ಬಿಜೆಪಿ ಬಂಡಾಯದ ವೈಫೈಗೆ ಹಾಟ್‌ಸ್ಪಾಟ್‌ ಆದ ಕೆಎಸ್‌ ಈಶ್ವರಪ್ಪನವರ ಮನೆ | ಮುಂದೆ?

KS Eshwarappa's house became a hotspot for the WiFi of the BJP rebellion Next?

ಬಿಜೆಪಿ ಬಂಡಾಯದ ವೈಫೈಗೆ ಹಾಟ್‌ಸ್ಪಾಟ್‌ ಆದ ಕೆಎಸ್‌ ಈಶ್ವರಪ್ಪನವರ ಮನೆ | ಮುಂದೆ?
KS Eshwarappa

SHIVAMOGGA | MALENADUTODAY NEWS | May 23, 2024  ಮಲೆನಾಡು ಟುಡೆ

ಶಿವಮೊಗ್ಗ ಬಿಜೆಪಿಯಲ್ಲಿ ಸಾಕಷ್ಟು ಬದಲಾವಣೆಗಳು ಕಾಣುತ್ತಿವೆ. ಶಿವಮೊಗ್ಗ ಲೋಕಸಭಾ ಚುನಾವಣೆಯ ಹಿನ್ನೆಲೆಯ ಪಕ್ಷದ ವಿರುದ್ಧ ಬಂಡಾಯ ಸಾರಿದ್ದ ಕೆಎಸ್‌ ಈಶ್ವರಪ್ಪನವರ ಶಕ್ತಿ ಚುನಾವಣೆ ಬಳಿಕ ಹೆಚ್ಚಾಗುತ್ತಿರುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ. 

ಏಕಾಂಗಿಯಾಗಿ ಕುಟುಂಬ ರಾಜಕಾರಣದ ವಿರುದ್ಧ ನನ್ನ ಸಮರ ಎಂದಿದ್ದ ಈಶ್ವರಪ್ಪನವರಿಗೆ ಚುನಾವಣೆ ಸಂದರ್ಭದಲ್ಲಿ ಗೂಳಿಹಟ್ಟಿ ಶೇಖರ್‌ ಪ್ರಮುಖವಾಗಿ ಬೆಂಬಲಕ್ಕೆ ನಿಂತಿದ್ದರು. ಚುನಾವಣೆ ಮುಗಿದ ಬಳಿಕ ನೈರುತ್ಯ ಪದವೀಧರ ಕ್ಷೇತ್ರದ ಟಿಕೆಟ್‌ ಸಿಗದ ಹಿನ್ನೆಲೆ ಬಂಡಾಯ ಸಾರಿ ಕೆ.ರಘುಪತಿ ಭಟ್‌ ಈಶ್ವರಪ್ಪನವರ ಪಾಳಯ ಸೇರಿದರು. ಇದೇ ಸಂದರ್ಭದಲ್ಲಿ ಮಾಜಿ ಎಂಎಲ್‌ಎ ಆನಂದರಾವ್‌ ರವರ ಪುತ್ರ ಎಂ ಶಂಕರ್‌ ಹಾಗೂ ತೀರ್ಥಹಳ್ಳಿಯ ಮದನ್‌ ಗೌಡರವರು ಈಶ್ವರಪ್ಪನವರ ಬೆನ್ನಹಿಂದೆ ನಿಂತಿದ್ದಾರೆ. ಶಿವಮೊಗ್ಗ ನಗರದ ವಿವಿಧ ಮಾಜಿ ಕಾರ್ಪೊರೇಟರ್‌ಗಳು ಸಹ ಈಶ್ವರಪ್ಪನವರ ಪಕ್ಷದಲ್ಲಿ ಕಾಣಿಸಿಕೊಂಡಿದ್ದಾರೆ. ಇದಷ್ಟೆ ಅಲ್ಲದೆ ಬಿಜೆಪಿಯ ಕೆಲವು ನಾಯಕರು ಕೆಎಸ್‌ಇ ಯವರಿಗೆ ಪರೋಕ್ಷ ಬೆಂಬಲ ನೀಡಿದ್ದಾರೆ ಎನ್ನಲಾಗುತ್ತಿದೆ. ಇವೆಲ್ಲದರ ಪರಿಣಾಮವಾಗಿ ಕೆಎಸ್‌ ಈಶ್ವರಪ್ಪನವರ ನಿವಾಸ ಬಿಜೆಪಿ ಬಂಡಾಯದ ಹಾಟ್‌ಸ್ಪಾಟ್‌ ಆಗಿ ಮಾರ್ಪಟ್ಟಿದೆ. 

ಹಿರಿಯಕ್ಕನ ಚಾಳಿ…!

ತಮ್ಮದು ಬಿಜೆಪಿಯಿಂದ, ಬಿಜೆಪಿಗಾಗಿ, ಬಿಜೆಪಿಗೋಸ್ಕರ ಎನ್ನುವ ಟ್ಯಾಗ್‌ಲೈನ್‌ನೊಂದಿಗೆ ಸಾರಿರುವ ಈಶ್ವರಪ್ಪನವರ ಬಂಡಾಯದ ಮಾಡಲ್‌ ಉಳಿದವರು ಅನುಸರಿಸುತ್ತಿರುವುದು ಹಿರಿಯಕ್ಕನ ಚಾಳಿ…. ಎಂಬಂತಹ ಗಾದೆ ಮಾತಿನಂತೆ ಭಾಸವಾಗುತ್ತಿದೆ. ಈಶ್ವರಪ್ಪನವರನ್ನ ಪಕ್ಷದಿಂದ ಉಚ್ಚಾಟನೆ ಮಾಡಿರುವ ಬಿಜೆಪಿ, ಮಾಜಿ ಮುಖಂಡರ ಬೆಂಬಲಕ್ಕೆ ನಿಂತವರ ಬಗ್ಗೆ ಸಾಪ್ಟ್‌ ಕಾರ್ನರ್‌ ತೋರಿದೆ. ಬಹುಶಃ ಈ ಮೃದು ಪಕ್ಷಪಾತ ಬಿಜೆಪಿಯಲ್ಲಿನ ಬಂಡಾಯ ಹೆಚ್ಚಳಕ್ಕೆ ಕಾರಣವಾಗಿರಬಹುದು. 

ಅಂದು ಬಿಎಸ್‌ವೈ, ಇಂದು ಕೆಎಸ್‌ಇ 

ಈ ಹಿಂದೆ ಕೆಜೆಪಿ ಪಕ್ಷ ಕಟ್ಟಿ ತಮ್ಮ ಸಾಮರ್ಥ್ಯ ತೋರುವಲ್ಲಿ ಬಿಎಸ್‌ ಯಡಿಯೂರಪ್ಪ ಯಶಸ್ವಿಯಾಗಿದ್ದರು.ಆಗಲು ಶಿವಮೊಗ್ಗ ಬಿಜೆಪಿಯಲ್ಲಿ ಹಾಲಾಹಲ ಸೃಷ್ಟಿಯಾಗಿತ್ತು. ಆನಂತರ ಅವರು ದೊಡ್ಡ ಸ್ವಾಗತದೊಂದಿಗೆ ಪಕ್ಷಕ್ಕೆ ವಾಪಸ್‌ ಆಗಿದ್ದರು. ಪವರ್‌ ಸೆಂಟರ್‌ ಶಿವಮೊಗ್ಗದಲ್ಲಿ ನಡೆದ ಈ ಬಂಡಾಯ ಆ ಸಂದರ್ಭದಲ್ಲಿ ವಿಶೇಷ ರಾಜಕಾರಣ ತಂತ್ರವಾಗಿ  ಪರಿಣಮಿಸಿತ್ತು. 

ಇದೀಗ ಕೆಎಸ್‌ ಈಶ್ವರಪ್ಪನವರ ರಾಷ್ಟ್ರ ಭಕ್ತ ಬಳಗದ ಆಂತರಿಕ ಬಂಡಾಯವೂ ಬಿಜೆಪಿಯಲ್ಲಿ ಸಂಚಲನ ಮೂಡಿಸುತ್ತಿದೆ. ದೇಶ ಭಕ್ತ ಬಳಗ, ರಾಷ್ಟ್ರ ಭಕ್ತ ಬಳಗ ಎಂಬ ಎರಡು ಬಣಗಳಾಗಿರುವ ಬಿಜೆಪಿಯಲ್ಲಿ ಕಾರ್ಯಕರ್ತರ ಜೈಕಾರ ಯಾರಿಗೆ ಎಂಬುದು ಸ್ಪಷ್ಟವಾಗುತ್ತಿಲ್ಲವಾದರೂ, ಈಶ್ವರಪ್ಪನವರ ಮನೆ ಕೇಸರಿ ಪಾಳಯದ ಹಾಟ್‌ ಸ್ಪಾಟ್‌ ಆಗುತ್ತಿರುವುದಂತು ನಿಜ.

ಸಾಲು ಸಾಲು ಸಭೆ

ಚುನಾವಣೆ ಬಳಿಕ ರಾಜಕಾರಣಿಗಳು ರಿಲ್ಯಾಕ್ಸ್‌ ಆಗುವುದು ಸಹಜ . ಆದರೆ ಲೋಕಸಭಾ ಚುನಾವಣೆ ಮುಗಿದ ಬಳಿಕ ಕೆಎಸ್‌ ಈಶ್ವರಪ್ಪ ಮತ್ತು ಅವರ ಕೂಟ ಇನ್ನಷ್ಟು ಆಕ್ಟೀವ್‌ ಆಗಿದೆ. ಸಾಲು ಸಾಲು ಸಭೆಗಳು ಕೆಎಸ್‌ ಈಶ್ವರಪ್ಪನವರ ಮನೆಯಲ್ಲಿ ನಡೆಯುತ್ತಿದೆ. ಅದರ ಬಗ್ಗೆ ಮುಂದಿನ ವರದಿಯಲ್ಲಿ ವಿಶೇಷವಾಗಿ ಮಾಹಿತಿ ನೀಡುತ್ತೇವೆ. ಈ ನಡುವೆ ಈ ಸರಣಿ ಸಭೆಗಳು ಬಿಜೆಪಿ ಪಾಳಯದಲ್ಲಿ ನಾನಾ ಚರ್ಚೆಗಳನ್ನು ಹುಟ್ಟುಹಾಕಿದೆ. ಇನ್ನೊಂದೆಡೆ ಈಶ್ವರಪ್ಪನವರು ನಡೆಸ್ತಿರುವ ಜಿಲ್ಲಾ ಪ್ರವಾಸ ಹಾಗೂ ಕಾನೂನು ಹೋರಾಟಗಳು ಸದ್ಯದ ರಾಜಕಾರಣದಲ್ಲಿಯು ತೀವ್ರ ಕುತೂಹಲ ಮೂಡಿಸಸಿದೆ. 

ಕೇಂದ್ರದ ಮೌನ

ಚುನಾವಣೆ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಕೆಎಸ್‌ ಈಶ್ವರಪ್ಪನವರನ್ನ ಉಚ್ಚಾಟಿಸಿದೆ ಬಿಟ್ಟರೇ ಕೇಂದ್ರದ ನಾಯಕರು ಈಶ್ವರಪ್ಪನವರ ಬಗ್ಗೆಯಾಗಲಿ, ಈಶ್ವರಪ್ಪನವರು ಕೇಂದ್ರದ ನಾಯಕರನ್ನಾಗಲಿ ಟೀಕಿಸಿಲ್ಲ, ನಿಂದಿಸಿಯು ಇಲ್ಲ, ವಿರೋಧಿಸಿಯು ಇಲ್ಲ. ಇದರ ಒಳಗುಟ್ಟು ಚುನಾವಣೆ ಫಲಿತಾಂಶದ ಬಳಿಕವಷ್ಟೆ ಗೊತ್ತಾಗಬೇಕಿದೆ. ಆದರೆ ತಳಮಟ್ಟದ ನಾಯಕರ ಪೈಕಿ ಹಲವರಿಗೆ, ಶಿಸ್ತಿನ ಪಕ್ಷದಲ್ಲಿ ಅಸಮಾಧಾನದ ಬಂಡಾಯ ಹೊರಕ್ಕೆ ಹಾಕಿ ಭವಿಷ್ಯ ಕಟ್ಟಿಕೊಳ್ಳುವ ವೇದಿಕೆಯ ರೂಪದಲ್ಲಿ ಕೆಎಸ್‌ಇ ರಾಷ್ಟ್ರಭಕ್ತ ಬಳಗ ತೋರುತ್ತಿದೆ.