ಶಿವಮೊಗ್ಗ ಚುನಾವಣೆ | ಗೀತಾ ಶಿವರಾಜಕುಮಾರ್‌ ಗೆಲ್ಲೋದಕ್ಕೆ ಪ್ಲಸ್‌ & ಮೈನಸ್‌ ಏನು? ಹೇಗಿದೆ ಲೆಕ್ಕಾಚಾರ

Shimoga election What are the pluses and minuses of Geetha Sivarajkumar winning? Calculate Today

ಶಿವಮೊಗ್ಗ ಚುನಾವಣೆ | ಗೀತಾ ಶಿವರಾಜಕುಮಾರ್‌ ಗೆಲ್ಲೋದಕ್ಕೆ ಪ್ಲಸ್‌ & ಮೈನಸ್‌ ಏನು?  ಹೇಗಿದೆ ಲೆಕ್ಕಾಚಾರ
pluses and minuses of Geetha Sivarajkumar

SHIVAMOGGA | MALENADUTODAY NEWS | Apr 24, 2024    

 

ಶಿವಮೊಗ್ಗ ಲೋಕಸಭಾ ಚುನಾವಣಾ ಅಖಾಡದಲ್ಲಿ  ಎರಡನೇ ಸಲ ಅದೃಷ್ಟಪರೀಕ್ಷೆ ಇಳಿದಿರುವ ಗೀತಾ ಶಿವರಾಜ್‌ ಕುಮಾರ್‌ರವರಿಗೆ ಈ ಸಲ ಬ್ಯಾಲೆಟ್‌ ಪೇಪರ್‌ನಲ್ಲಿ ಕ್ರಮಸಂಖ್ಯೆ ಒಂದು ಸಿಕ್ಕಿದೆ. ಸಂಖ್ಯೆ ಸಿಕ್ಕ ರೀತಿಯಲ್ಲಿ ಗೆಲುವು ಕೂಡ ಅವರಿಗೆ ಸಿಗುತ್ತಾ? ಈ ನಿಟ್ಟಿನಲ್ಲಿ ಪ್ಲಸ್‌ ಹಾಗೂ ಮೈನಸ್‌ ಪಾಯಿಂಟ್‌ಗಳು ಏನು ಎಂಬುದನ್ನ ಗಮನಿಸುವುದಾದರೆ, ಗೀತಾ ಶಿವರಾಜ್‌ ಕುಮಾರ್‌ ಶಿವಮೊಗ್ಗಕ್ಕೆ ಹೊಸಬರೇನಲ್ಲ. ಬಂಗಾರಪ್ಪರವರ ಪುತ್ರಿ ಎಂಬುದು ಅವರಿಗಿರುವ ದೊಡ್ಡ ಹಿನ್ನೆಲೆ. ಇನ್ನೂ ಇದು ಅವರು ಎದುರಿಸುತ್ತಿರುವ ಎರಡನೇ ಚುನಾವಣೆ. ಜೊತೆಗೆ ಸಹೋದರ ಮಧುಬಂಗಾರಪ್ಪರ ಬೆಂಬಲ, ಪತಿ ಶಿವರಾಜ್‌ ಕುಮಾರ್‌ ರವರ ಸಹಕಾರ ಎರಡನ್ನು ತಮ್ಮ ಬಲವನ್ನಾಗಿಸಿಕೊಂಡು ಕಣಕ್ಕಿಳಿದಿರುವ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌. 

ಹಾಗಿದ್ರೂ ಪವರ್‌ ಸೆಂಟರ್‌ ಶಿವಮೊಗ್ಗದಲ್ಲಿ ಗೆಲುವಿನ ಅದೃಷ್ಟ ಲಕ್ಷ್ಮೀಯನ್ನು ಒಲಿಸಿಕೊಳ್ಳುವುದು ಸುಲಭದ ಮಾತಲ್ಲ. ಏಷ್ಟೆ ದೊಡ್ಡವರಾದರೂ, ಈ ಬಿಸಿಲ ದಗೆಯ ನಡುವೆ ಸುಡು ಮಣ್ಣನ್ನ ಮೆಟ್ಟಿಕೊಂಡು ಬರಿಗಾಲಲ್ಲಿಯೇ ಸುತ್ತಾಡಬೇಕು. ರಾಜಕಾರಣದ ಒಳಗುಟ್ಟು, ಒಳಪೆಟ್ಟುಗಳನ್ನ ಅರಿಯಬೇಕು, ಅದರಂತೆ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಗೀತಾ ಶಿವರಾಜಕುಮಾರ್‌ ಎಚ್ಚರಿಕೆಯ ಹೆಜ್ಜೆಗಳನ್ನ ಇಡುತ್ತಿದದ್ದಾರೆ. ಮೌನ ಬಂಗಾರ, ಮಾತು ಬೆಳ್ಳಿಯಂತೆ ಎಂಬ ರೀತಿಯಲ್ಲಿ ಮಾತನಾಡುತ್ತಿರುವ ಅವರು ಟೀಕಾ ರಾಜಕಾರಣಕ್ಕೆ ಮುಂದಾಗಿಲ್ಲ. ಆ ಕೆಲಸದ ಜವಾಬ್ದಾರಿಯನ್ನ ಮಧು ಬಂಗಾರಪ್ಪರವರೇ ಪೂರ್ಣ ಸ್ವರೂಪದಲ್ಲಿ ಹೊತ್ತುಕೊಂಡಿದ್ದಾರೆ. 

ಇನ್ನೂ ಚುನಾವಣಾ ಮೂಡ್‌ನ ದೃಷ್ಟಿಯಲ್ಲಿ ನೋಡುವುದಾದರೆ, ಗೀತಾ ಶಿವರಾಜ್‌ ಕುಮಾರ್‌ರವರಿಗೆ ಈ ಸಲ ಇರುವ ಪ್ಲಸ್‌ ಪಾಯಿಂಟ್‌ಗಳು ಅಂದರೆ, ಕಾಂಗ್ರೆಸ್‌ನ ಮೊದಲ ಟ್ರಂಪ್‌ ಕಾರ್ಡ್‌ ಗ್ಯಾರಂಟಿ ಯೋಜನೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ  ಗ್ಯಾರಂಟಿ ಆಶ್ವಾಸನೆಗಳ ಮೂಲಕವೇ ದಿಗ್ವಿಜಯ ಸಾಧಿಸಿದ ಕಾಂಗ್ರೆಸ್‌ ಆಶ್ವಾಸನೆಗಳನ್ನ ಈಡೇರಿಸಿ ನುಡಿದಂತೆ ನಡೆದಿದ್ದೇವೆ ಎಂಬ ಘೋಷವಾಕ್ಯದೊಂದಿಗೆ ಸಂಸತ್‌ ಚುನಾವಣಾ ಅಖಾಡಕ್ಕೆ ಇಳಿದಿದೆ.  ಸಾಮಾನ್ಯವಾಗಿ ಚುನಾವಣೆಗಳಲ್ಲಿ ಮಹಿಳೆಯರ ಮನದಾಳದಲ್ಲಿ ಯಾವ ಪಕ್ಷವಿರುತ್ತದೆ ಎಂದು ಅರಿಯುವುದು ಕಷ್ಟ. ಹಾಗಾಗಿ ವೋಟಿಂಗ್‌ನಲ್ಲಿ ಇವರೇ ಡಿಸೈಡಿಂಗ್‌ ಫ್ಯಾಕ್ಟರ್‌ ಆಗಿರುತ್ತಾರೆ. ಈ ಗೃಹಲಕ್ಷ್ಮೀಯರ ಒಲವು ತಮ್ಮ ಕಡೆಯಿದೆ ಎಂಬುದು ಕಾಂಗ್ರೆಸ್‌ನ ಲೆಕ್ಕಾಚಾರ. ಆದ ಕಾರಣಕ್ಕೆ ಗೀತಾ ಶಿವರಾಜ್‌ ಕುಮಾರ್‌ ಪ್ರಯತ್ನಕ್ಕೆ  ಗ್ಯಾರಂಟಿ ಮೊದಲ ಪ್ಲಸ್‌ ಪಾಯಿಂಟ್ಸ್‌ ಆಗುತ್ತದೆ. 

ಗೀತಾ ಶಿವರಾಜ್ ಕುಮಾರ್ ಪ್ಸಸ್ ಪಾಯಿಂಟ್

  • ಗೀತಾ ಶಿವರಾಜ್ ಕುಮಾರ್ ಕಾಂಗ್ರೇಸ್ ಗ್ಯಾರಂಟಿ ಯೋಜನೆಗಳು
  • ಜಿಲ್ಲೆ ಪ್ರಬಲ ಈಡಿಗ ಸಮುದಾಯದ ಮತಗಳನ್ನು ಹೊಂದಿರುವುದು
  • ಸಹೋದರ  ಉಸ್ತುವಾರಿ ಸಚಿವ ಮದು ಬಂಗಾರಪ್ಪ ತಂತ್ರಗಾರಿಕೆ
  • ಬೈಂದೂರು ಸೇರಿದಂತೆ ನಾಲ್ಕು  ಕಾಂಗ್ರೆಸ್ ಶಾಸಕರ ಬೆಂಬಲ
  • ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್‌ ಸರ್ಕಾರದ ಪ್ರಭಾವ 
  • ಹ್ಯಾಟ್ರಿಕ್‌ ಹೀರೋ ಶಿವಣ್ಣ ಮತ್ತು ಚಿತ್ರರಂಗದ ಬೆಂಬಲ, ಸಹಕಾರ  
  • ಈ ಹಿಂದಿನ ವೈಯಕ್ತಿಕ ಸೋಲಿನ ಮತ್ತು ಕುಟುಂಬದ ಸೋಲಿನ ಅನುಕಂಪ 
  • ಅಂತಿಮವಾಗಿ ಕೆಎಸ್‌ ಈಶ್ವರಪ್ಪನವರ ಬಂಡಾಯದ ಎನ್‌ಕ್ಯಾಶ್‌ 

ಗೀತಾ ಶಿವರಾಜಕುಮಾರ್ ಮೈನಸ್ ಪಾಯಿಂಟ್

  • 2014 ರ ಚುನಾವಣೆ ಸೋಲಿನ ನಂತರ  ಕ್ಷೇತ್ರದಲ್ಲಿ ಕಾಣಿಸಿಕೊಳ್ಳದೆ ಇರುವುದು
  • ಚುನಾವಣೆಗಷ್ಟೆ ಸೀಮಿತವಾಗಿದ್ದಾರೆ ಎಂಬ ಸ್ಥಳೀಯವಾಗಿ ಕೇಳಿಬರುವ ಆರೋಪ
  • ಡಮ್ಮಿ ಕ್ಯಾಂಡಿಡೇಟ್‌ ಎಂದು ಕೆಎಸ್‌ ಈಶ್ವರಪ್ಪ ಸೇರಿದಂತೆ ಹಲವರು ಬಿಂಬಿಸುತ್ತಿರುವುದು
  • ಗೆದ್ದರೂ ಕೈಗೆ ಸಿಗೋದಿಲ್ಲ, ಬೆಂಗಳೂರಿಗೆ ಹೋಗ್ತಾರೆ ಎಂಬ ಅಪಪ್ರಚಾರ 
  • ಕಾಂಗ್ರೇಸ್ ಪಕ್ಷದೊಳಗಿನ ಬಣ ಬಣ ರಾಜಕಾರಣ ಅಸಮಧಾನ ಮತ್ತು ವಿರೋಧ
  • ಅಡ್ಜೆಸ್ಟ್ ಮೆಂಟ್ ರಾಜಕಾರಣದ ಆತಂಕ ಕಾಂಗ್ರೆಸ್‌ ಪಕ್ಷವನ್ನು ಬಹುವಾಗಿ ಕಾಡುತ್ತಿದೆ