ಕಟ್ಟಿದ 16 ನೇ ವರ್ಷಕ್ಕೆ ಮುಳುಗಿದ ಡ್ಯಾಂ ಬಗ್ಗೆ ನಿಮಗೆ ಗೊತ್ತಾ!ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿಸಿದ ಅಣೆಕಟ್ಟಲ್ಲಿ ವಿಶ್ವವೇ ಅಚ್ಚರಿ ಪಡುವಂತಹ ವಿಷಯವಿದೆ ! 55 ವರ್ಷದಲ್ಲಿ 2 ಸಲ ಕಾಣಸಿಕ್ಕ ಜಲಾಶಯದ ರೋಚಕ ಕಹಾನಿ! JP ಬರೆಯುತ್ತಾರೆ

The dam, built by Nalwadi Krishnaraja Wodeyar, was submerged in the 16th year of its construction. JP writes about the Hirebaskar reservoir, which has something the world wonders about

ಕಟ್ಟಿದ 16 ನೇ ವರ್ಷಕ್ಕೆ ಮುಳುಗಿದ ಡ್ಯಾಂ ಬಗ್ಗೆ ನಿಮಗೆ ಗೊತ್ತಾ!ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿಸಿದ  ಅಣೆಕಟ್ಟಲ್ಲಿ ವಿಶ್ವವೇ ಅಚ್ಚರಿ ಪಡುವಂತಹ ವಿಷಯವಿದೆ ! 55 ವರ್ಷದಲ್ಲಿ 2 ಸಲ ಕಾಣಸಿಕ್ಕ ಜಲಾಶಯದ ರೋಚಕ ಕಹಾನಿ! JP ಬರೆಯುತ್ತಾರೆ

KARNATAKA NEWS/ ONLINE / Malenadu today/ Jun 4, 2023 SHIVAMOGGA NEWS  

ಕಟ್ಟಿದ ಹದಿನಾರನೇ ವರ್ಷಕ್ಕೆ ಶರಾವತಿ ನದಿಯಲ್ಲಿ ಬಂಧಿಯಾದ ಡ್ಯಾಂ... ಲಿಂಗನಮಕ್ಕಿ  ಭರ್ತಿಯಾದರೆ ಈ ಡ್ಯಾಂ ಮೇಲೆ 41 ಅಡಿ ನೀರು ಸಂಗ್ರಹವಾಗುತ್ತದೆ. ಮಹಾತ್ಮಗಾಂಧಿಯವರ ನಿಧನದ ಕಾರಣಕ್ಕಾಗಿ ಆ ಡ್ಯಾಂ ಉದ್ಗಾಟನೆಯೇ ಮುಂದೂಡಿಕೆಯಾಗಿತ್ತು! ಶರಾವತಿ ಮುಳುಗಡೆ ಸಂತ್ರಸ್ಥರ ತ್ಯಾಗಕ್ಕೆ ಸಾಕ್ಷಿಯಾದ ಈ ಡ್ಯಾಂ ಬಗ್ಗೆ ಒಂದಿಷ್ಟು ಮಾಹಿತಿ ಜೆಪಿ ಬರೆಯುತ್ತಾರೆ.

ಹಿರೆಭಾಸ್ಕರ ಡ್ಯಾಂ

ಜಲವಿದ್ಯುತ್ ಯೋಜನೆಯಲ್ಲಿ ರಾಜ್ಯದಲ್ಲಿಯೇ ಅತ್ಯಂತ ಕಡಿಮೆ ದರದಲ್ಲಿ ವಿದ್ಯುತ್ ಉತ್ಪಾದನೆಗೆ ಕಾರಣವಾದ ಮೊಟ್ಟಮೊದಲ ಅಣೆಕಟ್ಟೆಂದರೆ ಅದು ಹಿರೆಭಾಸ್ಕರ ಡ್ಯಾಂ .ಮಲೆನಾಡಿನ ಮೊಟ್ಟಮೊದಲ ಜಲವಿದ್ಯುತ್ ಯೋಜನೆ ಇದಾಗಿದ್ದು,ಇಂದು ಕೆವಲ ನೆನಪಷ್ಟೆ.ಲಿಂಗನಮಕ್ಕಿ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ಹಿರೇಭಾಸ್ಕರ ಡ್ಯಾಂ ಐವತ್ತೈದು ವರ್ಷಗಳ ನಂತರ ಮತ್ತೊಮ್ಮೆ ಮೈದಡವಿ ನಿಂತಿದೆ. ಶರಾವತಿ ಹಿನ್ನೀರಿನಲ್ಲಿ ನೀರು ಕಡಿಮೆಯಾದಾಗ  ಹಿರೇಬಾಸ್ಕರ ಡ್ಯಾಂ ನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಬಹುದಾಗಿದೆ .ಅಂದು ಅಣೆಕಟ್ಟು ಹೇಗಿತ್ತೋ ನೀರಿನಲ್ಲಿ ಮುಳುಗಿ 55 ವರ್ಷಗಳಾದ ನಂತರವೂ ಅದೇ ಗಟ್ಟಿತನವನ್ನು ಉಳಿಸಿಕೊಂಡಿದೆ.

ರಾಜ್ಯದ ಮೊಟ್ಟಮೊದಲ ಜಲವಿದ್ಯುತ್ ಯೋಜನೆ

ಮಲೆನಾಡ ಹೆಬ್ಬಾಗಿಲು 1930 ರ ದಶಕದಲ್ಲಿ ಹೊಂದಿದ್ದ ಅರಣ್ಯ ಸಂಪತ್ತನ್ನು ಹಾಗೆ ಉಳಿಸಿಕೊಂಡಿದ್ದರೆ, ಇಂದಿಗೂ ಶಿವಮೊಗ್ಗ ಜಿಲ್ಲೆ ಸಂಪೂರ್ಣ ಅರಣ್ಯಮಯವಾಗಿರುತ್ತಿತ್ತು .ಆದರೆ ಕೃಷಿ ಮತ್ತು ವಿದ್ಯುತ್ ಉತ್ಪಾದನೆಗಾಗಿ ಈ ಜಿಲ್ಲೆಯಲ್ಲಿ ಕಟ್ಟಲಾದ ಡ್ಯಾಂಗಳು ಜನರ ಬದುಕು ಹಾಗು ಸಂಸ್ಕೃತಿಯನ್ನು ನಾಶ ಮಾಡಿದೆ. ಲಕ್ಷಾಂತರ ಎಕರೆ ಅರಣ್ಯ ಸಂಪತ್ತು ನಾಶಗೊಂಡಿದೆ. ಹಿರೇಭಾಸ್ಕರ,ಲಿಂಗನಮಕ್ಕಿ,ಮಾಣಿ,ಚಕ್ರ ಸಾವೇಹಕ್ಲು,ತುಂಗಾ  ಮತ್ತು ಭದ್ರಾ ಡ್ಯಾಂಗಳು,ಅಂಜನಾಪುರ ಮತ್ತು ಅಂಬ್ಲಿಗೋಳ,ಗೋಂದಿ,ಕೊಲ್ಲಿ ಬಚ್ಚಲು ಅಂತ ಸಣ್ಣ ಡ್ಯಾಂಗಳಿಂದಾಗಿ ಜಿಲ್ಲೆಯಲ್ಲಿ ನೆಲೆಕಳೆದುಕೊಂಡವರ ಪರಿಸ್ಥಿತಿ ಊಹಿಸಲು ಸಾಧ್ಯವಿಲ್ಲ

ಈ ಅಣೆಕಟ್ಟುಗಳು ನಮ್ಮ ಪೂರ್ವಜರ ಬದುಕನ್ನು ಅತಂತ್ರರನ್ನಾಗಿ ಮಾಡಿದ್ರೂ.ಅವರ ತ್ಯಾಗದಿಂದ ರಾಜ್ಯ ಬೆಳಕು ಕಾಣುತ್ತಿದೆ.ಕೃಷಿ ಹಚ್ಚ ಹಸಿರಾಗಿದೆ.....ಈ ಎಲ್ಲಾ ಅಣೆಕಟ್ಟುಗಳಲ್ಲಿ ನಮ್ಮನ್ನು ಅತ್ಯಂತವಾಗಿ ಸೆಳೆಯುವ ಅಣೆಕಟ್ಟೆ ಎಂದರೆ ಅದು ಹಿರೇಭಾಸ್ಕರ ಡ್ಯಾಂ ಅದನ್ನು ಮಡೆನೂರು ಡ್ಯಾಂ ಅಂತಾನು ಕರೆಯುತ್ತಾರೆ.

ಜಿಲ್ಲೆಯ ಮೊದಲ ಅಣೆಕಟ್ಟು

ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲು ನಿರ್ಮಾಣವಾದ ಅಣೆಕಟ್ಟು.ನಂತ್ರ ಶರಾವತಿ ನದಿಯಲ್ಲಿ ಮುಳುಗಡೆಯಾದ ಅಣೆಕಟ್ಟು.ಹಿರೇಭಾಸ್ಕರ ಡ್ಯಾಂ ಇಂದಿಗೂ ಗಟ್ಟಿಮುಟ್ಟಾಗಿದ್ದು...ನೀರಿನಲ್ಲಿ ಮುಳುಗಿದ್ದರೂ...ಡ್ಯಾಂ ನ ಒಂದು ಸಿಮೆಂಟ್ ಚೆಕ್ಕೆಯೂ ಕೂಡ ಅಲುಗಾಡಿಲ್ಲ.ಶರಾವತಿ ನದಿ ವ್ಯಾಪ್ತಿಯ ಜನರನ್ನು ಸಂತ್ರಸ್ಥರನ್ನಾಗಿ ಮಾಡಿದ ಈ ಡ್ಯಾಂ ಕೂಡ ನಂತರ ಅಭಿವೃದ್ಧಿಯ ವೇಗಕ್ಕೆ ಸಿಲುಕಿ ಮುಳುಗಡೆಯಾಗಿದ್ದು ವಿಪರ್ಯಾಸ

ಎಲ್ಲಿದೆ ಈ ಅಣೆಕಟ್ಟು!

ಸಾಗರದಿಂದ 42 ಕಿಲೋಮೀಟರ್ ತುಮರಿಗೆ ಸಾಗುವ ಮಾರ್ಗದಲ್ಲಿ ಹೊಳೆಬಾಗಿಲಿನ ಸಮೀಪ ಮೂರು ಕಿಲೋಮೀಟರ್ ಮಣ್ಣಿನ ರಸ್ತೆಯಲ್ಲಿ ಸಾಗಿದರೆ ಹಿರೇಭಾಸ್ಕರ ಡ್ಯಾಂ ನೋಡಲು ಸಿಗುತ್ತದೆ.ಸಿಗಂದೂರಿಗೆ ಲಾಂಜ್ ನಲ್ಲಿ ಹೋಗುವಾಗಲೂ ಕೂಡ ಈ ಡ್ಯಾಂ ಕಾಣಸಿಗುತ್ತದೆ.ಶರಾವತಿ ನದಿಯ ಒಡಲಲ್ಲಿ ಹುದುಗಿ ಹೋದ ಇತಿಹಾಸದ ಮೆಲಕುಗಳಿಗೆ ಈ ಡ್ಯಾಂ ಸಾಕ್ಷಿಭೂತವಾಗಿದೆ.

55 ವರ್ಷಗಳ ನಂತರ

55 ವರ್ಷಗಳ ಇತಿಹಾಸದಲ್ಲಿ ಎರಡನೇ  ಬಾರಿಗೆ ಹಿರೇಬಾಸ್ಕರ ಡ್ಯಾಂ ಸಂಪೂರ್ಣವಾಗಿ ನೋಡುವ ಭಾಗ್ಯ ಲಭಿಸಿದ್ದು,ಅಂದು ಅಣೆಕಟ್ಟು ಕಟ್ಟಿದಾಗ ಹೇಗಿತ್ತೋ...ಇಂದಿಗೂ ಕೂಡ ಅದೇ ರೀತಿಯಾಗಿ ಗಟ್ಟಿತನವನ್ನು ಉಳಿಸಿಕೊಂಡಿದೆ....ಇಂದಿನ ಅಣೆಕಟ್ಟುಗಳಿಗೆ 53 ವರ್ಷದ ಹಿಂದಿನ ಹಿರೇಬಾಸ್ಕರ ಡ್ಯಾಂ ಹೋಲಿಸಲು ಸಾಧ್ಯವೇ ಇಲ್ಲ ...ಹಿರೇಭಾಸ್ಕರ ಡ್ಯಾಂ ನ ವಿಶೇಷವೇ ಅಂತಹದ್ದು....ಹೇಗೆ ರೂಪುಗೊಂಡಿತು ಈ ಯೋಜನೆ ಅಂತಿರಾ....

1937 ರಲ್ಲಿ

1937 ರ ಸಂದರ್ಭದಲ್ಲಿ ಮೈಸೂರು ಸಂಸ್ಥಾನ ನಿಧಾನವಾಗಿ ಔದ್ಯೋಗಿಕರಣಗೊಳ್ಳುತ್ತಿದ್ದ ಕಾಲ.ಆದುನೀಕರತೆಯ ತಂತ್ರಜ್ಞಾನಕ್ಕೆ ಹೊಂದಿಕೊಂಡಿದ್ದ ನಾಲ್ಮಡಿ ಕೃಷ್ಣರಾಜ ಒಡೆಯರು ಆಗಷ್ಟೆ ಏಷಿಯದಲ್ಲೇ ಮೊಟ್ಟ ಮೊದಲ ಬಾರಿಗೆ ಶಿವನ ಸಮುದ್ರದಲ್ಲಿ ಹೈಡಲ್ ಪವರ್ ಜನರೇಷನಿಂದ 45 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಹಸಕ್ಕೆ ಕೈ ಹಾಕಿದ್ದರು

ಮುಳುಗಿದ ಮಡೆನೂರು

ಅದೇ ರೀತಿ ಶಿಂಷಾದಲ್ಲೂ 17.2 ಮೆಗಾ ವ್ಯಾಟ್ ಸಾಮರ್ಥ್ಯದ ಪವರ್ ಹೌಸ್ ಗಳ ನಿರ್ಮಾಣಕ್ಕೆ ಅಣಿಯಾಗಿದ್ದರು,ಆದರೂ ಮೈಸೂರು ಮಹರಾಜರಿಗೆ ವಿದ್ಯುತ್ ಕೊರತೆಯ ಭಯ ಕಾಡಿತ್ತು.ಆಗ ಪರಿಸ್ಥಿತಿಯನ್ನು ಎದುರಿಸಲು ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಹಾಗು ಮಹರಾಜರ ಸೂಚನೆಯಂತೆ ನಿವೃತ್ತ ಮುಖ್ಯ ಇಂಜಿನಿಯರ್ ಆಗಿದ್ದ ಎಸ್.ಕೆ ಶೇಷಾಚಾರ್ ರವರ ನೇತ್ರತ್ವದಲ್ಲಿ ಪುವರ್ ಕಮಿಟಿಯನ್ನು ರಚಿಸಲಾಯಿತು.

ಶರಾವತಿ ನದಿಗೆ ಅಣೆಕಟ್ಟು

ಆಗ ಶರಾವತಿ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಿ ಜೋಗದ ಬಳಿ ವಿದ್ಯುತ್ ಉತ್ಪಾದಿಸುವ ನಿರ್ದಾರ ಕೈಗೊಳ್ಳಲಾಯಿತು .ಈ ಬಗ್ಗೆ  ತಜ್ಞ ಕೃಷ್ಣರಾವ್ ಎಂಬ ಸಿವಿಲ್ ಇಂಜಿನಿಯರ್ ಸರ್ವೆ ನಡೆಸಿ,ಶರಾವತಿ ನದಿಯಿಂದ ವಿದ್ಯುತ್ ಉತ್ಪಾದಿಸುವ ಉದ್ದೇಶಕ್ಕೆ ಅಣೆಕಟ್ಟು ಕಟ್ಟಲು ನಿರ್ಧಾರವಾಧ ಜಾಗವೇ ಮಡೆನೂರು ಗ್ರಾಮ.ಈಗ ಮಡೆನೂರು ಗ್ರಾಮವೂ ಕೂಡ ಮುಳುಗಡೆಯಾಗಿದೆ...

ಹಿರೇಭಾಸ್ಕರ ಅಣೆಕಟ್ಟು ನಿರ್ಮಾಣದ ಹಿಂದೆ ಸರ್ ಎಂ ವಿಶ್ವೇಶ್ವರಯ್ಯನವರ ಪಾತ್ರವೂ ಕೂಡ ಗಮನಾರ್ಹವಾಗಿದೆ. ಜೋಗ ಜಲಪಾತದ ವೀಕ್ಷಣೆಗೆ ಬಂದಿದ್ದ ಸರ್ .ಎಂ. ವಿ.ಜಲಧಾರೆಯಲ್ಲಿ ದುಮ್ಮುಕ್ಕುವ ನೀರನ್ನು ಕಂಡು...ಓಹ್..ವಾಟ್ ಎ ವೇಸ್ಟ್ ಎಂದು ಉದ್ಗರಿಸಿದ್ದರು.ಸುಮ್ಮನೆ ಹರಿದು ಹೋಗುತ್ತಿದ್ದ ಶರಾವತಿ ನೀರನ್ನು ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳಲು ಪ್ರೇರಣೆಯಾಗಿದ್ದು ವಿಶ್ವೇಶ್ವರಯ್ಯನವರ ಉದ್ಗಾರವೆ!

ಅಣೆಕಟ್ಟು ಕಟ್ಟಲು ಆರಂಭ

ಇದೇ ಮಡೆನೂರು ಗ್ರಾಮದ ಬಳಿ ಅಣೆಕಟ್ಟೆ ಕಟ್ಟಲು 1939 ಪೆಬ್ರವರಿ 5 ರಂದು ನಾಲ್ಮಡಿ ಕೃಷ್ಣರಾಜ ಒಡೆಯರ್   (nalvadi krishnaraja wodeyar sadhanegalu )ರವರು ಜೋಗದಲ್ಲಿ ಅಡಿಗಲ್ಲು ಹಾಕಿದರು.ಈ ಯೋಜನೆಯ ಅಧೀಕ್ಷಕ ಇಂಜಿನಿಯರ್ ಸುಬ್ಬುರಾವ್ ರವರ ನೇತ್ರತ್ವದಲ್ಲಿ 114 ಅಡಿ ಎತ್ತರದ ,ಸುಮಾರು 25 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯದ ಜಲಾಶಯದ ನಿರ್ಮಾಣ ಕಾರ್ಯ ಆರಂಭವಾಯಿತು.

ಬೆಲ್ಲ ಸುಣ್ಣದ ಮಿಶ್ರಣದ ಸುರ್ಕಿಯಿಂದ ನಿರ್ಮಾಣವಾಯಿತು ಡ್ಯಾಂ.

ಸುಮಾರು 4000 ಅಡಿ ಉದ್ದದ ಹಿರೇಭಾಸ್ಕರ ಡ್ಯಾಂ ನ ಪ್ರಧಾನ ಭಾಗವನ್ನು ಕಲ್ಲು ಮತ್ತು ಸುರ್ಕಿ ಗಾರೆಯಿಂದ ಕಟ್ಟಲಾಗಿದೆ.ಬೆಲ್ಲ ಸುಣ್ಣದ ಮಿಶ್ರಣದ ಕಾಂಕ್ರೀಟ್ ಇದಾಗಿದ್ದು,ಇದರ ಗಟ್ಟಿತನದಿಂದಾಗಿಯೇ ಡ್ಯಾಂ ಇಂದಿಗೂ ನೀರಿನಲ್ಲಿ ಮುಳುಗಿದ್ದರೂ ಜೀವಂತಿಕೆ ಉಳಿಸಿಕೊಳ್ಳಲು ಸಾದ್ಯವಾಗಿದೆ.ಈ ಸುರ್ಕಿಯ ಭಾಗವೇ ಸುಮಾರು 1150 ಅಡಿ ಉದ್ದವಿದೆ.

ವೊಲ್ಯೂಟ್ ಮಾದರಿ ಸೈಪನ್ ವ್ಯವಸ್ಥೆ ಹೊಂದಿದೆ ಡ್ಯಾಂ.

ಜಲಾಶಯದ ನೀರನ್ನು ವಿದ್ಯುತ್ ಉತ್ಪಾದನೆಗೆ ಬಳಸಲು ನಿಯಂತ್ರಿತವಾಗಿ ಹೊರಬಿಡಲು ಆರು ಗೇಟ್ ಗಳನ್ನು ಅಳವಡಿಸಲಾಗಿದೆ.ಪ್ರವಾಹದ ನೀರನ್ನು ಹೊರಗೆ ಹಾಕಲು ವಿಶೇಷ ಮಾದರಿಯ ಹನ್ನೊಂದು ಸೈಫನ್ ಗಳನ್ನು ಅಳವಡಿಸಲಾಗಿದೆ 

ಈ ಸೈಫನ್ ಗಳು ವಾಲ್ಯೂಟ್ ಸೈಫನ್ ಗಳಾಗಿದ್ದು,ಇವುಗಳನ್ನು   ಮದರಾಸಿನ ತಜ್ಞ ಸಿವಿಲ್ ಇಂಜಿನಿಯರ್ ಗಣೇಶ್ ಅಯ್ಯರ್ ಒದಗಿಸಿದ್ದರು. ಅವರು  ಅಣೆಕಟ್ಟೆಯಲ್ಲಿ ಸೈಫನ್ ಗಳನ್ನು ಸಮರ್ಥವಾಗಿ ಅಳವಡಿಸಿದ್ದಾರೆ. ಈ ಅಣೆಕಟ್ಟೆಯ ವಿಶೇಷವೇ ಸೈಫನ್ ಗಳಾಗಿದ್ದು,,,ಇಂದಿಗೂ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.ಒಂದು ಸೈಫನ್ 18 ಅಡಿ ವ್ಯಾಸವನ್ನು ಹೊಂದಿದ್ದು,ಸ್ವಯಂ ಚಾಲಿತವಾಗಿಪ್ರವಾಹದ ನೀರನ್ನು ಹೊರಹಾಕುತ್ತದೆ .ಸೈಫನ್ ಒಳಗಿರುವ ಸುರಳಿಯಾಕಾರದ ವಾಲ್ಯೂಟ್ ಗಳು ನೀರನ್ನು ಚಕ್ರದಂತೆ ತಿರುಗಿಸಿ ಹೊರಹಾಕುತ್ತದೆ.ಒಂದೊಂದು ಸೈಫನ್ ತಲಾ 11 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ.

ಲಿಂಗನಮಕ್ಕಿ  ಭರ್ತಿಯಾದರೆ ಹಿರೆಭಾಸ್ಕರ ಡ್ಯಾಂ ಮೇಲೆ 41 ಅಡಿ ನೀರು ಸಂಗ್ರಹ

ಈ ಜಲಾಶಯ  1947 ರಲ್ಲಿ ಪೂರ್ಣಗೊಂಡು...ಜಲಸಂಗ್ರಹಣೆಗೆ ಅಣೆಯಾಗುತ್ತದೆ. 1948 ಪೆಬ್ರವರಿ ಎರಡರಂದು ಉದ್ಗಾಟಿಸಬೇಕಿದ್ದ ಅಣೆಕಟ್ಟೆಯನ್ನು ಮಹಾತ್ಮಗಾಂಧಿಯವರ ನಿಧನದ ಕಾರಣಕ್ಕಾಗಿ 1948 ರ ಫೆಬ್ರವರಿ 21 ರಂದು ಉದ್ಗಾಟಿಸಲಾಯಿತು. ಈ ಜಲಾಶಯದ ನೀರನ್ನು ಬಳಸಿಕೊಂಡು ಜೋಗದ ಬಳಿ ಮಹಾತ್ಮಗಾಂಧಿ ಜಲವಿದ್ಯುದಾಗಾರದಲ್ಲಿ ಸುಮಾರು 120 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಪ್ರಾರಂಭವಾಯಿತು

ಕೆಲವೇ ವರ್ಷಗಳಲ್ಲಿ ಮುಳುಗಿದ ಡ್ಯಾಂ

1956 ರಲ್ಲಿ ಹಳೆಯ ಮೈಸೂರು ರಾಜ್ಯ ವಿಶಾಲ ಕರ್ನಾಟಕವಾಗಿ ವಿಸ್ತರಣೆಗೊಂಡಾಗ ಮತ್ತೆ ವಿದ್ಯುತ್ ಕೊರತೆ ಎದುರಾಯಿತು.ಅದುವರೆಗೂ ಶರಾವತಿ ನದಿಯ ಶೇಕಡಾ 20 ರಷ್ಟು ನೀರನ್ನು ಮಾತ್ರ ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತಿತ್ತು .ಹೀಗಾಗಿ ಈಗಿರುವ ಪ್ರಮುಖ ಲಿಂಗನಮಕ್ಕಿ ಅಣೆಕಟ್ಟು ಕಟ್ಟುವುದು ಆಗ ಅನಿವಾರ್ಯವಾಯಿತು

ಲಿಂಗನಮಕ್ಕಿ ಜಲಾಶಯ ಆರಂಭ

1964 ರಲ್ಲಿ ಲಿಂಗನಮಕ್ಕಿ ಅಣೆಕಟ್ಟು ಪೂರ್ಣಗೊಂಡಾಗ ಈ ಮಡೆನೂರಿನ ಹಿರೆಭಾಸ್ಕರ ಡ್ಯಾಂ ಮುಳುಗಡೆಯಾಗಬೇಕಾಯಿತು.ಹಿರೆಭಾಸ್ಕರ ಡ್ಯಾಂ ಗಿಂತಲೂ ಎತ್ತರದಲ್ಲಿ ಶರಾವತಿ ನೀರನ್ನು ಸಂಗ್ರಹಿಸುವ ಸಲುವಾಗಿ ಲಿಂಗನಮಕ್ಕಿ ಬಳಿ ಡ್ಯಾಂ ಕಟ್ಟಿದ್ದರಿಂದ ...ಹಿರೆಬಾಸ್ಕರ ಡ್ಯಾಂ ಮುಳುಗಡೆಯಾಯಿತು.ಲಿಂಗನಮಕ್ಕಿ ಅಣೆಕಟ್ಟು ಭರ್ತಿಯಾದರೆ ಹಿರೆಭಾಸ್ಕರ ಡ್ಯಾಂ ಮೇಲೆ 41 ಅಡಿ ನೀರು ಸಂಗ್ರಹಗೊಳ್ಳುತ್ತೆ.ಇಂತಹ ಅಪೂರ್ಣ ಅದ್ಬುತವಾದ ಹಿರೇಬಾಸ್ಕರ ಡ್ಯಾಂ,ಲಿಂಗಮಕ್ಕಿ ಅಣೆಕಟ್ಟೆಯನ್ನು ಕಟ್ಟಿದ ಹದಿನಾರೇ ವರ್ಷದಲ್ಲಿ ಶರಾವತಿ ನದಿಯಲ್ಲಿ ಬಂಧಿಯಾಗಿದ್ದು,ದುರಂತವೇ ಸರಿ.

ಮಂಡ್ಯ ಮಳವಳ್ಳಿ ಕಾರ್ಮಿಕರು

ಈ ಅಣೆಕಟ್ಟು ಕಟ್ಟಲು ಮಂಡ್ಯ,ಮಳವಳ್ಳಿ,ಭಾಗದ ಸುಮಾರು ಒಂಬತ್ತು ಸಾವಿರ ಕಾರ್ಮಿಕರು ಶ್ರಮಿಸಿದ್ದಾರೆ.ಕಟ್ಟಡ ಸಾಮಾಗ್ರಿ ಸಾಗಿಸಲು ಎತ್ತು ಕತ್ತೆಗಳು ಸಾಥ್ ನೀಡಿವೆ.ಆ ಕಾಲದಲ್ಲಿ ಅಣೆಕಟ್ಟು ಕಟ್ಟಲು ತಗುಲಿದ ವೆಚ್ಚ ಸುಮಾರು ಒಂದು ಕಾಲು ಕೋಟಿ ರೂಪಾಯಿ.ಸಾವಿರಾರು ಜನರು ಈ ಯೋಜನೆಯಿಂದ ಸ್ಥಳಾಂತರಗೊಳ್ಳಬೇಕಾಯಿತು.ಈ ಯೋಜನೆ ಶರಾವತಿ ದಟ್ಟ ಅರಣ್ಯದ ಲಕ್ಷಾಂತರ ಎಕರೆ ವನ್ಯಸಂಪತ್ತು ಜಲಮಯವಾಯಿತು.ನೂರಾರು ಹಳ್ಳಿಗಳು ಮುಳುಗಡೆಯಾದವು.

ಶರಾವತಿ ಇಳಿದಾಗ

ಅಂದಿನ ತಂತ್ರಜ್ಞರು.ಹಿರೇಬಾಸ್ಕರ ಡ್ಯಾಂ ನೋಡಿದ್ರೆ...ಇತ್ತಿಚ್ಚಿಗೆ ಕಟ್ಟಿದ ಅಣೆಕಟ್ಟೆಯಂತಿದೆ.ಅಣೆಕಟ್ಟೆಯ ಯಾವ ಭಾಗದಲ್ಲೂ ಹಾನಿಯಾದಂತೆ ಕಾಣೋದಿಲ್ಲ....ಪ್ರತಿ ವರ್ಷ ಬೇಸಿಗೆಯಲ್ಲಿ ಅಂದರೆ ಗರಿಷ್ಟ 1819 ಅಡಿ ನೀರಿನ ಸಂಗ್ರಹ ಮಟ್ಟ ಹೊಂದಿರುವ ಲಿಂಗನಮಕ್ಕಿ ಜಲಾಶಯದ ಮಟ್ಟ 1770 ಅಡಿಗೆ ಇಳಿದಾಗ ಶರಾವತಿ ಹಿನ್ನೀರು ಕಡಿಮೆಯಾಗಿ ಹಿರೇಬಾಸ್ಕರ ಡ್ಯಾಂ ಕಾಣಸಿಗುತ್ತದೆ.1750 ಅಡಿ ಇದ್ದಾಗ ಈ ಅಣೆಕಟ್ಟೆಯ ಒಳಭಾಗದಲ್ಲಿ ಇಳಿದು ನೋಡಬಹುದು.ಜಲಾಶಯ ಬರಿದಾದಾಗ ಇಲ್ಲಿರುವ ಮನೆ ತಳಪಾಯ,ಮಾಸ್ತಿಗಲ್ಲು ವೀರಗಲ್ಲು,ರಸ್ತೆ ಸೇತುವೆಗಳ ಕಾಣಸಿಗುವ ಮೂಲಕ ಇತಿಹಾಸದ ಪುಟಗಳನ್ನು ತೆರೆದಿಡುತ್ತೆ.

ಮತ್ತೆ ಅಭಿವೃದ್ಧಿ

ಯಾವ ಹಿರೇಭಾಸ್ಕರ ಡ್ಯಾಂ ನಿರ್ಮಾಣದಿಂದಾಗಿ ಶರಾವತಿ ಮುಳುಗಡೆ ಸಂತ್ರಸ್ಥರ ಬದುಕು ಅತಂತ್ರವಾಯಿತೋ...ಅದೇ ಅಭಿವೃದ್ಧಿಯ ದಾಪುಗಾಲಿಗೆ ಮಡೆನೂರು ಡ್ಯಾಂ ಬಲಿಯಾಗಿದ್ದು,,,ದುರಂತವೇ ಸರಿ.  ಅಂದು ಹಿರೆಭಾಸ್ಕರ ಡ್ಯಾಂ ನಿಂದ ತಂತ್ರಸ್ಥರಾದ ಕುಟುಂಬಗಳಿಗೆ ಸರ್ಕಾರ ಇಂದಿಗೂ ಪರಿಹಾರ ನೀಡಿಲ್ಲ.ಹಿರೆಭಾಸ್ಕರ ಡ್ಯಾಂ ನಿಂದ ನೆಲೆಕಳೆದುಕೊಂಡು ಮತ್ತೊಂದು ನೆಲೆಯಲ್ಲಿ ಬದುಕು ಕಂಡುಕೊಂಡವರು...ಮತ್ತೆ ಲಿಂಗನಮಕ್ಕಿ ಡ್ಯಾಂ ನಿರ್ಮಾಣದ ಸಂದರ್ಭದಲ್ಲಿ ಅಲ್ಲಿ ಕೂಡ ಸ್ಥಳಾಂತರಗೊಳ್ಳಬೇಕಾಯಿತು...ಹಿರೆಭಾಸ್ಕರ ಮುಳುಗಡೆ ಸಂತ್ರಸ್ಥರು ಶರಾವತಿ ಯೋಜನೆಯಿಂದಾಗಿಯೇ ನಾಲ್ಕೈದು ಬಾರಿ ಸ್ಥಳಾಂತರಗೊಂಡ ಇತಿಹಾಸವಿದೆ. ಈಗಲೂ ಅಜ್ಜ ಮುತ್ತಾತಂದರೂ ಬಾಳಿ ಬದುಕಿದ ನೆಲವನ್ನು ಕಣ್ತುಂಬಿಕೊಳ್ಳಲು ಅವರ ವಂಶದ ಕುಡಿಗಳು ಇಂದಿಗೂ ಮಡೆನೂರು ಡ್ಯಾಂಗೆ ಭೇಟಿ ನೀಡಿ....ಹಳೆ ನೆನಪುಗಳನ್ನು ಮೆಲಕು ಹಾಕುತ್ತಾರೆ.

ಕಾಣೆಯಾದ ವಿಗ್ರಹ!

ಮಡೆನೂರು ಡ್ಯಾಂ ಬಳಿ ಒಂದು ವಿಗ್ರಹ ಕಾಣೆಯಾದ ನಂತರ ಈ ಸ್ಥಳಕ್ಕೆ ಪೊಲೀಸ್ ಭದ್ರತೆ ನೀಡಲಾಗಿದೆ.ಇಷ್ಟೆಲ್ಲಾ ದುರಂತದ ಕತೆ ಹೇಳುವ ಹಿರೆಭಾಸ್ಕರ ಡ್ಯಾಂ ಬೇಸಿಗೆಯಲ್ಲಿ ಈ ಬಾರಿ ಸಂಪೂರ್ಣ ಕಾಣಸಿಕ್ಕಿದ್ದು,,,ಮತ್ತೆ ಮಳೆಗಾಲದ ಆರಂಭದಲ್ಲಿ ಮುಳುಗಡೆಗೆ ಸಿದ್ದವಾಗಿ ನಿಂತಿದೆ.ಇನ್ನು ಒಂದು ತಿಂಗಳು...ಮಡೆನೂರು ಡ್ಯಾಂ ...ವೀಕ್ಷಣೆಗೆ ಲಭ್ಯವಿರುವ ಸಾಧ್ಯತೆಯಿದೆ.

ಶರಾವತಿ ನದಿ ಬತ್ತಿದಾಗ ಮಾತ್ರ ಗೋಚರಿಸುವ ಹಿರೆಭಾಸ್ಕರ ಇತಿಹಾಸದ ನೆನಪುಗಳನ್ನು ಮೆಲಕುಹಾಕುವಂತೆ ಮಾಡುತ್ತದೆ.ರಾಜ್ಯಕ್ಕೆ ಅಂದು ಶೇಕಡಾ 35 ರಷ್ಟು ವಿದ್ಯುತ್ ಪೂರೈಸುವ ಲಿಂಗನಮಕ್ಕಿ ಜಲಾಶಯದ ಮೊದಲ ಕುಡಿ ಹಿರೆಭಾಸ್ಕರ ಈಗ ಅಭಿವೃದ್ಧಿಯ ವಿನಾಶಕ್ಕೆ ಸಾಕ್ಷಿಭೂತವಾಗಿರುವ ಡ್ಯಾಂ ಅಷ್ಟೆ.