ಹಾವೇರಿ ಎಫೆಕ್ಟ್​ ! ಮತ್ತೆ ನಡೆಯುತ್ತಾ ಬಿಎಸ್​​ವೈ ಕೆ.ಎಸ್​.ಈಶ್ವರಪ್ಪ ದಂಗಲ್? ಶಿವಮೊಗ್ಗ ಎಂಪಿ ಕ್ಷೇತ್ರದಲ್ಲಿ ಅಚ್ಚರಿ?! ಜೆಪಿ ಬರೆಯುತ್ತಾರೆ?

Haveri effect! BSY KS Eshwarappa dangal again? Shimoga MP constituency? Does JP write?

ಹಾವೇರಿ ಎಫೆಕ್ಟ್​ ! ಮತ್ತೆ ನಡೆಯುತ್ತಾ ಬಿಎಸ್​​ವೈ  ಕೆ.ಎಸ್​.ಈಶ್ವರಪ್ಪ ದಂಗಲ್? ಶಿವಮೊಗ್ಗ ಎಂಪಿ ಕ್ಷೇತ್ರದಲ್ಲಿ ಅಚ್ಚರಿ?!  ಜೆಪಿ ಬರೆಯುತ್ತಾರೆ?
BS Yediyurappa, Haveri Lok Sabha constituency, Shivamogga Lok Sabha constituency, KS Eshwarappa

Shivamogga Mar 10, 2024 ಚುನಾವಣಾ ರಾಜಕೀಯ ನಿವೃತ್ತಿ ತೆಗೆದುಕೊಳ್ಳಿ ಎಂದು ಪತ್ರ ಸಮೇತ ಸಂದೇಶ ಕಳುಹಿಸಿದ ಮೇಲೂ ಪಕ್ಷ ನಿಷ್ಠೆ ಮೆರೆದ ನಾಯಕ ತನ್ನ ಮಗನ ರಾಜಕೀಯ ಭವಿಷ್ಯಕ್ಕಾಗಿ ಇಷ್ಟೆಲ್ಲಾ ಕಸರತ್ತು ಗಳನ್ನು ಮಾಡಬೇಕಾ..ಕೆಎಸ್​ ಈಶ್ವರಪ್ಪ ನನ್ನ ಜೊತೆ ದೆಹಲಿಗೆ ಬರಲಿ ಎನ್ನುವ ಯಡಿಯೂರಪ್ಪ,,ನೇರವಾಗಿ ಪೋನಾಯಿಸಿ ಕರೆಯಬಾರದೇಕೆ? ಜೆಪಿ ಬರೆಯುತ್ತಾರೆ

ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ ಎರಡು ಪಿಲ್ಲರ್ ಗಳಿದ್ದರೆ ಅದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಎಂಬುದು ನಿರ್ವಿವಾದ. ಜೋಡೆತ್ತಿನಂತೆ ಪಕ್ಷವನ್ನು ರಾಜ್ಯಾದ್ಯಂತ ಸಂಘಟಿಸಿ, ಬಿಜೆಪಿ ಪಕ್ಷ ದಕ್ಷಿಣ ಭಾರತರದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ತಂದ ಕೀರ್ತಿ ಇಬ್ಬರಿಗೂ ಸಲ್ಲುತ್ತದೆ. ಆದರೆ ಬದಲಾದ ರಾಜಕೀಯ ಸನ್ನಿವೇಶಗಳಲ್ಲಿ ಜಾತಿ ಲೆಕ್ಕಚಾರವೇ ಮೇಲುಗೈ ಸಾಧಿಸಿದ ಸಂದರ್ಭದಲ್ಲಿ ಯಡಿಯೂರಪ್ಪ ರಾಜ್ಯದಲ್ಲಿ ಪ್ರಮುಖ ನಾಯಕನಾಗಿ ಹೊರಹೊಮ್ಮುತ್ತಾರೆ. 



ಈಶ್ವರಪ್ಪರವರು ಅಲ್ಲಿಯವರೆಗೂ ಬಿಜೆಪಿ ಪಕ್ಷವೇ ನನ್ನ ತಾಯಿ ಸಂಘ ಪರಿವಾರವೇ ನನಗೆ ದಾರಿ ದೀಪ ಅಂದುಕೊಂಡು ರಾಜಕೀಯ ಜೀವನ ಮುಂದುವರೆಸಿದರು. 2009 ರ ಲೋಕಸಭಾ ಚುನಾವಣೆಯಲ್ಲಿ ಸಾರೆಕೊಪ್ಪ ಬಂಗಾರಪ್ಪ ಎದುರು ಯಡಿಯೂರಪ್ಪ ಪುತ್ರ ಬಿ.ವೈ ರಾಘವೇಂದ್ರ ಸ್ಪರ್ಧಿಸಿದಾಗ ಶಿವಮೊಗ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆ ಲೀಡ್ ಸಿಗಲಿಲ್ಲ ಎಂಬ ಕಾರಣಕ್ಕೆ ಯಡಿಯೂರಪ್ಪ ಈಶ್ವರಪ್ಪರವರ ವಿರುದ್ಧ ಮುನಿಸಿಕೊಂಡಿದ್ದರು. ನನ್ನ ಕ್ಷೇತ್ರದಲ್ಲಿ ಹಣ ಹೆಂಡ ಹಂಚಲು ನಾನು ಅವಕಾಶ ನೀಡಲಿಲ್ಲ ಎಂದು ಈಶ್ವರಪ್ಪ ನೇರವಾಗಿ ಅಸಮಧಾನ ಹೊರಹಾಕಿದ್ರು.ಅಲ್ಲಿಂದ ಶುರುವಾದ ಮುನಿಸು ಬಹಳ ದಿನಗಳ ವರೆಗೆ ಸಾಗಿತು. ಇಬ್ಬರ ನಡುವಿನ ಮುನಿಸು ಏನೇ ಇದ್ದರೂ, ಅವರಿಬ್ಬರನ್ನು ಅದು ಒಂದು ಮಾಡಿದ್ದೇ ಹೆಚ್ಚು.

ಈಗ ಕೆ.ಎಸ್ ಈಶ್ವರಪ್ಪ ಮತ್ತೊಮ್ಮೆ ಮುನಿಸಿಕೊಂಡಿದ್ದಾರೆ. ತಮ್ಮ ಪುತ್ರ ಕೆ.ಇ. ಕಾಂತೇಶ್ ಗೆ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಟಿಕೇಟ್ ಸಿಗುವುದು ಅನುಮಾನ ಎಂದು ಗೊತ್ತಾಗುತ್ತಿದ್ದಂತೆ ಈಶ್ವರಪ್ಪ ಮೌನದ ಮೂಲಕ ಅಸಮಧಾನ ಹೊರಹಾಕಿದ್ದಾರೆ .ಕಾಂತೇಶ್ ಟಿಕೇಟ್ ಕೊಡಿಸುವ ಭರವಸೆ ನೀಡಿದ್ದ ಯಡಿಯೂರಪ್ಪ, ಈಗ ಹಾರಿಕೆ ಉತ್ತರ ನೀಡಿದ್ದಾರೆ. ಈಶ್ವರಪ್ಪ ನನ್ನ ಜೊತೆ ದೆಹಲಿಗೆ ಬರಲಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿಸಿ ಮಗನಿಗೆ ಟಿಕೆಟ್ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಮಾತು ಹಲವು ವ್ಯಾಖ್ಯಾನಳಿಗೆ ನಾಂದಿ ಹಾಡಿದೆ. ಈಶ್ವರಪ್ಪ ಮತ್ತು ಯಡಿಯೂರಪ್ಪ ನಡುವೆ ಎಲ್ಲವೂ ಸರಿ ಇಲ್ಲ ಎಂದು ಸಾರಿ ಹೇಳಿದೆ. ಮಾದ್ಯಮಗಳ ಮೂಲಕ ಯಡಿಯೂರಪ್ಪ ಈಶ್ವರಪ್ಪನವರಿಗೆ ಮನವಿ ಮಾಡುವುದಕ್ಕಿಂತ ನೇರವಾಗಿ ಫೋನಾಯಿಸಿ ಕರೆಯಬಹುದಿತ್ತಲ್ಲವೆ...ಅಥವಾ ಯಡಿಯೂರಪ್ಪ ಪೊನಾಯಿಸಿದ್ರೂ..ಈಶ್ವರಪ್ಪ ಅದಕ್ಕೆ ಸೊಪ್ಪು ಹಾಕಲಿಲ್ಲವೇ ಎಂಬುದು ಗೊತ್ತಿಲ್ಲ. ಆದರೆ ಯಡಿಯೂರಪ್ಪನವರ ಇಂದಿನ ಹೇಳಿಕೆ ಹಲವು ಸಂದೇಹಗಳಿಗೆ ಅನುವು ಮಾಡಿಕೊಟ್ಟಿದೆ.

ಕುಟುಂಬ ರಾಜಕಾರಣ ಈಶ್ವರಪ್ಪ ಕುಟುಂಬಕ್ಕೆ ಮಾತ್ರ ಸೀಮಿತವೇ 

ಕೆ.ಎಸ್. ಈಶ್ವರಪ್ಪನವರು ಪಕ್ಷದ ಆಂತರಿಕ ಸಂವಿಧಾನಕ್ಕೆ ತಲೆಭಾಗಿ ಚುನಾವಣಾ ರಾಜಕಾರಣದಿಂದ ನಿವೃತ್ತಿ ಪಡೆದರು. ಅದೇ ರೀತಿ ಬಿ.ಎಸ್.ಯಡಿಯೂರಪ್ಪನವರು ಚುನಾವಣಾ ರಾಜಕಾರಣದಿಂದ ಹಿಂದೆ ಸರಿದರು. ಇದಾದ ನಂತರ ಬಿಜೆಪಿ ಪಕ್ಷದಲ್ಲಿ ಯಡಿಯೂರಪ್ಪರಿಗೆ ಸಿಕ್ಕ ಸ್ಥಾನಮಾನ ಕೆ.ಎಸ್ ಈಶ್ವರಪ್ಪನವರಿಗೆ ಸಿಗಲಿಲ್ಲ. ಕೆ.ಎಸ್. ಈಶ್ವರಪ್ಪ ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ತಮ್ಮ ಬದಲಾಗಿ ಪುತ್ರ ಕೆ.ಇ ಕಾಂತೇಶ್ ಗೆ ಟಿಕೇಟ್ ಕೊಡಿಸಲು ಶತಪ್ರಯತ್ನ ನಡೆಸಿದ್ದರು. ಆದರೆ ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ ಎಂಬ ಕಾರಣದಿಂದಲೇ ಸೊಸೆಗೆ ಟಿಕೇಟ್ ನೀಡಲು ಮುಂದಾಗಿತ್ತು.  ಆದರೆ ಈಶ್ವರಪ್ಪ ಇದಕ್ಕೆ ಒಪ್ಪಲಿಲ್ಲ. ಇದೇ ಈಶ್ವರಪ್ಪ ಮಾಡಿದ ದೊಡ್ಡ ತಪ್ಪು ಎಂದೆನಿಸುತ್ತದೆ. ತಮ್ಮ ಸೊಸೆಗೆ ಟಿಕೆಟ್​  ಕೊಡಿಸಿ ಗೆಲ್ಲಿಸಿದ್ದರೆ. ಶಿವಮೊಗ್ಗ ಕ್ಷೇತ್ರವಾದ್ರೂ ಅವರ ಹಿಡಿತದಲ್ಲಿ ಇರುತ್ತಿತ್ತು. ಆದರೆ ಈಗ ನೆಚ್ಚಿನ ಶಿಷ್ಯ ಚನ್ನಬಸಪ್ಪ ಪಾಲಾಗಿದ್ದು, ಕುಟುಂಬದಿಂದ ಹಿಡಿತ ಕೈತಪ್ಪಿದೆ. 

ಇತ್ತ ಯಡಿಯೂರಪ್ಪ ಚುನಾವಣಾ ರಾಜಕಾರಣದಿಂದ ಹಿಂದೆ ಸರಿದರೂ, ಯಡಿಯೂರಪ್ಪ ತಮ್ಮ ಪುತ್ರರಿಬ್ಬರ ರಾಜಕೀಯ ಭವಿಷ್ಯಕ್ಕೆ ಭದ್ರ ಬುನಾದಿ ಕಟ್ಟಿದ್ದಾರೆ.  ಬಿ.ವೈ ವಿಜಯೇಂದ್ರಗೆ  ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಟಿಕೇಟ್ ಕೊಡಿಸಿ ಶಾಸಕರನ್ನಾಗಿ ಮಾಡಿದರು.ಅಲ್ಲದೆ ಬಿ.ವೈ ರಾಘವೇಂದ್ರಗೆ ಮತ್ತೊಮ್ಮೆ ಲೋಕಸಭಾ ಚುನಾವಣೆಯ ಟಿಕೇಟ್ ಅನ್ನು ನಿಕ್ಕಿ ಗೊಳಿಸಿದರು.

ಆದರೆ ಈಶ್ವರಪ್ಪ ತಮ್ಮ ಪುತ್ರನ ರಾಜಕೀಯ ಭವಿಷ್ಯಕ್ಕಾಗಿ  ಶಿವಮೊಗ್ಗ ಜಿಲ್ಲೆಯನ್ನೇ ತೊರೆಯಬೇಕಾಯಿತು.ಕುರುಬ ಸಮಾಜ ಹೆಚ್ಚಿರುವ ಪಕ್ಕದ ಹಾವೇರಿ ಗದಗ ಲೋಕಸಭಾ ಕ್ಷೇತ್ರದಿಂದ ಕಾಂತೇಶ್ ಸ್ಪರ್ದಿಸಿ ಗೆಲ್ಲಿಸುವ ವಿಶ್ವಾಸದಲ್ಲಿದ್ದರು. ಕಳೆದ ಒಂದು ವರ್ಷದಿಂದ ಕಾಂತೇಶ್ ಹಾವೇರಿ ಜಿಲ್ಲೆಯಾದ್ಯಂತ ಓಡಾಡಿ ಸಂಘಟನೆ ಮಾಡಿದ್ದರು. ಯಡಿಯೂರಪ್ಪನವರೂ ಕೂಡ ಕಾಂತೇಶ್ ಗೆ ಟಕೇಟ್ ಕೊಡಿಸುವ ಭರವಸೆ ನೀಡಿದ್ದರು.

ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಪಕ್ಷ ನಿಷ್ಠೆ ಮೆರೆದಿದ್ದ ಈಶ್ವರಪ್ಪ

ಈಶ್ವರಪ್ಪ ಮನಸ್ಸಿಲ್ಲದ ಮನಸ್ಸಿನಿಂದ ಚುನಾವಣಾ ರಾಜಕಾರಣದಿಂದ ದೂರ ಸರಿದರೂ, ಬಹಿರಂಗವಾಗಿ ತಮ್ಮ ಅಸಮಧಾನ ಹೊರಹಾಕಲಿಲ್ಲ. ಇತ್ತ ಜಗದೀಶ್ ಶೆಟ್ಟರ್ ಲಕ್ಷ್ಮಣ್ ಸವದಿಯಂತವರು ಪಕ್ಷ ತೊರೆದರೂ, ಈಶ್ವರಪ್ಪ ಮಾತ್ರ ಪಕ್ಷ ನನ್ನ ತಾಯಿ ಇದ್ದಂತೆ ಎಂದು ನಿಷ್ಠೆ ಮೆರೆದಿದ್ದರು. ಪಕ್ಷದ ತತ್ವಸಿದ್ದಾಂತಗಳನ್ನು ಸಮರ್ಥಿಸಿಕೊಳ್ಳುತ್ತ ಪ್ರಖರ ಹಿಂದುತ್ವ ವಾದಿಯಾಗಿಯೇ ಬಿಂಬಿತರಾದರು. 

ಸಿಎಂ ಸಿದ್ದರಾಮಯ್ಯ  ಡಿಕೆ ಶಿವಕುಮಾರ್ ವಿರುದ್ಧ ಪ್ರಖರವಾಗಿ ವಾಗ್ದಾಳಿ ಮಾಡುವಂತ ನಾಯಕರು ಬಿಜೆಪಿಯಲ್ಲಿ ಇಲ್ಲದ ಸಂದರ್ಭದಲ್ಲಿ ಈಶ್ವರಪ್ಪ ಅಸ್ತ್ರವಾಗಿದ್ದರು.. ಪಕ್ಷವನ್ನು ಸಮರ್ಥಿಸಿಕೊಳ್ಳುವಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಗಿಂತಲೂ ಈಶ್ವರಪ್ಪ ಒಂದು ಹೆಜ್ಜೆ ಮುಂದೆ ಇದ್ದವರು.ಆದರೆ ಇಂತಹ ರಾಜಕೀಯ ನಾಯಕನವನ್ನು ಪಕ್ಷದ ವರಿಷ್ಠರು ಸರಿಯಿಗ ನೋಡಿಕೊಳ್ಳಲಿಲ್ಲವೇನೋ ಎಂದೆನಿಸುತ್ತದೆ.

ಯಡಿಯೂರಪ್ಪ ಡಿ.ಹೆಚ್ ಶಂಕರಮೂರ್ತಿಯವರ ಕುಟುಂಬ ತಮ್ಮ ಮಕ್ಕಳ ರಾಜಕೀಯ ಭವಿಷ್ಯಕ್ಕೆ ಉತ್ತಮವಾಗಿಯೋ ಮುನ್ನುಡಿ ಬರೆದ್ರು. ಇಲ್ಲಿ ಎಲ್ಲೂ ಕುಟುಂಬ ರಾಜಕಾರಣ ಕಾಣಸಿಗಲಿಲ್ಲ. ಆದರೆ .ಕೆ.ಎಸ್ ಈಶ್ವರಪ್ಪನರಿಗೆ ಮಾತ್ರ ಕುಟುಂಬ ರಾಜಕಾರಣದ ಅಸ್ತ್ರ ಪ್ರಯೋಗಿಸಿ ರಾಜಕೀಯ ಭವಿಷ್ಯ ಕಮರುವಂತೆ ಮಾಡಿದ್ದು ಸರಿನಾ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.

ಕಾಂತೇಶ್ ಗೆ ಹಾವೇರಿ ಲೋಕಸಭಾ ಕ್ಷೇತ್ರ ಕೈ ತಪ್ಪುವ ಸಾಧ್ಯತೆಗಳು ಹೆಚ್ಚಿದ್ದು, ಶಿವಮೊಗ್ಗ ನೈರುತ್ಯ ಪದವಿಧರ ಕ್ಷೇತ್ರಕ್ಕೆ ತಯಾರಾಗುವಂತೆ ಪಕ್ಷದ ನಾಯಕರು ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ. ಆದರೆ ಇದಕ್ಕೆ ಈಶ್ವರಪ್ಪ ಒಪ್ಪಿಕೊಂಡಿಲ್ಲ ಎನ್ನಲಾಗಿದೆ. ಒಂದು ಪಕ್ಷ ಕಾಂತೇಶ್ ಗೆ ಟಕೇಟ್ ಕೈ ತಪ್ಪಿದರೆ ಈಶ್ವರಪ್ಪನವರ ಮುಂದಿನ ನಡೆ ಏನು ಎಂಬುದಕ್ಕೆ ಈಗ ಅವರ ಅಭಿಮಾನಿ ಬಳಗ ಉತ್ತರ ನೀಡಿದೆ. 

ಹಾವೇರಿಯಿಂದ ಬಂದ ಕುರುಬ ಸಮಾಜ ಹಾಗು ಕಾಂತೇಶ್ ಅಬಿಮಾನಿ ಬಳಗ ಕಾಂತೇಶ್ ಗೆ ಟಿಕೇಟ್ ಕೊಡಿಸುವಂತೆ ಯಡಿಯೂರಪ್ಪನವರಿಗೆ ಒತ್ತಡ ಹಾಕಿದೆ.ಯಡಿಯೂರಪ್ಪ ಟಿಕೇಟ್ ಕೊಡಿಸುವ ಭರವಸೆ ನೀಡಿದ್ದಾರೆ. ಒಂದು ವೇಳೆ ಹಾವೇರಿಗೆ ಕಾಂತೇಶ್ ಗೆ ಟಿಕೇಟ್ ಸಿಗದಿದ್ದರೆ. ಈಶ್ವರಪ್ಪನವರು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರರಾಗಿ ಸ್ಪರ್ಧಿಸುತ್ತಾರೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗೊಂದು ವೇಳೆ ಈಶ್ವರಪ್ಪ ಅಖಾಡಕ್ಕೆ ಇಳಿದಿದ್ದೇ ಆದಲ್ಲಿ ರಾಜಕೀಯ ಗಣಿತದ ಲೆಕ್ಕಚಾರವೇ ತಲೆಕೆಳಗಾಗುತ್ತದೆ. ಅದನ್ನು ಮುಂದಿನ ಭಾಗದಲ್ಲಿ ಓದಿ