ಆಸ್ತಿಗಾಗಿ ಮಗನ ಕಿರಿಕ್‌, ಮೊಬೈಲ್‌ಗಾಗಿ ಮಗಳ ಗಲಾಟೆ, ಮನೆ ಮಕ್ಕಳ ಗಲಾಟೆಗೆ ಪೊಲೀಸ್‌ ಮೊರೆಹೋಗ್ತಿರುವ ಪೋಷಕರು!

Property, money, mobile phones and drunken children at home! Parents complain to 112 police

ಆಸ್ತಿಗಾಗಿ ಮಗನ ಕಿರಿಕ್‌, ಮೊಬೈಲ್‌ಗಾಗಿ ಮಗಳ ಗಲಾಟೆ,  ಮನೆ ಮಕ್ಕಳ ಗಲಾಟೆಗೆ ಪೊಲೀಸ್‌ ಮೊರೆಹೋಗ್ತಿರುವ ಪೋಷಕರು!
112 police

Shivamogga  Mar 31, 2024 112 police ಎರಿಯಾಗಳಲ್ಲಿ ಏನೋ ನಡೆದರೇ ತಕ್ಷಣವೇ ಪೊಲೀಸರು ಅಲ್ಲಿಗೆ ತೆರಳಿ ಸಮಸ್ಯೆಯನ್ನು ಸ್ಥಳದಲ್ಲಿಯೇ ಇತ್ಯರ್ಥ ಪಡಿಸಲಿ. ದೊಡ್ಡದರಲ್ಲಿ ಆಗೋದು ಸಣ್ಣದರಲ್ಲಿಯೇ ತಪ್ಪಲಿ ಎಂಬುದು 112 ಇಆರ್‌ಎಸ್‌ಎಸ್‌ ಸರ್ವಿಸ್‌ ನ ಮುಖ್ಯ ಉದ್ದೇಶವಾಗಿದೆ. ಪ್ರತಿ ಇನ್ಸಿಡೆಂಟ್‌ಗೂ ಮೊದಲು ಮುಖಾಮುಖಿಯಾಗುವ ಈ ಸಿಬ್ಬಂದಿ ಅಪಾಯವನ್ನು ಸಹ ಎದುರುಹಾಕಿಕೊಳ್ಳುತ್ತಿರುತ್ತಾರೆ. ಇದರ ನಡುವೆ ಇತ್ತೀಚಗೆ ಮನೆಮಕ್ಕಳ ಗಲಾಟೆಯನ್ನು ಇತ್ಯರ್ಥ ಮಾಡುವ ಹೊಣೆಗಾರಿಕೆಯು 112 ಸಿಬ್ಬಂದಿಯ ಮೇಲೆ ಬರುತ್ತಿದೆ. ಏಕೆಂದರೆ ಅಸಹಾಯಕ ಫೋಷಕರು ಮನೆ ಮಕ್ಕಳ ಗಲಾಟೆ ತಡೆಯಲಾಗದೇ ಪೊಲೀಸರನ್ನು ತಮ್ಮ ಮನೆಗೆ ಕರೆಸುತ್ತಿದ್ದಾರೆ. 

ಈ ಮಾತು ಹೇಳಲು ಕಾರಣ ಕಳೆದ ಒಂದು ವಾರದಲ್ಲಿ ಇಂತಹ ನಾಲ್ಕು ಘಟನೆಗಳು ಶಿವಮೊಗ್ಗದಲ್ಲಿ ನಡೆದಿದೆ. ಆಸ್ತಿ ವಿಚಾರಕ್ಕೆ, ದುಡ್ಡಿನ ವಿಚಾರಕ್ಕೆ, ಮೊಬೈಲ್‌ ಕೊಡಿಸಿಲ್ಲ ಎಂದು ಹಾಗೆಯೇ ಕುಡಿದು ಬಂದು ಗಲಾಟೆ ಮಾಡುವ ಮಕ್ಕಳ ವಿರುದ್ಧ ಪೊಲೀಸರಿಗೆ ಪೋಷಕರು ದೂರು ಕೊಟ್ಟು ನೆರವು ಬೇಡಿದ್ದಾರೆ. ಇಂತಹ ವಿಚಾರಗಳಲ್ಲಿ ನೆಗ್ಲೆಟ್‌ ಮಾಡದೇ ಸ್ಥಳಕ್ಕೆ ತೆರಳುವ ಪೊಲೀಸರು ಪೋಷಕರ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ. ವಿಷಯವನ್ನು ಕುಟುಂಬದೊಳಗೆ ಇತ್ಯರ್ಥಗೊಳಿಸುವ ಮಾತು ಆಡಿ ಅಲ್ಲಿಯೇ ಸಂಬಾಳಿಸುವ ಪೊಲೀಸರು ತೀರಾ ಮಿತಿಮೀರಿ ವರ್ತಿಸಿದರೇ ಗಲಾಟೆ ಮಕ್ಕಳನ್ನ ಸ್ಟೇಷನ್‌ಗೆ ಕರೆಸುತ್ತಿದ್ದಾರೆ. 

ಉದಾಹರಣೆಗೆ ಹೇಳುವಾದರೆ, ದಿ:29.03.2024ರಂದು ಪೇಪರ್ ಟೌನ್ ಠಾಣಾ ವ್ಯಾಪ್ತಿಯಲ್ಲಿ ಮಗನೊಬ್ಬ ಮನೆಯಲ್ಲಿ ಸುಖಾಸುಮ್ಮನೆ ಕಿತ್ತಾಡುತ್ತಿದ್ದಾನೆ ಎಂದು ಪೋಷಕರು ದೂರು ಹೇಳಿಕೊಂಡಿದ್ದಾರೆ. ತಕ್ಷಣವೇ ಮನೆಗೆ ತೆರಳಿದ ಪೊಲೀಸರು ಆತನಿಗೆ ಸಲ್ಲುವ ಭಾಷೆಯಲ್ಲಿಯೇ ಆತನಿಗೆ ಬುದ್ದಿವಾದ ಹೇಳಿದ್ದಾರೆ. ವಿಷಯ ಅಲ್ಲಿಯೇ ಇತ್ಯರ್ಥವಾಗಿ ಗಲಾಟೆ ಗಪ್‌ಚುಪ್‌ ಆಗಿದೆ. 

ಇನ್ನೂ ಇದಕ್ಕೂ ಮೊದಲು ಅಂದರೆ, ದಿ:28.03.2024ರಂದು ತುಂಗಾ ನಗರ ಠಾಣಾ ವ್ಯಾಪ್ತಿಯಲ್ಲಿ ಹಿರಿಯ ಮಹಿಳೆಯೊಬ್ಬರು ಮಗರಾಯ ದುಡ್ಡಿನ ವಿಚಾರಕ್ಕೆ ಕ್ಯಾತೆ ತೆಗೆದು ಗಲಾಟೆ ಮಾಡ್ತಿದ್ದಾನೆ 112 ಗೆ ಕರೆ ಮಾಡಿ ಅಲವತ್ತುಕೊಂಡಿದ್ದಾಳೆ. ತಕ್ಷಣವೇ ಸ್ಥಳಕ್ಕೆ ಹೋದ ಸಿಬ್ಬಂದಿ, ಸಮಸ್ಯೆ ಆಲಿಸಿ ಮಹಿಳೆಯ ರಕ್ಷಣೆಗೆ ನಿಂತು ಸಮಸ್ಯೆ ಬಗೆಹರಿಸಿದ್ದಾರೆ. ಅಲ್ಲದೆ ಮತ್ತೆ ಹೀಗೆ ಆದರೆ, ದೂರು ಕೊಡಿ ಎಂದು ಸಲಹೆ ನೀಡಿ ಬಂದಿದ್ದಾರೆ. 

ಮತ್ತೊಂದು ಕಡೆ ದಿ:28.03.2024ರಂದು ಭದ್ರಾವತಿಯಲ್ಲಿ ಮಗಳೊಬ್ಬಳು ಮೊಬೈಲ್‌ಗೋಸ್ಕರ ಮನೆಯಲ್ಲಿ ಗಲಾಟೆ ಮಾಡಿದ್ದಾಳೆ. ಇದೇ ಕಾರಣಕ್ಕೆ ಪೋಷಕರು ಪೊಲೀಸರನ್ನ ಕರೆಸಿಕೊಂಡಿದ್ದಾರೆ. ಸ್ಥಳಕ್ಕೆ ಹೋದ ಸಿಬ್ಬಂದಿ ಮತ್ತೊಮ್ಮೆ ಹೀಗೆ ನಡೆದರೆ ವಿಷಯ ಸಂಬಂಧ ಸ್ಟೇಷನ್‌ಗೆ ಬಂದು ದೂರು ನೀಡುವಂತೆ ತಿಳಿಸಿದ್ದಾರೆ

ದಿ:28.03.2024ರಂದು ಹೊಸಮನೆ ಠಾಣಾ ವ್ಯಾಪ್ತಿಯಿಂದ ದೂರುದಾರರು 112ಗೆ ಕರೆ ಮಾಡಿ ತಮ್ಮ ಮಗಳು ಮೊಬೈಲ್ ಫೋನ್ ಕೊಡಿಸುವ ವಿಚಾರವಾಗಿ ಗಲಾಟೆ ಮಾಡಿಕೊಂಡಿರುವುದಾಗಿ ತಿಳಿಸಿರುತ್ತಾರೆ. ERV ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದಾಗ ಸದರಿ ದೂರುದಾರರ ಮಗಳು ಸ್ಥಳದಲ್ಲಿ ಇರುವುದಿಲ್ಲ, ಪುನಃ ಗಲಾಟೆ ಮಾಡಿದರೆ ಠಾಣೆಗೆ ಬಂದು ದೂರು ನೀಡಲು ತಿಳಿಸಿರುತ್ತಾರೆ.

ದಿ:27.03.2024ರಂದು ಸೊರಬ ಠಾಣಾ ವ್ಯಾಪ್ತಿಯಲ್ಲಿ ಪುತ್ರನೊಬ್ಬ ತನ್ನ ತಂದೆ ಜೊತೆ ಆಸ್ತಿ ಕೊಡು ಅಂತಾ ಗಲಾಟೆ ಮಾಡುತ್ತಿದ್ದ. ಮಕ್ಕಳು ಅಂತಾ ಆಸ್ತಿ ಕೊಟ್ರೆ ಹಳ್ತಿನ ಕಾಲಕ್ಕೆ ಬೀದಿಗೆ ತಳ್ಳುವ ಈ ಕಾಲದಲ್ಲಿ ಸಹಜವಾಗಿಯೇ ಪೋಷಕರು ತಮ್ಮ ಹುಷಾರಿನಲ್ಲಿ ತಾವು ಇರುತ್ತಾರೆ. ಇನ್ನೂ ಈ ಪ್ರಕರಣದಲ್ಲಿ ಮಗನ ಉಪದ್ರ ತಡೆಯಲಾಗದೇ ಪೊಲೀಸರಿಗೆ ತಂದೆ ಕರೆಮಾಡಿದ್ದಾನೆ. ಸ್ಥಳಕ್ಕೆ ಬಂದ ಸಿಬ್ಬಂದಿಗಳು ತಿಳುವಳಿಕೆ ಹೇಳಿ ಮಗನನ್ನ ಸಮಾಧಾನ ಮಾಡಿದರೆ, ಪೋಷಕರಿಗೆ  ಪೊಲೀಸ್‌ ರಕ್ಷಣೆಯ ದೈರ್ಯ ತುಂಬಿದ್ದಾರೆ. 

ಹೀಗೆ ಶಿವಮೊಗ್ಗದಲ್ಲಿ ಒಂದಲ್ಲ ಒಂದು ಕಡೆಯಲ್ಲಿ 112 ERSS ಸಿಬ್ಬಂದಿ ಅಟೆಂಡ್‌ ಮಾಡುತ್ತಿರುವ ಕೇಸ್‌ಗಳಲ್ಲಿ ಮನೆ ಮನೆ ತಾಪತ್ರಯಗಳು ಬಯಲಾಗುತ್ತಿವೆ. ಕುಡಿದು ಬಂದವರ ಹಾರಾಟ, ಹಾದಿ ಬೀದಿ ಜಗಳ, ಪುಂಡರ ಪುಂಡಾಟ, ಹೀಗೇ ಸಾಮಾಜಿಕ ಶಾಂತಿಗೆ ಭಂಗ ತರುವ ಪ್ರಯತ್ನಗಳ ವಿರುದ್ಧ ಹಗಲು ರಾತ್ರಿ ದುಡಿಯುವ 112 ಗೆ ಈ ಮಕ್ಕಳ ಗಲಾಟೆಗಳನ್ನ ಬಿಡಿಸುವುದು ತುಸು ಕಷ್ಟವೇ ಆಗಿರುತ್ತದೆ. ಆದಾಗ್ಯು ನೋಂದವರ ಧ್ವನಿಯಾಗುತ್ತಿರುವ ಶಿವಮೊಗ್ಗ ಪೊಲೀಸ್‌ 112 ಸಿಬ್ಬಂದಿಗಳಿಗೆ ಥ್ಯಾಂಕ್ಸ್‌ ಹೇಳಲೇಬೇಕಿದೆ.