ಆನೆ ದಿನಚಾರಣೆಗೂ ವಾರದ ಮೊದಲು ನಡೆದಿದ್ದ ಬೆಂಗಳೂರು ಗಣೇಶನ ಗಲಾಟೆ! ಆನೆ ಸೊಂಡಿಲಿಗೆ ಸಿಕ್ಕ ಇಬ್ಬರು ಬದುಕಿ ಬಂದಿದ್ದು ಹೇಗೆ ಗೊತ್ತಾ!? JP ಬರೆಯುತ್ತಾರೆ

JP has written extensively about the incident in which ganesh elephant of Sakrebail elephant attacked two staff members ಸಕ್ರೆಬೈಲ್​ ಆನೆ ಬಿಡಾರದ ಗಣೇಶ ಆನೆ ಇಬ್ಬರು ಸಿಬ್ಬಂದಿಯ ಮೇಲೆ ದಾಳಿ ನಡೆಸಿದ್ದ ಘಟನೆಯ ಬಗ್ಗೆ ಜೆಪಿ ವಿಸ್ತೃತವಾಗಿ ಬರೆದಿದ್ದಾರೆ

ಆನೆ ದಿನಚಾರಣೆಗೂ ವಾರದ ಮೊದಲು ನಡೆದಿದ್ದ ಬೆಂಗಳೂರು ಗಣೇಶನ ಗಲಾಟೆ!  ಆನೆ ಸೊಂಡಿಲಿಗೆ ಸಿಕ್ಕ ಇಬ್ಬರು ಬದುಕಿ ಬಂದಿದ್ದು ಹೇಗೆ ಗೊತ್ತಾ!? JP ಬರೆಯುತ್ತಾರೆ

KARNATAKA NEWS/ ONLINE / Malenadu today/ Aug 13, 2023 SHIVAMOGGA NEWS 

ಎಕ್ಸ್​ಕ್ಲ್ಯೂಸಿವ್ ವರದಿ: ಜೆಪಿ

ಶಿವಮೊಗ್ಗ ಸಕ್ರೆಬೈಲ್ ಆನೆ ಬಿಡಾರ ದಲ್ಲಿರುವ ಆನೆಗಳನ್ನು ನೋಡಿ,  ಎಷ್ಟು ಪಾಪ ಅಲ್ಲಾ ಅಂತಾ ಮುಟ್ಟಿ ಮಾತನಾಡಿಸಿರುವ ಪ್ರವಾಸಿಗರಿಗೆ ಗಲಾಟೆ ಗಣೇಶನ ಬಗ್ಗೆ ಅಷ್ಟಾಗಿ ಗೊತ್ತಿರಲಿಕ್ಕಿಲ್ಲ. ಅದರಲ್ಲಿಯು ಇವತ್ತಿಗೆ ಸರಿಸುಮಾರು ವಾರದ ಹಿಂದೆ ಸಕ್ರೆಬೈಲ್ ಆನೆ ಬಿಡಾರ ಸಮೀಪದ ಕಾಡಿನಲ್ಲಿ ಬೀಡುಬಿಟ್ಟಿರುವ ಗಣೇಶ ಇಬ್ಬರನ್ನು ಸಾಯಿಸುವ ಪ್ರಯತ್ನ ಮಾಡಿದ್ದ ಎಂಬ ವಿಚಾರ ಹೊರಜಗತ್ತಿಗೆ ತಿಳಿದಿಲ್ಲ. ಅದನ್ನೆ ಹೇಳುವ ಸಲುವಾಗಿ ಇವತ್ತಿನ ಜೆಪಿ ಸ್ಟೋರಿ ಬರೆಯುತ್ತಿದ್ದೇನೆ

ಗಣೇಶನ ಗಲಾಟೆ

ನೋಡಲು ಸೌಮ್ಯ ಸ್ವಭಾವದಂತೆ ಕಾಣುವ ಗಣೇಶನ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲ. ಏಕೆಂದರೆ  ಮಾವುತ ಕಾವಾಡಿಗಳು ಸಹ ಈ ಆನೆಯ ಹತ್ತಿರ ಹೋಗಲು ಹೆದರುತ್ತಾರೆ. ಅಷ್ಟೊಂದು ಟೆರರ್ ಈ ಗಣೇಶ ಆನೆ.  ಸುಮ್ಮನೆ ನೋಡುವ ಆನೆ ಹತ್ತಿರ ಹೋಗ್ತಿದ್ದಂತೆ ಯಾಮಾರಿಸಿ ಸೊಂಡಿಲಿನಲ್ಲಿ ಬಾಚಿಕೊಂಡು ನೆಲಕ್ಕೆ ಕೆಡವುತ್ತದೆ.  ಈತನ ದುಷ್ಕೃತ್ಯಕ್ಕೆ ಈವರೆಗೂ ಬಲಿಯಾದ ಮಾವುತ ಕಾವಾಡಿ ಹಾಗು ಜನರ ಸಂಖ್ಯೆ ಬರೋಬ್ಬರಿ ಆರು. ಇಂತಹ ಮರ್ಡರ್​ ಹಿಸ್ಟರಿ ಹೊಂದಿರುವ ಆನೆ ಕಳೆದ ವಾರ ಇಬ್ಬರು ಸಿಬ್ಬಂದಿಯನ್ನ ಬಾಚಿಕೊಂಡು ಇನ್ನೆನು ನೆಲಕ್ಕೆ ಕೆಡವಲು ಮುಂದಾಗಿತ್ತು.

ಇದನ್ನು ಸಹ ಓದಿ : ಶಿವಮೊಗ್ಗ ಜಿಲ್ಲೆಯಲ್ಲಿ ರಾಷ್ಟ್ರೀಯ ಲೋಕ್​ ಅದಾಲತ್​! ಯಾವಾಗ? ಯಾವೆಲ್ಲಾ ಕೇಸ್​ಗಳು ಆಗಲಿವೆ ಇತ್ಯರ್ಥ! ಪಾಲ್ಗೊಳ್ಳುವುದು ಹೇಗೆ?|

ಸಾರ್ವಜನಿಕರ ಮೇಲೆ ಅಟ್ಯಾಕ್ ಮಾಡುವ ಭೀತಿ 

ಅವತ್ತು, ಗಣೇಶ ಆನೆಯ ಸರಪಣಿಯನ್ನು ಬದಲಾಯಿಸಬೇಕಿತ್ತು. ಹೀಗಾಗಿ ಸಕ್ರೆಬೈಲ್ ಮಾವುತ ಕಾವಾಡಿಗಳು ಆನೆಯ ಸರಪಣಿಯನ್ನು ಬದಲಾಯಿಸಲು ಹೊಸ ಚೈನ್ ನೊಂದಿಗೆ ಗಣೇಶನಿದ್ದಲ್ಲಿಗೆ ತೆರಳಿದ್ದರು. ಹಾಗೊಂದು ವೇಳೆ ಸರಪಣಿಯನ್ನ ಬದಲಾಯಿಸದೇ ಹೋಗಿದ್ದರೇ, ಗಣೇಶ ತೀರ್ಥಹಳ್ಳಿ ರೋಡಿಗೆ ಬಂದು ಯಾವುದೋ ವಾಹನದ ಮೇಲೋ ಅಥವಾ ಓಡಾಡುವ ಜನರ ಮೇಲೋ ದಾಳಿ ನಡೆಸುವ ಅಪಾಯವಿತ್ತು. ಸರಪಣಿ ಹಳೆಯದಾಗಿದ್ರಿಂದ ಅದನ್ನು ಕಿತ್ತುಕೊಂಡು ಬರುವ ಸಾಹಸ ಗಣೇಶನಿಗೆ ದೊಡ್ಡದೇನಾಗಿರಲಿಲ್ಲ. ಈ ಕಾರಣಕ್ಕೆ ವನ್ಯಜೀವಿ ವಿಭಾಗದ ಸಿಬ್ಬಂದಿ ಪ್ರತಿನಿತ್ಯ ಗಣೇಶನ ಮೇಲೆ ಒಂದು ನಿಗಾವನ್ನ ಇಟ್ಟಿರುತ್ತಾರೆ. ಆತನ ಮೇಲೆ ನಿತ್ಯ ಗಮನಹರಿಸಿದ್ದರಿಂದಲೇ ಇಲ್ಲಿವರೆಗೂ ನಡೆಯಬಹುದಾದ ಸಂಭವನೀಯ ಅಪಾಯಗಳು ತಪ್ಪಿವೆ.  ಆದರೆ ಅವತ್ತು ಮಾತ್ರ ಆನೆ ಸಿಬ್ಬಂದಿಗಳ ಮೇಲೆಯೇ ಅಟ್ಯಾಕ್ ಮಾಡಿದ್ದ. 

ಮಾವುತ ಕಾವಾಡಿ ಮೇಲೆ ದಾಳಿ

ಮೊದಲೆ ಪೂರ್ತಿ ತಯಾರಿ ಮಾಡಿಕೊಂಡು ಜಬಿವುಲ್ಲಾ, ಅಣ್ಣು ಹಾಗೂ ಜಮೇದಾರ್​ ಖುದ್ರತ್​ ಪಾಷಾ ಸೇರಿದಂತೆ ಸಕ್ರೆಬೈಲ್ ಬಿಡಾರದ ಸಿಬ್ಬಂದಿ, ಕ್ಯಾಂಪ್​ ಹತ್ತಿರ ಇರುವ ದರ್ಗಾದ ಸಮೀಪ ತೆರಳಿದ್ದಾರೆ. ಅದು ಗಣೇಶ ಆನೆಯ ಖಾಯಂ ಟಿಕಾಣಿ. ಅಲ್ಲಿಗೆ ತೆರಳಿದ ಸಿಬ್ಬಂದಿ ಆನೆ ನಾರ್ಮಲ್​ ಆಗಿರುವುದು ಗಮನಿಸಿದ್ದಾರೆ. ಎನೋ ಕೆಲಸ ಸಲೀಸಾಗಲಿ ಅಂತಾ ದೇವರನ್ನ ನೆನೆದೇ ಮುಂದಕ್ಕೆ ಅಡಿಯಿಟ್ಟಿತ್ತು ಟೀಂ. ಮಾವುತ ಜಬಿವುಲ್ಲಾ ಹಾಗೂ ಅಣ್ಣು ಆನೆಯ ಹತ್ತಿರ ಹೋಗಿ ಸರಪಣಿಗೆ ಕೈ ಹಾಕಿದ್ದಾರೆ. ಆನೆ ಏನನ್ನು ಮಾಡದಿದ್ದನ್ನು ನೋಡಿ ತುಸು ನಿರಾಳಗಾಗಿದ್ದರಷ್ಟೆ , ಗಣೇಶ ಇದ್ದಕ್ಕಿದ್ದಂತೆ ಇಬ್ಬರನ್ನ ಸೊಂಡಿಲಿನಲ್ಲಿ ಬಾಚಿಕೊಂಡು ಬಿಟ್ಟಿದ್ದ. ಒಂದೆ ಸೆಕೆಂಡ್​ನಲ್ಲಿ ಅಲ್ಲಿ ಸೀನ್ ಬದಲಾಗಿ ಹೋಗಿತ್ತು. ಚೂರು ಯಾಮಾರಿದ್ದರೂ  ಇಬ್ಬರು ಸಾವನ್ನಪ್ಪಬೇಕಾಗಿತ್ತು. ಆದರೆ ಅಷ್ಟರಲ್ಲಿ ಸಿಬ್ಬಂದಿ ಇನ್ನಷ್ಟು ಅಲರ್ಟ್ ಆದ್ರು, ಅಪಾಯದಲ್ಲಿದ್ದ ಜಬಿವುಲ್ಲಾ ಹಾಗೂ ಅಣ್ಣುವನ್ನು ಆನೆಯಿಂದ ಬಿಡಿಸಬೇಕಾಗಿತ್ತು. ಗಣೇಶ ಸುಲಭಕ್ಕೆ ಬಿಡುವನಾಗಿರಲಿಲ್ಲ

ಮುಂದೆ ನುಗ್ಗಿದ ಸಿಬ್ಬಂದಿ!

ಯಾವಾಗ ಆನೆ ಇಬ್ಬರನ್ನ ಬಾಚಿಕೊಂಡಿತೋ ತಕ್ಷಣವೆ ಅಲ್ಲಿದ್ದ ಖುದ್ರತ್ ಪಾಷಾ ಆನೆ ಮೇಲೆ ಅಟ್ಯಾಕ್ ಮಾಡಿದ್ರು, ಆನೆಗೆ ಸಂಕೇತ ನೀಡುವ ಕೋಲಿನಿಂದ ಆನೆಯ ಕಿವಿಗೆ ಚುಚ್ಚಲು ಆರಂಭಿಸಿದರು, ಪದೇ ಪದೇ ಚುಚ್ಚಿದ್ದರಿಂದ ಆನೆಯ ಸಿಟ್ಟು ಅವರ ಮೇಲೆ ತಿರುಗಿತು, ತಾನು ಹಿಡಿದಿದ್ದ ಜಬಿವುಲ್ಲಾ ಹಾಗೂ ಅಣ್ಣುರನ್ನ ಬಿಟ್ಟು , ಆನೆ ಖುದ್ರತ್ ಮೇಲೆ ಎರಗಲು ಮುಂದಾಯ್ತು. ಓಡ್ರೋ…. ಇಷ್ಟೆ ಹೇಳಿದ್ದು, ಆನೆ ಹಿಡಿತದಿಂದ ಕೆಳಕ್ಕೆ ಬಿದ್ದ ಇಬ್ಬರು ಸಿಬ್ಬಂದಿ ಎದ್ನೋ ಬಿದ್ನೋ ಅಂದು ಅಲ್ಲಿಂದ ಓಡಿದ್ರು, ಇತ್ತ ಖುದ್ರತ್ ಆನೆಗೆ ಸಂಕೇತ ಕೊಡುತ್ತಲೇ ಹಿಂದಿಂದೆ ಓಡಿದರು. ಸಿಬ್ಬಂದಿಗಳೆಲ್ಲಾ ಸುರಕ್ಷಿತ ಸ್ಥಳಕ್ಕೆ ಬಂದ ಮೇಲೆಯು ಆನೆಯು ನಿಂತಲ್ಲಿಯೇ ಆರ್ಭಟಿಸುತ್ತಿತ್ತು. ಕೆಲವೇ  ನಿಮಿಷದಲ್ಲಿ ನಡೆದು ಹೋದ ಸನ್ನಿವೇಶದಲ್ಲಿ ಸಿಬ್ಬಂದಿಗಳನ್ನು ಕಾಪಾಡಿದ್ದು ದೇವರ ಆಶೀರ್ವಾದವಷ್ಟೆ ಆಗಿತ್ತು. ಅವತ್ತಿನ ಘಟನೆ ಹಿಡಿಸಿದ ಚಳಿ ಜ್ವರ ಇವತ್ತಿಗೂ ಸಿಬ್ಬಂದಿಯನ್ನು ಬಿಟ್ಟಿಲ್ಲ ಎಂದರೇ ಯೋಚಿಸಿ ನೋಡಿ, ಅಂದಿನ ದೃಶ್ಯ ಎಷ್ಟು ಭೀಕರವಾಗಿತ್ತು ಎಂಬುದನ್ನು. 

ಹಿಡಿದ ಕೆಲಸ ಬಿಡದ ಸಿಬ್ಬಂದಿ

ಇಷ್ಟಾದರೂ ಮತ್ತೆ ಆನೆಯ ಬಳಿ ಹೋದ ಸಿಬ್ಬಂದಿ ಅದಕ್ಕೆ ಕಟ್ಟಿದ್ದ ಸರಪಣಿಯನ್ನು ಬದಲಿಸಿದ್ದಾರೆ. ಈ ಭಾರಿ ಅತಿಹೆಚ್ಚು ಸಿಬ್ಬಂದಿ ಜೊತೆ ತೀವ್ರ ನಿಗಾ ವಹಿಸಿ ಆನೆಯ ಸರಪಣಿಯನ್ನು ಬದಲಾಯಿಸಿದ್ದಾರೆ. ಇಷ್ಟೊಂದು ಹರಸಾಹಸ ಪಟ್ಟು ಜೀವ ಪಣಕ್ಕಿಟ್ಟು ಕೆಲಸ ಮಾಡಿದ ಸಿಬ್ಬಂದಿಯ ಉದ್ದೇಶ ಗಣೇಶ ಇನ್ಯಾರನ್ನೂ ಏನೂ ಮಾಡದಿರಲಿ ಎಂಬ ನಿರೀಕ್ಷೆಯಾಗಿತ್ತು. 

ಪ್ರಾಣ ಪಣಕ್ಕಿಟ್ಟು ಕೆಲಸ

ಸಕ್ರೆಬೈಲ್ ಬಿಡಾರದಲ್ಲಿ ಪ್ರತಿನಿತ್ಯ ಗಜಪಡೆಯ ಜೊತೆಗೆ ಕೆಲಸ ಮಾಡುವ ಸಿಬ್ಬಂದಿ ಯಾವಾಗ ಅಪಾಯ ಎದುರಿಸಬೇಕಾಗುತ್ತದೆಯೋ ಗೊತ್ತಿಲ್ಲ. ಮೂಕಪ್ರಾಣಿಯ ಪ್ರೀತಿ, ಸಲುಗೆ, ಅಪ್ಪುಗೆಯ ಜೊತೆಗೆ ಅದರ ಮೇಲೆ ಹತ್ತುವ ಅಧಿಕಾರ ನೀಡುವ ಪ್ರಾಣಿಯ ಸಮ್ಮತಿಯನ್ನು ಪಡೆಯುತ್ತಾರೆ ಇಲ್ಲಿನ ಸಿಬ್ಬಂದಿ. ಅದೇ ರೀತಿಯಲ್ಲಿ ಗಜರಾಜನ ಮದದ ಸಿಟ್ಟು ಸಹ ಆಗಾಗ ಎದುರಿಸಬೇಕಾಗುತ್ತದೆ. ಅಲ್ಲದೆ ಗಣೇಶನಂತಹ ಕಿರಿಕ್​ ಪಾರ್ಟಿಯ ಜೊತೆ ಅದರ ಜೀವನನುದ್ದುಕ್ಕೂ ಏಗಬೇಕಾಗುತ್ತದೆ. ಗೃಹಚಾರ ಕೆಟ್ಟಿದ್ದರೇ ಜೀವವೇ ಕಳೆದುಕೊಳ್ಳಬೇಕಾಗುತ್ತದೆ. ಇಂತಹ ಸಿಬ್ಬಂದಿಗಳ ಕುಟುಂಬಗಳ ರಕ್ಷಣೆಗೆ ಸೂಕ್ತ ಇನ್ಶುರೆನ್ಸ್​ ಕೂಡ ಇರುವುದಿಲ್ಲ ಎಂಬುದು ಬೇಸರದ ಸಂಗತಿ. 

ಇಷ್ಟಕ್ಕೂ ಗಣೇಶನ ಕ್ರೈಂ ಶೀಟ್​ ಏನು ಗೊತ್ತಾ?

1997 ರಲ್ಲಿ ಬನ್ನೇರುಘಟ್ಟದಿಂದ ಸಕ್ರೆಬೈಲು ಆನೆ ಬಿಡಾರಕ್ಕೆ ಬಂದ ಗಣೇಶ, ಈವರೆಗೂ ಶೆಟ್ಟಿಹಳ್ಳಿ ಕಾಡಿನಲ್ಲಿಯೇ ವಾಸ್ತವ್ಯ ಹೂಡಿದ್ದಾನೆ. ಸಕ್ರೆಬೈಲು ಆನೆ ಬಿಡಾರಕ್ಕೆ ಬರುವ ಮುನ್ನ ರಾಜ್ಯದ ಬಹುತೇಕ ಎಲ್ಲಾ ಬಿಡಾರಗಳಲ್ಲಿದ್ದ ಗಣೇಶನನ್ನು ನೋಡಿಕೊಳ್ಳಲು ಹಿಂದೇಟಾಕಿದ ಮಾವುತ ಕಾವಾಡಿಗಳಿಂದಾಗಿ ಗಣೇಶ ಅಂತಿಮವಾಗಿ ಸಕ್ರೆಬೈಲಿಗೆ ಸ್ಥಳಾಂತರಿಸಲ್ಪಟ್ಟಿದ್ದ. ಗಣೇಶ ತನಗೆ ಸಾಕಿ ಸಲುಹಿದ ಮೊದಲ ಮಾವುತನನ್ನೇ ಬಲಿತೆಗೆದುಕೊಂಡ ಕಿರಾತಕ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದಾನೆ. ಸಾಮಾನ್ಯವಾಗಿ ಆನೆಗಳು ಸೌಮ್ಯ ಸ್ವಭಾವ ಹೊಂದಿರುತ್ತವೆ. ಮನುಷ್ಯನಷ್ಟೆ ಸೂಕ್ಷ್ಮ ಸಂವೇಧಿ ಪ್ರಾಣಿಯಾಗಿವೆ. ಆದರೆ ಆನೆಗಳ ಪಾಲಿಗೆ ಶಾಪವೆಂಬಂತಿರುವ ಗಣೇಶನ ಗುಣವೇ ವಿಕೃತವಾಗಿದೆ.

ಇದನ್ನು ಸಹ ಓದಿ : ತೀರ್ಥಹಳ್ಳಿ ವಿಹಂಗಮಧಾಮದ ಮೇಲೆ ಪೊಲೀಸ್ ರೇಡ್! ದೇಶಿ,ವಿದೇಶಿ ಮದ್ಯ, ಕೋವಿ, ಕೊಂಬು ಸೇರಿದಂತೆ ವಿವಿಧ ವಸ್ತುಗಳು ಜಪ್ತಿ! ಏನಿದು ಪ್ರಕರಣ!?


ಬಣ್ಣ ಕಂಡರೆ ಆಗೋದಿಲ್ಲ

ಈತನಿಗೆ ಬಣ್ಣದ ಉಡುಪುಗಳು ಕಂಡರೆ ಆಗೋದಿಲ್ಲ. ಗುಂಪಿನಲ್ಲಿರುವ ಜನರನ್ನು ಕಂಡರೆ ಎರಗಿ ಬೀಳ್ತಾನೆ. ರಸ್ತೆಯಲ್ಲಿ ವಾಹನ ಸದ್ದು ಕೇಳಿದ್ರೆ ಘೀಳಿಡ್ತಾನೆ. ಇನ್ನು ಮಸ್ತಿಗೆ ಬಂದ ಸಂದರ್ಭದಲ್ಲಿ ಗಣೇಶನ ಹತ್ತಿರ ಮಾವುತರು ಹೋಗೋದಕ್ಕೆ ಸಾಧ್ಯನೇ ಇಲ್ಲ. ಆರೇಳು ಮಾವುತರನ್ನು ಮೈಮೇಲೆ ಕೂರಿಸಿಕೊಂಡು ಆನಂತರ ಕೆಡವಿದ್ದ ಈ ಗಣೇಶ. ಮಾವುತರು ಎಷ್ಟೇ ಎಚ್ಚರಿಕೆಯಿಂದಿದ್ರೂ, ಯಾಮಾರಿಸಿ ಸೊಂಡಲನ್ನು ಬೀಸುವ ಕೆಟ್ಟ ಗುಣವನ್ನು ಹೊಂದಿದ್ದಾನೆ.

ಜನರ ಮೇಲೂ ಎರಗಿದ್ದ ಗಣೇಶ

ಮೊಹಮ್ಮದ್ ಆಲಿ ಎಂಬ ಮಾವುತನನ್ನು ಯಾಮಾರಿಸಿ ಕೊಂದಿದ್ದ ಈ ಗಣೇಶ. ರಸ್ತೆ ಬದಿ ಸಾಗುತ್ತಿದ್ದ ವಾಹನದ ಮೇಲೆರಗಿ, ಪ್ರಯಾಣಿಕನೊಬ್ಬನನ್ನ ಬಲಿ ಪಡೆದಿದ್ದ.ಇದ್ದ ಜಾಗದಲ್ಲಿಯೇ ಮರ ಉರುಳಿಸುವುದು,  ಎಲ್ಲೋ ನೋಡಿದಂತೆ ಮಾಡಿ, ಸೊಂಡಿಲು ಬೀಸಿ ಹೊಡೆಯುವುದು,  ಗಣೇಶನ ಜತನದಿಂದ ಬಂದ ಗುಣಲಕ್ಷಣವಾಗಿದೆ. ರಾಜ್ಯದ ಎಲ್ಲಾ ಬಿಡಾರಗಳಲ್ಲಿ ಮಾವುತರಿಗೆ ಸಿಬ್ಬಂದಿಗಳಿಗೆ ಕೊಡಬಾರದ ಕಾಟಕೊಟ್ಟಿದ್ದ ಗಣೇಶನನ್ನು ನಾವು ಸಲಹಲು ಸಾಧ್ಯವಿಲ್ಲ ಎಂದು ಮಾವುತರು ಮೇಲಾಧಿಕಾರಿಗಳಿಗೆ ಪತ್ರ ಬರೆದ ನಂತರ, ಅಂತಿಮವಾಗಿ ಗಣೇಶ ಸಕ್ರೆಬೈಲಿಗೆ ಬಂದ. ಇಲ್ಲೂ ಕೂಡ ಮಾವುತರ ಕೈಕಾಲು ಟ್ವಿಸ್ಟ್ ಮಾಡಿದ್ದಾನೆ.ಇಬ್ಬರನ್ನು ಬಲಿಪಡೆದಿದ್ದಾನೆ.

ಇದನ್ನು ಸಹ ಓದಿ :GOOD NEWS / ಕೊಡಚಾದ್ರಿ ಪ್ರವಾಸಕ್ಕೆ ಇನ್ನಿಲ್ಲ ನಿರ್ಬಂಧ! ಆದರೆ ಇದೊಂದಕ್ಕಿಲ್ಲ ಅವಕಾಶ!

ಬೆಳಗ್ಗೆ ಕೂಲ್ , ಮಧ್ಯಾಹ್ನ ವೈಲೆಂಟ್, ರಾತ್ರಿ ಕಿರಿಕ್

ಜಲೀಲ್ ಎಂಬ ಮಾವುತ  ಈ ಹಿಂದೇ ಗಣೇಶನ ಲಾಲನೆ ಪಾಲನೆ ಮಾಡುತ್ತಿದ್ದರು. ಜಲೀಲ್ ಕೂಡ ಹಲವಾರು ಬಾರಿ ಗಣೇಶನ ದಾಳಿಗೆ ತುತ್ತಾದರೂ ಸಹ ಜಾಗೃತಿ ವಹಿಸಿ ಪ್ರಾಣಾಪಾಯದಿಂದ ಪಾರಾಗಿದ್ದರು. ಹಲವು ಬಾರಿ ಗಣೇಶ, ಜಲೀಲ್ ಮೇಲೆ ಮರ ಉರುಳಿಸುವ ಪ್ರಯತ್ನ ಮಾಡಿದ್ದ. ಈತನಿಗೆ ಆಹಾರ ನೀಡುವುದು,ವೈದ್ಯೋಪಚಾರ ಮಾಡುವುದು ಕಷ್ಟಸಾಧ್ಯ. ಗಣೇಶ ಇರುವ ಕಾಡಿನ ಜಾಗಕ್ಕೆ ಪ್ರತಿದಿನ ನಾಲ್ಕೈದು ಕಿಲೋಮೀಟರ್ ನಡೆದು ಹೋಗುವ ಜಲೀಲ್,,ಜೀವಪಣಕ್ಕಿಟ್ಟುಕೆಲಸ ಮಾಡಬೇಕಿತ್ತು. ಬೆಳಿಗ್ಗೆ ಮಾತ್ರ ಮಾವುತನ ಮಾತು ಕೇಳ್ತಿದ್ದ ಗಣೇಶ, ನೆತ್ತಿ ಮೇಲೆ ಸೂರ್ಯ ಬರುತ್ತಿದ್ದಂತೆ ಅಕ್ಷರ ಸಹ ಘೀಳಿಡುತ್ತಿದ್ದ ಈತನ ವರ್ತನೆಯನ್ನು ಬದಲಿಸಲು ಸಾಧ್ಯವಿಲ್ಲ ಎಂದು ಮಾವುತರು ಕೂಡ ಒಂದು ನಿರ್ಧಾರಕ್ಕೆ ಬಂದಿದ್ದರು. ಜಲೀಲ್ ನನಗೆ ಗಣೇಶ ಆನೆ ನೋಡಿಕೊಳ್ಳಲು ಸಾಧ್ಯವಿಲ್ಲ.ಆನೆಯನ್ನು ಬಿಡಾರದಿಂದ ಸ್ಥಳಾಂತರಿಸಿ ಎಂದು ಮೇಲಾಧಿಕಾರಿಗಳಿಗೆ ಮನವಿ ಪತ್ರ ಕೂಡ ಬರೆದಿದ್ದರು.

18 ವರ್ಷದಿಂದ ವನವಾಸ

ಗಣೇಶನನ್ನ ಬಿಡಾರದ ಸಿಬ್ಬಂದಿ ಸಕ್ರೆಬೈಲ್ ಬಿಡಾರಕ್ಕೆ ಕರೆತರುವುದಿಲ್ಲ. ಆತನಿಗೆ ಕಾಡೇ ವಾಸಸ್ಥಳ ಬಂಧನವೇ ಅವನ ನೆಲೆ.  ಸುಮಾರು 18 ವರ್ಷದಿಂದಲೂ ಕಾಡಲ್ಲೆ ಇರುವ ಇವನನ್ನು ಒಮ್ಮೆ ಬಿಡಾರಕ್ಕೆ ತರಲಾಗಿತ್ತು. ಸುಧಾರಿಸಿಕೊಳ್ತಾನೇನೋ ಎಂದುಕೊಳ್ಳುವಷ್ಟರಲ್ಲಿ ಮತ್ತೆ ದಾಳಿಕೋರನಾಗಿ ಬಿಟ್ಟಿದ್ದ. ಆನೆಗಳ ಮೇಲೆಯೇ ದಾಳಿ ಮಾಡುತ್ತಿದ್ದ ಇವನನ್ನ ಬೇರೆ ವಿಧಿಯಿಲ್ಲದೇ ಮತ್ತೆ ದರ್ಗಾದ ಸಮೀಪ ಕಟ್ಟಿಹಾಕಲಾಯ್ತು.ಅಂದಿನಿಂದ ಇವತ್ತಿಗೂ ಅಲ್ಲಿಯೇ ಇದ್ಧಾನೆ.  

ಗಲಾಟೆ ಗಣೇಶ, ಬೆಂಗಳೂರು ಗಣೇಶ , ಕಿರಿಕ್​ ಗಣೇಶ ಹೀಗೆ ಸಿಕ್ಕಸಿಕ್ಕ ಹೆಸರಿನಲ್ಲಿ ಕರೆಸಿಕೊಳ್ಳುವ ಈ ಆನೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕು ಆತ ರೌದ್ರವತೆ ಹೇಗಿದೆ ಎಂದು ನೋಡಬೇಕು ಎಂದರೆ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಡಿ, ಓದಿ! 

15 ವರ್ಷದಿಂದ ಕಾಡು ಬಿಟ್ಟು ಬರದ ರೌಡಿ ಗಣೇಶ ಮಧ್ಯಪ್ರದೇಶಕ್ಕೆ! 6 ಮಂದಿಯನ್ನು ಕೊಂದ ಸಕ್ರೆಬೈಲ್​ ಬಿಡಾರದ ಈ ಆನೆ ಎಷ್ಟೊಂದು ಉಗ್ರ ಸ್ವರೂಪಿ ಗೊತ್ತಾ?


ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು