Hindu Mahasabha Shivamogga events /ಹಿಂದೂ ಮಹಾಸಭಾ ಗಣಪತಿಗಾಗಿ ಶಿವಮೊಗ್ಗಕ್ಕೆ ಬಂದಿದ್ರು ವೀರ ಸಾವರ್ಕರ್​!

Hindu Mahasabha Ganapati! Veer Savarkar came to Shivamogga for this Ganesha!

Hindu Mahasabha Shivamogga events /ಹಿಂದೂ ಮಹಾಸಭಾ ಗಣಪತಿಗಾಗಿ ಶಿವಮೊಗ್ಗಕ್ಕೆ ಬಂದಿದ್ರು ವೀರ ಸಾವರ್ಕರ್​!
Hindu Mahasabha Ganapati! Veer Savarkar came to Shivamogga for this Ganesha!

ಹಿಂದೂ ಮಹಾಸಭಾ ಗಣಪತಿ! ಈ ಗಣೇಶನಿಗಾಗಿ ಶಿವಮೊಗ್ಗಕ್ಕೆ ಬಂದಿದ್ರು ವೀರ ಸಾವರ್ಕರ್​! ದೇಶವೇ ಗಮನಿಸುವ ಮೆರವಣಿಗೆಗೆ ಸಾಕ್ಷಿಯಾಗುವ HMS ಗಣಪ ಧಾರ್ಮಿಕ ಹಕ್ಕನ್ನು ಪ್ರತಿಪಾದಿಸಿ ಗೆದ್ದಿದ್ದು ಹೇಗೆ ಗೊತ್ತಾ!? 1945 ರಿಂದ ಇಲ್ಲಿವರೆಗಿನ ಇಂಟರ್​ಸ್ಟಿಂಗ್ ಸಂಗತಿ ಜೆಪಿ ಬರೆಯುತ್ತಾರೆ

ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿವಮೊಗ್ಗ ನಗರದಲ್ಲಿ ಅದ್ದೂರಿಯಾಗಿ ನಡೆಯುತ್ತಿತ್ತು ಆ ಗಣಪನ ಮೆರವಣಿಗೆ.

ಪ್ರೀಯ ಓದುಗರೆ .. ನಾಡಿನ ಸಮಸ್ತ ಒದುಗರಿಗೆ  ಮಲೆನಾಡು ಟುಡೆ ತಂಡದ ವತಿಯಿಂದ ಗೌರಿ  ಗಣೇಶ ಹಬ್ಬದ ಶುಭಾಷಯಗಳನ್ನು ಹೇಳ್ತಾ..ಇಂದಿನ  ಸ್ಟೋರಿಯಲ್ಲಿ ಶಿವಮೊಗ್ಗದ ಹಿಂದುಮಹಾ ಸಭಾ ಗಣೇಶನ  ಸ್ಟೋರಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ.

ಗಣೇಶ ಹಬ್ಬ ಬಂತೆಂದರೇ ಇಡೀ ದೇಶವೆ ಸಂಭ್ರಮ ಸಡಗರದಿಂದ ಹಬ್ಬ ಆಚರಿಸುತ್ತದೆ.ಲಕ್ಷಾಂತರ ಮಂದಿ ಸಾಮೂಹಿಕವಾಗಿ ನೂರಾರು ಗಣಪತಿಗಳನ್ನು ಪ್ರತಿಷ್ಠಾಪಿಸಿ,ಭಕ್ತಿಯ ಪರಾಕಾಷ್ಠೆ ಮೆರೆಯುತ್ತಾರೆ.

ಶಿವಮೊಗ್ಗದಲ್ಲಿ ಇರುವ ಆ ಗಣಪತಿಗೆ ಇದೆ ದೇಶದೆಲ್ಲೆ ವಿಶೇಷ ಪ್ರತಿಷ್ಠೆ

ಸಂತೋಷದಲ್ಲಿ ಮಿಂದೇಳುತ್ತಾರೆ.ನೂರಾರು ಗಣೇಶ ಮೂರ್ತಿಯನ್ನು ಏಕಕಾಲದಲ್ಲಿ ವಿಸರ್ಜನೆ ಮಾಡಿದ್ರೂ ಯಾವೊಂದು ಗಲಾಟೆಗಳಾಗದ ಮಹಾನಗರಗಳು ನಮ್ಮ ಕಣ್ಣ ಮುಂದಿದೆ.

ಆದ್ರೆ ,ಕೇವಲ ಒಂದೇ ಒಂದು ಗಣೇಶ ಮೂರ್ತಿಯನ್ನು ವಿಸರ್ಜಿಸುವಾಗ ಶಿವಮೊಗ್ಗ ನಗರದಲ್ಲಿ ಒಂದು ವಿಶೇಷ ರೀತಿಯ ಸಂಭ್ರಮ ಹಾಗೂ ಒಂದಿಷ್ಟು ಕುತೂಹಲ ಮನೆ ಮಾಡಿರುತ್ತೆ ಅದು ಎಂತಹ ಅನುಭವ ಎಂಬುದು ಶಿವಮೊಗ್ಗದ ಜನತೆಗೆ ಮಾತ್ರ ಗೊತ್ತು.  

ಹಿಂದೂ ಮಹಾಸಭಾ ಗಣಪತಿ

ಈ ಗಣೇಶನ ಪ್ರತಿಷ್ಠಾಪನೆ ಮಾಡಿದಾಗಿನಿಂದ ಹಿಡಿದು ವಿಸರ್ಜನಾ ಮೆರವಣಿಗೆ ಹೋಗೋ ವರೆಗೂ ರಾಜ್ಯ ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳು ಹದ್ದಿನ ಕಣ್ಣಿಟ್ಟು ವಾಚ್ ಅಂಡ್ ಗಾರ್ಡ್ ಮಾಡ್ತಿರುತ್ತವೆ..

ಪೊಲೀಸರ ಬಿಗಿ ಸರ್ಪಗಾವಲಿನಲ್ಲಿ ಆ ಗಣಪನ ಮೆರವಣಿಗೆ ನಡೆದ್ರೂ ಕಿಡಿಗೇಡಿಗಳು ಅಟ್ಟಹಾಸ ಮೆರೆದು ಶಿವಮೊಗ್ಗ ನಗರದ ಶಾಂತಿಯನ್ನೇ ಕದಡಿ ಬಿಟ್ಟಂತಹ ಅನುಭವಗಳಾಗಿವೆ.

ಇತಿಹಾಸದ ಪುಟ ತಿರುಗಿಸಿ ನೋಡ್ದಾಗ ಈ ಗಣೇಶನ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಹಲವು ಅಮಾಯಕರು ಜೀವಕಳೆದುಕೊಂಡ ಕರಾಳ ಅಧ್ಯಾಯಗಳು ತೆರೆದುಕೊಳ್ತವೆ.

2009 ರಿಂದ ತಣ್ಣಗಿದ್ದ ಆ ಗಣೇಶನ ಮೆರವಣಿಗೆ ಈ ಬಾರಿ ಪೊಲೀಸರಿಗೆ ಹಲವು ಸವಾಲುಗಳನ್ನು ಒಡ್ಡಿದೆ. ಈ ಕಾರಣಕ್ಕೇ ಈ ಭಾರೀಯು ಶಿವಮೊಗ್ಗದಲ್ಲಿ ಈ ಬಾರಿ ಬಿಗಿ ಪೊಲೀಸ್ ಭದ್ರತೆಯನ್ನು ನೀಡಲಾಗಿದೆ. 

ಆಡು ಭಾಷೆಯಲ್ಲಿ ಹಿಂದೂ ಮಹಾಸಭಾ ಗಣಪತಿಯನ್ನು ಹೆಚ್.ಎಂ.ಎಸ್ ಗಣಪ ಎಂದು ಸ್ಥಳೀಯರು ಕರೆಯುತ್ತಾರೆ.  

ಶಿವಮೊಗ್ಗದ ಕೋಟೆ ರಸ್ತೆಯಲ್ಲಿರುವ ಭೀಮೇಶ್ವರ ದೇವಸ್ಥಾನದಲ್ಲಿ ಹಿಂದು ಸಂಘಟನಾ ಮಹಾ ಮಂಡಳಿ, ಗಣೇಶೋತ್ಸವ ಸಂದರ್ಭದಲ್ಲಿ ಪ್ರತಿಷ್ಟಾಪಿಸುವ ಗಣೇಶಮೂರ್ತಿಯದು.

ಇತಿಹಾಸದಲ್ಲಿ ನಡೆದಿರುವುದು ಏನು ಗೊತ್ತಾ?

ಮತ್ತೆ ಕೆಲವರು ಗಲಾಟೆ ಗಣಪ ಎಂದು ಈ ಗಣಪತಿಯನ್ನು ಕರೆಯುವುದು ಉಂಟು, ಆದರೆ,  ನಿಜಕ್ಕೂ ಈ ಗಣೇಶ ಗಲಾಟೆ ಗಣಪನಾ..,ಅಂತಾ ಇತಿಹಾಸ ಕೆದಕಿದ್ರೆ..,ಗಣೇಶನ ಮೇಲಿನ ಅಪಖ್ಯಾತಿಯ ಪೊರೆ  ಕಳಚುತ್ತದೆ.

ಏಕೆಂದರೆ  ಶಿವಮೊಗ್ಗದ ಹೆಚ್.ಎಂ.ಸ್ ಗಣಪ ಕಾಟಾಚಾರಕ್ಕೆ ಪ್ರತಿಷ್ಟಾಪನೆಯಾದ ಗಣೇಶ ಅಂತೂ ಖಂಡೀತ ಅಲ್ಲ. ಹಿಂದು ವೈಚಾರಿಕತೆಯ ಮತ್ತು ಧಾರ್ಮಿಕ ತಳಹದಿ ಮೇಲೆ ಪ್ರತಿಷ್ಟಾಪಿಸಲ್ಪಟ್ಟ ಗಣೇಶ.

80-90 ರ ದಶಕದಲ್ಲಿ ಶಿವಮೊಗ್ಗದ ಹಿಂದುಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಅಂದ್ರೆ ಅದು ರೇಡಿಯೋ, ದೂರದರ್ಶನದ ನ್ಯೂಸ್ ನಲ್ಲಿ  ಹೆಡ್ ಲೈನ್ ಸುದ್ದಿಯಾಗ್ತಿತ್ತು.

ಮಹಾರಾಷ್ಟ್ರ, ಗುಜರಾತ್, ಅಕ್ಕಪಕ್ಕದ ರಾಜ್ಯಗಳಲ್ಲಿ ಸಾವಿರಾರು ಗಣಪತಿಯನ್ನು ಒಂದೇ ದಿನ ವಿಸರ್ಜನೆ ಮಾಡುವ ಸುದ್ದಿಗಿಂತ,

ಕೇವಲ ಒಂದೇ ಒಂದು ಗಣಪತಿಯ ವಿಸರ್ಜನ ಮೆರವಣಿಗೆ ದೇಶದ ಗಮನ ಸೆಳೆದಿತ್ತು ಅಂದ್ರೆ,

ನಮ್ಮೂರಿನ ಗಣಪನ ಕಿಮ್ಮತ್ತು ಎಷ್ಟಿರಬೇಕು ನೀವೇ ಯೋಚಿಸಿ.ಇಷ್ಟೆಲ್ಲಾ ಹೇಳಿದ ಮೇಲೆ ಹೆಚ್.ಎಂ.ಎಸ್ ಗಣಪನ ಹಿನ್ನಲೆಯನ್ನು ನಾವು ನೋಡಲೇ ಬೇಕು.

1945 ರಲ್ಲಿ ವೈಚಾರಿಕ ಹಿನ್ನಲೆಯಲ್ಲಿ ಪ್ರತಿಷ್ಠಾಪನೆಯಾದ ಗಣೇಶ.

ಲೋಕಮಾನ್ಯ ಬಾಲಗಂಗಾಧರ್ ನಾಥ್ ತಿಲಕ್,ಸ್ವಾತಂತ್ರ್ಯದ ಕಿಚ್ಚು ಹಚ್ಚಿಸುವ ಸಲುವಾಗಿ ಎಲ್ಲರೂ ಸಂಘಟಿತರಾಗಲು ದೇಶವ್ಯಾಪಿ ಗಣೇಶೋತ್ಸವ ಪ್ರಾರಂಭಿಸದ ಕಾಲಘಟ್ಟದಲ್ಲಿ ಅವರ ಆಶಯದಂತೆ ಶಿವಮೊಗ್ಗದಲ್ಲಿ 1945 ರಲ್ಲಿ ಗಣೇಶ ಮೂರ್ತಿ ಪ್ರತಿಷ್ಟಾಪನೆಗೊಂಡಿತು.

ಅನಂತ ಚತುರ್ದಶಿ ವೇಳೆ ಹಿಂದು ಸಂಘಟನೆ ಮಂಡಳಿಯ ಸಂಸ್ಥಾಪಕ ಮುಖಂಡರುಗಳಾದ ಮಂಜುನಾಥ್ ರಾಯರು, ಚಂದ್ರಶೇಖರ್ ಬೂಪಾಳಂ ನಂತಹ ಹಿರಿಯರ ನೇತ್ರತ್ವದಲ್ಲಿ ಗಣೇಶ ಮೂರ್ತಿ ಸ್ಥಾಪಿಸಲಾಯಿತು,.

ಹಿಂದುಮಹಾಸಭಾ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ನಂತರ ಶಿವಮೊಗ್ಗದಲ್ಲಿ ಹಿಂದು ಸಂಘಟನಾ ಮಂಡಳಿ ನೇತ್ರತ್ವದಲ್ಲಿ ಗಣೇಶೋತ್ಸವಕ್ಕೆ ಚಾಲನೆ ನೀಡಲಾಯಿತು.

ಭೇಟಿಕೊಟ್ಟಿದ್ದರು ವೀರ ಸಾವರ್ಕರ್​!

ವೀರ ಸಾವರ್ಕರ್ ಶಿವಮೊಗ್ಗಕ್ಕೆ ಭೇಟಿ ನೀಡಿ ರಾಮಣ್ಣಶ್ರೇಷ್ಠಿ ಪಾರ್ಕ್ ಗಣಪತಿ ಮತ್ತು ಹಿಂದುಮಹಾಸಭಾ ಗಣಪತಿ ಪ್ರತಿಷ್ಟಾಪನೆಗೆ ಇಂಬು ನೀಡಿ, ಹಿಂದು ಯುವಕರನ್ನು ದೇಶ ಮಟ್ಟದಲ್ಲಿ ಸಂಘಟಿಸಬೇಕೆಂದು ಕರೆನೀಡಿದ್ದರು.

ಹೀಗಾಗಿ ಈ ಗಣೇಶನ ವಿಸರ್ಜನೆ ದಿನ ಈಗಲೂ ಸಾವಿರಾರು ಯುವಕರು ಒಂದೆಡೆ ಜಮಾಯಿಸುತ್ತಾರೆ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ.

ಧಾರ್ಮಿಕ ಹಕ್ಕು ಪ್ರತಿಪಾದಿಸಿದ ಮಂಗಳವಾದ್ಯ

ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷದಲ್ಲಿ ವೈಚಾರಿಕ ಮತ್ತು ಧಾರ್ಮಿಕ ವಿಚಾರೆಧಾರೆಗಳ ಬಿಸಿಬಿಸಿ ಚರ್ಚೆಗಳು ನಡೆಯುತ್ತಿದ್ದ ಸಂದರ್ಭವದು.

ಸರ್ಕಾರ ಪ್ರಾರ್ಥನಾ ಮಂದಿರಗಳ ಮುಂದೆ ಮಂಗಳವಾದ್ಯ ನುಡಿಸದಂತೆ ತಡೆಯೊಡ್ಡಿತ್ತು.

ಧಾರ್ಮಿಕ ಸ್ವಾತಂತ್ರ್ಯದ ಸಾವಿಂಧಾನಿಕ ಹಕ್ಕುಚ್ಯುತಿ ಎಂದು ಭಾವಿಸಿದ ಹಿಂದು ಮಹಾ ಮಂಡಳಿ, 1947 ರ ಗಣೇಶೋತ್ಸವ ಸಂದರ್ಭದಲ್ಲಿ ಮಸೀದಿಯ ಮುಂದೆ ಮಂಗಳವಾದ್ಯ ನುಡಿಸಲು ಅಣಿಯಾಯ್ತು.

ಈ ಸಂದರ್ಭದಲ್ಲಿ ಎರಡು ಕೋಮುಗಳ ನಡುವೆ ಗಲಾಟೆಗಳು ನಡೆದು ಹೋಯ್ತು.ಶಿವಮೊಗ್ಗ ನಗರ ಅಕ್ಷರ ಸಹ ಹೊತ್ತಿ ಉರಿಯಿತು.

ರಾಜಬೀದಿಯಲ್ಲಿ ಮೆರವಣಿಗೆ ನಡೆಯುವ ಸಂದರ್ಭದಲ್ಲಿಯೇ ಶಿವಮೂರ್ತಿ ಎನ್ನುವ 26 ವರ್ಷದ ಯುವಕನನ್ನು ಮತ್ತೊಂದು ಕೋಮಿನ ಗುಂಪು ಹತ್ಯೆಗೈಯಿತು.

ನಂತರ ನಡೆದಿದ್ದೆಲ್ಲಾ ಕರಾಳ ರಕ್ತಸಿಕ್ತ ಅಧ್ಯಾಯ. ಪೊಲೀಸರೇ ಗಣಪತಿಯನ್ನು ವಿಸರ್ಜಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು.

ಶಿವಮೂರ್ತಿ ಸರ್ಕಲ್​ ನೆನಪು

ಗಲಭೆ ಹಿನ್ನಲೆಯಲ್ಲಿ ಶಿವಮೊಗ್ಗ ನಗರದಲ್ಲಿ ವಾರಗಟ್ಟಲೆ ಕರ್ಪೂ ವಿಧಿಸಲಾಯಿತು.ಗಣೇಶ ಪೊಲೀಸ್ ಠಾಣೆ ಮೆಟ್ಟಲೇರಿದ.ನಂತರ ಪೊಲೀಸರ ಸರ್ಪಗಾವಲಿನಲ್ಲಿ ವಿಸರ್ಜನೆ ಮಾಡಲಾಯಿತು.

ಶಿವಮೂರ್ತಿ ಯುವಕನ ನೆನಪಿನಲ್ಲಿ ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿರುವ ವೃತ್ತಕ್ಕೆ ಶಿವಮೂರ್ತಿ ಸರ್ಕಲ್ ಎಂದು ನಾಮಕರಣ ಮಾಡಲಾಗಿದೆ.

ಪ್ರತಿ ವರ್ಷ ಗಣಪತಿ ಹಬ್ಬದ ಸಂದರ್ಭದಲ್ಲಿ ಈ ಸರ್ಕಲ್ ವೃತ್ತದಲ್ಲಿ ಶಿವಮೂರ್ತಿ ಪೋಟೋ ಇಟ್ಟು ಪ್ರತಿವರ್ಷ ಗೌರವ ಸಲ್ಲಿಸಲಾಗುತ್ತಿದೆ.

ಹೈಕೋರ್ಟ್​ನಲ್ಲಿಯೇ ಗೆದ್ದು ಬಂದ ಸಂಘಟನೆ

ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಪ್ರತಿಪಾಧಿಸಿ,ಹಿಂದು ಸಂಘಟನೆಯ ಅಧ್ಯಕ್ಷರಾಗಿದ್ದ ಹನುಮಂತರಾಯರು ಕೋರ್ಟ್ ಮೆಟ್ಟಲೇರಿದರು.

1950 ಜನವರಿ 30 ರಲ್ಲಿ ಹೈಕೋರ್ಟ್, ಸಂಘಟನೆಯ ಪರವಾಗಿ ತೀರ್ಪು ನೀಡಿತು.ಧಾರ್ಮಿಕ ಪದ್ಧತಿಗೆ ಅನುಗುಣವಾಗಿ ನೆಡೆಯುವ ಕಾರ್ಯ,ಅದು ಸಂವಿದಾನದತ್ತ ಹಕ್ಕು. ಅದನ್ನು ತಡೆಯಲು ಯಾರಿಗೂ ಅಧಿಕಾವಿಲ್ಲ ಎಂದು ತೀರ್ಪು ನೀಡಿತು.

ಈ ಹಕ್ಕನ್ನು ಪಡೆಯಲು ಶಿವಮೂರ್ತಿಯವರನ್ನು  ಬಲಿ ಕೊಡಬೇಕಾಯಿತು ಎಂಬ ನೋವು ಹಿಂದು ಸಂಘಟನೆ ಕಾರ್ಯಕರ್ತರಲ್ಲಿ ಇಂದಿಗೂ ಹಸಿರಾಗಿದೆ.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಿಷೇಧ ಹೇರಿದ ಜಿಲ್ಲಾಡಳಿತ.

ಪೊಲೀಸ್ ಸ್ಟೇಷನ್ ಮೆಟ್ಟಲೇರಿದ ಗಣಪ

1975 ರ ತುರ್ತು ಪರಿಸ್ಥಿತಿಯ ಕರಿನೆರಳು ಸಹ ಹಿಂದುಮಹಾಸಭಾ ಗಣೇಶಮೂರ್ತಿಯನ್ನು ಸಹ ತಟ್ಟದೆ ಬಿಟ್ಟಿರ್ಲಿಲ್ಲ.

ಜಿಲ್ಲಾಡಳಿತ, ಮುಜರಾಯಿ ಇಲಾಖೆ ಸುಪರ್ಧಿಗೆ ಒಳಪಟ್ಟಿರುವ, ಭೀಮೇಶ್ವರ ದೇವಸ್ಥಾನದಲ್ಲಿ, ಹಿಂದುಮಹಾ ಸಂಘಟನಾ ಮಂಡಳಿಗೆ, ಗಣೇಶಮೂರ್ತಿ ಪ್ರತಿಷ್ಠಾಪಿಸಲು ಅವಕಾಶ ನೀಡ್ಲಿಲ್ಲ..

ಹೀಗಾಗಿ ಸಂಘಟನೆ ಮುಖಂಡರು ಹಬ್ಬದ ಮಾರನೆ ದಿನ ಗಣೇಶನನ್ನು ಪ್ರತಿಷ್ಟಾಪಿಸಿದ್ದು ಕೂಡ ಇಲ್ಲಿ ವಿಶೇಷವೇ.

1976 ರಲ್ಲಿ ಸಹ ಗಣೇಶ ಮೂರ್ತಿ ಕೂರಿಸಲು ಅವಕಾಶ ನೀಡದ ಸಂದರ್ಭದಲ್ಲಿ ಹಬ್ಬದ ಮಾರನೇ ದಿನ ಗಣೇಶನನ್ನು ಕೂರಿಸಲಾಯಿತು.

1976 ರಲ್ಲಿ ನಡೆದ ಗಲಾಟೆಯಿಂದ ಮತ್ತೆ ಗಣೇಶ ಮೂರ್ತಿ ಕೋಟೆ ಪೊಲೀಸ್ ಠಾಣೆಗೆ ಕರೆತರಲಾಯಿತು.

ಈ ಸಂದರ್ಭದಲ್ಲಿ ಪೊಲೀಸರೇ ಗಣೇಶ ಮೂರ್ತಿಯನ್ನು ವಿಸರ್ಜಿಸಬೇಕಾದ ಅನಿವಾರ್ಯತೆ ಎದುರಾಯಿತು.

ಮೆರವಣಿಗೆಯೇ ನಿಂತು ಹೋಗಿದ್ದು!

ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಆದ ಅನಾಹುತ, ಜೀವಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಗಮನಿಸಿ ಹಿಂದು ಸಂಘಟನೆ ಮಂಡಳಿಯವರು 7 ವರ್ಷಗಳ ಕಾಲ ವಿಸರ್ಜನಾ ಮೆರವಣಿಗೆಯನ್ನು ಸ್ಥಗಿತಗೊಳಿಸಿದ್ರು, ಬೀಮೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ತುಂಗಾ ನದಿಗೆ ಗಣಪನನ್ನು ಸರಳವಾಗಿ ವಿಸರ್ಜನೆ ಮಾಡುತ್ತಿದ್ರು

ವಿಸರ್ಜನೆ ವೇಳೆ ಗಲಾಟೆ ಮಾಡೋರ್ಯಾರು.

ಹೌದು ವೀಕ್ಷಕರೆ ಹೀಗೊಂದು ಪ್ರಶ್ನೆ ಚಿಗುರೊಡೆಯೊದು ಸಹಜ. 1947 ರ ಗಲಭೆ ಧಾರ್ಮಿಕ ಸಿದ್ದಾಂತದ ಹಿನ್ನಲೆಯಲ್ಲಿ ಆದ ಸಂಘರ್ಷ.

ಆದಾದ ನಂತರ ಎಲ್ಲೂ ಎರಡು ಕೋಮಿನವರು ನೇರವಾಗಿ ಹೊಡೆದಾಡಿದ್ದೇ ಇಲ್ಲ.

ಆದರೂ ಕೆಲವು ಪಟ್ಟಭದ್ರರರ ಮಾನಸೀಕತೆಯಿಂದ ಹೆಚ್ ಎಂ ಎಸ್ ಗಣಪ ಗಲಾಟೆ ಗಣಪನಾದ.ಇದರಲ್ಲಿ ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರಷ್ಟೆ.

ಆ ದಿನ ಇಡೀ ನಗರವೇ ಅಘೋಷಿತ ಬಂದ್ ಆಗಿರುತ್ತೆ. ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಮುಚ್ಚಲ್ಪಟ್ಟಿರುತ್ತೆ.

ನಗರದಲ್ಲೆಡೆ ಪೊಲೀಸ್ ಸರ್ಪಗಾವಲು.ಪ್ಯಾರಾ ಮಿಲಟರಿ,ಆರ್.ಎ.ಎಫ್ ತುಕಡಿ.ಕೆ.ಎಸ್.ಆರ್.ಪಿ ತುಕಡಿ ಡಿಎಆರ್.ಸಿವಿಲ್ ಪೋರ್ಸ್ ಗಳೆಲ್ಲಾ ನಗರದಲ್ಲಿ ಬೀಡುಬಿಟ್ಟಿರುತ್ತವೆ.

ಹೀಗಿದ್ದರೂ, ಸಹ ಕೆಲ ಕಿಡಿಗೇಡಿಗಳು ಗಲಾಟೆ ಗಣಪ ಅನ್ನೋ ಸನ್ನಿವೇಶ ಸೃಷ್ಟಿ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.

ಹೆಚ್.ಎಂ.ಎಸ್ ಗಣಪನಿಂದ ಮಾತ್ರ ಗಲಾಟೆಗಳಾಗೋದಿಲ್ಲ.

ಶಿವಮೊಗ್ಗದಲ್ಲಿ ಕೇವಲ ಹೆಚ್.ಎಂ.ಎಸ್ ಗಣಪತಿ ಪ್ರತಿಷ್ಟಾಪನೆ ಮಾಡಿದ ಸಂದರ್ಭದಿಂದ ಕೋಮುಗಲಭೆಗಳು ನಡೆದಿಲ್ಲ.

ಸ್ವತಂತ್ರ್ಯ ಪೂರ್ವದಲ್ಲಿಯೇ ಅಂದ್ರೆ 1933 ರಲ್ಲಿಯೇ ಶಿವಮೊಗ್ಗದಲ್ಲಿ ಕೋಮುಗಲಭೆ ನಡೆದು ಇಡೀ ನಗರದ ಚಿತ್ರಣವೇ ಬದಲಾಗಿತ್ತು.ಇದು ಕೋಮುಗಲಭೆ ವಿಷಯದಲ್ಲಿ ಶಿವಮೊಗ್ಗಕ್ಕಿರುವ ಹಿನ್ನಲೆ.

2009 ರಲ್ಲಿ ನಡೆದ ಸಣ್ಣಪುಟ್ಟ ಗಲಾಟೆ ಹೊರತು ಪಡಿಸಿದ್ರೆ ಶಿವಮೊಗ್ಗ ನಗರದಲ್ಲಿ ಮತ್ತಿನ್ಯಾವತ್ತು ಹೆಚ್ ಎಂ.ಎಸ್ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ದೊಂಬಿ ಗಲಾಟೆಗಳಾದ ಉದಾಹರಣೆಗಳಿಲ್ಲ.

ಇಲ್ಲಿ ಹಿಂದು ಮುಸ್ಲಿಂ ಭಾಂದವರು ಅನ್ಯೋನ್ಯವಾಗಿದ್ದಾರೆ. ಆದರೆ ದ್ವೇಷದ ದಳ್ಳುರಿ ಬೂದಿ ಮುಚ್ಚಿದ ಕೆಂಡದಂತಿದೆ.

ಇಲ್ಲಿ ಕೋಮುಗಲಭೆ ಸೃಷ್ಟಿಯಾಗಲು ಗಣಪತಿ ಹಬ್ಬವೇ ಬೇಕಿಲ್ಲ. ಕಿಡಿಗೇಡಿಗಳಿಗೆ ವರ್ಷದಲ್ಲಿ  ಯಾವ ದಿನ ಯಾವ ಹಬ್ಬದ ಮಹೂರ್ತ ಪಿಕ್ಸ್ ಆದ್ರೂಸಾಕು. .ಆ ದಿನ ತಣ್ಣಗಿದ್ದ ಶಿವಮೊಗ್ಗವನ್ನು ಹೊತ್ತಿ ಉರಿಸಿಬಿಡ್ತಾರೆ.

ಲಾಸ್ಟ್ ಬೈಟ್

ಓದುಗರೆ  ಗಣೇಶ ಹಬ್ಬ ಬಂತೆಂದ್ರೆ...ಶಿವಮೊಗ್ಗ ಜಿಲ್ಲೆಯಲ್ಲಿ ಹಬ್ಬವೇನೋ ಚೆನ್ನಾಗಿ ಆಚರಣೆಯಾಗುತ್ತೆ.ಆದ್ರೆ ವಿಸರ್ಜನಾ ಮೆರವಣಿಗೆ ದಿನಗಳು ಪೊಲೀಸ್ರಿಗೆ ಶಾಂತಿ ಕಾಪಾಡೋದು ಒಂದು ಬಿಗ್ ಟಾಸ್ಕ್ ಆಗಿ ಬಿಡುತ್ತೆ.

ಶಿವಮೊಗ್ಗದ ಗಲಾಟೆಗೆ ಗಣೇಶ ಹಬ್ಬವೇ ಬೇಕಿಲ್ಲ....ಕೋಮುದ್ವೇಷದ ಬೆಂಕಿ ಹಚ್ಚೋದಕ್ಕೆ ಯಾವ ಸಂದರ್ಭವಾದ್ರೂ ಸಾಕು..

ಆದ್ರೆ ನಾವು ನೀವುಗಳು ಮನಸ್ಸು ಕೆಡಿಸಿಕೊಳ್ಳದೆ ಈ ಬಾರಿ ಶಾಂತಿಯುತವಾಗಿ ಹಬ್ಬವನ್ನು ಆಚರಿಸೋಣ...ಗಣಪನನ್ನು ಸಂಭ್ರಮಿಸುತ್ತಾ ವಿಸರ್ಜಿಸೋಣ. ಜೈ ಗಣೇಶ