ಮಲೆನಾಡಿನ ರಾಜಕೀಯವನ್ನು ಒಗ್ಗೂಡಿಸಿದ ಕಾಗೋಡು ತಿಮ್ಮಪ್ಪ ಅಭಿನಂದನಾ ಸಮಾರಂಭ! ಹಿರಿಯ ಮುಖಂಡರ ಬಗ್ಗೆ ಯಾರ್ಯಾರು ಏನೇನು ಹೇಳಿದರು!?

Kagodu Thimpappa was felicitated impartially in Shimogaಕಾಗೋಡು ತಿಮ್ಮಪ್ಪರವರಿಗೆ ಶಿವಮೊಗ್ಗದಲ್ಲಿ ಪಕ್ಷಾತೀತವಾಗಿ ಅಭಿನಂದನೆಯನ್ನು ಸಲ್ಲಿಸಲಾಯ್ತು

ಮಲೆನಾಡಿನ ರಾಜಕೀಯವನ್ನು ಒಗ್ಗೂಡಿಸಿದ ಕಾಗೋಡು ತಿಮ್ಮಪ್ಪ ಅಭಿನಂದನಾ ಸಮಾರಂಭ! ಹಿರಿಯ ಮುಖಂಡರ ಬಗ್ಗೆ ಯಾರ್ಯಾರು ಏನೇನು ಹೇಳಿದರು!?

KARNATAKA NEWS/ ONLINE / Malenadu today/ Sep 17, 2023 SHIVAMOGGA NEWS

ಶಿವಮೊಗ್ಗ: ಸೈದ್ಧಾಂತಿಕ ಸ್ಪಷ್ಟತೆ, ಪ್ರಾಮಾಣಿಕತೆ ಹಾಗೂ ಸ್ವಯಂ ನಿಯಂತ್ರಣ ಇವು ಹೋರಾಟಗಾರನಿಗಿರಬೇಕಾದ ಲಕ್ಷಣಗಳು. ಇಂತಹ ಗುಣಗಳಿಂದಲೇ ಕಾಗೋಡು ತಿಮ್ಮಪ್ಪ  ಹೋರಾಟಗಾರನಾಗಿ ಬೆಳೆದರು. ರಾಜ್ಯ ರಾಜಕೀಯದಲ್ಲಿ ಮರೆಯಲಾರದ ರಾಜಕಾರಣಿಯಾದರು ಎಂದು  ಮಾಜಿ ಸಭಾಪತಿ , ಚಿತ್ರಕಲಾ ಪರಿಷತ್ ಅಧ್ಯಕ್ಷ  ಬಿ ಎಲ್ ಶಂಕರ್ ಹೇಳಿದ್ದಾರೆ.  ಕಾಗೋಡು ತಿಮ್ಮಪ್ಪ ಅಭಿನಂದನಾ ಸಮಿತಿ ಶನಿವಾರ ಇಲ್ಲಿ ಏರ್ಪಡಿಸಿದ್ದ ಕಾಗೋಡು ತಿಮ್ಮಪ್ಪ ಅಭಿನಂದನಾ ಕಾರ್‍ಯಕ್ರಮದಲ್ಲಿ ಕಾಗೋಡು ತಿಮ್ಮಪ್ಪನವರವರನ್ನು ಪಕ್ಷಾತೀತವಾಗಿ ಅಭಿನಂದಿಸಲಾಯ್ತು. ಈ ವೇಳೆ ಹಲವರು ಹಲವು ರೀತಿಯಲ್ಲಿ ಕಾಗೋಡು ತಿಮ್ಮಪ್ಪನವರ ಅನುಭವ ಹಾಗೂ ಬದುಕಿನ ರೀತಿಯನ್ನು ಬಣ್ಣಿಸಿದರು. 

ಅಭಿಂದನಾ ಭಾಷಣ ಮಾಡಿದ ಬಿಎಲ್ ಶಂಕರ್, ಶಾಂತವೇರಿ ಗೋಪಾಲಗೌಡ ಕೇವಲ 49 ವರ್ಷ ಬದುಕಿದ್ದರೂ ಇಂದಿಗೂ ಮರೆಯಲಾಗದ ರಾಜಕಾರಣಿಯಾಗಿದ್ದಾರೆ. ಹೋರಾಟದಿಂದ, ಕೆಲಸದಿಂದಲೇ ಅವರು ಬೆಳೆದು ನಿಂತಿದ್ದರು ಎಂದ ಅವರು, ಕಾಗೋಡು ಮುಖ್ಯಮಂತ್ರಿಗಳಿಗಿಂತ ಹೆಚ್ಚಿನ ಸಾಧನೆಯನ್ನು ಮಾಡಿದವರು. ಲಕ್ಷಾಂತರ ಜನರಿಗೆ ಹಕ್ಕುಪತ್ರ ಕೊಡಿಸಿದರು. ರಾಜಕೀಯದಲ್ಲಿ ಅವರಿಗೆ ಎದುರಾಳಿಗಳಿದ್ದರೇ  ವಿನಾ ಶತ್ರುಗಳಿಲ್ಲ. ಅವರು ಎಂದೂ ಬೀಗಿದವರಲ್ಲ, ಸದಾ ಬಾಗುವ ವ್ಯಕ್ತಿ ಎಂದು ಬಣ್ಣಿಸಿದರು.  ಐತಿಹಾಸಿಕ ಕಾಗೋಡು ಚಳವಳಿಯ ಫಲವಾಗಿ ಭೂಸುಧಾರಣಾ ಕಾಯಿದೆ ಜಾರಿಗೆ ತರಲಾಯಿತು. ಈ ಕಾಯಿದೆ ಜಾರಿ ಹಿಂದೆ ಕಾಗೋಡು ತಿಮ್ಮಪ್ಪ ಅವರಿಗಿದ್ದ ಬಡಜನರ ಕಾಳಜಿ ಕೆಲಸ ಮಾಡಿತು ಎಂದು ಹೇಳಿದರು.

ಆದರ್ಶ ರಾಜಕಾರಣಿ ಕಾಗೋಡು ತಿಮ್ಮಪ್ಪ

ಮುಖ್ಯ ಭಾಷಣ ಮಾಡಿದ  ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಇಂದಿನ ದಿನಗಳಲ್ಲಿ ರಾಜಕೀಯ ನಾಯಕನಾಗುವುದು ಬಹಳ ಸುಲಭ. ದೆಹಲಿ ಬೆಂಗಳೂರು ಸಂಪರ್ಕ ಇಟ್ಟುಕೊಂಡು ಹಣ ಇಟ್ಟುಕೊಂಡಿದ್ದರೆ ರಾಜಕೀಯ ನಾಯಕರಾಗಬಹುದು. ಆದರೆ ಕಾಗೋಡು ತಿಮ್ಮಪ್ಪ ನಡೆದು ಬಂದ ದಾರಿ ಸುಲಭವಾಗಿರಲಿಲ್ಲ. ಅವರು ಶಾರ್ಟ್ ಕಟ್ ನಾಯಕರಲ್ಲ ಇಂದಿನ ಯುವರಾಜಕಾರಣಿಗಳ ಸ್ಥಿತಿ  ಪುಸ್ತಕ ಓದದೆ ಗೈಡ್ ಓದಿ ಪಾಸಾದ ವಿದ್ಯಾರ್ಥಿಗಳಂತಾಗಿದೆ ಎಂದರು.

80 ರ ದಶಕ ಚಳುವಳಿ ದಿನಗಳು, ಇಂದು ದಿಕ್ಕಾಪಾಲಾಗಿವೆ. ಹಾಗಾಗಿ ಬಹುಶಃ ಕಾಗೋಡು ಈಗ ಖುಷಿಯಾಗಿ ಇರಲಿಕ್ಕಿಲ್ಲ. ಅವರಿಗೆ ಸಾಮಾಜಿಕ ನ್ಯಾಯದ  ಅಸ್ತ್ರ್ರಗಳು ಭೂಸುಧಾರಣೆ ಮತ್ತು ಮೀಸಲಾತಿಗಳಾಗಿದ್ದವು. ಈ ಎರಡೂ ಅಸ್ತ್ರ್ರಗಳ ಇವತ್ತಿನ ಪರಿಸ್ಥಿತಿ ಏನಾಗಿದೆ. ದ.ಕ, ಶಿವಮೊಗ್ಗ, ಉತ್ತರ ಕನ್ನಡ, ಉಡುಪಿಯಲ್ಲಿ ಭೂಸುಧಾರಣೆ ಯಶಸ್ವಿಯಾಗಿದೆ. ಆದರೆ ಉತ್ತರ ಕರ್ನಾಟಕದಲ್ಲಿ ಜಮೀನ್ದಾರರು ಇದ್ದಾರೆ. ಇಂದು ಯಾರು ಬೇಕಾದರೂ ಜಮೀನು  ಖರೀದಿಸಬಹುದಾಗಿದೆ. ಇದು ಭೂಸುಧಾರಣೆಯ ಅವನತಿಯಾಗಿದೆ ಎಂದರು.

ಮೀಸಲಾತಿ ಇಂದು ಬೇಕಾಬಿಟ್ಟಿಯಾಗಿದೆ. ಹಾಗಾಗಿ ಕಾಗೋಡು ಕನಸಿನ ಸೌಧದ ಇಟ್ಟಿಗೆ ಬೀಳುತ್ತಿದೆ. ಸ್ವಾತಂತ್ರ್ಯ ಹೋರಾಟವೊಂದೇ ಅಲ್ಲ. ನಂತರದ  ಮಂಡಲ್, ರಾಮಮಂದಿರ ಚಳುವಳಿಯಿಂದ ನಾಯಕರು ಹುಟ್ಟಿಕೊಂಡಿದ್ದಾರೆ. ಚುನಾವಣೆ ಸುಧಾರಣೆ ಆಗಬೇಕಿದೆ ಎಂದರು.

ಶತಮಾನೋತ್ಸವ ಆಚರಿಸಿಕೊಳ್ಳಲಿ

ಮಾಜಿ ಸಭಾಪತಿ ಡಿ.ಹೆಚ್ ಶಂಕರ ಮೂರ್ತಿ ಮಾತನಾಡಿ ಕಾಗೋಡು ತಿಮ್ಮಪ್ಪನವರು ಶತಮಾನೋತ್ಸವ ಆಚರಿಸಿಕೊಳ್ಳಲಿ, ಇಂದಿನ ಪೀಳಿಗೆ ತಾತ್ವಿಕ ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳಲಿ ಎಂದು ಆಶಿಸಿದರು.

ಸಂಸದ ರಾಘವೇಂದ್ರ ಮಾತನಾಡಿ, ಕಾಗೋಡು ಅವರದ್ದು ಸಾತ್ವಿಕ ಸಿಟ್ಟು. ರೈತರಿಗಾಗಿ, ಅರಣ್ಯ ಸಾಗುವಳಿದಾರರಿಗಾಗಿ ಜೀವವನ್ನೇ ಮುಡಿಪಾಗಿಟ್ಟಿದ್ದಾರೆ. ಆದರೆ ಕಾನೂನು ತೊಡಕು ಎದುರಾಗುತ್ತಿದೆ. ಇದನ್ನು ಬಗೆಹರಿಸಿ  ಸಾಗುವಳಿ ಪತ್ರ ಕೊಡಿಸುವ ಕೆಲಸದಲ್ಲಿ ಎಲ್ಲರ ಜೊತೆ ಕೈಜೋಡಿಸುವುದಾಗಿ  ಭರವಸೆ ನೀಡಿದರು.  

ಮಾಜಿ ಸಚಿವ ಕೆ ಎಸ್. ಈಶ್ವರಪ್ಪ ಮಾತನಾಡಿ, ನನ್ನ ರಾಜಕೀಯ ಹೋರಾಟಕ್ಕೆ ಮೊದಲು ಶುಭ ಹಾರೈಸಿದ್ದು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು, ಜಿಲ್ಲೆಯಲ್ಲಿ ಯಡಿಯೂರಪ್ಪ ಕಾಗೋಡು ತಿಮ್ಮಪ್ಪ ಹಾಗೂ  ಬಂಗಾರಪ್ಪ ಅವರನ್ನು ನೋಡಿ ಹೋರಾಟ ಕಲಿಯಬೇಕಿದೆ. ಕಾಗೋಡು ತಿಮ್ಮಪ್ಪ ಅವರ ಆಶಯದಂತೆ ಜಿಲ್ಲೆಯ ಜನ ಸಮಸ್ಯೆಗಳಿಗೆ ಎಲ್ಲರೂ ಕೂಡಿ ಶ್ರಮಿಸಬೇಕಿದೆ ಎಂದರು.ಕಾಂತರಾಜ್ ವರದಿ ಜಾರಿಯಾಗಲಿ

ಹಿಂದಿನ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ನಡೆಸಿದ್ದ  ಸಾಮಾಜಿಕ ಆರ್ಥಿಕ ಸಮೀಕ್ಷೆಯ ಕಾಂತ್‌ರಾಜ್ ವರದಿಯನ್ನು ಜಾರಿಮಾಡಬೇಕಿದೆ. ವರದಿ ಜಾರಿಯಾದರೆ ಮುಂದುವರಿದ ಜಾತಿಗಳಿಗೆ ಅನ್ಯಾಯವಾಗುತ್ತದೆ ಎಂಬುದು ಸುಳ್ಳು ವದಂತಿ. ಈ ವರದಿ ಜಾರಿಗೆ ನಡೆಸುವ ಹೋರಾಟಕ್ಕೆ ನಾನೂ ಸೇರಿಕೊಳ್ಳುತ್ತೇನೆ

ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ

ಭೂರಹಿತರ ಸಮಸ್ಯೆ ಇತ್ಯರ್ಥ ಮಾಡುತ್ತೇವೆ 

ಸಚಿವ ಮಧು ಬಂಗಾರಪ್ಪ ಮಾತನಾಡಿ, ಕಾಗೋಡು ತಿಮ್ಮಪ್ಪರಂತಹ ಹಿರಿಯ ಮುತ್ಸದ್ದಿಯ ಕನಸಿನಂತೆ ಜಿಲ್ಲೆಯ ಭೂರಹಿತರ ಸಮಸ್ಯೆ ಇತ್ಯರ್ಥ ಪಡಿಸುತ್ತೇವೆ. ಇದಕ್ಕೆ ವಿರೋಧ ಪಕ್ಷದವರ ಸಹಕಾರವನ್ನೂ ಪಡೆದು ಮುನ್ನಡೆಯುತ್ತೇವೆ.  ಶಿವಮೊಗ್ಗದಲ್ಲಿ ಅರ್ಧಕ್ಕೆ ನಿಂತಿರುವ ದೇವರಾಜ್ ಅರಸ್ ಸಭಾಭವನ ಪೂರ್ಣಗೊಳಿಸುತ್ತೇನೆ. ಮುಂದಿನ ಒಂದು ವರ್ಷದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಲಿದ್ದೇನೆ. ಅದಕ್ಕೂ ಎಲ್ಲರೂ ಸಹಕರಿಸಬೇಕೆಂದರು.

ಭೂಮಿ ಸಮಸ್ಯೆ ಕಗ್ಗಂಟಾಗಿದೆ 

ಶಿವಮೊಗ್ಗ ಜಿಲ್ಲೆಯಲ್ಲಿ ಭೂಮಿ ಸಮಸ್ಯೆ ಭಾರೀ ಕಗ್ಗಂಟಾಗಿದೆ ಎಂದು ಹೋರಾಟಗಾರ ತೀ ನಾ ಶ್ರೀನಿವಾಸ್, ಅಭಿಪ್ರಾಯ ಪಟ್ಟರು ಶರಾವತಿ ಸಂತ್ರಸ್ತರು ಮತ್ತು ಬಗರ್‌ಹುಕುಂ ಸಾಗುವಳಿದಾರರ ಸಮಸ್ಯೆಯನ್ನು ಕಾಂಗ್ರೆಸ್ ಹಾಗೂ ಬಿಜೆಪಿಯ  ಜನಪ್ರತಿನಿಧಿಗಳು ಒಂದಾಗಿ ಈ ಸಮಸ್ಯೆ ಇತ್ಯರ್ಥ ಮಾಡಬೇಕು. ಹೀಗೆ ಮಾಡಿದಲ್ಲಿ ಕಾಗೋಡು ತಿಮ್ಮಪ್ಪ ಅವರ ಕನಸು ಸಾಕಾರಗೊಳಿಸಬೇಕಿದೆ ಎಂದರು

ಹಕ್ಕುಪತ್ರ ನೀಡಿ

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕಾಗೋಡು ತಿಮ್ಮಪ್ಪ, ಬಗರ್‌ಹುಕುಂ ಸಕ್ರಮ ಸಮಿತಿ ಸಭೆ ನಡೆಯದೆ ವರ್ಷಗಳೇ ಆಗಿವೆ. ಸವಾಲೆಂದು ಸ್ವೀಕರಿಸಿ ಬಗರ್‌ಹುಕುಂ ಸಮಿತಿಗಳನ್ನು ಕಾಲಮಿತಿಯಲ್ಲಿ ರಚಿಸಿ ಹಕ್ಕುಪತ್ರ ನೀಡುವ ಕೆಲಸವನ್ನು ಮೊದಲ ಮಾಡಬೇಕಿದೆ.  ಬಗರ್‌ಹುಕುಂ ಅರ್ಜಿ ಕೊಡದಿದ್ಸರೆ ಅವರಿಗೆ ಅರ್ಜಿ ಕೊಡಲು ೬ ತಿಂಗಳು ಅವಕಾಶ ಕೊಡಿ. ಶಿವಮೊಗ್ಗದಲ್ಲಿ ಸಾವಿರಾರು ಅರ್ಜಿ ಬಾಕಿ ಉಳಿದಿದೆ. ಹೊಸ ಸಾಗುವಳಿದಾರರಿಗೆ ಬೇಡ, ತಲತಲಾಂತರದಿಂದ ಮಾಡಿದವರಿಗೆ ಸಾಗುವಳಿ ಚೀಟಿ ಕೊಡಿ ಎಂದರು.

ಸಮಾರಂಭದಲ್ಲಿ ಕಾಗೋಡು ಅವರಿಗೆ ಅಭಿನಂದನಾ ಸಮಿತಿ ಶಾಲು, ಹಾರ ಹಾಕಿ, ಸ್ಮರಣಿಕೆ ನೀಡಿ ಗೌರವಿಸಿತು. ಅನೇಕ ಸಂಘ-ಸಂಸ್ಥೆಯವರು, ಸಾರ್ವಜನಿಕರು, ರಾಜಕೀಯ ಮುಖಂಡರು, ಹೋರಾಟಗಾರರು, ಉದ್ಯಮಿಗಳು ಸಹ  ತಿಮ್ಮಪ್ಪ ಅವರನ್ನು ಗೌರವಿಸಿದರು. 
ಸರ್ವಪಕ್ಷ ಮುಖಂಡರ ಸಮ್ಮಿಲನ

ಕಾಗೋಡು ತಿಮ್ಮಪ್ಪ ಅವರಿಗೆ ದೇವರಾಜ ಅರಸು ಪ್ರಶಸ್ತಿ ಬಂದಿರುವ ಕಾರಣದಿಂದ ಏರ್ಪಡಿಸಿದ್ದ ಅಭಿನಂದನಾ ಸಭೆಗೆ ಅಪರೂಪಕ್ಕೆಂಬಂತೆ ಸರ್ವಪಕ್ಷಗಳ ಮುಖಂಡರು ಒಂದೇ ವೇದಿಕೆಯಲ್ಲಿ ಸೇರಿದ್ದರು. ಹಿರಿಯ ರಾಜಕೀಯ ನಾಯಕನಿಗೆ ಅಭಿನಂದಿಸಿದ ಎಲ್ಲರೂ ರಾಜಕೀಯ ರಹಿತವಾಗಿ ಒಂದಾಗಿದ್ದರು.ಮಾತ್ರವಲ್ಲದೆ, ಜಿಲ್ಲೆಯ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದರು.


ಇನ್ನಷ್ಟು ಸುದ್ದಿಗಳು