ಇಂದಿನಿಂದ ಪ್ರವಾಸಿಗರ ಮುಕ್ತ ವೀಕ್ಷಣೆಗೆ ಸಿಗಲಿದ್ದಾನೆ ಅಭಿಮನ್ಯು. ತನ್ನ ಮೇಲೆ ದಾಳಿ ಮಾಡಿದ ಆನೆಯನ್ನು ಬಿಗಿದಪ್ಪಿದ ವಿನಯ್ ಮತ್ತೆ ಕರ್ತವ್ಯಕ್ಕೆ ಹಾಜರ್ | ವನ್ಯಜೀವಿ ವೈದ್ಯ ವಿನಯ್ ಮೇಲೆ ದಾಳಿ ಮಾಡಿದ ಕಾಡಾನೆ ಇಂದು ಶಾಂತಸ್ವರೂಪಿಯಾಗಿದ್ದು ಹೇಗೆ.?

Elephant Abhimanyu story

ಇಂದಿನಿಂದ ಪ್ರವಾಸಿಗರ ಮುಕ್ತ ವೀಕ್ಷಣೆಗೆ ಸಿಗಲಿದ್ದಾನೆ ಅಭಿಮನ್ಯು. ತನ್ನ ಮೇಲೆ ದಾಳಿ ಮಾಡಿದ ಆನೆಯನ್ನು ಬಿಗಿದಪ್ಪಿದ ವಿನಯ್ ಮತ್ತೆ ಕರ್ತವ್ಯಕ್ಕೆ ಹಾಜರ್ | ವನ್ಯಜೀವಿ ವೈದ್ಯ ವಿನಯ್ ಮೇಲೆ ದಾಳಿ ಮಾಡಿದ ಕಾಡಾನೆ ಇಂದು ಶಾಂತಸ್ವರೂಪಿಯಾಗಿದ್ದು ಹೇಗೆ.?

JP STORY 

ನಾಲ್ಕು ತಿಂಗಳ ಹಿಂದೆ ಖ್ಯಾತ ವನ್ಯಜೀವಿ ವೈದ್ಯ ಡಾಕ್ಟರ್ ವಿನಯ್ ಮೇಲೆ ಮಾರಣಾಂತಿಕವಾಗಿ ದಾಳಿ ಮಾಡಿ ರಾಜ್ಯಾದ್ಯಂತ ಸುದ್ದಿಯಾಗಿದ್ದ ಕಾಡಾನೆ...ಇಂದು ಅಭಿಮನ್ಯುವಾಗಿ ರೂಪಾಂತರಗೊಂಡಿದೆ. ನಾಲ್ಕು ತಿಂಗಳ ಕಾಲ ಮಾವುತ ಕಾವಾಡಿಗಳ ಗರಡಿಯಲ್ಲಿ ಖೆಡ್ಡಾದಲ್ಲಿ ಪಳಗಿದ ಕಾಡಾನೆಗೆ ಅರಣ್ಯಾಧಿಕಾರಿಗಳು ಅಭಿಮನ್ಯು ಎಂದು ನಾಮಕರಣ ಮಾಡಿದ್ದರು. ಇತ್ತಿಚ್ಚೆಗಷ್ಟೆ ಅಭಿಮನ್ಯುವನ್ನು ಕ್ರಾಲ್ ನಿಂದ ಹೊರತೆಗೆದು. ಹಗಲು ಹೊತ್ತು ತರಬೇತಿ ನೀಡಲಾಯಿತು. ನುರಿತ ಮಾವುತ ಕಾವಾಡಿಗಳ ತಂಡ ಆಜ್ಞೆಗಳನ್ನು ಪಾಲಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ. ಮಾವುತ ಮಂಜು ಅಭಿಮನ್ಯುವಿನ ಸಾರಧಿಯಾಗಿದ್ದು, ಮೊನ್ನೆ ಯಶಸ್ವಿಯಾಗಿ ಕ್ರಾಲ್ ನಿಂದ ಸಕ್ರೆಬೈಲು ಆನೆ ಬಿಡಾರಕ್ಕೆ ಕರೆತರಲಾಯಿತು. ಮಾವುತ ಕಾವಾಡಿಗಳು ವಿಶೇಷ ಪೂಜೆ ಸಲ್ಲಿಸಿ, ಅಭಿಮನ್ಯುವನ್ನು ಬಿಡಾರಕ್ಕೆ ಬರ ಮಾಡಿಕೊಂಡರು. ಈಗ ಅಭಿಮನ್ಯು ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿ ಸಿಗಲಿದ್ದು, ಶಾಂತ ಸ್ವಭಾವಕ್ಕೆ ಮರಳಿದೆ.

ಇತ್ತ ಕ್ರಾಲ್ ಗೆ ಅಭಿಮನ್ಯು.ಅತ್ತ ಸಾವಿನಿಂದ ಪಾರಾದ ವೈದ್ಯ ಡ್ಯೂಟಿಗ ಹಾಜರ್

ಆನೆಯ ದಾಳಿಯಿಂದ ಸಾವನ್ನು ಪಾರಾದವನಿಗೆ ಮತ್ತೆ ಸಾವೇ ಇಲ್ಲ ಎನ್ನುತ್ತಾರೆ ಹಿರಿಯರು, ಇದು ವನ್ಯಜೀವಿ ವೈದ್ಯ ಡಾಕ್ಟರ್ ವಿನಯ್ ಪಾಲಿಗೆ ಸತ್ಯವಾಗಿದೆ. ಮೂರು ಬಾರಿ ಆನೆ ದಾಳಿಗೆ ಒಳಗಾದ ವಿನಯ್ ಸಾವನ್ನು ಗೆದ್ದಿದ್ದೇ ಒಂದು ರೋಚಕ ಸಂಗತಿ. ಎರಡು ಬಾರಿ ಆನೆ ದಾಳಿಯಿಂದ ಪಾರಾದ್ರೂ, ಮೂರನೇ ಬಾರಿ ವಿನಯ್ ಪಾಲಿಗೆ ಸಾವು ಕಣ್ಣ ಮುಂದೆ ಬಂದು ನಿಂತಿತ್ತು. ಹೌದು 11-04-23  ರಂದು ಕಾಡಾನೆ ತುಳಿತಕ್ಕೆ ಒಳಗಾದ ವಿನಯ್ ಬದುಕುವುದೇ ಕಷ್ಟ ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಸಾವನ್ನೇ ಗೆದ್ದು, ಮತ್ತೆ ಡ್ಯೂಟಿಗೆ ವಾಪಸ್ಸಾಗಿದ್ದಾರೆ..

 ಚನ್ನಗಿರಿ ಮತ್ತು ಹೊನ್ನಾಳಿ ತಾಲೂಕಿನ ಗಡಿಭಾಗದ ಗ್ರಾಮಸ್ಥರಿಗೆ ತೀವೃ ಕಿರುಕುಳ ನೀಡುತ್ತಿದ್ದ ಸುಮಾರು 12 ವರ್ಷದ ಕಾಡಾನೆ  ಹೊಲಕ್ಕೆ ಹೋಗಿದ್ದ ಓರ್ವ ಬಾಲಕಿಯನ್ನು ಬಲಿಪಡೆದಿದ್ದಿತ್ತು. ಸುಮಾರು ಐದು ಮಂದಿಗೆ ಗಾಯಗೊಳಿಸಿದ ಕಾಡಾನೆಯನ್ನು ಸೆರೆಹಿಡಿಯಲು ಗ್ರಾಮಸ್ಥರಿಂದ ಒತ್ತಡ ಹೆಚ್ಚಾಗಿತ್ತು. ಕಾಡಾನೆ ಸೆರೆ ಹಿಡಿದು ದೂರದ ಕಾಡಿಗೆ ಬಿಡಲು ನಿರ್ಧರಿಸಿದ್ದ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಕಾಡಾನೆ ಸೆರೆಗೆ ಅನುಮತಿಯನ್ನು ನೀಡಿತ್ತು.

 ಡಾಕ್ಟರ್ ವಿನಯ್, ಸೇರಿದಂತೆ ಮೂವರು ವೈದ್ಯರ ತಂಡ, ಫುಟ್ ಟ್ರಾಕರ್ಸ್ ಮಾವುತ ಕಾವಾಡಿಗಳ ತಂಡ ಕಾರ್ಯಾಚರಣೆಗೆ ಅಣಿಯಾಯಿತು. ಸಕ್ರೆಬೈಲು ಬಿಡಾರದಿಂದ ಕುಮ್ಕಿ ಆನೆಗಳನ್ನು ಕರೆದೊಯ್ಯಲಾಗಿತ್ತು. ಎರಡು ದಿನಗಳಾದ್ರೂ, ಆನೆ ಓಡಾಡಿದ ಪರಿಸರದಲ್ಲಿ ಲದ್ದಿ ಕೂಡ ಕಂಡು ಬಂದಿರಲಿಲ್ಲ. ಎರಡು ದಿನಗಳ ನಂತರ ಅಂದರೆ 11 ರಂದು ಬೆಳಗಿನ ಜಾವರಿಂದ ಕುಮ್ಕಿ ಆನೆಗಳಿದ್ದ ಕ್ಯಾಂಪ್ ತೊರೆದ ತಂಡ ಜೀನಹಳ್ಳಿಯವರಿಗೆ ಜೀಪಿನಲ್ಲಿ ಫಾಲೋ ಮಾಡಿಕೊಂಡು ಬಂದಿದೆ. ಆನೆ ಸಾಗಿದ ಕಾಲ್ಗುರುತು ಕಾರ್ಯಾಚರಣೆಗೆ ಹುಮ್ಮಸ್ಸು ನೀಡಿತ್ತು. ಬೆಳಿಗ್ಗೆ ಸುಮಾರು 8.30 ರ ಸಮಯ. ವಿನಯ್ ಮತ್ತು ತಂಡ ಜೀನಹಳ್ಳಿಯ ಬೀಳಿ ಪ್ರದೇಶದಲ್ಲಿ ಕಾಡಾನೆ ಇರುವುದನ್ನು ಪತ್ತೆ ಹಚ್ಚಿತು. ತಕ್ಷಣ ಆನೆಯನ್ನು ಡಾರ್ಟ್ ಮಾಡಲು ಉಳಿದ ವೈದ್ಯರು ಗನ್ ಸಮೇತ ಸನಿಹಕ್ಕೆ ಅಣಿಯಾದ್ರು..ಜಾಲಿ ಮರಗಳ ಪೊದೆಯೊಳಗೆ ಹೋಗಿದ್ದ ಕಾಡಾನೆ, ಒಮ್ಮಲೆ ತಿರುಗಿ ದಾಳಿಗೆ ಅಣಿಯಾಯ್ತು. ಆಗ ಅಲ್ಲಿದ್ದ ಸಿಬ್ಬಂದಿಗಳು ಎದ್ದುಬಿದ್ದು ಓಡಿದರು. ಆದ್ರೆ ವಿನಯ್ ಗೆ ಓಡಲು ಸಾಧ್ಯವಾಗದೆ ಎಡವಿ ಬಿದ್ದರು. ಆಗ ಕಾಡಾನೆ ಸೊಂಡಲು ಮತ್ತು ಬಲಗಾಲನ್ನು ವಿನಯ್ ಎದೆಯ ಮೇಲೆ ಸವರಿದೆ. ಅಷ್ಟರಲ್ಲಿ ಅಕ್ಕಪಕ್ಕದಲ್ಲಿದ್ದ ಸಿಬ್ಬಂದಿಗಳು ಏರ್ ಫೈರ್ ಮಾಡಿ ಸದ್ದು ಮಾಡಿದ್ದಾರೆ. ಆನೆ ಬಿಟ್ಟು ಕದಲಿದಾಗ ಮತ್ತೊಬ್ಬ ವೈದ್ಯರು ಕಾಡಾನೆಯನ್ನು ಡಾರ್ಟ್ ಮಾಡಿದ್ದಾರೆ. ಗಾಯಾಳು ವಿನಯ್ ಗೆ ತಕ್ಷಣ ಶಿವಮೊಗ್ಗ ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಯ್ತು. ನಂತರ ಬೈ ರೂಟ್ ಅಂಬುಲೆನ್ಸ್ ಮೂಲಕ ಎಕ್ಮಾ ಟ್ರೀಟ್ ಮೆಂಟ್ ನಲ್ಲಿ ಝಿರೋ ಟ್ರಾಫಿಕ್ ನಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು. 

ಅತ್ತ ವಿನಯ್ ಆಸ್ಪತ್ರೆಗೆ.., ಇತ್ತ ಕಾಡಾನೆ ಖೆಡ್ಡಾಗೆ..,

ಆನೆ ದಾಳಿಗೆ ವಿನಯ್ ತುತ್ತಾದರೂ, ವೈದ್ಯರು ಕಾಡಾನೆಯನ್ನು ಡಾರ್ಟ್ ಮಾಡುವಲ್ಲಿ ಯಶಸ್ವಿಯಾದ್ರು. ಅತ್ತ ವಿನಯ್ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನೆಯಾದ್ರೆ, ಇತ್ತ ಕಾಡಾನೆಯನ್ನು ಸಕ್ರೆಬೈಲು ಖೆಡ್ಡಾಗೆ ತರಲಾಯಿತು. ವಿನಯ್ ಆರೋಗ್ಯದಲ್ಲಿ ದಿನದಿನಕ್ಕೂ ಚೇತರಿಕೆ ಕಾಣುತ್ತಿತ್ತು. ಅದೇ ರೀತೆ ಖೆಡ್ಡಾದಲ್ಲಿ ಮಾವುತ ಕಾವಾಡಿಗಳು ಕಾಡಾನೆಯನ್ನು ಪಳಗತಿ ತರಬೇತಿ ನೀಡಿದರು. ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಆನೆ ಶಾಂತಸ್ವರೂಪಕ್ಕೆ ಮರಳಿ, ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಯಿತು.ಇತ್ತ ಡಾಕ್ಟರ್ ವಿನಯ್ ಕೂಡ ಚೇತರಿಸಿಕೊಂಡು ಮತ್ತೆ ಕರ್ತವ್ಯಕ್ಕೆ ಹಾಜರಾದರು.

 ದಾಳಿ ಮಾಡಿದ ಆನೆಯನ್ನು ಬಿಗಿದಪ್ಪಿದ ವಿನಯ್

ತನ್ನಮೇಲೆ ದಾಳಿ ಮಾಡಿದ ಅಭಿಮನ್ಯುವನ್ನು ಕಂಡು ವಿನಯ್ ಭಾವುಕರಾಗಿದ್ದಾರೆ. ಶಾಂತ ಸ್ವರೂಪಕ್ಕೆ ಮರಳಿದ ಆನೆಯನ್ನು ಆಸೆಗಣ್ಣುಗಳಿಂದಲೇ ನೋಡಿದ ವಿನಯ್ ಅದನ್ನು ಮುಟ್ಟಿ ಆರೈಕೆ ಮಾಡಿದ್ದಾರೆ. ಮತ್ತದೇ ಆನೆಗಳ ಲಾಲನೆ ಪಾಲನೆಯಲ್ಲಿ ತೊಡಗಿಸಿಕೊಂಡಿರುವ ವಿನಯ್ ಕೆಚ್ಚೆದೆಯಿಂದಲೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ.