ತೀರ್ಥಹಳ್ಳಿಯಲ್ಲಿ ಮೈ ಆಳು ಸ್ಕ್ಯಾಂ! ಪ್ರಕರಣ ದಾಖಲೇ ಆಗದೇ ಅಂತ್ಯವಾಗಿದ್ದೇಗೆ? ಏಕೆ? ಅಂದರ್ ಕೀ ಬಾತ್

Why did the case of unpaid labour in Thirthahalli end unreported? Why? Andar Ki Baat

ತೀರ್ಥಹಳ್ಳಿಯಲ್ಲಿ ಮೈ ಆಳು ಸ್ಕ್ಯಾಂ! ಪ್ರಕರಣ ದಾಖಲೇ ಆಗದೇ ಅಂತ್ಯವಾಗಿದ್ದೇಗೆ? ಏಕೆ? ಅಂದರ್ ಕೀ ಬಾತ್
Why did the case of unpaid labour in Thirthahalli end unreported?

SHIVAMOGGA  |  Jan 17, 2024  | ತೀರ್ಥಹಳ್ಳಿ ತಾಲ್ಲೂಕು  ಗುತ್ತಿ ಯಡೆಹಳ್ಳಿ ಜೀತ ಪ್ರಕರಣ ಪ್ರಬಾವಿಗಳ ಮುಂದೆ ನಲುಗಿದ್ದೇಗೆ.? .ಅನಾಥ ಕೂಲಿಕಾರ್ಮಿಕರು ದೂರು ನೀಡಲಿಲ್ಲ ಎಂಬ ಕಾರಣಕ್ಕೆ ನಾಗರೀಕ ಸಮಾಜ ತಲೆ ತಗ್ಗಿಸಬೇಕಾದ ಪ್ರಕರಣ ಸುಖ್ಯಾಂತ ಕಂಡಿದ್ದೇಗೆ ಜೆಪಿ ಬರೆಯುತ್ತಾರೆ

ತೀರ್ಥಹಳ್ಳಿಯಲ್ಲಿ ಕೆಜಿಎಫ್ ಸ್ಟೈಲ್​ ನರಾಚಿ

ಮಲೆನಾಡಿನ ಶ್ರೀಮಂತರ ತೋಟಗಳಲ್ಲಿ ಕೆಲಸ ಮಾಡುತ್ತಿದ್ದ ಕೂಲಿಕಾರ್ಮಿಕರ ಶೋಚನೀಯ ಬದುಕಿನ ಮೇಲೆ ಮಾಧ್ಯಮಗಳು ಬೆಳಕು ಚೆಲ್ಲುವ ಪ್ರಾಮಾಣಿಕ ಪ್ರಯತ್ನ ನಡೆಸಿದ್ದವು. ನೆಲೆ ಇಲ್ಲದೆ ಬಸ್ ನಿಲ್ದಾಣಗಳಲ್ಲಿ ಮಲಗುವವರು ಕೂಲಿನಾಲಿ ಅರಸಿ ನಿಲ್ದಾಣಗಳಲ್ಲಿ ಆಶ್ರಯ ಪಡೆಯುವ ಕೂಲಿ ಕಾರ್ಮಿಕರನ್ನೇ ಟ್ರಂಪ್ ಕಾರ್ಡ್ ಮಾಡಿಕೊಂಡು ಅವರಿಗೆ ಕೆಲಸದ ಆಮೀಷ ತೋರಿಸಿ, ನಂತರ ತೋಟಗಳಲ್ಲಿ ಜೀತದಾಳುಗಳಂತೆ ನಡೆಸಿಕೊಳ್ಳುತ್ತಿದ್ಧ ಜಾಲವನ್ನು ಮಾಳೂರು ಪೊಲೀಸ್​ ಸ್ಟೇಷನ್​ ಪೊಲೀಸರು  ಭೇದಿಸಿದ್ರು.

ಈ ಬಗ್ಗೆ ಎಕ್ಸ್​ಕ್ಲ್ಯೂಸಿವ್ ಮಲೆನಾಡು ಟುಡೆ ಮಾಡಿದ್ದ ವರದಿ ತೀರ್ಥಹಳ್ಳಿಯಲ್ಲಿ KGF ಸ್ಟೈಲ್​ನ ನರಾಚಿ! OC ನಲ್ಲೇ ಜೀತ! ಧರ್ಮದೇಟಿನ ಕೂಲಿ! 1-2 ಕ್ಕೂ ಸಂಕಷ್ಟ! JP BIG EXClUSiVE

ನಾಚಿಕೆಗೇಡಿನ ಸಂಗತಿ

ಬಸ್ ನಿಲ್ದಾಣಗಳಲ್ಲಿ ಮಲಗಿದ್ದವರನ್ನು  ಕಿಡ್ನಾಪ್ ಮಾಡಿಕೊಂಡು ತೋಟದ ಮನೆಗಳಲ್ಲಿ ದುಡಿಸಿಕೊಳ್ಳುತ್ತಿದ್ದ ಮದ್ಯವರ್ತಿಗಳು ಶ್ರೀಮಂತ ರೈತರ ಪಾಲಿಗೆ ವರದಾನವಾಗಿದ್ದರು. ಕೂಲಿಕಾರ್ಮಿಕರಿಗೆ ಊಟ ಮತ್ತು ಚೀಪರ್ ಮದ್ಯವನ್ನು ನೀಡಿ,ದಿನಕ್ಕೆ  12 ಗಂಟೆಗೂ ಹೆಚ್ಚು ಕಾಲ ತೋಟಗಳಲ್ಲಿ ಮೃಗಗಳಂತೆ ಕೆಲಸ ಮಾಡಿಸುತ್ತಿದ್ದರು.

ಕೂಲಿ ಕೇಳುವ ಕಾರ್ಮಿಕರಿಗೆ ಗುತ್ತಿಗೆದಾರರು ತಿಂಗಳಿಗೆ 500 ಇಲ್ಲವೇ ಸಾವಿರ ಕೊಡುತ್ತಿದ್ದರು. ಇಲ್ಲವೇ ಕಾರ್ಮಿಕರನ್ನು ಹಿಂಸಿಸಿ ಥಳಿಸುತ್ತಿದ್ದರು. ಇಂತಹ ನರಕಯಾತನೆಯಿಂದ ತಪ್ಪಿಸಿಕೊಂಡು ಬಂದಿದ್ದ ಕಾರ್ಮಿಕನೊಬ್ಬ ಮಾಳೂರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದ.  

ಕಾರ್ಮಿಕನೊಬ್ಬರ ಪೊಲೀಸರ ರಕ್ಷಣೆ ಕೋರಿದ ಬೆನ್ನಲ್ಲೆ  ಪೊಲೀಸರು  ಗುತ್ತಿಗೆದಾರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆನಂತರ  ಕಾರ್ಮಿಕರು ತಂಗಿದ್ದ  ಗುತ್ತಿ ಯಡೆಹಳ್ಳಿ ಗ್ರಾಮದ ಟೆಂಟ್ ಹೌಸ್ ಗಳಲ್ಲಿ ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳು ಹಾಗು ಕಾರ್ಮಿಕ ಅಧಿಕಾರಿಗಳು ಜಮಾಯಿಸಿ ವಿಚಾರಣೆ ನಡೆಸಿದ್ದರು. ಈ ವೇಳೆ 

ಹತ್ತೊಂಬತ್ತು ಕೂಲಿ ಕಾರ್ಮಿಕರು ಟೆಂಟ್ ಹೌಸ್ ನಲ್ಲಿದ್ದರು.ಕೂಲಿಕಾರ್ಮಿಕರ ಪರ ತಕ್ಷಣದ ಕ್ರಮಕ್ಕೆ ಮುಂದಾದ ಅಧಿಕಾರಿಳ ನಡೆಯಿಂದ ಪ್ರಕರಣಕ್ಕೆ ನ್ಯಾಯ ಸಿಗುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ವಿಚಾರ ಬೇರೆಯದ್ದಾಯ್ತು

ಕಾರ್ಮಿಕರ ನೋವು ಆಲಿಸಿದ ಅಧಿಕಾರಿಗಳು

ಸ್ಥಳದಲ್ಲಿ ಶಿವಮೊಗ್ಗ ಉಪ ವಿಭಾಗಾಧಿಕಾರಿ ಸತ್ಯನಾರಾಯಣ, ಡಿ.ವೈ ಎಸ್ಪಿ ಗಜಾನನ ವಾಮನ ಸುತಾರ ಸೇರಿದಂತೆ ಕಾರ್ಮಿಕ ಅಧಿಕಾರಿ, ತಹಸಿಲ್ದಾರ್ ಪಿಡಿಓ ಸೇರಿದಂತೆ ಐವತ್ತಕ್ಕೂ ಹೆಚ್ಚು ಸಿಬ್ಬಂದಿಗಳು ಸ್ಥಳದಲ್ಲಿದ್ದರು. 19 ಕೂಲಿ ಕಾರ್ಮಿಕರಿಗೆ ಅಧಿಕಾರಿಗಳು ಊಟದ ವ್ಯವಸ್ಥೆ ಮಾಡಿದ್ದರು.

ಹಣ ಕೊಡಿಸಿದರೇ ಸಾಕು

ಹತ್ತೊಂಬತ್ತು ಕಾರ್ಮಿಕರನ್ನು ನೋಡಿದಾಗ ಎಂತವರ ಕರುಳು ಚುರ್ ಎನ್ನುವಂತೆ ಮಾಡಿತ್ತು. ಇತ್ತ ಪತ್ರಕರ್ತರು ಘಟನಾ ಸ್ಥಳಕ್ಕೆ ಹೋಗುತ್ತಿದ್ದಂತೆ ಚಿತ್ರಣ ಕೊಂಚ ಬದಲಾಯಿತು. ಪತ್ರಕರ್ತರು ಸರ್.. ,ಇವರನ್ನೆಲ್ಲಾ ಜೀತದಾಳುಗಳ ರೀತಿ ಗುತ್ತಿಗೆದಾರ ವಡೆಸಿಕೊಂಡಿದ್ದಾನಾ ಎಂದು ಕೇಳಿದಾಗ ಉಪ ವಿಬಾಗಾಧಿಕಾರಿ ಸತ್ಯನಾರಾಯಣರವರು, ಇವರಿಗೆ ಗುತ್ತಿಗೆದಾರ, ಊಟ ಮದ್ಯವನ್ನು ನೀಡುತ್ತಿದ್ದ. ಆದರೆ ಹಣವನ್ನು ನೀಡುತ್ತಿರಲಿಲ್ಲವಂತೆ..ಇವರುಗಳು ನಮ್ಮ ಹಣ ನಮಗೆ ವಾಪಸ್ಸು ಕೊಡಿಸಿದರೆ ಸಾಕು, ನಾವು  ನಮ್ಮ ಊರುಗಳಿಗೆ ಹೋಗುತ್ತೇವೆ ಎನ್ನುತ್ತಿದ್ದಾರೆ ವಿನಃ ಯಾರು ಗುತ್ತಿಗೆದಾರನ ವಿರುದ್ಧ ದೂರು ನೀಡಲು ಮುಂದಾಗುತ್ತಿಲ್ಲ. ಸುಮೋಟೋ ಕೇಸ್ ಹಾಕಲು ನನಗೆ ಅಧಿಕಾರಲವಿಲ್ಲ ಎಂದು ಹೇಳಿದ್ರು.

ಕಾರ್ಮಿಕ ಅಧಿಕಾರಿಯನ್ನು ಮಾತನಾಡಿಸಿದಾಗ ಅವರು ಕೂಡ ದೂರು ನೀಡಿದ್ರೆ, ಅದರಂತೆ ಕೇಸ್ ಹಾಕುತ್ತೇವೆ ಎಂದು ಹೇಳಿದ್ರು. ಇತ್ತ ಪತ್ರಕರ್ತರು ಕೂಲಿಕಾರ್ಮಿಕರನ್ನು ಮಾತನಾಡಿಸಿದಾಗ, ಅವರು ಗುತ್ತಿಗೆದಾರ ಅಮಾನುಷವಾಗಿ ನಡೆಸಿಕೊಳ್ಳುತ್ತಿದ್ದರ ಬಗ್ಗೆ ವಿವರಿಸಿದರು. ಘಟನಾ ಸ್ಥಳದಲ್ಲಿದ್ದ ಅಧಿಕಾರಿಗಳು ಕಾರ್ಮಿಕರ ಹೇಳಿಕೆಗಳನ್ನೆಲ್ಲಾ ಕೇಳಿಸಿಕೊಂಡಿದ್ದಾರೆ. ಅಧಿಕಾರಿಗಳ ಮುಂದೆ ಅಳಲು ತೋಡಿಕೊಳ್ಳಲಾಗದ ಕಾರ್ಮಿಕರು ಮಾದ್ಯಮಗಳ ಮುಂದೆ ಎಲ್ಲಾ ಸತ್ಯವನ್ನು ಬಹಿರಂಗ ಪಡಿಸಿದ್ರು. ಇವರುಗಳ ಹೇಳಿಕೆ ಅಧಿಕಾರಿಗಳನ್ನು ಮಚ್ಚೆ ಪೇಚಿಗೆ ಸಿಲುಕಿಸಿತು.

ದೂರು ಕೊಡಿ ದೂರು ಕೊಡಿ

ಹತ್ತೊಂಬತ್ತು ಕಾರ್ಮಿಕರನ್ನು ಕರೆದ ಅಧಿಕಾರಿಗಳು ನೋಡ್ರಪ್ಪ..,ನಿಮ್ಮಲ್ಲಿ ಯಾರಾದ್ರೂ ಒಬ್ಬರು, ಗುತ್ತಿಗೆದಾರನ ವಿರುದ್ಧ ದೂರು ನೀಡಿದ್ರೆ..ನಾವು ಮುಲಾಜಿಲ್ಲದೆ ಕೇಸು ಹಾಕುತ್ತೇವೆ ಎಂದು ಹೇಳಿದ್ರು..ಆಗ ಕೂಲಿ ಕಾರ್ಮಿಕರು, ಸಾರ್.., ನಾವು ಬಸ್ ನಿಲ್ದಾಣಗಳಲ್ಲಿ ಮಲಗುವವರು, ನಮಗೆ ಯಾರು ದಿಕ್ಕಿಲ್ಲ..ನಾವು ಕೇಸ್ ಕೊಟ್ಟು..ಎಲ್ಲಲ್ಲಿ ಅಂತಾ ಓಡಾಡೋದಕ್ಕೆ ಆಗುತ್ತೆ..ನಮ್ಮಂತವರಿಗೆ ಅದೆಲ್ಲಾ ಆಗೋ ಮಾತಲ್ಲ ಬಿಡಿ..ಗುತ್ತಿಗೆದಾರ ನಮಗೆ ಕೊಡಬೇಕಾದ ಹಣವನ್ನು ಕೊಡಿಸಿ ಸಾಕು ಎಂದು ಒಕ್ಕೊಲರಿನಿಂದ ತಮ್ಮ ಅಸಹಾಯಕತೆಯನ್ನು ತೋಡಿಕೊಂಡ್ರು. 

ದೈರ್ಯ ಸಾಲಲಿಲ್ಲ

ಇತ್ತ ಪತ್ರಕರ್ತರು ಎನ್ರಪ್ಪ..ಇಷ್ಟೊತ್ತು ಟಿವಿಗಳ ಮಂದೆ ಗುತ್ತಿಗೆದಾರ ಹಾಂಗ್ ಮಾಡ್ತಾನೆ ಹಿಂಗ್ ಮಾಡ್ತಾನೆ ಅಂತಾ ಪುಂಗಿ ಬಿಟ್ಟು..ಈಗ...ದೂರು ಕೊಡಲ್ಲ ಅಂತಿರಲ್ಲಾ ..ನಿಮ್ಮ ಪರವಾಗಿ ನಾವು ನಿಲ್ತಿವಿ ಅಂದ್ರೂ ಆ ಕಾರ್ಮಿಕರಿಗೆ ಧೈರ್ಯ ಸಾಕಾಗಲಿಲ್ಲ.

ಕೊನೆಗೆ ಅಧಿಕಾರಿಗಳು ಕೂಲಿಯಾಳುಗಳು ದೂರು ನೀಡಿದ್ರೆ ಮಾತ್ರ ಕೇಸ್ ದಾಖಲು ಅನ್ನೋ ವಾದಕ್ಕೆ ಸ್ಟಿಕ್ ಅನ್ ಆಗಿದ್ರಿಂದ..ಎಲ್ಲಾ ಕಾರ್ಮಿಕರನ್ನ ಮಾಳೂರು ಠಾಣೆಗೆ ಕರೆದುಕೊಂಡು ಹೋದ್ರು. ಅಲ್ಲಿ  ಅವರಿಂದ ಹೇಳಿಕೆ ಬರೆಸಿಕೊಂಡು, ಗುತ್ತಿಗೆದಾರನಿಂದ ಬರಬೇಕಾದ ಹಣ ವಾಪಸ್ಸು ಕೊಡಿಸಿದ್ರು..ಇಲ್ಲಿ ಗುತ್ತಿಗೆದಾರರ ಪರ ಪ್ರಭಾವಿಗಳು ಕೆಲಸ ಮಾಡಿರುವುದು ಗುಟ್ಟಾಗಿ ಉಳಿದಿಲ್ಲ.

ಕಾಡುವ ಪ್ರಶ್ನೆ

ಒಬ್ರೂ ದೂರು ನೀಡಿದ್ರೂ,ಕೇಸ್ ಹಾಕ್ತಿವಿ ಅಂತಾ ಪೊಲೀಸ್ರು ಹೇಳಿದ್ರಲ್ಲಾ..ಹಾಗಾದ್ರೆ. ಹಿಂದಿನ ರಾತ್ರಿ ಗುತ್ತಿಗೆದಾರನಿಂದ ತಪ್ಪಿಸಿಕೊಂಡು ಬಂದು ದೂರು ನೀಡಿದ ಕೂಲಿ ಕಾರ್ಮಿಕ ಎಲ್ಲಿ ಹೋದ ಆತನ ದೂರನ್ನೇ ಆಧಾರವಾಗಿಟ್ಟುಕೊಂಡು ಕೇಸ್ ಗೆ ಜೀವ ನೀಡಬಹುದಿತ್ತಲ್ಲವಾ? ಎಂಬು ಪ್ರಶ್ನೆ ಎಲ್ಲರನ್ನು ಕಾಡಿದ್ದಂತೂ ಸುಳ್ಳಲ್ಲ.  

ಕಾರ್ಮಿಕ ಇಲಾಖೆ

ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸುಮೋಟೋ ಕೇಸ್ ಹಾಕಲು ಕಾನೂನಿನಲ್ಲಿ ಅವಕಾಶ ಇಲ್ಲವೇ..ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮ ಪಂಚಾಯಿತಿಯಿಂದ ವರದಿ ತರಿಸಿಕೊಂಡು ಸುಮೋಟೋ ಕೇಸ್ ಹಾಕಬಹುದಿತ್ತಲ್ಲವೇ...ಮೂರು ಇಲಾಖೆಗಳು ಕೇವಲ ದೂರು ಇಲ್ಲ ಎಂಬ ಕಾರಣಕ್ಕೆ ಖಡಕ್ ಕಲಂಗಳ ಅಡಿಯಲ್ಲಿ ಕೇಸ್ ಆಗಬೇಕಿದ್ದ ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದರ ಹಿಂದೆ ಪ್ರಭಾವಿಗಳು ಕೆಲಸ ಮಾಡಿದ್ದಾರೆ ಎಂಬುದು ಮಾತ್ರ ಸೂರ್ಯ ಚಂದ್ರರಷ್ಟೆ ಸತ್ಯ

ಮಲೆನಾಡಿನಲ್ಲಿ ಕೂಲಿಯಾಳಗಳ ಮಾಫೀಯ ರಾಕೇಟ್ 

ಮಲೆನಾಡಿನಲ್ಲಿ ಕೂಲಿಯಾಳಗಳ ಮಾಫೀಯ ರಾಕೇಟ್ ಜಾಲದಂತೆ ಬೆಳೆದಿದೆ. ತೋಟದ ಮಾಲೀಕರುಗಳಿಗೆ ಕೂಲಿ ಕಾರ್ಮಿಕರು ಬೇಕು. ಅವರು ಎಲ್ಲಂದ ಬರ್ತಾರೆ..ಹೇಗೆ ಬರ್ತಾರೆ ಎಂಬುದು ಅವರಿಗೆ ಅವಶ್ಯಕತೆಯಿಲ್ಲಯ ತೋಟದ ಕೆಲಸವಾದ್ರೆ ಸಾಕು..ಇಂತಹ ಪ್ರಭಾವಿಗಳಲ್ಲಿ ಕೆಲವರು ಗುತ್ತಿಗೆದಾರರ ಪರ ನಿಲ್ಲುವುದು ಕೂಡ ಸಹಜ. 

ರಾಜಕೀಯ ಪ್ರಭಾವ ತೆರೆಮರೆಯಲ್ಲಿ ಇಲ್ಲಿ ಕೆಲಸ ಮಾಡಿದೆ. ಗುತ್ತಿಗೆ ಯಡೆಹಳ್ಳಿ ಜೀತ ಪ್ರರಕರಣ ಸದ್ದು ಮಾಡುತ್ತಿದ್ದಂತೆ ಉಳಿದ ಗುತ್ತಿಗೆದಾರರು ತಮ್ಮ ಕೂಲಿಯಾಳುಗಳನ್ನು ಉಳ್ಳವರ ತೋಟಗಳಲ್ಲಿ ಮೂರು ನಾಲ್ಕು ಮಂದಿಯಂತೆ ವರ್ಗಾಯಿಸಿದ್ದಾರೆ ಎಂಬ ಮಾಹಿತಿ ಮಲೆನಾಡು ಟುಡೆಗೆ ಲಭ್ಯವಾಗಿದೆ.

ಗುತ್ತಿ ಯಡೆಹಳ್ಳಿ ಪ್ರಕರಣದಲ್ಲಿ ಜಿಲ್ಲಾಧಿಕಾರಿಳು ಮಧ್ಯ ಪ್ರವೇಶ ಮಾಡಬೇಕಿದೆ. ಈ ಪ್ರಕರಣವನ್ನು ಇತ್ಯರ್ಥದಲ್ಲಿ ಅಂತ್ಯಗೊಳಿಸಿದರೆ, ನೊಂದವರಿಗೆ ನ್ಯಾಯ ಎಂಬ ಸರ್ಕಾರಿ ಪದಕ್ಕೆ ಅರ್ಥವೇ ಇಲ್ಲದಂತಾಗುತ್ತದೆ.