ಆಲ್‌ ರೈಟ್‌ | ಗೀತಾ ಸೋಲಿಗೆ ಕಾಂಗ್ರೆಸ್‌ ಆಂತರಿಕ ಕಾಳಗ ಕಾರಣವಾ? | ಬಿವೈಆರ್‌ 500 KM ಸೀಕ್ರೆಟ್ ಏನು? ಕಾರ್ಯಕರ್ತರ ಮಾತು ಜೆಪಿ ಬರೆಯತ್ತಾರೆ

Congress internal fight is the reason for Geetha's defeat? | What is the BYR 500 KM secret? JP writes the words of the activists Shivamogga Lok Sabha constituency election results and analysis:

ಆಲ್‌ ರೈಟ್‌ | ಗೀತಾ ಸೋಲಿಗೆ ಕಾಂಗ್ರೆಸ್‌ ಆಂತರಿಕ ಕಾಳಗ ಕಾರಣವಾ? | ಬಿವೈಆರ್‌ 500 KM ಸೀಕ್ರೆಟ್ ಏನು? ಕಾರ್ಯಕರ್ತರ ಮಾತು ಜೆಪಿ ಬರೆಯತ್ತಾರೆ
Shivamogga Lok Sabha constituency election results and analysis

SHIVAMOGGA | MALENADUTODAY NEWS | Jun 6, 2024  ಮಲೆನಾಡು ಟುಡೆ 

ಶಿವಮೊಗ್ಗ ಜಿಲ್ಲೆಯಲ್ಲಿ 9 ಲಕ್ಷಕ್ಕೂ ಅಧಿಕ ಗ್ಯಾರಂಟಿ ಯೋಜನೆ ಫಲಾನುಭವಿಗಳಿದ್ದಾಗ್ಯೂ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಎಡವಿದ್ದೆಲ್ಲಿ? ಸೋಲುಗೆಲುವಿನ ಲೆಕ್ಕಚಾರದ ಮತದಾರರ ಮತ್ತು ಕಾರ್ಯಕರ್ತರ ವಿಶ್ಲೆಷಣೆ ಏನು ಗೊತ್ತಾ? ಜೆಪಿ ಬರೆಯುತ್ತಾರೆ. 

 

ಶಿವಮೊಗ್ಗ ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಮತ್ತೆ ಜಯಭೇರಿ ಭಾರಿಸಿದೆ, ಬಿ.ವೈ ರಾಘವೇಂದ್ರ ನಾಲ್ಕನೇ ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ನ ಗೀತಾ ಶಿವರಾಜ್ ಕುಮಾರ್ ಎರಡನೇ ಬಾರಿ ಸೋಲು ಕಂಡಿದ್ದಾರೆ. ಹೆಚ್ಚು ಮತಗಳನ್ನು ಪಡೆಯುವ ವಿಶ್ವಾಸದಲ್ಲಿದ್ದ ಪಕ್ಷೇತರ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಠೇವಣಿಯನ್ನು ಕಳೆದುಕೊಂಡಿದ್ದಾರೆ. 

ಕುತೂಹಲ ಕೆರಳಿಸಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಕಾರಣ ಲೆಕ್ಕ ಹಾಕಲಾಗುತ್ತಿದೆ. ಚುನಾವಣೆಯ ಹೊಸ್ತಿನಲ್ಲಿರುವ ವರ್ಷದಲ್ಲೇ ಬಿವೈಆರ್ ಶಿವಮೊಗ್ಗ ಲೋಕಸಭಾ ಕ್ಷೇತ್ರದಾದ್ಯಂತ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಇನ್ನು ಚುನಾವಣೆ ಆರು ತಿಂಗಳು ಇರುವಾಗಲಂತೂ, ದಿನಕ್ಕೆ 600-700 ಕಿಲೋಮೀಟರ್ ಪ್ರವಾಸ ಕೈಗೊಂಡು ತಾವು ಮಾಡಿದ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದರು. 

ಚುನಾವಣೆ ಸನಿಹವಾದ ಸಂದರ್ಭದಲ್ಲಿ ಕಾಂಗ್ರೆಸ್ ನಿಂದ ಗೀತಾ ಶಿವರಾಜ್ ಕುಮಾರ್ ಸ್ಪರ್ಧಿಸುವುದು ನಿಕ್ಕಿ ಎಂದಾಗ ರಾಘವೇಂದ್ರ ಗೆಲುವು ಸುಲಭ ಎಂಬಂತ ಮಾತುಗಳು ಸಾರ್ವಜನಿಕವಾಗಿ ಕೇಳಿ ಬಂತು. ಇದರ ಬೆನ್ನಲ್ಲೆ ಹಾವೇರಿ ಗದಗ ಲೋಕಸಭಾ ಕ್ಷೇತ್ರದಲ್ಲಿ ಪುತ್ರ ಕೆ.ಇ ಕಾಂತೇಶ್ ಗೆ ಬಿಜೆಪಿಯಿಂದ ಟಿಕೇಟ್ ಸಿಗದಿದ್ದಾಗ ಬಂಡಾಯವೆದ್ದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಶಿವಮೊಗ್ಗ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದರು. ರಾಷ್ಟ್ರ ಭಕ್ತರ ಬಳಗ ಹೆಸರಿನಲ್ಲಿ ಚುನಾವಣೆಯನ್ನು ಗಂಭೀರವಾಗಿ ಎದುರಿಸಿದರು. 

ಕೆಎಸ್. ಈಶ್ವರಪ್ಪ ಸ್ಪರ್ದೆಯಿಂದ ಕೊಂಚ ವಿಚಲಿತರಾದ ಬಿಜೆಪಿಗೆ ಚುನಾವಣೆ ಕಬ್ಬಿಣದ ಕಡಲೆ ಎಂದು ಭಾವಿಸಲಾಯಿತು. ಏಕೆಂದರೆ ಈಶ್ವರಪ್ಪ ನಡೆಸುತ್ತಿದ್ದ ಸಭೆ ಸಮಾರಂಭ ಸಮಾವೇಶ ರಾಲಿಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಿದ್ದರು. ಆಗ ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಗಳ ನಡುವೆ ತ್ರಿಕೋನ ಸ್ಪರ್ಧೆಯಾಗುತ್ತದೆ ಎಂದು ಜನರು ಭಾವಿಸಿದ್ರು. ಆದರೆ ರಾಜಕೀಯ ಲೆಕ್ಕಚಾರಗಳೇ ತಲೆಕೆಳಗಾಗುವಂತೆ ಮಾಡಿತು.

ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ನಮ್ಮ ಕೈಹಿಡಿಯಲಿದೆ ಎಂಬ ಅತಿಯಾದ ಆತ್ಮ ವಿಶ್ವಾಸವೇ ಕಾಂಗ್ರೆಸ್  ಸೋಲಿಗೆ ಕಾರಣವಾಯ್ತು ಎನ್ನುತ್ತಾರೆ ಮತದಾರರು. ರಾಜ್ಯದಲ್ಲಿ ಸಿದ್ದರಾಮಯ್ಯ ನ ಕಾಂಗ್ರೆಸ್ ಸರ್ಕಾರ ಇರಬೇಕು. ದೇಶದಲ್ಲಿ ಮೋದಿ ಸರ್ಕಾರ ಇರಬೇಕು ಎಂಬ ಮನಸ್ಥಿತಿಯ  ಮತದಾರರ ಭಾವನೆಯನ್ನು ಕೊನೆ ಕ್ಷಣದವರೆಗೆ ಕಾಂಗ್ರೆಸ್ ಗೆ  ಬದಲಾಯಿಸಲು ಸಾಧ್ಯವಾಗಲಿಲ್ಲ . 

ಈ ರೀತಿಯ ಮನಸ್ಥಿತಿಯ ಮತದಾರರೇ ಕ್ಷೇತ್ರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದರು. ಅವರ ಭಾವನೆಯನ್ನು ಬದಲಿಸಿ ಕಾಂಗ್ರೆಸ್ ಗೆ ಮತಹಾಕುವಂತೆ ಮಾಡಬಹುದಿತ್ತು. ಅಲ್ಲದೆ ಬೂತ್ ಮಟ್ಟದಲ್ಲಿ ಇನ್ನು ಹಣ ಖರ್ಚು ಮಾಡಿದ್ದರೆ, ಪಕ್ಷ ಗೆಲ್ಲುವ ಅವಕಾಶವಿತ್ತು ಎನ್ನುತ್ತಾರೆ ಜನರು. ಯಾವಾಗ ಕೆ.ಎಸ್.ಈಶ್ವರಪ್ಪ ಚುನಾವಣೆಯ ತಂತ್ರಗಾರಿಕೆ ಭಾಗವಾಗಿ ಎಲ್ಲಾ ಪಟ್ಟು ಗಳನ್ನು ಪ್ರಯೋಗಿಸಲು ಮುಂದಾದರೋ ಆಗ ಎಚ್ಚೆತ್ತ ಬಿಜೆಪಿ ತನ್ನ ಗೆಲುವಿಗಾಗಿ ಮತದಾರರಿಗೆ ಹಣದ ಹೊಳೆಯನ್ನು ಸಹ ಹರಿಸ್ತು  ಸಾರ್ . ನಮ್ಮವರು ಬೂತ್ ಮಟ್ಟದಲ್ಲಿ ದುಡ್ಡೆ ಬಿಚ್ಚಲಿಲ್ಲ, ಸ್ವಲ್ಪ ಖರ್ಚು ಮಾಡಿದ್ದರೂ,  ಮತ್ತಷ್ಟು ಮತಗಳನ್ನು ಸೆಳೆಯಬಹುದಿತ್ತು ಎಂದು ಕೆಲ ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಾರೆ.

ಕೆ.ಎಸ್ ಈಶ್ವರಪ್ಪ ಬಿಜೆಪಿಯ  ಹೆಚ್ಚಿನ ಮತಗಳನ್ನು ತಮ್ಮತ್ತ ಸೆಳೆದರೆ, ಕಾಂಗ್ರೆಸ್ ಗೆ ಅನುಕೂಲವಾಗುತ್ತೆ ಎಂಬ ರಾಜಕೀಯ ಲೆಕ್ಕಚಾರ ಕಾಂಗ್ರೆಸ್ ಗೂ ಕೈಕೊಟ್ಟಿದೆ. ಹಾಗೆ ನೋಡಿದರೆ ಈಶ್ವರಪ್ಪ ಮಾಡಿದ ಚುನಾವಣೆಗೆ ಕನಿಷ್ಠ ಏನಿಲ್ಲವೆಂದರೂ ಎರಡು ಲಕ್ಷ ಮತಗಳು ಬರಬೇಕಿತ್ತು. ಆದರೆ ಚಲಾವಣೆಯಾಗಿದ್ದು ಕೇವಲ ಮೂವತ್ತು ಸಾವಿರ. ಮತದಾನದ ಹಿಂದಿನ ದಿನ ಈಶ್ವರಪ್ಪ ಚುನಾವಣೆಯಿಂದ ಹಿಂದೆ ಸರಿದು ಬಿಜೆಪಿ ಬೆಂಬಲಿಸಿದ್ದಾರೆ ಎಂಬ ಪತ್ರಿಕಾ ತುಣಿಕಿನ ಫೋಟೋ ಮತ್ತು ಹಿಂದೆ ಬಿಜೆಪಿಯಲ್ಲಿದ್ದಾಗ ಮಾತನಾಡಿದ ವಿಡಿಯೋ ತುಣುಕನ್ನು ಕೆಲವರು ಹರಿಬಿಟ್ಟಿದ್ದರಿಂದ ಈಶ್ವರಪ್ಪ ಚುನಾವಣೆಗೆ ಮೇಜರ್ ಸೆಟ್ ಬ್ಯಾಕ್ ಆಯ್ತು ಎಂದೇ ಹೇಳಬೇಕಾಗುತ್ತದೆ.

13 ಲಕ್ಷ ಚಿಲ್ಲರೆ ಮತಗಳಲ್ಲಿ ಈಶ್ವರಪ್ಪರಿಗೆ ಚಲಾವಣೆಯಾಗಿದ್ದು, ಕೇವಲ ಮೂವತ್ತು ಸಾವಿರ ಎಂದರೆ  ಅವರು ಠೇವಣಿ ಸಹ ಕಳೆದುಕೊಳ್ಳಬೇಕಾಯಿತು. ಈಶ್ವರಪ್ಪ ಅಂದುಕೊಂಡಂತೆ ಚುನಾವಣೆಯಾಗಿದ್ದರೆ, ಬಿಜೆಪಿಗೆ ಸೆಟ್ ಬ್ಯಾಕ್ ಆಗುತ್ತಿತ್ತು. ಆದರೆ ಮತ ಎಣಿಕೆ ಸಂದರ್ಭದಲ್ಲಿ ಬಿಜೆಪಿಯ ಗ್ರಾಪ್ ಉತ್ತುಂಗಕ್ಕೆ  ಏರಿದ್ದು, ಬಿಟ್ಟರೆ ಮತ್ತೆ ಇಳಿಯಲಿಲ್ಲ. ಕೇವಲ ಒಂದೇ ಸುತ್ತಿನಲ್ಲಿ ಮಾತ್ರ ಹೆಚ್ಚು ಲೀಡ್ ಪಡೆದಿದ್ದ ಕಾಂಗ್ರೆಸ್ , ನಂತರ ಬಿಜೆಪಿಗೆ ಪ್ರಭಲ ಪೈಪೋಟಿಯನ್ನೇ ಒಡ್ಡಲಿಲ್ಲ. ಅಂತಿಮವಾಗಿ  ಬಿಜೆಪಿ ಎರಡು ಲಕ್ಷದ ನಲ್ವತ್ತು ಸಾವಿರ ಲೀಡ್ ನಿಂದ ಜಯಭೇರಿ ಬಾರಿಸಿತು.

ಈ ಬಾರಿಯ ಚುನಾವಣೆಯಲ್ಲಿ ಜಾತಿ ಮತ್ತು  ಹಣ ಹೆಚ್ಚು ಕೆಲಸ ಮಾಡಿದೆ, ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಯ ಜೊತೆಗೆ ಹಣವೂ ಹರಿದಿದ್ದರೆ, ಚುನಾವಣೆಯಲ್ಲಿ ಗೆಲವು  ಸಾಧ್ಯವಾಗುತ್ತಿತ್ತು ಎಂಬುದು ಹಲವರ ಅಭಿಪ್ರಾಯ. ಕಾಂಗ್ರೆಸ್ ಬಲವಾಗಿ ನಂಬಿದ ಈಡಿಗ ಮುಸ್ಲಿಂ ಕ್ರಿಶ್ಚಿಯನ್ ಎಸ್ಸಿ ಎಸ್ಟಿ ಓಬಿಸಿ ಮತಗಳು ಸಾಲಿಡ್ ಆಗಿ ಕಾಂಗ್ರೆಸ್ ಗೆ ಚಲಾವಣೆಯಾಗಿದೆಯಾ ಎಂಬುದು ಪ್ರಶ್ನೆಯಾಗಿ ಉಳಿದಿದೆ. 

ಕೆಲವರು ಕಾಂಗ್ರೆಸ್ ನಿಂದ ಸ್ಪರ್ದೆಗಿಳಿಸಿದ ಗೀತಾ ಶಿವರಾಜ್ ಕುಮಾರ್  ಬೆಂಗಳೂರಿನವರು, ಶಿವಮೊಗ್ಗದಲ್ಲಿ ಎಲ್ಲಿರ್ತಾರೆ, ಅವರ ಸಂಪರ್ಕ ಸಾಧಿಸಲು ಸಾಧ್ಯವಿಲ್ಲ ಎಂದು ಹಬ್ಬಿಸಿದ ಗಾಳಿ ಮಾತು, ಕೆಲವು ಮತದಾರರನ್ನು ಘಾಡವಾಗಿಯೇ ತಟ್ಟಿದೆ. ಇದು ಚುನಾವಣೆ ಪ್ರಚಾರದ ಆರಂಭದಲ್ಲಿಯೇ ನೀಡಿದ ಕೊಡಲಿ ಪೆಟ್ಟು ಎಂದರೂ ತಪ್ಪಾಗುವುದಿಲ್ಲ. 

ಇದಲ್ಲದೆ ಕಾಂಗ್ರೆಸ್ ನ ಆಂತರೀಕ ಒಳ ಜಗಳ ಭಿನ್ನಾಭಿಪ್ರಾಯಗಳು ಚುನಾವಣೆಯನ್ನು  ಗಟ್ಟಿಯಾಗಿ ಮಾಡುವಲ್ಲಿ ವಿಫಯವಾಗಿದೆ., ಮೂಲ ಕಾಂಗ್ರೆಸ್ ಮತ್ತು ವಲಸಿಗ ಕಾಂಗ್ರೆಸ್ ಮುಖಂಡರ ನಡುವೆ ಇರುವ ಕಂದಕವನ್ನು ಸರಿಪಡಿಸುವಲ್ಲಿ ಪಕ್ಷದ ಮುಖಂಡರು ಅಷ್ಟಾಗಿ ಆಸಕ್ತಿ ತೋರಲಿಲ್ಲ. ಕಾಂಗ್ರೆಸ್ ನಲ್ಲಿ  ಮೇಲ್ನೋಟಕ್ಕೆ ಬಿರುಸಿವ ಪ್ರಚಾರ ನಡೆಸಿದರೂ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಏನೋ ಕೊರತೆ ಕಾಣುತ್ತಿತ್ತು. ಆ ಕೊರತೆ ಫಲಿತಾಂಶದ ದಿನ ಬಿಜೆಪಿಗೆ ಲೀಡ್ ಸಿಕ್ಕಾಗಲೇ ಗೊತ್ತಾಗಿದ್ದು, ಇಲ್ಲಿ ಏನೋ ವ್ಯತ್ಯಾಸವಾಗಿದೆ ಅಂತಾ. 

ಪಕ್ಷದೊಳಗಿನ ಆಂತರೀಕ ಭಿನ್ನಾಭಿಪ್ರಾಯಗಳನ್ನು ಶಮನ ಮಾಡುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು  ಗಮನ ಹರಿಸಬೇಕಿತ್ತು ಎಂಬುದು ಕಾಂಗ್ರೆಸ್ ನ ಹಲವು ಕಾರ್ಯಕರ್ತರ ಅಭಿಪ್ರಾಯ.  ಚುನಾವಣೆಯಲ್ಲಿ ಸಚಿವರು ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕಿತ್ತು ಎಂಬ ಅಭಿಪ್ರಾಯಗಳು ಕಾಂಗ್ರೆಸ್ ಪಡಸಾಲೆಯಿಂದಲೇ ಕೇಳಿಬರುತ್ತದೆ. ಇನ್ನು  ನೈರುತ್ಯ ಪದವಿ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಗೆ ಸೋಲಾದರೆ , ಅದರ ನೈತಿಕ ಹೊಣೆಯನ್ನು ಯಾರು ಹೊರುತ್ತಾರೆ.  ಇಲ್ಲಿ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬ ಪ್ರಶ್ನೆಗೆ ಸಧ್ಯಕ್ಕೆ ಉತ್ತರವಿಲ್ಲದಂತಾಗಿದೆ.

Shivamogga Lok Sabha constituency election results and analysis: