ಉತ್ತರ ಭಾರತಕ್ಕೆ ಶಿಫ್ಟ್ ಸಾಕಾನೆ ಸ್ಥಳಾಂತರದ ಹಿಂದಿರೋ ಮಸಲತ್ತು ಆದರೂ ಏನು?

First 12 then 4 elephants shifted to North India, now 14 elephants are ready to be transported to Madhya Pradesh!

ಉತ್ತರ ಭಾರತಕ್ಕೆ ಶಿಫ್ಟ್ ಸಾಕಾನೆ ಸ್ಥಳಾಂತರದ ಹಿಂದಿರೋ ಮಸಲತ್ತು ಆದರೂ ಏನು?
elephant camp,dubare elephant camp,sakrebailu elephant camp,
ಉತ್ತರ ಭಾರತಕ್ಕೆ ಶಿಫ್ಟ್ ಸಾಕಾನೆ ಸ್ಥಳಾಂತರದ ಹಿಂದಿರೋ ಮಸಲತ್ತು ಆದರೂ ಏನು?

ರಾಜ್ಯದಲ್ಲಿನ ಬಿಡಾರದ ಸಾಕಾನೆಗಳನ್ನು(elephant camp) ಉತ್ತರ ಪ್ರದೇಶಕ್ಕೆ (uttarpradesh) ಕಳುಹಿಸುತ್ತಿರುವ ಐ.ಎಫ್.ಎಸ್ ಲಾಭಿಯ ಹಿಂದಿನ ಉದ್ದೇಶವೇನು..ಇತ್ತಿಚ್ಚೆಗಷ್ಟೆ ಐದು ಸಾಕಾನೆಗಳನ್ನು ಉತ್ತರ ಪ್ರದೇಶಕ್ಕೆ ಕಳಿಸಿಕೊಡಲಾಗಿತ್ತು. ಈಗ ಪುನಃ ರಾಜ್ಯದ ವಿವಿಧ ಬಿಡಾರಗಳಿಂದ ಒಟ್ಟು 14 ಸಾಕಾನೆಗಳನ್ನು ಮಧ್ಯ ಪ್ರದೇಶಕ್ಕೆ ಸಾಗಿಸಲು ವೈಲ್ಡ್ ಲೈಫ್ ಪಿಸಿಸಿಎಪ್ ರವರು ಹಸಿರು ಮುದ್ರೆ ಹೊತ್ತಿದ್ದಾರೆ.

ಸಾಕಾನೆಗಳನ್ನೇ ನಂಬಿ ಸಾಂಪ್ರಾದಾಯಿಕವಾಗಿ ಬದುಕುಕಟ್ಟಿಕೊಂಡಿರುವ ಮಾವುತ ಕಾವಾಡಿಗಳ ಮೇಲೆ ಇದು ಗಂಭೀರ ಪರಿಣಾಮ ಬೀರಿದೆ. ಇದು ರಾಜ್ಯದ ಪ್ರವಾಸೋದ್ಯಮಕ್ಕೂ ಪೆಟ್ಟು ನೀಡಿದೆ. ರಾಜ್ಯದ ಸಾಕಾನೆಗಳನ್ನು ಈ ರೀತಿ  ಸಾಮಾಹಿಕವಾಗಿ ಬೇರೆ ಬೇರೆ ರಾಜ್ಯಗಳಿಗೆ ಸ್ಥಳಾಂತರಿಸುತ್ತಿರುವುದಕ್ಕೆ ಶಿವಮೊಗ್ಗದ ವೈಲ್ಡ್ ಟಸ್ಕರ್ ಸಂಸ್ಥೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ರಾಜ್ಯದ ಪ್ರತಿಷ್ಠಿತ ಬಿಡಾರಗಳ 14 ಸಾಕಾನೆಗಳ ಸ್ಥಳಾಂತರಕ್ಕೆ ಹಸಿರು ನಿಶಾನೆ ತೋರಿದ ಪಿಸಿಸಿಎಪ್

ಹೌದು ರಾಜ್ಯದ ಪ್ರತಿಷ್ಠಿತ ಆನೆ ಬಿಡಾರಗಳಿಂದ 14 ಸಾಕಾನೆಗಳನ್ನು ಮಧ್ಯ ಪ್ರದೇಶಕ್ಕೆ ಸ್ಥಳಾಂತರಿಸಲು ಅರಣ್ಯ ಇಲಾಕೆ ಒಪ್ಪಿಗೆ ನೀಡಿದೆ. ಈ ವಿಚಾರವಾಗಿ ಕರ್ನಾಟಕ ಮತ್ತು ಮಧ್ಯ ಪ್ರದೇಶದ ವೈಲ್ಡ್ ಲೈಫ್ ವಾರ್ಡನ್ ಜೊತೆ ಅಂತಿಮ ಹಂತದ ಪತ್ರ ವ್ಯವಹಾರಗಳು ನಡೆದಿದ್ದು, ಇನ್ನು 14 ಆನೆಗಳನ್ನು ಡಿಸೆಂಬರ್ 14 ರ ಒಳಗೆ ಸ್ಥಳಾಂತರಿಸಬೇಕಿದೆ. ಇದು ನಿಜಕ್ಕೂ ಆಘಾತಕಾರಿಯಾದ ಸುದ್ದಿಯಾಗಿದೆ.

ಕರ್ನಾಟಕ ರಾಜ್ಯದ ಪ್ರವಾಸೋಧ್ಯಮಕ್ಕೆ ಆನೆ ಬಿಡಾರಗಳ ಕೊಡುಗೆ ಮಹತ್ವದ್ದಾಗಿದೆ. ಮಧ್ಯ ಪ್ರದೇಶ, ಉತ್ತರ ಪ್ರದೇಶ, ಜಾರ್ಖಂಡ್ ರಾಜ್ಯಗಳ  ಪ್ರವಾಸೋಧ್ಯಮಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ ರಾಜ್ಯದ ಬಿಡಾರದ ಸಾಕಾನೆಗಳನ್ನು ಸ್ಥಳಾಂತರಿಸುವುದಕ್ಕೆ ಮೊದಲು ಮಾವುತ ಕಾವಾಡಿಗಳ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆನೆಗಳನ್ನು ಸಾಂಪ್ರಾದಾಯಿಕವಾಗಿ ಸೆರೆಹಿಡಿದು ಪಳಗಿಸಿ, ಅದನ್ನೇ ಬದುಕನ್ನಾಗಿಸಿಕೊಂಡು ಜೀವನ ನಡೆಸುತ್ತಿರುವವರು ಮಾವುತ ಕಾವಾಡಿಗಳು...

ಆನೆಯನ್ನು ಒಡನಾಡಿಯನ್ನಾಗಿ ಮಾಡಿಕೊಂಡು ಪ್ರೀತಿಯಿಂದ ಸಾಕಿ ಸಲುಹುವ ಮಾವುತ ಕಾವಾಡಿಗಳು..ತಮ್ಮ ಆನೆಯನ್ನು ಬೇರೆಯವರಿಗೆ ಬಿಟ್ಟುಕೊಡಬೇಕಾದ ಸಂದರ್ಭ ಎದುರಾದಾಗ ಮನಸ್ಸು  ಭಾರವಾಗುತ್ತದೆ. ಆನೆ ಹೋದ ನಂತರ ಮಾವುತ ಕಾವಾಡಿಗೆ ಕೆಲಸವೂ ಇಲ್ಲದಂತಾಗುತ್ತದೆ.

ಖಾಯಂ ನೌಕರಿಯಾದ್ರೆ ಪರವಾಗಿಲ್ಲ. ಆದ್ರೆ ಹಾಲಿ ಇರುವ ಕಾವಾಡಿಗಳಲ್ಲಿ ಹೆಚ್ಚಿನವರು ಹೊರಗುತ್ತಿಗೆಯವರೇ ಆಗಿದ್ದಾರೆ. ಈಗ ರಾಜ್ಯದ ದುಬಾರೆ ರಾಮಾಪುರ ಸಕ್ರೆಬೈಲು ಆನೆ ಬಿಡಾರದಿಂದ ಒಟ್ಟು 14 ಆನೆಗಳನ್ನು ಮಧ್ಯ  ಪ್ರದೇಶಕ್ಕೆ ಸಾಗಿಸಲು ವೈಲ್ಡ್ ಲೈಫ್ ಪಿಸಿಸಿಎಪ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಹಾಗಿದ್ರೆ ಯಾವ್ಯಾವ ಬಿಡಾರದ ಆನೆಗಳು ಮಧ್ಯ ಪ್ರದೇಶಕ್ಕೆ ಹೋಗಲಿವೆ ಎಂಬುದರ ವಿವರ ಇಲ್ಲಿದೆ.

ಯಾವ್ಯಾವ ಬಿಡಾರದಿಂದ ಎಷ್ಟೆಷ್ಟು ಆನೆಗಳು ಶಿಫ್ಟ್ ಆಗಲಿವೆ   

1. ರಾಮಾಪುರ (ಬಂಡಿಪುರ ಟೈಗರ್ ರಿಸರ್ವ್)  (Ramapura elephant camp)   

  • 1.ಗಣೇಶ  (17)
  • 2.ಕೃಷ್ಣ  (21)
  • 3.ಗಜ (07)
  • 4.ಮರ್ಸಿಯ(07) ಹೆಣ್ಣು
  • 5.ಪೂಜಾ (09)  ಹೆಣ್ಣು

2.ದುಬಾರೆ (ಮಡಿಕೇರಿ)    (dubare elephant camp)                         

  • 6.ಜನರಲ್ ತಿಮ್ಮಯ್ಯ (08)
  • 7 ಜನರಲ್ ಕಾರ್ಯಪ್ಪ (08)
  • 8. ವಲ್ಲಿ  (ಗಂಡು) (40)
  • 9.ಲವ (21)
  • 10.ಮಾರುತಿ (ಗಂಡು) (20)

3.ಸಕ್ರೆಬೈಲು (ಶಿವಮೊಗ್ಗ)  (sakrebyle elephant camp)                         

  • 11.ರವಿ (25)
  • 12.ಶಿವ  (06)
  • 13.ಮಣಿಕಂಠ(35)
  • 14.ಬೆಂಗಳೂರು ಗಣೇಶ (36)

ಒಟ್ಟು 14 ಆನೆಗಳಲ್ಲಿ 12 ಗಂಡು ಮತ್ತು ಎರಡು ಹೆಣ್ಣಾನೆಗಳು ಮಧ್ಯ ಪ್ರದೇಶಕ್ಕೆ ಪಯಣ ಬೆಳಸಲಿವೆ. ಇದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ತೆಗೆದುಕೊಂಡ ದುಡುಕಿನ ನಿರ್ಧಾರಕ್ಕೆ ಕನ್ನಡಿಯಂತಿರುವ ಸಂಗತಿ ಎಂದರೂ ತಪ್ಪಾಗುವುದಿಲ್ಲ.

ದುಬಾರೆ ಸಕ್ರೆಬೈಲು ಮತ್ತಿಗೋಡು, ರಾಮಾಪುರ ಆನೆ ಬಿಡಾರ ಗಳು ರಾಜ್ಯದ ಪ್ರತಿಷ್ಠಿತ ಬಿಡಾರಗಳಾಗಿ  ಗುರುತಿಸಿಕೊಂಡಿದ್ದು, ,ಪ್ರಮುಖ ಪ್ರವಾಸಿ ತಾಣಗಳಾಗಿವೆ. ಇಲ್ಲಿನ ಸಾಕಾನೆಗಳು ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.ಪ್ರತಿ ವರ್ಷ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು.

ತಮಗಿಷ್ಟವಾದ ಆನೆಗಳ ಮುಂದೆ ಪೋಟೋ ಕ್ಲಿಕ್ಕಿಸಿಕೊಳ್ಳುವುದು ಸಹಜ.ಇನ್ನು ಚಿಣ್ಣರಾದರೆ..ಮರಿಯಾನೆಗಳ ಹೆಸರನ್ನೇ ಪ್ರೀತಿಯಿಂದ ಕರೆದು..ಅದನ್ನು ಮುಟ್ಟಿ ಸಂಭ್ರಮಿಸುತ್ತಾರೆ..ಹೀಗಾಗಿ ಆನೆ ಬಿಡಾರಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ.

ಬಿಡಾರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆನೆಗಳಿದ್ದರೆ, ಪ್ರವಾಸಿಗರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಆದರೆ ಸಾಕಾನೆಗಳನ್ನೇ ಬೇರೆ ಬೇರೆ ರಾಜ್ಯಗಳಿಗೆ ಸ್ಥಳಾಂತರಿಸುತ್ತಾ ಹೋದರೆ. ಇತ್ತ ಮಾವುತ ಕಾವಾಡಿಗಳ ಬದುಕು ಕೂಡ ಅತಂತ್ರವಾಗುತ್ತದೆ. ಅಲ್ಲದೆ ಪ್ರವಾಸೋಧ್ಯಮದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ ಎಂಬುದು ವೈಲ್ಡ್ ಟಸ್ಕರ್ ನಡೆಸಿರುವ ಸಾಂಪ್ರಾದಾಯಿಕ ಅಧ್ಯಯನದಲ್ಲಿ ಕಂಡುಬಂದ ವಿಷಯವಾಗಿದೆ.

2018 ರಲ್ಲಿ ರಾಜ್ಯದಿಂದ 12 ಸಾಕಾನೆಗಳ ಸ್ಥಳಾಂತರ

2022 ರಲ್ಲಿ ನಾಲ್ಕು ಆನೆ ಸ್ಥಳಾಂತರ

2022 ರ ನವಂಬರ್ ಡಿಸೆಂಬರ್ ನಲ್ಲಿ 14 ಆನೆಗಳ ಸ್ಥಳಾಂತರ

2018 ರಲ್ಲಿ ಉತ್ತರ ಪ್ರದೇಶದ ದುದ್ವಾ ರಿನೈಸಾರಸ್ ಜಂಗಲ್ ಸಫಾರಿಗೆ ಎಲಿಫೆಂಟ್ ಪೆಟ್ರೊಲಿಂಗ್ ಗಾಗಿ ರಾಜ್ಯದ ಬಿಡಾರದ ಆನೆಗಳಿಗಾಗಿ ಬೇಡಿಕೆ ಸಲ್ಲಿಸಲಾಗಿತ್ತು.ಈ ಸಂದರ್ಭದಲ್ಲಿ ರಾಜ್ಯದ ದುಬಾರೆ ಮತ್ತು ಮುತ್ತೊಡಿಯಿಂದ 12 ಸಾಕಾನೆಗಳನ್ನು ಉತ್ತರ ಪ್ರದೇಶಕ್ಕೆ  ಕಳುಹಿಸಲಾಗಿತ್ತು.

ಅದೇ ಸಂದರ್ಭದಲ್ಲಿ ಸಕ್ರೆಬೈಲು ಆನೆ ಬಿಡಾರದಿಂದ ಅಮೃತ(12),ಅದರ ಮರಿ ಪಾರ್ವತಿ(2), ಕಿರಣ(4) ಮಂತ್ರಾಲಯದ ಮಠದಿಂದ ಕರೆತಂದಿದ್ದ ಭಾಸ್ಕರ ಐದು ಸಕಾನೆಗಳನ್ನು ದುದ್ವಾಕ್ಕೆ ಕಳುಹಿಸಲಾಗಿತ್ತು  ಇತ್ತಿಚ್ಚಗಷ್ಟೆ ರಾಜ್ಯದಿಂದ ನಾಲ್ಕು ಆನೆಗಳನ್ನು ಯುಪಿಯ ಪಿಲಿಬಿಟ್ ಟೈಗರ್ ರಿಸರ್ವ್ ಗೆ ಕಳಹಿಸಲಾಗಿತ್ತು. ಈಗ ಮದ್ಯ ಪ್ರದೇಶಕ್ಕೆ ರಾಜ್ಯದ ಹದಿನಾಲ್ಕು ಆನೆಗಳು ಸ್ಥಳಾಂತರಗೊಳ್ಳಲಿದೆ.

ಹಾಗಿದ್ರೆ ರಾಜ್ಯದ ಆನೆ ಬಿಡಾರದಲ್ಲಿ ಸಾಕಾನೆಗಳ ಸಂಖ್ಯೆ ಎಷ್ಟಿರುತ್ತೆ.

  • ದುಬಾರೆ ಆನೆ ಬಿಡಾರದಲ್ಲಿ ಹಾರಂಗಿ ಬಿಡಾರ ಸೇರಿದಂತೆ ಒಟ್ಟು 27 ಆನೆಗಳಿವೆ. ಇದರಲ್ಲಿ ಐದು ಸಾಕಾನೆಗಳು ಸ್ಥಳಾಂತರಗೊಂಡರೆ ಶಿಬಿರದಲ್ಲಿ ಉಳಿಯುವ ಆನೆಗಳ ಸಂಖ್ಯೆ 22 ಮಾತ್ರ.
  • ರಾಮಾಪುರ ಆನೆ ಬಿಡಾರದಲ್ಲಿ 19 ಆನೆಗಳಿದ್ದು ಇವುಗಳಲ್ಲಿ ಐದು ಆನೆಗಳು ಸ್ಥಳಾಂತರಗೊಂಡರೆ, ಶಿಬಿರದಲ್ಲಿ ಉಳಿಯುವ ಆನೆಗಳ ಸಂಖ್ಯೆ ಕೇವಲ 14
  • ಅದೇ ರೀತಿ ಸಕ್ರೆಬೈಲಿನಲ್ಲಿ ಪ್ರಸ್ಥುತ 19 ಆನೆಗಳಿದ್ದು, ಇವುಗಳಲ್ಲಿ ನಾಲ್ಕು ಆನೆಗಳು ಸ್ಥಳಾಂತರಗೊಂಡರೆ ಶಿಬಿರದಲ್ಲಿ ಉಳಿಯುವ ಆನೆಗಳ ಸಂಖ್ಯೆ ಕೇವಲ 15 ಮಾತ್ರ.
  • ಉಳಿದಂತೆ ರಾಜ್ಯದ ಇತರೆ ಸಾಕಾನೆ ಬಿಡಾರಗಳಾದ ಮತ್ತಿಗೋಡು ಭೀಮನಕಟ್ಟೆಯಲ್ಲಿ 21 ಆನೆಗಳಿವೆ. ದಾಂಡೆಲಿಯಲ್ಲಿ ಎರಡು ಸಾಕಾನೆಗಳಿವೆ, ಈಗ 14 ಆನೆಗಳು ಸ್ಥಳಾಂತರಗೊಂಡರೆ, ರಾಜ್ಯದ ಎಲ್ಲಾ ಬಿಡಾರಗಳಲ್ಲಿನ ಆನೆಗಳ ಸಂಖ್ಯೆ ಎಣಿಸಿದ್ರೂ, ಅವುಗಳ ಸಂಖ್ಯೆ 74 ರ ಗಡಿಯೂ ದಾಟುವುದಿಲ್ಲ.

ಆರು ಸಾವಿರಕ್ಕೂ ಅಧಿಕ ಕಾಡಾನೆಗಳನ್ನು ಹೊಂದಿರುವ ಕರ್ನಾಟಕ ರಾಜ್ಯದಲ್ಲಿ ಆನೆ ಮತ್ತು ಮಾನವ ಸಂಘರ್ಷ ದೊಡ್ಡ ಸವಾಲಾಗಿದೆ. ರೈತರ ಹೊಲಗದ್ದೆ ತೋಟಗಳಿಗೆ ಘೀಳಿಡುವ ಕಾಡಾನೆಗಳನ್ನು ಓಡಿಸಲು ಬಿಡಾರದ ಸಾಕಾನೆಗಳು ಅನಿವಾರ್ಯ.

ಪುಂಡಾನೆಗಳನ್ನು ಸೆರೆಹಿಡಿದು ಕಾಡಿಗೆ ಬಿಡುವ ಬದಲು, ಅದನ್ನು ಪಳಗಿಸಿ, ಸಂಪ್ರಾದಾಯಿಕ ತರಬೇತಿ ನೀಡಿ, ಅರಣ್ಯ ಇಲಾಖೆಯ ಕೆಲಸ ಕಾರ್ಯಗಳಿಗೆ ಸಾಕಾನೆಗಳನ್ನು ಬಳಸಿಕೊಳ್ಳಲು ಸಾಧ್ಯವಿದೆ. ಅಲ್ಲದೆ ಆನೆಗಳನ್ನು ಸೆರೆಹಿಡಿಯುವ ಪಳಗಿಸುವ ಸಂಪ್ರಾದಾಯಿಕ ಕಲೆ ಮಾಸಿ ಹೋದರೆ..ಮಾವುತ ಕಾವಾಡಿಗಳು ಇಲ್ಲದ ವಾತಾವರಣ ಭವಿಷ್ಯದಲ್ಲಿ ನಿರ್ಮಾಣವಾದ್ರೆ..ಪರಿಸ್ಥಿತಿ ಊಹಿಸಿಕೊಳ್ಳುವುದಕ್ಕೂ ಸಾದ್ಯವಿಲ್ಲ.

ಯಾಕೆಂದರೆ, ಗ್ರಾಮಗಳಿಗೆ ನುಗ್ಗಿ ರೈತರ ತೋಟ ಹಾನಿ ಮಾಡುವ ಕಾಡಾನೆಗಳ ಹಿಂಡನ್ನು ಓಡಿಸಲು..ಈ ವ್ಯವಸ್ಥೆಗಳೇ ಇರುವುದಿಲ್ಲ ಅನ್ನುವುದು ವಾಸ್ತವದ ಕಟುಸತ್ಯ. ವೈಲ್ಡ್ ಟಸ್ಕರ್ ನಡೆಸಿರುವ ಸಾಂಪ್ರದಾಯಿಕ ಅಧ್ಯಯನದಲ್ಲಿ ಇದು ಸ್ಪಷ್ಟವಾಗಿದೆ.ದುಬಾರಿ ಮತ್ತಿಗೋಡು ರಾಮಾಪುರ ಸಕ್ರೆಬೈಲು ಆನೆ ಬಿಡಾರದ ಮಾವುತ ಕಾವಾಡಿಗಳ ಪಾರಂಪಾರಿಕ ಬದುಕು,ಆನೆಗಳ ಮೇಲೆ ಅವರು ಹೊಂದಿರುವ ನಿಷ್ಠೆ, ಸೆರೆಹಿಡಿಯುವ ಹಾಗು ಪಳಗಿಸುವ ವಿಧಾನ,ಯಾವ ವೈಜ್ಞಾನಿಕತೆಗೂ  ಸರಿಸಾಟಿಯಿಲ್ಲ ಎಂಬುದು ಸೂರ್ಯ ಚಂದ್ರರಷ್ಟೆ ಸತ್ಯ.

ಸ್ಟೋರಿ: ಜೆಪಿ

(ವಿಶೇಷ ಸೂಚನೆ: ಇದು ಮಲೆನಾಡು ಟುಡೆ. ಕಾಂ ನ ಮುಖ್ಯ ವರದಿಗಾರ ಜೆಪಿಯವರ ಎಕ್ಸ್​ಕ್ಲ್ಯೂಸಿವ್ ಸ್ಟೋರಿಯಾಗಿರುತ್ತದೆ. ಈ ಕಂಟೆಂಟ್​ನ್ನು ಕಾಪಿ ಮಾಡುವುದಾಗಲಿ, ಯಥಾವತ್ತು ಪ್ರಕಟಿಸುವುದಕ್ಕೆ ಅನುಮತಿ ಅಗತ್ಯವಾಗಿದೆ : )