ಮಾಟ ಮಂತ್ರ, ಕ್ರೈಂಗೆ ಶೆಲ್ಟರ್‌ ? ಮಾದಕ ವ್ಯಸನಿಗಳಿಗೆ ಹಾಟ್‌ ಸ್ಪಾಟ್‌? ಜುಗಾರಿ ಕ್ರಾಸ್‌ ಆಗ್ತಿದ್ಯಾ ಮಲೆನಾಡಿನ ಈ ಜಾಗ!? JP ಬರೆಯುತ್ತಾರೆ

Is this place in Malnad going to be a jugari cross!? JP writes

ಮಾಟ ಮಂತ್ರ,  ಕ್ರೈಂಗೆ ಶೆಲ್ಟರ್‌ ? ಮಾದಕ ವ್ಯಸನಿಗಳಿಗೆ ಹಾಟ್‌ ಸ್ಪಾಟ್‌? ಜುಗಾರಿ ಕ್ರಾಸ್‌ ಆಗ್ತಿದ್ಯಾ ಮಲೆನಾಡಿನ ಈ ಜಾಗ!? JP ಬರೆಯುತ್ತಾರೆ
jugari cross

Shivamogga  Apr 5, 2024  jugari cross ಕ್ರೈಂ ಜುಗಾರಿ ಕ್ರಾಸ್ ಆಗ್ತಿದೆಯಾ ಹಣಗೆರೆ ಕಟ್ಟೆ..? ಕಾನೂನು ಪಾಲನೆ ಇಲ್ಲದೆ ಲಾಡ್ಜ್ ಗಳು ಚಾಲನೆ ಆಗ್ತಿದೆಯಾ

 

ಭಾವೈಕ್ಯತೆಯ ಶ್ರದ್ಧಾ ಭಕ್ತಿಯ ಧಾರ್ಮಿಕ ಪುಣ್ಯಕ್ಷೇತ್ರವೆಂದು ರಾಜ್ಯದಲ್ಲಿ  ಹೆಗ್ಗಳಿಕೆ ಪಡೆದಿರುವ ತೀರ್ಥಹಳ್ಳಿ ತಾಲೂಕಿನ ಹಣಗೆರೆಕಟ್ಟೆ ಪುಣ್ಯಕ್ಷೇತ್ರದಲ್ಲಿ ಕಾನೂನು ಪಾಲನೆಗೆ ಅವಕಾಶವಿಲ್ಲದಂತಾಗಿದೆ. ತೀರ್ಥಹಳ್ಳಿ ತಾಲೂಕಿನ ಹಣಗೆರೆಕಟ್ಟೆ ಗ್ರಾಮದಲ್ಲಿ ಹಿಂದು ಮುಸ್ಲಿಂ ದೇವರು ಒಂದೆಡೆ ಐಕ್ಯವಾಗಿರುವ ಹಜರತ್-ಸೈಯದ್-ಸಾದತ್ ದರ್ಗಾ ಮತ್ತು ಚೌಡೇಶ್ವರಿ ಭೂತರಾಯನ ಗುಡಿ  ಧಾರ್ಮಿಕ ಕ್ಷೇತ್ರ ಪ್ರಾಣಿ ಬಲಿಗೆ ಹೆಚ್ಚಿನ ಪ್ರಸಿದ್ಧಿಯಾಗಿದೆ.ಮುಜುರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ದರ್ಗಾದಲ್ಲಿ ವಾರ್ಷಿಕ ಒಂದು ಕೋಟಿಗೂ ಅಧಿಕ ನಗದು ಕಾಣಿಕೆ ರೂಪದಲ್ಲಿ ಸಂದಾಯವಾಗುತ್ತದೆ.

 

ಈ ದೇವರ ಸನ್ನಿದಾನದಲ್ಲಿ ಹರಕೆ ಹೊತ್ತು ಮೊಳೆ ಹೊಡೆದರೆ,ಬೀಗ ಜಡಿದರೆ. ಇಷ್ಟಾರ್ಥಗಳು ನೆರವೇರುತ್ತವೆ. ಮಾಟ-ಮಂತ್ರ-ತಂತ್ರ ದೋಷಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಹೀಗಾಗಿಯೇ ಇಲ್ಲಿಗೆ ರಾಜ್ಯದ ಮೂಲೆ ಮೂಲೆಗಳಿಂದ ಪ್ರತಿ ಅಮವಾಸ್ಯೆ .ಹುಣ್ಣಿಮ ಅಲ್ಲದೆ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಹರಕೆ ಹೊತ್ತ ಭಕ್ತರು ಹರಕೆ ತೀರಿಸುವಾಗ ಕೋಳಿ ಕುರಿ ಬಲಿಕೊಡುವುದೇ ಇಲ್ಲಿನ ಮುಖ್ಯ ಸಂಪ್ರದಾಯವಾಗಿದೆ.

 

ಇಲ್ಲಿ ಕೋಳಿ ಕುರಿ ಬಲಿಗೆ ಪ್ರತ್ಯೇಕ ಜಾಗದ ವ್ಯವಸ್ಥೆಯನ್ನು ಮುಜುರಾಯಿ ಇಲಾಖೆ ಕಲ್ಪಿಸಿಲ್ಲ. ಹೀಗಾಗಿ ಶೆಟ್ಟಿಹಳ್ಳಿ ಅಭಯಾರಣ್ಯದ ಕಾಡಿನಲ್ಲಿಯೇ ಭಕ್ತರು ಕೋಳಿ ಕುರಿ ಬಲಿಕೊಡುತ್ತಾರೆ. ಇದರಿಂದಾಗಿ ಕೋಳಿಯ ರೆಕ್ಕೆ ಪುಕ್ಕಗಳೆಲ್ಲಾ ಕಾಡಿನಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದು ಗಬ್ಬು ನಾರುತ್ತವೆ.ರಕ್ತಬಲಿಯ ಕಮಟುವಾಸನೆ ಸ್ಥಳೀಯರನ್ನು ಹೈರಾಣಾಗಿಸಿದೆ. ಎಲ್ಲಂದರಲ್ಲಿ ಪ್ಲಾಸ್ಟಿಕ್ ಕವರ್ ಗಳು ಬಿದ್ದು ಗಬ್ಬು ನಾರುತ್ತಿವೆ. ಸ್ಥಳೀಯರು ಹಲವಾರು ಬಾರಿ ಸ್ವಚ್ಚ ಭಾರತ ಅಭಿಯಾನ ಅಡಿ ಸ್ವಚ್ಚತೆ ಮಾಡಿದರೂ..ಇಲ್ಲಿಗೆ ಬರುವ ಭಕ್ತರು ಮಾತ್ರ ಶುಚಿತ್ವ ಕಾಪಾಡುತ್ತಿಲ್ಲ.

 

ಇದರ ನಡುವೆ ಇಲ್ಲಿನ ಅವ್ಯವಸ್ಥೆಯ ಆರೋಪ ಇನ್ನಷ್ಟು ಗಂಭೀರ ಸ್ವರೂಪ ಪಡೆದುಕೊ‍ಳ್ಳುತ್ತವೆ. ಹಣಗೆರೆ ಕಟ್ಟೆಯಲ್ಲಿ ಕೆಲವೊಂದು ಲಾಡ್ಜ್‌ಗಳು ದಾಖಲಾತಿ ಇಲ್ಲದೆ ರೂಮ ಕೊಡುತ್ತವೆ. ಸಿಸಿ ಕ್ಯಾಮರಾಗಳು ಸೇರಿದಂತೆ ಸೆಫ್ಟಿ ಮೆಜರ್ಸ್‌ನ್ನ ಕೈಗೊಂಡಿಲ್ಲ. ಮಾದಕ ವಸ್ತುಗಳ ಸೇವನೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಆರೋಪಿಗಳ ರಕ್ಷಣೆಗೆ ಶೆಲ್ಟರ್‌ ನೀಡಲಾಗುತ್ತದೆ ಎಂಬಿತ್ಯಾದಿ ಆರೋಪಗಳು ಇಲ್ಲಿಯ ಸ್ಥಳೀಯರದ್ಧಾಗಿದೆ. 

 

ಇದೆಲ್ಲಾ ಇಷ್ಟು ದಿನವಿಲ್ಲದ ಆರೋಪಗಳೇನಲ್ಲ! ಮಾಳೂರು ಪೊಲೀಸ್‌ ಸ್ಟೇಷನ್‌ ಲಿಮಿಟ್ಸ್‌ನಲ್ಲಿ ಬರುವ ಈ ಕ್ಷೇತ್ರದಲ್ಲಿ ಪೊಲೀಸ್‌ ಇಲಾಖೆ ಹೆಚ್ಚಿನ ನಿಗಾ ಇಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಹಿಂದಿನ ಅಧಿಕಾರಿ ನವೀನ್‌ ಮಠಪತಿ ಒಂದಷ್ಟು ಬಿಗಿ ಕ್ರಮಗಳನ್ನು ಕೈಗೊಂಡಿದ್ದರು. ಆಗಾಗ ನಡೆಯುತ್ತಿದ್ದ ರೇಡ್‌ ಅಕ್ರಮ ಚಟುವಟಿಕೆಗೆ ಭಯ ಹುಟ್ಟಿಸಿತ್ತು. ಆದಾಗ್ಯು ಕೆಲವರು ಗ್ರಾಮ ಪಂಚಾಯಿತಿಯ ಲೈಸೆನ್ಸ್‌ ಸಹ ಪಡೆಯದೇ ಇಲ್ಲಿ ಅಪರಾಧಿಕ ಚಟುವಟಿಕೆಗಳಿಗೆ ವೇದಿಕೆ ಒದಗಿಸ್ತಿದ್ದಾರೆ ಎಂದು ಹೇಳಲಾಗುತ್ತಿದೆ.

 

ಸದ್ಯ ಯುವತಿಯ ಕೊಲೆ ಪ್ರಕರಣದಲ್ಲಿ ಪರಿಶೀಲನೆ ನಡೆಸಿದ್ದ ಅಡಿಷನಲ್‌ ಎಸ್‌ಪಿ ಅನಿಲ್ ಕುಮಾರ್ ಬೂಮರೆಡ್ಡಿ ಸ್ಥಳೀಯ ಲಾಡ್ಜ್‌ ಮಾಲೀಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.ಕಾನೂನು ಪಾಲನೆ ಮಾಡದೇ ಹೋದರೆ ಎಂತಹ ಅಪರಾಧಕ್ಕೆ ಸಾಕ್ಷಿಯಾಗಬೇಕಾಗುತ್ತದೆ ಎಂಬುದಕ್ಕೆ ಯುವತಿಯ ಕೊಲೆಯೇ ಉದಾಹರಣೆಯಾಗಿದೆ ಎಂದು ಲಾಡ್ಜ್‌ ಮಾಲೀಕರಿಗೆ ತಿಳಿ ಹೇಳಿದ್ದಾರೆ. ಮೇಲಾಗಿ ಕಠಿಣ ಕ್ರಮದ ಎಚ್ಚರಿಕೆ ಕೊಟ್ಟು,  ಅಧಿಕಾರಿಗಳಿಗೆ ಕೆಲವು ಸೂಚನೆಗಳನ್ನ ನೀಡಿದ್ದಾರೆ. 

 

ಈ ಹಿಂದೆ ನಡೆದ ಪ್ರಮುಖ ಕ್ರೈಂ ಕೇಸ್ ಗಳು

ಇನ್ನೂ  ಪವಿತ್ರ ಕ್ಷೇತ್ರದ ಸುತ್ತಮುತ್ತ ಈ ಹಿಂದೆಯು ಕ್ರೈಂ ನಡೆದಿದೆ. ಹಣಗೆರೆ ಕಟ್ಟೆಗೆ ಪೂಜೆಗೆಂದು ಬಂದಿದ್ದ ಯುವತಿ ಲಾಡ್ಜ್ ಮಾಡಿಕೊಂಡಿದ್ದಳು. ಆಕೆಯನ್ನು ಗಮನಿಸಿದ ಯುವಕರ ತಂಡ ಅಪಹರಿಸಿ ಅತ್ಯಾಚಾರ ಎಸಗಿತ್ತು.  

 

ಹಣಗೆರೆ ಕಟ್ಟೆಯ ಕಾಡಿನಲ್ಲಿ ಮಾಟ ಮಂತ್ರ ತೆಗೆಯುತ್ತೇನೆಂದು ತಂತ್ರಿಯೊಬ್ಬ ಮಂಡಲದಲ್ಲಿ ಮಹಿಳೆಯನ್ನು ಬೆತ್ತಲೆಯಾಗಿ ನಿಲ್ಲಿಸಿದ್ದ. ಈ ಸುದ್ದಿ ರಾಜ್ಯಾದ್ಯಂತ ಸದ್ದು ಮಾಡಿತ್ತು. ಅಲ್ಲದೆ ಒಂದು ಘಟನೆಯಲ್ಲಿ ಯುವತಿಯರು ಗಾಂಜಾ ನಶೆಯಲ್ಲಿ ರಸ್ತೆಯಲ್ಲಿ ಅರೆನಗ್ನಾವಸ್ಥೆಯಲ್ಲಿ ಓಡಾಡಿದ್ದು ಸ್ಥಳೀಯರನ್ನು ಕೆರಳಿಸಿತ್ತು. ಇನ್ನೂ ಶಿವಮೊಗ್ಗದಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಗಳು ಇಲ್ಲಿಯೇ ಅನಧಿಕೃತವಾಗಿ ಶೆಲ್ಟರ್‌ ಪಡೆದಿದ್ರು ಎಂಬ ಆರೋಪ ಕೇಳಿಬಂದಿತ್ತು. 

 

ಹೀಗೆ ಒಂದಲ್ಲ ಒಂದು ಅಪರಾಧಿಕ ಚಟುವಟಿಕೆಗಳು ಧಾರ್ಮಿಕ ಕ್ಷೇತ್ರದ ಖ್ಯಾತಿಗೆ ಚ್ಯುತಿ ತರುತ್ತಿದೆ. ವ್ಯವಸ್ಥೆಯ ಅಡಿಗೋಲಿನಲ್ಲಿ ಕಾನೂನು ಸುವ್ಯವಸ್ಥೆಯನ್ನು ಜಾರಿಗೊಳಿಸುವ ಹೊಣೆಗಾರಿಕೆ ಪೊಲೀಸರದ್ದಾಗಿದೆ. ಇನ್ನೂ ಸಾವಿರಾರು ಮಂದಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬದುಕು ಕಲ್ಪಿಸಿಕೊಟ್ಟಿರುವ ಹಣಗೆರೆ ಕಟ್ಟೆ ಮಲೆನಾಡಿನ ಜುಗಾರಿಕ್ರಾಸ್‌ ಆಗುವುದನ್ನ ತಪ್ಪಿಸಬೇಕಿದೆ. ಈ ನಿಟ್ಟಿನಲ್ಲಿ ಸ್ಥಳೀಯರು ಪೊಲೀಸರ ಜೊತೆಗೆ ಕೈ ಜೋಡಿಸುತ್ತಿದ್ದಾರೆ ಎಂಬುದೇ ಸಮಾಧಾನದ ಸಂಗತಿ