‘ಉರಿ’ ದದ್ದು ಯಾರು? ಪ್ರಿಯಾಂಕ್ ಖರ್ಗೆ ವಿರುದ್ಧ ಆರೋಪ ಮಾಡಿದ್ದೇಕೆ ಚಕ್ರವರ್ತಿ ಸೂಲಿಬೆಲೆ! ವಿನೋಬನಗರ ಸ್ಟೇಷನ್​ ಮುಂದೆ ನಡೆದಿದ್ದೇನು?

Chakravarthy Sulibele came to Vinobanagar police station in Shivamogga and recorded his statement ಶಿವಮೊಗ್ಗದ ವಿನೋಬನಗರ ಪೊಲೀಸ್ ಸ್ಟೇಷನ್​ಗೆ ಬಂದು ಚಕ್ರವರ್ತಿ ಸೂಲಿಬೆಲೆ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ

‘ಉರಿ’ ದದ್ದು ಯಾರು? ಪ್ರಿಯಾಂಕ್ ಖರ್ಗೆ ವಿರುದ್ಧ ಆರೋಪ ಮಾಡಿದ್ದೇಕೆ ಚಕ್ರವರ್ತಿ ಸೂಲಿಬೆಲೆ!  ವಿನೋಬನಗರ ಸ್ಟೇಷನ್​ ಮುಂದೆ ನಡೆದಿದ್ದೇನು?

KARNATAKA NEWS/ ONLINE / Malenadu today/ Aug 31, 2023 SHIVAMOGGA NEWS

ಶಿವಮೊಗ್ಗದಲ್ಲಿ ನಿನ್ನೆ ರಾತ್ರಿ ವಿನೋಬನಗರ ಪೊಲೀಸ್ ಸ್ಟೇಷನ್ (Vinobanagar Police Station) ಮುಂಭಾಗ ಸಾಕಷ್ಟು ಘಟನೆಗಳು ನಡೆದವು. ಮುಖ್ಯವಾಗಿ ಕರ್ನಾಟಕ ಸಂಘದಲ್ಲಿ ನಡೆಯುತ್ತಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಚಕ್ರವರ್ತಿ ಸೂಲಿಬೆಲೆ (Chakravarthy Sulibele )ಯವರಿಗೆ ಅವಹೇಳನಕಾರಿ ಕಾಮೆಂಟ್ಸ್​ ಸಂಬಂಧ ದಾಖಲಾದ ಕೇಸ್​ನಡಿಯಲ್ಲಿ ನೋಟಿಸ್ ನೀಡಲು ವಿನೋಬನಗರ ಪೊಲೀಸರು ಮುಂದಾಗಿದ್ದರು. ಇದಕ್ಕಾಗಿ ಕರ್ನಾಟಕ ಸಂಘದ ಮುಂದೆ ಕಾರ್ಯಕ್ರಮ ಮುಗಿಯುವರೆಗೂ ಕಾಯುತ್ತಿದ್ದ ಪೊಲೀಸರು, ಚಕ್ರವರ್ತಿ ಸೂಲಿಬೆಲೆಯವರು ಹೊರಗಡೆ ಬರುವುದನ್ನ ಕಾಯುತ್ತಿದ್ದರು. 

ಉಪನ್ಯಾಸ ಮುಗಿಸಿ ಕರ್ನಾಟಕ ಸಂಘದಿಂದ ಸೂಲಿಬೆಲೆಯವರು ಹೊರಕ್ಕೆ ಬರುತ್ತಲೇ  ದೊಡ್ಡಪೇಟೆ ಪಿಐ ಅಂಜನ್​​ ಕುಮಾರ್ ಮತ್ತು ಕೋಟೆ ಪೊಲೀಸ್ ಠಾಣೆಯ ಪಿಐ ಶಿವಕುಮಾರ್ ಹಾಗೂ ವಿನೋಬ ನಗರ ಠಾಣೆ ಪೊಲೀಸರು ಸ್ಟೇಷನ್​ಗೆ ಬಂದು ಪ್ರಕರಣ ಸಂಬಂಧ ಹೇಳಿಕೆ ನೀಡುವಂತೆ ಸೂಚಿಸಿದ್ರು. ಇದಕ್ಕೆ ಪ್ರತ್ಯುತ್ತರವಾಗಿ ಚಕ್ರವರ್ತಿ ಸೂಲಿಬೆಲೆಯವರು ಖುದ್ದಾಗಿ ಬಂದು ಹೇಳಿಕೆ ನೀಡುವುದಾಗಿ ಪೊಲೀಸರನ್ನು ಅಲ್ಲಿಂದ ತೆರಳುವಂತೆ ಮನವಿ ಮಾಡಿದ್ರು. ಸೂಲಿಬೆಲೆಯವರ ಮನವಿಯನ್ನು ಪುರಸ್ಕರಿಸಿದ ಪೊಲೀಸರು ಅಲ್ಲಿಂದ ತೆರಳಿದ್ದರು. 

 

ಇನ್ನೂ ಚಕ್ರವರ್ತಿ ಸೂಲಿಬೆಲೆಯವರ ವಿರುದ್ಧ ಪೊಲೀಸ್ ಕ್ರಮ ಕೈಗೊಳ್ಳುವ ಸೂಚನೆ ಸಿಗುತ್ತಿದ್ದಂತೆ, ಶಾಸಕ ಎಸ್​ಎನ್​ ಚನ್ನಬಸಪ್ಪ ಸೇರಿದಂತೆ ನೂರಾರು ಬಿಜೆಪಿ, ನಮೋಬ್ರಿಗೇಡ್ , ಹಿಂದೂ ಕಾರ್ಯಕರ್ತರು ಕರ್ನಾಟಕ ಸಂಘದ ಬಳಿಯಲ್ಲಿ ಜಮಾಯಿಸಿದ್ದರು. ಬಳಿಕ ಅಲ್ಲಿಂದ ವಿನೋಬನಗರ ಪೊಲೀಸ್ ಚೌಕಿ ಬಳಿ ನೆರೆದಿದ್ದಾರೆ.  ಜಗ್ಗುವುದಿಲ್ಲ ಬಗ್ಗುವುದಿಲ್ಲ ಜೈಶ್ರೀರಾಮ್ ಘೋಷಣೆಗಳೊಂದಿಗೆ ಸರ್ಕಲ್​ನಲ್ಲಿ ಕಾರ್ಯಕರ್ತರು ಒಂದು ರೀತಿಯ ಪ್ರತಿಭಟನೆಯನ್ನೆ ನಡೆಸಿದರು.  ರಾಜ್ಯ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಕಾರ್ಯಕರ್ತರು ಧಿಕ್ಕಾರ ಕೂಗಿದರು. 

ಇನ್ನೂ ಹೇಳಿದಂತೆ ವಿನೋಬನಗರ ಪೊಲೀಸ್ ಸ್ಟೇಷನ್​ಗೆ ಚಕ್ರವರ್ತಿ ಸೂಲಿಬೆಲೆಯವರು ಆಗಮಿಸಿದ್ದರು. ಕಾರ್ಯಕರ್ತರ ಘೋಷಣೆಗಳೊಂದಿಗೆ ಸ್ಟೇಷನ್​ಗೆ ಬಂದ ಅವರು,  ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆಯನ್ನು ಪೊಲೀಸರಿಗೆ ಸಲ್ಲಿಸಿದರು.  ಬಳಿಕ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ ಅವರು, ಸುಳ್ಳು ಕಂಪ್ಲೇಟ್ ನೀಡಿದ ವಿಷಯಕ್ಕೆ ಉತ್ತರಿಸಲು ಬಂದಿದ್ದೆ.

ಇಂತಹ ಬೆದರಿಕೆಗಳಿಗೆ ಬಗ್ಗುವುದಿಲ್ಲ. ದೂರು ದಾಖಲು ಮಾಡಿಕೊಳ್ಳುವ ಸಂಗತಿಯೇ ಇದಲ್ಲ. ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಹ್ಯಾಂಡ್ಲರ್ ಮೋದಿ ಮೋರಿ ಅಂತ ಟ್ವೀಟ್ ಮಾಡಿದ್ದರು. ನಿನಗ್ಯಾಕೆ ಉರಿ ಎಂದು ಅದಕ್ಕೆ ಪ್ರತ್ಯುತ್ತರ ನೀಡಲಾಗಿತ್ತು ಎಂದಿದ್ದಾರೆ. 

ಇನ್ನೂ ಇದೇ ವೇಳೆ ಚಕ್ರವರ್ತಿ ಸೂಲಿ ಬೆಲೆ . ಪ್ರಿಯಾಂಕ್​ ಖರ್ಗೆಯವರು  ನನ್ನನ್ನು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿಸುವುದಾಗಿ ಹೇಳಿದ್ದರು. ಆದರೆ ಈ ಥರ ಮೆಟ್ಟಿಲು ಹತ್ತಿಸುತ್ತಾರೆಂದು ತಿಳಿದುಕೊಂಡಿರಲಿಲ್ಲ ಎಂದರು. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗ ಇಂತಹ ಘಟನೆಗಳು ನಡೆಯುತ್ತವೆ. ದಮನಿಸುವ ಕೆಲಸವಾಗುತ್ತದೆ. 

ಪೊಲೀಸರು ಮೂರುದಿನಗಳಿಂದ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದ ಚಕ್ರವರ್ತಿ ಸೂಲಿಬೆಲೆಯವರು ಸರ್ಕಾರ ಸಣ್ಣ ದೂರು ಇಟ್ಟುಕೊಂಡು ದೊಡ್ಡ ಹೆಜ್ಜೆ ಇಟ್ಟಿದೆ ಎಂದು ಆರೋಪಿಸಿದರು. ಕಾಂಗ್ರೆಸ್‌ನವರು ಶೋಬಕ್ಕ ಬದಲು ಚೊಂಬಕ್ಕ, ಮೋದಿ ಬದಲು ಮೋರಿ ಅಂತೆಲ್ಲ ಟ್ವೀಟ್ ಮಾಡುತ್ತಾರೆ. ಈ ಪ್ರಕರಣದ ಫ್ಯಾಕ್ಟ್ ಚೆಕ್ ಕೂಡ ಮಾಡಲಿ. ಪೊಲೀಸರು ಪ್ರೀತಿಯಿಂದ ಕರೆದುಕೊಂಡು ಬಂದರು ಎಂದು ತಿಳಿಸಿದ್ದಾರೆ. 

 

ಇನ್ನೊಂದೆಡೆ ಈ ಬಗ್ಗೆ ಮಾತನಾಡಿದ ಶಾಸಕ ಎಸ್​ಎನ್​ ಚನ್ನಬಸಪ್ಪ  ದೇಶಭಕ್ತ ಚಕ್ರವರ್ತಿ ಸೂಲಿಬೆಲೆಯನ್ನು ಠಾಣೆಗೆ ಕರೆಯಿಸುವ ಮೂಲಕ ಸರ್ಕಾರ ತಪ್ಪು ಹೆಜ್ಜೆ ಇಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಂದು ಪದವನ್ನಿಟ್ಟುಕೊಂಡು ಬೆದರಿಸುವ ಪ್ರಯತ್ನ ನಡೆಸಲಾಗುತ್ತಿದೆ.  ಬೆದರಿಕೆಗಳಿಗೆ  ಯಾರು ಹೆದರುವುದಿಲ್ಲ.ಉರಿ ಎಂಬ ಚಲನಚಿತ್ರ ಬಂದಾಗಲೇ ಕಾಂಗ್ರೆಸ್ಸಿಗರು  ಉರಿದುಕೊಂಡಿದ್ದರು ಎಂಬುದು ಜನತೆಗೆ ಗೊತ್ತಿದೆ. ಈಗ ಅದೇ ಉರಿ ಎಂಬ ಕಾಮೆಂಟ್ಸ್ ಗೆ ದೂರು ದಾಖಲಾಗಿದೆ. ಉರಿ ಎಂಬುದು ನಮ್ಮ ಆಡು ಭಾಷೆ, ನಿನಗ್ಯಾಕೆ ಉರಿ ಎಂಬ ಪದವನ್ನು ನಾವು ಸಾಮಾನ್ಯವಾಗಿ ಬಳಸುತ್ತೇವೆ. ಈ ಪದವನ್ನ ಇಟ್ಟುಕೊಂಡು ಕಾಂಗ್ರೆಸ್ ಬೆದರಿಕೆ ತಂತ್ರಕ್ಕೆ ಮೊರೆಹೋಗಿದೆ. ಇದಕ್ಕೆ ಜನರು ಉತ್ತರಿಸುತ್ತಾರೆ ಎಂದಿದ್ದಾರೆ.   

ಒಟ್ಟಾರೆ  ನಿನ್ನೆ ತಡರಾತ್ರಿಯವರೆಗೂ ವಿನೋಬನಗರ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಸಾಕಷ್ಟು ಹೈಡ್ರಾಮಗಳು ನಡೆದು, ಅಂತಿಮವಾಗಿ ಚಕ್ರವರ್ತಿ ಸೂಲಿಬೆಲೆಯವರು ಹೇಳಿಕೆ ನೀಡಿ ವಾಪಸ್ ಆಗುವುದರೊಂದಿಗೆ ಸನ್ನಿವೇಶ ಕ್ಲೈಮ್ಯಾಕ್ಸ್​ ಕಂಡಿತು. 

 


 

ಇನ್ನಷ್ಟು ಸುದ್ದಿಗಳು