ಚುನಾವಣಾ ಅಖಾಡಕ್ಕೆ ಕೆಇ ಕಾಂತೇಶ್ & ಶಾಲಿನಿ? | ಜೂನ್ 10 ರಂದು ಕೆಎಸ್ ಈಶ್ವರಪ್ಪ ಮುಂದಿನ ನಿರ್ಧಾರ ಹೊರಬೀಳುತ್ತಾ ? JP BIG EXCLUSIVE
What is next steps for former minister and BJP rebel candidate KS Eshwarappa following the Shivamogga Lok Sabha election. There is speculation that he may announce the re-establishment of the Rayanna Brigade on his birthday, June 10th
SHIVAMOGGA | MALENADUTODAY NEWS | Jun 8, 2024 ಮಲೆನಾಡು ಟುಡೆʼ
ಶಿವಮೊಗ್ಗ ಲೋಕಸಭಾ ಚುನಾವಣೆಯ ಬಳಿಕ ಮಾಜಿ ಸಚಿವ, ಬಿಜೆಪಿಯ ಬಂಡಾಯ ಅಭ್ಯರ್ಥಿ ಕೆಎಸ್ ಈಶ್ವರಪ್ಪನವರ ಮುಂದಿನ ನಡೆ ಏನು ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಸಂಬಂಧ ಇದೇ ಜೂನ್ 10 ರಂದು ಅವರ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.
ಜೂನ್ 10 ಕೆಎಸ್‌ಇ ಹುಟ್ಟುಹಬ್ಬ
ಇತ್ತೀಚೆಗೆ ನಡೆದ ಸುದ್ದಿಗೋಷ್ಟಿಯಲ್ಲಿ ಕೆಎಸ್ ಈಶ್ವರಪ್ಪ ರಾಯಣ್ಣ ಬ್ರಿಗೇಡ್ ಮತ್ತೆ ಸ್ಥಾಪನೆ ಮಾಡಲು ಒತ್ತಡ ಇದೆ ಎಂದಿದ್ದರು.ಅವರ ಈ ಮಾತು ರಾಷ್ಟ್ರ ಭಕ್ತ ಬಳಗದಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಚುನಾವಣೆಯ ಸೋಲನ್ನ ಮರೆಸಿರುವ ಈಶ್ವರಪ್ಪನವರ ಮುಂದಿನ ಹೋರಾಟಕ್ಕೆ ಅಣಿಯಾಗುವಂತೆ ಮಾಡಿದೆ. ಕೆಎಸ್‌ಇ ಬೆಂಬಲಿಗರಲ್ಲಿ ಈಶ್ವರಪ್ಪನವರು ಬ್ರಿಗೇಡ್ ಸ್ಥಾಪನೆ ಸಂಬಂಧ ಅವರ ಹುಟ್ಟುಹಬ್ಬದ ದಿನದಂದು ಘೋಷಣೆ ಮಾಡುವ ನಿರೀಕ್ಷೆಯಿದೆ. ಅಂದು ಕೆಎಸ್‌ಇ ಕುಟುಂಬದ ಮುಂದಿನ ರಾಜಕೀಯ ನಿರ್ಣಯಗಳು ಸಹ ನಿಕ್ಕಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಮತ್ತೊಂದು ಚುನಾವಣೆಗೆ ತಯಾರಿ
ಈ ಬಗ್ಗೆ ಮಲೆನಾಡು ಟುಡೆ ಚುನಾವಣೆ ಫಲಿತಾಂಶ ಹೊರಬೀಳುವುದಕ್ಕೂ ಮೊದಲೇ ವರದಿ ಮಾಡಿತ್ತು. ಕೆಎಸ್‌ಇ ಫಲಿತಾಂಶವನ್ನು ಬದಿಗಿಟ್ಟು ಮತ್ತೊಂದು ಚುನಾವಣೆಗೆ ಸಿದ್ಧರಾಗುತ್ತಿದ್ದಾರೆ. ಮಹಾನಗರ ಪಾಲಿಕೆ ಚುನಾವಣೆ ಕಡೆಗೆ ಈಶ್ವರಪ್ಪನವರು ಗುರಿಯಿಟ್ಟಿದ್ದು ತಮ್ಮನ್ನ ಬೆಂಬಲಿಸಿದವರಿಗೆ ಅಗತ್ಯ ವೇದಿಕೆಯನ್ನು ಒದಗಿಸುವಲ್ಲಿ ಅವರು ಮುಂದಾಗಿದ್ದಾರೆ ಎಂಬುದು ಟುಡೆ ವರದಿಯ ಸಾರಾಂಶವಾಗಿತ್ತು. ನಾಡಿದ್ದು ನಡೆಯಲಿರುವ ಜೂನ್ 10 ರ ಹುಟ್ಟುಹಬ್ಬದ ವೇಳೆ ಈ ಬಗ್ಗೆಯು ಕೆಎಸ್ ಈಶ್ವರಪ್ಪನವರು ಮಾತನಾಡುವ ಸಾಧ್ಯತೆ ಇದೆ.
ಅದ್ದೂರಿ ಹುಟ್ಟುಹಬ್ಬಕ್ಕೆ ಸಿದ್ದತೆ
ಇನ್ನೊಂದೆಡೆ ಈ ಸಲ ಕೆಎಸ್‌ಇ ಹುಟ್ಟುಹಬ್ಬದ ವಿಶೇಷ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ರಾಷ್ಟ್ರ ಭಕ್ತ ಬಳಗ ಕಾರ್ಯಕರ್ತರು ಈಶ್ವರಪ್ಪನವರ ನಿವಾಸದಲ್ಲಿಯೇ ಕೆಎಸ್‌ಇಯವರ ಹುಟ್ಟುಹಬ್ಬ ಆಚರಣೆಗೆ ಈಗಾಗಲೇ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅಂದು ಕಾರ್ಯಕರ್ತ ಬಳಗದ ಶಕ್ತಿಯು ಪ್ರದರ್ಶನಗೊಳ್ಳುವ ನಿರೀಕ್ಷೆಯಿದ್ದು, ಕೆಎಸ್‌ಇಗೆ ವಿಶ್ವಾಸ ತುಂಬುವ ಪ್ರಯತ್ನಕ್ಕೆ ಸಿದ್ದತೆಯಲ್ಲಿದ್ದಾರೆ ಅವರ ಬೆಂಬಲಿಗರು.
ಮರಳಿಗೆ ಬಿಜೆಪಿಗೆ?
ಇವೆಲ್ಲದರ ಮಧ್ಯೆ ಮತ್ತೆ ಬಿಜೆಪಿಗೆ ಕೆಎಸ್ ಈಶ್ವರಪ್ಪ ಹೋಗುತ್ತಾರೆ. ಹೋಗುವುದಕ್ಕೆ ಬಿಡುವುದಕ್ಕೆ ನನ್ನನ್ನು ಕೇಳುವರಾರು ಎಂದಿದ್ದ ಕೆಎಸ್‌ಇ ನಾನಿಗಲೂ ಬಿಜೆಪಿ , ಹಿಂದೆಯು ಬಿಜೆಪಿ, ಮುಂದೆಯು ಬಿಜೆಪಿ ಎಂದಿದ್ದರು. ಎಲೆಕ್ಷನ್ ಟೈಂನಲ್ಲಿ ಅವರು ಆಡಿದ ಮಾತಿನರ್ಥ ಬಿಜೆಪಿಯನ್ನ ಅವರು ಬಿಟ್ಟಿಲ್ಲ. ಆದಾಗ್ಯು ಅವರ ಉದ್ದೇಶಕ್ಕೆ ಚುನಾವಣೆಯಲ್ಲಿ ಸೋಲಾಗಿದೆ. ಅವರ ಮಾತುಗಳು ಮನಸ್ಸನ್ನ ನೋಯಿಸಿದೆ. ಇದೆಲ್ಲವೂ ತಿಳಿಯಾಗಿ ಅವರನ್ನ ಬಿಜೆಪಿ ಮತ್ತೆ ಕರೆದುಕೊಳ್ಳುತ್ತಾ? ಈ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲವಾದರೂ ಪಕ್ಷ ಬಿಟ್ಟ ನಾಯಕರನ್ನೆಲ್ಲಾ ಮತ್ತೆ ಸೆಳೆದುಕೊಂಡು ಸಂಘಟನೆ ಗಟ್ಟಿ ಮಾಡಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ. ಮೆಜಾರ್ಟಿ ಮೆಟ್ಟಿಲಲ್ಲಿ ಎಡವಿರುವ ಬಿಜೆಪಿ ಮುಂದಿನ ಹಾದಿಯನ್ನ ಸುಗಮಗೊಳಿಸಲು ಮುಂದಾಗಿದ್ದು, ಅದಕ್ಕಾಗಿ ಪಕ್ಷವನ್ನು ಮತ್ತೆ ಸ್ಟ್ರಾಂಗ್ ಮಾಡಲು ನಿರ್ಧರಿಸಿದೆ. ಈ ಪ್ರಯತ್ನ ಆರಂಭವಾದರೆ ಈಶ್ವರಪ್ಪ ಅಷ್ಟೆ ಅಲ್ಲದೆ ಹಲವು ನಾಯಕರು ಬಿಜೆಪಿಗೆ ಘರ್ ವಾಪಸಿಯಾಗಲಿದ್ದಾರೆ.
ಈಶ್ವರಪ್ಪನವರ ಕುಟುಂಬದ ಭವಿಷ್ಯ?
ತೀವ್ರ ಕುತೂಹಲಗಳ ನಡುವೆ ಕೆಎಸ್ ಈಶ್ವರಪ್ಪನವರ ಪುತ್ರ ಕೆಇ ಕಾಂತೇಶ್‌ರವರ ಮುಂದಿನ ನಡೆ ಕುತೂಹಲ ಮೂಡಿಸಿದೆ. ಈ ಸಲ ಜಿಲ್ಲಾ ಪಂಚಾಯಿತಿಯ ಚುನಾವಣೆಗೆ ನಿಲ್ಲುತ್ತಾರೆ, ನಗರ ಪಾಲಿಕೆ ಚುನಾವಣೆಯತ್ತ ಗಮನ ಕೊಡುತ್ತಾರೋ ಎಂಬುದು ನಿಗೂಢವಾಗಿದೆ. ಈ ಗುಟ್ಟನ್ನ ಕೆಎಸ್ ಈಶ್ವರಪ್ಪನವರು ಸಹ ಇದುವರೆಗೂ ಬಿಟ್ಟುಕೊಟ್ಟಿಲ್ಲ. ಇದರ ನಡುವೆ ಕೆಎಸ್ ಈಶ್ವರಪ್ಪನವರ ಸೊಸೆ ಶಾಲಿನಿಯವರು ಕೂಡ ಪಾಲಿಕೆ ಶಿವಮೊಗ್ಗ ನಗರದಲ್ಲಿ ಚುನಾವಣಾ ರಾಜಕಾರಣ ಆರಂಭಿಸಲಿದ್ದಾರೆ ಎಂಬ ಗುಸುಗುಸು ಸುದ್ದಿ ಜೋರಾಗಿ ಹರಿದಾಡುತ್ತಿದೆ.
ಈಶ್ವರಪ್ಪನವರ ಬಳಗದಲ್ಲಿಯು ಈ ಸುದ್ದಿ ಓಡಾಡುತ್ತಿದ್ದು, ಲೋಕಸಭಾ ಚುನಾವಣೆ ವೇಳೆ ಮಾವ ಕೆಎಸ್ ಈಶ್ವರಪ್ಪನವರ ಪರವಾಗಿ ಸೊಸೆ ಶಾಲಿನಿಯವರು ವಿಶೇಷವಾಗಿ ಗಮನಸೆಳೆದಿದ್ದರು. ಈ ಹಿಂದೆ ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ ಸೊಸೆಗೆ ನೀಡುವುದನ್ನ ನಾನು ಒಪ್ಪಲಿಲ್ಲ ಎಂದಿದ್ದರು ಕೆಎಸ್ ಈಶ್ವರಪ್ಪನವರು ಹೀಗಿರುವಾಗ ಹರಿದಾಡುತ್ತಿರುವ ರೂಮರ್‌ಗಳಿಗೆ ಮಾಜಿ ಡಿಸಿಎಂರವರ ಉತ್ತರ ಏನಾಗಿರಲಿದೆ ಗೊತ್ತಿಲ್ಲ. ಆದಾಗ್ಯು ಜೂನ್ 10 ಕ್ಕೆ ಕೆಎಸ್‌ಇ ಕುಟುಂಬದ ಮುಂದಿನ ಹಾದಿಯ ಸ್ಪಷ್ಟ ರೂಪ ಸಿಗುವ ಸಾಧ್ಯತೆ ಇದೆ.
What is next steps for former minister and BJP rebel candidate KS Eshwarappa following the Shivamogga Lok Sabha election. There is speculation that he may announce the re-establishment of the Rayanna Brigade on his birthday, June 10th.