ತೀರ್ಥಹಳ್ಳಿಯಲ್ಲಿ KGF ಸ್ಟೈಲ್​ನ ನರಾಚಿ! OC ನಲ್ಲೇ ಜೀತ! ಧರ್ಮದೇಟಿನ ಕೂಲಿ! 1-2 ಕ್ಕೂ ಸಂಕಷ್ಟ! JP BIG EXClUSiVE

Narachi of KGF style in Thirthahalli. JP BIG EXClUSiVE on the dark business of not paying wages, giving liquor and employing workers

ತೀರ್ಥಹಳ್ಳಿಯಲ್ಲಿ KGF ಸ್ಟೈಲ್​ನ ನರಾಚಿ! OC ನಲ್ಲೇ ಜೀತ! ಧರ್ಮದೇಟಿನ ಕೂಲಿ! 1-2 ಕ್ಕೂ ಸಂಕಷ್ಟ! JP BIG EXClUSiVE
Narachi of KGF style in Thirthahalli. JP BIG EXClUSiVE on the dark business of not paying wages,

SHIVAMOGGA  |  Jan 16, 2024  |   ಶಿವಮೊಗ್ಗ ಜಿಲ್ಲೆಯಲ್ಲಿ ಹೊರಗಿನವರನ್ನ ಕರೆದುಕೊಂಡು ಬಂದು ಅನಾಮತ್ತಾಗಿ ದುಡಿಸಿಕೊಳ್ಳುವ ಜೀತದಾಳಿನ ಪದ್ದತಿ ಜಾರಿಯಲ್ಲಿದೆಯಾ? ಈ ಅನುಮಾನ ಇವತ್ತು ನಿನ್ನೆಯದ್ದಲ್ಲ,  ದಿನಕ್ಕೆ ಎರಡು ಹೊತ್ತು ಊಟ ಹಾಗೂ ಮೂರು ಹೊತ್ತು ಎಣ್ಣೆ ಕೊಟ್ಟು ತೋಟದ ಕೂಲಿಗೆ ಹಾಕುವ ಕ್ರೂರ ಪದ್ದತಿ ಜಾರಿಯಲ್ಲಿದೆ. ಇದು ಮಲೆನಾಡು ಟುಡೆಯ ಬಿಗ್ ಎಕ್ಸ್​ ಕ್ಲ್ಯೂಸಿವ್.. ಸ್ಟೋರಿ 

ಜೆಪಿ ಬರೆಯುತ್ತಾರೆ 

ಮಲೆನಾಡಿನಲ್ಲಿ ಬೆಳಕಿಗೆ ಬಂದ ಕೆಜಿಎಫ್ ಸಿನಿಮಾ ಮಾದರಿಯ ಜೀತ ಪದ್ಧತಿ ಹಣ ನೀಡದೆ ಎಣ್ಣೆಯ ಅಮಲಿನಲ್ಲೇ ದಿನವಿಡೀ ದುಡಿಸಿಕೊಳ್ಳುವ ದಂಧೆಕೋರರ ಜಾಲದ ಬಗ್ಗೆ ಜೆಪಿ ಬರೆಯುತ್ತಾರೆ

ಓದುಗರೆ, ಮಲೆನಾಡು  ಮಡಿಲಲ್ಲಿ ಕಣ್ಣಿಗೆ ಕಾಣದ ಸಂಗತಿಗಳನ್ನ ನಿಮ್ಮ ಮುಂದೆ ಇಡುವುದೆ ಮಲೆನಾಡು ಟುಡೆ ಮೀಡಿಯಾ ಮುಖ್ಯ ಉದ್ದೇಶ. ಈ ನಿಟ್ಟಿನಲ್ಲಿ ಈಗಾಗಲೇ ಹಲವು ವರದಿಗಳನ್ನ ನಿಮ್ಮ ಓದುವಿಕೆಯ ಅಂಗಳಕ್ಕೆ ತಲುಪಿಸಿದ್ದೇವೆ.. ಇವತ್ತಿನ ಈ ಸ್ಟೋರಿ ನೀವುಗಳು ಹಿಂದೆ ಕೇಳದೆ ಇರುವಂತದ್ದು. ಸದ್ಯ ಮಾಳೂರು ಪೊಲೀಸ್ ಸ್ಟೇಷನ್​ ಪೊಲೀಸರು ಇಂತಹದ್ದೊಂದು ಕರಾಳ ದಂಧೆಯ ಮುಖವಾಡವನ್ನ ಬಯಲು ಮಾಡಿದ್ದಾರೆ. ಬಂದ ಕಂಪ್ಲೆಂಟ್ ಒಂದನ್ನ ಆಧರಿಸಿ ಪ್ರಕರಣದ ಮೂಲಕ್ಕೆ ಕೈ ಹಾಕಿದ್ದಾರೆ 

ಕೆಜಿಎಫ್​ ಸಿನಿಮಾ ಸ್ಟೈಲ್​ನ ನರಾಚಿ ಸಾಮ್ರಾಜ್ಯ. 

ಶಿವಮೊಗ್ಗದಲ್ಲಿದೆ ಕೆಜಿಎಫ್​ ಸಿನಿಮಾ ಸ್ಟೈಲ್​ನ ನರಾಚಿ ಸಾಮ್ರಾಜ್ಯ. ನಿಜ..ಕೇವಲ ಶಿವಮೊಗ್ಗ ಅಷ್ಟೆಅಲ್ಲದೆ ಹುಡುಕಿದರೆ ನೆರೆಹೊರೆಯ ಜಿಲ್ಲೆಯಲ್ಲಿ ಈ ಅನಧಿಕೃತ ಸಾಮ್ರಾಜ್ಯಗಳ ಸಂಸ್ಥಾನಗಳು ಸಿಗಬಹುದು. ಇಲ್ಲಿನ  ಮನುಷ್ಯರನ್ನು ಮನುಷ್ಯರಂತೆ ಕಾಣದೆ ಮೃಗಗಳ ರೀತಿಯಲ್ಲಿ ನೋಡಲಾಗುತ್ತದೆ. 

ಜೈಲು, ಕಾವಲು, ಬೆದರಿಕೆ

ಜೈಲಿನ ವಾತಾವರಣದಲ್ಲಿಯೇ ಇರಿಸಲಾಗುತ್ತದೆ. ದಿನರಾತ್ರಿ ದುಡಿಸಿಕೊಳ್ಳುತ್ತಾಗುತ್ತದೆ. ಕಾವಲಿಗೆ ಜನರಿರುತ್ತಾರೆ. ಬಿಟ್ಟು ಓಡಿದರೆ ಹೊಡೆದು ಮಲಗಿಸುತ್ತಾರೆ. ಕೂಲಿ ನೀಡದೆ ಕೂಲಿ ಮಾಡಿಸಿಕೊಳ್ಳುತ್ತಿರುವ ವಿಕೃತ ಮೇಸ್ತ್ರಿಗಳ ಬಣ್ಣ ಬಟ್ಟಾ ಬಯಲಾಗಿದೆ.

ನಿಜವಾಯ್ತು ಮಲೆನಾಡು ಟುಡೆ ಸಂಶಯ

ಕಳೆದ ವರ್ಷ ಮಲೆನಾಡು ಟುಡೆ ಈ ರೀತಿಯ ಜೀತಪದ್ಧತಿ ಮಲೆನಾಡಿನಲ್ಲಿ ಜೀವಂತವಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿ ಸುದ್ದಿ ಪ್ರಕಟಿಸಿತ್ತು. ಈಗ ಅದು ನಿಜವಾಗಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ  ಇಂತಹದ್ದೊಂದು ಕರಾಳತನ ಇವತ್ತು ಬೆಳಕಿಗೆ ಬಂದಿದೆ. ಕಳೆದ ವರ್ಷ ಈ ಸಂಬಂಧ  ಕಂಪ್ಲೆಂಟ್ ಆಗಿತ್ತಾದರೂ, ಅದರ ಬಗ್ಗೆ ಹೆಚ್ಚಿನ ಆಕ್ಷನ್ ಆಗಿರಲಿಲ್ಲ. ಆದರೆ, ಈ ಸಲ ಖಂಡಿತವಾಗಿಯು ಮನುಷ್ಯನೊಬ್ಬನನ್ನ ಹೀನಾಯಸ್ಥಿತಿಯಲ್ಲಿ ದುಡಿಸಿಕೊಳ್ಳುವ ಕಳ್ಳ ದಂಧೆ ಹಾಗೂ ಅಕ್ರಮ ವಹಿವಾಟು ನಿಲ್ಲಬೇಕಿದೆ. 

ಶಿವಮೊಗ್ಗ ಬಸ್​ ನಿಲ್ದಾಣ

ಶಿವಮೊಗ್ಗ ಬಸ್​ ನಿಲ್ದಾಣ ಒಳ್ಳೆಯದಕ್ಕೂ ಕೆಟ್ಟದಕ್ಕೂ ಕೇಂದ್ರ ಬಿಂದು. ಇದಕ್ಕೆ ಮೂಕಸಾಕ್ಷಿಯಾಗಿ ಇಲ್ಲಿನ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣ ಹಾಗೂ ಖಾಸಗಿ ಬಸ್ ನಿಲ್ದಾಣದ ಬೋರ್ಡ್​ಗಳಿವೆ. ಇವತ್ತು  ವಿವರಿಸ್ತಿರುವ ಕೃತ್ಯಕ್ಕೂ ಈ ಬಸ್​ ನಿಲ್ದಾಣವೇ ವೇದಿಕೆಯಾಗಿದೆ.  

ಮನೆ ಬಿಟ್ಟುಬಂದವರು, ಕೂಲಿಗೆ ಬಂದವರು ಟಾರ್ಗೆಟ್ 

ದೂರದೂರುಗಳಿಂದ ಕೂಲಿ ಅರಸಿ ಬರುವ ಬಡ ಕೂಲಿಕಾರ್ಮಿಕರನ್ನು ಇಲ್ಲಿನ ಕೆಲವರು ಟಾರ್ಗೆಟ್ ಮಾಡುತ್ತಾರೆ. ಜೀವನ ಬೇಡವೆಂದು ಮುಂದಿನ ದಾರಿ ಹುಡಕಿಕೊಂಡು ಬಸ್​ನಿಲ್ದಾಣದಲ್ಲಿ ಕುಳಿತವರು. ಮನೆಬಿಟ್ಟು ಬಂದವರು, ಹೀಗೆ ರೋಸಿಹೋದ ಜೀವಗಳನ್ನ ಟಾರ್ಗೆಟ್ ಮಾಡುತ್ತಾರೆ ಇಲ್ಲಿನ ಆಯ್ದ ವ್ಯಕ್ತಿಗಳು . 

ಕೆಲಸದ ಹೆಸರಲ್ಲಿ ಆಮೀಷ

ಅಸಹಾಯಕರಿಗೆ ನೆರವು ನೀಡುವ ರೀತಿಯಲ್ಲಿ ಬರುವ ಈ ಮಧ್ಯವರ್ತಿಗಳು. ತೋಟದಲ್ಲಿ ಕೆಲಸವಿದೆ. ಕೈತುಂಬಾ ಸಂಬಳ ಎಣ್ಣೆ ಊಟ ಎಲ್ಲಾ ವ್ಯವಸ್ಥೆಗಳಿವೆ ಮಾಡುತ್ತೀಯಾ ಎಂದು ಪುಸಲಾಯಿಸುತ್ತಾರೆ. ಜೀವನಕ್ಕೊಂದು ದಾರಿಯಾಗುತ್ತೆ ಎಂದುಕೊಂಡವರು ಆಮೀಷವೊಡ್ಡಿದವರ ಜೊತೆ  ಹೊರಡುತ್ತಾರೆ. 

ದೊಡ್ಡಮನೆಯಲ್ಲಿ ಒತ್ತೆಯಾಳು

ಹೀಗೆ ಹೊರಟವರನ್ನ ಖಾಸಗಿ ವಾಹನದಲ್ಲೇ ಹಳ್ಳಿ ಮನೆಗೆ ಕರೆದೊಯ್ಯುತ್ತಾರೆ. ಅಲ್ಲಿ ದೊಡ್ಡ ಮನೆಯೊಂದರಲ್ಲಿ ಇರಿಸುತ್ತಾರೆ. ಅಲ್ಲಿಂದ ಅಸಹಾಯಕರ ಎಲ್ಲಾ ಸಂಪರ್ಕಗಳು ಕಟ್ ಆಗುತ್ತವೆ. ಮೊಬೈಲ್ ಸೇರಿದಂತೆ ಅವರ ಬಳಿ ಇರುವುದನ್ನ ಕಿತ್ತುಕೊಂಡು  ಒತ್ತೆಯಾಳನ್ನಾಗಿ ಇರಿಸಿಕೊಳ್ಳಲಾಗುತ್ತದೆ. 

ಕೂಲಿಗೆ ಜನ ಸಿಗೋದಿಲ್ಲ

ಮಲೆನಾಡಿನಲ್ಲಿ ತೋಟ ಗದ್ದೆಗಳಿಗೆ ಕೂಲಿ ಕಾರ್ಮಿಕರು ಕೆಲಸಕ್ಕೆ ಬರುವುದೇ ದುಸ್ತರವಾಗಿದೆ. ಹತ್ತಿಪ್ಪತ್ತು ಎಕರೆ ಅಡಿಕೆ ತೋಟ ಹೊಂದಿರುವ ಮಾಲೀಕರಿಗೆ ತೋಟಗಳಿಗೆ ದಿನದ ಲೆಕ್ಕದಲ್ಲಿ ಕೆಲಸಗಾರರು ಬೇಕು. ಆದರೆ ಕೆಲಸದವರು ಸಿಗೋದಿಲ್ಲ. ಇಂತಹವರ ಸಂಪರ್ಕ ಸಾಧಿಸುವ ಕೆಲವು ಮೇಸ್ರಿಗಳು ದುಬಾರಿ ಗುತ್ತಿಗೆ ಮಾತನಾಡಿಕೊಂಡು, ಕೂಡಿಹಾಕಿರುವ ಒತ್ತೆಯಾಳುಗಳನ್ನ ಕೂಲಿಗೆ ಕಳುಹಿಸುತ್ತಾರೆ. 

ಎರಡು ಹೊತ್ತು ಊಟ. ಮೂರು ಹೊತ್ತು ಎಣ್ಣೆ

ಒಬ್ಬ ಕಾರ್ಮಿಕನಿಗೆ ಕನಿಷ್ಠ ಎಂದರೂ ದಿನಕ್ಕೆ  750 ರೂಪಾಯಿಗಿಂತಹ ಕಡಿಮೆ ಕೂಲಿಯಿಲ್ಲ. ಅದೇ ರೇಟಿನಲ್ಲಿ ತೋಟದ ಮಾಲೀಕರ ಬಳಿ ಮಾತನಾಡುವ ಕೆಲ ಮೇಸ್ತ್ರಿಗಳು ಕಳ್ಳದಾರಿಯಲ್ಲಿ  ಮಾನವ ಸಂಪನ್ಮೂಲ ಪೂರೈಕೆ ಮಾಡುತ್ತಿದ್ದಾರೆ.  

ಜನ ತಂದುಕೊಟ್ಟರೆ 2 ಸಾವಿರ ರೂಪಾಯಿ ಕಮಿಷನ್​!

ಶಿವಮೊಗ್ಗ ಬಸ್​ ನಿಲ್ದಾಣ, ರೈಲ್ವೆ ನಿಲ್ದಾಣ ಹೀಗೆ ಎಲ್ಲಿಂದಲೋ ಕೆಲಸಕ್ಕೆ ಅಂತಾ ಜನರನ್ನ ತಂದು ಸೇರಿಸುವ ವ್ಯಕ್ತಿ ಎರಡು ಸಾವಿರ ರೂಪಾಯಿ ಕಮಿಷನ್ ನೀಡಲಾಗುತ್ತದೆಯಂತೆ. ಹಾಗೆ ಒಮ್ಮೆ ಬಂದು ದೊಡ್ಡಮನೆಯಲ್ಲಿ  ಸೇರುವ ಕಾರ್ಮಿಕನ ಮೊಬೈಲನ್ನು ಗುತ್ತಿಗೆದಾರ ತನ್ನ ಬಳಿ ಇಟ್ಟುಕೊಳ್ಳುತ್ತಾನೆ. ಅವಶ್ಯಕತೆ ಇದ್ದಾಗ ಮಾತ್ರ ನೀಡುವುದಾ ಹೇಳುತ್ತಾನೆ ಅಷ್ಟೆ. 

ಮಾರನೇ ದಿನ ಬೆಳಗಿನ ಜಾವ 5 ಗಂಟೆ ಏಳಬೇಕು. ಬೆಳ್ಳಂಬೆಳಿಗ್ಗೆಯೇ ಅವರಿಗೆ ಒಂದು ನೈಂಟಿ ಪೌಚ್ ಎಣ್ಣೆಯನ್ನು ಮೇಸ್ತ್ರಿ ನೀಡುತ್ತಾನೆ. ಕುಡಿಯದಿದ್ದರೆ...ಬಲವಂತವಾಗಿ ಇಲ್ಲವೇ ಒದ್ದು..ಕುಡಿಸುತ್ತಾರೆ. ನಂತರ ತಮ್ಮ ಖಾಸಗಿ ವಾಹನದಲ್ಲಿ ಸೂರ್ಯ ಉದಯಿಸುವ ಮುನ್ನವೇ ಮಾಲೀಕರ ತೋಟಗಳಿಗೆ ಬಿಡುತ್ತಾರೆ. 

ತೋಟದಲ್ಲಿ ಬೆಳಿಗ್ಗೆ ಹೊರಗಡೆಯಿಂದಲೇ ತಿಂಡಿ ವ್ಯವಸ್ಥೆ ಮಾಡಲಾಗುತ್ತದೆ. ಮದ್ಯಾಹ್ನದ ಹೊತ್ತಿಗೆ ಮತ್ತೆ ಎಣ್ಣೆ ಕುಡಿಸಲಾಗುತ್ತದೆ.ಬೆಳಿಗ್ಗೆ 6 ಗಂಟೆಯಿಂದ ಸಂಜೆ ಏಳು ಗಂಟೆಯವರಿಗೆ ಬೆವರು ಹರಿಸುವ ಕೂಲಿಕಾರ್ಮಿಕರಿಗೆ ಕೇವಲ ಊಟ ಮತ್ತು ಮದ್ಯದ ಅಮಲಿನಲ್ಲಿಯೇ ಇರುತ್ತಾರೆ. ಕೆಲಸ ಮಾಡುವ ಸಂದರ್ಭದಲ್ಲಿ ಸೊಮಾರಿತನ ಮೆರೆದರೆ ಕಣಿಗೆಯಿಂದ ಥಳಿಸಲಾಗುತ್ತದೆ.

ಮನೆ ಬಿಟ್ಟು ಯಾರು ಹೋಗುವಂತಿಲ್ಲ

ದಿನವಿಡೀ ಕೆಲಸ ಮಾಡಿಕೊಂಡು ಮನೆ ಸೇರುವ ಕಾರ್ಮಿಕರಿಗೆ ಮತ್ತೆ ಒಂದು ಕ್ವಾಟರ್ ಎಣ್ಣೆಯನ್ನು ನೀಡಲಾಗುತ್ತದೆ. ಎಣ್ಣೆ ಹೊಡೆದು ಊಟ ಮಾಡಿದ ತಕ್ಷಣ ಎಲ್ಲಾ ಕಾರ್ಮಿಕರು ಮಲಗಬೇಕು. ಯಾರು ಮನೆ ಬಿಟ್ಟು ಹೋಗುವಂತಿಲ್ಲ. ಹಾಗೆನಾದ್ರೂ ಹೋದರೆ..ಒದೆ ಗ್ಯಾರಂಟಿ. ಈ ರೀತಿಯ ಜೀತಪದ್ಧತಿಯ ಜಾಲದಲ್ಲಿ ಉತ್ತರ ಕರ್ನಾಟಕ ಮೂಲದವರು ಹಾಗು ಉತ್ತರ ಭಾರತದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಮಾಳೂರು ಪೊಲೀಸ್ ಸ್ಟೇಷನ್ 

ಈ ಕಾರ್ಮಿಕರು ಊರಿಗೆ ಹೋಗುತ್ತೇನೆ ಎಂದೇ ಅವರಿಗೆ ಸತಾಯಿಸಿ ಹಣವನ್ನು ಕೊಡದೆ ಹೊಡೆದು ಬಡಿದು ಕಳಿಸುತ್ತಾರೆ ಮದ್ಯವರ್ತಿಗಳು. ಹೀಗೆ ತಪ್ಪಿಸಿಕೊಂಡು ಬಂದ ಕಾರ್ಮಿಕ ನೀಡಿದ ದೂರಿನ ಮೇರೆಗೆ ಮಾಳೂರು ಪೊಲೀಸರು ಮಾನವ ಕಳ್ಳ ಸಾಗಾಣಿಕೆಯ ಜಾಲಕ್ಕೆ ಕೈಹಾಕಿದ್ದಾರೆ. ತೋಟಗಳಲ್ಲಿ ದುಡಿಸಿಕೊಳ್ಳುತ್ತಿದ್ದ ಗುತ್ತಿ ಯಡೆಹಳ್ಳಿ ಗ್ರಾಮದ ಒಂದು ಬ್ಯಾಚ್ ನ್ನು ಪೊಲೀಸರು ಬಂಧಿಸಿದ್ದು, ಕಾರ್ಮಿಕರನ್ನುರಕ್ಷಣೆ ಮಾಡಿದ್ದಾರೆ.  ಈ ರೀತಿಯ ಹಲವು ಬ್ಯಾಚ್ ಗಳು ಮಲೆನಾಡಿನಲ್ಲಿ ಆಕ್ಟಿವ್ ಆಗಿರುವುದು ತನಿಖೆಯಿಂದ ಬಹಿರಂಗಗೊಂಡಿದೆ. ಸದ್ಯ ಪೊಲೀಸ್ ಇಲಾಖೆ ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಿದಂತಿದೆ. 

ಸಮಾಜ ತಲೆತಗ್ಗಿಸುವ ಸ್ಥಿತಿ

ದುಡಿದು ಬಂದ ಕಾರ್ಮಿಕರು ಸ್ನಾನ ಮಾಡಬೇಕೆಂದರೂ ಮೇಸ್ತ್ರಿಗಳು ನೀರು ಕೊಡುವುದಿಲ್ಲ.. ಕಾರ್ಮಿಕರು ಬಹಿರ್ದೆಸೆಗೆ ಗ್ರಾಮದ ಹೊರಗೆ ಸಾಲುಗಟ್ಟಿ ಹೋಗಬೇಕು. ಐವತ್ತರಿಂದ ಅರವತ್ತು ಕಾರ್ಮಿಕರು ಸಾರ್ವಜನಿಕವಾಗಿ ಬಹಿರ್ದೆಸೆಗೆ ಹೋದರೆ ಆ ಸುತ್ತಮುತ್ತಲಿನ ಗ್ರಾಮದ ಪರಿಸರದ ಮೇಲೆ ಹೇಗೆಲ್ಲಾ ಪರಿಣಾಮ ಬೀರಬಲ್ಲದು. ಪಿಡಿಓ ಗಳಿಗೆ ವಿಚಾರಗಳು ಗೊತ್ತಿದ್ದರೂ ಮೌನವಾಗಿರುವ ಹಿಂದಿನ ಉದ್ದೇಶವೇನು ಎಂಬುದು ಅರ್ಥವಾಗುತ್ತಿಲ್ಲ. 

ತೀರ್ಥಹಳ್ಳಿ ತಾಲೂಕಿನಲ್ಲಿ ಹೊರಊರಿನ ಕಾರ್ಮಿಕರನ್ನು  ಅಮಾನುಷವಾಗಿ ದುಡಿಸಿಕೊಳ್ಳುವ ಒಂದು ಜಾಲವೇ ರಾಕೆಟ್ ಮಾದರಿಯಲ್ಲಿ ಬೆಳೆದಿದೆ ಎನ್ನಲಾಗಿದೆ. ಕಾರ್ಮಿಕ ಇಲಾಖೆ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು.ಶ್ರೀಮಂತರ ತೋಟಗಳಲ್ಲಿ ಹಗಲು ಹೊತ್ತು ಕೆಲಸ ಮಾಡುವ ಕಾರ್ಮಿಕರನ್ನೇ ವೈಯಕ್ತಿಕವಾಗಿ ಭೇಟಿ ಮಾಡಿ ಮಾಹಿತಿ ಪಡೆದರೆ ದಂಧೆಯ ಸತ್ಯಾಸತ್ಯತೆ ಬಗೆದಷ್ಟು ಹೊರಬೀಳಲಿದೆ.