13 ವರ್ಷಗಳಿಂದ ಕೊಲೆಗಾರನ ಹುಡುಕಿಕೊಡಿ ಎನ್ನುತ್ತಿವೆ 13 ಆತ್ಮಗಳು! ಶಿವಮೊಗ್ಗದಲ್ಲಿನ ನಿಗೂಢ ಹತ್ಯೆಗಳ ಬಗ್ಗೆ ಜೆಪಿ ಬರೆಯುತ್ತಾರೆ!

For 13 years, 13 souls have been asking for a killer to be found! JP writes about the mysterious killings in Shimoga!

13 ವರ್ಷಗಳಿಂದ ಕೊಲೆಗಾರನ ಹುಡುಕಿಕೊಡಿ ಎನ್ನುತ್ತಿವೆ 13 ಆತ್ಮಗಳು! ಶಿವಮೊಗ್ಗದಲ್ಲಿನ ನಿಗೂಢ ಹತ್ಯೆಗಳ ಬಗ್ಗೆ ಜೆಪಿ ಬರೆಯುತ್ತಾರೆ!

KARNATAKA NEWS/ ONLINE / Malenadu today/ Jul 8, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆಯಲ್ಲಿ ದಶಕಗಳಿಂದ ಭೇದಿಸಲಾಗದ ಕೊಲೆ ಕೇಸ್ ಗಳು ಹಾಗೆ ಧೂಳು ಹಿಡಿದರೆ, ನೊಂದ ಕುಟುಂಬಗಳಿಗೆ ನ್ಯಾಯ ಸಿಗುವುದು  ಯಾವಾಗ? ಎಸ್ಪಿ ಮಿಥುನ್ ಕುಮಾರ್ ಈ ಪ್ರಕರಣಗಳಿಗೆ ಜೀವ ನೀಡುವರೇ ಎಂಬ ಪ್ರಶ್ನೆಯೊಂದಿಗೆ....ಜೆಪಿ ಬರೆಯುತ್ತಾರೆ.

ಶಿವಮೊಗ್ಗ ಮತ್ತು ದಶಕಗಳ ಕೊಲೆ ಪ್ರಕರಣ

ಶಿವಮೊಗ್ಗ ಜಿಲ್ಲೆಯ ನಿರ್ಜನ ಪ್ರದೇಶಗಳಲ್ಲಿ ನಡೆದ ಅದೆಷ್ಟೋ ಕೊಲೆ ಕೇಸ್ ಗಳನ್ನು ಪೊಲೀಸರು ಭೇದಿಸಿ, ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. ಅಪರಾಧ ಲೋಕದಲ್ಲಿ ದ್ವೇಷ ಪ್ರತಿಕಾರಕ್ಕಾಗಿ ನಡೆಯುವ ಕೊಲೆ ಪ್ರಕರಣಗಳಲ್ಲಿ ಆರೋಪಿ ಯಾರು ಎಂಬುದು ಪೊಲೀಸರಿಗೆ ಗೊತ್ತಿರುತ್ತದೆ . ಅಂತವರನ್ನು ಎಲ್ಲಿದ್ದರೂ ಹೆಡೆಮುರಿ ಕಟ್ಟಿ ಜೈಲಿಗಟ್ಟಬಹುದು. ಆದರೆ ಸಮಾಜದಲ್ಲಿ ನಡೆಯುವ ಎಲ್ಲಾ ಕ್ರೈಂ ಸೀನ್ ನಲ್ಲಿ ಪೊಲೀಸರಿಗೆ ಕ್ಲೂ ಕೂಡ ಸಿಗೋದಿಲ್ಲ. ಆದು ಪೊಲೀಸರಿಗೆ ಸವಾಲಾಗಿ ಪರಿಣಮಿಸುತ್ತದೆ. ಆದರೆ ಇಂದು ಹೇಳ ಹೊರಟಿರುವ ಕೊಲೆ ಪ್ರಕರಣಗಳಲ್ಲಿ ಬಹುತೇಕ ಮಹಿಳೆಯರಿಗೆ ನ್ಯಾಯ ಸಿಕ್ಕಿಲ್ಲ ಎಂಬುದು ಸಾಕ್ಷಿಕರಿಸುತ್ತೆ. 

ಕಳೆದ 13 ವರ್ಷಗಳ ಕೆಲವು ಕೊಲೆ ಕೇಸ್ ಗಳನ್ನು ಪೊಲೀಸರು ಇಂದಿಗೂ ಭೇದಿಸಲು ಸಾಧ್ಯವಾಗಿಲ್ಲ. ಹಾಗಂದ ಮಾತ್ರಕ್ಕೆ ಪೊಲೀಸರು ಕರ್ತವ್ಯ ನಿರ್ಲಕ್ಷ್ಯ ಎಸಗಿದ್ದಾರೆ ಎಂದು ಹೇಳಲು ಸಾದ್ಯವಿಲ್ಲ. ಪೊಲೀಸರು ಒಂದು ಸ್ಟೇಷನ್ ಗೆ ವರ್ಗಾವಣೆ ಮಾಡಿಕೊಂಡು ಬಂದು ತನ್ನ ವ್ಯಾಪ್ತಿ ಪ್ರದೇಶವನ್ನು ಅರಿತುಕೊಳ್ಳುವಷ್ಟರಲ್ಲಿ ಮತ್ತೊಂದೆಡೆ ವರ್ಗಾವಣೆಯಾಗುತ್ತೆ. ಎಸ್ಪಿ ಯಾಗಿ ವರ್ಗಾವಣೆಯಾಗಿ ಬಂದವರ ಕಥೆಯೂ ಇದೆ ಆಗಿದೆ. ಹೀಗಾಗಿ ಹೊಸ ಅಧಿಕಾರಿಗಳಿಗೆ ಹಳೆ ಕೇಸ್ ಗಳ ತನಿಖೆಗೆ ಸೆಟ್ ಬ್ಯಾಕ್ ಆಗುತ್ತದೆ. ಪೊಲೀಸರ ರ್ಯಾಕ್ ಗಳಲ್ಲಿ ದೂಳು ಹಿಡಿಯುತ್ತಿರುವ ಕೊಲೆ ಕೇಸ್ ಗಳಿಗೆ ಎಸ್ಪಿ ಮಿಥುನ್ ಕುಮಾರ್ ಮತ್ತೆ ಜೀವ ನೀಡಬೇಕಿದೆ.

ಆನವಟ್ಟಿಯ ಸತ್ಯನಾರಾಯಣ ಶೆಟ್ಟಿ ದಂಪತಿ ಕೊಲೆ-2009

2009 ರಲ್ಲಿ ಸೊರಬ ತಾಲೂಕಿನ ಆನವಟ್ಟಿಯಲ್ಲಿ ನಡೆದ ಸತ್ಯನಾರಾಯಣ ಶೆಟ್ಟಿ ದಂಪತಿಯ ಜೋಡಿ ಕೊಲೆ ಪ್ರಕರಣವನ್ನು ಈವರೆಗೂ ಪೊಲೀಸರಿಂದ ಭೇದಿಸಲು ಸಾಧ್ಯವಾಗಿಲ್ಲ. ಆ ಸಂದರ್ಭದಲ್ಲಿಯೇ ಸಾಂದರ್ಭಿಕ ಸಾಕ್ಷಿಗಳು ಇದ್ದಾಗಲೂ, ಅದ್ಯಾವ ಪ್ರಭಾವ ಅಲ್ಲಿ ಕೆಲಸ ಮಾಡಿತೋ ಗೊತ್ತಿಲ್ಲ. ಈ ಡಬಲ್ ಮರ್ಡರ್ ಕೇಸ್ ಇಂದಿಗೂ ಪೆಂಡಿಂಗ್ ನಲ್ಲಿಯೇ ಇದೆ. ಇದಾದ ಕೆಲವೇ ದಿನಗಳಲ್ಲಿ ಸೊರಬದಲ್ಲಿ ಮಣಿಪುರ ಮೂಲದ ಇಬ್ಬರು ಸೆಕ್ಯುರಿಟಿ ಗಾರ್ಡ್ ಗಳ ಕೊಲೆಯಾಗುತ್ತದೆ. ಆ ಪ್ರಕರಣ ತಾರ್ಕಿಕ ಅಂತ್ಯ ಕಂಡಿದೆಯಾ ಎಂಬುದು ಮಾದ್ಯಮಗಳಿಗೆ ಈವರೆಗೂ ಬಹಿರಂಗವಾಗಿಲ್ಲ. 

ವಾಚ್ ಮನ್ ಆಗಿದ್ದ ಅಜ್ಜ ಮೊಮ್ಮಗ ಮರ್ಡರ್ ಕೇಸ್ 

ಹೌದು 2009 ರಲ್ಲಿ ಸೊರಬದ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಕಚೇರಿಯಲ್ಲಿ  ಕಳ್ಳತನಕ್ಕೆ ಯತ್ನಿಸಿದವರನ್ನು ತಡೆಯಲು ಹೋದ ಇಬ್ಬರು ಕಾವಲುಗಾರರನ್ನು ದರೋಡೆಕೋರರು ಕಲ್ಲಿನಿಂದ ಹಲ್ಲೆ ನಡೆಸಿ ಕೊಂದಿದ್ದರು. ಕೊಲೆಗೀಡಾದವರು ಮಣಿಪುರಿಯಯ ಒಂದೇ ಕುಟುಂಬದ ಅಜ್ಜ ಮೊಮ್ಮಗ ಆಗಿದ್ರು , ಮೊಮ್ಮಗ ರಮೇಶ್ ಸಿಂಗ್ (25) ಹಾಗು ಅಜ್ಜ ವೀರಭದ್ರ ಸಿಂಗ್  ಕೊಲೆಯಾದ ದುರ್ದೈವಿಗಳಾಗಿದ್ರು. ಅಂದು ಮದ್ಯರಾತ್ರಿ ದರೋಡೆಕೋರ ತಂಡ ಸೊರಬದ ಜೂನಿಯರ್ ಕಾಲೇಜು ಬಳಿ ಇರುವ,ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಕಛೇರಿಗೆ ನುಗ್ಗಿ ಟ್ರಜರಿ ಬೀಗ ಒಡೆದು ಕಳ್ಳತನಕ್ಕೆ ಪ್ರಯತ್ನಿಸಿದೆ.ಅದೇ ಕಛೇರಿಯಲ್ಲಿ  ಕಾವಲು ಕಾಯುತ್ತಿದ್ದ ಅಜ್ಜ ಮೊಮ್ಮಗ ಕಳ್ಳತನ ತಡೆಯಲು ಯತ್ನಿಸಿದಾಗ ಕಳ್ಳರು ಕಲ್ಲಿನಿಂದ ಹಲ್ಲೆ ನಡೆಸಿ ಕೊಲೆಮಾಡಿದ್ರು. ಎರಡು ವರ್ಷಗಳಿಂದ ಇವರು ಸೊರಬದಲ್ಲಿ ಗೂರ್ಖಾಗಳಾಗಿ ಕೆಲಸ ನಿರ್ವಹಿಸುತ್ತಿದ್ರು, ಸ್ಥಳೀಯರು ನೀಡುವ ಹಣಕಾಸಿನಿಂದ ಜೀವನ ನಡೆಸುತ್ತಿದ್ರು, ಈ ಪ್ರಕರಣದ ಆರೋಪಿಗಳ ಬಂಧನವಾಗಿದೆಯಾ ಎಂಬುದು ಈವರೆಗೂ ಗೊತ್ತಿಲ್ಲ.

ಅಂಬಿಕಾ ಬುಕ್ ಬ್ಯೂರೋ ಮಾಲೀಕ ವೆಂಕಟೇಶ್ ಕೊಲೆ

2006 ರಲ್ಲಿ ಶಿವಮೊಗ್ಗದ ಅಂಬಿಕಾ ಬುಕ್ಸ್ ಬ್ಯೂರೋ ಮಾಲೀಕ ವೆಂಕಟೇಶ್ ರನ್ನು ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಕಛೇರಿಯ ಎದುರು ರಾತ್ರಿ ದುಷ್ಕರ್ಮಿಗಳ ತಂಡ ಕೊಲೆ ಮಾಡಿ ಪರಾರಿಯಾಗಿತ್ತು. ಮಾರುತಿ ಓಮ್ನಿಯಲ್ಲಿ ಹಂದಿಗೆ ಕಟ್ಟುವ ರೀತಿಯಲ್ಲಿ ಕಟ್ಟಿ ಸ್ಕ್ರೂ ಡ್ರೈವರ್ ನಿಂದ ಚುಚ್ಚಿ ಕೊಲೆ ಮಾಡಲಾಗಿತ್ತು. ವೆಂಕಟೇಶ್ ಮೃತ ದೇಹ ಪರಿಶೀಲಿಸಿದ ಪೊಲೀಸರಿಗೆ ವೆಂಕಟೇಶ್ ಬಾಯಲ್ಲಿ ಕೊಲೆ ಮಾಡಲು ಬಂದ ಆರೋಪಿಯೊಬ್ಬನ ನಡುಬೆರಳು ಕಚ್ಚಿದ್ದರಿಂದ ಬಾಯೊಳಗೆ ಹಾಗೆಯೇ ಇತ್ತು. ಈ ಬೆರಳಿನ ಆಧಾರದಲ್ಲಿ ಕೆಲವರನ್ನು ವಿಚಾರಣೆ ನಡೆದರೂ ಆ ಪ್ರಕರಣ ಇಂದಿಗೂ ಗೊಂದಲದಲ್ಲಿಯೇ ಇದೆ.

30-05-12 ರಂದು ನಡೆದ ಸೆಕ್ಯುರಿಟಿ ಗಾರ್ಡ್ ಮರ್ಡರ್ ಕೇಸ್ 

2012 ರಲ್ಲಿ ಶಿವಮೊಗ್ಗದ ಎನ್.ಟಿ ರಸ್ತೆಯಲ್ಲಿರುವ ಮಣಿಪುರಂ ಪೈನಾನ್ಸ್ ಬ್ಯಾಂಕ್ ನಲ್ಲಿ  ಕಳ್ಳತನಕ್ಕೆ ಪ್ರಯತ್ನಿಸಿದ ದರೋಡೆಕೋರರ ತಂಡ, ಬ್ಯಾಂಕ್ ಸೆಕ್ಯುರಿಟಿ ಗಾರ್ಡ್ ನನ್ನು ಕೊಲೆಗೈದು ಪರಾರಿಯಾಗಿತ್ತು. ನಿಂಗಪ್ಪ(40) ಕೊಲೆಯಾದ ಸೆಕ್ಯುರಿಟಿಯಾಗಿದ್ದ. ಅಂದು ರಾತ್ರಿ ಇಬ್ಬರು ಅಥವಾ ಮೂವರನ್ನೊಳಗೊಂಡ ತಂಡ ಎನ್.ಟಿ ರಸ್ತೆಯ ಮೊದಲನೇ ಮಹಡಿಯಲ್ಲಿರುವ ಮಣಪ್ಪುರಂ ಗೋಲ್ಡ್ ಪೈನಾನ್ಸ್ ಕಂಪನಿಗೆ ಲಗ್ಗೆಯಿಟ್ಟಿದೆ.ಬ್ಯಾಂಕ್ ನ ಒಳಗೆ ಮಲಗಿದ್ದ ನಿಂಗಪ್ಪ ಸೆಕ್ಯುರಿಟಿಯನ್ನು ಎಬ್ಬಿಸಿದ್ದಾರೆ.ಸೆಕ್ಯುರಿಟಿ ಪರಿಚಯದವರೆ ಇರಬೇಕೆಂದು ಬಾಗಿಲು ತೆಗೆದಿದ್ದಾನೆ. ಒಳಪ್ರವೇಶಿಸಿದ ತಂಡ ಲಾಕರ್ ಒಡೆಯುವ ಪ್ರಯತ್ನ ನಡೆಸಿದೆ.ಆದರೆ ಅದು ಸಾಧ್ಯವಾಗಿಲ್ಲ.ಈ ಸಂದರ್ಭದಲ್ಲಿ ದರೋಡೆಕೋರರನ್ನು ತಡೆಯಲು ಯತ್ನಿಸಿದ ನಿಂಗಪ್ಪನ ಕೊರಳಿಗೆ ಮೊದಲು ಹಗ್ಗದಿಂದ ಬಿಗಿದಿದ್ದಾರೆ.ನಂತರ ಎದೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ತಂಡ ಪರಾರಿಯಾಗಿದೆ.ಬೆಳೆಗ್ಗೆ 10.30 ಕ್ಕೆ ಬ್ಯಾಂಕ್ ನ ಕಸಗುಡಿಸುವ ಕೆಲಸದಾಕೆ ಬಂದ ನಂತರ ಪ್ರಕರಣ ಬೆಳಕಿಗೆ ಬಂದಿತು. ಈ ಕೊಲೆ ಪ್ರಕರಣದ ಆರೋಪಿಗಳು ಈವರೆಗೂ ಪತ್ತೆಯಾಗಿಲ್ಲ. 

2014 ರ ವಿನೋಬ ನಗರದ ಸುಶೀಲಮ್ಮ ಕೊಲೆ ಪ್ರಕರಣ

ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಹಾಡಹಗಲೇ ಶಿವಮೊಗ್ಗದ ವಿನೋಬ ನಗರದಲ್ಲಿ ವ್ಯಕ್ತಿಯೊಬ್ಬ ಮನೆಗೆ ನುಗ್ಗಿ ಸುಶೀಲಮ್ಮ ರನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. ಯಾವ ಕಳ್ಳಕಾಕರು ಮನೆ ಪ್ರವೇಶಿಸದಂತೆ ಕಬ್ಬಿಣದ ಸರಳುಗಳಿಂದ ಭದ್ರತೆ ಮಾಡಲಾಗಿತ್ತು. ಇಂತಹ ಸಂದರ್ಭದಲ್ಲಿ ಗಂಡ ಮನೆಯಿಂದ ಹೊರಹೋಗುತ್ತಿದ್ದಂತೆ ಮನೆ ಪ್ರವೇಶಿದ್ದ ಆರೋಪಿ ಸುಶೀಲಮ್ಮರನ್ನು ಭೀಕರವಾಗಿ ಕೊಲೆ ಮಾಡಿದ್ದ. ಗೊತ್ತಿದ್ದವರೇ ಈ ಕೊಲೆ ಮಾಡಿದ್ದಾರೆ ಎಂಬ ಅನುಮಾನ ಇತ್ತಾದರೂ. ಇಂದಿಗೂ ಆ ಅನುಮಾನಕ್ಕೆ ಮುಕ್ತಿ ಸಿಕ್ಕಿಲ್ಲ. 

ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿ ಸುಶೀಲಮ್ಮ(35) ವರ್ಷ  ಅಂದು ಸಂಜೆ ಪತಿ ತೋಟಪ್ಪ ಜೊತೆ ಮನೆಯಿಂದ ಹೊರಬರುವ ಸಂದರ್ಭದಲ್ಲಿ ಇನೋವಾ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳ ತಂಡ ಸುಶೀಲಮ್ಮರನ್ನು ಚಾಕುವಿನಿಂದ ಇರಿದು ಪರಾರಿಯಾಗಿತ್ತು. ಸುಶೀಲಮ್ಮ ನಗರದ ಎಸಿ ಕಛೇರಿಯಲ್ಲಿ ಗುಮಾಸ್ತೆಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಸುಶೀಲಮ್ಮರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ರು. ಈ ಕೊಲೆ ಪ್ರಕರಣದಲ್ಲಿ ಆರೋಪಿಗಳಾರು ಎಂಬುದು ಈವರೆಗೂ ಪತ್ತೆಯಾಗಿಲ್ಲ.

ಮಿಳಘಟ್ಟ ಮತ್ತು ಬಸ್​ಸ್ಟ್ಯಾಂಡ್ ಮರ್ಡರ್ ಕೇಸ್ 

2015 ರಲ್ಲಿ ಮಿಳಘಟ್ಟದ ಬಸವೇಶ್ವರ ದೇವಸ್ಥಾನ ಸಮೀಪ ಗೌರಮ್ಮ ಎಂಬುವರನ್ನು ಮನೆಯ ಸನಿಹ ತೊಟ್ಟಿಯಲ್ಲಿ ಸಂಪ್ ನಲ್ಲಿ ಮುಳುಗಿಸಿ ಕೊಲೆ ಗೈದ ಪ್ರಕರಣ ಇನ್ನೂ ಬಗೆಹರಿದಿಲ್ಲ.  2021 ರಂದು ಶಿವಮೊಗ್ಗ ಬಸ್ ನಿಲ್ದಾಣದ ಬಳಿ ಲತಾ ಎಂಬುವರ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಕೊಲೆ ಮಾಡಿದ ಇನ್ನೂ ಸಹ ಬಗೆಹರಿದಿಲ್ಲ. ಈ ಪ್ರಕರಣಗಳಲ್ಲಿ ಸಾವನ್ನಪ್ಪಿದವರು ಬಹುತೇಕ ಬಡಜೀವಗಳೇ ಆಗಿವೆ. ಇನ್ನು ಮಲೆನಾಡನ್ನು ಬೆಚ್ಚಿ ಬೀಳಿಸಿದ್ದ 2020 ರಲ್ಲಿ ನಡೆದ ತುಮರಿ/-ಬ್ಯಾಕೋಡಿನಲ್ಲಿ  ಬಂಗಾರ ಒಡೆವೆಯ ಕೆಲಸ ಮಾಡುತ್ತಿದ್ದ ಸುಂದರ್ ಶೇಟ್ ದಂಪತಿ ಜೋಡಿ ಕೊಲೆಯಲ್ಲಿ ಆರೋಪಿಗಳ ಕ್ಲೂ ಕೂಡ ಸಿಕ್ಕಲ್ಲ. ನ್ಯಾಯಕ್ಕಾಗಿ ಗ್ರಾಮಸ್ಥರು ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ.

ಸುಶೀಲಮ್ಮರ ಆತ್ಮ ನ್ಯಾಯವನ್ನು ಬೇಡುತ್ತಿದೆ.  ಹೇಳುತ್ತಾ ಹೋದರೆ ಇನ್ನು ಕೆಲವು ಮಹಿಳೆಯರ ಕೊಲೆಗೆ ಇಲ್ಲಿ ಈವರೆಗೂ ನ್ಯಾಯ ಸಿಕ್ಕಿಲ್ಲ. 2010ರ ರಲ್ಲಿ ನಡೆದ ಬರ್ಮಪ್ಪ ನಗರದ ವೃದ್ಧ ಮಹಿಳೆ ಉಮಾ(65) ಕೊಲೆ ಪ್ರಕರಣದಲ್ಲಿ ಆರೋಪಿ ಯಾರೆಂಬುದೇ ಗೊತ್ತಾಗಿಲ್ಲ.ಜಿಲಾನ್ ಎಂಬ ಮಾಲೀಕನ ಮನೆಯಲ್ಲಿ ಬಾಡಿಗೆಗಿದ್ದ ಮಹಿಳೆಯ ಅನುಮಾನಸ್ಪದ ಸಾವಿನ ಪ್ರಕರಣ ಈವರೆಗೂ ತಾರ್ಕಿಕ ಅಂತ್ಯ ಕಂಡಿಲ್ಲ. ಈ ಕೊಲೆ ಪ್ರಕರಣಗಳ ತನಿಖೆಗೆ ಎಸ್ಪಿ ಮಿಥುನ್ ಕುಮಾರ್ ಆದ್ಯತೆ ನೀಡುತ್ತಾರಾ? ಅಂತಹದ್ದೊಂದು ವಿಶ್ವಾಸವಿದೆ..


ನಿಂತ ನೆಲವೇ ಕುಸಿದರೇ ಕಥೆ ಏನು? ವಿಡಿಯೋ ನೋಡಿ! ಜೀವ ಜಸ್ಟ್​ ಬಚಾವ್!  

ಬಾರದ ಮಳೆ ಬಂದು ಬರದ ಆತಂಕವನ್ನೇನೋ ಕಳೆದಿದೆ. ಆದರೆ ಬಿಡುವಿಲ್ಲದ ಮಳೆರಾಯ ಧರೆ ಕುಸಿತದ ಭಯವನ್ನು ಮೂಡಿಸುತ್ತಿದ್ಧಾನೆ. ಇದಕ್ಕೆ ಸಾಕ್ಷಿಎಂಬಂತ ಘಟನೆಯೊಂದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ವ್ಯಕ್ತಿಯೊಬ್ಬ ಮನೆ ಮುಂದುಗಡೆ ನಿಂತುಕೊಂಡು ಕಾಡಿನ ಕಡೆ ನೋಡುತ್ತಿದ್ಧಾನೆ. ಈ ವೇಳೆ ಆತನಿಗೆ ಏನೋ ತನ್ನ ಕಾಲು ಅಲುಗಾಡಿದಂತಾಗಿದೆ. ತಕ್ಷಣವೆ ಚೇಳು ಕಚ್ಚಿದವರಂತೆ ಆತ ಎರಡು ಹೆಜ್ಜೆ ಹಿಂದಕ್ಕೆ ಹಾರುತ್ತಾನೆ. ಆತ ಹಿಂದಕ್ಕೆ ಹಾರುವ ಹೊತ್ತಿನಲ್ಲಿಯೇ ಆತ ನಿಂತಿದ್ದ ಧರೆ ಜರಿದಿದೆ. 

ಈ ದೃಶ್ಯ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೆಲವೇ ಸೆಕೆಂಡ್​ನಲ್ಲಿ ನಡೆಯುವ ಘಟನೆಯ ದೃಶ್ಯ, ತಾನಿಂತ ನೆಲವೇ ಕುಸಿದರೇ  ಮನುಷ್ಯ  ಯಕಶ್ಚಿತ್​ ಅಷ್ಟೆ ಎಂಬ ಸಂದೇಶವನ್ನು ಸಾರುತ್ತಿದೆ. ಅಂದಹಾಗೆ, ಈ ಘಟನೆ ನಡೆದಿರುವುದು ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್. ಪುರ ತಾಲೂಕಿನ ಮೇಲ್ಪಾಲ್ ಬಳಿಯಲ್ಲಿ . ಘಟನೆಯಲ್ಲಿ ಬಚಾವ್ ಆದವರು  ಶಶಿಕುಮಾರ್ .  ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ನೆಲ ಸಡಿಲಗೊಂಡಿದ್ದು ಮಲ್ನಾಡ್​ ಹಲವೆಡೆ ಸಣ್ಣಪುಟ್ಟ ಧರೆ ಕುಸಿತಗಳು ಸಂಭವಿಸುತ್ತಿದೆ. ಮೆಲ್ಪಾಲ್​ನಲ್ಲಿಯು ಅಂತಹುದ್ದೇ ಘಟನೆ ನಡೆದಿದ್ದು ಶಶಿಕುಮಾರ್ ಸ್ವಲ್ಪದರಲ್ಲಿಯೇ ಪಾರಾಗಿದ್ದಾರೆ.