ಸಕ್ರೆಬೈಲ್ ಆನೆ ಬಿಡಾರದಲ್ಲಿ ಆರಗ ಜ್ಞಾನೇಂದ್ರ ಪ್ರತಿಜ್ಞೆ

Araga Jnanendra vows at Sakrebailu elephant camp

ಸಕ್ರೆಬೈಲ್ ಆನೆ ಬಿಡಾರದಲ್ಲಿ ಆರಗ ಜ್ಞಾನೇಂದ್ರ ಪ್ರತಿಜ್ಞೆ

KARNATAKA NEWS/ ONLINE / Malenadu today/ Jun 5, 2023 SHIVAMOGGA NEWS

ಶಿವಮೊಗ್ಗ/  ಪ್ರಾಣಿ-ಪಕ್ಷಿ-ವನ ಸೇರಿದಂತೆ ನಮ್ಮ ಪರಿಸರವನ್ನು ಪ್ರೀತಿ ಮತ್ತು ಕಾಳಜಿಯಿಂದ ಉಳಿಸಿ ಮುಂದಿನ ಪೀಳಿಗೆಗೆ ನೀಡಿದರೆ ವಿಶ್ವ ಪರಿಸರ ದಿನ ಸಾರ್ಥಕವಾಗುತ್ತದೆ. ಆದ್ದರಿಂದ ಇಂದೇ ಈ ನಿಟ್ಟಿನಲ್ಲಿ ನಾವು ಸಂಕಲ್ಪ ತೊಡೋಣ ಎಂದು ತಿರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ ಹೇಳಿದ್ದಾರೆ. 

ಸಕ್ರೆಬೈಲ್​ನಲ್ಲಿ ಪರಿಸರ ದಿನಾಚರಣೆ 

ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆ, ಪ್ರವಾಸೋದ್ಯಮ ಮಂತ್ರಾಲಯ, ಭಾರತ ಸರ್ಕಾರ, ಬೆಂಗಳೂರು ಮತ್ತ ಅರಣ್ಯ ಇಲಾಖೆ ಶಿವಮೊಗ್ಗ ಇವರ ಸಹಯೋಗದಲ್ಲಿ ಇಂದು ಸಕ್ರೆಬೈಲಿನ ಆನೆ ಬಿಡಾರದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡಿದ ಆರಗ ಜ್ಞಾನೇಂದ್ರರವರು, 

‘ಪ್ಲಾಸ್ಟಿಕ್ ಮಾಲಿನ್ಯ ತೊಲಗಿಸಿ’ ಎಂಬ ಘೋಷವಾಕ್ಯದಡಿ ಈ ಸಾಲಿನ ಪರಿಸರ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಪ್ಲಾಸ್ಟಿಕ್ ಬಳಕೆ ನಮಗೆ ಮಾರಕ. ಪ್ಲಾಸ್ಟಿಕ್ ಇಲ್ಲದ ಕಾಲದಲ್ಲಿಯೂ ನಾವು ನೆಮ್ಮದಿಯಿಂದ ಬದುಕುತ್ತಿದ್ದೆವೆವು. ಮಾರಕವಾಗಿರುವ ಪ್ಲಾಸ್ಟಿಕ್‍ನ್ನು ಉಪಯೋಗಿಸುವುದಿಲ್ಲವೆಂಬ ಸಂಕಲ್ಪವನ್ನು ಈಗಿನಿಂದಲೇ ಮಾಡೋಣ ಎಂದು ಕರೆ ನೀಡಿದರು.

ಪ್ರತಿಜ್ಞೆ ಮಾಡೋಣ

ಪ್ರಕೃತಿ ನಮ್ಮ ಆಸೆಗಳನ್ನು ಪೂರೈಸುತ್ತದೆ, ದುರಾಸೆಯನ್ನಲ್ಲ ಎಂಬುದನ್ನು ನೆನಪಿಟ್ಟುಕೊಂಡು, ಪ್ರಜ್ಞಾವಂತರಾಗಿ ಪರಿಸರದ ಕಾಳಜಿ ವಹಿಸಬೇಕು. ಜಿಲ್ಲೆಯಲ್ಲಿ ಹಿಂದಿದ್ದ ನಿತ್ಯಹರಿದ್ವರ್ಣದ ಕಾಡು ಕಳೆದುಹೋಗುತ್ತಿದೆ. ತಾಪಮಾನ ಏರುತ್ತಿದೆ. ಆದ್ದರಿಂದ ನಮ್ಮನೆಲ್ಲ ರಕ್ಷಿಸುವ ಪರಿಸರವನ್ನು ಉಳಿಸಲು ನಾವು ಕಾಳಜಿಯಿಂದ ವರ್ತಿಸಬೇಕು. ಒಂದೊಂದು ಹನಿ ನೀರು ನಮ್ಮ ದೇಹದ ಒಂದೊಂದು ಹನಿ ರಕ್ತದಂತೆ. ಅದನ್ನು ಕಾಪಾಡಬೇಕು. ಪ್ಲಾಸ್ಟಿಕ್ ಸೇರಿದಂತೆ ಎಲ್ಲ ರೀತಿಯ ಮಾಲಿನ್ಯ ತಡೆದು ಪರಿಸರ ಸಂರಕ್ಷಣೆ ಮಾಡುವ ಪ್ರತಿಜ್ಞೆ ಮಾಡೋಣ ಎಂದರು.

120 ವರ್ಷಗಳಲ್ಲಿ

ಪರಿಸರ ತಜ್ಞರಾದ ಬಿ.ಎಂ.ಕುಮಾರಸ್ವಾಮಿ ಮಾತನಾಡಿ, ಕೈಗಾರಿಕಾ ಕ್ರಾಂತಿ ಆರಂಭವಾಗಿ ಕೇವಲ 120 ವರ್ಷಗಳಲ್ಲಿ ಪರಿಸರಕ್ಕೆ ಎಷ್ಟೊಂದು ಹಾನಿಯಾಗಿದೆ ಎಂಬುದನ್ನು ಕಾಣಬಹುದು. ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಪಶ್ಚಿಮ ಯೂರೋಪ್ ಮತ್ತು ಅಮೇರಿಕಾ ದೇಶಗಳು ಯಥೇಚ್ಚವಾಗಿ ಕಲ್ಲಿದ್ದಲು, ಪೆಟ್ರೋಲಿಯಂ ಬಳಕೆ ಮಾಡಿದ್ದರಿಂದ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಹೆಚ್ಚಾಗಿ ಪರಿಸರ ನಾಶಕ್ಕೆ ಕಾರಣವಾಯಿತು.

ಪರಿಸರ ದಿನ ಏಕೆ ಆಚರಿಸಲಾಗುತ್ತಿದೆ

1972 ರಲ್ಲಿ ಮೊದಲ ಬಾರಿಗೆ ವಿಶ್ವಸಂಸ್ಥೆ ವತಿಯಿಂದ ಪರಿಸರ ಸಂರಕ್ಷಣೆ ಕುರಿತು ಸ್ಟಾಕ್‍ಹೋಂ ನಲ್ಲಿ ಜೂನ್ 5 ರಂದು ಜಾಗತಿಕ ಸಮ್ಮೇಳನ ನಡೆಯಿತು. ಅದರ ನೆನಪಿನ ಅಂಗವಾಗಿ ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ.

ಪ್ಲಾಸ್ಟಿಕ್ ಮಾಲಿನ್ಯ

ಸಾವಿರಾರು ಮಾಲಿನ್ಯಗಳಲ್ಲಿ ಪ್ಲಾಸ್ಟಿಕ್ ಮಾಲಿನ್ಯ ಒಂದಾಗಿದೆ. ಪ್ಲಾಸ್ಟಿಕ್‍ನಿಂದ ಹಲವಾರು ಉಪಯೋಗಗಳಿದ್ದರೂ ಅಷ್ಟೇ ಅಪಾಯಕಾರಿಯಾಗಿದೆ. ಪ್ಲಾಸ್ಟಿಕ್ ಅದರಲ್ಲೂ ಏಕಬಳಕೆಯ ಪ್ಲಾಸ್ಟಿಕ್ ಅತ್ಯಂತ ಅಪಾಯಕಾರಿ. ಪ್ಲಾಸ್ಟಿಕ್ ಇತರೆ ಜೈವಿಕ ವಸ್ತುಗಳಂತೆ ಜೈವಿಕ ವಿಘಟನೆಗೆ ಒಳಗಾಗದ ಕಾರಣ ಸಾವಿರಾರು ವರ್ಷ ಮೈಕ್ರೋ ಪ್ಲಾಸ್ಟಿಕ ಕಣಗಳಾಗಿ ಪರಿಸರದಲ್ಲಿ, ನಾವು ಉಸಿರಾಡುವ ಗಾಳಿಯಲ್ಲಿ ಸೇರಿ ಹಾನಿಯುಂಟು ಮಾಡುತ್ತಿದೆ. ಭೂಮಿಯ ಮೈಕ್ರೊ ಆರ್ಗಾನಿಸಮ್‍ನ ಕೊಲ್ಲುತ್ತಿದೆ. 

ಜಲಚರಗಳಿಗೆ ಹಾನಿ

 ಸಮುದ್ರ-ಸಾಗರಗಳಿಗೆ ಸೇರಿಕೊಂಡು ಸಾಗರ ಮಾಲಿನ್ಯದ ಮೂಲಕ ಜಲಚರ ಸರಪಳಿಗೆ ಹಾನಿ ಮಾಡುತ್ತಿದೆ. 1922 ರ ಯುಎನ್‍ಓ ವರದಿ ಪ್ರಕಾರ ವಿಶ್ವದಲ್ಲಿ ಪ್ರತಿ ವರ್ಷ 430 ಮಿಲಿಯನ್ ಟನ್ ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದೆ. ಅದರಲ್ಲಿ ಶೇ.51 ಏಷಿಯಾ ರಾಷ್ಟ್ರದಲ್ಲಿ ಅದರಲ್ಲೂ ಶೇ.71 ಚೀನಾ ದೇಶದಲ್ಲಿ ಆಗುತ್ತಿದೆ. 80 ಲಕ್ಷ ಟನ್‍ನಷ್ಟು ಪ್ಲಾಸ್ಟಿಕ್ ಸಾಗರ ಸೇರುತ್ತಿದೆ. 

ಏಕಬಳಕೆ ಪ್ಲಾಸ್ಟಿಕ್ ದೊಡ್ಡಶತ್ರು

ಏಕ ಬಳಕೆಯ ಪ್ಲಾಸ್ಟಿಕ್ ನಮ್ಮ ದೊಡ್ಡ ಶತ್ರುವಾಗಿದ್ದು, ನಾವು ಬಳಸಿ ಎಸೆದ ಪ್ಲಾಸ್ಟಿಕ್ ಸಾವಿರಾರು ವರ್ಷ ಮಾಲಿನ್ಯ ಉಂಟು ಮಾಡುತ್ತದೆ. ವರ್ಷಕ್ಕೆ 35 ಲಕ್ಷ ಟನ್ ಪ್ಲಾಸ್ಟಿಕ್ ವೇಸ್ಟ್ ಉತ್ಪಾದನೆಯಾಗುತ್ತಿದ್ದು ಅದರಲ್ಲಿ ಶೇ.68 ಏಕಬಳಕೆ ಪ್ಲಾಸ್ಟಿಕ್ ಆಗಿದೆ. ಏಕ ಬಳಕೆ ಪ್ಲಾಸ್ಟಿಕ್ ಮಾಲಿನ್ಯದ ದೊಡ್ಡ ಕಾರಣ ಏಕಬಳಕೆ ನೀರಿನ ಬಾಟಲ್ ಮಾರುಕಟ್ಟೆ ವ್ಯಾಪಕವಾಗಿ ನಮ್ಮಲ್ಲಿ ಬೆಳೆಯುತ್ತಿರುವುದು. ಮದುವೆ ಮನೆಗಳಲ್ಲಿ ಸಾವಿರಾರು ನೀರಿನ ಬಾಟಲ್ ಬಳಸಿ ತಿಪ್ಪೆಗೆ ಎಸೆಯಲಾಗುತ್ತಿದೆ. 

ನಿಷೇಧವಿದ್ದರೂ ಸಿಗುತ್ತಿದೆ

ಕೇಂದ್ರ ಸರ್ಕಾರ 2022 ರ ಜುಲೈ ಲ್ಲಿ 19 ರೀತಿಯ ಏಕ ಬಳಕೆ ಪ್ಲಾಸ್ಟಿಕ್ ನಿಷೇಧಿಸಿದ್ದರೂ ಅದರ ಜಾರಿ ವಿಫಲವಾಗಿದೆ. ಕಾರಣ ನಾವುಗಳು. ಪ್ಲಾಸ್ಟಿಕ್ ಮಾಲಿನ್ಯಕ್ಕೆ ಕಾರಣ ನಾವೆ. ಪರಿಹಾರವೂ ನಮ್ಮ ಕೈಯಲ್ಲಿದ್ದು ಇನ್ನು ಮುಂದೆ ಪ್ಲಾಸ್ಟಿಕ್ ಕವರ್, ಸ್ಟ್ರಾ ಇತ್ಯಾದಿ ಏಕಬಳಕೆ ಪ್ಲಾಸ್ಟಿಕ್ ಬಳಸುವುದಿಲ್ಲವೆಂದು ಯುವಜನತೆ, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ನಿರ್ಧಾರ ಕೈಗೊಳ್ಳಬೇಕೆಂದರು.

ಆನೆಗಳಿಗೆ ನಾಮಕರಣ

ಇನ್ನೂ ಇದೇ ಕಾರ್ಯಕ್ರಮದಲ್ಲಿ ಆನೆಬಿಡಾರದ ಎರಡು ಆನೆ ಮರಿ ಮತ್ತು ಒಂದು ಆನೆ ಸೇರಿ ಮೂರೆ ಆನೆಗಳಿಗೆ ಕ್ರಮವಾಗಿ ಕೃಷ್ಣ, ಅಭಿಮನ್ಯು ಮತ್ತು ಧೃವ ಎಂಬುದಾಗಿ ಶಾಸಕರ ಸಮ್ಮುಖದಲ್ಲಿ ನಾಮಕರಣ ಮಾಡಲಾಯಿತು.

ವನ್ಯಜೀವಿ ಉಪವಲಯ ಅಧಿಕಾರಿ ಪ್ರಸನ್ನಕೃಷ್ಣ ಪಟಗಾರ್ ವಿಶ್ವ ಪರಿಸರ ದಿನಾಚರಣೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. 

ಬೆಳಿಗ್ಗೆ 8.30 ರಿಂದ 9 ಗಂಟೆವರೆಗೆ ಸಕ್ರೆಬೈಲಿನ ಆನೆಬಿಡಾರದಲ್ಲಿ  ಸ್ವಚ್ಚತಾ ಅಭಿಯಾನ ಕೈಗೊಳ್ಳಲಾಗಿತ್ತು. ಆನಂತರ ಅರಣ್ಯ ಇಲಾಖೆ, ಕಾನೂನೂ ಸೇವಾ ಪ್ರಾಧಿಕಾರ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪ್ರವಾಸೋದ್ಯ ಇಲಾಖೆಯ ನಿರ್ದೇಶಕರಾದ ಮೊಹಮ್ಮದ್ ಫಾರೂಕ್ ಇಕೋ ಟೂರಿಸಂ ಮತ್ತು ಬಯೋ ಡೈವರ್ಸಿಟಿ ಸಂರಕ್ಷಣೆ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ  ಅರಣ್ಯ ಇಲಾಖೆ ಸಿಸಿಎಫ್ ಡಾ.ಹನುಮಂತಪ್ಪ, ಅರಣ್ಯ ಅಧಿಕಾರಿ ಶಿವಶಂಕರ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಅವಿನ್ ಆರ್, ಎಸ್.ಪಿ.ಶೇಷಾದ್ರಿ, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಪರಿಸರ ಪ್ರೇಮಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.




ಶಿವಮೊಗ್ಗ/ ಜೂ. 07 ರಂದು ವಿದ್ಯುತ್ ವ್ಯತ್ಯಯ; ಸಹಕರಿಸಲು ಮನವಿ

ಶಿವಮೊಗ್ಗ ನಗರದ ಎಂ.ಆರ್.ಎಸ್. ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಇರುವುದರಿಂದ ಜೂ. 07 ರಂದು  ಬೆಳಿಗ್ಗೆ 09-30 ರಿಂದ ಸಂಜೆ 05-00 ಗಂಟೆವರೆಗೆ ಎಫ್-5 ಫೀಡರ್ ವ್ಯಾಪ್ತಿಯಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ 

ಎಲ್ಲೆಲ್ಲಿ?

 ಎಂ.ಆರ್.ಎಸ್. ವಾಟರ್ ಸಪ್ಲೈ,  ಎಂ.ಆರ್.ಎಸ್.  ಕಾಲೋನಿ, ಹರಿಗೆ, ಮಲವಗೊಪ್ಪ, ವಡ್ಡಿನಕೊಪ್ಪ, ನಂಜಪ್ಪ ಲೇಔಟ್, ಪ್ರಿಯಾಂಕ ಲೇಔಟ್, ಎಪ್-3 ಫೀಡರ್ ವ್ಯಾಪ್ತಿಯ ಜ್ಯೋತಿನಗರ, ವಿದ್ಯಾನಗರ, ಕಂಟ್ರಿ ಕಬ್ಲ್ ರಸ್ತೆ, ಚಿಕ್ಕಲ್, ಗುರುಪುರ, ಪುರಲೆ, ಸಿದ್ದೇಶ್ವರ ನಗರ, ಶಾಂತಮ್ಮ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶ, ಎಫ್-2 ಫೀಡರ್ ವ್ಯಾಪ್ತಿಯ ಬಿ.ಹೆಚ್.ರಸ್ತೆ, ನೆಹರು ರಸ್ತೆ, ದುರ್ಗಿಗುಡಿ ಮುಖ್ಯರಸ್ತೆ, ಪಾರ್ಕ್ ಬಡಾವಣೆ, ತಿಲಕ್‍ನಗರ, ಸರ್.ಎಂ.ವಿ.ರಸ್ತೆ, ಬಾಲ್‍ರಾಜ್ ಅರಸ್ ರಸ್ತೆ, ಗಾಂಧಿ ಪಾರ್ಕ್. ಲೂರ್ದುನಗರ, ಕಾನ್ವೆಂಟ್ ರಸ್ತೆ, ಬಾಪುಜಿನಗರ, ಚರ್ಚ್ ಕಾಂಪೌಂಡ್, ಟಿ.ಜಿ.ಎನ್.ಬಡಾವಣೆ, ಟ್ಯಾಂಕ್ ಬೌಂಡ್‍ರಸ್ತೆ, ಮೀನಾಕ್ಷಿ ಭವನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಜೂ. 08 ಮತ್ತು 09 ರಂದು ವಿದ್ಯುತ್ ವ್ಯತ್ಯಯ; ಸಹಕರಿಸಲು ಮನವಿ

ಶಿವಮೊಗ್ಗ ತಾಲ್ಲೂಕಿನ  ಕುಂಸಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ಕಾಮಗಾರಿ ಇರುವುದರಿಂದ ಜೂ.08 ಮತ್ತು 09 ರಂದು  ಬೆಳಿಗ್ಗೆ 09-00 ರಿಂದ ಸಂಜೆ 06-00 ಗಂಟೆವರೆಗೆ ಈ ಕೆಳಕಂಡ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. 

ಎಲ್ಲೆಲ್ಲಿ?

ಕುಂಸಿ, ಬಾಳೆಕೊಪ್ಪ, ಜೋರಡಿ, ತುಪ್ಪೂರು, ಕೋಣಿಹೊಸೂರು, ಹೊರಬೈಲು,  ಹಾರ್ನಳ್ಳಿ, ರಾಮನಗರ, ಮುದುವಾಲ, ಯಡವಾಲ, ದೇವಬಾಳು, ತ್ಯಾಜವಳ್ಳಿ, ಕೊನಗವಳ್ಳಿ, ಹಿಟ್ಟೂರು, ನಾರಾಯಣಪುರ, ಮಲ್ಲಾಪುರ, ರಟ್ಟೆಹಳ್ಳಿ, ಆಯನೂರು, ಮಂಡಘಟ್ಟ, ಸಿರಿಗೆರೆ, ಸೂಡೂರು, ಕೂಡಿ, ಮಲೆಶಂಕರ, ದೊಡ್ಡಮತ್ತಲಿ, ತಮ್ಮಡಿಹಳ್ಳಿ, ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಕಾರ್ಯಕರ್ತನ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಹೆಗಲುಕೊಟ್ಟ ಸ್ಪೀಕರ್ ಯುಟಿ ಖಾದರ್​!

ಶಿವಮೊಗ್ಗ/ ನಿಧನ‌ ಹೊಂದಿದ ಕಾಂಗ್ರೆಸ್‌ ಕಾರ್ಯಕರ್ತನ ಅಂತ್ಯಸಂಸ್ಕಾರದಲ್ಲಿ ಸ್ಪೀಕರ್ ಯುಟಿ ಖಾದರ್ ಪಾಲ್ಗೊಂಡು, ತಮ್ಮ ಪಕ್ಷದ ಕಾರ್ಯಕರ್ತನಿಗೆ ಅಂತಿಮ ನಮನ ಸಲ್ಲಿಸಿದರು. ಅಂತ್ಯಸಂಸ್ಕಾರಕ್ಕೆ ಮೃತದೇಹವನ್ನು ಕೊಂಡೊಯ್ಯುವಾಗ ಹೆಗಲು ಕೊಟ್ಟ ಸ್ಪೀಕರ್​, ಕೊನೆಕ್ಷಣದವರೆಗೂ ಇದ್ದು, ಅಗಲಿದ ಕಾರ್ಯಕರ್ತನಿಗೆ ವಿದಾಯ ಹೇಳಿದರು. 

ಕುರ್ನಾಡು ಮಿತ್ತಕೋಡಿ ವೆಂಕಪ್ಪ ಕಾಜವ ಅವರ ಪುತ್ರ ಹಾಗೂ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವರ ಸಹೋದರ ಶರತ್ ಕಾಜವ ಎಂಬುವವರು ಹೃದಯಾಘಾತದಿಂದ ನಿಧನರಾಗಿದ್ದರು.

 ಅವರ ಅಂತಿಮ ಸಂಸ್ಕಾರದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಆಪ್ತ ಬಳಗದವರು ಪಾಲ್ಗೊಂಡಿದ್ದರು. ಈ ವೇಳೆ   ಸ್ಪೀಕರ್ ಯು.ಟಿ.ಖಾದರ್ ಕೂಡ ಅಲ್ಲಿದ್ದು, ಅಂತ್ಯಕ್ರಿಯೆ ವ್ಯವಸ್ಥೆಗಳನ್ನು ಗಮನಿಸಿದರಷ್ಟೆ ಅಲ್ಲದೆ ಮೃತದೇಹ ಸಾಗಿಸಲು ಹೆಗಲು ಕೊಟ್ಟು ಭಾವುಕರಾದರು.