ಮುದ್ರಣ ಮಾಧ್ಯಮದ ವೇಗ, ಸಕಾಲಿಕತೆಗಳನ್ನು ಮರುವ್ಯಾಖ್ಯಾನಿಸಿದ ಡಿಜಿಟಲ್ ಪತ್ರಿಕೋದ್ಯಮ: ಅಶೋಕ್‌ರಾಮ್

Digital media redefined the speed and timeliness element of Journalism: Ashokram

ಮುದ್ರಣ ಮಾಧ್ಯಮದ ವೇಗ, ಸಕಾಲಿಕತೆಗಳನ್ನು ಮರುವ್ಯಾಖ್ಯಾನಿಸಿದ ಡಿಜಿಟಲ್ ಪತ್ರಿಕೋದ್ಯಮ: ಅಶೋಕ್‌ರಾಮ್
ಮುದ್ರಣ ಮಾಧ್ಯಮದ ವೇಗ, ಸಕಾಲಿಕತೆಗಳನ್ನು ಮರುವ್ಯಾಖ್ಯಾನಿಸಿದ ಡಿಜಿಟಲ್ ಪತ್ರಿಕೋದ್ಯಮ: ಅಶೋಕ್‌ರಾಮ್

 MALENADUTODAY.COM | SHIVAMOGGA  | #KANNADANEWSWEB

ಶಂಕರಘಟ್ಟ, ಫೆ. 23: ದಿನಪತ್ರಿಕೆಗಳ ನಿಧಾನಗತಿಯ ಪತ್ರಿಕೋದ್ಯಮಕ್ಕೆ ಇನ್ನು ಭವಿಷ್ಯವಿಲ್ಲ. ಎಲ್ಲ ಮಾಧ್ಯಮಗಳು ಸಹ ಇಂದು ತಮ್ಮ ಡಿಜಿಟಲ್ ಮಾದರಿಯನ್ನು ಆರಂಭಿಸಿದ್ದು, ತ್ವರಿತವಾಗಿ ಓದುಗರನ್ನು ತಲುಪುವುದೇ ಬಹುಮುಖ್ಯ ಉದ್ದೇಶವಾಗಿದೆ. ಅದುವೇ ಅಸ್ಥಿತ್ವವನ್ನು ನಿರೂಪಿಸುವ, ವಿಸ್ತರಿಸುವ ಕೆಲಸ ಮಾಡಲು ನಿರ್ಣಾಯಕ ಪಾತ್ರ ವಹಿಸುವುದು ಎಂದು ಈದಿನ ಸುದ್ದಿತಾಣದ ಮುಖ್ಯಸಂಪಾದಕ ಅಶೋಕ್‌ರಾಮ್ ಡಿ. ಆರ್., ಅಭಿಪ್ರಾಯಪಟ್ಟರು.

ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಇತ್ತೀಚೆಗೆ ವಯೋನಿವೃತ್ತಿ ಹೊಂದಿದ ಪ್ರೊ. ಡಿ.ಎಸ್. ಪೂರ್ಣಾನಂದ ಅವರ ಗೌರವಾರ್ಥವಾಗಿ ವಿಭಾಗ ಮತ್ತು ವಿಭಾಗದ ಹಳೆಯ ವಿದ್ಯಾರ್ಥಿಗಳ ಸಂಘಗಳು ಜಂಟಿಯಾಗಿ ಫೆ. 23ರಂದು 'ಡಿಜಿಟಲ್ ಪತ್ರಿಕೋದ್ಯಮ: ಸವಾಲುಗಳು ಮತ್ತು ನಿರೀಕ್ಷೆಗಳು' ವಿಷಯ ಕುರಿತು ಪ್ರೊ. ಎಸ್. ಪಿ. ಹಿರೇಮಠ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ನುಡಿಗಳನ್ನಾಡಿದರು. ಟಿವಿ ಚಾನೆಲ್‌ಗಳು ಮತ್ತು ಡಿಜಿಟಲ್ ಸುದ್ದಿತಾಣಗಳ ಆರಂಭದಿಂದಾಗಿ ಇಂದು ಪತ್ರಿಕೋದ್ಯಮಕ್ಕೆ ಬಹಳಷ್ಟು ವೇಗದ ಅಂಶ ದೊರೆತಿದೆ. ಸಾಮಾಜಿಕ ಮಾಧ್ಯಮಗಳಿಂದಾಗಿ ಜನಸಾಮಾನ್ಯರ ನಡುವೆ ಪತ್ರಕರ್ತರು ಉದ್ಭವಾಗಿದ್ದು, ಅವರು ಸುದ್ದಿಗಳನ್ನು ತಲುಪಿಸುವಲ್ಲಿ ಸಾಕಷ್ಟು ಪೈಪೋಟಿ ನೀಡುತ್ತಿದ್ದಾರೆ. ಆದರೆ ವಿಶ್ವಾಸಾರ್ಹತೆಗಾಗಿ ನಾವು ವೃತ್ತಿಪರ ಸುದ್ದಿತಾಣಗಳನ್ನೇ ನೋಡಬೇಕು ಎಂದರು.

ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾಲಯದ ವಿದ್ಯುನ್ಮಾನ ಮತ್ತು ಬಹುಮಾಧ್ಯಮ ಸಂಶೋಧನ ಕೇಂದ್ರದ (ಇ.ಎಂ.ಆರ್.ಸಿ.) ನಿರ್ದೇಶಕ ಡಾ. ಅರುಲ್‌ಚೆಲ್ವನ್ ಶ್ರೀರಾಮ್ ವಿಚಾರ ಸಂಕಿರಣದ ದಿಕ್ಸೂಚಿ ನುಡಿಗಳನ್ನಾಡುತ್ತ, ಪ್ರತೀ ತಂತ್ರಜ್ಞಾನವನ್ನು ಈ ಹಿಂದಿನ ಸಮಸ್ಯೆಯನ್ನು ನಿವಾರಿಸಲು ಆವಿಷ್ಕಾರಿಸಲಾಗುತ್ತದೆ. ಆದರೆ ಒಳಿತು ಮತ್ತು ಕೆಡುಕುಗಳು ನಿರ್ಧರಿತವಾಗುವುದು ಅವುಗಳನ್ನು ಬಳಸುವವರ ಮೇಲಾಗಿರುತ್ತದೆ. ಡಿಜಿಟಲ್ ತಂತ್ರಜ್ಞಾನ ಮತ್ತು ಡಿಜಿಟಲ್ ಪತ್ರಿಕೋದ್ಯಮವನ್ನು ನಾವು ಇದೇ ಹಿನ್ನಲೆಯಲ್ಲಿ ಕಾಣಬೇಕು. ಕೋವಿಡ್ ನಂತರ ಡಿಜಿಟಲ್ ತಾಣಗಳು ಅಪಾರವಾಗಿ ಹೆಚ್ಚಾಗಿವೆ. ತಂತ್ರಜ್ಞಾನ ಯಾವುದೇ ಆದರೂ ವಿಷಯ ಎಂದಿಗೂ ಒಂದೇ. ಸುದ್ದಿನೀಡುವಿಕೆ ಮತ್ತು ಸಾರ್ವಜನಿಕ ಹಿತ ಕಾಯುವುದೇ ಪತ್ರಿಕೋದ್ಯಮಕ್ಕೆ ಮುಖ್ಯವಾಗಬೇಕು. ಈ ಹಿನ್ನಲೆಯಲ್ಲಿ ಡಿಜಿಟಲ್ ಮಾಧ್ಯಮದ ವೇಗ, ಬಳಕೆದಾರ ಸ್ನೇಹಿ ಗುಣ, ಕಡಿಮೆ ವೆಚ್ಚಗಳನ್ನು ಪೂರಕವಾಗಿ ಬಳಸಿಕೊಳ್ಳಬಹುದು ಎಂದು ಸಲಹೆಯಿತ್ತರು.

ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಪ್ರೊ. ಡಿ. ಎಸ್. ಪೂರ್ಣಾನಂದ, ಪ್ರತಿ ಹೊಸ ತಂತ್ರಜ್ಞಾನ ಆವಿಷ್ಕಾರಗೊಂಡಾಗ ಕ್ರಾಂತಿಕಾರಕ ಬದಲಾವಣೆ ಆಗುತ್ತದೆ, ಒಳಿತಾಗುತ್ತದೆ ಎಂದು ಭಾವಿಸಲಾಗುತ್ತಿತ್ತು. ರೇಡಿಯೋನಿಂದ ಶಾಂತಿ ಸ್ಥಾಪನೆ, ಟೆಲಿಗ್ರಾಫ್‌ನಿಂದ ದೇಶಗಳ ಮಧ್ಯೆ ಗಟ್ಟಿಸಂಬಂಧಗಳ ಸೃಷ್ಟಿ, ಜೈವಿಕತಂತ್ರಜ್ಞಾನದಿAದ ಹಸಿವಿನ ಅಂತ್ಯವಾಗುತ್ತದೆ ಎಂದು ಹೇಳಲಾಯಿತಾದರೂ ಅದು ಘಟಿಸಲಿಲ್ಲ. ಅಂತೆಯೇ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಂಡು ಇಂದು ಹೆಚ್ಚೆಚ್ಚು ಕೋಮುವಾದ, ದ್ವೇಷ, ಸುಳ್ಳುಸುದ್ದಿಗಳು, ಆಶಾಂತಿಯನ್ನು ಪಸರಿಸಲಾಗುತ್ತಿದೆ. ಆಲ್ಟ್ನ್ಯೂಸ್, ವೆಬ್‌ಕೂಫ್‌ನಂತಹ ಸತ್ಯಪರಿಶೋಧನಾ ವೆಬ್‌ಸೈಟ್‌ಗಳು, ಪರಿಯಂತಹ ತಾಣಗಳು ಡಿಜಿಟಲ್ ಪತ್ರಿಕೋದ್ಯಮದ ಭಾಗವಾಗಿದ್ದು, ಧನಾತ್ಮಕವಾಗಿ ಕೆಲಸ ಮಾಡಲು ಸಾಕಷ್ಟು ಅವಕಾಶಗಳನ್ನು ನಮ್ಮಮುಂದಿರಿಸಿವೆ ಎಂದರು.

ಪರೀಕ್ಷಾಂಗ ಕುಲಸಚಿವ, ಪ್ರೊ. ನವೀನ್‌ಕುಮಾರ್ ಎಸ್. ಕೆ. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂವಹನದ ಆರಂಭದ ದಿನಗಳಿಗೆ ಹೋಲಿಸಿದಲ್ಲಿ ಇಂದು ಕ್ರಾಂತಿಕಾರಕ ಬದಲಾವಣೆಗಳಾಗಿವೆ. ಫೇಸ್‌ಬುಕ್, ಟ್ವಿಟ್ಟರ್, ಮತ್ತು ಇನ್ಸ್ ಟಾಗ್ರಾಂಗಳAತಹ ಸಾಮಾಜಿಕ ಜಾಲತಾಣಗಳ ಮೂಲಕ ಸಾಮಾನ್ಯ ಜನರಿಂದಲೇ ಡಿಜಿಟಲ್ ಜರ್ನಲಿಸಂ ಆರಂಭವಾಯಿತು. ಪ್ರಸ್ತುತ ಅದು ಅಗಾಧವಾಗಿ, ವೃತ್ತಿಪರವಾಗಿ ಬೆಳೆದಿದ್ದು, ನೂರಾರು ಸಾಫ್ಟ್ವೇರ್‌ಗಳು, ಸತ್ಯಪರಿಶೀಲನಾ ವೆಬ್‌ಸೈಟ್‌ಗಳು ಸೇರಿದಂತೆ ಹಲವು ರೀತಿಯಲ್ಲಿ ಅವಕಾಶಗಳು ಲಭ್ಯವಿರುವುದು ಆಶಾದಾಯಕ ಎಂದರು.

ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ವಿಭಾಗದ ಮುಖ್ಯಸ್ಥ ಡಾ ಸತ್ಯಪ್ರಕಾಶ್ ಎಂ. ಆರ್., ಮುಖ್ಯವಾಹಿನಿ ಪತ್ರಿಕೋದ್ಯಮವು ಹಲವು ರೀತಿಯ ಒತ್ತಡಗಳ ನಡುವೆ ನಲುಗಿದಾಗ ಭರವಸೆಯಾಗಿ ಬಂದದ್ದು ಡಿಜಿಟಲ್ ಪತ್ರಿಕೋದ್ಯಮ. ಸಿದ್ಧಾರ್ಥ ವರದರಾಜನ್, ಮುಹಮದ್ ಜುಬೈರ್, ಪ್ರತೀಕ್ ಸಿನ್ಹಾ, ಅಭಿನಂದನ್ ಸಿಕ್ರಿ, ಮಧು ತೆಹ್ರಾನ್, ಎಂ. ಕೆ. ವೇಣು ತರಹದ ಪತ್ರಕರ್ತರು ಡಿಜಿಟಲ್ ಮಾಧ್ಯಮ ಬಳಸಿ ಪರ್ಯಾಯ ಪತ್ರಿಕೋದ್ಯಮವನ್ನು ಆರಂಭಿಸಿದ್ದಾರೆ. ದ್ವೇಷ, ಕೋಮುವಾದ, ಸುಳ್ಳುಸುದ್ದಿಗಳಂತಹ ಸಾಮಾಜಿಕ ಅನಿಷ್ಟಗಳನ್ನು ನಿವಾರಿಸುವಲ್ಲಿ ಇವರ ಪಾತ್ರ ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ವಿಭಾಗದ ಮುಖ್ಯಸ್ಥ ಡಾ. ಸತ್ಯಪ್ರಕಾಶ್ ಎಂ. ಆರ್., ಹಳೆಯ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷರಾದ ಪ್ರೊ. ಸತೀಶ್‌ಕುಮಾರ್, ಪ್ರೊ. ವರ್ಗೀಸ್, ಇನ್ನಿತರ ಅಧ್ಯಾಪಕರು, ಸಂಶೋಧನಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಸೇರಿದಂತೆ ವಿವಿ ವ್ಯಾಪ್ತಿಯ ಐದು ಪತ್ರಿಕೋದ್ಯಮ ಸ್ನಾತಕ ಕಾಲೇಜುಗಳ 60 ವಿದ್ಯಾರ್ಥಿಗಳು ಹಾಜರಿದ್ದರು.  ಡಾ. ರಾಘವೇಂದ್ರ ಉಪಸ್ಥಿತರಿರಲಿದ್ದಾರೆ.

ವಿಚಾರ ಸಂಕಿರಣಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿರುವ ಇ.ಎಂ.ಆರ್.ಸಿ. ನಿರ್ದೇಶಕ ಡಾ. ಅರುಲ್‌ಚೆಲ್ವನ್ ಶ್ರೀರಾಮ್ 'ಪ್ರಾದೇಶಿಕ ಭಾಷೆಗಳಲ್ಲಿನ ಡಿಜಿಟಲ್ ಪತ್ರಿಕೋದ್ಯಮದ ಸ್ಥಿತಿಗತಿಗಳು' ಹಾಗೂ ಈದಿನ ಸುದ್ದಿತಾಣದ ಮುಖ್ಯಸಂಪಾದಕರಾದ ಅಶೋಕ್ ರಾಮ್ ಡಿ. ಆರ್. 'ಡಿಜಿಟಲ್ ಪತ್ರಿಕೋದ್ಯಮ ಕಲಿಕೆಯ ಸವಾಲುಗಳು' ವಿಷಯ ಕುರಿತು ವಿಶೇಷ ಉಪನ್ಯಾಸಗಳನ್ನು ನೀಡಿದರು.