Good Shepherd Church shivamogga | ಶಿವಮೊಗ್ಗದಲ್ಲಿ ನಿರ್ಮಾಣವಾಗಿದೆ ನೂತನ ಚರ್ಚ್!‌ ಇದೆ ವೈಶಿಷ್ಟತೆ ಗೊತ್ತಾ?

Good Shepherd Church shivamogga | A new church has come up in Shivamogga. Do you know this feature?

Good Shepherd Church shivamogga | ಶಿವಮೊಗ್ಗದಲ್ಲಿ ನಿರ್ಮಾಣವಾಗಿದೆ ನೂತನ ಚರ್ಚ್!‌ ಇದೆ ವೈಶಿಷ್ಟತೆ ಗೊತ್ತಾ?
Good Shepherd Church shivamogga

shivamogga Mar 17, 2024 ಇದೇ ಮಾರ್ಚ್ 19 ರಂದು ಶಿವಮೊಗ್ಗದ ಗೋಪಾಳದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಗುಡ್ ಶೆಪರ್ಡ್ ಚರ್ಚ್‌ನ ಆಶೀರ್ವಚನ ಮತ್ತು ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಶಿವಮೊಗ್ಗದ ಬಿಷಪ್ ಫ್ರಾನ್ಸಿಸ್ ಸೆರಾವೊ, ಎಸ್.ಜೆ. ಇವರು ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

 Good Shepherd Church shivamogga

ಗುಡ್ ಶೆಪರ್ಡ್ ಚರ್ಚ್‌

 

ಅದರ ಜೊತೆಗೆ ಚರ್ಚ್ ಆವರಣದಲ್ಲಿ ನಿರ್ಮಾಣಗೊಂಡಿರುವ ಲೂರ್ದ್ ಮೇರಿಮಾತೆಯ ಗವಿಯನ್ನು ಭದ್ರಾವತಿಯ ಬಿಷಪ್ ಜೋಸೆಫ್ ಅರುಮಚಾಡತ್, ಶಿಲುಬೆಯ ಹಾದಿಯ ಸ್ಥಳಗಳನ್ನು ಪುತ್ತೂರಿನ ಬಿಷಪ್ ಗೀವರ್ಗೀಸ್ ಮಕಾರಿಯೊಸ್ ಕಲಾಯಿಲ್,  ಹಾಗೂ ನಿತ್ಯ ಆರಾಧನೆಯ ಆರಾಧನಾಲಯವನ್ನು ಕಾರವಾರದ ನಿಯೋಜಿತ ಬಿಷಪ್ ಡುಮಿಂಗ್ ಡಾಯಸ್ ಇವರು ಆಶೀರ್ವದಿಸಿ ಲೋಕಾರ್ಪಣೆಗೊಳಿಸಲಿದ್ದಾರೆ. ಚಿಕ್ಕಮಗಳೂರಿನ ಬಿಷಪ್ ತೋಮಾಸಪ್ಪ ಅಂತೋಣಿ ಸ್ವಾಮಿ ಇವರು ಪ್ರವೇಶದ್ವಾರವನ್ನು ಆಶೀರ್ವದಿಸಲಿದ್ದಾರೆ. ಹಾಗೆಯೇ ಬಳ್ಳಾರಿಯ ಬಿಷಪ್  ಹೆನ್ರಿ ಡಿ'ಸೋಜ ಇವರು ಪ್ರವಚನವನ್ನು ನೀಡಲಿದ್ದಾರೆ. ಸಂಜೆ 3.45 ಗಂಟೆಗೆ, ಧಾರ್ಮಿಕ ಪೂಜಾವಿಧಿಗಳೊಂದಿಗೆ ಆರಂಭವಾಗಲಿರುವ ಈ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ರಾಜ್ಯದ ನೂರಾರು ಕ್ರೈಸ್ತ ಗುರುಗಳು, ಧಾರ್ಮಿಕ ಸಹೋದರಿಯರು ಮತ್ತು 3,000 ಹೆಚ್ಚು  ಭಕ್ತಾದಿಗಳು ಭಾಗವಹಿಸಲಿದ್ದಾರೆ.

 Good Shepherd Church shivamogga

ಚರ್ಚ್‌ನ ವೈಶಿಷ್ಟತೆ 

 

ಸುಮಾರು 600 ಮಂದಿ ಆಸೀನರಾಗಬಹುದಾದಂತಹ ಈ ಚರ್ಚ್ ಅನ್ನು ರೋಮನ್ ಗೋಥಿಕ್ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಗಿದೆ. ನೆಲಮಟ್ಟದಿಂದ ಒಟ್ಟು 78 ಅಡಿ ಎತ್ತರವಿರುವ ಈ ಚರ್ಚ್ ಒಂದು ಭವ್ಯ ಘಂಟಾಗೋಪುರ ಮತ್ತು ಎರಡು ಕಿರಿಯ ಗೊಪುರಗಳನ್ನು ಒಳಗೊಂಡಿದೆ. ಲೋಕ ರಕ್ಷಕ ಯೇಸು, ಗುಡ್ ಶೆಪರ್ಡ್‌ಗೆ ಸಮರ್ಪಣೆಯಾಗಿರುವ ಈ ಚರ್ಚ್ ಹಲವು ವೈಶಿಷ್ಟ್ಯತೆಗಳನ್ನು ಹೊಂದಿದೆ. 

 

ಪ್ರವೇಶ ಗೇಟ್‌ನ ಸ್ಥಂಭಗಳ ಮೇಲೆ ಪ್ರತಿಷ್ಟಾಪನೆಗೊಂಡಿರುವ ದೇವದೂತರು ಭಕ್ತಾದಿಗಳನ್ನು ಕೈಬೀಸಿ ಕರೆಯುತ್ತಾರೆ. ಹಾಗೆಯೇ ಯೇಸುವಿನ 12 ಮಂದಿ ಶಿಷ್ಯರ 6 ಆಡಿಯ ಪ್ರತಿಮೆಗಳನ್ನು ರೋಮನ್ ಶೈಲಿಯಲ್ಲಿ 12 ಸ್ಥಂಭಗಳ ಮೇಲೆ ಪ್ರತಿಷ್ಟಾಪಿಸಲಾಗಿದೆ. ಯೇಸುವಿನ ಜನನ, ಜೀವನ, ಮರಣ, ಪುನರುತ್ಥಾನ ಹಾಗೂ ತದನಂತರದ ಬಹು ಮುಖ್ಯ ಘಟನೆಗಳನ್ನು ವರ್ಣರಂಜಿತ ಗಾಜುಗಳಿಂದ ವಿನ್ಯಾಸಗೊಳಿಸಲಾಗಿದೆ. 

 Good Shepherd Church shivamogga

 

ಯೇಸುವಿನ ಜನನ ಮತ್ತು ಪುನರುತ್ಥಾನವನ್ನು ಪ್ರತಿನಿಧಿಸುವ ಪ್ರತಿಮೆಗಳು ಹಾಗೂ ಎಡಬದಿಯಲ್ಲಿ ಬಾಲಯೇಸು ಪ್ರತಿಮೆ ಮತ್ತು ಬಲಬದಿಯಲ್ಲಿ ವೇಲಾಂಗಯ ಮೇರಿಮಾತೆಯ ಪ್ರತಿಮೆಗಳು ಭಕ್ತಾದಿಗಳನ್ನು ಸ್ವಾಗತಿಸುತ್ತವೆ. ಪ್ರವೇಶ ದ್ವಾರದ ಮೇಲೆ ಕ್ಯಾಥೋಲಿಕ ಕ್ರೈಸ್ತ ಸಭೆಯ ಮೂಲಪುರುಷರೆಂದೇ ಗೌರವಿಸಲ್ಪಡುವ ಸಂತ ಪೇತ್ರ ಮತ್ತು ಸಂತ ಪೌಲರ ಚಿತ್ರಗಳನ್ನು ಕೆತ್ತಿಸಲಾಗಿದೆ. ಚರ್ಚ್‌ನ ಮುಖ್ಯ ಬಲಿಪೀಠದ ವೇದಿಕೆಯನ್ನು ಪೋರ್ಚಗೀಸ್ ಮತ್ತು ಗೋವಾದ ಚರ್ಚ್ ವಾಸ್ತುಶಿಲ್ಪದಂತೆ ನಿರ್ಮಿಸಲಾಗಿದೆ. 

 

50 ಅಡಿ ಅಗಲ ಮತ್ತು 25 ಅಡಿ ಎತ್ತರವಿರುವ, ಅತ್ಯಂತ ಆಕರ್ಷಕ ಕೆತ್ತನೆಯನ್ನು ಒಳಗೊಂಡಿರುವ ಈ ವೇದಿಕೆಯ ಮೇಲೆ ಮರದಲ್ಲಿ ಕೆತ್ತಲಾಗಿರುವ ಶಿಲುಬೆ, ಪರಮ ಪ್ರಸಾದದ ಪೆಟ್ಟಿಗೆ, ಗುಡ್ ಶೆಪರ್ಡ್, ಕಾರ್ಮೆಲ್ ಮಾತೆ, ಸಂತ ಜೋಸೆಫ್ ಮತ್ತು ಸಂತ ಅಂತೋಣಿಯವರ ಪ್ರತಿಮೆಗಳು ಪ್ರತಿಷ್ಟಾಪನೆಗೊಂಡಿವೆ. ದೇವಾಲಯದ ದ್ವಾರಗಳು ಮತ್ತು ಕಿಟಕಿಗಳನ್ನು ಗೋಥಿಕ್ ಶೈಲಿಯಲ್ಲಿ ವಿನ್ಯಾಸಗೊಳಿಸಿದ್ದು ಇವುಗಳ ಮೇಲೆ ಯೇಸುವಿನ ಪೂಜ್ಯ ಯಾತನೆ ಮತ್ತು ಮರಣದ ಶಿಲುಬೆಯ ಹಾದಿಯ 16 ಘಟನೆಗಳನ್ನು ವರ್ಣರಂಜಿತ ಗಾಜಿನಲ್ಲಿ ನಿರ್ಮಿಸಲಾಗಿದೆ. 

 

ಚರ್ಚ್‌ ಗೋಡೆಯ ಮೇಲೆ 16 ಕಥೋಲಿಕ ಕ್ರೈಸ್ತ ಚಿಹ್ನೆಗಳನ್ನು ಕೆತ್ತಿಸಲಾಗಿದೆ. ಸುಮಾರು 100 ಮಂದಿ ಕುಳಿತುಕೊಳ್ಳಬಹುದಾದ ಗ್ಯಾಲರಿ, ಇಡೀ ಚರ್ಚ್‌ಗೆ ಬೇಕಾಗುವಷ್ಟು ಗಾಳಿಯನ್ನು ನೀಡುವ ಏಕ ಫ್ಯಾನು, ಪಾಪನಿವೇದನೆಯ ಪೀಠ, ದೀಕ್ಷಾಸ್ನಾನದ ಪೀಠ, ನಿತ್ಯಧಾರ ಮಾತೆಯ ಪೀಠ ಹಾಗೂ ದೈವಿಕ ಕರುಣೆಯ ಪೀಠವನ್ನೂ ನಿರ್ಮಿಸಲಾಗಿದೆ. ಚರ್ಚ್ ನ ಸುತ್ತಲೂ ನಿರ್ಮಿಸಲಾಗಿರುವ ಉದ್ಯಾನ ಚರ್ಚ್‌ನ ಮೆರಗನ್ನು  ಇನ್ನಷ್ಟು ಹೆಚ್ಚಿಸಿದೆ.

 Good Shepherd Church shivamogga

ಈ ಚರ್ಚ್‌ನ ಹಿನ್ನಲೆ 

 

ಶಿವಮೊಗ್ಗದ ಗೋಪಾಳದಲ್ಲಿರುವ ಗುಡ್ ಶೆಪರ್ಡ್ ಧರ್ಮಕೇಂದ್ರವನ್ನು  ಈ ಹಿಂದೆ 2012 ರಲ್ಲಿ ಸ್ಥಾಪಿಸಲಾಗಿತ್ತು. ಅದುವರೆಗೆ ಇದು ಶರಾವತಿನಗರದ ಇನ್‌ಫೆಂಟ್ ಜೀಸಸ್ ಚರ್ಚ್‌ನ ಭಾಗವಾಗಿತ್ತು. ಗೋಪಾಳ ಪ್ರದೇಶ ಅಭಿವ್ರದ್ಧಿ ಹೊಂದುತ್ತಿದ್ದಂತೆ ನೂರಾರು ಕಥೋಲಿಕ ಕ್ರೈಸ್ತ ಕುಟುಂಬಗಳು ಈ ವ್ಯಾಪ್ತಿಯಲ್ಲಿ ವಾಸ ಮಾಡಲು ಆರಂಭಿಸಿದ್ದರಿಂದ ಅವರ ಧಾರ್ಮಿಕ ಮತ್ತು ಆಧ್ಯಾತ್ಮಿಕ ಅಗತ್ಯಗಳಿಗೆ ಪ್ರತಿಸ್ಪಂದಿಸಲು ಈ ಭಾಗದಲ್ಲಿ ನೂತನ ಧರ್ಮಕೇಂದ್ರ ಮತ್ತು ಚರ್ಚ್‌ನ ಅವಶ್ಯಕತೆ ಕಂಡು ಬಂದಿತು. 

 Good Shepherd Church shivamogga

 

ಅರ್ಥಿಕ ಸಂಪನ್ಮೂಲಗಳ ಕೊರತೆಯ ಕಾರಣ 2011ರಲ್ಲಿ ಕೇವಲ 180 ಜನರು ಒಟ್ಟು ಸೇರಬಹುದಾದಂತಹ ಒಂದು ಪುಟ್ಟ ಚರ್ಚ್ ಅನ್ನು ನಿರ್ಮಿಸಲಾಗಿತ್ತು. ಪ್ರಸ್ತುತ 142 ಕ್ರೈಸ್ತ ಕುಟುಂಬಗಳಿಂದ ಸುಮಾರು 600 ಕಥೋಲಿಕ್ ಕ್ರೈಸ್ತ ಜನರು ಈ ವ್ಯಾಪ್ತಿಯಲ್ಲಿ ವಾಸ ಮಾಡುತ್ತಿದ್ದು ಅವರೆಲ್ಲರ ಧಾರ್ಮಿಕ ಮತ್ತು ಆಧ್ಯಾತ್ಮಿಕ ಅಗತ್ಯಗಳಿಗೆ ಪ್ರಸ್ತುತ ಇದ್ದ ಚರ್ಚ್ ಸಾಲದೇ ಹೋಗುತ್ತಿತ್ತು, ಅಲ್ಲದೇ ಈ ಭಾಗದಲ್ಲಿ ನೂತನ ವಸತಿ ಬಡಾವಣೆಗಳು ಅಭಿವೃದ್ಧಿ ಹೊಂದುತ್ತಿದ್ದು ಇನ್ನೂ ಹೆಚ್ಚಿನ ಕ್ರೈಸ್ತರು ಈ ಭಾಗಕ್ಕೆ ವಲಸೆ ಬಂದು ವಾಸ ಮಾಡುವ ಸಾಧ್ಯತೆ ಇರುವುದರಿಂದ ಒಂದು ವಿಸ್ತ್ರತ ಚರ್ಚ್‌ ಅಗತ್ಯ ಕಂಡು ಬಂದಿತು. ಅಂತೆಯೇ ಇಲ್ಲಿನ ಕಥೋಲಿಕ ಕ್ರೈಸ್ತರೆಲ್ಲರೂ ಒಟ್ಟು ಸೇರಿ ತಮ್ಮ ದೇಣಿಗೆಯನ್ನು ನೀಡಿ ಹಾಗೂ ಇತರರಿಂದ ದೇಣಿಗೆ ಸಂಗ್ರಹ ಮಾಡಿ ಒಂದು ಸುಂದರವಾದ ಭವ್ಯ ಚರ್ಚ್‌ನ್ನು ‌ನಿರ್ಮಿಸಲಾಗಿದೆ.