ಶಿವಮೊಗ್ಗದಲ್ಲೀಗ ಮಳೆಯದ್ದೆ ಮಾತು | ವರ್ಷಧಾರೆಯ ಆರ್ಭಟಕ್ಕೆ ಎನೆಲ್ಲಾ ಆಯ್ತು ಗೊತ್ತಾ? | 24 ಗಂಟೆಯ ವರದಿ
Do you know everything happened due to rain in Shimoga? | 24 hour report
SHIVAMOGGA | MALENADUTODAY NEWS | May 20, 2024 ಮಲೆನಾಡು ಟುಡೆ
ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಮಳೆಯ ಆರ್ಭಟ ಭಾನುವಾರವೂ ಜೋರಾಗಿತ್ತು. ಕಳೆದ 24 ಗಂಟೆಯಲ್ಲಿ ಶಿವಮೊಗ್ಗ ತಾಲ್ಲೂಕಿನ ಕೊಮ್ಮನಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು 9.1 ಸೆಂ.ಮೀ ಮಳೆ ದಾಖಲಾಗಿದೆ.ಮಲೆನಾಡಿನಲ್ಲಿ ಮಳೆಯ ವಾತಾವರಣ ಮೇ 24ರವರೆಗೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದೆ
ಭಾರತೀಯ ಹವಾಮಾನ ಇಲಾಖೆ ಬೆಂಗಳೂರು IMD BANGALORE ಬಿಡುಗಡೆ ಮಾಡಿರುವ ಹವಾಮಾನ ಮುನ್ಸೂಚನೆಯಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. 20 ಮೇ 2024 ರಂದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಆಯ್ದ ಸ್ಥಳಗಳಲ್ಲಿ ಭಾರೀಯಿಂದ, ವಿಪರೀತ ಮಳೆಯಾಗುವ ಸಾಧ್ಯತೆ ಇದೆ. ಕೊಡಗು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಜಿಲ್ಲೆಗಳ ಆಯ್ದ ಸ್ಥಳಗಳಲ್ಲಿ ಭಾರೀ ಗಾಳಿಯೊಂದಿಗೆ (40-50 kmph) ಭಾರೀ ಮಳೆ / ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ನಿನ್ನೆ ಭದ್ರಾವತಿ ತಾಲ್ಲೂಕಿನ ಅರಕೆರೆಯಲ್ಲಿ 6.85 ಸೆಂ.ಮೀ, ಅರೆಬಿಳಚಿ 6.45 ಸೆಂ.ಮೀ., ಶಿವಮೊಗ್ಗ ನಗರದಲ್ಲಿ 4.15 ಸೆಂ.ಮೀ., ಶಿವಮೊಗ್ಗ ತಾಲ್ಲೂಕಿನ ಕುಂಚೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 5.8 ಸೆಂ.ಮೀ, ಕೋಟೆ ಗಂಗೂರು 4.4 ಸೆಂ.ಮೀ ಹಾಗೂ ಅಬ್ಬಲಗೆರೆಯಲ್ಲಿ 2.8 ಸೆಂ.ಮೀ ಮಳೆ ದಾಖಲಾಗಿದೆ. ಸೊರಬ ತಾಲ್ಲೂಕಿನ ಬೆನ್ನೂರಿನಲ್ಲಿ 5.55 ಸೆಂ.ಮೀ, ಹೊಸನಗರ 3.76, ಸಾಗರ 1.55, ತೀರ್ಥಹಳ್ಳಿ ತಾಲ್ಲೂಕಿನ ಅಗ್ರಹಾರದಲ್ಲಿ 0.75 ಸೆಂ.ಮೀ ಮಳೆಯಾಗಿದೆ.
ನಿನ್ನೆ ಮಧ್ಯಾಹ್ನದ ಹೊತ್ತಿಗೆ ರಣಬಿಸಿಲ ಧಗೆ ತೋರಿಸಿದ್ದ ವಾತಾವರಣ ಮಧ್ಯಾಹ್ನದ ನಂತರ ಥಂಡಿ ಹಿಡಿಸಿತ್ತು. ಮಳೆಗಾಲದ ಬಿರುಮಳೆಯಂತೆ ಸುರಿದ ವರ್ಷಧಾರೆ ಶಿವಮೊಗ್ಗ ಸ್ಮಾರ್ಟ್ ಸಿಟಿಯ ಚರಂಡಿಗಳನ್ನ ಹಳ್ಳಗಳನ್ನಾಗಿಸಿ, ರಸ್ತೆಗಳ ಮೇಲೆಲ್ಲಾ ಅಡಿ ನೀರು ಹರಿಸಿತ್ತು. ಮಳೆಯ ಆರ್ಭಟಕ್ಕೆ ಹೊಸದಿಗಂತ ಪ್ರಿಂಟರ್ಸ್ ಸಂಸ್ಥೆಯ ದೊಡ್ಡ ಕಾಂಪೌಂಡ್ ಕುಸಿದುಬಿದ್ದರೆ, ಅತ್ತ ಕಾಶೀಪುರದ ಸಿದ್ದರಾಮ ಬಡಾವಣೆಯಲ್ಲಿ ರಾಜಕಾಲುವೆ ಉಕ್ಕಿ ಹರಿದಿದೆ. ಇನ್ನೂ ರೈಲ್ವೆ ಮೇಲ್ಸೇತುವೆ ಬಳಿ ನೀರು ಹರಿಯಲು ಸಾಧ್ಯವಾಗದೇ ಸುತ್ತಮುತ್ತಲಿನ ಬಡಾವಣೆಗಳಿಗೆ ನೀರು ನುಗ್ಗಿತ್ತು. ಮದುವೆ ಛತ್ರದಲ್ಲಿಯು ನೀರು ನುಗ್ಗಿ ಊಟಕ್ಕೆ ಬಂದ ನೆಂಟರಿಗೆ ಅದ್ವಾನ ಉಂಟಾಗಿತ್ತು.
ಮಳೆ ನೀರು ಸರಾಗವಾಗಿ ಚರಂಡಿಗೆ ಹರಿದು ಹೋಗಲಾಗದೆ ಸ್ಮಾರ್ಟ್‌ಸಿಟಿಯ ಬಂಡವಾಳವನ್ನು ಮತ್ತೊಮ್ಮೆ ಮಳೆಯು ಅನಾವರಣಗೊಳಿಸಿತ್ತು. ಸೊಮಿನಕೊಪ್ಪ ರೈಲ್ವೆ ಮೇಲ್ಸೇತುವೆ ಬಳಿ ರಸ್ತೆ ಮೇಲೆ ನೀರು ನಿಂತಿತ್ತು. ಇದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ದುರ್ಗಿಗುಡಿಯಲ್ಲಿಯು ಇದೇ ಸ್ಥಿತಿ ಇತ್ತು.
ಮಳೆಯಿಂದಾಗಿ ಶಿವಮೊಗ್ಗ ಡ್ಯಾಂಗಳಾದ ಭದ್ರಾ, ತುಂಗಾನ, ಲಿಂಗನಮಕ್ಕಿಗೂ ನೀರಿನ ಹರಿವು ಹೆಚ್ಚಳಗೊಂಡಿದೆ. ಶಿವಮೊಗ್ಗ ಸಾಗರ, ಹೊಸನಗರ, ತೀರ್ಥಹಳ್ಳಿ ಸೇರಿದಂತೆ ವಿವಿಧೆಡೆ ಮಳೆ ಸುರಿದಿದ್ದು, ಕೆಲವು ಪ್ರದೇಶಗಳಲ್ಲಿ ಮಳೆ ಇನ್ನೂ ಕೆಲವೂ ಪ್ರದೇಶಗಳಲ್ಲಿ ಮಳೆಯಾಗದೇ ಇರುವುದು ಜನರಲ್ಲಿ ಅಚ್ಚರಿ ಮೂಡಿಸುತ್ತಿದೆ.