ಒಂದಲ್ಲ ಎರಡಲ್ಲ 94 ಕೋಟಿ ದುಡ್ಡು ಎಲ್ಲೋಯ್ತು ? ನಿಗಮ ಹೇಳುವ ಸತ್ಯವೇನು? ಚಂದ್ರಶೇಖರನ್‌ ಕಾರಣನಾ?

Chandrashekharan P, the superintendent of Karnataka Maharshi Valmiki Scheduled Tribes Development Corporation Limited, committed suicide. The case has now turned into a political uproar. Malenadu Today is making an effort to explain the details of the fraud involved in the case to the general public.

ಒಂದಲ್ಲ ಎರಡಲ್ಲ 94 ಕೋಟಿ ದುಡ್ಡು ಎಲ್ಲೋಯ್ತು ? ನಿಗಮ ಹೇಳುವ ಸತ್ಯವೇನು? ಚಂದ್ರಶೇಖರನ್‌ ಕಾರಣನಾ?
chandrasekharan p death case scam

SHIVAMOGGA | MALENADUTODAY NEWS | May 29, 2024  ಮಲೆನಾಡು ಟುಡೆ 

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತ ಇದರ ಅಧೀಕ್ಷರು ಚಂದ್ರಶೇಖರನ್‌ ಪಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕೇಸ್‌ ಇದೀಗ ರಾಜಕೀಯ ದಾಳವಾಗಿದೆ. ಆದರೆ ಪ್ರಕರಣದಲ್ಲಿ ಏನು ವಂಚನೆಯಾಗಿದೆ? ವಂಚನೆ ಅಂದರೆ ಹೇಗೆ? ಅದರ ವಿವರ ಏನು ಎನ್ನುವುದನ್ನ ಡಿಟೇಲ್‌ ಆಗಿ ಜನಸಾಮಾನ್ಯರಿಗೆ ತಿಳಿಯುತ್ತಿಲ್ಲ. ಆ ನಿಟ್ಟಿನಲ್ಲಿ ಒಂದು ಪ್ರಯತ್ನವನ್ನು ಮಲೆನಾಡು ಟುಡೆ ಮಾಡುತ್ತಿದೆ. ಅದರ ಮುಂದುವರಿದ ಭಾಗ ಇದಾಗಿದೆ. 

ಅಧಿಕಾರಿ ಚಂದ್ರಶೇಖರನ್‌ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಅವರು ಬರೆದಿರುವ ಡೆತ್‌ನೋಟ್‌ನಲ್ಲಿ ಅಂದಾಜು 85 ಕೋಟಿ ರೂಪಾಯಿ ಅಕ್ರಮ ಆಗಿರುವುದಕ್ಕೆ ಅಧಿಕಾರಿಗಳು ಹೊಣೆ ಹಾಗೂ ಬ್ಯಾಂಕ್‌ ಅಧಿಕಾರಿಯೊಬ್ಬರು ಹೊಣೆ ಎಂದು ನಮೂದಿಸಿದ್ದಾರೆ. ಇದರ ನಡುವೆ ಅಭಿವೃದ್ಧಿ ನಿಗಮದ ಮೂಲಗಳು ಬೇರೆಯದ್ದೆ ಸತ್ಯವನ್ನ ಹೇಳುತ್ತಿದ್ದಾರೆ. ಅವರ ಪ್ರಕಾರ, ಇಡೀ ಪ್ರಕರಣ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಎಂಜಿ ರೋಡ್‌ ಶಾಖೆಯಲ್ಲಿಯೇ ನಡೆದಿದೆ. ಇದಕ್ಕಾಗಿ ನಕಲಿ ಸಹಿ, ಲೆಟರ್‌ ಹಾಗೂ ಪ್ರಸ್ತಾವನೆ ಪತ್ರಗಳನ್ನು ಬಳಸಿಕೊಳ್ಳಲಾಗಿದೆ. ಹಾಗೂ ಹಣವರ್ಗಾವಣೆ ಸಂದರ್ಭದಲ್ಲಿ ಒದಗಿಸಬೇಕಾದ ಇಮೇಲ್‌ ಸಂದೇಶ ಹಾಗು ಮೊಬೈಲ್‌ ಮೆಸೇಜ್‌ ರವಾನೆ, ಓಟಿಪಿ ಸಂಖ್ಯೆಗಳನ್ನು ನೀಡಿಲ್ಲ. ಮತ್ತು ಇದಕ್ಕೆ ಅಗತ್ಯವಿರುವ ಫೋನ್‌ ನಂಬರ್‌ ಹಾಗೂ ಇಮೇಲ್‌ಗಳು ಸಹ ನಕಲಿಯಾಗಿವೆ ಎಂದು ಆರೋಪಿಸಲಾಗಿದೆ. 

ಈ ವಾದವನ್ನು ವಿವರವಾಗಿ ನೋಡುವುದಾದರೆ, ಒಟ್ಟಾರೆ 187.33  ಕೋಟಿ ರೂಪಾಯಿಯನ್ನು ಅಭಿವೃದ್ಧಿ ನಿಗಮ ವಸಂತ ನಗರದಿಂದ ಎಂಜಿ ರೋಡ್‌ ಶಾಖೆಗೆ ವರ್ಗಾಯಿಸಿದ ಅಕೌಂಟ್‌ನಲ್ಲಿ ಇಡುತ್ತದೆ. ಅಲ್ಲಿ ಅಭಿವೃದ್ಧಿ ನಿಗಮದ ಮ್ಯಾನೇಜಿಂಗ್‌ ಡೈರಕ್ಟರ್‌ ಹಾಗೂ ಮುಖ್ಯ ಲೆಕ್ಕಾಧಿಕಾರಿಯ ಗಮನಕ್ಕೆ ತರದೇ ಹಣವನ್ನು ವಿವಿಧ ಅಕೌಂಟ್‌ಗಳಿಗೆ ವರ್ಗಾವಣೆ ಮಾಡಲಾಗಿದೆ ಎಂಬುದು ನೇರ ಆರೋಪ ಮಾಡಲಾಗಿದೆ. ಈ ನಿಟ್ಟಿನಲ್ಲಿ ಅಭಿವೃದ್ಧಿ ನಿಗಮಕ್ಕೆ ಬಸವರಾಜ್‌ ದದ್ದಲ್‌ ಅಧ್ಯಕ್ಷರಾಗಿದ್ದಾರೆ. ಹಾಗಾಗಿ ಇದರ ನೇರವಾಗಿ ಇನ್ವಾಲ್‌ ಆಗಲು ಸಚಿವರಿಗೆ ಸಾಧ್ಯವಿಲ್ಲ. ಕೇವಲ ಬೋರ್ಡ್‌ ಆಫ್‌ ಡೈರಕ್ಟರ್‌ ಮೀಟಿಂಗ್‌ ಇದ್ದಾಗ ಮಾತ್ರ ಹಿಂದುಳಿದ ವರ್ಗಗಳ ಸಚಿವರು ಪಾಲ್ಗೊಳ್ಳುತ್ತಾರೆ. ಹಾಗಾಗಿ ಇದರಲ್ಲಿ ಸಚಿವರ ಪಾತ್ರವಿಲ್ಲ. 

ಇನ್ನೊಂದು ವಿಚಾರ ಹೀಗಿದೆ, ಅಭಿವೃದ್ಧಿ ನಿಗಮದಲ್ಲಿ ಒಂದು ಕೋಟಿ ರೂಪಾಯಿಯನ್ನು ಬ್ಯಾಂಕ್‌ನಿಂದ ಬಿಡುಗಡೆ ಮಾಡಬೇಕು ಎಂದ ಪಕ್ಷದಲ್ಲಿ ಬೋರ್ಡ್‌ ಆಫ್‌ ಡೈರಕ್ಟರ್‌ ಮೀಟಿಂಗ್‌ನಲ್ಲಿ ಪ್ರಸ್ತಾವನೆ ಇಟ್ಟು, ಆ ಸಭೆಯಿಂದ ಅನುಮೋದನೆಯನ್ನ ಪಡೆಯಬೇಕು. ಅನುಮೋದನೆ ಆದ ಬಳಿಕ ಎಂಡಿಯವರು ಲೆಕ್ಕಾಧಿಕಾರಿ ಮೂಲಕ ಚೆಕ್‌ ಮೂಲಕ ಬ್ಯಾಂಕ್‌ ವಹಿವಾಟು ನಡೆಸಬೇಕು. ಅಲ್ಲದೆ ಇದಕ್ಕೆ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಯಿಂದಲೂ ಅನುಮತಿ ಪಡೆಯಬೇಕಾಗುತ್ತದೆ. ಅಲ್ಲದೆ ಈ ವಹಿವಾಟಿನಲ್ಲಿ ಎಂಡಿಯವರಿಗೆ ಇಮೇಲ್‌ ಹಾಗೂ ಮೊಬೈಲ್‌ ಮೆಸೇಜ್‌ ಮೂಲಕ ಹಣ ಬಿಡುಗಡೆಯ ಅಥವಾ ವರ್ಗಾವಣೆಯ ಮಾಹಿತಿ ರವಾನೆಯಾಗುತ್ತದೆ. ಇಷ್ಟೆಲ್ಲಾ ನಿಯಮಾವಳಿಗಳಿವೆ . 

ಆದರೆ ಪ್ರಸ್ತುತ ಪ್ರಕರಣದಲ್ಲಿ ಚಂದ್ರಶೇಖರ್‌ ಪಿ ಯವರು ಬ್ಯಾಂಕ್‌ಗೆ ಸಂಬಂಧಿಸಿದ ವ್ಯವಹಾರಗಳನ್ನ ಪರಿಶೀಲಿಸುತ್ತಿದ್ದರು. ಅವರ ಲೋಪದಿಂದಾಗಿ ವಸಂತನಗರದಿಂದ ಎಂಜಿ ರೋಡ್‌ ಶಾಖೆಗೆ ವರ್ಗಾವಣೆಗೊಂಡ ಚೆಕ್‌ ಬುಕ್‌ ಹಾಗೂ ಪಾಸ್‌ ಪುಸ್ತಕಗಳು ಅಭಿವೃದ್ಧಿ ನಿಗಮಕ್ಕೆ ಬಂದಿಲ್ಲ. ಅವರು, ಇವರೆಡನ್ನು ಪಡೆದಿರಲಿಲ್ಲ ಎಂದು ತಮ್ಮ ಡೆತ್‌ ನೋಟ್‌ ನಲ್ಲಿ ತಿಳಿಸಿದ್ದಾರೆ. ಅವರ ಈ ಲೋಪದಿಂದಾಗಿ ಅಭಿವೃದ್ಧಿ ನಿಗಮದ ಪಾಸ್‌ ಬುಕ್‌ ಹಾಗೂ ಚೆಕ್‌ ಪುಸ್ತಕಗಳು ಬ್ಯಾಂಕ್‌ನಲ್ಲಿ ಉಳಿದಿವೆ. ಅಲ್ಲದೆ ಖಾತೆಯೊಂದಿಗೆ ಸೀಡಿಂಗ್‌ ಮಾಡಿದ್ದ ಅಭಿವೃದ್ಧಿ ನಿಗಮದ ಅಧಿಕೃತ ಇಮೇಲ್‌ ಹಾಗು ಸಂಬಂಧ ಪಟ್ಟ ಮೊಬೈಲ್‌ ನಂಬರ್‌ಗಳನ್ನು ಬದಲಾಯಿಸಲಾಗಿದೆ. ಹಾಗಾಗಿ ಚೆಕ್‌  ಬಳಸಿಕೊಂಡು, ಸುಳ್ಳು ದಾಖಲೆ ಸೃಷ್ಟಿಸಿ ಹಣವನ್ನು ಯಾರದ್ದೋ ಅಕೌಂಟ್‌ಗಳಿಗೆ ವರ್ಗಾವಣೆ ಮಾಡಲಾಗಿದೆ ಎನ್ನುತ್ತದೆ ನಿಗಮದ ಮೂಲಗಳು. ಅಲ್ಲದೆ ಖಾತೆಗೆ ಸಂಬಂಧಿಸಿದ ಯಾವೊಂದು ವಿವರಗಳು ನಿಗಮದ ಬಳಿ ಇಲ್ಲದಿರುವುದು ಮತ್ತು ಸಂಬಂಧಿಸಿದ ವಹಿವಾಟಿನ ಮಾಹಿತಿ ನಿಗಮಕ್ಕೆ ರವಾನೆಯಾಗದೇ ಇರುವುದರಿಂದ ಅಕ್ರಮವಾಗಿದ್ದು ನಿಗಮದ ಗಮನಕ್ಕೆ ಬಂದಿರಲಿಲ್ಲ. 

ಇದರ ನಡುವೆ ಚಂದ್ರಶೇಖರನ್‌ ರವರು ಬ್ಯಾಂಕ್‌ ಗೆ ಹೋಗಿ ಪರಿಶೀಲನೆ ನಡೆಸಿ ಅನುಮಾನ ವ್ಯಕ್ತಪಡಿಸಿದ ಬಳಿಕ ಹಿರಿಯ ಅಧಿಕಾರಿಗಳು ಚಂದ್ರಶೇಖರ್‌ರವರಿಗೆ ವಿಚಾರಿಸಿದ್ದಾರೆ. ಲಾಗ್‌ ಬುಕ್‌ನಲ್ಲಿ ಎಂಟ್ರಿ ಮಾಡದೇ, ಲಾಗಿನ್‌ ಇಲ್ಲದೆ ಹಣ ವರ್ಗಾವಣೆ ಆಗಲು ಹೇಗೆ ಸಾಧ್ಯವಾಯ್ತು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಹಿರಿಯ ಅಧಿಕಾರಿಗಳು ವಿಷಯವನ್ನು ಸಚಿವರಿಗೆ ತಿಳಿಸಿದ್ದಾರೆ. ತಕ್ಷಣ ಕಠಿಣ ಕ್ರಮಕ್ಕೆ ಸಚಿವರು ಸೂಚಿಸಿದ್ದಾರೆ. ಆ ಬಳಿಕ ಚಂದ್ರಶೇಖರನ್‌ ರವರಿಗೆ ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಬೆಳವಣಿಗೆಗಳ ನಂತರ ಚಂದ್ರಶೇಖರನ್‌ ರವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಯಾವಾಗ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡರೋ ಅತ್ತ 28 ನೇ ತಾರೀಖು ಹಿರಿಯ ಅಧಿಕಾರಿ ಜನರಲ್‌ ಮ್ಯಾನೇಜರ್‌ ಎ ರಾಜಶೇಖರವರು ಇಡೀ ಪ್ರಕರಣದಲ್ಲಿ ಬ್ಯಾಂಕ್‌ ಸಿಬ್ಬಂದಿಗಳಿಂದಲೇ ಅಕ್ರಮವಾಗಿದೆ ಎಂದು ಆರೋಪಿಸಿ ಬೆಂಗಳೂರಿನ  ಹೈ ಗ್ರೌಂಡ್ಸ್‌ ಪೊಲೀಸ್‌ ಸ್ಟೇಷನ್‌ನಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ IPC 1860 (U/s-149,409,420,467,468,471) ಅಡಿಯಲ್ಲಿ ಹೈ ಗ್ರೌಂಡ್ಸ್‌ ಠಾಣೆ ಪೊಲೀಸರು ಎಫ್‌ಐಆರ್‌ ದಾಖಲಿಸಿ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಆರು ಮಂದಿಯನ್ನ ಆರೋಪಿಯನ್ನಾಗಿಸಿದ್ದಾರೆ. ಈ ಪೈಕಿ ಓರ್ವ ಮಹಿಳೆ ಏ ಒನ್‌ ಆರೋಪಿಯಾಗಿದ್ದು, ಇವರನ್ನ ಹೊರತುಪಡಿಸಿ ಓರ್ವ ಮಹಿಳೆ ಹಾಗೂ ನಾಲ್ವರು ಪುರುಷರು ಆರೋಪಿಗಳಾಗಿದ್ದಾರೆ. ಉಳಿದಂತೆ ಪ್ರಕರಣ ಸಂಬಂಧಿಸಿದಂತೆ ಆರೋಪಿಗಳ ಪೈಕಿ ಕೆಲವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. 

ಇದಿಷ್ಟು ಅಭಿವೃದ್ಧಿ ನಿಗಮದ ವರ್ಷನ್‌ ಆಗಿದ್ದು ಇನ್ನೂ ದಾಖಲಾದ ಎಫ್‌ಐಆರ್‌ನಲ್ಲಿರುವ ಅಂಶಗಳನ್ನು ವಿವರವಾಗಿ ಮುಂದಿನ ಭಾಗದಲ್ಲಿ ತಿಳಿಸುತ್ತೇವೆ. ಈ ನಡುವೆ ಅಭಿವೃದ್ಧಿ ನಿಗಮದ ಆಧಿಕಾರಿಗಳು ಚಂದ್ರಶೇಖರ್‌ರವರು ವಿಷಯ ಬೆಳಕಿಗೆ ತಂದಾಗಲೇ ಇಂತಹದ್ದೊಂದು ದೂರು ನೀಡಿದ್ದರೇ, ಪ್ರಕರಣದಲ್ಲಿ ಹಂಸ ಪಕ್ಷಿ ನ್ಯಾಯ ಸಿಗುತ್ತಿತ್ತೇನೋ?  

ವಿಶೇಷ ಅಂದರೆ, ಚಂದ್ರಶೇಖರನ್‌ ಅಂದಾಜು 85 ಕೋಟಿ ರೂಪಾಯಿ ಅಕ್ರಮವಾಗಿದೆ ಎಂದು ಡೆತ್‌ ನೋಟ್‌ನಲ್ಲಿ ತಿಳಿಸಿದ್ದಾರೆ. ಅಭಿವೃದ್ಧಿ ನಿಗಮದ ಎಂಡಿ ನೀಡಿದ ದೂರಿನಲ್ಲಿ  94,73,08,500 ಅಕ್ರಮವಾಗಿದೆ ಎಂದು ಆರೋಪಿಸಲಾಗಿದೆ. ಇಷ್ಟೊಂದು ಹಣ ಯಾರ ಖಾತೆಗೆ ಹೋಗಿದೆ ಎಂಬುದೇ ನಿಗೂಢ. ಸದ್ಯ ಯಾರ್ಯಾರ ಅಕೌಂಟ್‌ಗೆ ಜನರ ತೆರಿಗೆ ದುಡ್ಡು ಹೀಗೆ ವರ್ಗಾವಣೆಗೊಂಡಿದೆ. ಆ ಹಣ ವಾಪಸ್‌ ಬರುತ್ತಾ ಎನ್ನುವುದು ಮತ್ತೊಂದು ಅನುಮಾನ.. ಅದರ ಬಗ್ಗೆಯೇ ಡಿಟೇಲ್ಸ್‌ ಆಗಿ ಜನರಿಗೆ ತಿಳಿಸಬೇಕಾದ ಅನಿವಾರ್ಯತೆ ಇದೆ. ಇವೆಲ್ಲದರ ಹೊರತಾಗಿ ಚಂದ್ರಶೇಖರನ್‌ರನ್ನ ಸಿಲುಕಿಸುವ ಪ್ರಯತ್ನ ಇಲ್ಲಿ ಮೇಲ್ನೋಟಕ್ಕೆ ಕಾಣುತ್ತಿಲ್ಲ. ಅವರ ನಿರ್ಲಕ್ಷ್ಯದ ಬಗ್ಗೆಯಷ್ಟೆ ನಿಗಮ ಆರೋಪಿಸಿದೆ. ಆದರೆ ಅವರನ್ನ ಹೊಣೆಯಾಗಿಸಿಲ್ಲ.