ಆಪರೇಷನ್​ ಕಾಡಾನೆ ವೇಳೆ ಮತ್ತೆ ಯಡವಟ್ಟು! ಶಾರ್ಪ್​ ಶೂಟರ್ ವೆಂಕಟೇಶ್​ ಸಾವಿಗೆ ಹೊಣೆಯಾರು? ದಾವಣಗೆರೆ ತಪ್ಪು, ಆಪರೇಷನ್​ ಭೀಮದಲ್ಲಿಯು ಮರುಕಳಿಸಿತಾ?

Sharpshooter Venkatesh died after being attacked by an elephant while darting a wild elephant in Hassan. ಹಾಸನದಲ್ಲಿ ಕಾಡಾನೆಗೆ ಡಾರ್ಟ್ ಮಾಡುವ ವೇಳೆ ಶಾರ್ಪ್​ ಶೂಟರ್ ವೆಂಕಟೇಶ್ ಆನೆ ದಾಳಿಗೆ ತುತ್ತಾಗಿ ನಿಧನರಾಗಿದ್ಧಾರೆ.

ಆಪರೇಷನ್​ ಕಾಡಾನೆ ವೇಳೆ ಮತ್ತೆ ಯಡವಟ್ಟು! ಶಾರ್ಪ್​ ಶೂಟರ್ ವೆಂಕಟೇಶ್​ ಸಾವಿಗೆ ಹೊಣೆಯಾರು? ದಾವಣಗೆರೆ ತಪ್ಪು, ಆಪರೇಷನ್​ ಭೀಮದಲ್ಲಿಯು ಮರುಕಳಿಸಿತಾ?

KARNATAKA NEWS/ ONLINE / Malenadu today/ Aug 31, 2023 SHIVAMOGGA NEWS

ಆ ಆನೆ ಯಾರ ಮೇಲೂ ಇದುವರೆಗೂ ದಾಳಿ ಮಾಡಿಲ್ಲ. ಗಾಯಗೊಂಡಿದ್ದ ಆನೆ ಚಿಕಿತ್ಸೆಗಾಗಿ ಹಂಬಲಿಸುತ್ತಿತ್ತು. ಪೂರಕವಾಗಿ ಅರಣ್ಯ ಇಲಾಖೆ ಕೂಡ ಕಾಡಾನೆಯನ್ನ ಭೀಮ ಎಂದು ಕರೆದು ಚಿಕಿತ್ಸೆ ನೀಡುತ್ತಿದ್ದರು. ಆದರೆ ಇವತ್ತು ಅಲ್ಲಿ ಅನಾಹುತವೇ ನಡೆದು ಹೊಗಿದೆ. ನಡೆದ ಅನಾಹುತಕ್ಕೆ ಹೊಣೆ ಯಾರು ಎಂಬುದಕ್ಕಿಂತ! ಭವಿಷ್ಯದಲ್ಲಿ ಇಂತಹ ಇನ್ನಷ್ಟು ಬಲಿಗಳನ್ನು ವ್ಯವಸ್ಥಿತ ವ್ಯವಸ್ಥೆಯು ತೆಗೆದುಕೊಳ್ಳದಿರಲಿ ಎಂದು ಆಶಿಸುತ್ತಲೇ ಈ ವರದಿ ಬಿತ್ತರಿಸುತ್ತಿದ್ದೇವೆ.. 

ಭೀಮನ ಆಪರೇಷನ್​ ಟ್ರೀಟ್ಮೆಂಟ್​ 

ಹಾಸನ ಜಿಲ್ಲೆ,  ಸಕಲೇಶಪುರದ ಆಲೂರು ಭಾಗದಲ್ಲಿ ಹಳ್ಳಿಯೂರು ಎಂಬ ಹಳ್ಳಿ. ಇನ್ನೊಂದು ಆನೆ ಜೊತೆ  ಫೈಟ್ ಮಾಡಿ, ಪೆಟ್ಟು ತಿಂದಿದ್ದ ಆನೆಯೊಂದು ಇಲ್ಲಿ ನರಳಾಡುತ್ತಾ ತಿರುಗಾಡುತ್ತಿತ್ತು. ಪೆಟ್ಟು ತಿಂದಿದ್ದರೂ ಆನೆ ಆನೆಯೇ.. ಹಾಗಾಗಿ ಆ ಭಾಗದ ಜನರಿಗೆ ಈ ಆನೆ ಆತಂಕ ಮೂಡಿಸಿತ್ತು. ಹೀಗಾಗಿ ಅರಣ್ಯ ಇಲಾಖೆಗೆ ದುಂಬಾಲು ಬಿದ್ದಿದ್ದರು. ಇನ್ನೊಂದೆಡೆ ಪೆಟ್ಟು ತಿಂದು, ನರಳುತ್ತಿದ್ದ ಆನೆಗೆ ಚಿಕಿತ್ಸೆ ಕೊಡಬೇಕಾದ ಹೊಣೆಗಾರಿಕೆಯು ಅರಣ್ಯ ಇಲಾಖೆಗೆ ಇತ್ತು. ಎರಡು ಮಾತುಗಳಿಗೆ ಪೂರಕವಾಗಿ ಮುಂದುವರಿದು, ಅರಣ್ಯ ಇಲಾಖೆ ಕಾಡಾನೆಯನ್ನು ಆಪರೇಷನ್​​ ಟ್ರೀಟ್ಮೆಂಟ್​ ಕಾರ್ಯಾಚರಣೆಗೆ ಒಳಪಡಿಸಿತ್ತು. 

ಹಾರಿ ಹೋಯ್ತು ಅಮೂಲ್ಯ ಜೀವ 

ಕಾಡಾನೆಗೆ ಟ್ರೀಟ್ಮೆಂಟ್ ಕೊಡುವುದು ಅಂದರೆ ಸುಮ್ಮನೆ ಮಾತಲ್ಲ. ಅದನ್ನ ಮತ್ತೇರಿಸಿ ನೆಲಕ್ಕೆ ಕೆಡವಬೇಕು. ಆನಂತರ ಚಿಕಿತ್ಸೆ ಕೊಟ್ಟು ಮತ್ತೆ ಮೇಲಕ್ಕೆಬ್ಬಿಸಬೇಕು. ಈ ಕಾರ್ಯಾಚರಣೆಯೇ ದುಸ್ಸಾಹಸದ ಕೆಲಸ. ಅದರಲ್ಲಿಯು ಕಾಡಾನೆಗೆ ನೆಲದ ಮೇಲಿಂದ ಡಾರ್ಟ್​ ಮಾಡುವುದು ಪ್ಯೂರಿಲಿ ಡೆಂಜರ್​ ಕೆಲಸ. ಅಂತಹದ್ದೊಂದು ಕೆಲಸಕ್ಕೆ ಇವತ್ತು ಶಾರ್ಪ್​ ಶೂಟರ್ ವೆಂಕಟೇಶ್​ ಕೈ ಹಾಕಿದ್ರು. ಹಳ್ಳಿಯೂರಿನಲ್ಲಿ ಹಳದ ನಡುವಿದ್ದ ಆನೆಯನ್ನ ಗುರಿಮಾಡಿ ಹತ್ತಿರದಿಂದ ವೆಂಕಟೇಶ್ ಡಾರ್ಟ್ ಮಾಡಿದ್ದಾರೆ. ಆದರೆ ಅಷ್ಟರಲ್ಲಿ ತಿರುಗಿಬಿದ್ದ ಆನೆ, ವೆಂಕಟೇಶ್​ರವರನ್ನ ಎಳೆದುಕೊಂಡು ಎದೆ ಮೇಲೆ ಕಾಲಿಟ್ಟಿದೆ. ಇಷ್ಟೆ… ಜಸ್ಟ್ ಸೆಕೆಂಡ್​ಗಳಲ್ಲಿ ನಡೆದ ಘಟನೆಯ ನಂತರ ವೆಂಕಟೇಶ್ ಬದುಕಿದ್ದು ಕೇಲವೇ ನಿಮಿಷಗಳಷ್ಟೆ.. ಅರಣ್ಯ ಸಿಬ್ಬಂದಿಯೆಲ್ಲಾ ಕೂಡಿಕೊಂಡು, ಜೀರೋ ಟ್ರಾಫಿಕ್​ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗಲೇ ವೆಂಕಟೇಶ್​ರವರ ಜೀವ ಹಾರಿಹೋಗಿತ್ತು.. 

ಆಲೂರು ತಾಲ್ಲೂಕಿನ, ಹೊನ್ನವಳ್ಳಿ ಗ್ರಾಮದವರು ಈ  ವೆಂಕಟೇಶ್, 1987 ರಲ್ಲಿ ಗುತ್ತಿಗೆ ಆಧಾರದ ಮೇಲೆ ಅರಣ್ಯ ಇಲಾಖೆಗೆ ಕೆಲಸಕ್ಕೆ ಸೇರಿದ್ದರು. 2019 ರವರೆಗೂ ಖಾಯಂ ಆಗಿರಲಿಲ್ಲ. ಆನಂತರ ಕೆಲಸದಿಂದ ಬಿಡುಗಡೆ ಆಗಿದ್ದರು. ಆಗಲೂ ಪರ್ಮನೆಂಟ್ ಆಗಿರಲಿಲ್ಲ. ಆದರೆ, ಅರಣ್ಯ ಇಲಾಖೆ ಇವರಿಂದ ಬೇಕಾದಷ್ಟು ಸಲ ಬೇಕಾದ ಹಾಗೆ ಕೆಲಸವನ್ನು ತೆಗೆದುಕೊಂಡಿದೆ. ಕಾಡು ಪ್ರಾಣಿ ಸಮಸ್ಯೆ ತಲೆದೋರಿದಾಗಲೆಲ್ಲಾ ವೆಂಕಟೇಶ್ ರವರೆ ಎಂದು ಅರಣ್ಯ ಇಲಾಖೆಯಿಂದ ಫೋನ್ ಬರುತ್ತಿತ್ತು. ಡಿಪಾರ್ಟ್​ಮೆಂಟ್​ನಿಂದ ಬಿಡುಗಡೆಯಾಗಿದ್ದರೂ ಸಹ  ವೆಂಕಟೇಶ್ ಫಾರೆಸ್ಟ್​ ಸಮವಸ್ತ್ರ ಮಾದರಿ ಬಟ್ಟೆ ತೊಟ್ಟು ಕಾರ್ಯಾಚರಣೆಗೆ ಅಣಿಯಾಗುತ್ತಿದ್ರು.  ಪ್ರತಿ ಕಾರ್ಯಾಚರಣೆ ವೇಳೆ ಡಾರ್ಟ್​ ಮಾಡಬಲ್ಲ ಶಾರ್ಪ್​ ಶೂಟರ್​ ಆಗಿದ್ದರು. ಅವರನ್ನ ಶಾರ್ಪ್​ ಶೂಟರ್​ ವೆಂಕಟೇಶ್‌ ಅಂತಲೇ ಕರೆಯಲಾಗ್ತಿತ್ತು. ಹುಲಿ, ಚಿರತೆ, ಕರಡಿ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ತಿದ್ದ  ವೆಂಕಟೇಶ್ ಇದುವರೆಗೂ  40 ಕ್ಕೂ ಹೆಚ್ಚು ಆನೆಗಳಿಗೆ ಡಾರ್ಟ್​ ಮಾಡಿದ್ದರು. 

ಯಾರು ಹೊಣೆ

ಅಸಲಿಗೆ ಆನೆಯೊಂದನ್ನ ನೆಲಕ್ಕೆ ಕೆಡವಬೇಕು ಎನ್ನುವುದಾದರೆ, ಅಥವಾ ವೈದ್ಯಕೀಯ ಭಾಷೆಯಲ್ಲಿ ಆನೆಯೊಂದನ್ನ ನಿರ್ದಿಷ್ಟ ಕಾರಣವೊಂದಕ್ಕೆ ಡಾರ್ಟ್ ಮಾಡಬೇಕು ಎಂತಾದರೆ, ಅದಕ್ಕೆ ಅದರದ್ದೆ ಆದ ರೀತಿ ರೀವಾಜುಗಳು ಇರುತ್ತವೆ. ಒಂದು ಆನೆಯನ್ನು ಪ್ರಜ್ಞೆ ತಪ್ಪಿಸುವಾಗ, ಸಾಕಾನೆಗಳನ್ನು ಸಹಾಯ ಪಡೆಯಬೇಕಾಗುತ್ತದೆ. ಸಾಕಾನೆಗಳ ಸಹಾಯವಿಲ್ಲದೆ, ಕಾರ್ಯಾಚರಣೆ ನಡೆಸುವುದು ಸಹ ಸರಿಯಲ್ಲ. ಮಿನಿಮಮ್ ಇಂತಿಷ್ಟು ಸಾಕಾನೆಗಳು ಇರಬೇಕು ಕಾರ್ಯಾಚರಣೆಯಲ್ಲಿ ಎಂಬ ನಿಯಮಗಳಿವೆ. ಅಲ್ಲದೆ,  ಕನಿಷ್ಟ ಇಬ್ಬರು ವೈದ್ಯರ ಉಸ್ತುವಾರಿಯಲ್ಲಿ ಕಾರ್ಯಾಚರಣೆ ನಡೆಸಬೇಕಾಗುತ್ತದೆ. ಆಯಾ ಸನ್ನಿವೇಶಕ್ಕೆ ತಕ್ಕಂತೆ ವೈಲ್ಡ್​ ಲೈಫ್​ ವೈದ್ಯರು, ಶಾರ್ಪ್​ ಶೂಟರ್​ಗಳು ಹಾಗೂ ನಿರ್ದಿಷ್ಟ ಸಂಖ್ಯೆ ಅರಣ್ಯ ಸಿಬ್ಬಂದಿ ಸ್ಪಷ್ಟ ಚಿತ್ರಣದೊಂದಿಗೆ ಕಾರ್ಯಾಚರಣೆ ನಡೆಸಬೇಕಾಗುತ್ತದೆ. ಸಾಮಾನ್ಯವಾಗಿ ಆನೆಯೊಂದಕ್ಕೆ ನೆಲದ ಮೇಲಿಂದಲೇ ಡಾರ್ಟ್​ ಮಾಡುವಂತಹ ಪ್ರಯತ್ನ ತೀರಾ ಅನಿವಾರ್ಯವಾಗಿದ್ದ ಸಂದರ್ಭದಲ್ಲಿ, ಎಲ್ಲಾ ಪ್ರಿಕಾಷನ್​ಗಳನ್ನು ತೆಗೆದುಕೊಂಡು ಕೈಗೊಳ್ಳಲಾಗುತ್ತದೆ. 

ಹಳ್ಳಿಯೂರಿನ ಸಮೀಪ ನಡೆಯುತ್ತಿದ್ದ ಕಾರ್ಯಾಚರಣೆಯಲ್ಲಿ ಡಾ.ವಾಸೀಮ್​, ಡಾ. ಮುಜೀಬ್​, ಶಾರ್ಪ್​ ಶೂಟರ್​ ಅಕ್ರಮ್​, ಹಾಗೂ ಶಾರ್ಪ್​ ಶೂಟರ್ ವೆಂಕಟೇಶ್​ ಪಾಲ್ಗೊಂಡಿದ್ದರು. ಆದರೆ ಇವತ್ತು ನಡೆದ ಘಟನೆ ವೇಳೆ ಸಾಕಾನೆಗಳ ಸಹಾಯವನ್ನೆ ಪಡೆದಿಲ್ಲ ಎಂಬುದು ಸ್ಪಷ್ಟವಾಗಿದೆ. ಅಲ್ಲದೆ, ನಿಯಮಾವಳಿಗಳನ್ನು ಪಾಲಿಸದೇ ಆತುರವಾಗಿ ಕಾರ್ಯಾಚರಣೆ ಕೈಗೊಂಡಿರುವ ಸಾಧ್ಯತೆ ಇದೆ ಎನ್ನುತ್ತಾರೆ ವೈಲ್ಡ್​ ಟಸ್ಕರ್​ ಸಕ್ರೆಬೈಲ್​ನ ಮುಖ್ಯಸ್ಥ ಜೇಸುದಾಸ್ ಪಿ. ಅವರು ಹೇಳುವಂತೆ ಈ ಹಿಂದೇ ದಾವಣಗೆರೆಯ ಸೂಳೆಕೆರೆ ಸಮೀಪ ಆನೆಯೊಂದು ವಿಪರೀತ ಕಾಟ ಕೊಡುತ್ತಿತ್ತು. ಮೇಲಾಗಿ ಒಬ್ಬರನ್ನು ಕೊಂದು ನರಹಂತಕ ಎನಿಸಿಕೊಂಡಿತ್ತು. 

ಅಂತಹ ಆನೆಯನ್ನು ಹಿಡಿಯಲು ನಡೆಯುತ್ತಿದ್ದ ಕಾರ್ಯಾಚರಣೆ ವೇಳೆ ಡಾರ್ಟ್ ಮಾಡುತ್ತಿದ್ದ ವೈಲ್ಡ್ ಲೈಫ್​ ಡಾಕ್ಟರ್ ವಿನಯ್​ರವರ ಮೇಲೆ ಆನೆ ದಾಳಿ ನಡೆಸಿತ್ತು. ಆಗಲೂ ಸಹ ಸಾಕಾನೆಗಳ ಸಮರ್ಪಕ ನೆರವನ್ನು ವೈದ್ಯರ ಬೇಡಿಕೆಗೆ ತಕ್ಕಂತೆ ನೀಡಿರಲಿಲ್ಲ. ಆನೆ ಕಾರ್ಯಾಚರಣೆ ವೇಳೆ ಸಾಕಾನೆಗಳು ಇದ್ದ ಪಕ್ಷದಲ್ಲಿ, ಅವುಗಳು ಎಂತಹ ಬಲಿಷ್ಟ ಆನೆಗಳ ದಾಳಿಯನ್ನು ಕ್ಷಣಮಾತ್ರಕ್ಕಾದರೂ ಹಿಮ್ಮೆಟ್ಟಿಸುತ್ತವೆ. ಅಂತಹ ರಕ್ಷಣಾತ್ಮಕ ಕ್ರಮವಿಲ್ಲದ ಕಾರಣಕ್ಕೆ ದಾವಣಗೆರೆಯಲ್ಲಿ ಡಾ.ವಿನಯ್​ ಮೇಲೆ ಆನೆ ದಾಳಿ ನಡೆಸಿತ್ತು. ಅಂದಿನ ಘಟನೆಯಿಂದ ಎಚ್ಚೆತ್ತುಕೊಳ್ಳದ ಕಾರಣಕ್ಕೆ ಇವತ್ತು ಶಾರ್ಪ್​ ಶೂಟರ್​ ವೆಂಕಟೇಶ್​ ಎಂಬ ಅಮೂಲ್ಯ ವ್ಯಕ್ತಿಯನ್ನು ಕಳೆದುಕೊಳ್ಳಬೇಕಾಗಿದೆ ಎನ್ನುತ್ತಾರೆ. 

ಒಟ್ಟಾರೆ, ದಾವಣಗೆರೆಯಲ್ಲಿ ಸಂಭವಿಸಿದ ಸನ್ನಿವೇಶವೇ ಹಾಸನದಲ್ಲಿ  ಮರುಕಳಿಸಿತ್ತು. ಡಾ. ವಿನಯ್ ಬಚಾವ್ ಆದರೆ, ಶಾರ್ಪ್​ ಶೂಟರ್​ ವೆಂಕಟೇಶ್ ಎಲ್ಲರನ್ನು ಅಗಲಿ ಹೊರಟಿದ್ದಾರೆ. ಅವರ ಸೇವೆಗೆ  ಇಡೀ ಇಲಾಖೆ ಹಾಗೂ ಸರ್ಕಾರ ಗೌರವ ಸಲ್ಲಿಸಬೇಕಿದೆ. ಪರಿಹಾರ ನೀಡಬೇಕಿದೆ. ಹಾಗೆಯೇ ಅವರ ಸಾವಿಗೆ ವ್ಯವಸ್ಥೆಯ ತಿದ್ದುಪಡಿಯ ನ್ಯಾಯ ಒದಗಿಸಬೇಕಿದೆ.  


ಇನ್ನಷ್ಟು ಸುದ್ದಿಗಳು