ಮನೆಮನೆ ಮಾತಾಗಿದ್ದ ಜ್ಯೋತಿಷಿ ಎಸ್‌ಕೆ ಜೈನ್ ನಿಧನ! ಇವರ ಬಗ್ಗೆ ನಿಮಗೆ ಗೊತ್ತಾ?
Astrologer SK Jain passes away
Shivamogga Apr 13, 2024 Astrologer SK Jain ಎಲ್ಲಾ ಒಳ್ಳೆಯದಾಗುತ್ತೆ, ಈಗ ಮುಂದಿನ ರಾಶಿಯನ್ನ ನೋಡೋಣ, ಏನೂ ಯೋಚನೆ ಮಾಡಬೇಕಾಗಿಲ್ಲ, ಪರಿಸ್ಥಿತಿಯ ಕಾಲಕ್ಕೆ ತಕ್ಕಂತೆ ಬದಲಾಗುತ್ತೆ. ಒಳ್ಳೆದಿನಗಳು ಬರುತ್ತೆ.. ಹೀಗೆ ಯಾವ ರಾಶಿಯ ಫಲವನ್ನ ಹೇಳಬೇಕಾದರೂ ಸರಳವಾಗಿ ಹಾಗೂ ಹೆದರಿಸದೇ ಹೇಳುತ್ತಿದ್ದ ಜ್ಯೋತಿಷಿ ಅಂದರೆ ಎಸ್‌ಕೆ ಜೈನ್.. ನೈಂಟಿಸ್ (1990) ಕಾಲದ ಯುವಕರಿಗೆ ಎಸ್‌ಕೆ ಜೈನ್ ಎಂದರೇ ಎಲ್ಲಿಂದಲೋ ಬಂದು ಟಿವಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿರುವ ಅವಧೂತರಂತೆ ಕಾಣಿಸಿದ್ದು ಇದೆ. ಏಕೆಂದರೆ ಆ ಕಾಲಕ್ಕೆ ಇದ್ದ ಕೆಲವೇ ಚಾನಲ್‌ಗಳಲ್ಲಿ ಉದಯ ಟಿವಿಯಲ್ಲಿ ಬರುತ್ತಿದ್ದ ಎಸ್‌ಕೆ ಜೈನ್‌ರವರು ಹೇಳುವ ರಾಶಿಫಲಗಳು ನಿಖರವಾಗಿರುತ್ತಿತ್ತು.
ಗೃಹಚಾರ ದೋಷ, ಗೃಹ ಬದಲಾವಣೆ, ಶುಕ್ರದೆಸೆ, ಶನಿಕಾಟ, ರಾಹುಕೇತು ಫಲಗಳನ್ನ ಹೇಳುತ್ತಿದ್ದ ಎಸ್‌ಕೆ ಜೈನ್‌ರವರು ಸಣ್ಣ ಮಗುವಿಗೆ ಅರ್ಥ ಮಾಡಿಸುವ ಮೆಷ್ಟ್ರ ಹಾಗೆ ಕೋಲೊಂದರ ಮೂಲಕ ರಾಶಿಫಲದ ಬೋರ್ಡ್ ನಲ್ಲಿ ಗುರುತು ಮಾಡಿ ವಿವರಿಸುತ್ತಿದ್ದರು. ಏನೇ ಸಮಸ್ಯೆ ಹೇಳಿದರೂ ಅದಕ್ಕೊಂದು ಅಲ್ಲಿಯೇ ಇಂತಹ ದೇವರ ಆರಾಧನೆ ಮಾಡಿ ಎಂದು ಸರಳವಾಗಿ ಪರಿಹಾರ ಹೇಳುತ್ತಿದ್ದರು. ಪೂಜೆ ಪುನಸ್ಕಾರ ಖರ್ಚು ಅಂತೇಲ್ಲಾ ಹೇಳದ ಎಸ್‌ಕೆ ಜೈನ್ ಸಿಂಪಲ್ ಆಗಿ ಒಂದರೆಡು ಮಂತ್ರ ಹೇಳಿಬಿಡಿ ಅಂತಾ ಟಿವಿಯ ಮೂಲಕವೇ ಜನರಿಗೆ ಉಚಿತ ಸಲಹೆ ನೀಡುತ್ತಿದ್ದರು.
ಹೀಗೆ ವಾಹಿನಿಯಲ್ಲಿ ಕಾಣಿಸಿಕೊಂಡ ಮೊದಲ ಜ್ಯೋತಿಷಿ ಎಂದೇ ಖ್ಯಾತರಾಗಿದ್ದ ಎಸ್‌ಕೆ ಜೈನ್ ನಿಧನರಾಗಿದ್ದಾರೆ. ಮೊನ್ನೆ ಮೊನ್ನೆಯವರೆಗೂ ಭವಿಷ್ಯ ಹೇಳಿದ್ದ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದಾರೆ. ಅವರು ಪತ್ನಿ , ಓರ್ವ ಪುತ್ರಿಯನ್ನ ಅಗಲಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆ ಅವರು ಕೊನೆಯುಸಿರು ಎಳೆದಿದ್ದಾರೆ. 1957, ಅಕ್ಟೋಬರ್ 13ರಂದು ಜನಿಸಿದ್ದ ಎಸ್ ಕೆ ಜೈನ್ , ದಕ್ಷಿಣ ಕನ್ನಡದವರು.ಎಸ್‌ಕೆ ಜೈನ್ ತಂದೆ ಬಿ ಜಿ ಶಶಿಕಾಂತ್ ಜೈನ್ ಹೆಸರಾಂತ ಜ್ಯೋತಿಷಿಗಳಾಗಿದ್ದವರು. ವಿದೇಶಗಳಲ್ಲಿಯು ಹೆಸರು ಮಾಡಿದ್ದ ಎಸ್‌ಕೆ ಜೈನ್ ನಿಧನಕ್ಕೆ ಸುದ್ದಿವಾಹಿನಿಗಳು ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.