Monkey disease | KFD : ಇದೇ ಮೊದಲ ಭಾರಿ, ಮಂಗನ ಕಾಯಿಲೆ ಗೆ ಒನ್​ ಹೆಲ್ತ್​​ ಪ್ರಾಜೆಕ್ಟ್ ಜಾರಿ! ? ​JP EXClUSIVE

Monkey disease | KFD: For the first time, one health project for monkey disease has been implemented!

Monkey disease | KFD : ಇದೇ ಮೊದಲ ಭಾರಿ, ಮಂಗನ ಕಾಯಿಲೆ ಗೆ ಒನ್​ ಹೆಲ್ತ್​​ ಪ್ರಾಜೆಕ್ಟ್ ಜಾರಿ!  ? ​JP EXClUSIVE
Monkey disease | KFD: For the first time, one health project for monkey disease has been implemented!

Monkey disease | KFD : ಇದೇ ಮೊದಲ ಭಾರಿ, ಮಂಗನ ಕಾಯಿಲೆಗೆ ಒನ್​ ಹೆಲ್ತ್​​ ಪ್ರಾಜೆಕ್ಟ್ ಜಾರಿ! ಅರಣ್ಯ, ಆರೋಗ್ಯ ಮತ್ತು ಪಶುಸಂಗೋಪನಾ ಇಲಾಖೆಯಿಂದ ಜಂಟಿ ಸಂಶೋಧನೆ! ಏನಿದು ಪ್ರಾಜೆಕ್ಟ್? ಕೆಎಫ್​ಡಿ ಯಿಂದ ಮಲೆನಾಡಿಗೆ ಸಿಗುತ್ತಾ ಮುಕ್ತಿ!? ​

ಮಲೆನಾಡಿಗೆ ಹಿಡಿದ ಶನಿಯಂತೆ ವರ್ಷಗಳಿಂದ ಕಾಡುತ್ತಿರುವ ಕಾಡಿನ ಕಾಯಿಲೆ ಮಂಗನ ಕಾಯಿಲೆ. ಈ ಸಲ ಈ ಊರು ಮುಂದಿನ ಸಲ ಮುಂದಿನ ಊರು. ಹೀಗೆ ಒಂದೊಂದು ಊರಿನಲ್ಲಿ ದುತ್ತೆಂದು ಬೇಸಿಗೆ ರಣರಣಿಸುತ್ತಿರುವಾಗಲೇ ಕಾಣಿಸಿಕೊಳ್ಳುವ ನಿಷ್ಕರುಣೆಯ ಕಾಯಿಲೆ ಎಂದರೇ ಕ್ಯಾಸನೂರು ಫಾರೆಸ್ಟ್ ಡಿಸೀಸ್​..

ಮಂಗನ ಸಾವು ಹಾಗೂ ಕಾಯಿಲೆ

ಮಂಗನ ಕಾಯಿಲೆ ಅನ್ನುವುದು ಮನುಷ್ಯನಿಂದ ಮನುಷ್ಯನಿಗೆ ಹರಡುವ ಅಂಟು ಜಾಡ್ಯವಲ್ಲ. ಇದು ಪ್ರಾಣಿಗಳಿಂದ ಬರುವಂತದ್ದು. ಅಂದರೆ, ಪ್ರಾಣಿಗಳು ಈ ಕಾಯಿಲೆಯ ವೈರಸ್​ನ ವಾಹಕಗಳಾಗಿ ಕೆಲಸ ಮಾಡುತ್ತವೆ. ಸಾಮಾನ್ಯವಾಗಿ ಕಾಡಿನಲ್ಲಿ ಜ್ವರದಿಂದ ಬಳಲುತ್ತಾ ಮಂಗಗಳು ಸಾಯುತ್ತವೆ. ಹೀಗೆ ಸಾಯಲು ಆರಂಭಿಸಿದವು ಎಂದರೇ ಮಂಗನ ಕಾಯಿಲೆ ಮನುಷ್ಯನಿಗೂ ಅಂಟುವ ಸೂಚನೆ ಎಂದರ್ಥ. ಕಣ್ಣಿಗೆ ಕಾಣುವಂತ ಮಂಗನ ಮೃತದೇಹವನ್ನು ಸುಡಬಹುದು. ಆದರೆ ಕಾಡಿನಲ್ಲಿ ಸತ್ತ ಮಂಗಗಳ ವಿಚಾರವೇ ಗೊತ್ತಾಗುವುದಿಲ್ಲ. ಅಂತಹ ಮಂಗಗಳ ಮೇಲೆ ಕುಳಿತ ಉಣುಗು ಮನುಷ್ಯನನ್ನ ಕಚ್ಚಿದರೇ, ಅದರಿಂದ ಜ್ವರ ಹರಡುತ್ತದೆ.

ಇದುವರೆಗೂ ಮಲೆನಾಡಿಗರಿಗೆ ಅರ್ಥವಾಗಿದ್ದೇನು?

ಬೇಸಿಗೆಯಲ್ಲಿ ಏನೋ ಕಾಯಿಲೆ ಬಂದು ಮಂಗಗಳು ಇದ್ದಕ್ಕಿದ್ದಂತೆ ಸಾಯಲು ಆರಂಭಿಸುತ್ತವೆ. ಅವುಗಳ ಮೇಲೆ ಉಣುಗು ಕುಳಿತಿದ್ದು, ಅವುಗಳು ಮಂಗನ ಕಾಯಿಲೆಯನ್ನು ಪಸರಿಸುವ ವೈರಸ್​ನ್ನು ಹೊತ್ತು ತರುತ್ತವೆ. ಕಾಡಿಗೆ ಹೋಗಿ ಬಂದು ಮಾಡುವಾಗ, ತೋಟದಲ್ಲಿ ಕೆಲಸ ಮಾಡುವಾಗ ಉಣುಗು ಕಚ್ಚುತ್ತೆ. ಅದರಿಂದ ಕಾಯಿಲೆ ಬರುತ್ತದೆ. ಬಂದರೆ, ಸಾವು ಸಹ ಸಂಭವಿಸಬಹುದು. ಮನಸ್ಸು ಗಟ್ಟಿ ಮಾಡಿ ಚಿಕಿತ್ಸೆ ಪಡೆದು ಪಪ್ಪಾಯಿ ಸೊಪ್ಪಿನ ರಸವನ್ನೋ! ಚೌಳಿ ಆಹಾರವನ್ನು ಸೇವಿಸಿ ಚೇತರಿಸಿಕೊಳ್ಳಬಹುದು. ಅಥವಾ ಸರ್ಕಾರದ ಬೂಸ್ಟರ್​ ಡೋಸ್​ಗಳನ್ನ ತೆಗೆದುಕೊಂಡು, ಡಿಎಂಪಿ ಆಯಿಲ್ ಸವರಿಕೊಂಡು ಮುನ್ನೆಚ್ಚರಿಕೆ ವಹಿಸಿಬಹುದು. ಇದಿಷ್ಟು ಮಲೆನಾಡಿಗೆ ಅರ್ಥವಾಗಿರುವ ಸಂಗತಿ.

ಇನ್ನೂ ನಿಗೂಢವಾಗಿರುವ ವಿಷಯವೇನು?

ಕಾಡಿನಲ್ಲಿ ಮಂಗಗಳು ಇದ್ದಕ್ಕಿದ್ದ ಹಾಗೆ ಸಾಯುವುದೇಕೆ? ಅವುಗಳಿಗೆ ವೈರಸ್​ ಎಲ್ಲಿಂದ ವಿಲೇವಾರಿ ಆಗುತ್ತಿದೆ! ಮಂಗಗಳಂತೆಯೇ ಬೇರೆ ಪ್ರಾಣಿಗಳು ಈ ವೈರಸ್​ನ ವಾಹಕಗಳಾಗಿವೆಯೇ? ಜ್ವರ ಬಂದು ಗರ ಬಡಿದು ಕುಳಿತಂತೆ ಕುಳಿತುಕೊಳ್ಳುವ ಮಂಗ ಅಲ್ಲಿಯೇ ಸಾಯುತ್ತದೆ. ಉಳಿದ ಮಂಗಗಳು ಪಪ್ಪಾಯಿ ಸೊಪ್ಪು ತಿನ್ನುತ್ತಾ ಆ ಜಾಗವನ್ನೆ ಬಿಟ್ಟು ಗುಳೆ ಹೋಗುತ್ತವೆ. ಅವುಗಳಿಗೆ ಆ ಸಂದರ್ಭದಲ್ಲಿ ತಿಳಿವ ಸತ್ಯಗಳೇನು? ಒಂದು ಊರಿನಲ್ಲಿ ಕಾಡುವ ಕಾಯಿಲೆ ಪಕ್ಕದ ಊರಿನಲ್ಲಿ ಸದ್ದು ಮಾಡುವುದಿಲ್ಲವೇಕೆ? ಮಂಗ ಸತ್ತಲ್ಲಿ ಮಾತ್ರ ಈ ಕಾಯಿಲೆ ಕಾಣಿಸಿಕೊಳ್ಳುವ ಪರಿಣಾಮ ಜಾಸ್ತಿ ಏಕೆ? ಹೀಗೆ ಹಲವಾರು ಪ್ರಶ್ನೆಗಳು ಇನ್ನೂ ಉತ್ತರ ಸಿಗಬೇಕಿದೆ. ಇದಕ್ಕೆಲ್ಲಾ ಉತ್ತರ ಹುಡಕುಲು ಕೇಂದ್ರ ಸರ್ಕಾರ ಮನಸ್ಸು ಮಾಡಿದೆ.

ಝೂನೋಟಿಕ್​ ಕಾಯಿಲೆಗೆ ಸಿಗುತ್ತಾ ಮದ್ದು!?

ಇದಕ್ಕಾಗಿ ಮೊದಲ ಬಾರಿಗೆ ಕರ್ನಾಟಕ ರಾಜ್ಯಕ್ಕೆ ಒನ್ ಹೆಲ್ತ್ ಪ್ರಾಜೆಕ್ಟ್ ಜಾರಿಗೆ ತಂದಿದೆ. ಝೂನೋಟಿಕ್ ಫಾರೆಸ್ಟ್ ಡಿಸೀಸ್ ಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಯೋಗಿಕ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ ! ಅರಣ್ಯ ಪಶುಸಂಗೋಪನಾ ಹಾಗು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಒನ್ ಪ್ಲಸ್ ಯೋಜನೆಯನ್ನು ಜಾರಿಗೆ ತಂದಿದೆ.

ರಾಜ್ಯದಲ್ಲಿ ಅಂಥ್ರಾಕ್ಸ್​, ಬ್ರುಸಿಲೋಸಿಸ್ ಮತ್ತು ಕೆ.ಎಫ್.ಡಿ ರೋಗ ತಡೆಗೆ ಪ್ರಾಯೋಗಿಕ ಯೋಜನೆ ಜಾರಿಗೆ ತಂದಿದೆ. ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಹೆಚ್ಚು ಕಂಡು ಬರುವ ಅಂಥ್ರಾಕ್ಸ್ ರೋಗ ,ಕೊಪ್ಪಳ ಭಾಗದಲ್ಲಿ ಹೆಚ್ಚಿರುವ ಬ್ರುಸಿಲೋಸಿಸ್ ಹಾಗು ಮಲೆನಾಡಿನಲ್ಲಿರುವ ಮಂಗನ ಕಾಯಿಲೆ ಬಗ್ಗೆ ಹೆಚ್ಚಿನ ಅಧ್ಯಯನ ಮತ್ತು ಸಂಶೋಧನೆ ನಡೆಯಲಿದೆ.

ಈಗಾಗಲೇ ಜಾರ್ಖಂಡ್ ಉತ್ತರಾಖಂಡ್​​ನಲ್ಲಿ ಜಾರಿ ಇರುವ ಈ ಪ್ರಾಯೋಗಿಕ ಯೋಜನೆ, ಇದೀಗ ಕರ್ನಾಟಕ ರಾಜ್ಯದಲ್ಲಿ ಜಾರಿಯಾಗಿದೆ. ಮುಖ್ಯವಾಗಿ ಕಾಡುಪ್ರಾಣಿಗಳಿಂದ ಹರಡುವ ರೋಗಗಳ ನಿಯಂತ್ರಣಕ್ಕೆ ಒನ್ ಪ್ಲಸ್ ಯೋಜನೆ ಸಹಕಾರಿಯಾಗಿದೆ.

ವೈರಸ್ ಬ್ಯಾಕ್ಟೀರಿಯ ಶಿಲೀಂದ್ರಗಳಂತಹ ಸೂಕ್ಷ್ಮ ಜೀವಿಗಳಿಂದ ಝೂನೋಟಿಕ್ ಕಾಯಿಲೆಗಳು ಹರಡುತ್ತದೆ. ಈ ಕಾಯಿಲೆಗಳು ಪ್ರಾಣಿಗಳು ಹಾಗು ಮಾನವರಲ್ಲಿ ಕಾಣಿಸಿಕೊಳ್ಳುತ್ತದೆ. ಮಾರಣಾಂತಿಕ ಸೂಕ್ಷ್ಮ ವೈರಾಣುಗಳಿಗೆ ಪ್ರಾಣಿಗಳೇ ಮಾಧ್ಯಮವಾಗಿದ್ದು, ಇಂದಿನ ಸಾಕಷ್ಟು ರೋಗಗಳು ಪ್ರಾಣಿ ಗಳಿಂದಲೇ ಹರಡುತ್ತಿದೆ.

ಮಲೆನಾಡಿನ ಕಾಡಿನ ರೋಗವೆಂದು ಪರಿಗಣಿಸಲ್ಪಟ್ಟಿರುವುದು ಮಂಗನ ಕಾಯಿಲೆ.

ಕೆ.ಎಫ್.ಡಿ ರೋಗ ಶಮನಕ್ಕೆ ಒನ್ ಪ್ಲಸ್ ಯೋಜನೆಯಲ್ಲಿ ಮಂಗನ ಕಾಯಿಲೆ ರೋಗದ ಬಗ್ಗೆ ಸಂಶೋಧನೆ ಮತ್ತು ಅಧ್ಯಯನ ನಡೆಸಲು ಯೋಜನೆ ಜಾರಿಗೊಳಿಸಿದೆ. ಈ ಒನ್ ಪ್ಲಸ್ ಯೋಜನೆಯಲ್ಲಿ ಪಶುಸಂಗೋಪನಾ ಇಲಾಖೆ, ಆರೋಗ್ಯ ಇಲಾಖೆ ಮತ್ತು ಅರಣ್ಯ ಇಲಾಖೆ ಗಳ ವೈದ್ಯರು ಕೆ.ಎಪ್.ಡಿ ಬಗ್ಗೆ ಒಟ್ಟಿಗೆ ಕರ್ತವ್ಯ ನಿರ್ವಹಿಸಲಿದ್ದಾರೆ.

ಯೋಜನೆ ಜಾರಿಯಾದಾಗಿನಿಂದ ಕೇಂದ್ರ ತಜ್ಞರ ತಂಡ, ಮಂಗನ ಕಾಯಿಲೆಯ ಬಗ್ಗೆ ವಿಶೇಷವಾಗಿ ಅಧ್ಯಯನ ನಡೆಸುತ್ತದೆ. ನಿರಂತವಾಗಿ ನಡೆಯುವ ಈ ಅಧ್ಯಯನದಲ್ಲಿ ಮೂರು ಇಲಾಖೆಗಳು ಕೈಗೊಳ್ಳಬೇಕಾದ ಕೆಲಸಗಳು ಹಾಗೂ ಅದರ ನಿರ್ವಹಣೆ ಮತ್ತು ಪಡೆದುಕೊಳ್ಳಬೇಕಾದ ಫಲಿತಾಂಶ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿರ್ಮಾನಿಸುತ್ತಾ ಮುಂದಕ್ಕೆ ಸಾಗುತ್ತದೆ.

ಮಲೆನಾಡಿನಲ್ಲಿ ನಡೆಯಲಿದೆ ಅಧ್ಯಯನ

ಮಲೆನಾಡಿನಲ್ಲಿ ಮಂಗನ ಕಾಯಿಲೆಯಿಂದ ತೀವ್ರವಾಗಿ ಬಳಲಿದ ಪ್ರದೇಶಗಳು, ಜಾನುವಾರುಗಳು ಇದರಿಂದ ಬಚಾವ್ ಆಗುತ್ತಿರುವ ರೀತಿ. ಕಾಯಿಲೆಯ ಮೂಲ ಇತ್ಯಾದಿ ವಿಚಾರಗಳ ಬಗ್ಗೆ ಅಧ್ಯಯನ ನಡೆಸಲಿರುವ ವೈದ್ಯಕೀಯ ತಂಡ, ಮುಂಬರುವ ಪ್ರಮುಖ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಅಧ್ಯಯನ ನಡೆಸಲಿದೆ.

ಇದಕ್ಕೆ ಪೂರಕವಾಗಿ ಕಳೆದ ಜೂನ್​ 28 ರಂದು ಬೆಂಗಳೂರಿನಲ್ಲಿ ಕರ್ನಾಟಕದಲ್ಲಿ ಒನ್​ ಹೆಲ್ತ್​ ಯೋಜನೆಯ ವಿದ್ಯುಕ್ತವಾಗಿ ಚಾಲನೆಯಾಯಿತು. ಕೇಂದ್ರ ಸರ್ಕಾರದ ಅತುಲ್​ ಚುತುರ್ವೇದಿ, ಸೆಕ್ರೆಟರಿ (ಎಹೆಚ್​ಡಿ) ಅವರ ಅಧ್ಯಕ್ಷತೆಯಲ್ಲಿ ಯೋಜನೆಯನ್ನು ಜಾರಿಗೆ ತರಲಾಯಿತು.

ಅರಳಗೋಡು ಮತ್ತು ಕೀಗಡಿಗೆ ಭೇಟಿ

ಈ ಸಂಬಂಧ ಮೊದಲ ಹಂತದಲ್ಲಿ ವೈದ್ಯರ ಸಭೆಯು ಸಹ ನಡೆದಿದ್ದು ಬೆಂಗಳೂರಿನ ಪೆಥಾಲಾಜಿಸ್ಟ್ ಡಾಕ್ಟರ್ ಪ್ರಕಾಶ್ ನೇತೃತ್ವದಲ್ಲಿ ತಂಡವೊಂದು ಶಿವಮೊಗ್ಗದ ಪ್ರಮುಖ ಎರಡು ಪ್ರದೇಶಗಳನ್ನು ವಿಸಿಟ್​ ಮಾಡಿ ಅಧ್ಯಯನ ಆರಂಭಿಸಿದೆ. ಕಳೆದ ಜುಲೈ 27 ಮತ್ತು 28 ರಂದು ಡಾ. ಪ್ರಕಾಶ್ ಹಾಗೂ ಡಾ. ಚೇತನ್​ ಮತ್ತು ವನ್ಯಜೀವಿ ವಿಭಾಗದ ಮುಖ್ಯ ಪಶುವೈದ್ಯಕೀಯ ಅಧಿಕಾರಿ ಡಾ.ವಿನಯ್​ ರವರ ತಂಡ ಕೀಗಡಿ ಹಾಗೂ ಅರಳಗೋಡು ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿಯ ಜನರನ್ನು ಭೇಟಿ ಮಾಡಿದ್ದಾರೆ.

ಮುಂದಿನ ದಿನಗಳಲ್ಲಿ ಮಲೆನಾಡಿಗರಿಗೆ ಸಿಗುತ್ತಾ ವೈದ್ಯಕೀಯ ಶಕ್ತಿ

ಈ ವೇಳೆ, ಕಾಯಿಲೆ ಭಾದಿಸಿದ ರೀತಿ, ಜನರು ಕಾಯಿಲೆಯಿಂದ ಅನುಭವಿಸಿದ ಯಾತನೆ ಮತ್ತು ಅದರಿಂದ ಗುಣಮುಖರಾದ ಬಗೆ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿದ್ದ ವಾತಾವರಣ, ನಡೆದ ಘಟನೆಗಳು, ಮಂಗಗಳು ಆ ಸಂದರ್ಭದಲ್ಲಿ ವರ್ತಿಸುತ್ತಿದ್ದ ರೀತಿ ಇತ್ಯಾದಿ ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಪ್ರಾಸ್ತಾವಿಕವಾಗಿ ಅಧ್ಯಯನ ಆರಂಭಿಸಿರುವ ತಂಡ, ಮುಂದಿನ ಹಂತಗಳಲ್ಲಿ ವಿವಿಧ ಟೀಂಗಳಾಗಿ ಮಲೆನಾಡಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಲಿದೆ. ಅಲ್ಲದೆ, ಕಾಯಿಲೆ ಪತ್ತೆ, ಚಿಕಿತ್ಸೆ ಹಾಗೂ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳುವ ಮುನ್ನೆಚ್ಚರಿಕೆ ಮತ್ತು ನಿಖರ ಔಷಧಿ ಪತ್ತೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ಅಧ್ಯಯನ ನಡೆಸಲಿದೆ. ಮಲೆನಾಡಿಗ ಪಾಲಿಗೆ ಇದೊಂದು ಗುಡ್ ನ್ಯೂಸ್ ಆಗಿದೆ. ಒಟ್ಟಾರೆ, ಈ ಒನ್ ಪ್ಲಸ್ ಹತ್ತು ವರ್ಷಗಳ ಯೋಜನೆಯಾಗಿದೆ. ಈ ಯೋಜನೆಯಿಂದಾದರೂ, ಮಲೆನಾಡಿನ ಜ್ವಲಂತ ಕಾಯಿಲೆಗೆ ಮುಕ್ತಿ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಕಾಡಂಚಿನ ಜನರಿದ್ದಾರೆ.

Monkey disease | KFD : ಇದೇ ಮೊದಲ ಭಾರಿ, ಮಂಗನ ಕಾಯಿಲೆ ಗೆ ಒನ್​ ಹೆಲ್ತ್​​ ಪ್ರಾಜೆಕ್ಟ್ ಜಾರಿ! ಅರಣ್ಯ, ಆರೋಗ್ಯ ಮತ್ತು ಪಶುಸಂಗೋಪನಾ ಇಲಾಖೆಯಿಂದ ಜಂಟಿ ಸಂಶೋಧನೆ! ಏನಿದು ಪ್ರಾಜೆಕ್ಟ್? ಕೆಎಫ್​ಡಿ ಯಿಂದ ಮಲೆನಾಡಿಗೆ ಸಿಗುತ್ತಾ ಮುಕ್ತಿ!? ​JP EXClUSIVE