Puneeth Rajkumar ಸಕ್ರೆಬೈಲ್​ನಲ್ಲಿ ಅರಳಿದ ಬೆಟ್ಟದ ಹೂವು! ಅಪ್ಪು ಅಪ್ಪಿದ್ದ ಗಜ ರಾಜಕುಮಾರನಿಗೆ ಪುನೀತ್​ ಹೆಸರು!

The elephant at Sakrebail elephant camp is named after Puneeth Rajkumar

Puneeth Rajkumar ಸಕ್ರೆಬೈಲ್​ನಲ್ಲಿ ಅರಳಿದ ಬೆಟ್ಟದ ಹೂವು! ಅಪ್ಪು ಅಪ್ಪಿದ್ದ ಗಜ ರಾಜಕುಮಾರನಿಗೆ ಪುನೀತ್​ ಹೆಸರು!
Puneeth Rajkumar

 Puneeth Rajkumar  ಸಕ್ರೆಬೈಲ್​ನಲ್ಲಿ ಅರಳಿದ ಬೆಟ್ಟದ ಹೂವು! ಅಪ್ಪು ಅಪ್ಪಿದ್ದ ಗಜ ರಾಜಕುಮಾರನಿಗೆ ಪುನೀತ್​ ಹೆಸರು! ಇದು ಯಾರಿಗೂ ಸಿಗದ ಗೌರವ! ಏನಿದು? ಇಷ್ಟಕ್ಕೂ ಮರಿಯಾನೆಯ ನಾಮಕರಣದಲ್ಲಿ ಸೀಕ್ರೆಟ್​ ಸಂಗತಿಗಳೇನು ಗೊತ್ತಾ? ತಪ್ಪದೆ ಓದಿ!

ಸಾಮಾನ್ಯವಾಗಿ ಸಕ್ರೆಬೈಲ್ ಆನೆ ಬಿಡಾರದಲ್ಲಿ ಹುಟ್ಟುವ ಮರಿಗಳಿಗೆ ನೆಚ್ಚಿನ ಅರಣ್ಯಾಧಿಕಾರಿಗಳ ಅಥವಾ ನೆಚ್ಚಿನ ದೇವರ ಹೆಸರನ್ನೋ ಇಡುವುದು ವಾಡಿಕೆ. ಹೀಗೆ ಇಟ್ಟ ಹೆಸರುಗಳು ಕೆಲವೊಮ್ಮೆ ರುದ್ರ ಭಯಂಕರ ಎಂಬಂತೆ ಕಾಡುತ್ತವೆ. ಮತ್ತೆ ಕೆಲವೂ ಸೌಮ್ಯ ರಮಣೀಯ ಎಂಬಂತೆ ಖುಷಿ ಕೊಡುತ್ತವೆ.

ಅದರಲ್ಲೂ ತನ್ನ ಹೆಸರನ್ನು ಕೂಗಿದ ತಕ್ಷಣ ತಿರುಗಿ ನೋಡುವ ಆನೆಗಳ ಗುಣ ಸ್ವಭಾವಕ್ಕೆ ಎಂತಹವರಾದರೂ ಮರುಳಾಗದೇ ಇರದು. ಇಂತಹ ಸಂಬ್ರಮದಲ್ಲಿ ಪ್ರೀತಿಯಿಂದ ಅಪ್ಪು ಎಂದು ಪುನೀತ್​ ಎಂದು ಇನ್ಮುಂದೆ ಸಕ್ರೆಬೈಲ್​ ಬಿಡಾರದಲ್ಲಿ ಆನೆಯೊಂದನ್ನ ಜನರು ಕೂಗಿ ಕರೆಯಬಹುದು.

ಗಜ ರಾಜಕುಮಾರನಿಗೆ ಪವರ್ ಸ್ಟಾರ್​ ಹೆಸರು

ನೆಚ್ಚಿನ ನಟನ ಹೆಸರನ್ನ ಪದೇ ಪದೇ ಕೂಗಿ, ಅಪ್ಪುವನ್ನ ಮರಿಯಾನೆ ಸ್ವರೂಪದಲ್ಲಿ ನೋಡಿ, ಪವರ್ ಸ್ಟಾರ್​ ಇನ್ನೂ ನಮ್ಮೊಂದಿಗೆ ಇದ್ದಾರೆ ಎಂದು ಸ್ಮರಿಸಬಹುದು. ಮರಿಯಾನೆಯೊಂದಿಗೆ ಕಾಲ ಕಳೆಯುತ್ತಾ ಪವರ್ ಸ್ಟಾರ್ ಜೊತೆಗೆ ಕಾಲ ಕಳೆವ ಅನುಭವ ಪಡೆಯಬಹುದು.

ಏಕೆಂದರೆ, ಸಕ್ರೆಬೈಲ್ ಆಡಳಿತ ವ್ಯವಸ್ಥೆ ತನ್ನಲ್ಲಿನ ಗಂಡು ಮರಿಯೊಂದಕ್ಕೆ ಪುನೀತ್ ಎಂದು ಹೆಸರಿಡಲು ತೀರ್ಮಾನಿಸಿದೆ. ಇದಕ್ಕೆ ಕಾರಣ ಪುನೀತ್ ರಾಜಕುಮಾರ್,

ವನ್ಯಜೀವಿಗಳ ಮೇಲೆ ಪುನೀತ್​ಗೆ ಇದ್ದ ಅಪಾರ ಪ್ರೀತಿಗೆ ಗೌರವ ಸಲ್ಲಿಸುವ ಕಾರಣಕ್ಕೆ ಸಮಗ್ರ ಒಮ್ಮತದ ಮೇಲೆ ಸಕ್ರೆಬೈಲ್​ನಲ್ಲಿ ಮರಿಯಾನೆಯೊಂದಕ್ಕೆ ಪುನೀತ್​ ರಾಜಕುಮಾರ್​ರವರ ಹೆಸರನ್ನ ಇಡಲು ತೀರ್ಮಾನಿಸಲಾಗಿದೆ.

ಇಲ್ಲಿ ಇನ್ನೊಂದು ಕಾರಣವೂ ಇದೆ. ಅಗಲಿಕೆಗೂ ಕೆಲವು ದಿನಗಳ ಹಿಂದೆ ಅಪ್ಪುರವರು ಸಕ್ರೆಬೈಲ್​ ಬಿಡಾರಕ್ಕೆ ಬಂದಿದ್ದರು. ಇದೇ ಮೊದಲ ಸಲ ಕ್ಯಾಂಪ್​ಗೆ ಬಂದಿದ್ದ ಅಪ್ಪು, ಅಲ್ಲಿದ್ದ ಮರಿಯಾನೆಯನ್ನು ಕಂಡು ಸಖತ್ ಖುಷಿಯಾಗಿ ಅದನ್ನ ಮುದ್ದಾಡಿದ್ದರು. ಇದೀಗ ಅದೇ ಮರಿಯಾನೆಗೆ ಪುನೀತ್ ಎಂದು ಹೆಸರಿಡಲಾಗುತ್ತಿದೆ.

ಸಕ್ರೆಬೈಲ್​ನಲ್ಲಿ ಅರಳಿದ ಬೆಟ್ಟದ ಹೂವು

ನಟ ಪುನೀತ್ ರಾಜ್ ಕುಮಾರ್ ವನ್ಯಜೀವಿಗಳ ಬಗ್ಗೆ ಕಾಡಿನ ಬಗ್ಗೆ ಅಪಾರವಾದ ಪ್ರೀತಿ ಕಾಳಜಿಯನ್ನು ಹೊಂದಿದ್ದರು. ವನ್ಯಪ್ರಾಣಿ ರಕ್ಷಣೆಗೊಸ್ಕರ ಟೊಂಕಕಟ್ಟಿ ನಿಂತಿವರು. ಅದರಂತೆ ಸಕ್ರೆಬೈಲು ಆನೆ ಬಿಡಾರದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಪುನೀತ್ ಇತ್ತಿಚ್ಚಿಗೆ ಬಿಡಾರಕ್ಕೆ ಭೇಟಿ ನೀಡಿ ಅರಣ್ಯ ಸಂರಕ್ಷಣೆ ಕುರಿತ ಸಾಕ್ಷ್ಯ ಚಿತ್ರವೊಂದರಲ್ಲಿ ನಟಿಸಿದ್ದರು.

ಈ ಸಂದರ್ಭದಲ್ಲಿ ನೇತ್ರ ಹೆಣ್ಣಾನೆ ಅದರ ಮರಿಯಾನೆಯನ್ನು ಕ್ರಾಲ್ ನಲ್ಲಿ ಕಂಡಿದ್ದ ಪುನೀತ್ ತಾಯಿ ಮಗುವಿನ ಬಗ್ಗೆ ಮಾವುತರಿಂದ ವನ್ಯಜೀವಿ ವೈದ್ಯರಿಂದ ಅಪಾರ ಮಾಹಿತಿಯನ್ನು ಪಡೆದಿದ್ದರು. ನೇತ್ರ ಜನ್ಮವಿತ್ತ ಗಂಡು ಮರಿಯಾನೆಯನ್ನು ಮುದ್ದಾಡಿದ್ದರು.

ಪುನೀತ್ ರಾಜ್ ಕುಮಾರ್ ಅಕಾಲಿಕ ಸಾವಿನ ನಂತರ ಸಕ್ರೆಬೈಲು ಆನೆ ಬಿಡಾರದಲ್ಲಿ ನೇತ್ರ ಮತ್ತು ಮರಿಯಾನೆಯನ್ನು ಒತ್ತಾಯಪೂರ್ವಕವಾಗಿ ಬೇರ್ಪಡಿಸುವ ವೀನಿಂಗ್ ಕಾರ್ಯಕ್ಕೆ ಇಲಾಖೆ ಸಜ್ಜಾಗಿದೆ.

ತಾಯಿಯಿಂದ ಬೇರ್ಪಡುವ ಮರಿಯಾನೆಗೆ ಪುನೀತ್ ರಾಜ್ ಕುಮಾರ್ ಎಂದು ಹೆಸರಿಡಲಾಗಿದೆ. ಇದು ಅರಣ್ಯ ಇಲಾಖೆ ಪುನೀತ್ ರಾಜ್ ಕುಮಾರ್ ಗೆ ತೋರಿದ ಅತೀವ ಗೌರವ ಎಂದರೂ ತಪ್ಪಾಗಲಾರದು.

ಕಾನನ ವನ್ಯಜೀವಿ ಬಗ್ಗೆ ಇದ್ದ ಅಪಾರ ಪ್ರೀತಿಗೆ ಪುನೀತ್ ಪ್ರತ್ಯಕ್ಷ ಸಾಕ್ಷಿಯಾಗಿದ್ದರು. ಇನ್ನು ಸಕ್ರೆಬೈಲು ಆನೆ ಬಿಡಾರದಲ್ಲಿ ಪುನೀತ್ ರಾಜ್ ಕುಮಾರ್ ಎಂಬ ಪುಟಾಣೆ ಮರಿಯಾನೆ ಬೆಟ್ಟದ ಹೂವಿನಂತೆ ಅರಳಿದೆ.

ವಿಶೇಷ ಅಂದರೆ, ಮರಿಯಾನೆಗೆ ಹೆಸರಿಡುವ ಪ್ರಕ್ರಿಯೆಯೇ ವಿಶೀಷ್ಟವಾಗಿದೆ. ಸಾಮಾನ್ಯವಾಗಿ ಮರಿಯಾನೆ ಹುಟ್ಟಿದ ಕೂಡಲೇ ಅದಕ್ಕೊಂಡು ಹೆಸರಿಟ್ಟು ಕೂಗುವ ಪದ್ದತಿಯಿಲ್ಲ. ಬದಲಾಗಿ ಮರಿಯಾನೆಯನ್ನು ಅದರ ತಾಯಿ ಆನೆಯಿಂದ ಬೇರ್ಪಡಿಸುವ ಪ್ರಕ್ರಿಯೆ ನಡೆಸಿ, ಅದನ್ನು ಪ್ರತ್ಯೇಕವಾಗಿ ಇರಿಸಿದ ನಂತರವಷ್ಟೆ ಮರಿಯಾನೆಗೆ ಹೆಸರನ್ನ ಇಡಲಾಗುತ್ತದೆ. ಈ ಪ್ರಕ್ರಿಯೆಯನ್ನ ವೀನ್ಹೀಂಗ್​ ಎನ್ನುತ್ತಾರೆ.

ವೀನ್ಹಿಂಗ್​ ಅಂದರೆ ಏನು

ತಾಯಿಯ ಪ್ರೀತಿ,ವಾತ್ಸಲ್ಯ ಮಮಕಾರ ಎಂಬುದು ಕೇವಲ ಮನುಷ್ಯ ವರ್ಗಕ್ಕೆ ಮಾತ್ರ ಸೀಮಿತವಾಗಿಲ್ಲ.ಪ್ರಾಣಿಗಳಲ್ಲೂ ಸಹ ತಾಯಿ ಮಗುವಿನ ಸಂಬಂಧಕ್ಕಿರುವ ಅಪರಿಮಿತ ಪ್ರೇಮದ ಬೆಸುಗೆಗೆ ಬೆಲೆಕಟ್ಟಲಾಗದು.

ಅದರಲ್ಲೂ ವಿಶೇಷವಾಗಿ ಅತೀಸೂಕ್ಷ್ಮ ಪ್ರಾಣಿಯೆಂದು ಬಿಂಬಿತವಾಗಿರುವ ಆನೆಗಳಲ್ಲಿ.ಆನೆಯ ತಾಯ್ತಿತನ,ಮರಿಗೆ ತೋರುವ ಪ್ರೀತಿ ಅನನ್ಯವಾದದ್ದು, ಎಂತಹ ತಾಯಿ ಕೂಡ ತಾಯ್ತನದ ಮತ್ತೊಂದು ಪಾಠವನ್ನು ಈ ಪ್ರಾಣಿಯನ್ನು ನೋಡಿದರೆ ಕಲಿಯಬಲ್ಲಳು.

ತಾಯ್ತಿತನಕ್ಕೆ ಆದರ್ಶವಾಗಬಲ್ಲ ಅದೆಷ್ಟೋ ಹೆಣ್ಣಾನೆಗಳು ಒಂದಲ್ಲ ಒಂದು ದಿನ, ತಾನು ಹೆತ್ತ ಮರಿ ಆನೆಯ ವಾತ್ಸಲ್ಯದ ಬೆಸುಗೆಯನ್ನು ಕಳೆದುಕೊಳ್ಳಬೇಕಾದ ಯಾತನಾ ದಿನವೊಂದಕ್ಕೆ ಅಣಿಯಾಗಬೇಕಾಗುತ್ತದೆ.

ಇಂತಹ ಅಪರೂಪದ ಸನ್ನಿವೇಶಕ್ಕೆ ಸಕ್ರೆಬೈಲಿನ ಆನೆ ಬಿಡಾರದ ನೇತ್ರಾ ಮತ್ತು ಅದರ ಗಂಡು ಮರಿಯಾನೆ ಸಾಕ್ಷಿಯಾಗಿವೆ.

ಹೇಗೆ ನಡೆಯುತ್ತೆ ವೀನಿಂಗ್ ಕಾರ್ಯ

ತಾಯಿಯಿಂದ ಮಗುವನ್ನು ಒತ್ತಾಯಪೂರ್ವಕವಾಗಿ ಬೇರ್ಪಡಿಸುವ ವಿದಾನಕ್ಕೆ ವೀನಿಂಗ್ ಎಂದು ಕರೆಯಲಾಗುತ್ತದೆ.ಬಿಡಾರದಲ್ಲಿ ಮರಿಯಾಕುವ ಹೆಣ್ಣಾನೆಗಳಿಗೆ ಎರಡು ವರ್ಷದ ನಂತರ ತಾಯಿ ಮಗುವನ್ನು ಬೇರ್ಪಡಿಸುವ ಸಲುವಾಗಿ ವೀನಿಂಗ್ ಮಾಡಲಾಗುತ್ತದೆ ವೀನಿಂಗ್ ನಲ್ಲಿ ತಾಯಿ ಆನೆಯಿಂದ ಅದರ ಮರಿಯಾನೆಯನ್ನು ಬೇರ್ಪಡಿಸುವುದೆಂದರೆ ಅದು ಅಸಾಧ್ಯದ ಮಾತು.

ಮರಿ ಆನೆಯೊಂದು ತನ್ನ ತಾಯಿಯ ಸಾಂಗತ್ಯ ತೊರೆಯಬೇಕಾದ ಸಂದರ್ಭ ಎದುರಾದಾಗ ಬಿಡಾರದ ಸಿಬ್ಬಂದಿಗಳು ಕೂಡ ಕ್ಷಣಕಾಲ ಭಾವುಕರಾಗಿ ಬಿಡುತ್ತಾರೆ.ಮಾವುತ ಕಾವಾಡಿಗಳ ಮುಖಭಾವ ಕೂಡ ಮಡುಗಟ್ಟಿದಂತಾಗಿರುತ್ತದೆ.ಏಕೆಂದರೆ ಹುಟ್ಟಿನಿಂದ ತಾಯಿ ಮಗುವಿನ ಪ್ರೀತಿ ವಾತ್ಸಲ್ಯವನ್ನು ಹತ್ತಿರದಿಂದ ಕಾಣುವ ಇವರು ಏಕಾಏಕಿ ಒಂದು ದಿನ ತಾಯಿ ಮಗುವನ್ನು ಬೇರ್ಪಡಿಸಿದಾಗ ಎರಡು ಜೀವಗಳು ಅದೆಷ್ಟು ನೊಂದಿಕೊಳ್ಳುತ್ತವೆ.

ಅವುಗಳ ಆರ್ಥನಾದ ಅರಣ್ಯರೋಧನವಾಗಿರುತ್ತೆ. ವೀನಿಂಗ್ ಗಾಗಿ ಬಿಡಾರದಲ್ಲಿ ಅರಣ್ಯಾಧಿಕಾರಿಗಳು ಒಂದು ಮಹೂರ್ತ ನಿಗದಿಪಡಿಸುತ್ತಾರೆ.ಮಾವುತ ಕಾವಾಡಿಗಳು ಸಿದ್ದತೆ ಕೈಗೊಳ್ಳುತ್ತಾರೆ.

ವಿನಿಂಗ್ ಗೆ ಬಿಡಾರರದಲ್ಲಿ ಒಂದು ಜಾಗ ಗುರುತಿಸಿದರೆ,ಮತ್ತೊಂದು ಜಾಗವನ್ನು ಬಿಡಾರದಿಂದ ಅಲ್ಪ ದೂರದ ಕಾಡನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.ಅದರಂತೆಯೇ ಇಂದು ಮಂಜಾನೆಯೇ ಸಕ್ರೆಬೈಲು ಬಿಡಾರದ ಕ್ರಾಲ್ ಬಳಿ ತಾಯಿ ಹೆಣ್ಣಾನೆ ನೇತ್ರಾವತಿನ್ನು ಕಟ್ಟಿಹಾಕಿ,ಅದರ ಮರಿಆನೆಯನ್ನು ಬಿಡಾರಕ್ಕೆ

ವೀನಿಂಗ್ ಪ್ರೋಸೆಸ್.

ಯಾವುದೇ ಆನೆ ಮರಿಹಾಕಿದಾಗ ಎರಡು ವರ್ಷ ಎರಡು ಅಥವಾ ಮೂರು ತಿಂಗಳುಗಳ ಕಾಲ ಅವು ಒಟ್ಟಿಗೆ ಇರುತ್ತವೆ.ತಾಯಿಯನ್ನು ಬಿಟ್ಟು ಮರಿಯಾಗಲಿ,ಮರಿಯನ್ನು ಬಿಟ್ಟು ತಾಯಿಯಾಗಲಿ ಇರುವುದಿಲ್ಲ.

ಇವುಗಳನ್ನು ಬಂಧಮುಕ್ತಗೊಳಿಸುವುದು ಎಂದರೆ ಅದು ಸುಲಭದ ಮಾತಲ್ಲ. ಇದಕ್ಕಾಗಿ ದೊಡ್ಡ ತಯಾರಿಯನ್ನೇ ಮಾವುತರು ಮತ್ತು ಕಾವಾಡಿಗಳು ನಡೆಸಬೇಕಾಗುತ್ತದೆ.ವೀನಿಂಗ್ ಮಾಡುವ ದಿನದಂದು ಮುಂಜಾಗೃತೆಯಾಗಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತದೆ.

ಬಿಡಾರದಲ್ಲಿ ಹಬ್ಬದ ವಾತಾವರಣ.

ತಾಯಿ ಮರಿಯನ್ನು ಬೇರ್ಪಡಿಸುವುದು ದುಃಖದ ವಿಷಯವಾದರೂ ಬಿಡಾರದ ಸಿಬ್ಬಂದಿಗಳ ಪಾಲಿಗೆ ಅದು ಹಬ್ಬದ ದಿನ.ತಾಯಿ ಮಗು ಬೇರ್ಪಟ್ಟರೂ ಸ್ವತಂತ್ರ ಜೀವನಕ್ಕೆ ಕಾಲಿಡುವ ಪವಿತ್ರದಿನ.

ತಾಯಿ ಮಗು ಬೇರ್ಪಡಿಸುವ ಸಂದರ್ಭದಲ್ಲಿ ಯಾವ ಅವಘಡಗಳು ನಡೆಯದಂತೆ,ಅಂದು ಬೆಳಿಗ್ಗೆ ಕಾಡನ್ನು ಸಂರಕ್ಷಿಸುವ ಆರಾದ್ಯದೈವ ಶೆಟ್ಟಿಹಳ್ಳಿ ಅಭಯಾರಣ್ಯದ ಪಾಲಕ ದೇವರ ದರ್ಗಾದಲ್ಲಿ ವಿಶೇಷ ಪೂಜೆಯನ್ನು ಮಾವುತರು ಕಾವಾಡಿಗಳು ಸಲ್ಲಿಸುತ್ತಾರೆ.

ಕಾಡಿನಲ್ಲಿಯೇ ಉಪಹಾರವನ್ನು ಕೊಂಡೊಯ್ಯುವ ಸಿಬ್ಬಂದಿಗಳು,ಪೂಜೆಯ ನಂತರ ಎಲ್ಲರಿಗೂ ಸಿಹಿ ಹಂಚುತ್ತಾರೆ. ನಂತರ ಅರಣ್ಯಾಧಿಕಾರಿಗಳು ವೀನಿಂಗ್ ಗೆ ಒಳಪಡುವ ಮರಿಯಾನೆಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ.

ಹೊಸ ಬದುಕಿಗೆ ನಾಂದಿ ಹಾಡುವ ನಿನ್ನ ಬಾಳು ಚೆನ್ನಾಗಿರಲಿ ಎಂದು ಹಾರೈಸುತ್ತಾರೆ.ಅಲ್ಲಿಂದ ವೀನಿಂಗ್ ಗೆ ಎಲ್ಲರೂ ಅಣಿಯಾಗುತ್ತಾರೆ

ತಾಯಿ ಮಗುವಿಗೆ ಬಿಡಾರದ ಆನೆಗಳು ಸಾಥ್.

ತಾಯಿಆನೆಯಿಂದ ಮತ್ತು ಮರಿಯಾನೆಯನ್ನು ಬೇರ್ಪಡಿಸುವಾಗ ಬಿಡಾರದ ಆನೆಗಳ ಸಹಾಯ ಅತಿಮುಖ್ಯ.ಮಾವುತ ಕಾವಾಡಿಗಳ ಜಾಣ್ಮೆ ಸೂಕ್ಷ್ಮ ಪ್ರಜ್ಞೆ ಸಹ ಅಷ್ಟೆ ಪ್ರಮುಖ ಪಾತ್ರವಹಿಸುತ್ತದೆ.

ತಾಯಿ ಆನೆಯನ್ನು ಬೇರ್ಪಡಿಸುವಾಗ ಅದರೊಂದಿಗೆ ಅದರ ಒಡನಾಟದ ಎರಡು ಆನೆಗಳನ್ನು ಅಕ್ಕಪಕ್ಕದಲ್ಲಿ ಕಟ್ಟಲಾಗುತ್ತದೆ.

ಮರಿಯಾನೆಗೆ ಸಹ ಎರಡು ಆನೆಗಳ ಬೆಂಗಾವಲನ್ನು ಮಾಡಲಾಗುತ್ತದೆ.ತಾಯಿಯೊಂದಿಗಿರುವ ಮರಿಯಾನೆಗೆ ಪುಸಲಾಯಿಸಿ ಪ್ರೀತಿ ತೋರುವ ಮಾವುತರು ನಂತರ ಬೆಂಗಾವಲು

ಆನೆಗಳ ಸಹಾಯದಿಂದ ಅದರ ಕುತ್ತಿಗೆಗೆ ಹಾಗು ಕಾಲಿಗೆ ಹಗ್ಗವನ್ನು ಕಟ್ಟುತ್ತಾರೆ.ಮರಿಯಾನೆಯನ್ನು ಬೆಂಗಾವಲು ಆನೆ ಗಳ ಸಹಾಯದಿಂದ ಬಿಡಾರಕ್ಕೆ ಕರೆತರುವಾಗ,ತಾಯಿಯ ಪ್ರತಿರೋಧ ಒಡ್ಡದಂತೆ ಇತರೆ ಎರಡು ಆನೆಗಳು ಅದಕ್ಕೆ ಸಾಥ್ ನೀಡುತ್ತವೆ.

ಹೀಗೆ ಬೇರ್ಪಟ್ಟ ಆನೆಗಳು 10 -15 ದಿನಗಳಲ್ಲಿ ಸ್ವತಂತ್ರವಾಗಿ ಜೀವಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತವೆ.ಇದಕ್ಕೆ ಪೂರಕವೆಂಬಂತೆ ಸಕ್ರೆಬೈಲಿನಲ್ಲಿ ನೇತ್ರಾ ಹಾಗು ಕಿರಣ ಮರಿಯಾನೆಯ ವೀನಿಂಗ್ ನಡೆದಿದ್ದು ವಿಶೇಷವಾಗಿತ್ತು

ತಾಯಿ ಮರಿ ಒಟ್ಟಿಗಿದ್ದರೆ ಬಿಡಾರದಲ್ಲಿ ಅಪಾಯ ಹೆಚ್ಚು.

ಆನೆಗಳಲ್ಲಿ ತಾಯಿ ಮತ್ತು ಮರಿ ಬೇರ್ಪಡಲೇ ಬೇಕು.ನೈಸರ್ಗಿಕವಾಗಿ ಕಾಡುಗಳಲ್ಲಿ ಹಿಂಡಿನಲ್ಲಿಬೇಕಾದರೆ ಮರಿಯಾನೆಗಳು ಸೊಂಡಲು ದಂತಕ್ಕೆ ಸಿಲುಕಿ ಅಪಾಯವನ್ನು ಎದುರಿಸುವುದು ಸಾಮಾನ್ಯ ಈ ಸಂದರ್ಭದಲ್ಲಿ ಸಹಜವಾಗಿ ತಾಯಿಯಾಗಲಿ ಅಥವಾ ಮಗುವಾಗಲಿ ಬೇರ್ಪಡುತ್ತದೆ.

ಗುಂಪಿನಲ್ಲಿ ಎಲ್ಲರ ಜೊತೆ ಹೊಂದಿಕೊಂಡು ಹೋಗುತ್ತದೆ.ಆದರೆ ಬಿಡಾರಗಳಲ್ಲಿ ಸಾಕಾನೆಗಳನ್ನು ತಾಯಿಯಿಂದ ಬೇರ್ಪಡಿಸುವಾಗ ಈ ರೀತಿಯ ಮನಕುಲಕುವ ಸನ್ನಿವೇಶ ಸಾಮಾನ್ಯವಾದರೂ ಅವುಗಳನ್ನು ಬೇರ್ಪಡಿಸಿದರೆ ಇದ್ದರೆ ಆಗುವ ಅನಾಹುತವೇ ಹೆಚ್ಚು.ಎಲ್ಲಿಯವರೆಗೆ ಮರಿ ತಾಯಿಯಿಂದ ಬೇರ್ಪಡುವುದಿಲ್ಲವೋ ಅಲ್ಲಿಯವರೆಗೆ ಅದು ಮಾವುತರ ಅಂಕೆಗೆ ಸಿಗುವುದಿಲ್ಲ.

.ತಾಯಿಯೊಡನೆ ಇರುವ ಮರಿಆನೆಗಳು ಮಾವುತರ ಅಂಕೆಗೆ ನಿಲುಕುವುದಿಲ್ಲ.ಈ ಸಂದರ್ಭದಲ್ಲಿ ಮರಿಯಾನೆಗಳನ್ನು ಪಳಗಿಸುವುದು ಕಷ್ಟ.ತಾಯಿ ಮರಿ ಎರಡು ಒಟ್ಟಿಗಿದ್ದರೆ ಇದರಿಂದ ಅಪಾಯಗಳೇ ಹೆಚ್ಚು.ಮರಿಯ ವಾತ್ಸಲ್ಯಕ್ಕೆ ತಾಯಿ ಮಾವುತರ ಅಂಕೆಗೆ ಸಿಲುಕುವುದಿಲ್ಲ.

ತಾಯಿಯ ಮಮಕಾರದಲ್ಲೇ ಬೆಳೆದ ಮರಿ ಸಹ ಮಾವುತರಿಗೆ ಕ್ಯಾರೆ ಅನ್ನುವುದಿಲ್ಲ.ಹೀಗಾಗದರೆ ಸಾರ್ವಜನಿಕರಿಗೆ ಇದರಿಂದ ತೊಂದರೆಯೇ ಹೆಚ್ಚು.ಪ್ರಾಣಾಪಾಯಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಿರುತ್ತದೆ.

ಹೀಗಾಗಿ ಪ್ರಕೃತಿದತ್ತವಾದ ನಿಯಮಗಳು ಬಿಡಾರದಲ್ಲೂ ಅಪ್ಲೇ ಆಗಲೇಬೇಕು.ಇದು ವಿದಿಲಿಖಿತ. ಮರಿ ಆನೆಗಳು ಸಹ ಸ್ವತಂತ್ರವಾಗಿ ಬದುಕು ಕಲಿಯಬೇಕೆಂದರೆ ಬೇರ್ಪಡಿಸುವಿಕೆ ಇಲ್ಲಿ ಅನಿವಾರ್ಯ,ಇದು ಮಗುವಿಗೆ ಹಾಲು ಬಿಡಿಸಿ ಶಿಶುವಿಹಾರಕ್ಕೆ ಕಳುಹಿಸುವಂತಹಾ ಪ್ರಕ್ರೀಯೆ.ಸುಮಾರು 15 ರಿಂದ 20 ದಿನಗಳ ಕಾಲ ತಾಯಿ ಮತ್ತು ಮರಿಯನ್ನು ದೂರವಿಟ್ಟು ಪೋಷಣೆ ಮಾಡಲಾಗುತ್ತದೆ.

ಬೇರೆಯಾದ ತಾಯಿ ಮತ್ತು ಮರಿಗೆ ಆದ್ಯತೆ ಮೇರೆಗೆ ಗಮನ.

15 ರಿಂದ 20 ದಿನಗಳ ಕಾಲ ಬೇರೆಯಾಗುವ ತಾಯಿ ಆನೆ ಮತ್ತು ಮರಿ ಆನೆ ದುಃಖ ಹೆಚ್ಚಾಗಿ ಆಹಾರ ತೊರೆಯುವ ಸಾಧ್ಯತೆ ಹೆಚ್ಚು.ಹೀಗಾಗಿ ಅದನ್ನು ಮರೆಸಲು ಮತ್ತು ಆರೋಗ್ಯ ಕಾಪಾಡಲು ವಿಶೇಷ ಕಾಳಜಿ ವಹಿಸಲಾಗುತ್ತದೆ.

ಹಗಲು ರಾತ್ರಿ ಕಾವಾಡಿ ತಾಯಿಯಿಂದ ಬೇರ್ಪಟ್ಟ ಆನೆಯನ್ನು ಕಾಯುತ್ತಾನೆ.ತಾಯಿ ಪ್ರೀತಿಯನ್ನು ಆತ ತೋರಲು ಶುರು ಮಾಡುತ್ತಾನೆ ಹಗಲು ರಾತ್ರಿ ನಿದ್ದೆಗೆಟ್ಟು ಅದಕ್ಕೆ ಊಟೋಪಚಾರ ಮಾಡುತ್ತಾನೆ.

ಮೈ ಸವರುತ್ತಾನೆ.ಸ್ನಾನ ಮಾಡಿಸುತ್ತಾನೆ.ತಾಯಿ ಪ್ರೀತಿಯವನ್ನು ಮರೆಯುವಂತೆ ಮಾಡುತ್ತಾನೆತಾಯಿಯಿಂದ ಬೇರ್ಪಟ್ಟ ಮರಿ 20 ದಿನದ ಬಳಿಕ, ತಾಯಿಯ ಹತ್ತಿರ ಹೋದರೂಮೊದಲಿನಷ್ಟು ಆತ್ಮೀಯತೆ ಇರುವುದಿಲ್ಲ ಎಂದರೆ ಇಲ್ಲಿ ಮಾವುತರ ಜಾಣ್ಮೆಯನ್ನು ಮೆಚ್ಚಲೇ ಬೇಕು.

ಹೊಸ ಬದುಕಿನ ಪಾಠ..

ಬಿಡಾರದಲ್ಲಿ ಮರೆಯಾನೆ ಪ್ರವೇಶವಾಗುತ್ತಿದ್ದಂತೆ ಅದಕ್ಕೆ ಅಂದಿನಿಂದ ಹೊಸ ಜೀವನ ಪ್ರಾರಂಭವಾದಂತೆ.ಮರಿಯಾನೆಗೆ ಹೊಸ ಮಾವುತ ಹೊಸ ಕಾವಾಡಿ ನೇಮಕವಾಗುತ್ತಾನೆ.ಬಿಡಾರದ ನಿತ್ಯಬದುಕಿನ ಪಾಠಗಳನ್ನೇಲ್ಲಾ ಅವರಿಂದ ಕಲಿಸಲಾಗುತ್ತದೆ.ಭಾಷೆ ಕಲಿಸುವ ಮೂಲಕ ಆನೆ ಮೇಲೆ ಮಾವುತ ಹಿಡಿತ ಸಾಧಿಸುತ್ತಾನೆ.

ಹತ್ತು ಹದಿನೈದು ದಿನಗಳಲ್ಲೇ ವಾಸ್ತವ ಬದುಕಿನ ಪಾಠ ಕಲಿಯುವ ಮರಿಯಾನೆ ತಾಯಿಯೊಂದಿಗಿನ ಬೆಸುಗೆ ಬಂಧದಿಂದ ಬಾಗಶಃ ಮುಕ್ತವಾಗಿರುತ್ತದೆ.ತಾಯಿಯ ಯಾತನಾಮಯ ಸ್ಥಿತಿಯೂ ಕ್ರಮೇಣ ಸಹ ಸಹಜ ಸ್ಥಿತಿಗೆ ಬಂದಿರುತ್ತದೆ.

ಮಗು ಕಳೆದುಕೊಂಡರೂ ಅದು ನಮ್ಮ ಕಣ್ಣ ಮುಂದಿದೆಯಲ್ಲ ಎಂಬ ಭಾವನೆ ಕೂಡ ಮೂಡಿರುತ್ತದೆ.ಬಿಡಾರದಲ್ಲಿ ಮತ್ತದೇ ಜೀವನ,ಅದೇ ಮಾವುತ ಅದೇ ಕಾವಾಡಿ.ಸಂಗಾತಿಗಳೊಂದಿಗೆ ಚೆಲ್ಲಾಟ ಎಲ್ಲವೂ ಆರಂಭಗೊಳ್ಳುವ ಮೂಲಕ ಮರಿಯಾನೆ ಹೊಸಜೀವನಕ್ಕೆ ತೆರೆದುಕೊಳ್ಳುತ್ತದೆ,ತಾಯಿ ಆನೆ ಮತ್ತೊಂದು ಗಜ ಪ್ರಸವಕ್ಕೂ ಅಣಿಯಾಗುತ್ತಾಳೆ.

ಸಂಬಂದಗಳ ಸಂಕೋಲೆಗಳು ಬೆಸೆದಾಗಲೇ ಬಾಳು ಬಂಗಾರ ಎನ್ನುವುದಕ್ಕೆ ವೀನಿಂಗ್ ಅನ್ವರ್ಥವಾದರೂ,ಅದು ಪ್ರಕೃತಿ ನಿಯಮದ ಪಾಠ ಕಲಿಸುತ್ತದೆ.ಸ್ವತಂತ್ರ ಬದುಕಿಗೆ ನಾಂದಿ ಹಾಡುತ್ತದೆ.

ತಾಯಿಯೊಂದಿಗಿನ ಪ್ರೀತಿ ಮಮಕಾರವನ್ನು ಎಲ್ಲರಲ್ಲೂ ಕಾಣುವಂತೆ ಮಾಡುತ್ತದೆ.ಸಾಮರಸ್ಯ ಬದುಕಿನ ಅರ್ಥವನ್ನು ಸಾರಿ ಹೇಳುತ್ತದೆ.ಈಗ ಹೇಳಿ ತಾಯಿಯಿಂದ ಮಗು ಬೇರ್ಪಡುವುದು ಸರಿಯೋ ತಪ್ಪೆಂದು.

ಹೊಸ ಬದುಕಿಗೆ ಪಾದಾರ್ಪಣೆ ಮಾಡಿದ ನೇತ್ರ ಮತ್ತು ಪುನಿತ್ ಇವರಿಬ್ಬರ ಕವಲೊಡೆದ ಬದುಕು ಹಸನಾಗಲೆಂದು ನಾವು ಹಾರೈಸೋಣ. ಇನ್ನು ಮುಂದೆ ಪುನೀಕ್ ರಾಜ್ ಕುಮಾರ್ ನನ್ನು ಆನೆಯ ರೂಪದಲ್ಲಿ ಪ್ರಾಣಿ ಪ್ರೀಯರು ಕಣ್ತುಂಬಿಕೊಳ್ಳಬಹುದಾಗಿದೆ