ಜನವರಿ 26 ರಂದು ಶಿವಮೊಗ್ಗ ಸ್ಪೋಟಿಸುತ್ತಾರೆ ಎಂದು ಬಂದಿದ್ದ ಫೋನ್​ ಕಾಲ್​ನಿಂದ ಪೊಲೀಸರಿಗೆ ಸಿಕ್ಕಿತ್ತು ಅಪಾರ ಸ್ಫೋಟಕ ಮತ್ತು ನಕ್ಸಲರ ಪತ್ರ! ಆದರೆ ಅವತ್ತಿನ ಘಟನೆಯಲ್ಲಿ ನಡೆದಿದ್ದೇ ಬೇರೆ!? ಜೆಪಿ ಫ್ಲ್ಯಾಶ್​ಬ್ಯಾಕ್​

On January 26, the police got a huge quantity of explosives and a Naxalite letter from a phone call that claimed to explode in Shimoga. But what happened that day was different! JP Flashback

ಜನವರಿ 26 ರಂದು ಶಿವಮೊಗ್ಗ ಸ್ಪೋಟಿಸುತ್ತಾರೆ ಎಂದು ಬಂದಿದ್ದ ಫೋನ್​ ಕಾಲ್​ನಿಂದ ಪೊಲೀಸರಿಗೆ ಸಿಕ್ಕಿತ್ತು ಅಪಾರ ಸ್ಫೋಟಕ ಮತ್ತು ನಕ್ಸಲರ ಪತ್ರ!  ಆದರೆ ಅವತ್ತಿನ ಘಟನೆಯಲ್ಲಿ ನಡೆದಿದ್ದೇ ಬೇರೆ!?  ಜೆಪಿ ಫ್ಲ್ಯಾಶ್​ಬ್ಯಾಕ್​
ಜನವರಿ 26 ರಂದು ಶಿವಮೊಗ್ಗ ಸ್ಪೋಟಿಸುತ್ತಾರೆ ಎಂದು ಬಂದಿದ್ದ ಫೋನ್​ ಕಾಲ್​ನಿಂದ ಪೊಲೀಸರಿಗೆ ಸಿಕ್ಕಿತ್ತು ಅಪಾರ ಸ್ಫೋಟಕ ಮತ್ತು ನಕ್ಸಲ ಪತ್ರ! ಆದರೆ ಅವತ್ತಿನ ಘಟನೆಯಲ್ಲಿ ನಡೆದಿದ್ದೇ ಬೇರೆ!? ಜೆಪಿ ಫ್ಲ್ಯಾಶ್​ಬ್ಯಾಕ್​

ಜನವರಿ 26ನೇ ತಾರೀಖು ನಾವು ಎಲ್ಲಾ ಕಡೆ ಏಕಕಾಲದಲ್ಲಿ ಬ್ಲಾಸ್ಟಿಂಗ್ ಮಾಡಿ ಮಾರಣ ಹೋಮ ನಡೆಸ್ತಿವಿ. ಹೀಗೊಂದು ಪೋಸ್ಟ್​  ಮೋಸ್ಟ್ ವಾಂಟೆಡ್ ನಕ್ಸಲ್​ರು ತಮ್ಮ ನಡುವೆ ಬರೆದಿದ್ದರು ಎನ್ನಲಾದ  ಪತ್ರವೊಂದು ಪೊಲೀಸರಿಗೆ ಅವತ್ತು ಸಿಕ್ಕಿತ್ತು . ಅದರ ಬೆನ್ನಲ್ಲೆ  ಸಿಕ್ಕ ಸ್ಪೋಟಕ ವಸ್ತುಗಳು ಪೊಲೀಸರನ್ನು ಬೆಸ್ತು ಬೀಳಿಸಿತ್ತು. 

ನಿಜಕ್ಕೂ ಅವತ್ತು ನಕ್ಸಲರೇ ಆ ಪತ್ರ ಬರೆದಿದ್ರಾ..,ಆ ಸ್ಥಳದಲ್ಲಿ ಸ್ಪೋಟಕಗಳನ್ನುಇಟ್ಟಿದ್ರಾ..,ಅಥವಾ ಬೇರೆ ಯಾರಾದ್ರು ಈ ಕೆಲಸ ಮಾಡಿದ್ರಾ... ಜನವರಿ 26 ರಂದು ಸ್ಪೋಟಿಸಲು ಸಂಚು ರೂಪಿಸಿದ್ದು ಯಾರು? ರೋಚಕ ಸಿನಿಮಾಗಿಂತಲೂ ಡಿಫರೆಂಟ್​ ಹಾಗೂ ಸಖತ್​ ಇಂಟರ್​ಸ್ಟಿಂಗ್​ ಆದ  ಶಿವಮೊಗ್ಗದಲ್ಲಿ ನಡೆದ ಆ ಕ್ರೈಂ ಸ್ಟೋರಿಯೇ ಇವತ್ತಿನ ಫ್ಲ್ಯಾಶ್​ ಬ್ಯಾಕ್​..

BREAKING NEWS : ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪುರವರ ಹೆಸರು ಫಿಕ್ಸ್ ! ಬಿಎಸ್​ ಯಡಿಯೂರಪ್ಪ ಘೋಷಣೆ

ಶಿವಮೊಗ್ಗ ಜಿಲ್ಲೆ,ಹೇಳಿ ಕೇಳಿ ಎಲ್ಲಾ ಪ್ರಖ್ಯಾತಿ ಕುಖ್ಯಾತಿಗಳ ಹಣೆಪಟ್ಟೆಯನ್ನು ಕಟ್ಟಿಕೊಂಡ ಜಿಲ್ಲೆ. ಒಂದು ಕಾಲದಲ್ಲಿ ನಕ್ಸಲ್ ಚಳುವಳಿಗೆ ತಾಯಿ ಬೇರಾಗಿದ್ದ ಶಿವಮೊಗ್ಗದಲ್ಲಿ, ಇತ್ತಿಚ್ಚಿನ ವರ್ಷಗಳಲ್ಲಿ ನಕ್ಸಲ್ ಚಟುವಟಿಕೆ ಕುಂಟಿತಗೊಂಡಿದೆ. ನಕ್ಸಲರ ಸಿದ್ದಾಂತಕ್ಕೆ ಮಲೆನಾಡ ಗಡಿಭಾಗದ ಜನರು ವಿಮುಖರಾಗಿದ್ದಾರೆ. ಹೀಗಾಗಿ ನಕ್ಸಲರ ಸಂಘಟನಾ ಶಕ್ತಿ ಕುಸಿದಿದೆ. ವೈಚಾರಿಕಾ,ಸೈದ್ಧಾಂತಿಕ ಭಿನ್ನಾಬಿಪ್ರಾಯದಿಂದ ಬೇರೆಯಾದ ಮಂದಗಾಮಿ  ಮತ್ತು ತೀವ್ರಗಾಮಿ ನಕ್ಸಲರಲ್ಲಿ ಬಹುತೇಕಮಂದಿ ಕಾಡನ್ನು ತೊರೆದು, ನಾಡು ಸೇರಿದ್ದಾರೆ.ಆದರೆ ಆಗ ಸನ್ನಿವೇಶ ಹಾಗಿರಲಿಲ್ಲ. ನಕ್ಸಲಿಸಂ ಬಗ್ಗೆ, ಬೇರೆಯದ್ದೇ ಆದ ಗಂಭೀರ ಪರಿಗಣನೆ ಹೊಂದಿದ್ದ ಸಮಯವದು. ಅಂತಹ ಸಂದರ್ಭದಲ್ಲಿತಯೇ ಮದ್ಯರಾತ್ರಿ  ಪೊಲೀಸ್ ಕಂಟ್ರೋಲ್ ರೂಂ ಗೆ ಬಂದಿತ್ತು ಅನಾಮದೇಯ ಕರೆ

ಆರಂಭ!

2014 ಜನವರಿ 14 ರಾತ್ರಿ ಸುಮಾರು 2.48 ಗಂಟೆ ಹೊತ್ತಿಗೆ ಶಿವಮೊಗ್ಗ ಪೊಲೀಸ್ ಕಂಟ್ರೋಲ್ ರೂಂಗೆ ಕಾಯಿನ್ ಬೂತ್ ನಿಂದ ಒಂದು ಕರೆ ಬಂದಿತ್ತು. ನಗರದ ಆನಂದರಾವ್ ರಸ್ತೆಯಲ್ಲಿರುವ ಒಬ್ಬರ ಮನೆ ಬಳಿ  ನಕ್ಸಲರು ಬಾಂಬ್ ಸ್ಪೋಟಕಗಳನ್ನು ಹಾಗು ಪತ್ರವನ್ನು ಇಟ್ಟಿದ್ದಾರೆ ಎಂಬುದು ಬಂದಿದ್ದ ಕರೆಯಲ್ಲಿದ್ದ ಸಂದೇಶವಾಗಿತ್ತು. 

ಅನಾಮಧೇಯ ವ್ಯಕ್ತಿ  ಮಾಹಿತಿ ನೀಡುತ್ತಿದ್ದಂತೆ ಅಂದಿನ ಎಸ್ಪಿ ಕೌಶಲೇಂದ್ರ ಕುಮಾರ್ ಅಲರ್ಟ್ ಆಗ್ತಾರೆ.ವಿಷಯ ಸೀರಿಯಸ್ ಇರುತ್ತೆ.  ತಕ್ಷಣ ಕಾರ್ಯಾಚರಣೆಗಿಳಿದ ದೊಡ್ಡಪೇಟೆ ಪೊಲೀಸರು ತಂಡ ರಚಿಸಿಕೊಂಡು ಮಿಳಘಟ್ಟದ ಆನಂದರಾವ್ ರಸ್ತೆಯ ನಿರ್ದಿಷ್ಟ ಜಾಗವನ್ನು ಸುತ್ತುವರಿಯುತ್ತಾರೆ. ವ್ಯಕ್ತಿ ನೀಡಿದ ಮಾಹಿತಿಯಂತೆ ಅಲ್ಲಿ ಎರಡು ಬ್ಯಾಗ್ ಪತ್ತೆಯಾಗಿತ್ತು. 

ತಪಾಸಣೆ ಮಾಡಿದಾಗ ಅಪಾರ ಪ್ರಮಾಣದ ಸ್ಪೋಟಕ ಪತ್ತೆ

ಮೊದಲು ಕರೆ ಮಾಡಿದ್ದ ಅನಾಮದೇಯ ವ್ಯಕ್ತಿಯು ಹೇಳಿದಂತೆಯೇ ಅವತ್ತು ಅಲ್ಲಿ ಸಿಕ್ಕ ಬ್ಯಾಗ್​ನಲ್ಲಿ ಸ್ಫೋಟಕಗಳಿದ್ದವು, ನಕ್ಸಲರು ಬರೆದಿದ್ದರು ಎನ್ನಲಾದ ಪತ್ರವಿತ್ತು. ಎಲೆಕ್ಟ್ರಾನಿಕ್ ಡಿಟೋನೇಟರ್-109 ಪೀಸ್ ,ಅಮೋನಿಯಮ್ ಸಲ್ಪೂರಿಕ್ ಪೌಡರ್-2 ಬ್ಯಾಗ್.ಕಾರ್ಡೆಕ್ಸ್ ವೈರ್-02 ರಿಮ್,ಎಮ್ಟಿ ಡಿಟೋನೇಟರ್-100 ಪೀಸ್,ಸಿರಪ್ -15 ಬಾಟಲಿ.ಸೋಡಿಯಂ ಕ್ಲೋರೈಡ್-5 ಬಾಟಲಿ,ಡೈಕ್ಲೋಫೆನೆಕ್ ಸೋಡಿಯಂ ಇಂಜೆಕ್ಷನ್-10 ಎಂಪ್ಯೂಲ್ಸ್, ಅಮ್ರುತಾಂಜನ್ -5 ಬಾಟಲಿ,ಡೆಂಟಲ್ ಪ್ಲಸ್ -15 ಟ್ಯಾಬ್ಲೆಟ್ಟಿಂಚರ್ ಐಯೋಡಿನ್-1 ಬಾಟಲಿ,ಕ್ರೋಸಿನ್-15 ಮಾತ್ರೆಗಳು ಪತ್ತೆಯಾಗಿತ್ತು. 

ನಕ್ಸಲ್ ಕರಪತ್ರದಲ್ಲೇನಿತ್ತು 

ಇನ್ನು ಬ್ಯಾಗ್ ನಲ್ಲಿ ಸಿಕ್ಕ  ಪತ್ರದಲ್ಲಿ ‘‘ಇಲ್ಲಿ ತಮ್ಮಲ್ಲಿಗೆ ವಸ್ತುಗಳನ್ನು ಕಳುಹಿಸುವುದು ತುಂಬಾ ಕಷ್ಟವಾಗಿದೆ.ಇಲ್ಲಿ ಬಿಗಿಯಾದ ಕೂಂಬಿಂಗ್ ಇರುತ್ತೆ. ಆದ್ದರಿಂದ ನಾನು ವಸ್ತುಗಳನ್ನು ಶಿವಮೊಗ್ಗದ ಇಂತಿಂಥವರ ಮೂಲಕ (ಹೆಸರುಗಳು ಗೌಪ್ಯವಾಗಿದೆ) ಹಂತ ಹಂತವಾಗಿ ಕಳುಹಿಸುತ್ತೇನೆ. ನೀವು ಇಂತಹವರ  ಮೂಲಕ  ಒಂದು ಲಕ್ಷ ರೂಪಾಯಿ ಕಳುಹಿಸಿಕೊಡಿ. ಜಾಗೃತೆಯಾಗಿ ವಸ್ತುಗಳನ್ನು ಗೌಪ್ಯವಾಗಿ ತೆಗೆದುಕೊಳ್ಳಿ. ಸಲ್ಪ ಅನುಮಾನ ಬಂದರೂ, ಅಪಾಯ ಕಟ್ಟಿಟ್ಟ ಬುತ್ತಿ. ಜನವರಿ 26 ನೇ ತಾರೀಖು ನಾವು ಎಲ್ಲಾ ಕಡೆ ಏಕಕಾಲದಲ್ಲಿ ಬ್ಲಾಸ್ಟಿಂಗ್ ಮಾಡಿ, ಮಾರಣ ಹೋಮ ಮಾಡಿ ಎಲ್ಲರ ಗಮನ ನಮ್ಮ ಕಡೆ ನೆಡುವಂತೆ ಮಾಡೋಣ, ಶೋಷಿತರ ಪರ ಹೋರಾಡೋಣ. ಅವರಿಗೆ ನೆಮ್ಮದಿ ಕೊಡಿಸೋಣ. ಈ ಹೋರಾಟದಲ್ಲಿ ಒಂದು ಪಕ್ಷ ನಾವು ಸಾವನ್ನಪ್ಪಿದರೂ ಪರರಿಗೋಸ್ಕರ ನಾವು ಸಾಯುವುದು ಹೂವಿಗಿಂತ ಹಗುರವಾಂತೆ. ಗುಪ್ತ ಪತ್ರ ಗೌಪ್ಯವಾಗಿರಲಿ’’ ಎಂದು ಬರೆಯಲಾಗಿತ್ತು. ಬರೆದವರ ಹೆಸರು, ಪತ್ರದಲ್ಲಿ ವಿಷಯ ಮುಟ್ಟಬೇಕಾಗಿದ್ದವರ ಹೆಸರು ಎರಡು ಸಹ ಮೋಸ್ಟ್​ ವಾಂಟೆಂಡ್​ ನಕ್ಸಲರದ್ದಾಗಿತ್ತು. 

ಜನವರಿ 26 ನಾವು ಎಲ್ಲೆಡೆ ಬಾಂಬ್ ಸ್ಟೋಟಿಸ್ತೀವಿ ಎಂದು ಪತ್ರದಲ್ಲಿದ್ದರೇ ಶಿವಮೊಗ್ಗ ಪೊಲೀಸರ ಸ್ಥಿತಿ ಏನಾಗಬೇಡ!? ತಕ್ಷಣವೇ ಪೊಲೀಸರು ಪತ್ರದಲ್ಲಿದ್ದ ಹೆಸರಿನವರನ್ನು ವಿಚಾರಣೆಗೆ ಒಳಪಡಿಸ್ತಾರೆ. ಸ್ಫೋಟಕಗಳನ್ನು ಜಪ್ತು ಮಾಡ್ತಾರೆ,  ದೊಡ್ಡಪೇಟೆ ಠಾಣೆಯಲ್ಲಿ ದೊಡ್ಡಮಟ್ಟದ ತನಿಖೆ ಆರಂಭವಾಗುತ್ತದೆ. ಅಧಿಕಾರಿಗಳು ಅಲ್ಲಿಯೇ ಬೀಡುಬಿಟ್ಟು, ಸ್ಫೋಟಕ ಸಿಕ್ಕ ಮನೆಯ ಮಾಲೀಕನನ್ನು ವಿಚಾರಿಸ್ತಾರೆ. ಆತ  ನಕ್ಸಲರು ಯಾರೆಂಬುದೇ ನನಗೆ ಗೊತ್ತಿಲ್ಲ.ಅಷ್ಟಕ್ಕೂ ಪತ್ರ ಬರೆದಿರುವ ವ್ಯಕ್ತಿಗೂ ನನಗೂ ಸಂಪರ್ಕವೇ ಇಲ್ಲ.ನನ್ನನ್ನು ನಂಬಿ ಸಾರ್ ಎಂದು ಗೋಗರೆದಿದ್ದಾನೆ.  ಆದರೆ ಪೊಲೀಸರು ಆ ಸಂದರ್ಭದಲ್ಲಿ  ನಂಬುವ ಸ್ಥಿತಿಯಲ್ಲಿರಲಿಲ್ಲ. ಟಾಡಾ ಕಾಯ್ದೆಯಡಿ ಕೇಸು ದಾಖಲಿಸಲು ಮುಂದಾಗುತ್ತಾರೆ. 

ನಕ್ಸಲರ ಹೆಸರಿನಲ್ಲಿ ಬೇರೆಯವರು ಬೇಳೆ ಬೇಯಿಸಿಕೊಂಡಿದ್ರಾ 

ಶಿವಮೊಗ್ಗ ಜಿಲ್ಲೆಯಲ್ಲಿ ನಕ್ಸಲರ ಹೆಸರು ಬಳಸಿಕೊಂಡು ಹಲವಾರು ಅಪರಾಧ ಕೃತ್ಯಗಳು ನಡೆದುಹೋಗಿದೆ. 2008 ಮತ್ತು 2009 ರಲ್ಲಿ ಶಿವಮೊಗ್ಗ ಜಿಲ್ಲೆ ಆಗುಂಬೆ ಬಳಿಯ ತಲ್ಲೂರು ಅಂಗಡಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಮಹಿಳೆಯರನ್ನು ಬಳಸಿಕೊಂಡು ನಕ್ಸಲರ ಮಾದರಿಯಲ್ಲಿಯೇ ಮನೆಗೆ ನುಗ್ಗಿ ಚಿನ್ನಾಭರಣ ಲೂಟಿ ಮಾಡಿ ದರೋಡೆ ನಡೆಸಿದ್ದ. ಈ ಪ್ರಕರಣ ಭೇದಿಸಲು ಪೊಲೀಸರಿಗೆ ಸಾಕಷ್ಟು ಸಮಯ ಬೇಕಾಗಿತ್ತು. ನಕ್ಸಲರ ಹೆಸರನ್ನು ಸಮಾಜದ ಮುಖ್ಯವಾಹಿನಿಯಲ್ಲಿರುವ ಕ್ರಿಮಿನಲ್ ಗಳು ಹೇಗೆ ಉಪಯೋಗಿಸಿಕೊಳ್ತಾರೆ ಅನ್ನೋ ಮಾಹಿತಿ ಪೊಲೀಸರಿಗೆ ಇದ್ದೇ ಇತ್ತು. ಅವತ್ತಿನ ದಿನವೂ ಪೊಲೀಸರ ಮನಸ್ಸಲ್ಲಿ ಹೀಗ್ಯಾಕೆ ಆಗಿರಬಾರದು ಎಂಬ ಆಲೋಚನೆ ಮೂಡಿತ್ತು.  ‘

ಎಸ್ಪಿ ಕೌಶಲೇಂದ್ರ ಕುಮಾರ್ ಪ್ರಕರಣವನ್ನು ಚಾಲೆಂಜ್ ಆಗಿ ತೆಗೆದುಕೊಂಡ್ರು. ನಕ್ಸಲರು ಸಾಮಾನ್ಯವಾಗಿ ಬಳಸುವ ಪದಗಳು,ಅವರುಗಳ ಭಾಷಾ ಶೈಲಿ, ಬರವಣಿಗೆ ಶೈಲಿ, ಡಿಕೋಡ್ ಪದಗಳನ್ನು ಈ ಹಿಂದೆ ಕಾರ್ಯಾಚರಣೆಯಲ್ಲಿ ಸಿಕ್ಕ ನಕ್ಸಲ್​ ಕರಪತ್ರಗಳ ಜೊತೆ ತಾಳೆ ಹಾಕಿಸ್ತಾರೆ ಅಂದಿನ ಎಸ್​ಪಿ. ಇದಕ್ಕಾಗಿ ಎ.ಎನ್.ಎಫ್. ಅನುಭವಿ ಸಿಬ್ಬಂಧಿಗಳ ನೆರವನ್ನು ಪಡೆಯುತ್ತಾರೆ. ನಕ್ಸಲರು ಅಪ್ಪಿತಪ್ಪಿಯೂ ಗೌಪ್ಯಪತ್ರವನ್ನು ಈ ರೀತಿ ಭಾಷೆ ಬಳಸಿ ಬರೆಯಲು ಸಾಧ್ಯವಿಲ್ಲ. ಇದು ನಕ್ಸಲರು ಬರೆದಿರೋ ಪತ್ರವಲ್ಲ. ಯಾರೋ ಕಿಡಿಗೇಡಿಗಳದ್ದೆ ಕೆಲಸ ಎಂಬ ತೀರ್ಮಾನಕ್ಕೆ  ಪೊಲೀಸರು ಬರ್ತಾರೆ. ಇಲ್ಲೆ ಇಡೀ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಗೋದು. 

ಲಕ...ಲಕ..ಲಕ.. ಲಕ

ಅವತ್ತು, ದೊಡ್ಡಪೇಟೆ ಠಾಣೆಯಲ್ಲಿ ಸ್ಫೋಟಕ ಸಿಕ್ಕ ಮನೆಯ ಮಾಲೀಕನನ್ನ ಇನ್ನೊಂದು ಪ್ರಶ್ನೆ ಕೇಳಿದ್ರು.  ನಿನಗೆ ಯಾರ ಮೇಲಾದ್ರು ಅನುಮಾನ ಇದೆಯಾ? ಯಾರಾದ್ರು ಶತ್ರುಗಳಿದ್ದಾರೇನಪ್ಪ..! ಪೊಲೀಸರು ಕಾಮನ್ ಆಗಿ ಕೇಳುವ ಪ್ರಶ್ನೆಯಿದು! ಆದರೆ ಕೇಸ್​ಗೆ ಇಂತಹ ಪ್ರಶ್ನೆಗಳು ಎಷ್ಟು ಮುಖ್ಯ ಅನ್ನೋದು ಇಲ್ಲಿಂದಲೇ ನಿಮಗೆ ಅರ್ಥವಾಗುತ್ತೆ ಓದಿ... 

ಪೊಲೀಸರು ಕೇಳಿದ ಪ್ರಶ್ನೆಗೆ ಆ ಮನೆಯ ಮಾಲೀಕ ಹಿಂದೂ ಮುಂದು ನೋಡದೆ, ತಡವರಿಸದೇ, ಯೋಚಿಸದೇ ಹೌದು ಸರ್​ ನನಗೆ ಶತ್ರುಗಳಿದ್ದಾರೆ ಅಂದುಬಿಟ್ಟಿದ್ದ. ಅಲ್ಲದೆ ನಾನೊಬ್ಬ ....ವ್ಯಾಪಾರಿ (ಗೌಪ್ಯತೆ) 2013 ರಲ್ಲಿ ಬೆಂಗಳೂರಿನಿಂದ 10 ಕ್ವಿಂಟಾಲ್ ಕೋವಾ ತರುವಾಗ, ಇನ್ನೊಬ್ಬ...ವ್ಯಾಪಾರಿ ಅದನ್ನು ನಕಲಿ ಎಂದು ಪೊಲೀಸರಿಗೆ ಹಾಕಿಕೊಟ್ಟು ಹಿಡಿಸಿದ್ದ. ಆನಂತರವೂ ನಾನು ವ್ಯಾಪಾರ ಮುಂದುವರಿಸಿದ್ದ, ಆತ ನನ್ನ ವಹಿವಾಟು ಸಹಿಸ್ತಿರಲಿಲ್ಲ. ಆತನೇ ಏನಾದರು ಈ ರೀತಿ ಮಾಡಿರಬಹುದು ಎಂದು ಮನೆಯ ಮಾಲೀಕ ಸ್ಪಷ್ಟವಾಗಿ ನುಡಿದಿದ್ದ. 

ಕಾಯಿನ್​ ಬಾಕ್ಸ್​ ಕರೆಯ ಮೂಲಕ್ಕೆ ಕೈ ಹಾಕಿದ ಪೊಲೀಸರು

ಈ ಕಡೆ ಮನೆ ಮಾಲೀಕ ಹೇಳಿದ ಕಥೆಯ ಹಿಂದೆ ಒಂದು ತಂಡ ಬಿದ್ದಿತ್ತು. At the same time ಇನ್ನೊಂದು ತಂಡ ಅವತ್ತು ಅನಾಮಿಕವಾಗಿ ಕರೆ ಮಾಡಿದ ಪುಣ್ಯಾತ್ಮ ಯಾರು ಅವನ್ನನ್ನೊಮ್ಮೆ ನೋಡಬೇಕಲ್ಲ ಎಂದು ತಡಕಾಡುತ್ತಿತ್ತು. ಕಂಟ್ರೋಲ್​ಗೆ ಕರೆ ಮಾಡಿ, ಕಾಯಿನ್ಸ್​ ಬಾಕ್ಸ್​ನಲ್ಲಿ ಕಾಯಿನ್​ ಹಾಕಿದ್ದ ವ್ಯಕ್ತಿಗಾಗಿ ಡಿಎಸ್ಪಿ ಶಿವಕುಮಾರ್ ನೇತ್ರತ್ವದಲ್ಲಿ ಮೂರು ತಂಡಗಳನ್ನು ರಚನೆ ಮಾಡಿದ್ದರು. ಇನ್ಸ್ ಪೆಕ್ಟರ್ ಕುಮಾರಸ್ವಾಮಿ, ಜೈರಾಜ್ ಡಿಸಿಐಬಿ ತಂಡ ಸೇರ್ಕೊಂಡು ಮುಂದಿನ ಕಾರ್ಯಾಚರಣೆಗಿಳಿದಿತ್ತು

ಕರೆಗಳ ಇತಿಹಾಸವನ್ನು ಹುಡುಕಿ ತೆಗೆದಾಗ, ಅವತ್ತಿನ ಕರೆ  ಶಿವಮೊಗ್ಗದ ಕೆ.ಎಸ್.ಆರ್,ಟಿ.ಸಿ ಬಸ್ ನಿಲ್ದಾಣದ ಕಾಯಿನ್ ಬೂತ್ ನಿಂದ ಬಂದಿತ್ತು ಎಂಬುದು ಗೊತ್ತಾಗಿತ್ತು. ವಿಳಾಸ ಸಿಕ್ಕಿತ್ತು, ಇನ್ನೂ ವ್ಯಕ್ತಿ ಸಿಗುವುದು ಬಾಕಿಯಿತ್ತು. ಅದೃಷ್ಟಕ್ಕೆ ಬಸ್ ನಿಲ್ದಾಣದ ಸಿಸಿ ಟಿವಿ ಕರೆಮಾಡಿದ ಆಸಾಮಿಯ ಮುಖ ತೋರಿಸುತ್ತಿತ್ತು. ಆದರೆ ಕುರುಹು ಗೊತ್ತಾಗುತ್ತಿರಲಿಲ್ಲ ಪೊಲೀಸರಿಗೆ ಇದು ತನಿಖೆಗೆ ಸಮಸ್ಯೆ ಒಡ್ಡಿತ್ತು. ಆದಾಗ್ಯು ಸಿಸಿ ಟಿವಿ ಪೂಟೇಜ್​ ಅನಾಲಿಸಸ್​ನಲ್ಲಿ ತೊಡಗಿದ ಪೊಲೀಸರು ಅದರಲ್ಲಿ ಕಾಣುವ ಪ್ರತಿ ವ್ಯಕ್ತಿ ಪ್ರತಿ ವಸ್ತುಗಳನ್ನ ನೋಟ್ ಮಾಡುತ್ತಾ ಸ್ಟಡಿ ಮಾಡುತ್ತಾರೆ. ಆಗ ಅಲ್ಲಿ ಸ್ಫೋಟಕ ಸಿಕ್ಕಿದ್ದ ಮನೆ ಮಾಲೀಕ ತನ್ನ ಶತ್ರು ಎಂದಿದ್ದ ವ್ಯಕ್ತಿಯ ದರ್ಶನವಾಗುತ್ತದೆ. ಅಲ್ಲದೆ ಆತನ ಜೊತೆಯಲ್ಲಿ ಮತ್ತೊಬ್ಬನು ಇರುತ್ತಾನೆ. ಹಾಗಾದರೆ ಅವನ್ಯಾರು? ಪೊಲೀಸರ ತಲೆಗೆ ಮತ್ತೊಂದು ಕೆಲಸ ಬಿದ್ದಿತ್ತು. ಅಷ್ಟರಲ್ಲಿ ತನಿಖಾ ತಂಡದಲ್ಲಿದ್ದ ಲೇಡಿ ಪಿಸಿಯೊಬ್ಬರು ಸಾರ್.. ಆತ...(ಸಾ..)ಹೆಸರು ಗೌಪ್ಯವಾಗಿದೆ. ನಮ್ಮ ಡಿಪಾರ್ಟ್​ಮೆಂಟ್​ನವರು ಸಾರ್ ಎಂದು ಬಿಡ್ತಾರೆ. ತನಿಖಾಧಿಕಾರಿಗಳಿಗೆ ಸಡನ್​ ಶಾಕ್​. ಕೂಲಂಕುಶವಾಗಿ ನೋಡಿದಾಗ, ಲೇಡಿ ಪಿಸಿ ಹೇಳಿದ್ದು ನಿಜವಾಗಿತ್ತು.

ತನಿಖೆಯ ಆಳದಲ್ಲಿ

ಯಾವಾಗ ಸ್ಫೋಟಕ ಸಿಕ್ಕ ಕೇಸ್​ನಲ್ಲಿ ಪೊಲೀಸ್​ ಪೇದೆಯ ಚಲನವಲನ ತಳುಕುಹಾಕಿಕೊಳ್ತೋ ತನಿಖಾಧಿಕಾರಿಗಳು ಕೇಸ್​ನ ಮೇಲೆ ಹೆಚ್ಚೆ ಗಮನಕೊಟ್ಟರು. ಒಂದು ಟೀಂ ಸಿಸಿ ಟಿವಿಯಲ್ಲಿ ಕಾಣ ಸಿಕ್ಕ ಇಬ್ಬರು ಆರೋಪಿಗಳ ನಡುವಿನ ಕಾಲ್​ಡಿಟೇಲ್ಸ್​ ತೆಗೆಯುತ್ತದೆ. ಸಿಡಿಆರ್​ನಲ್ಲಿ ನಡೆದ ಮಾತುಕತೆಗಳ ವಿವರ ಲಭ್ಯವಾಗುತ್ತದೆ. ಸಾಕಷ್ಟು ವಿವರಗಳು ಕಲೆಹಾಕಿದ ಪೊಲೀಸರಿಗೆ ಡೌಟೇ ಇರೋದಿಲ್ಲ. ಇಡೀ ಕೇಸ್ ಖಾಕಿ ಹಾಕಿದ್ದವನ ಹಿಂದೆ ಸುತ್ತುತ್ತಿರುತ್ತದೆ. ಇಬ್ಬರನ್ನು ಪೊಲೀಸರ ಮುಲಾಜೇ ನೋಡದೇ ಬಂಧಿಸಿ ಕರೆತರುತ್ತಾರೆ. 

ನಕ್ಸಲ್ ಕಟ್ಟುಕಥೆಯ ಸೂತ್ರದಾರಿ 

ಹೌದು ಈ ನಕ್ಸಲ್ ಕಟ್ಟುಕಥೆಯ ಸೂತ್ರಧಾರನಾಗಿದ್ದ ಪೊಲೀಸ್  ಪೇದೆ.  ಶಿವಮೊಗ್ಗದಲ್ಲಿನ ವಹಿವಾಟಿನಲ್ಲಿ ತುಂಬಾನೇ ಎತ್ತರಕ್ಕೆ ಬೆಳೆಯುತ್ತಿದ್ದ ಆ ವ್ಯಕ್ತಿಯನ್ನು ಕುಗ್ಗಿಸೋಕೆ ಆತನ ಪ್ರತಿಸ್ಪರ್ಧಿಯೇ ಇಂತಹದ್ದೊಂದು ಆಲೋಚನೆ ಮಾಡಿದ್ದ, ಆತನ ಆಲೋಚನೆಗೆ ಬಿಗ್​ ಪ್ಲ್ಯಾನ್​ ಮಾಡಿ, ಅದನ್ನ ಎಕ್ಸಿಕ್ಯೂಟ್ ಮಾಡಿದ್ದ ಈ ಪೇದೆ. ಅವತ್ತಿನ ಜನವರಿ 13 ರಂದು ಪ್ಲಾನ್​ ನಿಕ್ಕಿಯಾಗಿ, ಅದರಂತೆ, ನಕ್ಸಲರ ಹೆಸರಲ್ಲಿ ಪತ್ರ ಬರೆದು, ಸ್ಫೋಟಕಗಳನ್ನು ಆತನ ಮನೆಯ ಬಳಿ ಇಟ್ಟು , ಪೊಲೀಸರಿಗೆ ಕರೆ ಮಾಡಿ ಆತನನ್ನ  ಫಿಟ್​ ಮಾಡೋದು ಎಂದು ಇಬ್ಬರ ನಡುವೆ ಮಾತಾಗಿತ್ತು. ಆಡಿದ ಮಾತಿನಂತೆ ಕೃತ್ಯವನ್ನ ಸಹ ಎಸಗಿದ್ರು. 

ಈ ಸ್ಕೆಚ್ ಗೆ ಸ್ಪೋಟಕಗಳು ಎಲ್ಲಿ ಸಿಕ್ಕಿದ್ದವು? ಹೀಗಂತ ಪೊಲೀಸರು ಕೇಳಿದಾಗ, ಅದಕ್ಕೂ ಉತ್ತರ ಪೊಲೀಸ್ ಪೇದೆ ನೀಡಿದ್ದ. ಆತ ಕಲ್ಲುಕ್ವಾರಿ  ಮಾಲೀಕರೊಬ್ಬರ ಬಳಿ ಪೊಲೀಸ್ ಪೇದೆಯೇ ಸ್ಫೋಟಕಗಳನ್ನು ಪಡೆದಿದ್ದ. ಜಿಲೇಟಿನ್ ಕಡ್ಡಿ,ಅಮೋನಿಯಮ್ ನೈಟ್ರೇಟ್ ಡಿಟೋನೇಟರ್ ಗಳನ್ನು ಎರಡು ಬ್ಯಾಗ್ ನಲ್ಲಿ ಹಾಕಿ ಕೊಟ್ಟಿದ್ದ. ಅದನ್ನ ಪಡೆದ ಇಬ್ಬರು, ಸ್ಕೆಚ್​ ಫೈನಲ್ ಮಾಡಿ ಎಕ್ಸಿಕ್ಯೂಟ್ ಮಾಡಿದ್ರು. ರಾತ್ರಿ ಸ್ಫೋಟಕ ಇಟ್ಟು, ಬೆಳಗಿನ ಜಾವ ಪೊಲೀಸರಿಗೆ ಫೋನನ್ನು ಮಾಡಿದ್ದರು. 

ಪ್ರೀತಿಯ ರೀಡರ್ಸ್​...ವ್ಯಾಪಾರದಲ್ಲಿ ಪ್ರತಿಸ್ಪರ್ದೆ ಸಹಜ, ಪ್ರತಿಸ್ಪರ್ದಿಗಳ ನಡುವೆ ವಿನಾಕಾರಣ ದ್ವೇಷವೂ ಸಹಜ. ಆದರೆ ಅದು ಅತಿರೇಕಕ್ಕೆ ಹೋದರೆ, ಏನಾಗುತ್ತದೆ ಎನ್ನುವುದುಕ್ಕೆ ಈ ಪ್ರಕರಣ ಅವತ್ತಿಗೆ ಸಾಕ್ಷಿಯಾಗಿತ್ತು. ಆದರೆ ಹೈವೋಲ್ಟೇಜ್ ಕೇಸ್​ವೊಂದನ್ನ ಜಸ್ಟ್​ ಒಂದರೆಡು ದಿನದಲ್ಲಿ ಮಾಮೂಲಿ ಪ್ರಕರಣವನ್ನಾಗಿಸಿ ಬಗೆಹರಿಸಿದ ಕೀರ್ತಿ ಶಿವಮೊಗ್ಗ ಪೊಲೀಸರಿಗೆ ಸಲ್ಲುತ್ತದೆ. ಶಿವಮೊಗ್ಗದ ಪೊಲೀಸ್ ಇಲಾಖೆಯ ಎದುರು, ಇಂತಹ ಹಲವು ಪ್ರಕರಣಗಳು ಆಗಾಗ ದುತ್ತೆಂದು ಎದುರಾಗುತ್ತಲೇ ಇರುತ್ತವೆ. ಅವುಗಳನ್ನ ಅಷ್ಟೆ ಬ್ರಿಲಿಯೆಂಟ್ ಆಗಿ ಕೇಸ್​ ಖಲ್ಲಾಸ್.. ನಾಟಕ್ ಬಂದ್ ಮಾಡುವ ಕಲೆಯು ಇಲ್ಲಿನ ಅಧಿಕಾರಿಗಳಿಗೆ ಗೊತ್ತಿದೆ. ಅಂತಹ ಇನ್ನಷ್ಟು ಪ್ರಕರಣಗಳನ್ನು ಮತ್ತಷ್ಟು ನಿಮ್ಮ ಮುಂದೆ ಇಡುತ್ತೇವೆ... ಈ ಸ್ಟೋರಿ ನಿಮಗೆ ಇಷ್ಟವಾದರೆ, ಈ ಜೆಪಿ ಬಗ್ಗೆ ಒಂದೆರಡು ಅಕ್ಷರ ಕಾಮೆಂಟ್ಸ್​ನಲ್ಲಿ ಬರೆಯಿರಿ!