HMC ಗಣಪತಿ : ಶಿವಮೊಗ್ಗದಲ್ಲಿಯೇ ಇದೇ ರಾಜ್ಯದ ಏಕೈಕ ಹಿಂದೂ, ಮುಸ್ಲಿಮ್​, ಕ್ರಿಶ್ಚಿಯನ್​ ಗಣಪತಿ!

HMC Ganapati: Shivamogga is the only Hindu, Muslim and Christian Ganapati in the state. /hindu mahasabha ganapathi shimoga

HMC ಗಣಪತಿ : ಶಿವಮೊಗ್ಗದಲ್ಲಿಯೇ ಇದೇ ರಾಜ್ಯದ ಏಕೈಕ ಹಿಂದೂ, ಮುಸ್ಲಿಮ್​, ಕ್ರಿಶ್ಚಿಯನ್​ ಗಣಪತಿ!
HMC Ganapati: Shivamogga is the only Hindu, Muslim and Christian Ganapati in the state.

Malenadu today news report  | HMC ಗಣಪತಿ : ಶಿವಮೊಗ್ಗದಲ್ಲಿಯೇ ಇದೇ ರಾಜ್ಯದ ಏಕೈಕ ಹಿಂದೂ, ಮುಸ್ಲಿಮ್​, ಕ್ರಿಶ್ಚಿಯನ್​ ಗಣಪತಿ! ಇಡೀ ಊರಿಗೆ ಒಬ್ಬನೇ ಗಣೇಶ, ಆತನ ಕಾವಲಿಗೆ ಒಬ್ಬನೇ ಪೊಲೀಸ್​! 22 ವರ್ಷಗಳಿಂದ ನಡೆಯುತ್ತಿರುವ HMC ಗಣಪನ ಬಗ್ಗೆ ಎಕ್ಸ್​ಕ್ಲ್ಯೂಸಿವ್ ಸ್ಟೋರಿ ಬರೆದಿದ್ದಾರೆ ಜೆಪಿ! JPEClUSIVE STORY

ಶಿವಮೊಗ್ಗ ಸುದ್ದಿ (shivamogga suddi) : ಕೋಮುಸೂಕ್ಷ್ಮ ಶಿವಮೊಗ್ಗ, ಕೋಮು ದಳ್ಳುರಿಗೆ ಶಿವಮೊಗ್ಗ ವೇದಿಕೆಯಾಗುತ್ತಿದೆ ಎಂದು ಪುಟಗಟ್ಟಲೇ ಸುದ್ದಿಗಳು ಈಗೀಗ ರಾಷ್ಟ್ರೀಯ ಮಾಧ್ಯಮಗಳಲ್ಲಿ ಬರುತ್ತಿವೆ.

ಶಿವಮೊಗ್ಗದ ಗಂಧಗಾಳಿಯು ತಿಳಿಯದವರು, ಶಿವಮೊಗ್ಗವನ್ನು ಹೈಲಿ ಸೆನ್ಸಿಟಿವ್ ಏರಿಯಾ ಎಂದು ಪಟ್ಟಕಟ್ಟುತ್ತಿವೆ.

ಅದರ ಹಿಂದೆ ಅಡಗಿರುವ ಹಿತಾಸಕ್ತಿಗಳು ಏನೇ ಇರಲಿ. ಆದರೆ ಸುದ್ದಿ ಜಗತ್ತಿಗೆ ಶಿವಮೊಗ್ಗ ಕೋಮು ಪ್ರೇಮದ ನಾಡು ಎಂಬುದನ್ನ ಇವತ್ತು ನಾವು ನಿಮ್ಮ ಮುಂದೆ ಇಡುತ್ತಿರುವ ವರದಿ ಸಾರಿ ಸಾರಿ ಹೇಳುತ್ತಿದೆ.

ಭದ್ರಾವತಿ ಬೊಮ್ಮನಕಟ್ಟೆಯ ಪ್ರಸಿದ್ಧ ಗಣಪತಿ.. ಹೆಚ್​ಎಂಸಿ ಗಣಪತಿ (HMC ganapati bhadravati)

ಹೆಚ್​ಎಂಎಸ್​ ಗಣಪನ ಭದ್ರತೆ ಹಾಗೂ ಹಬ್ಬದ ಆಚರಣೆಯ ರಕ್ಷಣೆಯಲ್ಲಿ ಬ್ಯುಸಿಯಾಗಿರುವ ಶಿವಮೊಗ್ಗದ ಪೊಲೀಸ್​ ಇಲಾಖೆ ಈ ಗಣಪತಿಗೆ ಶಿವಮೊಗ್ಗದ ಅರ್ಧದಷ್ಟು ಪೊಲೀಸರನ್ನ ಒಟ್ಟುಗೂಡಿಸಿ ರಕ್ಷಣೆ ನೀಡಬೇಕು. ಆದರೆ, ಇಲ್ಲಿ ಸನ್ನಿವೇಶವೇ ಬೇರೆಯಿದೆ, ಇಲ್ಲಿಯ ಗಣಪತಿಯ ಕಾವಲಿಗೆ ಬರೋದು ಒಬ್ಬನೇ ಒಬ್ಬ ಪೊಲೀಸರು, ಅವರ ಡ್ಯೂಟಿಯು ಇಲ್ಲಿ ಆರಾಮ..

ಏಕೆಂದರೆ, ಭದ್ರಾವತಿಯ ಬೊಮ್ಮನಕಟ್ಟೆಯಲ್ಲಿ ಪ್ರತಿಷ್ಟಾಪಿಸುವ ಗಣಪತಿಯು ಸರ್ವಧರ್ಮದ ಸಮನ್ವಯದ ಗಣಪತಿ. ಆತನಿಗೆ ಕೋಮು ವಿಘ್ನನೇ ಕಾಡುವುದಿಲ್ಲ. ಈ ಗಣೇಶ ಮಂಡಳಿಯ ಅಧ್ಯಕ್ಷ ಒಬ್ಬ ಮುಸ್ಲಿಮ್​, ಕಾರ್ಯದರ್ಶಿ ಕ್ರಿಶ್ಚಿಯನ್​, ಉಪಾಧ್ಯಕ್ಷ ಹಿಂದೂ..ಬಹುಶಃ ಜಾತ್ಯಾತೀತ ಗಣೇಶನ ವಿವರಣೆ ಈ ಒಂದು ಸಾಲು ಸಾಕು ಅನಿಸುತ್ತದೆ. ಆದರೆ ಇಂಟರ್​ಸ್ಟಿಂಗ್​ ಸಂಗತಿಗಳು ಇನ್ನೂ ಇವೆ!

ಹಿಂದೂ(H) ಮುಸ್ಲಿಮ್ (M)​ ಕ್ರಿಶ್ಚಿಯನ್ (C) ಗಣಪತಿ​

ಬೊಮ್ಮನ ಕಟ್ಟೆಯ ವಾರ್ಡ್​ ನಂಬರ್​ 22 & 24, ಹಿಂದೂ, ಮುಸ್ಲಿಮ್​ ಹಾಗೂ ಕ್ರಿಶ್ಚಿಯನ್​ ಸಮುದಾಯಗಳು ವಾಸವಿರುವ ಪ್ರದೇಶ.

ಇಲ್ಲಿ ಕಳೆದ 22 ವರ್ಷಗಳಿಂದಲೂ ಗಣಪತಿಯನ್ನು ಪ್ರತಿಷ್ಟಾಪಿಸಲಾಗುತ್ತಿದ್ದು, ವಿಜ್ರಂಭಣೆಯಿಂದ ಆರಾಧಿಸಿಕೊಂಡು ಬರಲಾಗುತ್ತಿದೆ.

ಸ್ವತಃ ಮುಸ್ಲಿಮ್​, ಕ್ರಿಶ್ಚಿಯನ್​ ಸಮುದಾಯದವರು ಗಣಪತಿ ಉತ್ಸವದ ಉಸ್ತುವಾರಿಯನ್ನು ಇಲ್ಲಿ ಹೊತ್ತುಕೊಳ್ಳುತ್ತಾರೆ. ಅಷ್ಟೆಅಲ್ಲದೆ, ಯುವ ಸಮುದಾಯದವರು, ಹಮ್ಮು ಬಿಮ್ಮು ಇಲ್ಲದೆ ಗಣಪತಿ ಬಪ್ಪಾ ಮೋರಿಯಾ ಅಂತ ನಾಸಿಕ್​ ಡೊಳ್ಳಿಗೆ ಹೆಜ್ಜೆ ಹಾಕುತ್ತಾ ಸಂಭ್ರಮಿಸುತ್ತಾರೆ.

ಸುತ್ತಮುತ್ತಲಿನ ಪ್ರದೇಶಗಳಲ್ಲಿಯೇ ಇದು ಅತಿದೊಡ್ಡ ಗಣಪತಿಯಾಗಿದ್ದು, ಈ ಮೂಷಿಕ ವಾಹನನ ವಿಸರ್ಜನೆಗೆ ನೆರೆಹೊರೆಯ ಹತ್ತೂರು ಸೇರುತ್ತದೆ.

ಹೆಚ್​ಎಂಸಿ ಅಂಗಡಿ, ಹೆಚ್​ಎಂಸಿ ಆಟೋ, ಹೆಚ್​ಎಂಸಿ ಸರ್ಕಲ್​, ಹೆಚ್​ಎಂಸಿ ಗಣಪ!

ಭದ್ರಾವತಿಯಿಂದ ತುಸು ದೂರ ಇರುವ ಬೊಮ್ಮನ ಕಟ್ಟೆಗೆ ಹೋದರೆ, ಮೊದಲು ಕಣ್ಣಿಗೆ ಹೆಚ್​ಎಂಸಿ ಸರ್ಕಲ್​ ಕಾಣುತ್ತದೆ. ಆ ಕಡೆ ಈ ಕಡೆ ನೋಡಿದರೆ, ಹೆಚ್​ಎಂಸಿ ದಿನಸಿ ಅಂಗಡಿ, ಹೆಚ್​ಎಂಸಿ ಹೋಟೆಲ್​ ಅಷ್ಟೆ ಯಾಕೆ ಹೆಚ್​ಎಂಸಿ ಆಟೋಗಳು ಕೂಡ ಸಿಗುತ್ತವೆ.

ಏಕೇ ಹೀಗೆ, ಇಷ್ಟೊಂದು ಅನ್ಯೋನ್ಯತೆನಾ, ಇದು ಸಾಧ್ಯನಾ ಅಂತಾ ಕೇಳಿದರೆ, ಈ ಊರಿನವರು, ನಾವು ಊರು ಕೇರಿ ಮಕ್ಕಳು ಮೊದಲು ನಮ್ಮೊಳಗೆ ವಿಷವಿಲ್ಲ ನಾವೆಲ್ಲರೂ ಒಂದು, ಇಂದು, ಮುಂದು, ಎಂದೆಂದಿಗೂ ಎನ್ನುತ್ತಾರೆ. ಊರಿನಲ್ಲಿ ಯಾವುದೇ ಹಬ್ಬವಿರಲಿ, ಯಾರದ್ದೇ ಹಬ್ಬವಿರಲಿ ಊರು ಕೇರಿಯವರೆಲ್ಲರೂ ಬಂದು ಹೋಗುತ್ತಾರೆ! ಅಷ್ಟೆ ಅಲ್ಲದೆ ಊರ ಹಬ್ಬಗಳಿಗೆ ಊರಿನ ಬಾಗಿಲಿಗೆ ತೋರಣ ಕಟ್ಟಿ ನೆಂಟರಿಷ್ಟರನ್ನೂ ಕರೆಯುತ್ತಾರೆ

ಈದ್​ ಮಿಲಾದ್, ಬ್ರಕ್ರೀದ್​, ಕ್ರಿಸ್ಮಸ್​ ಹಬ್ಬಗಳನ್ನು ಹಿಂದೂಗಳು ಓಡಾಡಿ ನಡೆಸಿಕೊಟ್ಟರೆ, ಹಿಂದೂಗಳ ಹಬ್ಬಗಳಲ್ಲಿ ಬಂದು ಬಳಗದಂತೆ ಬಂದು ಹೆಗಲು ಕೊಡುತ್ತಾರೆ ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ನರು.ನೆರೆಹೊರೆಯರಲ್ಲಿ ದೇವರ ಕಾಣು ಎಂಬಂತೆ ಬದುಕುತ್ತಿರುವ ಇಲ್ಲಿ, ಜಗಳವೇ ಆಗಿಲ್ಲವೆಂದಿಲ್ಲ. ಆದರೆ, ಎಲ್ಲವನ್ನು ಸಹಬಾಳ್ವೆಯ ಚಾವಡಿಯಲ್ಲಿ ಸರಿದಾರಿಗೆ ತಂದು ತೂಗುವ ಹಿರಿಯರು ಇಲ್ಲಿದ್ದಾರೆ.

ಮಸೀದಿ ಹಾಗೂ ಚರ್ಚ್​ ನಡುವಲ್ಲಿ ಗಣೇಶನ ಪ್ರತಿಷ್ಟಾಪನೆ

ಕತೂಹಲದ ಸಂಗತಿಗಳಲ್ಲಿ ಕಣ್ಣಿಗೂ ಖುಷಿ ತರುವ ವಿಷಯವೆಂದರೆ, ಹೆಚ್​ಎಂಸಿ ಸರ್ಕಲ್​ನ ಸಮೀಪವೇ ಇಡುವ ಗಣಪತಿಯ ಪೆಂಡಾಲ್​ ಪಕ್ಕದಲ್ಲಿಯೇ ಮಸೀದಿಯಿದೆ. ಚೂರು ಹಿಂದೆ ಹೋದರೆ ಚರ್ಚ್​ ಸಿಗುತ್ತದೆ. ಇಗರ್ಜಿ ಹಾಗೂ ಮಸ್ಜೀದ್​ ನಡುವಲ್ಲಿ ವಿಘ್ನ ನಿವಾರಕ ಇಡೀ ಊರಿಗೆ ಮಂಗಳಕರವಾಗಲಿ ಎಂದು ಹಾರೈಸುತ್ತಿದ್ಧಾನೆ. 22 ವರ್ಷಗಳಲ್ಲಿ ಪ್ರತಿವರ್ಷವೂ ತಪ್ಪದೆ, ವಿನಾಯಕೋತ್ಸವವನ್ನು ಆಚರಿಸಿಕೊಂಡು ಬರುವ ಸಲುವಾಗಿಯೇ ಇಲ್ಲಿ ಗಣೇಶ ಮಂಡಳಿಯನ್ನು ಸ್ಥಾಪಿಸಿಕೊಳ್ಳಲಾಗಿದ್ದು, ಅದನ್ನು ಕೂಡ ಹೆಚ್​ಎಂಸಿ ಗಣಪತಿ ಕರೆಯಲಾಗುತ್ತದೆ. ಗಣಪತಿ ಕೂರಿಸಲು ದೇಣಿಗೆ ಕೊಡುವವರಿಗೂ ಹೆಚ್​ಎಂಸಿ ಗಣಪತಿ ಹೆಸರಿನ್ಲಲಿಯೇ ರಶೀದಿ ನೀಡಲಾಗುತ್ತದೆ.

ಅಧ್ಯಕ್ಷ, ಉಪಾಧ್ಯಕ್ಷ , ಕಾರ್ಯದರ್ಶಿ

ಇನ್ನೂ ಈ ಸಮಿತಿಯಲ್ಲಿ ಸ್ಥಳೀಯ ನಿವಾಸಿ ಗಿಲಾನಿ ಅಧ್ಯಕ್ಷರಾದರೆ, ನವೀನ್​ ಉಪಾಧ್ಯಕ್ಷರಾಗಿದ್ದಾರೆ, ಇನ್ನೂ ಕ್ರಿಶ್ಚಿಯನ್​ ಸಮುದಾಯದವರಾದ ನರೇಂದ್ರ ಬಾಬು ಕಾರ್ಯದರ್ಶಿಯಾಗಿ ಎಲ್ಲಾ ಕೆಲಸಗಳನ್ನು ನೋಡಿಕೊಳ್ತಿದ್ದಾರೆ.

ಒಂದು ತಿಂಗಳಿಗೂ ಮೊದಲೇ ಇಂತಹ ಕೆಲಸ ಇವರದ್ದು ಈ ಜವಾವ್ದಾರಿ ಇಂತಹವರದ್ದು ಎಂದು ಹಂಚಿಕೊಳ್ಳುವ ಸಮಿತಿಗೆ ಇಡೀ ಊರು ಜೊತೆಯಾಗಿ ನಿಲ್ಲುತ್ತದೆ. ಊಟದ ವ್ಯವಸ್ಥೆ ನನ್ನದು, ವಾಹನ ವ್ಯವಸ್ತೆ ನನ್ನದು, ಲೈಟಿಂಗ್ಸ್ ನಾನ್ ನೋಡ್ಕೊಳ್ತೀನಿ ಎಂದು ಧರ್ಮದ ಚೌಕಟ್ಟಿಲ್ಲದೆ ಬಂದು ಮುಂದೆ ನಿಂತು ವ್ಯವಸ್ಥೆ ಮಾಡುತ್ತಾರೆ.

ಪೆವಿಕಾಲ್​ನಂತಹ ಬಾಂಧವ್ಯವಿದು

ಇಡೀ ಊರಿನ ಐಕಾನ್​ ಆಗಿರುವ ಗಣೇಶನ ಈ ಉತ್ಸವ ನಮ್ಮಲ್ಲಿನ ಬಾಂಧವ್ಯವಗಳಿಗೆ ಮತ್ತಷ್ಟು ಪೆವಿಕಾಲ್​ನಂತಃ ಬಂದ ಬೆಸೆಯುತ್ತಿದ್ದಾನೆ. ಇದೆಂದೂ ಒಡೆಯದು ಎನ್ನುತ್ತಾರೆ ಸ್ಥಳೀಯರೊಬ್ಬರು.ಐದು ದಿನಗಳ ಕಾಲ ನಡೆಯುವ ಇಲ್ಲಿನ ಗಣೇಶೋತ್ಸವ ದಿನಕ್ಕೊಂದು ವಿಶೇಷಗಳನ್ನು ಹೊಂದಿರುತ್ತದೆ. ಮೈಕು ಸೌಂಡು, ಗಂಟೆ ಶಬ್ದ, ಡಿಜೆ, ಡೋಳು ಇದೆಲ್ಲಾ ಎಂದಿಗೂ ಇಲ್ಲಿ ಮ್ಯಾಟರ್​ಗಳು ಅನಿಸಿಲ್ಲ. ಹಬ್ಬದ ಅಂದ್ಮೇಲೆ ಹಬ್ಬನೇ , ಕುಣಿದು ಕುಪ್ಪಳಿಸೋಣ,, ನಾಳೆ ಅನ್ನೋದನ್ನ ನಾಳೆ ನೋಡೋಣ ಎಂಬುದು ಇಲ್ಲಿನವರ ನಂಬಿಕೆ

ಊರ ಜಾತ್ರೆಯಂತೆ ಗಣಪತಿ ಮೆರವಣಿಗೆ

ಅಂತಿಮವಾಗಿ ಊರಿಗೆ ಬಂದ ಗಣೇಶನನ್ನು ಅಷ್ಟೆ ಗೌರವದಿಂದ ಕಳುಹಿಸಿಕೊಡಬೇಕಲ್ಲ. ಅದಕ್ಕಾಗಿ ನಡೆಯುವ ವಿಶಿಷ್ಟ ವಿಸರ್ಜನಾ ಮೆರವಣಿಗೆಯು ಸಹ ಇಲ್ಲಿ ವಿಶೇಷವೇ ಸರಿ. ಎಲ್ಲಾ ಜಾತಿ, ಧರ್ಮ, ಸಮುದಾಯದವರು ಒಟ್ಟಿಗೆ ಸೇರುವ ಮೆರವಣಿಗೆಯು ನೋಡಲೇ ಕಣ್ಣಿಗೊಂದು ಹಬ್ಬಂತಿರುತ್ತದೆ.ಸುತ್ತಮುತ್ತಲಿನವರು ಜಾತ್ರೆಯಂತೆ ಬರುವ ಮೆರವಣಿಗೆಗೆ ಕಾವಲಿಗೆಂದು ಪೊಲೀಸರು ಹೆಚ್ಚುವರಿ ತುಕಡಿಗಳನ್ನ ಕಳುಹಿಸಬೇಕೆ ಎಂದರೇ ಊರಿನವರು ಬರುವುದಾದರೆ ಊಟಕ್ಕೆ ಬನ್ನಿ ಕಾವಲಿಗೆ ಬೇಡ ಎನ್ನುತ್ತಾರೆ. ಈ ಊರಿನವರ ಈ ಬಾಂಧವ್ಯವನ್ನು ನೋಡಿ ಸ್ವತಃ ಪೊಲೀಸ್ ಇಲಾಖೆಯೇ ಅಚ್ಚರಿ ವ್ಯಕ್ತಪಡಿಸುತ್ತದೆ. ಕೇವಲ ಒಬ್ಬನೇ ಒಬ್ಬ ಪೊಲೀಸ್ ಬಂದು ಇಡೀ ಗಣಪತಿಯ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ಅದು ಕೂಡ ಪ್ರೋಟೋಕಾಲ್​ನ ಕಾರಣಕ್ಕೆ.

ಲಾಸ್ಟ್​ ಬೈಟ್​!

ಸ್ನೇಹಿತರೇ, ಯಾರದ್ದೋ ಹಿತಾಸಕ್ತಿಗಳಿಗೆ, ಯಾವುದೋ ಹುನ್ನಾರಗಳಿಗೆ, ಯಾವುದೋ ಕಾಣದ ಕೈಗಳ ಆಕಾಂಕ್ಷೆಗಳಿಗೆ ಸಮಾಜದ ನಡುವೆ ವಿಷದ ಬೀಜ ಬಿತ್ತುವ ಹುನ್ನಾರ ಇವತ್ತು ನಿನ್ನೆಯದ್ದಲ್ಲ,

ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ ಬಿತ್ತಿದ ಈ ಬೀಜದ ವಂಶಸ್ತರು ಇವತ್ತಿಗೂ ಸಮುದಾಯದ ನೆಮ್ಮದಿಗೆ ಹುಳಿ ಹಿಂಡುತ್ತಲೇ ಇದ್ದಾರೆ.

ಅಂತಹ ದುಷ್ಕರ್ಮಿಗಳ ಕಣ್ಣು ಈ ಬೊಮ್ಮನಕಟ್ಟೆಯ ಮೇಲೆ ಎಂದಿಗೂ ಬೀಳದಿರಲಿ.. ಇಲ್ಲಿಯ ವಿಘ್ನ ನಿವಾರಕ ಜಗತ್ತಿನೆಲ್ಲೆಡೆ ಕೋಮು ಸಾಮುರಸ್ಯವ ಮೂಡಿಸಲಿ ...