕ್ಸಲರ ತಂಡ ದಾಳಿ ಮಾಡಿತು.ನಾವು ನಕ್ಸಲರು ಎಂದು ಹೇಳಿ ಬಂದೂಕನ್ನು ತಲೆಗೆ ಗುರಿಮಾಡಿಟ್ಟು..ನೀವು ಗ್ರಾಮದಲ್ಲಿ ಬಡವರನ್ನು ಶೋಷಿಸ್ತಿದಿರಿ. ನಕ್ಸಲ್ ಪ್ಯಾಕೇಜ್ ನ ಕಾಮಗಾರಿ ಕಳಪೆ ಮಾಡಿದಿರಿ..,ಬಡವರ ಹಣದಿಂದ ಬದುಕ್ತಿದಿರಿ..ಇದು ಮುಂದುವರಿದ್ರೆ ನಿಮ್ಮನ್ನು ಕೊಂದೇ ಬಿಡ್ತಿವಿ..ಎಲ್ಲಿಟ್ಟಿದಿರಿ ಆ ಬಡವರ ಹಣ, ಒಡವೆ ಕೊಡಿ ಎಂದು ಗನ್ ಪಾಯಿಂಟ್ ನಲ್ಲಿ ಕೇಳಿದ್ದಾರೆ.

ನಕ್ಸಲರ ತಂಡದಲ್ಲಿ ಒಟ್ಟು ಆರು ಮಂದಿಯಿದ್ದು ಅದ್ರಲ್ಲಿ ಇಬ್ಬರು ಯುವತಿಯರು ಕೂಡ ಇರ್ತಾರೆ..ಎಲ್ಲೂ ಶಸ್ತ್ರಧಾರಿಗಳಾದ್ದ ಕಾರಣಕ್ಕೆ  ಮನೆ ಮಾಲೀಕರು ಹಣ ಒಡವೆಗಳನ್ನು ನಕ್ಸಲರಿಗೆ ನೀಡಿದಾರೆ..ಈ ನಾಲ್ವರು ಆ ಗ್ರಾಮದ ಸುತ್ತಮುತ್ತ ಗ್ರಾಮ ಪಂಚಾಯಿತಿಯ ಗುತ್ತಿಗೆ ಕಾಮಗಾರಿ ಮಾಡ್ಕೊಂಡು,ನಾಲ್ಕು ಕಾಸು ಮಾಡ್ಕೊಂಡಿದ್ರು. ನಕ್ಸಲರು ಇವರನ್ನೇ ಟಾರ್ಗೇಟ್ ಮಾಡಿ ಅಟ್ಯಾಕ್ ಮಾಡಿದ್ರು, ನಂತ್ರ ದರೋಡೆಯನ್ನು ಸಮರ್ಥಿಸಿಕೊಂಡ ನಕ್ಸಲ್ ಕರಪತ್ರವನ್ನು ಮನೆಗಳ ಸುತ್ತಮುತ್ತ ಬಿಸಾಡಿ ಹೋಗ್ತಾರೆ. ಸರಣಿ ದರೋಡೆ ನಡೆಸಿದ ನಕ್ಸಲರ ತಂಡ ಅಂದು ಮೂರು ಲಕ್ಷ ರೂಪಾಯಿ ಅಧಿಕ ಮೌಲ್ಯದ ಚಿನ್ನಾಭರಣ ಮತ್ತು 70 ಸಾವಿರ ನಗದನ್ನು ದೋಚಿ ಪರಾರಿಯಾಗಿತ್ತು.

ರಾತ್ರೋ ರಾತ್ರಿ ದರೋಡೆ ನಡೆದಾಗ ಸುತ್ತಮುತ್ತಲ ಗ್ರಾಮಸ್ಥರೆಲ್ಲರೂ ಭಯಭೀತರಾಗಿದ್ರು,ಆಗುಂಬೆ ಎ.ಎನ್,ಎಫ್ ಕ್ಯಾಂಪ್ ನಿಂದ ಕೇವಲ 10-12 ಕಿಲೋಮೀಟರ್ ದೂರದಲ್ಲಿರುವ ಗ್ರಾಮದಲ್ಲಿ ನಕ್ಸಲರು ಮನೆಗಳಿಗೆ ನುಗ್ಗಿ ದರೋಡೆ ನಡೆಸಿದಾರೆ ಎಂದಾಗ ಅಂದಿನ ಎಸ್ಪಿ ಅರುಣ್ ಚಕ್ರವರ್ತಿ ತುಂಬಾನೇ ಡಿಸ್ಟರ್ಬ್ ಆದ್ರು.ಆಗುಂಬೆ ಪೊಲೀಸ್ ಠಾಣೆ,ನಕ್ಸಲ್ ನಿಗ್ರಹ ಪಡೆ ಕ್ಯಾಂಪ್,ನಕ್ಸಲ್ ನಿಗ್ರಹ ದಳ,ಪ್ರತಿದಿನ ಕೂಂಬಿಂಗ್ ನಡೆಸೋ ಪೊಲೀಸರು ಇರುವ ಜಾಗದಲ್ಲಿಯೇ ನಕ್ಸಲರು ಬಸ್ ಗೆ ಬೆಂಕಿ ಹಚ್ಚಿದ್ರು,.ಅಲ್ಲದೆ ಮನೆಗಳಿಗೆ ನುಗ್ಗಿ ದರೋಡೆ ಕೂಡ ನಡೆಸಿದಾರೆ ಅಂದ ಮೇಲೆ.ಕೃತ್ಯ ನಡೆಸಿರೋರು,ಇಲ್ಲೇ ಆಗುಂಬೆ,ತಲ್ಲೂರು ಅಂಗಡಿ,ಬಿದರಗೋಡು ಮಲ್ಲಂದೂರು ಸುತ್ತಮುತ್ತನೇ ಕ್ಯಾಂಪ್ ಹಾಕಿರಬೇಕೆಂದು ಪೊಲೀಸ್ರು ಮಾಸ್ ಕೂಂಬಿಂಗ್ ಶುರುವಿಟ್ಟುಕೊಂಡ್ರು. 

ಮಲೆನಾಡಿನ ಜನರ ಆತಂಕ ದೂರಮಾಡುವುದು ಸರ್ಕಾರಕ್ಕೆ ಸವಾಲಾಗಿತ್ತು.

ಒಂದೆಡೆ ನಕ್ಸಲ್ ನಿಗ್ರಹ ಪಡೆ ಕೂಂಬಿಂಗ್ ನಡೆಸ್ತಾ ಇದ್ರೆ ಮತ್ತೊಂದು ಕಡೆ ಎಸ್ಪಿ ಅರುಣ್ ಚಕ್ರವರ್ತಿ ತನಿಖೆಗಾಗಿ ಖಡಕ್ ಪೊಲೀಸ್ ಅಧಿಕಾರಿಗಳ ತಂಡವನ್ನು ರಚನೆ ಮಾಡಿದ್ರು,ಡಿಪಾರ್ಟ್ ಮೆಂಟ್ ನಲ್ಲಿ ಇಂದಿಗೂ ಸೂಪರ್ ಕಾಪ್ ಎಂದೇ ಹೆಸರಾಗಿರೋ ಅಂದಿನ ತೀರ್ಥಹಳ್ಳಿ ಇನ್ಸ್ ಪೆಕ್ಟರ್ ಬಾಲ್ ರಾಜ್, ಅಂದಿನ ಶಿರಾಳಕೊಪ್ಪದ ಪಿ.ಎಸ್.ಐ ದೀಪಕ್,ಭದ್ರಾವತಿಯ ಪಿ.ಎಸ್ಸೈ ಮುನಿಸ್ವಾಮಿ,ಆಗುಂಬೆಯ ಪಿಎಸ್ಸೈ ದೇವರಾಜ್ ಒಳಗೊಂಡ ಮೂರು ತಂಡಗಳನ್ನು ಕಾರ್ಯಾಚರಣೆಗೆ ಅಣಿ ಮಾಡ್ತಾರೆ ಇವರಿಗೆ ಸಿಬ್ಬಂದಿಗಳಾದ ಗುಂಡಾ ನಾಯಕ್, ಅಂತೋಣಿ,ಸಬಾಸ್ಟಿನ್,ಶೇಖರ್,ವಿರುಪಾಕ್ಷ ವೆಂಕಟೇಶ್, ಸೇರಿದಂತೆ ಹಲವು  ಕ್ರೈಂ ನಲ್ಲಿ ನುರಿತ ಡೈನಮಿಕ್ ಪೊಲೀಸ್ ಪೇದೆಗಳನ್ನು ತಂಡದಲ್ಲಿ ನೇಮಿಸಿಕೊಳ್ತಾರೆ.

ಹೌದು ದರೋಡೆ ನಡೆದ ಎರಡು ದಿನ ಮುನ್ನ ಅಂದಿನ ತೀರ್ಥಹಳ್ಳಿಯಿಂದ ಪ್ರಕಟವಾಗ್ತಿದ್ದ ನೆಲದಧ್ವನಿ ಎಂಬ ವಾರ ಪತ್ರಿಕೆಯಲ್ಲಿ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿರೋ ಬಗ್ಗೆ ವರದಿ ಪ್ರಕಟವಾಗಿರುತ್ತೇ. ಈ ಸುದ್ದಿಯನ್ನೇ ನೋಡಿ ನಕ್ಸಲರು ಇವರನ್ನು ಟಾರ್ಗೆಟ್ ಮಾಡಿ ದರೋಡೆ ಮಾಡಿದರೆ ಅಂತಾನೇ ಗ್ರಾಮಸ್ಥರೆಲ್ಲಾ ಭಾವಿಸಿದ್ರು,. ಪೊಲೀಸ್ರು ಕೂಂಬಿಂಗ್ ನಡೆಸೋ ಹಳ್ಳಿಯ ಬಳಿಯೇ  ಎರಡು ಕ್ರೈಂ ಗಳು ನಡೆದಾಗ ಅಂದಿನ ಡಿಜಿ ಶಂಕರ್ ಬಿದರಿ ಕೂಡ,ಘಟನಾ ಸ್ಥಳಕ್ಕೆ ಭೇಟಿ ನೀಡಿ, ನಂತ್ರ ಪೊಲೀಸ್ರಿಗೆ ನೀವು ಕೆಲಸ ಮಾಡಿ ನನಗೆ ಮುಖ ತೋರ್ಸಿ,,ನನಗೆ ರಿಸಲ್ಟ್ ಅಷ್ಟೇ ಬೇಕು ಅಂತಾ ಎಸ್ಪಿ ಅರುಣ್ ಚಕ್ರವರ್ತಿಗೆ ಖಡಕ್ ಎಚ್ಚರಿಕೆ ನೀಡಿ ವಾಪಸ್ಸಾಗ್ತರೆ.

ಆಗುಂಬೆಯಲ್ಲಿಯೇ ಮೊಕ್ಕಾಂ ಹೂಡಿದ್ರು ಅರುಣ್​ ಚಕ್ರವರ್ತಿ!

ಅರುಣ್ ಚಕ್ರವರ್ತಿ ಪ್ರಕರಣ ಭೇದಿಸೋವರೆಗೂ ಆಗುಂಬೆಯಲ್ಲಿ ಮೊಕ್ಕಾಂ ಹೂಡಿದ್ದು,ಈ ಪ್ರಕರಣದಲ್ಲಿ ಒಂದು ವಿಶೇಷ. ಸರ್ಕಾರ ಕೂಡ ಪೊಲೀಸರಿಗೆ ಪೂರ್ಣ ಅಧಿಕಾರ ನೀಡಿತ್ತು.ತಲ್ಲೂರುಅಂಗಡಿ ಗ್ರಾಮದ ಸುತ್ತಮುತ್ತ ಸರಣಿ ದರೋಡೆ ನಡೆದ ಮಾರನೆ ದಿನ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿದ ವಿಶೇಷ ತನಿಖಾ ತಂಡಕ್ಕೆ ನಕ್ಸಲ್ ಕರಪತ್ರಗಳು ದೊರೆತಿದ್ದವು.ಈ ಕೃತ್ಯವನ್ನು ನಾವೇ ಮಾಡಿರುವುದಾಗಿ ನಕ್ಸಲರು ಸಮರ್ಥಿಸಿಕೊಂಡಿದ್ದರು.ಹೀಗಾಗಿ ಇದೊಂದು ಪಕ್ಕಾ ನಕ್ಸಲ್ ಅಟೆಂಪ್ಟ್ ಅಂತಾ ಖಾತರಿಪಡಿಸಿಕೊಂಡ ಪೊಲೀಸರು,ಆಗುಂಬೆಯ ಸುತ್ತಮುತ್ತ ಕೂಂಬಿಂಗ್ ಕಾರ್ಯಾಚರಣೆ ತೀವೃಗೊಳಿಸಿದರು.

ಠಾಣೆಯಲ್ಲಿಯೇ ಸಿಕ್ಕಿತ್ತು ಮಹತ್ತರ ಕ್ಲೂ

ಹಗಲು ರಾತ್ರಿಯ ಮಾಸ್ ಕೂಂಬಿಂಗ್ ಸಂದರ್ಭದಲ್ಲಿ ಎ.ಎನ್.ಎಫ್.ಗಾಗಲಿ……, ಎ.ಎನ್.ಎಸ್ ಗಾಗಲಿ..,ತನಿಖಾ ತಂಡಕ್ಕಾಗಲಿ ನಕ್ಸಲರ ಸುಳಿವೇ ಸಿಗೋದಿಲ್ಲ.ದರೋಡೆ ನಡೆಸಿದ ನಕ್ಸಲರ ತಂಡ ಪತ್ತೆ ಹಚ್ಚೊದಕ್ಕೆ ಕಾಡಿನಲ್ಲಿ ಒಂದೆಡೆ ಮಾಸ್ ಕೂಂಬಿಂಗ್ ಮತ್ತೊಂದೆಡೆ ಡೀಪ್ ಇನ್ ವೆಸ್ಟಿಗೇಷನ್ ಗೆ ಕೈ ಹಾಕೊಂಡಿದ್ದ ಇನ್ಸ್ ಪೆಕ್ಟರ್ ಬಾಲರಾಜ್ ಆಗುಂಬೆ ಪೊಲೀಸ್ ಠಾಣೆಯಲ್ಲಿರುವಾಗ್ಲೆ..,ಕಸದ ಬುಟ್ಟಿ ಬಳಿ ಸುರುಳಿ ಸುತ್ತಿದ ಪತ್ರವೊಂದು ಸಿಗುತ್ತೆ…,ಅದನ್ನು ಸಹಜವಾಗಿಯೇ ತೆರೆದು ನೋಡಿದಾಗ ಅವರಿಗೂ ಶಾಕ್ ಕಾದಿತ್ತು.ನಾವು ಮತ್ತಷ್ಟು ವಿದ್ವಂಸಕ ಕೃತ್ಯಗಳನ್ನು ಎಸಗುತ್ತೇವೆ ಎಂಬ ಕೈ ಬರಹ ಅದರಲ್ಲಿತ್ತು…ಠಾಣೆಯೊಳಗೆ ಪತ್ರ ಸಿಗ್ತಾಗ ಪೊಲೀಸರು ಒಬ್ಬರನ್ನು ಒಬ್ರು ನಂಬದ ಸ್ಥಿತಿಗೆ ಬಂದ್ರು. ಅರೇ., ನಮ್ ಸ್ಟೇಷನ್ ಮೇಲೆ ವಾಚ್ ಟವರ್ ಇದೆ.ಝಡ್ ಪಾಯಿಂಟ್ ಇದೆ.ಎಲ್ಲೆಡೆ ಪೊಲೀಸ್ ಹೈ ಅಲರ್ಟ್ ಇದೆ.ಕೂಂಬಿಂಗ್ ನಡೆತಾಯಿದೆ. ಠಾಣೆಯೊಳಗೆ ಇರುವೆನೂ ಬರದಷ್ಟು ಹೈ ಅಲರ್ಟ್ ಇರೋವಾಗ…,ಪೊಲೀಸ್ ಠಾಣೆಯೊಳಗೆ ಪತ್ರ ಸಿಕ್ತು ಅಂದ್ರೆ..,ಏನರ್ಥ.     ನಮ್ಮಲ್ಲೇ ಯಾರಾದ್ರೂ…,,ಪತ್ರ ಬರೆದ್ರಾ..,ಠಾಣೆ ಕಸಗೂಡ್ಸೋನು ಎನಾದ್ರೂ,,ಹಾಕದ್ನಾ..ಇದು ಡ್ರೈವರ್ ಕೆಲಸನಾ..ಪೊಲೀಸ್ರ ಕೆಲಸನಾ ..,ಅಂತಾ ತಲೆಗೆ ಹುಳಬಿಡ್ಕೊಂಡ್ರು..,,ನಕ್ಸಲರು ಠಾಣೆಯೊಳಗೆ ಪತ್ರ ಇಟ್ಟು ಹೋಗೋದಕ್ಕೆ ಸಾಧ್ಯನೇ ಇಲ್ಲ.

ವಿಚಾರಣೆಯ ಹಾದಿ ಬೇರೆಯ ದಿಕ್ಕಿನೆಡೆಗೆ

ನಕ್ಸಲರಲ್ಲದ ಅವರ ಸಿಂಪಥೈಸರ್ ಗಳು ಏನಾದ್ರೂ ಠಾಣೆಗೆ ಬಂದಿದ್ರಾ ಎಂಬ ಅನುಮಾನದ ಮೇಲೆ… ದರೋಡೆ ನಡೆದ ಮನೆ ಬಳಿ ದೊರೆತ ನಕ್ಸಲ್ ಕರಪತ್ರ ..,ಠಾಣೆಯಲ್ಲಿ ದೊರೆತ ಪತ್ರದ ಅಕ್ಷರ ಬರಹಗಳ ಅವಲೋಕನ ಮಾಡಿದ ಬಾಲ್ ರಾಜ್ ಗೆ  ಒಂದು ಸಣ್ಣ ಅನುಮಾನದ ಸುಳಿವಿನ ಹಿಂದೆ ಹೋಗ್ತಾರೆ. ಠಾಣೆಯಲ್ಲಿ ಸಿಕ್ಕ ಕೈಬರಹದ ಆದಾರದ ಮೇಲೆ ಬಾಲ್ ರಾಜ್ ,ಪೊಲೀಸ್ ಠಾಣೆಗೆ ಆಗುಂಬೆ ಠಾಣಾ ವ್ಯಾಪ್ತಿಯವರು ಆ ತಿಂಗಳಲ್ಲಿ ಯಾರೆಲ್ಲಾ ಬಂದಿದ್ರು..ಅಂತಾ ವಿಚಾರಣೆ ಮಾಡ್ತಾರೆ…ಆಗ ತಲ್ಲೂರು ಅಂಗಡಿ ಗ್ರಾಮದ ಶಿವಪ್ಪ ಅಥವಾ ಶಿವಣ್ಣ ( ಹೆಸರು ಕೇವಲ ಕಾಲ್ಪನಿಕ, ನಿಜವಾದುದಲ್ಲ)  ಎಂಬವರ ಮೇಲೆ ಅನುಮಾನ ಮೂಡುತ್ತದೆ.  ಆದ್ರೆ ಅರಣ್ ಚಕ್ರವರ್ತಿ ಅದಕ್ಕೆ ಒಪ್ಪೋದೇ ಇಲ್ಲ.ನಕ್ಸಲರೇ ಈ ಕೃತ್ಯ ಮಾಡಿರುವಾಗ ಜನರನ್ನ ಯಾಕೆ ಹಿಡಿದು ಹಿಂಸಿಸ್ತಿರಿ ಬಿಡ್ರಪ್ಪ.ಕಾಡಲ್ಲಿ ಹೋಗಿ ಕೂಂಬಿಂಗ್ ನೆಟ್ಟಗೆ ಮಾಡಿ ಅಂತಾ ತಿಳಿ ಹೇಳ್ತಾರೆ.

ತನಿಖಾಧಿಕಾರಿಗೆ ಬಂದಿತ್ತು ಬೆದರಿಕೆ

ತಲ್ಲೂರು ಅಂಗಡಿ ರಾಬರಿ ಪ್ರಕರಣ ತನಿಖಾಧಿಕಾರಿ ಬಾಲರಾಜ್ ಗೆ,ಮೊದಲು ಆಗುಂಬೆ ಠಾಣೆಯಲ್ಲಿ ನಕ್ಸಲ್ ಪತ್ರ ಸಿಗುತ್ತೆ.ಇದಾದ ಕೆಲವೇ ದಿನಗಳಲ್ಲಿ ಬಾಲ್ ರಾಜ್ ರನ್ನು  ಕೊಲ್ಲೋದಾಗಿ ನಕ್ಸಲರು ಬೆದರಿಕೆ ಪತ್ರವನ್ನು ಡಿಜಿ ಕಛೇರಿಗೆ ಬರೀತಾರೆ..,ನೀವು ತನಿಖೆಯನ್ನು ಇಲ್ಲಿಗೆ ಕೈಬಿಡಬೇಕು..ಇಲ್ಲವಾದಲ್ಲಿ ತನಿಖಾದಿಕಾರಿ ಇನ್ಸ್ ಪೆಕ್ಟರ್ ಬಾಲರಾಜ್ ರ ಪ್ರಾಣ ತೆಗಿತೀವಿ ಅಂತಾ ನಕ್ಸಲರ ಹೆಸರಿನಲ್ಲಿ ಪತ್ರ ಹೋಗುತ್ತೆ. ಇದರಿಂದ ವಿಚಲಿತರಾದ ಶಂಕರ್ ಬಿದರಿ,,ಇನ್ಸ್ ಪೆಕ್ಟರ್ ಬಾಲರಾಜ್ ಗೆ ಝಡ್ ಪ್ಲಸ್ ಭದ್ರತೆ ನೀಡೋವಂತೆ ಆದೇಶ ಮಾಡ್ತರೆ. ಅಲ್ಲಿಯವರೆಗೆ ತನಿಖೆ ನಡೆಸ್ತಿದ್ದ ಹಿರಿಯ ಪೊಲೀಸ್ ಅಧಿಕಾರಿಗಳೆಲ್ಲಾ ಆಗುಂಬೆ ಐಬಿಯಲ್ಲಿ ವಾಸ್ತವ್ಯ ಹೂಡಿದ್ರು.ಈ ಬೆಳವಣಿಗೆ ನಂತ್ರ ಎಲ್ಲಾ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ವಾಸ್ತವ್ಯ ಹೂಡ್ತಾರೆ. ಆದ್ರೂ..ಈ ಪ್ರಕರಣದಲ್ಲಿ ಕೂಂಬಿಂಗ್ ನಡೆಸಿ ಪೊಲೀಸ್ರು ಬೆವರು ಹರಿಸಿದ್ರು ಬಿಟ್ರೆ..,ನಕ್ಸಲರನ್ನ ಹಿಡಿಯೋದಕ್ಕೆ ಸಾದ್ಯವಾಗ್ಲೆ ಇಲ್ಲ 

ಎಂಒಬಿ ಗಿರಾಕಿಯ ಬೆನ್ನಿಗೆ ಬಿದ್ದ ಪೊಲೀಸರು

ಇತ್ತ ಬಾಲ್ ರಾಜ್  ದೀಪಕ್,ದೇವರಾಜ್ ,ಮುನಿಸ್ವಾಮಿ ತಂಡ..,ನಕ್ಸಲ್ ಬರಹದ ಪತ್ರದ ಹಿಂದೆ  ಬೆನ್ನತ್ತಿ ಹೋದಾಗ ತಲ್ಲೂರು ಅಂಗಡಿಯಲ್ಲಿ ಯಾರಾದ್ರು ಎಂಓಬಿಗಳಿದ್ರೆ ಅವರನ್ನ ತನಿಖೆ ಮಾಡೋಣ ಅಂತಾ ಮುಂದಾಗ್ತಾರೆ.ಅದ್ರಲ್ಲಿ ತಲ್ಲೂರು ಅಂಗಡಿಯ ಶಿವಣ್ಣನ ಅನ್ನೋನು ಸಿಗುತ್ತಾನೆ. ಅಲ್ಲದೆ ಆತ ದರೋಡೆ ನಡೆದ ದಿನ ಬೆಳಿಗ್ಗೆ ಪೊಲೀಸ್ರೊಂದಿಗೆ ಇದ್ದ ಎಂಬುದು ಗೊತ್ತಾಗುತ್ತೆ.ನಂತ್ರ ಠಾಣೆಗೂ ಕೂಡ ಬಂದಿದ್ದ ಎಂಬುದು ಸಹ ತಿಳಿಯುತ್ತೆ. ಇಷ್ಟೆ, ಅನುಮಾನದ ಹುಳ ತಲೆಗೆ ಹಾಕ್ಕೊಂಡು ಪೊಲೀಸರು.  ಅವನ ಮೇಲೆ ಹದ್ದಿನ ಕಣ್ಣಿಟ್ಟಿರ್ತಾರೆ..ಆದ್ರೆ ಗ್ರಾಮದಲ್ಲಿ ಆತ ಸರಿಯಾಗಿ ಇರ್ತಿರ್ಲಿಲ್ಲ…ಇದನ್ನು ನೋಡಿ ಅನುಮಾನಗೊಂಡ ಬಾಲರಾಜ್..,ಅವನ ಮೊಬೈಲನ್ನು ಸಿಡಿಆರ್ ಹಾಕಿರ್ತಾರೆ.

ಆತನ ಚಡ್ಡಿಯಲ್ಲಿತ್ತು ಅಸಲಿ ಮಾಲು

ಒಂದು ದಿನ ಶಿವಣ್ಣ,ತೀರ್ಥಹಳ್ಳಿ-ಹೊಸನಗರ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣ ಬೆಳೆಸಿರ್ತಾನೆ. ಪೊಲೀಸ್ರಿಗೆ ಅನುಮಾನ ಬರುತ್ತೆ. ತೀರ್ಥಹಳ್ಳಿಯಿಂದಲೇ ನೇರವಾಗಿ ಬೆಂಗಳೂರಿಗೆ ಹೋಗಬಹುದಿತ್ತಲ್ವ…ಅನ್ನೋ  ಪೊಲೀಸ್ರ ಅನುಮಾನ ದಟ್ಟವಾಗುತ್ತೆ..ಅವನ ಹಿಂದೆ ಒಂದು ಪೊಲೀಸ್ ಟೀಮ್ ಕೂಡ ಮುಪ್ತಿಯಲ್ಲಿರುತ್ತೆ. 2007,ಆಗಸ್ಟ್ ತಿಂಗಳಲ್ಲಿ ಶಿವಣ್ಣ ಉಡುಪಿಯಿಂದ ಆಗುಂಬೆಗೆ ಬಸ್ ಹತ್ತಿರೋ ಮಾಹಿತಿ ಇನ್ಸ್ ಪೆಕ್ಟರ್ ಬಾಲರಾಜ್ ಗೆ ಸಿಗುತ್ತೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್ ಸಿಬ್ಬಂದಿಗಳು ಆಗುಂಬೆ ಚೆಕ್ ಪೋಸ್ಟ್ ಬಳಿಯೇ ಶಿವಣ್ಣ ನನ್ನು ವಶಕ್ಕೆ ಪಡೆದು,ಸಾಹೆಬ್ರು ಕರೆತಿದಾರೆ ಬಾರೋ ಅಂತಾ ಹೇಳ್ತಾರೆ..ಶಿವಣ್ಣ ಕೂಡ ಪೊಲೀಸ್ರೊಂದಿಗೆ ಒಡನಾಟವಿದ್ದ ಕಾರಣ ಸಹಜವಾಗಿಯೇ ಠಾಣೆಗೆ ಬಂದ. ಪ್ಯಾಂಟು ಶರ್ಟ್ ಬಿಚ್ಚು ಅಂತಾ ಪೊಲೀಸ್ರು ಹೇಳಿದಾಗ..,ಮೊದಲು ವಿರೋಧಿಸಿದ್ರೂ ನಂತ್ರ ಪೊಲೀಸ್ ಭಾಷೆಗೆ ಆತ ಎರಡನ್ನು ಕಳಚಿಬಿಡ್ತಾನೆ.

ಇದಾದ ನಂತ್ರ ಪೊಲೀಸ್ರು ಅಂಡರ್ ವೇರ್ ಬಿಚ್ಚೋ ಮಗನೇ ಅಂತಾರೆ,  ಅದಕ್ಕೆ ಶಿವರಾಮ ವಿರೋಧ ವ್ಯಕ್ತಪಡಿಸಿದಾಗ..ಪೊಲೀಸ್ರೆ ಚಡ್ಡಿ ಬಿಚ್ಚುತ್ತಾರೆ,  ಆಗ ಅಂಡರ್ ವೇರ್ ಒಳಗಿಂದ ಒಂದು ಬಂಗಾರದ ನೆಕ್ಲೆಸ್ ಪದಕ ಕೆಳಗೆ ಬೀಳುತ್ತೆ,  ಪದಕದ ಮೇಲಿದ್ದ ಹರಳುಗಳನ್ನೆಲ್ಲಾ ತೆಗೆಯಲಾಗಿರುತ್ತೆ. ಆಗ ಪೊಲೀಸ್ರು,ಎಲ್ಲಿ ಸಿಕ್ತೋ ಇದು ಅಂತಾ ಶಿವಣ್ಣ ಗೆ ಕೇಳಿದಾಗ ಆತ ನನ್ನ ಹೆಂಡ್ತಿ ತಾಳಿ ಸಂಬಂಧಿಕರ ತಾಳಿ ಅಂತೆಲ್ಲಾ ತಬ್ಬಿಬ್ಬಾಗಿ ಹೇಳೋಕೆ ಶುರು ಮಾಡ್ತಾನೆ. ಆಗ ಅನುಮಾನದ ಮೇಲೆ ಪೊಲೀಸರು ಆತನನ್ನ ವಶಕ್ಕೆ ಪಡೆಯುತ್ತಾರೆ. ಈ ಮಧ್ಯೆ ಬಾಲರಾಜ್ ಈ ವಿಚಾರವನ್ನು ಇಲಾಖೆಯಲ್ಲಿ ಬೇರೆ ಅದಿಕಾರಿ ಸಿಬ್ಬಂದಿಗಳಿಗೆ ಮಾಹಿತಿ ಸೋರಿಕೆಯಾಗದಂತೆ ಪದಕವನ್ನು ಮುಂದಿಟ್ಟುಕೊಂಡು ತನಿಖೆಗೆ ಅಣಿಯಾಗ್ತರೆ..

ಸೀಕ್ರೆಟ್ ಆಗಿ ನಡೆಯುತ್ತೆ ಆ ತನಿಖೆ

ಶಿವಣ್ಣ ನಿಂದ ಪಡೆದ ನಕ್ಲೆಸ್ ಪದಕದ ಹರಳುಗಳು ತೆಗೆದಿದ್ದರೂ..ಪದಕ ಮಾತ್ರ ಒರಿಜನಲ್ ಆಗೇ ಇತ್ತು.ಇದನ್ನು ತೆಗೆದುಕೊಂಡು ದರೋಡೆ ನಡೆದ ಮನೆಗಳಿಗೆ ಭೇಟಿ ನೀಡಿದ ಬಾಲರಾಜ್ ಆ ಮನೆಗಳಲ್ಲಿನ ಮದುವೆ ಆಲ್ಬಂಗಳನ್ನು ನೋಡ್ತಾರೆ. ಈ ಸಂದರ್ಭದಲ್ಲಿ ಬಾಲರಾಜ್ ದರೋಡೆಯಾದ ಮನೆಯವರಿಂದಲೂ ವಿಷಯ ಮುಚ್ಚಿಟ್ಟಿದ್ರು. ದರೋಡೆಯಾದ ನಾಗೇಶ್ ರವರ ಮನೆಯಲ್ಲಿ ದೊರೆತ ಮದುವೆ ಆಲ್ಬಂ ನ ಮದುವೆ ಪೋಟೋದಲ್ಲಿ ಬಾಲರಾಜ್ ಬಳಿಯಿದ್ದ  ನೆಕ್ಲೆಸ್ ಪದಕ ಪತ್ತೆಯಾಗುತ್ತೆ. ಎರಡನ್ನು ಹೋಲಿಕೆ ಮಾಡಿದಾಗ,,ಹರಳನ್ನಷ್ಟೆ ತೆಗೆಯಲಾಗಿರತ್ತೆ, ಪದಕ ಮತ್ತು ಆಲ್ಬನಲ್ಲಿರೋ ಪೋಟೋ ಮ್ಯಾಚ್ ಆಗಿದ್ದು ನೋಡಿದ ಪೊಲೀಸ್ರಿಗೆ  ಈ ಪ್ರಕರಣದಲ್ಲಿ ಮತ್ತಷ್ಟು ಲೀಡ್ ಸಿಕ್ತು.

ಬೆಂಗಳೂರು ಟೀಂ, ಲೋಕಲ್ ಪ್ಲಾನ್

ಪ್ರಕರಣದಲ್ಲಿ ಶಿವಣ್ಣ ಫಿಟ್ ಆಗ್ತಾನೆ..ಈ ಪ್ರಕರಣದಲ್ಲಿ ಹೇಳಲೇ ಬೇಕಾದ ಸತ್ಯವೊಂದಿದೆ.ಆಗುಂಬೆಯ ಬಳಿ ಬಸ್ ಸುಟ್ಟಿದ್ದು ನಕ್ಸಲರು ಬಿಟ್ರೆ..,ತಲ್ಲೂರು ಅಂಗಡಿ ದರೋಡೆ ನಡೆಸಿದ್ದು..ಮಾತ್ರ ನಕ್ಸಲರಲ್ಲ. ಹಾಗಾದ್ರೆ ಅವರ್ಯಾರು ಎಂದು ಬೆನ್ನತ್ತಿದ ಪೊಲೀಸ್ರಿಗೆ  ಶಿವಣ್ಣ ಸಿಕ್ಕಿಬಿದ್ದಿದ್ದ. ಅವನಿಂದ ಹೇಗೆ ಈ ದರೋಡೆ ಕಾರ್ಯಾಚರಣೆ ರೂಪುಗೊಳ್ತು ಅನ್ನೋದಿದೆಯಲ್ಲ ಅದೇ ಇಂಟರಿಸ್ಟಿಂಗ್, ಹೌದು ಪೊಲೀಸ್ರಿಗೆ ಸಿಕ್ಕ ಶಿವಣ್ಣ ಬೆಂಗಳೂರಿಂದ ಪಿಕ್ನಿಕ್​ಗೆ ಅಂತಾ  ಆಗುಂಬೆಗೆ  ಬಂದಿದ್ದ ಒಂದಿಷ್ಟು ಜನರನ್ನ ಪರಿಚಯ ಮಾಡಿಕೊಂಡಿದ್ದ. 

ಅವರ ಜೊತೆ ಬೆಂಗಳೂರಿಗೆ ಆಗಾಗ ಹೋಗುತ್ತಿದ್ದ, ಈತನ ಅವರಿಗೆ ನಕ್ಸಲ್ ಹೆಸರಲ್ಲಿ ರಾಬರಿ ಸ್ಕೆಚ್​ ಹೇಳಿದ್ದ.  ತಲ್ಲೂರು ಅಂಗಡಿಯಲ್ಲಿ ನಕ್ಸಲರು ಬಸ್ ಸುಟ್ಟ ನಂತ್ರ ಇದೇ ಶಿವಣ್ಣ ಬೆಂಗಳೂರಿನಲ್ಲಿರುವ ಸ್ನೇಹಿತರ ಜೊತೆ ಸೇರಿ, ಟಾಯ್ ಗನ್​ ಹಾಗೂ  ನಕ್ಸಲ್ ಕೈ ಬರಹದ ಕರಪತ್ರ ಎಲ್ಲವನ್ನು ಸಿದ್ದಪಡಿಸಿಕೊಳ್ತಾರೆ. ನಕ್ಸಲರಂತೆ ಹೇಗೆ ಮಾತನಾಡಬೇಕು ಎಂಬುದನ್ನು ಶಿವಣ್ಣನೇ ತಂಡಕ್ಕೆ ತರಬೇತಿ ನೀಡ್ತಾನೆ. ಅಂದುಕೊಂಡಂತೆ ತಂಡ ಬಾಡಿಗೆ ಕಾರಿನಲ್ಲಿ ಬೆಂಗಳೂರು ತಂಡ ಸೀದಾ ಶಿವಮೊಗ್ಗಕ್ಕೆ ಬರುತ್ತೆ. ಜುಲೈ 14 2007 ರಂದು  ಆಗಂಬೆ ಶ್ರೀಂಗೇರಿ ಮಾರ್ಗದಲ್ಲಿ ಕಾರ್ ಪಾರ್ಕ್ ಮಾಡಿ,  ಯಶಸ್ವಿಯಾಗಿ ದರೋಡೆಯನ್ನು ಮಾಡುತ್ತಾರೆ.  ಬಳಿಕ ಅದೇ ದಿನ ರಾತ್ರಿ ಬೆಂಗಳೂರಿಗೆ ಆಭರಣ ಸಮೇತ ತಂಡವನ್ನು ಕಳುಹಿಸಿಕೊಟ್ಟಿರುತ್ತಾನೆ.

ಸ್ಕೆಚ್​ನ ನಡುವೆ ಬೇದಿ ಮಾತ್ರೆ!

ಮಾರನೇ ದಿನ ಘಟನೆ ಬೆಳಕಿಗೆ ಬಂದಾಗ ಇದೇ ಶಿವಣ್ಣ ಪೊಲೀಸರೊಂದಿಗೆ ಹುಡುಕಾಡುವ ನಾಟಕವಾಡಿರ್ತಾನೆ ಅಷ್ಟೆ.ದರೋಡೆ ನಡೆದ ಮಾರನೇ ದಿನ ಬೆಳಿಗ್ಗೆ ಬೆಂಗಳೂರಿನ ಸ್ನೇಹಿತರೆಲ್ಲಾ ಮನೆ ಸೇರಿಯಾಗಿತ್ತು. ಇತ್ತ ಶಿವಣ್ಣ ಬೆಂಗಳೂರಿಗೆ ಭೇಟಿ ನೀಡಿ, ನಕ್ಲೆಸ್ ಚಿನ್ನಾಭರಣವನ್ನು ಕರಗಿಸಿ ಹಂಚಿಕೊಳ್ಳುವ ಬಗ್ಗೆ ಪ್ರಸ್ಥಾಪಿಸಿದ್ದ.ಚಿನ್ನಾಭರಣ ಬೆಂಗಳೂರಿನಲ್ಲಿ ಕರಗಿಸಿದರೆ ಪೊಲೀಸರಿಗೆ ಮಾಹಿತಿ ಹೋಗುತ್ತೆ. ಉಡುಪಿಯಲ್ಲಿ ಸ್ನೇಹಿತರಿದ್ದಾರೆ. ಅವರಿಗೆ ಕೊಡೋಣ ಅಂತಾ ಹೇಳಿ.. ಉಡುಪಿಗೆ ಹೋಗುತ್ತಾರೆ. ಈ ಮಧ್ಯೆ ತನ್ನ ತಂಡಕ್ಕೆ ಮೋಸ ಮಾಡಿದ್ದ ಶಿವಣ್ಣ, ತನ್ನೊಂದಿಗೆ ಬಂದಿದ್ದ ಇಬ್ಬರಿಗೆ ಬೇದಿ ಮಾತ್ರೆ ಹಾಕಿ, ಅವರಿಬ್ಬರು ರೂಂನಿಂದ ಹೊರಕ್ಕೆ ಬರದಂತೆ ಮಾಡಿದ್ದ. ಬಳಿಕ ಒಂದಿಷ್ಟು ಚಿನ್ನ ಕರಗಿಸಿ, ಅದರಲ್ಲಿ ಬಹುಪಾಲು ಆತನಿಟ್ಟುಕೊಂಡು ಉಳಿದಿದ್ದನ್ನ ಅವರಿಗೆ ಕೊಟ್ಟು ಬೆಂಗಳೂರಿಗೆ ಕಳಿಸಿದ್ದ, ಅದಲ್ಲದೆ ಒಂದು  ನಕ್ಲೆಸ್ ಪದಕವನ್ನು ಅಂಡರ್ ವೇರ್ ನಲ್ಲಿ ಇಟ್ಕೊಂಡು ಆಗುಂಬೆ ಬಸ್ ಹತ್ತಿದ್ದ. ಆದರೆ ಗೃಹಸಚಾರ, ಪೊಲೀಸ್ರ ಅತಿಥಿಯಾದ ಅಷ್ಟೆ. ಈ ಪ್ರಕರಣದಲ್ಲಿ ಇಬ್ಬರು ಯುವತಿಯರು ಸೇರಿ ಪೊಲೀಸರು ಆರು ಮಂದಿಯನ್ನು ಅರೆಸ್ಟ್ ಮಾಡುತ್ತಾರೆ. ಪ್ರಕರಣ ಕೋರ್ಟ್ ಮೆಟ್ಟಿಲೇರಿ ಶಿವಮೊಗ್ಗ ನ್ಯಾಯಾಲಯ ಹತ್ತು ವರ್ಷಗಳ ಶಿಕ್ಷೆಯನ್ನು ಪ್ರಕಟಿಸಿತ್ತು.