ಉಗ್ರ ನರಸಿಂಹ, ಔರಂಗಜೇಬ್​? ಕಟೌಟ್​ನೊಳಗಿತ್ತಾ ಕೋಮುದ್ವೇಷ!? ಶಿವಮೊಗ್ಗ ಪ್ರಯೋಗ ಶಾಲೆಯ ರಾಜಕಾರಣವೇನು? ಸಣ್ಣ ಘಟನೆ ಹಿಂದಿರೋ ಮೇಷ್ಟ್ರು ಯಾರು?

Here is the background and politics behind the incident in Shimoga Ragiguddaಶಿವಮೊಗ್ಗ ರಾಗಿಗುಡ್ಡದಲ್ಲಿ ನಡೆದ ಘಟನೆಯ ಹಿನ್ನೆಲೆ ಮತ್ತು ರಾಜಕಾರಣದ ಬಗ್ಗೆ ವಿವರ ಇಲ್ಲಿದೆ

ಉಗ್ರ ನರಸಿಂಹ, ಔರಂಗಜೇಬ್​? ಕಟೌಟ್​ನೊಳಗಿತ್ತಾ ಕೋಮುದ್ವೇಷ!?  ಶಿವಮೊಗ್ಗ ಪ್ರಯೋಗ ಶಾಲೆಯ ರಾಜಕಾರಣವೇನು? ಸಣ್ಣ ಘಟನೆ ಹಿಂದಿರೋ ಮೇಷ್ಟ್ರು ಯಾರು?

KARNATAKA NEWS/ ONLINE / Malenadu today/ Oct 5, 2023 SHIVAMOGGA NEWS

ಈದ್ ಮಿಲಾದ್ ಮೆರವಣಿಗೆ ವೇಳೆ ರಾಗಿಗುಡ್ಡದಲ್ಲಿನ ಕಲ್ಲುತೂರಾಟ ಮತ್ತು ಆ ಬಳಿಕ ನಡೆದ ಕೋಮುದ್ವೇಷದ ಹಲ್ಲೆಯನ್ನು ರಾಷ್ಟ್ರೀಯ ವಿಷಯದಂತೆ ಬಿಂಬಿಸುತ್ತಿರುವ ಮಾಧ್ಯಮ ಮತ್ತು ರಾಜಕೀಯ ಪಕ್ಷಗಳು ಶಿವಮೊಗ್ಗ ನಗರವನ್ನು ರಾಜಕೀಯ ಲಾಭಕ್ಕೆ ಪ್ರಯೋಗಶಾಲೆ ಮಾಡಿಕೊಳ್ಳುತ್ತಿದ್ದಾರೆ. ಕುವೆಂಪು ನಾಡಿನಲ್ಲಿ ಕೋಮುದ್ವೇಷದ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಪೊಲೀಸರ ತನಿಖೆಯ ನಡುವೆಯೇ ಭಾರತೀಯ ಜನತಾ ಪಕ್ಷದ ನಾಯಕರು ಬೆಂಕಿಯುಗುಳುತ್ತಿರುವುದು. 

ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿರುವುದನ್ನು ನೋಡಿದರೆ ಶಿವಮೊಗ್ಗದ ಘಟನೆಯನ್ನು ಇಲ್ಲಿಗೇ ಬಿಡುವ ಲಕ್ಷಣಗಳು ಕಾಣುತಿಲ್ಲ. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಅವರ ನೇತೃತ್ವದ ತಂಡ ಶಿವಮೊಗ್ಗದ ರಾಗಿಗುಡ್ಡ ಏರಿಯಾಕ್ಕೆ ಭೇಟಿ ನೀಡುತ್ತಿದೆ.

ಶಿವಮೊಗ್ಗ ನಗರದಲ್ಲಿ ಧಗಧಗ ಅಥವಾ ಕೊತಕೊತ ಎಂಬಂತಹ ಸನ್ನಿವೇಶ ಇಲ್ಲ. ನಗರದ ಮೂವತ್ತೈದು ವಾರ್ಡುಗಳಲ್ಲಿ ಒಂದು ವಾರ್ಡಿನ ಎರಡು ಕ್ರಾಸ್‌ಗಳಲ್ಲಿ ನಡೆದ ಘಟನೆಯನ್ನು ರಾಜಧಾನಿಯಲ್ಲಿ ಕುಳಿತು ತಮಗೆ ಬೇಕೆಂದ ಹಾಗೆ ಬಿಂಬಿಸುವ ಕೆಲಸ ನಡೆಯುತ್ತಿದ್ದು, ಸ್ಥಳೀಯರು ಈ ಬಗ್ಗೆ ತಮ್ಮ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. 

ಈದ್ ಮೆರವಣಿಗೆ ತಡರಾತ್ರಿವರೆಗೆ ನಡೆದಿದ್ದು, ರಾಗಿಗುಡ್ಡದಲ್ಲಿ ಮೊದಲ ಘಟನೆ ನಡೆದದ್ದು ಸಂಜೆ.5.30 ಕ್ಕೆ  ಪೊಲೀಸರ ಮೇಲೆ ಕಲ್ಲುತೂರಾಟ ನಡೆದಿದ್ದು, ಸಂಜೆ ಏಳು ಗಂಟೆ ಹೊತ್ತಿಗೆ. ಇದಾದ ಬಳಿಕವೂ ಮೆರವಣಿಗೆ ಸಾಗಿದೆ. ಅಂದರೆ ಶಿವಮೊಗ್ಗದ ಜನ ಈ ಘಟನೆಯನ್ನು ಒಂದು ಚಿಕ್ಕಘಟನೆ ಎಂಬುದಾಗಿ ಪರಿಗಣಿಸಿದ್ದರು. 

ರಾಜಕೀಯ...ಸಾರ್..ರಾಜಕೀಯ / ಶಾಸಕ ಚನ್ನಬಸಪ್ಪ, ಮಾಜಿ ಡಿಸಿಎಂ ಈಶ್ವರಪ್ಪ ಅವರು ಈಗಾಗಲೇ ಇದೊಂದು ವ್ಯವಸ್ಥಿತ ಸಂಚು ಎಂಬ ನಿರ್ಣಯವನ್ನು ನೀಡಿದ್ದಾರೆ. ಈಗ ಬಿಜೆಪಿಯ ನಿಯೋಗ ಬರುತ್ತಿದ್ದು, ಘಟನೆಯನ್ನು ಮತ್ತಷ್ಟು ಬೆಳೆಸಲು ಮುಂದಾಗಿರುವುದರ ಹಿಂದೆ ರಾಜಕೀಯ ಅಲ್ಲದೆ ಮತ್ತೇನು ಕಾಣುತಿಲ್ಲ.

ಮತ್ತೊಂದಡೆ ಕಾಂಗ್ರೆಸ್​ ಪಕ್ಷದ ನಾಯಕರ ಬೇಜವಾಬ್ದಾರಿ ಹೇಳಿಕೆಗಳು ಸಹ ಪ್ರಕರಣವನ್ನು ಜೀವಂತವಾಗಿ ಇರಿಸುತ್ತಿದೆ. ಪೂರಕವಾಗಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆ ಬಿಜೆಪಿ ಪಾಳಯಕ್ಕೆ ಆಹಾರವಾಗಿ ಪರಿಣಮಿಸಿದೆ. ಇದುವರೆಗೂ ಘಟನೆಯ ಬಗ್ಗೆ ಒಂದು ಸ್ಪಷ್ಟತೆಯನ್ನು ನೀಡದೇ, ಸಲ್ಲದ ಹೇಳಿಕೆಯ ಜೊತೆಗೆ ಎಳೆದುಕೊಂಡು ಹೋಗುತ್ತಿರುವುದು ಕೂಡ ತಪ್ಪೆ ಆಗುತ್ತದೆ. 

ಪ್ರತೀಕಾರದ ಸನ್ನಿವೇಶ ನಿರ್ಮಾಣವಾಗಿದ್ದು ಹೇಗೆ: ಶಿವಮೊಗ್ಗ ನಗರ ಕೋಮುಸೂಕ್ಷ್ಮ ಪ್ರದೇಶವಾಗಿದ್ದು, ಹಿಜಾಬ್ ವಿವಾದದಲ್ಲಿ ಇಲ್ಲಿ ನಡೆದ ಕೋಮು ಸಂಘರ್ಷ ಮತ್ತು ಜೀವಹಾನಿ ಆಗಿರುವುದು ಹಸಿರಾಗಿರುವಾಗಲೇ ಈ ಬಾರಿಯ ಹಿಂದೂ ಮಹಾಸಭೆ ಗಣಪತಿ ಮೆರವಣಿಗೆ ಮತ್ತು ಈದ್‌ಮಿಲಾದ್ ಮೆರವಣಿಗೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿತ್ತೇ ಅಥವಾ ಎರಡೂ ಕೋಮಿನ ಧಾರ್ಮಿಕ ಉತ್ಸವ ಆಚರಣೆ  ಸಮಿತಿಯವರು  ಜಿಲ್ಲಾಡಳಿತದ ಆದೇಶವನ್ನು ಧಿಕ್ಕರಿಸಿದರೆ ಎಂಬ ಅನುಮಾನ ಮೂಡುತ್ತದೆ.



ಪ್ರತಿಕೃತಿಗಳಿಂದಲೇ ವಿವಾದ: ಹಿಂದೂ ಮಹಾಸಭಾ ಸಮಿತಿಯವರು ನಗರದಲ್ಲಿ ಅಲಂಕಾರ ಮಾಡಿದ್ದು, ಇಡೀ ನಗರವನ್ನು ಬಂಟಿಂಗ್ಸ್ ಮತ್ತು ಕಟೌಟ್‌ಗಳಿಂದ ಕೇಸರಿಮಯ ಮಾಡಲಾಗಿತ್ತು. ಮಾತ್ರವಲ್ಲದೆ, ಜ್ಞಾನವ್ಯಾಪಿ ಶಿವನ ಮಹಾದ್ವಾರ, ಬಿಲ್ಲುಧಾರಿ ಶ್ರೀರಾಮಚಂದ್ರರ ಮಹಾದ್ವಾರ, ಸಾವರ್ಕರ್ ಸಾಮ್ರಾಜ್ಯ  ಎಂಬ ಮಹಾದ್ವಾರಗಳನ್ನು ನಿರ್ಮಾಣ ಮಾಡಲಾಗಿತ್ತು. ಉಗ್ರನರಸಿಂಹ ಹಿರಣ್ಯಕಶ್ಯಪುವಿನ ಸಂಹಾರ ಮಾಡುವ ಸ್ತಬ್ದಚಿತ್ರವನ್ನು ನಿರ್ಮಾಣ ಮಾಡಲಾಗಿತ್ತು. ಪುರಾಣದ ಒಂದು ದೃಶ್ಯಾಂತವನ್ನು ಬಿಂಬಿಸುವಾಗ ಹಿರಣ್ಯಕಶ್ಯಪು ಕಟೌಟ್‌ನಲ್ಲಿ  ಹಸಿರು ಬಟ್ಟೆ ತೊಡಿಸಿದ್ದಲ್ಲದೆ ಗಡ್ಡವನ್ನು ಚಿತ್ರಿಸಲಾಗಿತ್ತು. ಈ ಪ್ರತಿಕೃತಿಯ ಬಗೆಗೂ ಅಪಸ್ವರ ಕೇಳಿಬಂದಿತ್ತು. ಗಣಪತಿ ಮೆರವಣಿಗೆಗೆ ಶ್ರೀರಾಮ, ಉಗ್ರನರಸಿಂಹರು ಯಾಕೆ ಬಂದರು ಎಂಬ ಬಗ್ಗೆ ಎದ್ದಿದ್ದ ಪ್ರಶ್ನೆ ಹಾಗೆಯೇ ತಣ್ಣಗಾಗಿತ್ತು.



ಹಿಂದೂ ಮಹಾಸಭಾದ ಈ ಅಲಂಕಾರಕ್ಕೆ ಪ್ರತಿಕಾರ ಎಂಬಂತೆ ಈದ್ ಮಿಲಾದ್​  ಆಚರಣೆಯನ್ನು ಸಂಭ್ರಮಿಸುವ ಮುಸ್ಲಿಮರು ಮೊಘಲ್‌ದೊರೆ ಔರಂಗಜೇಬ್, ಟಿಪ್ಪು ಸುಲ್ತಾನ್ ಪ್ರತಿಕೃತಿಗಳನ್ನು ರಚಿಸಿದ್ದರು. ಔರಂಗಜೇಬ್ ಪ್ರತಿಕೃತಿಯಲ್ಲಿ ವ್ಯಕ್ತಿಯೊಬ್ಬನನ್ನು ಇರಿದು ಕೊಲ್ಲುವ ರಕ್ತಸಿಕ್ತ ಕಟೌಟ್ ನಿರ್ಮಾಣ ಮಾಡಿದ್ದು, ಹಿಂಸೆಯನ್ನು ಪ್ರಚೋದಿಸಿದ್ದು ಸುಳ್ಳಲ್ಲ. 

ಇಷ್ಟು ಮಾತ್ರವಲ್ಲದೆ  ಖಡ್ಗದ ಪ್ರತಿಕೃತಿಯನ್ನು ಮಾಡಲಾಗಿತ್ತು. ಸಾಲದೆಂಬಂತೆ ಮೆರವಣಿಗೆಯಲ್ಲಿ ತಲವಾರ್ ಮಾದರಿಯ ಕೃತಕ ಅಸ್ತ್ರಗಳನ್ನು ಪ್ರದರ್ಶನ ಮಾಡಿದ್ದರು. ಹಲವು ಕಡೆ ಟಿಪ್ಪುಸುಲ್ತಾನ್ ಸಾಮ್ರಾಜ್ಯ ಮಹಾದ್ವಾರಗಳನ್ನು ನಿರ್ಮಾಣ ಮಾಡಲಾಗಿತ್ತು.ಅಸಲಿಯಾಗಿ ಈ ರೀತಿಯ ಕೋಮುಪ್ರಚೋದಕ ಪ್ರತಿಕೃತಿಗಳನ್ನು ನಿರ್ಮಾಣ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸುವ ಬದಲು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪೈಪೋಟಿ ನಡೆಸುತ್ತಿರುವುದು ಶಿವಮೊಗ್ಗದ ಹೆಸರನ್ನು ಕೆಡಿಸುವ ಹುನ್ನಾರವಾಗಿದೆ.

ಪೋಲೀಸರಿಗೆ ಮಾಹಿತಿಯಿದೆ: ಶಿವಮೊಗ್ಗ ಗಲಭೆ ಹೇಗಾಯಿತು, ಯಾರು ಕಲ್ಲು ಹೊಡೆದರು ಅದಕ್ಕೆ ಯಾರು ಪ್ರತಿಕ್ರಿಯೆ ಕೊಟ್ಟರು ಯಾವ ಕೋಮಿನ ಎಷ್ಟು ಮನೆಗಳಿಗೆ ಹಾನಿಯಾಗಿದೆ. ನಿರ್ದಿಷ್ಟ ಕೋಮಿನ ಎಲ್ಲಾ ಮನೆಗಳಿಗೂ ಕಲ್ಲುಹೊಡೆಯದೆ ಆಯ್ದ ಮನೆಗಳಿಗೆ ಕಲ್ಲು ತೂರಲಾಗಿದೆ.

ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ರಾಗಿಗುಡ್ಡದಲ್ಲಿನ ಗಲ್ಲಿ ಹುಡುಗರ ನಡುವಿನ ವೈಷಮ್ಯವೂ ಕಾರಣ ಎಂದು ಹೇಳಲಾಗುತ್ತಿದೆ. ಬಂಧಿತ ವ್ಯಕ್ತಿಗಳಲ್ಲಿ ಎಲ್ಲಾ ಕೋಮಿನವರೂ ಇದ್ದಾರೆ. ಎರಡೂ ಕಡೆಯವರೂ ದಾರಿತಪ್ಪಿದ ಹುಡುಗರಿಗೆ ಬುದ್ದಿ ಹೇಳುವುದನ್ನು ಬಿಟ್ಟು  ಉರಿವ ಮನೆಯ ಬೆಂಕಿಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗುತ್ತಿರುವುದರ ಹಿಂದೆ ಸರ್ವಜನಾಂಗದ ಶಾಂತಿಯ ತೋಟದಲ್ಲಿ  ಅಶಾಂತಿ ನಿರ್ಮಾಣ ಮಾಡಲು ಮುಂದಾಗುತ್ತಿರುವುದು ದುಖಃಕರ ಸಂಗತಿಯಾಗಿದೆ.


ಇನ್ನಷ್ಟು ಸುದ್ದಿಗಳು 

  1.  ರಾಗಿಗುಡ್ಡದಲ್ಲಿ ಪರಿಸ್ಥಿತಿ ತಿಳಿಗೊಳಿಸಲು ತೆರಳಿದ್ದ ಎಸ್​ಪಿ ಮತ್ತು ಪೊಲೀಸರ ಮೇಲೆ ಕಲ್ಲು ! ಸ್ಥಳದಲ್ಲಿ 144 ಸೆಕ್ಷನ್​ ಜಾರಿ! ಲಾಠಿ ಪ್ರಹಾರ

  2. ನಮಗೆ ಬೆಲೆ ಇರುತ್ತಲ್ಲ ಎಂದು ಪ್ರಶ್ನಿಸಿದ ಬಾಲಕಿ! ಶಿಕ್ಷಕರ ಹಾಗೆ ವಿದ್ಯಾರ್ಥಿನಿಗೆ ಅರ್ಥ ಮಾಡಿಸಿದ ಸಚಿವ! ವೈರಲ್​ ಆಯ್ತು ವಿಡಿಯೋ!