ಕರೆಂಟ್ ಬಿಲ್ ಶಾಕ್! ಕಳೆದ ಸಲಕ್ಕಿಂತ ಎರಡು ಮೂರು ಪಟ್ಟು ಹೆಚ್ಚು ಬರುತ್ತಿದೆಯಾ ವಿದ್ಯುತ್ ಬಿಲ್! ಪವರ್​ ತಲೆನೋವು ಏನಿದು!

Electricity bill shock! Is the electricity bill two to three times more than last time? What's a power headache!

ಕರೆಂಟ್ ಬಿಲ್ ಶಾಕ್!  ಕಳೆದ ಸಲಕ್ಕಿಂತ ಎರಡು ಮೂರು ಪಟ್ಟು ಹೆಚ್ಚು ಬರುತ್ತಿದೆಯಾ ವಿದ್ಯುತ್ ಬಿಲ್! ಪವರ್​ ತಲೆನೋವು ಏನಿದು!
ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರುವ ಬಿಲ್​ಗಳು

KARNATAKA NEWS/ ONLINE / Malenadu today/ Jun 10, 2023 SHIVAMOGGA NEWS

ಬೆಂಗಳೂರು/ ಉಚಿತ ವಿದ್ಯುತ್​ನ ಸಮಾಲೋಚನೆಯ ನಡುವೆ, ಇದೀಗ ಗ್ರಾಹಕರ ವಿದ್ಯುತ್ ವಿತರಣ ಕಂಪನಿಗಳು ದುಬಾರಿ ಬಿಲ್ ನೀಡುತ್ತಿದೆ. ಕಳೆದ ತಿಂಗಳಿಗಿಂತಲೂ ದುಪ್ಪಟ್ಟು ಬಿಲ್​ಗಳನ್ನು ಗ್ರಾಹಕರು ಪಡೆಯುತ್ತಿದ್ದಾರೆ. ಶಿವಮೊಗ್ಗದಲ್ಲಿಯು ಈ ಬಿಲ್ ವಿತರಣೆಯಾಗುವ ಸಾಧ್ಯತೆ ಇದೆ. 

ಡಬ್ಬಲ್​ ಬಿಲ್ ಗ್ಯಾರಂಟಿ

500 ಬಿಲ್ ಕಟ್ಟುತ್ತಿದ್ದವರಿಗೆ ಸಾವಿರ ರೂಪಾಯಿ, ಸಾವಿರ ರೂಪಾಯಿ ಕಟ್ಟುತ್ತಿದ್ದವರಿಗೆ 2 ಸಾವಿರ ರೂಪಾಯಿ ಜೂನ್​ ತಿಂಗಳ ಬಿಲ್​ ನಲ್ಲಿ ಬರುತ್ತಿದೆ. ಇದು ಮಧ್ಯಮವರ್ಗದ ಮಂದಿಯನ್ನ ಹೈರಾಣಾಗಿಸುತ್ತಿದೆಯಷ್ಟೆ ಅಲ್ಲದೆ ಹಲವೆಡೆ ಪ್ರತಿಭಟನೆಗಳು ಸಹ ಆರಂಭವಾಗಿದೆ. ಇನ್ನೂ ಸೋಶಿಯಲ್ ಮೀಡಿಯಾಗಳಲ್ಲಿ ಜನರು ತಮ್ಮ ಕರೆಂಟ್ ಬಿಲ್​ಗಳನ್ನು ಅಪ್​ಲೋಡ್ ಮಾಡುತ್ತಿದ್ದ ಏಪ್ರಿಲ್​ ತಿಂಗಳ ಬಿಲ್ ಹಾಗೂ ಮೇ ತಿಂಗಳ ಬಿಲ್​ಗಳನ್ನು ಪ್ರದರ್ಶನ ಮಾಡುತ್ತಿದ್ದು, ಯಾಕೀಗೇ ಎಂದು ಪ್ರಶ್ನಿಸುತ್ತಿದ್ದಾರೆ. 

ಕರೆಂಟ್ ಬಿಲ್​ನಲ್ಲಿ ರಾಜಕಾರಣ

ಇನ್ನೂ ಈ ವಿಚಾರದಲ್ಲಿಯು ರಾಜಕಾರಣ ತಲೆದೂರಿಕೊಂಡು ಬಂದಿದ್ದು, ಕೆಲವರು ಇದು ಬಿಜೆಪಿ ಅಧಿಕಾರದಲ್ಲಿದ್ಧಾಗಿನ ಬಿಲ್​, ಇದು ಕಾಂಗ್ರೆಸ್ ಸರ್ಕಾರದ ಬಿಲ್ ಎಂದು ಟ್ರೋಲ್ ಮಾಡುತ್ತಿದ್ದಾರೆ. ಮತ್ತೊಂದೆಡೆ ಬಿಜೆಪಿಯವರೇ ಬೆಲೆ ಹೆಚ್ಚು ಮಾಡಿದ್ದರು ಎಂಬ ಟೀಕೆಯು ವ್ಯಕ್ತವಾಗುತ್ತಿದೆ. ಇದಕ್ಕೆ ಉತ್ತರವಾಗಿ ಬಿಜೆಪಿ ಹೆಚ್ಚು ಮಾಡಿದ್ದರೇ, ಕಾಂಗ್ರೆಸ್​ನವರು ಕಡಿಮೆ ಮಾಡಲಿ ಎಂಬ ಪ್ರತಿಪಾದನೆಗಳು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದೆ 

ಹೆಚ್ಚುವರಿ ಬಿಲ್ ಏಕೆ? 

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಕಳೆದ ಮೇ 12ರಂದು ಗೃಹಬಳಕೆಯ ಪ್ರತಿ ಯುನಿಟ್‌ಗೆ ಸರಾಸರಿ 70 ಪೈಸೆಯಷ್ಟು ದರ ಹೆಚ್ಚಳ ಮಾಡಿತ್ತು. ಈ ದರವೂ ಏಪ್ರಿಲ್​ ಒಂದರಿಂದಲೇ ಪೂರ್ವನ್ವಯವಾಗಲಿದೆ ಎಂದು ತಿಳಿಸಿತ್ತು. ಹಾಗಾಗಿ ಏಪ್ರಿಲ್ ಮತ್ತು ಮೇ ತಿಂಗಳ ಹೆಚ್ಚುವರಿ ದರವನ್ನು ಜೂನ್​ ತಿಂಗಳ ಬಿಲ್​ನಲ್ಲಿ ಸೇರಿಸಿ ನೀಡಲಾಗುತ್ತಿದೆ. ಇದು ದುಬಾರಿ ಬಿಲ್​ ಬರಲು ಮೊದಲ ಕಾರಣ ಎನ್ನಲಾಗಿದೆ. ಆದರೆ ಸಾರ್ವಜನಿಕರು ಬಿಲ್​ಗಳನ್ನು ನೋಡಿಯೇ ಹೆದರುತ್ತಿದ್ದು, ತಿಂಗಳ ಬಜೆಟ್​ನಲ್ಲಿ ಬಿಲ್ ಹೊಂದಿಸುವುದು ಹೇಗೆ ಎಂಬ ಚರ್ಚೆ ಆರಂಭವಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಹಲವೆಡೆ ಬಿಲ್ ಇನ್ನೂ ವಿತರಣೆಯಾಗಿಲ್ಲ. ಹಾಗಿದ್ದು ಗ್ರಾಹಕರು ಬೇರೆ ಕಡೆಗಳ ಬಿಲ್​ಗಳನ್ನು ನೋಡಿಯೇ ಗಾಬರಿಯಾಗುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟತೆ ಸಿಗಲಿ ಎಂದು ನ್ಯೂಸ್ ವರದಿಗಳನ್ನು ಗಮನಿಸುತ್ತಿದ್ಧಾರೆ.