ಸಿಲಿಂಡರ್​ ಎತ್ತಿಹಾಕಿ ಸ್ಫೋಟಕ್ಕೆ ಯತ್ನ! ಜನರ ನೆಮ್ಮದಿಗೆ ಭಂಗ ತಂದ ಕುಡುಕನ ವಿಡಿಯೋ ವೈರಲ್​! ಕ್ರಮ ಕೈಗೊಳ್ಳದ ಭದ್ರಾವತಿ ಪೊಲೀಸ್

Attempt to blow up the cylinder! Video of drunkard disturbing people's peace goes viral

ಸಿಲಿಂಡರ್​ ಎತ್ತಿಹಾಕಿ ಸ್ಫೋಟಕ್ಕೆ ಯತ್ನ! ಜನರ ನೆಮ್ಮದಿಗೆ ಭಂಗ ತಂದ ಕುಡುಕನ ವಿಡಿಯೋ ವೈರಲ್​! ಕ್ರಮ ಕೈಗೊಳ್ಳದ ಭದ್ರಾವತಿ ಪೊಲೀಸ್
Attempt to blow up the cylinder! Video of drunkard disturbing people's peace goes viral

Shivamogga | Feb 11, 2024 |  Video of drunkard   ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ವ್ಯಕ್ತಿಯೊಬ್ಬ ಪದೇ ಪದೇ ಕಾನೂನು ಉಲ್ಲಂಘನೆ ಕೃತ್ಯಗಳನ್ನು ಎಸೆಗುತ್ತಿದ್ದು ಆತನ ವಿಡಿಯೋವೊಂದು ವೈರಲ್ ಆಗಿದೆ. ಅಪಾಯಕಾರಿ ಕೃತ್ಯವೊಂದು ಆತ ಎಸೆಗುತ್ತಿರುವ ವಿಡಿಯೋ ಅದಾಗಿದ್ದು ಆದಾಗ್ಯು ಆತನ ವಿರುದ್ಧ ಕ್ರಮವಾಗಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ.  

ತುಂಬಿದ ಗ್ಯಾಸ್ ಸಿಲಿಂಡರ್ ನ್ನು ರಸ್ತೆಯಲ್ಲಿ ಪದೇ ಪದೇ ಎತ್ತಿ ಹಾಕಿ ಸ್ಪೋಟಿಸಲು ಪಾನಮತ್ತನಾಗಿದ್ದ ಯುವಕ ಮುಂದಾಗಿರುವ ವಿಡಿಯೋ ಸದ್ಯ ವೈರಲ್ ಆಗಿದೆ. ವಿಡಿಯೋ ಮೂಲವನ್ನ ಅರಿಸಿದಾಗ, ದೃಶ್ಯವು ಭದ್ರಾವತಿಯ ಹೊಸಮನೆ ಕಾಲೋನಿಯ ಎನ್ಎಂಸಿ ಮೂರನೇ ತಿರುವಿನಲ್ಲಿ ನಡೆದಿರುವುದು ಎಂದು ಗೊತ್ತಾಗಿದೆ. 

ಮಲೆನಾಡು ಟುಡೆಗೆ ಮೂಲಗಳು ತಿಳಿಸಿರುವ ಮಾಹಿತಿಯನ್ನು ಗಮನಿಸಿವುದಾದರೆ  ಈ ಘಟನೆ ನಡೆದಿದ್ದು ಕಳೆದ ಶನಿವಾರ. ಇದೀಗ ವಿಡಿಯೋ ವೈರಲ್ ಆಗಿದೆ. ತುಂಬಿರೋ ಸಿಲಿಂಡರ್​ನ್ನ ಮನಸ್ಸೋ ಇಚ್ಚೆ ನೆಲಕ್ಕೆ ಬಡಿಯುತ್ತಿರುವ ಯುವಕ ಅದನ್ನು ಸ್ಫೋಟಿಸುವ ಆತಂಕವನ್ನು ಕೇರಿಯವರಲ್ಲಿ ಮೂಡಿಸಿದ್ದಾನೆ. ಅಲ್ಲದೆ ಹತ್ತಾರು ಬಾರಿ ಸಿಲಿಂಡರ್ ಎತ್ತಿಹಾಕುವ ಯುವಕ ಸಿಲಿಂಡರ್ ಕ್ಯಾಪ್​ ಬಿಡಿಸಲು ಯತ್ನಿಸಿದ್ದಾನೆ.ಇಷ್ಟೆ ಅಲ್ಲದೆ ಇದೇ ಸಿಲಿಂಡರ್​ನಿಂದ ಬಾಗಿಲು ಸಹ ಒಡೆದಿದ್ದಾನೆ ಎಂದು ಆರೋಪಿಸಲಾಗಿದೆ. 

ಮನೆ ಮಾಲೀಕನಿಗೆ ಅವಾಜ್​ 

ಇನ್ನೂ ಸ್ಥಳೀಯರು ಹೇಳುವ ಪ್ರಕಾರ, ವಿಡಿಯೋದಲ್ಲಿ ಕಾಣುತ್ತಿರುವ ಯುವಕನ ಹೆಸರು ಮಂಜ ಎಂದಾಗಿದ್ದು ಆತ ಪ್ರತಿನಿತ್ಯ ತಾನಿರುವ ಏರಿಯಾದಲ್ಲಿ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಾನೆ ಎನ್ನಲಾಗಿದೆ. ಬೈಕ್ ಸ್ಪೀಡಾಗಿ ಓಡಿಸಿ ಹೆದರಿಸುವುದು, ಜನರಿಗೆ ಕುಡಿದು ಹಲ್ಲೆಗೆ ಮುಂದಾಗುವುದು, ಬಾಯಿಗೆ ಬಂದಂತೆ ಬೈಯ್ಯುವುದು ಮಾಡುತ್ತಿದ್ದಾನಂತೆ. ಇಷ್ಟೆ ಅಲ್ಲದೆ ಲೀಸ್​ಗೆ ಪಡೆದ ಮನೆಯ ಮಾಲೀಕರಿಗೆ ಮನೆ ಖಾಲಿ ಮಾಡಿ ಎಂದು ಬಂದ ಕಡಿದು ಹಾಕುವುದಾಗಿ ಆವಾಜ್ ಹಾಕುತ್ತಿದ್ದಾನಂತೆ. ಇನ್ನೊಂದೆಡೆ ಕೇರಿಯ ಮಂದಿ ಈತನನ್ನು ಖಾಲಿ ಮಾಡಿಸಿ ಎಂದು ಮಾಲೀಕರಿಗೆ ದುಂಬಾಲು ಬಿದ್ದಿದ್ದಾರೆ. ಚಾಲಕ ವೃತ್ತಿಯಲ್ಲಿರುವ ಮನೆ ಮಾಲೀಕರು ಈತನ ಭಯದಲ್ಲಿ ಮನೆ ಖಾಲಿ ಮಾಡಿಸಿ ಕೊಡಿ ಯಾರಾದರೂ ಎಂದು ತಿಳಿದವರಲ್ಲಿ ಅಂಗಲಾಚುತ್ತಿದ್ದಾರೆ. 

ಇನ್ನೂ ಕಳೆದ ಶನಿವಾರ ಮಂಜ ಅತಿರೇಕದ ವರ್ತನೆ ತೋರಿದ್ದಾನೆ. ತುಂಬಿದ ಸಿಲಿಂಡರ್​ನ್ನ ಮೇಲಿಂದ ಕುಟ್ಟಿ ಬ್ಲಾಸ್ಟ್ ಮಾಡಲು ಯತ್ನಿಸಿದ್ದಾನೆ. ಗ್ಯಾಸ್​ ಸಿಲಿಂಡರ್​ ಎಷ್ಟೆ ಬಿದ್ದರೂ ಅದರಲ್ಲಿನ ಪ್ರೆಶರ್ ಸ್ಫೋಟಗೊಳ್ಳಲಿಲ್ಲ ಎಂಬುದೇ ಸಮಾಧಾನಕರ ಸಂಗತಿ.ಹಾಗೊಂದು ವೇಳೆ ಕೃತ್ಯದಲ್ಲಿ ಏನಾದರೂ ಆಗಿದ್ದರೇ ಯಾರು ಹೊಣೆ ಎಂಬುದು ಅಲ್ಲಿನ ಸ್ಥಳೀಯರ ಪ್ರಶ್ನೆ. ಇಷ್ಟೆ ಅಲ್ಲದೆ ಈ ವಿಚಾರದಲ್ಲಿಯು ಭದ್ರಾವತಿ ಪೊಲೀಸರು ಕ್ರಮ ಕೈಗೊಂಡಿಲ್ಲ. ಈತನ ದುವರ್ತನೆ ನಡೆಯುತ್ತಿರುವಾಗಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಪೊಲೀಸರು ಆಗ ಸ್ಥಳಕ್ಕೆ ಬರಲಿಲ್ಲವಂತೆ. ಆನಂತರ ಈತನನ್ನ ಸ್ಟೇಷನ್​ಗೆ ಕರೆದೊಯ್ದರು ಸಹ ಬಿಟ್ಟು ಕಳಿಸಿದ್ದಾರೆ. ಇಡೀ ಎರಿಯಾದ ಮಂದಿ ಸಹಿ ಹಾಕಿ ಠಾಣೆಗೆ ಮನವಿ ಕೊಟ್ಟರು ಸಹ ಪೊಲೀಸ್ ಇಲಾಖೆ ಆತನನ್ನು ಆರಾಮಾಗಿ ಓಡಾಡಲು ಬಿಟ್ಟಿದೆ ಎಂಬುದು ಸ್ಥಳೀಯರ ಆರೋಪ

ಸ್ಟೇಷನ್​ಗೆ ಹೀಗೆ ಹೋಗಿ ಹಾಗೆ ವಾಪಸ್ ಬಂದವನು, ಪೊಲೀಸರು ತನ್ನನ್ನ ಏನೂ ಮಾಡಕಾಗಲ್ಲ ಎಂದು ಮತ್ತಷ್ಟು ಕಿರುಕುಳ ನೀಡುತ್ತಿದ್ದಾನೆ ಎನ್ನುತ್ತಾರೆ ತಮ್ಮ ಹೆಸರನ್ನ ಬಹಿರಂಗಪಡಿಸಬೇಡಿ ಎಂದಿರುವ ಸ್ಥಳೀಯರೊಬ್ಬರು. ಸಿಆರ್​ಪಿಸಿ ಪದೇಪದೇ ಕಾನೂನು ಉಲ್ಲಂಘಿಸಿ ಸಮಾಜದ ಶಾಂತಿಗೆ ಭಂಗ ತರುವವರ ವಿರುದ್ಧ ಸೆಕ್ಷನ್ ಒಂದು ಹಾಕಬಹುದಾಗಿದೆ. ಆದರೆ ಇಲ್ಲಿ ಪಾನಮತ್ತ ಯುವಕನೊಬ್ಬ ಪದೇ ಪದೇ ತೊಂದರೆ ಕೊಡುತ್ತಿದ್ದರು ಸಹ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ. 

ಸಿಆರ್​ಪಿಸಿ 107 : ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್ಪಿಸಿ) ಸೆಕ್ಷನ್ 107 ಶಾಂತಿ ಮತ್ತು ಸಾರ್ವಜನಿಕ ನೆಮ್ಮದಿಗೆ ತೊಂದರೆಯಾಗುವಾಗ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ಗೆ ಸೆಕ್ಷನ್​ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲು ಅಧಿಕಾರ ನೀಡುತ್ತದೆ. 

ಶಾಂತಿ ಉಲ್ಲಂಘನೆ ಮಾಡಿ, ಸಾರ್ವಜನಿಕ ಶಾಂತಿಗೆ ಭಂಗ ತರುವುದು, ಅಥವಾ ಶಾಂತಿ ಉಲ್ಲಂಘನೆಗೆ ಕಾರಣವಾಗಬಹುದಾದ ಯಾವುದೇ ಕಾನೂನು ಬಾಹಿರ  ತೊಡಗಿದರೆ, ಅವರು ಕ್ರಮ ತೆಗೆದುಕೊಳ್ಳುವ ಅಧಿಕಾರವನ್ನು ಹೊಂದಿದ್ದಾರೆ. ಈ ಹಿಂದೆ ಅಣ್ಣಾಮಲೈ ಪೊಲೀಸ್ ಡ್ಯೂಟಿಯಲ್ಲಿದ್ದಾಗ ಬೆಂಗಳೂರಿನಲ್ಲಿ ಪ್ರಖ್ಯಾತ ಸಿನಿಮಾ ನಟನ ಕುಟುಂಬದ ವಿರುದ್ಧ ಈ ಸೆಕ್ಷನ್​ ಅಸ್ತ್ರ ಬಳಸಿದ್ದರು. 

ಸದ್ಯ ಮಲೆನಾಡು ಟುಡೆ ವೈರಲ್ ಆಗಿರುವ ವಿಡಿಯೋವನ್ನ ಎಸ್​ಪಿ ಮಿಥುನ್ ಕುಮಾರ್ ​ರವರ ಗಮನಕ್ಕೆ ತಂದಿದೆ.  ವಿಡಿಯೋವನ್ನು ಎಸ್​ಪಿಯವರ ಮೊಬೈಲ್ಗೆ ರವಾನೆ ಮಾಡಲಾಗಿದ್ದು ದೃಶ್ಯ ಸಾಕ್ಷಿಯ ಜೊತೆಗೆ ಸ್ಥಳೀಯರು ಮನವಿ ಮಾಡಿ ಸಹಿ ಹಾಕಿರುವ ಕಾಪಿಯನ್ನು ಸಹ ಜಿಲ್ಲಾ ರಕ್ಷಣಾಧಿಕಾರಿಯವರಿಗೆ ನೀಡಲಾಗಿದೆ. ಅವರ ಮುಂದಿನ ಕ್ರಮದ ಬಗ್ಗೆ ಸದ್ಯದಲ್ಲಿಯೇ ತಿಳಿಸುತ್ತೇವೆ.