ರಿಪ್ಪನ್ಪೇಟೆ ಪೊಲೀಸ್ ಸ್ಟೇಷನ್ ಪೊಲೀಸರು ಎಂತಹ ಕೆಲಸ ಮಾಡಿದ್ರು ಗೊತ್ತಾ? ಎಸ್ಪಿಯವರಿಗಷ್ಟೆ ಅಲ್ಲ, ಎಲ್ಲರಿಗೂ ಗೊತ್ತಾಗಬೇಕು ಇದು!
Special report on rippanpet police station staff cleaning government school premises
Shivamogga | Feb 11, 2024 | ಸರ್ಕಾರಗಳು ಸರ್ಕಾರಿ ಶಾಲೆ ಅಭಿವೃದ್ಧಿಯ ಬಗ್ಗೆ ಸದಾ ಮಾತನಾಡುತ್ತದೆ. ಆದಾಗ್ಯು ಸರ್ಕಾರಿ ಶಾಲೆಗಳ ಕಾಯಕಲ್ಪ ಸಮರ್ಪಕವಾಗಿ ಆಗುತ್ತಿಲ್ಲ. ಖಾಸಗಿ ಶಾಲೆಗಳ ಆರ್ಥಿಕ ವಹಿವಾಟಿನ ಒತ್ತಡ ಸರ್ಕಾರಿ ಶಾಲೆಗಳ ಅಭಿವೃದ್ಧಿ ಮೇಲೆ ಕೆಂಗಣ್ಣು ಬೀರುತ್ತಲೆ ಬಂದಿರುವುದು ಇದಕ್ಕೆ ಕಾರಣ.
ಇದಕ್ಕೆ ಹೊರತಾಗಿಯು ಹಳ್ಳಿ ಮಂದಿಗೆ ಸರ್ಕಾರಿ ಶಾಲೆಗಳೇ ಜಗತ್ತಿನ ಜ್ಞಾನ ನೀಡುವ ಬಾಗಿಲು, ಊರಿನ ಸಾಂಸ್ಕೃತಿಕ ಕಾರ್ಯಕ್ರಮದಿಂದ ಹಿಡಿದು ಮಕ್ಕಳ ಭವಿಷ್ಯದ ವೇದಿಕೆಯಾಗಿಯು ಸರ್ಕಾರಿ ಶಾಲೆಗಳು ಊರೂರಿನ ಅವಿಭಾಜ್ಯ ಅಂಗವಾಗಿದೆ. ಹಾಗಾಗಿ ನಮ್ಮೂರಿನ ಶಾಲೆಗಳನ್ನ ಉಳಿಸಿಕೊಳ್ಳುವ ಜವಾಬ್ದಾರಿಯನ್ನು ಊರಿನ ಮಂದಿ ಹೊತ್ತಿಕೊಳ್ಳಬೇಕಾಗಿದೆ. ಅಂತಹದ್ದೊಂದು ಜವಾಬ್ದಾರಿಯನ್ನ ಹೊತ್ತು ತಮ್ಮೂರಿನ ಶಾಲೆಗಳಿಗೆ ಸುಣ್ಣಬಣ್ಣ ಕಾಣಿಸುತ್ತಿರುವ ನಿಸ್ವಾರ್ಥ ಕೆಲಸವೊಂದು ಹೊಸನಗರದಲ್ಲಿ ನಡೆಯುತ್ತಿದೆ.
ವಿಶೇಷ ಅಂದರೆ ಇದರಲ್ಲಿ ಪೊಲೀಸ್ ಸಿಬ್ಬಂದಿಯು ಸಹ ಪಾಲ್ಗೊಂಡಿದ್ದಷ್ಟೆ ಅಲ್ಲದೆ ಡ್ಯೂಟಿಗೆ ಕೊಂಚ ರೆಸ್ಟ್ ಕೊಟ್ಟು ಸ್ಟಾರ್ಗಳ ಲೇಬಲ್ ಇಲ್ಲದೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಾವು ಓದಿದ ಸ್ಕೂಲಿದು ಎಂಬಂತೆ ಹಳ್ಳಿ ಶಾಲೆಯ ಕಾಂಪೌಂಡ್ ಕೆರೆದು ಬಣ್ಣ ಬಳಿಸಿದ್ದಾರೆ. ಕ್ಲಾಸ್ ರೂಂನ ಗೋಡೆಗಳಿಗೆ ಹೊಸ ಕಲರ್ ನೀಡಿದ್ದಾರೆ. ಇದು ಇವತ್ತಿನ ಮಲೆನಾಡು ಟುಡೆಯ ಸ್ಪೆಷಲ್ ರಿಪೋರ್ಟ್
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್ಪೇಟೆಯಲ್ಲಿ ಕಳೆದ ಜನವರಿಯಲ್ಲಿ ನಡೆದ ಗಣರಾಜ್ಯೋತ್ಸವದ ದಿನ ಬರುವೆ ಸರ್ಕಾರಿ ಶಾಲೆಯಲ್ಲಿ ಒಂದು ಕಾರ್ಯಗಾರ ನಡೆದಿತ್ತು.
ಸರ್ಕಾರಿ ಅಧಿಕಾರಿಗಳು ಪಾಲ್ಗೊಳ್ಳುವ ಕಾರ್ಯಕ್ರಮ ವೇದಿಕೆಗೆ ಸೀಮಿತವಾಗಬಹುದು ಎಂದು ಭಾವಿಸಿದ್ದವರ ಕಲ್ಪನೆ ಅಲ್ಲಿ ಸುಳ್ಳಾಗಿತ್ತು.
ಪೋಸ್ಟ್ ಮ್ಯಾನ್ ಬಳಗ ಆಯೋಜಿಸಿದ್ದ ಸುಣ್ಣಬಣ್ಣ ಅಭಿಯಾನದಡಿಯಲ್ಲಿ ಪೊಲೀಸರು ಕತ್ತಿ, ಕುಡ್ಲಿ, ಹಾರೆ, ಪಿಕಾಸಿ, ದೊಣ್ಣೆ ಗುದ್ದಲಿಗಳನ್ನು ಹಿಡಿದು ಪೊಲೀಸರು ಕಟ್ಟಡ ಕಾರ್ಮಿಕರಾಗಿ ಬಂದಿದ್ದರು.
ಸ್ಕೂಲ್ಗೆ ಬಂದವರೇ ಕಾಂಪೌಂಡ್ ಕ್ಲೀನ್ ಮಾಡಿದ್ರು, ಬೆಳೆದಿದ್ದ ಹಳಗಳನ್ನ ಕಿತ್ತು, ಪಾಚಿ ತೆಗೆದರು, ನೆಲಸಮತಟ್ಟು ಮಾಡಿ ಆವರಣವನ್ನ ಶುದ್ಧಗೊಳಿಸಿದರು.ಗಣರಾಜ್ಯೋತ್ಸವದ ದಿನ ರಿಪ್ಪನ್ ಪೇಟೆ ಪೊಲೀಸರು ಠಾಣೆಯ ಕೆಲಸದ ಜೊತೆ ವಿದ್ಯಾದೇಗುಲದ ಸ್ವಚ್ಚತೆಯನ್ನ ಕೈಗೊಂಡಿದ್ದರು.
ಪೊಲೀಸ್ ಸಿಬ್ಬಂದಿಗಳೇ ಬಂದು ತಮ್ಮ ಶಾಲೆ ಕ್ಲೀನ್ ಮಾಡುತ್ತಿದ್ದಾರೆ ಅಂದರೆ ಮಕ್ಕಳು ಸುಮ್ಮನಿರುತ್ತಾರೆ. ಅವರು ಸಹ ಕೈಜೋಡಿಸಿದರು
ಕ್ಲೀನ್ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿಗೆ ನೀರಡಿಕೆಯಾದರೆ ನೀರು ಕೊಟ್ಟು, ಹಸಿವಾದ ಊಟ ಬಡಿಸಿದ ಮಕ್ಕಳು ಜೊತೆಯಲ್ಲಿ ಥ್ಯಾಂಕ್ಸ್ ಹೇಳುತ್ತಿದ್ದರು.
ಪೋಸ್ಟ್ ಮ್ಯಾನ್ ಬಳಗ ಈ ಭಾಗದಲ್ಲಿ "ಸರ್ಕಾರಿ ಶಾಲೆ ಅಭಿಮಾನ - ಸುಣ್ಣ ಬಣ್ಣ ಅಭಿಯಾನ" ಎಂಬ ಟೈಟಲ್ನಡಿಯಲ್ಲಿ ಶಾಲೆಗಳನ್ನು ಸ್ವಚ್ಚಗೊಳಿಸುವ ಕೆಲಸ ಹಮ್ಮಿಕೊಳ್ಳುತ್ತದೆ. ಒಂದೊಳ್ಳೆ ಕೆಲಸಕ್ಕೆ ಸಾಥ್ ಕೊಟ್ಟಿದ್ದ ಪಿಎಸ್‌ಐ ಪ್ರವೀಣ್ ಎಸ್ ಪಿ ಆ್ಯಂಡ್ ಟೀಂ ಖುದ್ದಾಗಿ ಏಳು ದಶಕದ ಇತಿಹಾಸ ಇರುವ ಸರ್ಕಾರಿ ಶಾಲೆಯನ್ನ ಕ್ಲೀನ್ ಮಾಡಿತ್ತು. ಅಷ್ಟೆ ಅಲ್ಲದೆ ಸುಣ್ಣಬಣ್ಣದ ಆರ್ಥಿಕ ಸಹಾಯದ ಜವಾಬ್ದಾರಿಯನ್ನು ವಹಿಸಿಕೊಂಡಿತ್ತು.
ಕಳೆದ ಜನವರಿ 26 ರಂದು ಆರಂಭಗೊಂಡಿದ್ದ ಸರ್ಕಾರಿ ಶಾಲೆ ಸುಣ್ಣಬಣ್ಣ ಅಭಿಯಾನ ಬಹುತೇಕ ಮುಕ್ತಾಯಗೊಂಡಿದೆ. ಪಾಚಿ, ಗೋಸರು, ಬೀಳುಬಳ್ಳಿಯಿಂದ ಮುಪ್ಪಾಗಿದ್ದ ಸರ್ಕಾರಿ ಶಾಲೆ ಈಗ ಲಕಲಕ ಎನ್ನುತ್ತಿದೆ.
ಬೆವರಿನ ಶ್ರಮ ಹರಿಸಿ, ದುಡಿದ ಕೈಗಳ ಕಣ್ಣುಗಳು ಜಗಮಗಿಸುತ್ತಿರುವ ಶಾಲೆಯನ್ನ ನೋಡಿ ಸಂಭ್ರಮಿಸುತ್ತಿದೆ. ಇಂತಹ ಸಂಭ್ರಮದ ಕ್ಷಣಗಳು ಎಲ್ಲೆಡೆ ಕಾಣ ಸಿಗಲಿ ಎನ್ನುವ ಆಶಯ ಮಲೆನಾಡು ಟುಡೆಯದ್ದಾಗಿದೆ
ಸುಣ್ಣಬಣ್ಣ ಬಳಿದ ಮೇಲೆ ಶಾಲೆಯ ಹೊಸನೋಟ ಹೇಗಿದೆ ನೋಡಿ
ಎಲ್ಲಾ ಶಾಲೆಗಳಲ್ಲಿಯು ಇಂತಹದ್ದೊಂದು ಕೆಲಸ ಆಗಬೇಕಲ್ವಾ?
ಹೊಸನಗರದ ರಿಪ್ಪನ್ ಪೇಟೆ ಪೊಲೀಸರೊಂದಿಗೆ ಸುಣ್ಣಬಣ್ಣದ ತಂಡ
ಮಕ್ಕಳ ಮುಗ್ದ ಧನ್ಯವಾದಕ್ಕೆ ಸಂತೃಪ್ತಿಯ ನಗೆಯೊಂದಿಗೆ ರಿಪ್ಪನ್ ಪೇಟೆ ಪೊಲೀಸ್