ಯುವತಿಯೊಬ್ಬಳಿಗಾಗಿ ರಾತ್ರಿಯಿಡಿ ಶಿವಮೊಗ್ಗ ಪೊಲೀಸರ ಹುಡುಕಾಟ | ಬೆಳಗ್ಗೆ ತೋಟದ ಶೆಡ್‌ನಲ್ಲಿ ಆಕೆ ಪತ್ತೆ |

ಯುವತಿಯೊಬ್ಬಳಿಗಾಗಿ ರಾತ್ರಿಯಿಡಿ ಶಿವಮೊಗ್ಗ ಪೊಲೀಸರ ಹುಡುಕಾಟ | ಬೆಳಗ್ಗೆ ತೋಟದ ಶೆಡ್‌ನಲ್ಲಿ ಆಕೆ ಪತ್ತೆ | ಯುವಕರ ಜೊತೆಗೆ ಹೋದವಳನ್ನ ಲೋಕಲ್‌ ಹುಡುಗರು ಕರೆದೊಯ್ದಿದ್ದು ಎಲ್ಲಿಗೆ? ನಡೆದಿದ್ದೇನು?

ಯುವತಿಯೊಬ್ಬಳಿಗಾಗಿ ರಾತ್ರಿಯಿಡಿ  ಶಿವಮೊಗ್ಗ ಪೊಲೀಸರ ಹುಡುಕಾಟ | ಬೆಳಗ್ಗೆ ತೋಟದ ಶೆಡ್‌ನಲ್ಲಿ ಆಕೆ ಪತ್ತೆ |
today crime report, shivamogga police

SHIVAMOGGA | MALENADUTODAY NEWS | Jul 3, 2024  ಮಲೆನಾಡು ಟುಡೆ   

ಶಿವಮೊಗ್ಗದ ಗಾಜನೂರು ಸಮೀಪ ನಿನ್ನೆ ವಿಭಿನ್ನವಾದ ಘಟನೆಯೊಂದು ನಡೆದಿದ್ದು ಇವತ್ತು ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಅಲ್ಲದೆ ಯುವತಿಯೊಬ್ಬಳ ವಿಚಾರ ಇದೀಗ ಪೊಲೀಸ್‌ ಠಾಣೆಯ ಮೆಟ್ಟಿಲೇರಿದೆ. ಮಲೆನಾಡು ಟುಡೆಗೆ ಲಭ್ಯವಾದ ಮಾಹಿತಿ ಪ್ರಕಾರ, ನಾಲ್ವರು ಯುವಕರು ಶಿವಮೊಗ್ಗ ಜಿಲ್ಲೆಯ ಹಾಸ್ಟೆಲ್‌ ವೊಂದರಲ್ಲಿರುವ ವಿದ್ಯಾರ್ಥಿಯೊಬ್ಬಳನ್ನ ಒಮಿನಿ ವಾಹನದಲ್ಲಿ ಗಾಜನೂರು ಕಡೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ. (ಯಾವುದೆ ವೈಯಕ್ತಿಕ ವಿವರಗಳನ್ನ ನೀಡಲಾಗುವುದಿಲ್ಲ)

ನದೀ ತೀರದಲ್ಲಿ ನಡೆದಿದ್ದೇನು?

ಸಾಮಾನ್ಯವಾಗಿ ಗಾಜನೂರು ಡ್ಯಾಂ ನೋಡಲು ಹಲವಾರು ಮಂದಿ ತೆರಳುತ್ತಾರೆ. ಆದರೆ ಕತ್ತಲಾದ ಬಳಿಕ ಇಬ್ಬರು ಯುವಕರು ಯುವತಿಯ ಜೊತೆಗೆ ತೆರಳಿದ್ದಾರೆ. ಆದರೆ ಅಲ್ಲಿ ಏನಾಯ್ತು ಎಂಬುದು ತಿಳಿದಿಲ್ಲವಾದರೂ, ಒಂದು ಕಾರಣಕ್ಕೆ  ಯುವಕರ ನಡುವೆ ಹಾಗೂ ಅವರ ಜೊತೆಗೆ ಬಂದಿದ್ದ ಯುವತಿ ನಡುವೆ ಜಗಳವಾಗಿದೆ ಎನ್ನಲಾಗಿದೆ. ಇದನ್ನ ಅಲ್ಲಿದ್ದ ಸ್ಥಳೀಯ ಯುವಕರು ಗಮನಿಸಿದ್ದಾರೆ. ಅಲ್ಲದೆ ಮಧ್ಯಪ್ರವೇಶ ಮಾಡಿ ಯುವತಿ ಜೊತೆಗೆ ಬಂದಿದ್ದ ಯುವಕರಿಗೆ ಹೊಡೆದು ಓಡಿಸಿದ್ದಾರೆ. ಅಲ್ಲದೆ ಯುವತಿಯನ್ನ ತರಾಟೆ ತೆಗೆದುಕೊಂಡ ನಾಲ್ವರಿದ್ದ ಸ್ಥಳೀಯ ಯುವಕರು ಆಕೆಯನ್ನ ಅಲ್ಲಿಂದ ಕರೆದೊಯ್ದಿದ್ದಾರೆ. ಅವರು ಹೀಗೆ ಎಲ್ಲಿಗೆ ಕರೆದೊಯ್ದರು ಎಂಬುದು ನಿಗೂಢವಾಗಿತ್ತು. 

ಪೊಲೀಸರಿಗೆ ದೂರು ಕೊಟ್ಟ ಯುವಕರು

ಇದಾದ ಬಳಿಕ ಇತ್ತ ಸ್ಥಳೀಯ ಯುವಕರ ಪೆಟ್ಟಿಗೆ ಓಡಿಹೋಗಿದ್ದ ಯುವತಿ ಜೊತೆಗೆ ಬಂದಿದ್ದವರು ನೇರವಾಗಿ ಶಿವಮೊಗ್ಗ ಜಿಲ್ಲೆಯ ಪೊಲೀಸ್‌ ಠಾಣೆಯೊಂದಕ್ಕೆ ತೆರಳಿ ಹೀಗೆ ತಮ್ಮೊಂದಿಗೆ ಬಂದಿದ್ದ ಯುವತಿ ಕಿಡ್ನ್ಯಾಪ್‌ ಆಗಿದ್ದಾಳೆ ಎಂದು ದೂರು ಹೇಳಿದ್ದಾರೆ. ಕತ್ತಲ ರಾತ್ರಿಯ ನಡುವೆಯು ಪೊಲೀಸರು ಪ್ರಕರಣವನ್ನು ತುಂಬಾನೇ ಗಂಭೀರವಾಗಿ ಪರಿಗಣಿಸಿದ್ದಾರೆ. ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಆ ಬಳಿಕ ವಿಶೇಷ ತಂಡಗಳು ರಚನೆಯಾಗಿ ವಿವಿಧ ಆಯಾಮಗಳಲ್ಲಿ ಯುವತಿಯನ್ನ ಹುಡುಕಲು ಪೊಲೀಸರು ಆರಂಭಿಸಿದ್ದಾರೆ. ರಾತ್ರಿಯಿಡಿ ಪೊಲೀಸರು ಯುವತಿಗಾಗಿ ಹುಡುಕಾಡಿದ್ದಾರೆ. ತೀವ್ರ ಪ್ರಯತ್ನದ ನಡುವೆಯು ರಾತ್ರಿ ಯುವತಿ ಪತ್ತೆಯಾಗಿರಲಿಲ್ಲ. 

ಬೆಳಗ್ಗೆ ಪತ್ತೆಯಾದ ಯುವತಿ

ಇವತ್ತು ಬೆಳಗ್ಗೆ ಯುವತಿ ತೋಟವೊಂದರಲ್ಲಿದ್ದ ಶೆಡ್‌ ರೀತಿಯ ಮನೆಯೊಂದರಲ್ಲಿ ಪತ್ತೆಯಾಗಿದ್ದಾಳೆ. ಪರಿಣಾಮ ಪೊಲೀಸರಿಗೆ ನಿಟ್ಟುಸಿರು ಇಳಿದಿದೆ. ಯುವತಿಯನ್ನ ರಕ್ಷಿಸಿದ ಪೊಲೀಸರು ಆಕೆಯನ್ನು ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಪೂರ್ತಿ ಮಾಹಿತಿಯನ್ನು ಪಡೆದುಕೊಳ್ಳುವ ಸಲುವಾಗಿ ಸಂಬಂಧ ಪಟ್ಟ ಎಲ್ಲರನ್ನು ಪೊಲೀಸರು ಎನ್‌ಕ್ವೈರಿಗೆ ಒಳಪಡಿಸುತ್ತಿದ್ದಾರೆ. ಮೇಲಾಗಿ ಯುವಕರ ಮೇಲೆ ಹಲ್ಲೆ ಮಾಡಿದ್ದ ಸ್ಥಳೀಯ ಯುವಕರ ಗುರುತು ಪತ್ತೆಮಾಡಿ ಅವರನ್ನ ವಿಚಾರಣೆಗೆ ಒಳಪಡಿಸಲು ಮುಂದಾಗಿದ್ದಾರೆ. ಒಟ್ಟಾರೆ ಯುವತಿಯ ನಾಪತ್ತೆ ಪ್ರಕರಣವೊಂದು ನಿನ್ನೆ ರಾತ್ರಿಯಿಡಿ ಪೊಲೀಸರಿಗೆ ಡ್ಯೂಟಿಕೊಟ್ಟಿತ್ತು. ಸದ್ಯ ಯುವತಿಯನ್ನ ಪೊಲೀಸರು ರಕ್ಷಣೆ ಮಾಡಿದ್ದಾರೆ. ಅಲ್ಲಿ ನಿಜಕ್ಕೂ ಏನಾಗಿದೆ ಎಂಬುದು ಇನ್ನಷ್ಟೆ ತನಿಖೆಯಲ್ಲಿ ಗೊತ್ತಾಗಬೇಕಿದೆ. 

ಮಳೆಗಾಲ ಮಲೆನಾಡು ಚೆಂದ, ಥಂಡಿ ಹಿಡಿದ ಊರಿನಲ್ಲಿ , ಮನಸ್ಸು ತಿರುಗಾಟವನ್ನೆ ಬಯಸುತ್ತದೆ ನಿಜ. ಹಾಗಂತ ಸಿಕ್ಕಸಿಕ್ಕವರನ್ನ ನಂಬಿಕೊಂಡು ಎಲ್ಲಿಗೂ ಹೋಗಲಾಗದು ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.