KARNATAKA NEWS/ ONLINE / Malenadu today/ Oct 24, 2023 SHIVAMOGGA NEWS
ವಿಜಯದಶಮಿ ಮುನ್ನಾದಿನ ಶಿವಮೊಗ್ಗಕ್ಕೆ ಬಂದಿದ್ದ ಸಕ್ರೆಬೈಲ್ ಆನೆ ಬಿಡಾರದ ಮೂರು ಆನೆಗಳ ಪೈಕಿ ನೇತ್ರಾವತಿ ಮುದ್ದಾದ ಹೆಣ್ಣು ಮರಿಗೆ ಜನ್ಮ ನೀಡಿದೆ. ಮರಿ ಮುದ್ದಾಗಿದ್ದು ಆರೋಗ್ಯವಾಗಿದೆ.. ಈ ಬಗ್ಗೆ ವನ್ಯಜೀವಿ ವೈದ್ಯ ಡಾ.ವಿನಯ್ ಮಾಹಿತಿ ನೀಡಿದ್ದಾರೆ.
ಮರಿಹಾಕುತ್ತೆ ಎನ್ನುವ ಸುಳಿವು ಕೂಡ ನೀಡದ ನೇತ್ರಾವತಿ, ಮರಿಗೆ ಜನ್ಮ ಕೊಡುತ್ತಲೇ ಮತ್ತೆ ಎದ್ದು ನಿಂತಿದ್ದಾಳೆ. ಇದನ್ನ ಕಂಡು ವೈದ್ಯರು ಸಹ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮರಿ ಹಾಕಿದ ಆನೆಗಳು ಸಹಜವಾಗಿ ಎದ್ದು ನಿಲ್ಲಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತವೆಯಂತೆ. ಆದರೆ ನೇತ್ರಾವತಿ ತುಂಬು ಗರ್ಭದ ಸಹಜ ಲಕ್ಷಣಗಳನ್ನೆ ತೋರಿಸಿಲ್ಲ. ಆ ಕಾರಣಕ್ಕೆ ಆಕೆಯ ಹೆರಿಗೆಗೆ ಇನ್ನೂ ಸಮಯ ಇದೆ ಎಂದುಕೊಂಡಿದ್ದರು ಅರಣ್ಯ ಸಿಬ್ಬಂದಿ. ಅದೇ ಆಧಾರದ ಮೇಲೆ ಶಿವಮೊಗ್ಗ ದಸರಾಕ್ಕೆ ಆನೆಯನ್ನು ಕರೆತರಲಾಗಿತ್ತು.
READ : BREAKING NEWS | ಶಿವಮೊಗ್ಗ ದಸರಾಗೆ ಬಂದು ಮರಿಹಾಕಿದ ನೇತ್ರಾವತಿ ಆನೆ!| ವಾಸವಿ ಶಾಲೆ ಆವರಣದಲ್ಲಿ ಹೆರಿಗೆ
ಈ ಮಧ್ಯೆ ಸಿಟಿ ರೌಂಡ್ಸ್ ನಡೆಸಿ ತಾಲೀಮು ಮುಗಿಸಿದ್ದ ನೇತ್ರಾವತಿ ನಿನ್ನೆ ರಾತ್ರಿ ಕತ್ತಲಲ್ಲಿ ಮರಿಗೆ ಜನ್ಮ ನೀಡಿದ್ದಾಳೆ. ಮರಿ ಕೂಡ ಆರೋಗ್ಯಯುತವಾಗಿದ್ದು ಚುರುಕಾಗಿದೆ. ಕೆಲವೊಮ್ಮೆ ನಡೆಯುವಂತೆ ಮರಿಯನ್ನು ತಿರಸ್ಕರಿಸುವ ಪ್ರಯತ್ನವನ್ನು ನೇತ್ರಾವತಿ ಮಾಡಲಿಲ್ಲ.
ಮರಿಯೊಂದಿಗೆ ನೇತ್ರಾಳು ಚಟುವಟಿಕೆಯಿಂದ ಇದೆ. ಇನ್ನೂ ದಸರಾಕ್ಕೆ ಬಂದಿರುವ ಹೇಮಾವತಿ ಆನೆಯು ನೇತ್ರಾವತಿಯನ್ನ ಹಾಗೂ ಅದರ ಮರಿಯನ್ನು ನೋಡಿಕೊಳ್ಳುವ ಉಸ್ತುವಾರಿ ತೆಗೆದುಕೊಂಡಿದ್ದಾಳೆ. ಗುಂಪು ಆನೆಗಳಲ್ಲಿ ಗುಂಪಿನ ಹಿರಿಯ ಸದಸ್ಯೆ ಯಾವುದೇ ಆನೆ ಮರಿಹಾಕಿದರೂ ಅವುಗಳನ್ನು ನೋಡಿಕೊಳ್ಳುವ ಉಸ್ತುವಾರಿ ವಹಿಸಿಕೊಳ್ಳುತ್ತವೆ. ಅದೇ ರೀತಿಯಲ್ಲಿ ಸದ್ಯ ಹೇಮಾವತಿ ನೇತ್ರಾ ಮತ್ತದರ ಮರಿಯನ್ನ ನೋಡಿಕೊಳ್ಳುತ್ತಿದ್ದಾಳೆ. ಹಾಗಾಗಿ ಎರಡು ಆನೆಗಳು ಇವತ್ತು ವಿಜಯದಶಮಿಯ ಉತ್ಸವದಲ್ಲಿ ಪಾಲ್ಗೊಳ್ಳುವುದು ಅನುಮಾನ ಎನ್ನಲಾಗುತ್ತಿದೆ.
ಈ ಎಲ್ಲ ವಿಚಾರಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಾಕ್ಟರ್ ವಿನಯ್, ಈ ಮೊದಲೇ ನೇತ್ರಾವತಿ ಆನೆ ಗರ್ಭಿಣಿ ಎಂಬುದು ತಿಳಿದಿತ್ತು, ಇನ್ನೂ 8 ತಿಂಗಳ ಗರ್ಭಿಣಿ ಎಂದು ಅಂದಾಜಿಸಲಾಗಿತ್ತು.ಈ ನಡುವೆ ಇವತ್ತು ಇದ್ದಕ್ಕಿದ್ದ ಹಾಗೆ ಮರಿಹಾಕಿದ್ದಾಳೆ. ಹೆರಿಗೆಯ ಸೂಚನೆ, ಸಹಜ ಲಕ್ಷಣಗಳನ್ನು ಸಹ ತೋರಲಿಲ್ಲ ಎಂದು ತಿಳಿಸಿದ್ದಾರೆ.
ಮರಿಹಾಕಿದ ತಕ್ಷಣವೇ ತಾನಾಗಿಯೇ ನೇತ್ರಾವತಿ ಮೇಲಕ್ಕೆ ಎದ್ದಿದ್ದಾಳೆ, ಹೆಣ್ಣು ಮರಿಯಾನೆಯು ಆರೋಗ್ಯಯುತವಾಗಿದೆ. ಸಾಮಾನ್ಯವಾಗಿ ಆನೆ ಹೆರಿಗೆ ಆದ ತಕ್ಷಣ ಬೇರೆ ಆನೆಗಳನ್ನು ಜೊತೆ ಮಾಡುತ್ತೇವೆ. ಸದ್ಯ ಹೇಮಾವತಿ ಆನೆಯನ್ನು ಜೊತೆಗೆ ಬಿಡಲಾಗಿದೆ. ಹೇಮಾವತಿ ಆನೆಯು ನೇತ್ರಾವತಿಯ ಜೊತೆಗಿದ್ದು ನೋಡಿಕೊಳ್ತಿದೆ ಎಂದು ತಿಳಿಸಿದ್ದಾರೆ.
ಆನೆ ಇಷ್ಟೆ ತಿಂಗಳು ಗರ್ಭಿಣಿ ಎಂದು ಹೇಳುವುದು ಕಷ್ಟ, ನಾವೆಲ್ಲರು ಸಹ ತುಂಬು ಗರ್ಭಿಣಿ ಬಾನುಮತಿ ಮರಿಹಾಕುತ್ತದೆ ಎಂದುಕೊಂಡಿದ್ದೆವು. ಏಕೆಂದರೆ ಬಾನುಮತಿಯಲ್ಲಿ ಗರ್ಭಿಣಿಯ ಲಕ್ಷಣಗಳು ಸಹಜವಾಗಿ ಕಂಡುಬಂದಿದ್ದವು. ಆದರೆ ನೇತ್ರಾವತಿ ಆನೆಯಲ್ಲಿ ಇಂತಹ ಲಕ್ಷಣಗಳು ಕಂಡುಬಂದಿರಲಿಲ್ಲ ಎಂದರು.
ಇನ್ನೂ ಕಳೆದ ಎಪ್ರಿಲ್ನಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಕಾಡಾನೆ ನಡೆಸಿದ ದಾಳಿಯಲ್ಲಿ ಗಾಯಗೊಂಡಿದ್ದ ನಾನು, ಸುದೀರ್ಘ ಚಿಕಿತ್ಸೆಯಲ್ಲಿದ್ದೆ. ಹಾಗಾಗಿ ನೇತ್ರಾವತಿ ಗರ್ಭ ಕಟ್ಟಿದ್ದು ಯಾವಾಗ, ಮೇಟಿಂಗ್ ಯಾವಾಗ ಆಯ್ತು ಎಂಬ ಮಾಹಿತಿ ಸ್ಪಷ್ಟ ದಾಖಲು ಮಾಡಲು ಸಾಧ್ಯವಾಗಲಿಲ್ಲ. ಮಾವುತರು , ಕಾವಾಡಿಗಳು ಅಂದಾಜಿಸಿದ ಮಾಹಿತಿಯಷ್ಟೆ ಲಭ್ಯವಿತ್ತು ಎಂದು ತಿಳಿಸಿದ್ದಾರೆ.
ಇನ್ನೂ ಆನೆ ಬಿಡಾರದಲ್ಲಿಯೇ ನೇತ್ರಾವತಿ ಹುಟ್ಟಿ ಬೆಳೆದಿದ್ದು, ಇದೀಗ ಆಕೆ ಮರಿಯೊಂದನ್ನ ಸಕ್ರೆಬೈಲ್ ಬಿಡಾರದ ಸದಸ್ಯಯಾಗಿಸಿದ್ದಾಳೆ. ಆಕೆಯ ಸಂಬಂಧಿಯು ಆಗಿರುವ ಹೇಮಾವತಿ ಆನೆ ನೇತ್ರಾವತಿಯನ್ನ ನೋಡಿಕೊಳ್ತಿದೆ. ಜಂಬು ಸವಾರಿಯಲ್ಲಿ ನೇತ್ರಾವತಿ ಆನೆಯು ಪಾಲ್ಗೊಳ್ಳುವುದಿಲ್ಲ ಎಂದು ವಿನಯ್ ತಿಳಿಸಿದ್ದಾರೆ.
ಇನ್ನಷ್ಟು ಸುದ್ದಿಗಳು
ದುರ್ಗಾಷ್ಟಮಿಯ ದಿನದಂತೆ 3 ಕಡೆಗಳಲ್ಲಿ ಕಳ್ಳತನ | ಎರಡು ದೇಗುಲದ ಭೀಗ ಮುಗಿದ ಕಳ್ಳರು
ರಾಗಿಗುಡ್ಡ ಕೇಸ್ |DYSP ಯಿಂದಲೇ ದೂರು | ದಾಖಲಾಯ್ತು 150 ಮಂದಿ ವಿರುದ್ಧ ಕೇಸ್ !
ಭದ್ರಾವತಿ ಕೇಸ್ | ಕೊಲೆಯಾದ ಟಿಪ್ಪು ನಗರ ನಿವಾಸಿ ಬಗ್ಗೆ SP ಮಿಥುನ್ ಕುಮಾರ್ ಹೇಳಿದ್ದೇನು?
