ಪ್ರಮೋದ್ ಮುತಾಲಿಕ್ ಗೆ ಶಿವಮೊಗ್ಗ ಪ್ರವೇಶ ನಿರ್ಬಂಧ | ಜಿಲ್ಲಾಡಳಿತದ ನೋಟಿಸ್​ ನಲ್ಲಿ ಏನಿದೆ ಗೊತ್ತಾ| 30 ಪ್ರಕರಣಗಳು ಮತ್ತು ರಾಗಿಗುಡ್ಡ ಘಟನೆ

Sri Ram Sena founder Pramod Muthalik has been restricted from Shimoga ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್​ರಿಗೆ ಶಿವಮೊಗ್ಗ ಪ್ರವೇಶ ನಿರ್ಬಂಧಿಸಲಾಗಿದೆ

ಪ್ರಮೋದ್ ಮುತಾಲಿಕ್ ಗೆ ಶಿವಮೊಗ್ಗ ಪ್ರವೇಶ ನಿರ್ಬಂಧ |  ಜಿಲ್ಲಾಡಳಿತದ ನೋಟಿಸ್​ ನಲ್ಲಿ ಏನಿದೆ ಗೊತ್ತಾ| 30 ಪ್ರಕರಣಗಳು ಮತ್ತು ರಾಗಿಗುಡ್ಡ ಘಟನೆ



KARNATAKA NEWS/ ONLINE / Malenadu today/ Oct 18, 2023 SHIVAMOGGA NEWS’

ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ರಾಗಿಗುಡ್ಡಕ್ಕೆ ಪ್ರವೇಶಿಸದಂತೆ ಶಿವಮೊಗ್ಗ   ಪೊಲೀಸರು ಮಾಸ್ತಿಕಟ್ಟೆಯಲ್ಲಿ ಅವರನ್ನ  ತಡೆದು ಅವರನ್ನು ದಾವಣಗೆರೆಗೆ ಕರೆದೊಯ್ದಿದ್ದಾರೆ.  

ರಾಗಿಗುಡ್ಡದಲ್ಲಿ ಈಗಾಗಲೇ 144 ಸೆಕ್ಷನ್ ನಿಷೇಧಾಜ್ಞೆ ಜಾರಿಯಲ್ಲಿದೆ. ಆದ್ದರಿಂದ ಪ್ರಮೋದ್ ಮುತಾಲಿಕ್‌ ಅವರು ಪ್ರಚೋದನಕಾರಿಯಾಗಿ ಭಾಷಣ ಮಾಡಬಹುದು ಎಂಬ ಮುನ್ನೆಚ್ಚರಿಕೆಯಿಂದ ಮುಂದಿನ ಮೂವತ್ತು

ದಿನಗಳ ಕಾಲ ಶಿವಮೊಗ್ಗ ಪ್ರವೇಶಿದಂತೆ ಜಿಲ್ಲಾಡಳಿತ ನೋಟಿಸ್ ಜಾರಿ ಮಾಡಿದೆ. ಈ ನೋಟಿಸ್​ನ್ನ ಪ್ರಮೋದ್ ಮುತಾಲಿಕ್​ರಿಗೆ ನೀಡಲಾಗಿದೆ. 

30 ಪೊಲೀಸ್ ಸ್ಟೇಷನ್​ನಲ್ಲಿ ಪ್ರಚೋದನಕಾರಿ ಭಾಷಣ ಸೇರಿದಂತೆ ವಿವಿಧ ಪ್ರಕರಣಗಳನ್ನ ಪ್ರಮೋದ್ ಮುತಾಲಿಕ್ ಎದುರಿಸುತ್ತಿದ್ದಾರೆ. ಈ  ವಿಚಾರವನ್ನು ಉಲ್ಲೇಖಿಸಿದ ಜಿಲ್ಲಾಡಳಿತದ ನೋಟಿಸ್​ ಮಲೆನಾಡು ಟುಡೆಗೆ ಲಭ್ಯವಾಗಿದೆ. 

ಅದರಲ್ಲಿ  ಶ್ರೀರಾಮ ಸೇನೆ ಸಂಸ್ಥಾಪಕರಾಗಿರುವ ಶ್ರೀ ಪ್ರಮೋದ್ ಮುತಾಲಿಕ್ ರವರು ದಿನಾಂಕ: 18-10-2023 ರಂದು ಶಿವಮೊಗ್ಗಕ್ಕೆ ಭೇಟಿ ನೀಡಿ, ಇತ್ತೀಚೆಗೆ ರಾಗಿಗುಡ್ಡದಲ್ಲಿ ಸಂಭವಿಸಿದ ಘಟನೆಯ ಕುರಿತು ರಾಗಿಗುಡ್ಡಕ್ಕೆ ಭೇಟಿ ನೀಡಿ, ನೊಂದವರನ್ನು ವಿಚಾರಿಸಿ, ಸಾಂತ್ವಾನ ಹೇಳುವ ಕಾರ್ಯಕ್ರಮ ಇರುವುದಾಗಿ ಮಾಹಿತಿ ತಿಳಿದುಬಂದಿರುತ್ತದೆ. 

ಇವರು ಪ್ರಬಲವಾದ ಹಿಂದೂ ಧರ್ಮದ ಪ್ರತಿಪಾದಕರಾಗಿದ್ದು. ಧರ್ಮದ ಪ್ರತಿಪಾದಕರಾಗಿದ್ದು, ಇವರ ಭಾಷಣವು ಪ್ರಚೋದನಾಕಾರಿಯಾಗಿದ್ದು. ಇನ್ನೊಂದು ಧರ್ಮದ ಬಗ್ಗೆ ದ್ವೇಷ, ವೈಷಮ್ಯ ಹುಟ್ಟಿಸುವ ಭಾವನೆಗಳನ್ನು ಕೆರಳಿಸುವ ರೀತಿ ಇರುವುದು ಈ ಹಿಂದಿನ ಇವರ ಭಾಷಣಗಳಿಂದ ತಿಳಿದು ಬಂದಿರುತ್ತದೆ. ಇವರು ಶಿವಮೊಗ್ಗ ನಗರಕ್ಕೆ ಆಗಮಿಸಿ, ಸಾಂತ್ವಾನ ಹೇಳುವ ನೆಪದಲ್ಲಿ ಮತ್ತೊಮ್ಮೆ ದ್ವೇಷ ಅಸೂಯೆ ಹುಟ್ಟಿಸುವಂತಹ ಭಾಷಣ ಮಾಡಿದ್ದಲ್ಲಿ ಶಿವಮೊಗ್ಗ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕದಡುವ ಎಲ್ಲಾ ಸಾಧ್ಯತೆ ಇರುತ್ತದೆ.



ಶಿವಮೊಗ್ಗ ನಗರದಲ್ಲಿ ಈಗಾಗಲೇ ಸಾಕಷ್ಟು ಕೋಮುಗಲಭೆಗಳು ಉಂಟಾಗಿ ಅವುಗಳನ್ನು ನಿಯಂತ್ರಿಸಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಹಾಗೂ ಪ್ರಹಾರ ಬಲಗಳನ್ನು ಬಳಸಿಕೊಂಡು ಸಾರ್ವಜನಿಕ ಶಾಂತಿ-ಸುವ್ಯವಸ್ಥೆ ಮರು ಸ್ಥಾಪಿಸಿದ್ದಾಗಿರುತ್ತದೆ. 

ಈ ಕ್ಷಣದವರೆಗೆ ಮಾಹಿತಿ ಸಂಗ್ರಹಿಸಲಾಗಿ, ಶ್ರೀ ಪ್ರಮೋದ್ ಮುತಾಲಿಕ್ ಬಿನ್ ಹನುಮಂತರಾವ್‌ ಮುತಾಲಿಕ್ ಇವರು ಪ್ರಚೋದನಕಾರಿ ಭಾಷಣ ಮಾಡಿದ್ದಕ್ಕಾಗಿ ಮತ್ತು ಇತರೆ ವಿಷಯಗಳಿಗಾಗಿ ಇವರ ವಿರುದ್ಧ ಕರ್ನಾಟಕ ರಾಜ್ಯಾದಾದ್ಯಂತ ಈ ಕೆಳಗಿನ 30 ಪ್ರಕರಣಗಳು ದಾಖಲಾಗಿರುವುದು ಕಂಡುಬಂದಿರುತ್ತದೆ. ಸದರಿ ಪ್ರಕರಣಗಳ ವಿವರ ಕಳಕಂಡಂತ ಇರುತ್ತದೆ.

ಶ್ರೀ ಪ್ರಮೋದ್ ಮುತಾಲಿಕ್ ಇವರು ಹಿಂದೂ ಧರ್ಮದ ಪ್ರತಿಪಾದಕರಾಗಿರುತ್ತಾರೆ. ಇವರು ಶ್ರೀರಾಮಸೇನೆಯ ಸಂಸ್ಥಾಪಕರಾಗಿದ್ದು, ಸಾಕಷ್ಟು ಕಾರ್ಯಕರ್ತರು ಮತ್ತು ಅನುಯಾಯಿಗಳನ್ನು ಹೊಂದಿರುತ್ತಾರೆ. ಇವರು ಮಾಡುವ ಪ್ರಚೋದನಾಕಾರಿ ಭಾಷಣದಿಂದ ಇವರ ಕಾರ್ಯಕರ್ತರು ಪ್ರೇರಿತರಾಗಿ ಕಾನೂನು ಕೈಗೆತ್ತಿಕೊಳ್ಳುವ ಮತ್ತು ಅನ್ಯ ಧರ್ಮದವರ ಮೇಲೆ ಹಲ್ಲೆ ಮಾಡುವ, ದ್ವೇಷ ಸಾಧಿಸುವ, ಕಾನೂನು ಸುವ್ಯವಸ್ಥೆಗೆ ಭಂಗ ತರುವ ಸಾಧ್ಯತೆ ಇರುತ್ತದೆ. 

ಈ ಕಾರಣಕ್ಕಾಗಿ ಈಗಾಗಲೇ ಕರ್ನಾಟಕ ರಾಜ್ಯದ ಇತರ ಜಿಲ್ಲೆಗಳಾದ ದಕ್ಷಿಣ ಕನ್ನಡ, ಹಾಸನ, ಬಾಗಲ ಕೋಟೆ, ಬೆಳಗಾವಿ ಜಿಲ್ಲೆಗೆ-2015 ನೇ ಸಾಲಿನಲ್ಲಿ, ಮಂಡ್ಯ ಜಿಲ್ಲೆ, ಶಿವಮೊಗ್ಗ ಜಿಲ್ಲೆಗೆ - 2016ನೇ ಸಾಲಿನಲ್ಲಿ ಹಾಗೂ ಪುನಃ ಶಿವಮೊಗ್ಗ ಜಿಲ್ಲೆಗೆ - 2018ನೇ ಸಾಲಿನಲ್ಲಿ ಆಗಮಿಸದಂತೆ ಕಲಂ 144(3) ಸಿಜರ್‌ಪಿಸಿ ರೀತ್ಯಾ ಪ್ರತಿಬಂಧಕಾಜ್ಞೆಯನ್ನು ಹೊರಡಿಸಿದ್ದಾಗಿರುತ್ತದೆ. ಶಿವಮೊಗ್ಗ ನಗರದ ರಾಗಿಗುಡ್ಡ ಪ್ರದೇಶವು ಮತೀಯ ಸೂಕ್ಷ್ಮತೆಯಿಂದ ಕೂಡಿದ್ದು, ದಿನಾಂಕ: 01-10-2023 ರಂದು ಗಲಭೆ ನಡೆದು, ಸುಮಾರು 30 ಪ್ರಕರಣಗಳು ದಾಖಲಾಗಿರುತ್ತವೆ. ಈ ಘಟನೆಯಲ್ಲಿ ಸಾರ್ವಜನಿಕರ ಸಾಕಷ್ಟು ಅಸ್ತಿ-ಪಾಸ್ತಿ  ಹಾನಿಯಾಗಿದ್ದು, ಆ ಪ್ರದೇಶವು ಈಗಲೂ ಕೂಡ ಸೂಕ್ಷ್ಮತೆಯಿಂದ ಕೂಡಿರುತ್ತದೆ. 

ರಾಗಿಗುಡ್ಡದಲ್ಲಿ ಪ್ರಸ್ತುತ ಕಲಂ 144 ಸಿಆರ್ ಪಿಸಿ ರೀತ್ಯಾ ನಿಷೇದಾಜ್ಞೆ ಜಾರಿಯಲ್ಲಿದ್ದು, ಪರಿಸ್ಥಿತಿ ದಿನದಿಂದ ದಿನಕ್ಕೆ ತಿಳಿಯಾಗುತ್ತಾ ಬರುತ್ತಿದೆ, ಶ್ರೀ ಪ್ರಮೋದ್ ಮುತಾಲಿಕ್ ರವರು ರಾಗಿಗುಡ್ಡ ಏರಿಯಾಕ್ಕೆ ಭೇಟಿ ನೀಡಿ, ಪ್ರಚೋದನಕಾರಿಯಾಗಿ ಮಾತನಾಡುವುದಾಗಲಿ, ಭಾಷಣ ಮಾಡುವುದಾಗಲಿ ಮಾಡಿದ್ದಲ್ಲಿ ಕಾನೂನು ಸುವ್ಯವಸ್ಥೆ ಮತ್ತೆ ಹದಗೆಡುವ ಸಾರ್ವಜನಿಕರ ಶಾಂತಿಗೆ ಧಕ್ಕೆಯಾಗುವಂತಹ ಸಾಧ್ಯತೆ ಇರುತ್ತದೆ.



ಅದುದರಿಂದ ಮೇಲ್ಕಾಣಿಸಿದ ಎಲ್ಲಾ ಕಾರಣಗಳಿಂದಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಶಾಂತಿ, ಕೋಮು ಸೌರ್ಹಾದತೆ, ಸಾರ್ವಜನಿಕ ಪ್ರಾಣ ಮತ್ತು ಆಸ್ತಿ-ಪಾಸ್ತಿ ಕಾಪಾಡುವ ಮತ್ತು ಕಾನೂನು, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದಿನಾಂಕ: 17-10-2023 ರಿಂದ 30 ದಿನಗಳ ಕಾಲ ಶ್ರೀ ರಾಮಸೇನೆ ಸಂಸ್ಥಾಪಕರಾದ ಶ್ರೀ ಪ್ರಮೋದ್ ಮುತಾಲಿಕ್ ರವರು ಶಿವಮೊಗ್ಗ ಜಿಲ್ಲೆಗೆ ಪ್ರವೇಶಿಸದಂತೆ ಕಲಂ 144(3) ಸಿಆರ್‌ಪಿಸಿ ರೀತ್ಯಾ ಪ್ರತಿಬಂಧಕಾಜ್ಞೆಯನ್ನು ಹೊರಡಿಸಬೇಕಾಗಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆರವರು ಉಲ್ಲೇಖಿತ ಪತ್ರದ ರೀತ್ಯಾ ಕೋರಿರುತ್ತಾರೆ.  

ಈ ಮೇಲ್ಕಂಡ ಎಲ್ಲಾ ಅಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಶಿವಮೊಗ್ಗ ಜಿಲ್ಲೆಯಲ್ಲಿ ಪರಿಸ್ಥಿತಿಯು ಸೂಕ್ಷ್ಮತೆಯಿಂದ ಕೂಡಿರುವುದರಿಂದ, ಹಾಗೂ ಶ್ರೀರಾಮಸೇನಾ ಸಂಸ್ಥಾಪಕರಾದ ಶ್ರೀ ಪ್ರಮೋದ್ ಮುತಾಲಿಕ್ ರವರು ಶಿವಮೊಗ್ಗ ಜಿಲ್ಲೆಗೆ ಆಗಮಿಸಿದ್ದಲ್ಲಿ ಕೋಮು ಪ್ರಚೋದನೆ ಉಂಟು ಮಾಡುವ ಪ್ರಚೋದನಾಕಾರಿ ಭಾಷಣ ಮಾಡಿ ಕೋಮು ಸೌಹಾರ್ದತೆಗೆ ಧಕ್ಕೆ ತಂದು ಮತೀಯ ಗಲಭೆಗಳನ್ನು ಉಂಟು ಮಾಡುವ ಸಾಧ್ಯತೆಗಳಿದ್ದು, ಶಾಂತಿ, ಕೋಮುಸೌಹಾರ್ದತ, ಸಾರ್ವಜನಿಕ ಪ್ರಾಣ ಮತ್ತು ಆಸ್ತಿಪಾಸ್ತಿ ಹಾಗೂ ಶಾಂತಿಯನ್ನು ಕಾಪಾಡುವ ಹಿತದೃಷ್ಟಿಯಿಂದ ದಿನಾಂಕ: 17-10-2023 ರಿಂದ 30 ದಿನಗಳ ಕಾಲ ಶ್ರೀರಾಮಸೇನೆ ಸಂಸ್ಥಾಪಕರಾದ ಶ್ರೀ ಪ್ರಮೋದ್ ಮುತಾಲಿಕ್ ರವರು ಶಿವಮೊಗ್ಗ ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧಗೊಳಿಸುವುದು ಅವಶ್ಯಕವಾಗಿರುತ್ತದೆ. ಅದ್ದರಿಂದ ಈ ಕೆಳಕಂಡ ಅದೇಶವನ್ನು ಹೊರಡಿಸಲಾಗಿದೆ.

 

ಪ್ರಸ್ತಾವನೆಯಲ್ಲಿ ವಿವರಿಸಿದ ಕಾರಣಗಳ ಹಿನ್ನಲೆಯಲ್ಲಿ, ಸಿ.ಆರ್.ಪಿ.ಸಿ ಕಲಂ 144 (3) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸಿದ್ದಲಿಂಗರೆಡ್ಡಿ, ಕ.ಆ.ಸೇ.,ಅಪರ ಜಿಲ್ಲಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ, ಶಿವಮೊಗ್ಗ ಜಿಲ್ಲೆ,ಶಿವಮೊಗ್ಗ ಅದ ನಾನು, ಪೋಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಶಿವಮೊಗ್ಗರವರ ಶಿಫಾರಸ್ಸಿನ ಮೇರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂಬ ಉದ್ದೇಶದಿಂದ ಮುಂಜಾಗೃತ ಕ್ರಮವಾಗಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ದಿನಾಂಕ: 17-10-2023 ರಿಂದ 30 ದಿನಗಳ ಕಾಲ ಶ್ರೀರಾಮಸೇನಾ ಸಂಸ್ಥಾಪಕರಾದ ಶ್ರೀ ಪ್ರಮೋದ್ ಮುತಾಲಿಕ್ ಇವರು ಶಿವಮೊಗ್ಗ ಜಿಲ್ಲೆಗೆ ಪ್ರವೇಶಿಸದಂತೆ  ಪ್ರತಿಬಂಧಕಾಜ್ಞೆಯನ್ನು ಹೊರಡಿಸಿ ಆದೇಶಿಸಿದೆ. 


ಇನ್ನಷ್ಟು ಸುದ್ದಿಗಳು 

ಶೇ...ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗ ದಸರಾಕ್ಕೆ ಚಾಲನೆ | ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಪಾಲಿಕೆ ಸದಸ್ಯರು | ಕುಣಿದು ಸಂಭ್ರಮಿಸಿದ ಶಾಸಕ ಎಸ್​.ಎನ್​. ಚನ್ನಬಸಪ್ಪ