ಈಡಿಗರಿಗೆ ಅನ್ಯಾಯವಾದರೆ ಸಹಿಸೆವು, ಹಕ್ಕಿಗಾಗಿ ಹೋರಾಟ ನಿರಂತರ

A massive 'Hakkottaya Sammelan' was organised in Shivamogga on Sunday under the leadership of Sree Narayana Guru Samaja Hitarakshana horata Samiti.

ಈಡಿಗರಿಗೆ ಅನ್ಯಾಯವಾದರೆ ಸಹಿಸೆವು, ಹಕ್ಕಿಗಾಗಿ ಹೋರಾಟ ನಿರಂತರ

ಶಿವಮೊಗ್ಗ, ಜ.೨೨: ಯಾರೊಂದಿಗೂ ಸಂಘರ್ಷ ಇಲ್ಲ ಅದರೆ ಸಂವಿಧಾನ ನಮಗೆ ಕೊಟ್ಟಿರುವ ಹಕ್ಕನ್ನು ಕಸಿದುಕೊಳ್ಳಲು ಬಂದರೆ ನಾವು ಸುಮ್ಮನಿರುವುದಿಲ್ಲ. ನಿರಂತರ ಹೋರಾಟ ಮುಂದುವರಿಯಲಿದೆ ಎಂದು ಹೊಸನಗರ ತಾಲೂಕು ನಿಟ್ಟೂರಿನ ಶ್ರೀ ನಾರಾಯಣ ಗುರು ಮಹಾಸಂಸ್ಥಾನದ ಪೀಠಾಧಿಪತಿ ರೇಣುಕಾನಂದ ಸ್ವಾಮೀಜಿ ಹೇಳಿದರು.

ಶಿವಮೊಗ್ಗದಲ್ಲಿ ಭಾನುವಾರ ಶ್ರೀ ನಾರಾಯಣಗುರು ಸಮಾಜ ಹಿತರಕ್ಷಣಾ ಹೋರಾಟ ಸಮಿತಿ ನೇತೃತ್ವದಲ್ಲಿ ಆಯೋಜಿಸಿದ್ದ ಬೃಹತ್ ಹಕ್ಕೊತ್ತಾಯ ಸಮಾವೇಶದ ಸಾನ್ನಿದ್ಯವಹಿಸಿ ಅವರು ಮಾತನಾಡಿದರು.  ಈಡಿಗ ಸಮಾಜ ಸೇರಿದಂತೆ ಇತರೆ ಹಿಂದುಳಿದ ವರ್ಗಗಳಿಗೆ ಸಂವಿಧಾನ ಕೊಟ್ಟಿರುವ ಹಕ್ಕು ಮೊಟಕುಗೊಳ್ಳಬಾರದು. ಈಡಿಗ ಅಭಿವೃದ್ಧಿ ನಿಗಮ ಘೋಷಣೆ ಮಾತ್ರ ಆಗಿದ್ದು, ಆದೇಶವಾಗಬೇಕು ಮತ್ತು ಸರಕಾರ ತಕ್ಷಣ ೫೦೦ ಕೋಟಿ ರೂ. ಬಿಡುಗಡೆ ಮಾಡಬೇಕು. ಇಂದಿನ ಹೋರಾಟ ನಮ್ಮ ಪಾಲಿನ ಹಕ್ಕು ಕೇಳುವುದಾಗಿದೆಯೇ ವಿನಾ ಅನ್ಯರಿಗೆ ಕೊಡಬೇಡಿ ಎಂದು ಹೇಳುವುದಲ್ಲ. ಕಾಡು ಮೇಡಲ್ಲಿ ವಾಸಿಸುತ್ತಿರುವ ನಮ್ಮ ಸಮುದಾಯಕ್ಕೆ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸಶಕ್ತವಾಗುವ ಅನಿವಾರ್ಯತೆ ಇದೆ. ಈ ನೆಲೆಯಲ್ಲಿ ಒಗ್ಗಟ್ಟು ಮತ್ತು ಹೋರಾಟದಿಂದ ಮುನ್ನಡೆಯುವ ಸಂಕಲ್ಪವನ್ನು ಎಲ್ಲರೂ ಮಾಡಬೇಕೆಂದರು.

ಈಡಿಗ ಸಮಾಜದ ಮತ್ತೊಬ್ಬ ಶ್ರೀಗಳಾದ ಅರುಣಾನಂದ ಸ್ವಾಮೀಜಿ ಮಾತನಾಡಿ, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂಗಾರಪ್ಪ ಅವರ ಹೆಸರು ನಾಮಕಾರಣ ಮಾಡಬೇಕು. ಸಿಗಂದೂರು ದೇವಸ್ಥಾನದ ವಿಚಾರದಲ್ಲಿ ಆಳುವ ಸರಕಾರಗಳ ಹಸ್ತಕ್ಷೇಪ ನಿಲ್ಲಬೇಕೆಂದು ಹೇಳಿದರು. 

ಶ್ರೀ ನಾರಾಯಣಗುರು ವಿಚಾರವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಅವರು ಮಾತನಾಡಿ, ಈಡಿಗ ಸಮುದಾಯದ ಯುವಕರು ಕಟ್ಟಿದ ಹೋರಾಟ ಇಂದು ಬೃಹತ್ ಹಕ್ಕೊತ್ತಾಯ ಸಮಾವೇಶವಾಗಿದೆ. ಇಲ್ಲಿ ಸೇರಿರುವ ಸಂಖ್ಯೆಯನ್ನು ಗಮನಿಸಿದರೆ ನಮ್ಮವರ ಭಾವನೆ ಅರ್ಥವಾಗುತ್ತದೆ. ಮೀಸಲಾತಿಗಾಗಿ ನಾವು ಭಿಕ್ಷೆ ಕೇಳುತ್ತಿಲ್ಲ. ಸಂವಿಧಾನದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಹಕ್ಕನ್ನು ನಮಗೆ ಕೊಡಿ ಎಂದು ಕೇಳುತ್ತಿದ್ದೇವೆ. ಈಡಿಗ ಅಭಿವೃದ್ಧಿ ನಿಗಮಕ್ಕೆ ಆದೇಶ ಮಾಡಿ ಕೂಡಲೇ ಆದೇಶ ಹೊರಡಿಸಬೇಕು. ದೀವರ ಅಸ್ಮಿತೆಯಾದ ಹಸೆ ಚಿತ್ತಾರಕ್ಕೆ ಅಕಾಡೆಮಿ ರಚಿಸಬೇಕು ಎಂದರಲ್ಲದೆ, ಈಡಿಗ ಸಮುದಾಯದ ಎಲ್ಲಾ ೨೬ ಪಂಗಡಗಳನ್ನು ಸಂಘಟಿಸಿ ಮಾಡಿರುವ ಈ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು. 

ಸಾಗರ ಶಾಸಕ ಹರತಾಳು ಹಾಲಪ್ಪ ಅವರು ಮಾತನಾಡಿ, ಸಮಾಜದ ಒಬ್ಬ ಕಾರ್ಯಕರ್ತನಾಗಿ ನಿಮ್ಮ ಎಲ್ಲಾ ಬೇಡಿಕೆಗಳು ನ್ಯಾಯಯುತವಾಗಿವೆ ಎಂಬ ಅರಿವಿದೆ. ಸರಕಾರದ ಭಾಗವಾಗಿ ನಾನು ಮಾತನಾಡುವುದಾದರೆ, ಈಡಿಗ ಸಮುದಾಯಕ್ಕೆ ಸರಕಾರ ಹಲವು ಕೆಲಸ ಮಾಡಿದೆ. ಮುಂಬರುವ ಅಧಿವೇಶನದಲ್ಲಿ ಈಡಿಗ ಅಭಿವೃದ್ಧಿ ನಿಗಮಕ್ಕೆ ಆದೇಶವಾಗಲಿದೆ. ನಮಗಿರುವ ಮೀಸಲಾತಿಯಲ್ಲಿ ಧೋಖವಾಗಲು ನಾವು ಬಿಡುವುದಿಲ್ಲ. ಸರಕಾರಕ್ಕೂ ಆ ಉದ್ದೇಶವಿಲ್ಲ. ನಮ್ಮವರೇ ಆದ ಸಚಿವ ಸುನೀಲ್ ಕುಮಾರ್ ಮತ್ತು ಶ್ರೀನಿಸವಾಸ್ ಪೂಜಾರಿ ಅವರು ಸರಕಾರದಲ್ಲಿ ಪ್ರಭಾವಿಗಳಾಗಿದ್ದಾರೆ. ಅವರಿಗೆ ಸಮಸ್ಯೆ ಮನವರಿಕೆ ಮಾಡುವ ಸಲುಗೆ ಮತ್ತು ಸಾಮರ್ಥ್ಯ ನನಗಿದೆ. ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಮನವರಿಕೆ ಮಾಡುತ್ತವೆ. ನಮ್ಮ ಸರಕಾರದ ಆಯುಷ್ಯ ಮುಗಿಯುತ್ತಿದೆ ಇರುವ ಅವಧಿಯಲ್ಲಿ ನಮ್ಮ ಸಮುದಾಯಕ್ಕೆ ಏನಾಗಬೇಕೊ ಅದನ್ನು ಮಾಡುವೆ ಎಂದರು.ಶರಾವತಿ ಸಂತ್ರಸ್ಥರ ಸಮಸ್ಯೆ ಇಂದಿನದಲ್ಲ. ಅದಕ್ಕೆ ಕೆಲವು ಕಾನೂನು ತೊಡಕುಗಳಿವೆ. ಈ ಎಲ್ಲವನ್ನೂ ಸರಿಮಾಡುವ ದಿಸೆಯಲ್ಲಿ ನಿರಂತರ ಪ್ರಯತ್ನ ಸಾಗಿದೆ. ಅವರು ಮಾಡಿರುವ ಒಂದು ಗುಂಟೆ ಜಾಗವನ್ನೂ ಬಿಡಿಸಲು ಬಿಡುವುದಿಲ್ಲ ಎಂದು ಹೇಳಿದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಕಾರ್ಯಾಧ್ಯಕ್ಷರೂ ಆದ ಶ್ರೀಕ್ಷೇತ್ರ ಸಿಗಂದೂರು ಧರ್ಮದರ್ಶಿ ಡಾ.ಎಸ್.ರಾಮಪ್ಪ ಅವರು ಮಾತನಾಡಿ, ಬೇರೆಯವರಿಗೆ ನೋವು ಕೊಟ್ಟು ನಮ್ಮ ಹಕ್ಕು ಪಡೆಯುತ್ತಿಲ್ಲ. ನ್ಯಾಯಯುತ ಬೇಡಿಕೆ ಈಡೇರಿಸಿ. ನಾಡಿಗೆ ಬೆಳಕು ನೀಡಲು ತ್ಯಾಗ ಮಾಡಿದ ಸಂತ್ರಸ್ಥರನ್ನು ರಕ್ಷಣೆ ಮಾಡುವ ಮತ್ತು ಅವರ ಭೂಮಿಗೆ ಹಕ್ಕುಪತ್ರ ಕೊಡುವ ಕೆಲಸ ಆಗಬೇಕಿದೆ. ಜನರಲ್ಲಿ ಜಾಗೃತಿ ಮೂಡಿಸಲು ಮಾಡಿದ ಈ ಹೋರಾಟ ಯಶಸ್ವಿಯಾಗಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ನಾರಾಯಣಗುರು ವಿಚಾರ ವೇದಿಕೆ ಕಾರ್ಯಾಧ್ಯಕ್ಷ ಮುಡುಬ ರಾಘವೇಂದ್ರ, ಬುಡಕಟ್ಟು ಪರಂಪರೆಯನ್ನು ಹೊಂದಿರುವ ಈಡಿಗ ಸಮುದಾಯಕ್ಕೆ ಗಣಪತಿಯಪ್ಪ, ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಅವರಂತಹ ನಾಯಕರು ಸ್ವಾಭಿಮಾನ ನೀಡಿದರು. ಇಂದು ನಮ್ಮ ಮೇಲೆ ಸವಾರಿ ಮಾಡುವ ಪ್ರಯತ್ನ ನಡೆಯುತ್ತಿದೆ. ನಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಯುತ್ತಿದೆ. ಜಿಲ್ಲೆಯ ಜನರು ವ್ಯಾಪಕ ಬೆಂಬಲ ನೀಡಿದ್ದಾರೆ.ಇಲ್ಲಿನ ಒಗ್ಗಟ್ಟು ನಮ್ಮವರ ಶಕ್ತಿಯನ್ನು ತೋರಿಸಿದೆ. ನಮ್ಮ ಹೋರಾಟ ಗೆಲುವು ಸಿಗುವ ತನಕ ಮುಂದುವರಿಯಲಿದೆ ಎಂದರು. 

ಹೋರಾಟ ಸಮಿತಿ ಗೌರವ ಅಧ್ಯಕ್ಷ ಮಾಜಿ ಶಾಸಕ ಡಾ.ಜಿ.ಡಿ.ನಾರಾಯಣಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಪ್ರಮುಖರಾದ ಬಂಡಿರಾಮಚಂದ್ರ, ಈಡಿಗ ಸಂಘದ ಜಿಲ್ಲಾಧ್ಯಕ್ಷ ಆರ್.ಶ್ರೀಧರ್, ಮಹಿಳಾ ಅಧ್ಯಕ್ಷೆ ಗೀತಾಂಜಲಿ ದತ್ತಾತ್ರೇಯ, ಡಾ.ರಾಜನಂದಿನಿ ಕಾಗೋಡು, ಈಡಿಗ ಸಂಘದ ರಾಜ್ಯಪ್ರತಿನಿಧಿ ರವಿ, ಕೆ.ಎಸ್.ಪ್ರಶಾಂತ್, ಪ್ರವೀಣ್ ಹಿರೇಇಡಗೋಡು, ಕೆ.ಎಲ್.ಉಮೇಶ್, ಬಿಲ್ಲವ ಸಂಘದ ಅಧ್ಯಕ್ಷ ಭುಜಂಗಯ್ಯ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಹೊದಲ ಶಿವು ಸ್ವಾಗತಿಸಿದರು. ರಾಘವೇಂದ್ರ ಸುಂಟ್ರಳ್ಳಿ, ಜಯಲಕ್ಷ್ಮಿರಾಜ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಪ್ರಭಾವತಿ ಚಂದ್ರಕಾಂತ್ ವಂದಿಸಿದರು.

ಯಶಸ್ವಿ ಹೋರಾಟ , ಬೃಹತ್ ಮೆರವಣಿಗೆ

ಹಲವು ಅಡಚಣೆಗಳ ನಡುವೆಯೂ ಶಿವಮೊಗ್ಗದಲ್ಲಿ ನಡೆದ ಈಡಿಗರ ಹಕ್ಕೊತ್ತಾಯ ಸಮಾವೇಶ ಯಶಸ್ವಿಯಾಗಿದೆ. ಜಿಲ್ಲೆಯ ವಿವಿಧೆಡೆಯಿಂದ ಬಂದ ಸಹಸ್ರಾರು ಜನರು ಹೆಲಿಪ್ಯಾಡ್‌ನಿಂದ ನಗರ ಸೈನ್ಸ್ ಮೈದಾನದ ವರೆಗೆ ಬೃಹತ್ ಪಾದಯಾತ್ರೆ ನಡೆಸಿದರು. ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರೂ ಬಂದಿದ್ದರು.  ಸಾರಗನ ಜೆಡ್ಡು ಕಾರ್ತಿಕೇಯ ಕ್ಷೇತ್ರದ ಯೋಗೇಂದ್ರ ಶ್ರೀ, ಸಿಗಂದೂರು ಧರ್ಮದರ್ಶಿ ಡಾ.ಎಸ್.ರಾಮಪ್ಪ, ರೇಣುಕಾನಂದ ಸ್ವಾಮೀಜಿ, ಅರುಣಾನಂದ ಸ್ವಾಮೀಜಿ ಅವರು ಮೆರವಣಿಗೆಯಲ್ಲಿ ಸಾಗಿಬಂದರು. ಸಮಾವೇಶದ ನಿಮಿತ್ತ ನಗರಾದ್ಯಂತ ಹಳದಿ ಶಾಲು ಹಾಗೂ ಭಾವುಟ ಹಿಡಿದ ಜನರು ಕಾಣುತ್ತಿದ್ದರು. 

ಸಿಗಂದೂರು ಚೌಡೇಶ್ವರಿ ದೇವಿಗೆ ಎಲ್ಲ ಸಂಕಷ್ಟಗಳಿಗೆ ಉತ್ತರ ಕಂಡುಕೊಳ್ಳುವ ಶಕ್ತಿ ಇದೆ. ನಮ್ಮ ಕುಟುಂಬ ದೇವಿಯ ಭಕ್ತರು. ದೇವಿಯ ಶಕ್ತಿಯ ಬಗ್ಗೆ ನಮ್ಮ ಅಜ್ಜ ಮತ್ತು ಅಪ್ಪ ಹೇಳಿದ್ದನ್ನು ಕೇಳಿದ್ದೇನೆ. ದೇವಸ್ಥಾನದ ವಿಚಾರದಲ್ಲಿ ಯಾರು ತಪ್ಪು ಮಾಡಿದರೂ ಶಿಕ್ಷೆ ಆಗುತ್ತದೆ. ನಾನು ದೇವಾಲಯದ ಆಡಳಿತದ ಪರನೂ ಇಲ್ಲ ವಿರುದ್ಧನೂ ಇಲ್ಲ ಎಂದು ಸಾಗರ ಶಾಸಕ ಹರತಾಳು ಹಾಲಪ್ಪ  ಹೇಳಿದರು

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com