bangarappa life story/ ಸಾರೆಕೊಪ್ಪ ಬಂಗಾರಪ್ಪರವರ ಬಗ್ಗೆ ಗೊತ್ತಿರದ ಅಪರೂಪದ ಸತ್ಯ ವಿಚಾರಗಳು ಇಲ್ಲಿವೆ ಓದಿ

bangarappa life story/ ಸಾರೆಕೊಪ್ಪ ಬಂಗಾರಪ್ಪರವರ ಬಗ್ಗೆ ಗೊತ್ತಿರದ ಅಪರೂಪದ ಸತ್ಯ ವಿಚಾರಗಳು ಇಲ್ಲಿವೆ ಓದಿ

ಹಿಂದುಳಿದ ವರ್ಗಗಳ ಪ್ರಶ್ನಾತೀತ ನಾಯಕ,ಸೋಲಿಲ್ಲದ ಸರದಾರ,ರಾಜಕೀಯ ಚಾಣಾಕ್ಷ,ಸಮಾಜವಾದಿ ಚಿಂತಕ ಎಂಬ ಹೆಗ್ಗಳಿಕೆ ಪಡೆದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪರ ಬಗ್ಗೆ ಮಾತನಾಡಲು ದಿನಗಳು ಸಾಲದು.

  • ಬರೆಯಲು ಪುಟಗಳು ಸಾಲದು.ಕಲೆ, ಸಾಹಿತ್ಯ,ಸಂಗೀತ,ಕ್ರೀಡೆಯಲ್ಲಿ ಆಸಕ್ತಿ ತಾಳಿದ್ದ ಬಂಗಾರಪ್ಪ ಒಬ್ಬ ವರ್ಣರಂಜಿತ ರಾಜಕಾರಣಿ.
  • ಬಂಗಾರಪ್ಪ ತೊರೆಯುವ ಪಕ್ಷ ಚುನಾವಣೆಯಲ್ಲಿ ಸೋಲುವುದು,ಅವರು ಸೇರುವ ಪಕ್ಷ ಅಧಿಕಾರಕ್ಕೆ ಬರುವುದು ರಾಜ್ಯ ರಾಜಕೀಯದ ಗಣಿತದ ಲೆಕ್ಕಚಾರವಾಗಿತ್ತು.
  • ಕುಗ್ರಾಮದಲ್ಲಿ ಹುಟ್ಟಿದ ಹೈದನೊಬ್ಬ ರಾಜ್ಯ ರಾಜಕೀಯವನ್ನು ತನ್ನ ಮೂಗಿನ ನೇರಕ್ಕೆ ಅಲ್ಲಾಡಿಸುವಷ್ಟು ಮಟ್ಟಿಗೆ ಬೆಳೆದಿದ್ದು ಸಾಮಾನ್ಯದ ಸಂಗತಿಯೇನಲ್ಲ.
  • ಬಂಗಾರಪ್ಪರಿಗೆ ಬಂಗಾರಪ್ಪರೇ ಸಾಟಿ ಎನ್ನುವಂತಿದ್ದ ಕಾಲಘಟ್ಟದಲ್ಲಿ,ಬದಲಾದ ಸನ್ನಿವೇಶದಲ್ಲಿ ಬಂಗಾರಪ್ಪರ ಲೆಕ್ಕಚಾರಗಳು ತಲೆಕೆಳಗಾದವು…,ಬಂಗಾರಪ್ಪರ ರಾಜಕೀಯ ಬದುಕಿನ ಏಳುಬೀಳುಗಳ ಸಮಗ್ರ ಚಿತ್ರಣ ಇಲ್ಲಿದೆ.
ಸಾರೆಕೊಪ್ಪ ಬಂಗಾರಪ್ಪ..,ಅಂದರೆ ಎಂದರೆ ಪಕ್ಷಾಂತರ,ಹೊಸ ಪಕ್ಷಗಳ ಜನಕ.ಶಾಸಕರುಗಳನ್ನು ತಯಾರಿಸುವ ಕಾರ್ಖಾನೆ ಎಂಬೆಲ್ಲ ಹೆಗ್ಗಳಿಕೆಯಿದೆ.ಕಾಂಗ್ರೇಸ್ ಪಕ್ಷದೊಂದಿಗೆ ಮುನಿಸಿಕೊಂಡಾಗಲೆಲ್ಲಾ, ಹೊಸದಾಗಿ ಪ್ರಾದೇಶಿಕ ಪಕ್ಷ ಸ್ಥಾಪಿಸಿ ಆ ಮುಖಾಂತರ ನಾಡಿನ ಅಭ್ಯುದಯ ಸಾಧ್ಯ ಎಂಬುದನ್ನು ಸಾರಿದ ಖ್ಯಾತಿ ಬಂಗಾರಪ್ಪರಿಗಿದೆ..

ಬಂಗಾರಪ್ಪ ಒಬ್ಬರು ರಾಜಕಾರಣಿ ಅನ್ನೋದಕ್ಕಿಂತಲೂ ಅವರಲ್ಲೊಬ್ಬ ಸಾಹಿತಿ,ಕಲೆಗಾರ ಸಂಗೀತಗಾರ,ಕ್ರೀಡಾಪಟು ಎಲ್ಲರೂ ಮನೆ ಮಾಡಿದ್ದಾರೆ.

ಬಂಗಾರಪ್ಪ ಹಾಡಿದರೆ,ಕುಣಿದರೆ,ಹಾಸ್ಯಮಾಡಿದರಷ್ಟೆ ಅಭಿಮಾನಿಗಳು ಮೆಚ್ಚುತ್ತಿದ್ದರು.ಬಂಗಾರಪ್ಪರನ್ನು ರಾಜಕಾರಣಿ ರೀತಿ ಜಿಲ್ಲೆಯ ಜನರು ಅವರನ್ನು ನೋಡದೆ ಅವರೊಬ್ಬ ಶ್ರೀಸಾಮಾನ್ಯರಂತೆ ಜನೋಪಕಾರಿ ಕೆಲಸ ಮಾಡಿದ್ದರಿಂದಲೇ ಜಿಲ್ಲೆಯಲ್ಲಿ ನಾಲ್ಕು ದಶಕಗಳ ಕಾಲ ಬಂಗಾರಪ್ಪನ್ನು ಸೋಲಿಲ್ಲದ ಸರದಾರನನ್ನಾಗಿ ಮಾಡಿದರು.

ನಾಡಿನ ರಾಜಕೀಯ ಆಕಾಶದಲ್ಲಿ ಬಂಗಾರಪ್ಪ ದೃವತಾರೆಯಾಗಿ ಮಿನುಗಿದರು.ಶಾಂತವೇರಿ ಗೋಪಾಲ ಗೌಡರ ನಂತರದಲ್ಲಿ ಕರ್ನಾಟಕದ ರಾಜಕೀಯ ನೆಲದಲ್ಲಿ ಸಮಾಜವಾದಿ ಪಕ್ಷದ ಬೇರುಗಳಿಗೆ ನೀರು ಎರೆದು ಸಮಾಜವಾದಿ ರಾಜಕೀಯ ಚಿಂತನೆಗಳನ್ನು ಪೋಷಿಸಲು,ಪ್ರಯತ್ನಿದ ಬಂಗಾರಪ್ಪ ಅತ್ಯಂತ ಕ್ರೀಯಾಶೀಲ ಸೋಷಿಯಲಿಸ್ಟ್ ರಾಜಕಾರಣಿ.

ವಿಭಿನ್ನವಾದ ಅಭ್ಯಾಸ ಅಭಿರುಚಿ ಅನುಭವಗಳನ್ನು ಹೊಂದಿರುವ ಬಂಗಾರಪ್ಪನವರು ಸಮಾಜವಾದಿ ನಾಯಕರಾದ ಶಾಂತವೇರಿ ಗೋಪಾಲಗೌಡರ ಸಹವಾಸದಿಂದ ಸ್ವಾಭಿಮಾನವನ್ನು ದೇವರಾಜು ಅರಸುರವರ ಒಡನಾಟದಿಂದ ಸಾಮಾಜಿಕ ನ್ಯಾಯಪರತೆಯನ್ನು ತುಂಬಿಕೊಂಡವರು.

ಸಮಾಜವಾದಿ ಚಿಂತಕರು ರಾಜಕಾರಣಿಗಳು ಸಾಹಿತಿಗಳು ಮತ್ತು ಬುದ್ದಿಜೀವಿಗಳೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡಿದ್ದ ಬಂಗಾರಪ್ಪನವರು ಸಾಮಾಜಿಕ ಬದಲಾವಣೆಗಾಗಿ ಸಾಹಿತ್ಯದಿಂದ ಹೊಸದನ್ನು ಹುಡುಕುವ ಅನ್ವೇಷಣಾ ಸ್ವಭಾವ ಮತ್ತು ಅಧ್ಯಯನಶೀಲತೆಯನ್ನು ಮೈಗೂಡಿಸಿಕೊಂಡಿದ್ದರು.

ಹೋರಾಟದ ನೆಲದಲ್ಲಿ ಬಂಗಾರಪ್ಪರಿಗೆ ಪ್ರೇರಣೆಯಾದವರು ಹಲವರು

  • ಶಿವಮೊಗ್ಗ ಜಿಲ್ಲೆ ಸಮಾಜವಾದದ ಕುದಿನೆಲ.ಈ ನೆಲದ ಸಮಾಜವಾದಿ ಶಿಶುವಾಗಿ ಬೆಳೆದು ಬಂದವರಲ್ಲಿ ಬಂಗಾರಪ್ಪ ಒಬ್ಬರು.
  • ದೇಶದ ರಾಜಕೀಯದ ಏಳುಬೀಳುಗಳನ್ನು ಕಳೆದ ನಾಲ್ಕು ದಶಕಗಳಿಂದ ಕಂಡವರು ಬಂಗಾರಪ್ಪ,ಪಕ್ಷ ರಾಜಕಾರಣದ ದುರಂತಗಳು, ಪಿತೂರಿಗಳು, ದಿಗ್ವಿಜಯಗಳು,
  • ಕಾಳಜಿಗಳು, ಬದ್ಧತೆ ಮೌಲ್ಯಗಳೆಲ್ಲದಕ್ಕೂ ಸಾಕ್ಷಿಪ್ರಾಜ್ಞೆಯಾಗಿ ನಿಂತಿರುವ ಬಂಗಾರಪ್ಪ ಅಲ್ಪಸಂಖ್ಯಾತ ದೀವರ ಸಮುದಾಯದ ಸಾಮಾನ್ಯ ಬಡ ಕುಟುಂಬದಿಂದ ಬಂದವರು..
  • scrap to sky ಎಂಬಂತೆ ಕುಗ್ರಾಮದ ಹೈದನೊಬ್ಬ ಕರ್ನಾಟಕದ ಮಾಸ್ ಲೀಡರ್ ಆಗಿ ಬೆಳೆದ ಪರಿ ಅತ್ಯಂತ ರೋಚಕವಾದದ್ದು.

ಬುದ್ದಿ ಜೀವಿಗಳ ಒಡನಾಟ

70 ರ ದಶಕದ ಜನಪರ ಚಳುವಳಿಗಳ ಮತ್ತು ಸೋಷಿಯಲಿಸ್ಟರ ಸಂಪರ್ಕಕ್ಕೆ ಬಂದ ಬಂಗಾರಪ್ಪರು ರಾಜ್ಯ ರಾಜಕಾರಣದಲ್ಲಿ ಒಂಟಿ ಸಲಗದಂತೆ ಸೆಣಸುತ್ತಾ ಉಳಿದಿದ್ದೇ ಒಂದು ವಿಶೇಷ,.

ಹಾಗೆಯೇ ಒಕ್ಕಲಿಗರ ಲಿಂಗಾಯಿತರ ತೆಕ್ಕೆಯಲ್ಲಿಯೇ ನಡೆಯುತ್ತಿದ್ದ ಶಕ್ತಿ ರಾಜಕಾರಣ, ವಿಸ್ತಾರಗೊಂಡು ಅನಾಥವಾಗಿದ್ದ ಹಿಂದುಳಿದ ವರ್ಗಗಳು ದಲಿತರು ಮತ್ತು ಕೆಳ ಜಾತಿಗಳಿಗೂ ತಲುಪಿದ್ದು ದೇವರಾಜು ಅರಸು ಅವರಿಂದ. ದೇವರಾಜು ಅರಸು ಶಾಂತವೇರಿ ಗೋಪಾಲಗೌಡ,ಜೆ.ಹೆಚ್ ಪಟೇಲ್ ಮುಂತಾದ ಘಟಾನುಘಟಿ

ರಾಜಕಾರಣಿಗಳ ಜೊತೆ ಹಾಗು ಪಿ.ಲಂಕೇಶ್, ಪ್ರೋಪೇಸರ್ ಎಂ.ಡಿ ನಜುಂಡಸ್ವಾಮಿ, ತೇಜಸ್ವಿ, ಶಂಕರಪ್ಪ,ಕಡಿದಾಳ್ ಶಾಮಣ್ಣ,ಮುಂತಾದ ಸಮಾಜವಾದಿ ಚಿಂತಕರ ಸಹವಾಸದಲ್ಲಿ ಪಳಗಿದ ಬಂಗಾರಪ್ಪನವರು ಕಟ್ಟಿಕೊಳ್ಳದ ಸುತ್ತಾಡದ ಪಕ್ಷಗಳೇ ಕರ್ನಾಟಕದಲ್ಲಿಲ್ಲ.

1983 ರಲ್ಲಿ ಕ್ರಾಂತಿರಂಗ ಕಟ್ಟಿ ಪ್ರಥಮ ಬಾರಿ ರಾಜ್ಯದಲ್ಲಿ ಕಾಂಗ್ರೇಸೇತರ ಸರ್ಕಾರ ತರುವಲ್ಲಿ ಪ್ರಧಾನ ಪಾತ್ರ ವಹಿಸಿದ ಬಂಗಾರಪ್ಪ ತಮ್ಮ ಪೊಲಿಟಿಕಲ್ ಜರ್ನಿಯ ಕೊನೆಯವರೆಗೂ,ರಾಜಕಾರಣದ ನಿರ್ಣಾಯಕ ಶಕ್ತಿ ಎಂದೇ ಪರಿಗಣಿಸಲ್ಪಟ್ಟಿದ್ದರು.

ಬಹುಮುಖ್ಯವಾಗಿ,ಅವರಿಗಿರವ ಸಮಾಜವಾದಿ ಸಿದ್ದಾಂತದ ಹಿನ್ನಲೆ ಸಾಮಾಜಿಕವಾಗಿ ಶೋಷಣೆಗೀಡಾದ ಕಳಜಾತಿಯ ತೀರಾ ಸಾಮಾನ್ಯ ಕುಟುಂಬದಿಂದ ಒದಗಿ ಬಂದ ಜೀವನಾನುಭವ ಜನರನ್ನು ಸಂಘಟಿಸುವ ಚಾತುರ್ಯ,

ಜನಪರ ಆಂದೋಲನದಲ್ಲಿ ಗುರುತಿಸಿಕೊಂಡ ಬಗೆ ಶಕ್ತಿ ರಾಜಕಾರಣದ ಚಾಣಾಕ್ಷ ಪಟ್ಟುಗಳು,ಮತದಾರರೊಂದಿಗೆ ಬೆಳೆಸಿಕೊಂಡ ಭಾವನಾತ್ಮಕ ಆತ್ಮೀಯತೆ ,

ಆಡಳಿತದಲ್ಲಿ ತೋರಿದ ಬಿರುಸು ಮತ್ತು ಬಿಗಿ ಹಿಡಿತ, ನಿರ್ಭೀತ ವ್ಯಕ್ತಿತ್ವ ಮತ್ತು ಛಲ ಅವರ ರಾಜಕೀಯ ಹಿರಿಮೆಯ ಮೂಲಬಂಡವಾಳವಾಗಿದೆ.

  • ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕುಬಟೂರು ಗ್ರಾಮದಲ್ಲಿ,ಕಲ್ಲಮ್ಮ ಮತ್ತು ಕಲ್ಲಪ್ಪ ಅವರ ಏಕೈಕ ಪುತ್ರರಾಗಿ 26-10-1933 ಜನಿಸಿದ ಸಾರೆಕೊಪ್ಪ ಬಂಗಾರಪ್ಪನವರು ಶಾಲೆಯೊಳಗೆ ಪಾಠಗಳಂತೆಯೇ ಊರೊಳಗೆ ಡೊಳ್ಳು ಕುಣಿತ ಕುಸ್ತಿ ನಾಟಕ ಹಾಡು ವ್ಯಾಯಾಮ ಮುಂತಾದ ಕಲೆಗಳನ್ನು ಅತ್ಯಂತ ಶ್ರದ್ಧೆಯಿಂದ ಕಲಿಯುತ್ತಲೆ ಬೆಳೆದರು.
  • ಬಿ.ಎ ಜೊತೆಗೆ ಕಾನೂನು ಪದವಿ.ಡಿಪ್ಲಮೋ ಇನ್ ಸೋಷಿಯಲ್ ಸೈನ್ಸ್.1939ರಲ್ಲಿ ಆನವಟ್ಟಿಯಲ್ಲಿ ಶಾಲೆ ಮೆಟ್ಟಲನ್ನೇರಿದರು.ಶಿರಾಳಕೊಪ್ಪದಲ್ಲಿ ಪ್ರೌಡಶಾಲೆ,ದಾವಣಗೆರೆಯಲ್ಲಿ ಇಂಟರ್ ಮೀಡಿಯೇಟ್ ಮುಗಿಸಿ,ಮೈಸೂರು ಮಹರಾಜ ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು.
  • 1958 ಜನವರಿ ಒಂದರಂದು ಶಕುಂತಲ ಎಂಬುವರೊಂದಿಗೆ ವಿವಾಹವಾದರು ಬಂಗಾರಪ್ಪರಿಗೆ ಇಬ್ಬರು ಗಂಡು ಮೂವರು ಹೆಣ್ಣುಮಕ್ಕಳಿದ್ದಾರೆ.
  • ಕುಮಾರಾ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ಈಗ ರಾಜಕಾರಣದಲ್ಲಿದ್ದಾರೆ. ಕಡುಬಡತನದ ಅರಿವಿದ್ದ ಬಂಗಾರಪ್ಪನವರಿಗೆ ವಿದ್ಯಾರ್ಥಿ ದೆಸೆಯಿಂದಲೂ ಶೋಷಿತರು ದಮನಿತರ ಪರ ಹೋರಾಡುವ ಪ್ರವೃತಿ ಜತನದಿಂದಲೇ ಬಂದಿತ್ತು.
  • ಹೀಗಾಗಿ ಅವರು ಅಧಿಕಾರದಲ್ಲಿದ್ದಾಗ ಸಿಕ್ಕ ಅವಕಾಶದಲ್ಲಿಯೇ ಬಡಜನರಿಗೆ ಹಲವು ಯೋಜನೆಗಳನ್ನು ರೂಪಿಸಿದರು.

ಲೋಹಿಯ ಶಾಂತವೇರಿ ಒಡನಾಟ/ ಕಾಗೋಡು ಹೋರಾಟಕ್ಕೆ ಪ್ರೇರಣೆ ನೀಡಿತು

ಅರವತ್ತರ ದಶಕ ಶಿವಮೊಗ್ಗ ಜಿಲ್ಲೆಯಲ್ಲಿ ಚಾರಿತ್ರಾರ್ಹ ಕಾಗೋಡು ಸತ್ಯಾಗ್ರಹ ಕಳೆಗಟ್ಟಿಕೊಂಡ ಕಾಲ,ಶಾಂತವೇರಿ ಗೋಪಾಲಗೌಡರ ಸೈದ್ಧಾಂತಿಕ ನಿಲುವು, ರಾಷ್ಟ್ರಕವಿ ಕುವೆಂಪು ಅವರ ವೈಚಾರಿಕ ಒಲವು ಮಲೆನಾಡಿನ ಆ ನೆಲದಲ್ಲಿ ಹರಳುಗಟ್ಟುವ ಮೂಲಕ ಇಡೀ ನಾಡನ್ನು ಹೊಸ ವಿಚಾರ ಕ್ರಾಂತಿಯತ್ತ ಸೆಳೆಯಿತು.

ಶಿವಮೊಗ್ಗ ಜಿಲ್ಲೆಯ ಗೇಣಿದಾರ ರೈತರ ಮೇಲೆ ದಬ್ಬಾಳಿಕೆ ನಡೆಯುತ್ತಿತ್ತು.ರೈತರನ್ನು ಶೋಷಿಸಲಾಗುತ್ತಿತ್ತು.ಇಂತಹ ಸಂದರ್ಭದಲ್ಲಿ 1951 ಎಪ್ರಿಲ್ 18 ರಂದು ಕಾಗೋಡು ಸತ್ಯಾಗ್ರಹ ನಡೆಯಿತು.

ಮೇಲ್ಜಾತಿಯ ಭೂಮಾಲೀಕರ ಜಮೀನಿನಲ್ಲಿ ಕೆಳಜಾತಿಯ ರೈತರು ಗೇಣಿರೈತರಾಗಿ ದುಡಿಯುತ್ತಿದ್ದರು.ಭೂ ಒಡೆತನ ಇವರಿಗಿರಲಿಲ್ಲ.ಭೂಮಾಲೀಕರು ಗೇಣಿ ರೈತರನ್ನು ಮನುಷ್ಯರಂತೆ ಭಾವಿಸಿರಲಿಲ್ಲ.

ಗೇಣಿ ನೀಡುವಾಗ ಅಳತೆಯಲ್ಲಿ ಮೋಸ ಮಾಡುತ್ತಿದ್ದರು.ಬಂಗಾರಪ್ಪನವರು ಹುಟ್ಟಿದ ಆ ಪ್ರದೇಶದ ಬಹುಸಂಖ್ಯಾತ ದೀವರ ಜನಾಂಗವಂತೂ ಈ ಶೋಷಣೆ, ಅವಮಾನಗಳಿಂದ ತತ್ತರ ಹೋಗಿದ್ದರು.

ಉಡುವ ಬಟ್ಟೆ ಹಾಗು ಉಣ್ಣುವ ಅನ್ನದ ಅಗುಳಿನಲ್ಲಿ ಅವಮಾನ ವಿಷ ಬೆರೆತಿರುತ್ತಿತ್ತು.ಹಸಿದವರ ಆಕ್ರೋಶ ಮುಗಿಲು ಮುಟ್ಟಿದಾಗ ಉಳುವವನೇ ಹೊಲದೊಡೆಯ ಎಂಬ ಕ್ರಾಂತಿಕಾರಿ ಆಲೋಚನೆ ಗೇಣಿರೈತರಲ್ಲಿ ಸ್ಟೋಟಗೊಂಡಿತು.

ಈ ಹೋರಾಟದ ಮಂಚೂಣಿ ನಾಯಕರಾಗಿ ಸಮಾಜವಾದಿ ಶಾಂತವೇರಿ ಗೋಪಾಲಗೌಡರು ಹೋರಾಟಕ್ಕಿಳಿದರು.

ರಾಷ್ಟ್ರೀಯ ನಾಯಕರಾದ ರಾಮ್ ಮನೋಹರ ಲೋಹಿಯ ಜಯಪ್ರಕಾಶ್ ನಾರಾಯಣ್ ಮುಂತಾದವರು ಸಾಗರಕ್ಕೆ ಭೇಟಿಕೊಟ್ಟು ಕಾಗೋಡು ಹೋರಾಟವನ್ನು ಹುರಿದುಂಬಿಸಿದರು.ಈ ಹೋರಾಟ ಬಂಗಾರಪ್ಪನವರಿಗೆ ಸಮಾಜವಾದಿ ಚಿಂತನೆಗೆ ಕಿಚ್ಚು ಹತ್ತಿಸಿತು.

ವಕೀಲರಾಗಿದ್ದ ಬಂಗಾರಪ್ಪ ಬಡವರ ಪರ ಮಾಡಿದ್ರು ಕಾನೂನು ಹೋರಾಟ

ಕಾನೂನು ಪದವೀಧರರಾದ ನಂತರ ಬಂಗಾರಪ್ಪನವರು 1959 ರಲ್ಲಿ ಶಿವಮೊಗ್ಗದಲ್ಲಿ ವಕೀಲಿ ವೃತ್ತಿ ಆರಂಭಿಸಿದರು. ಬಡವರ ಪರವಾದ ಕಾನೂನು ಹೋರಾಟಗಳು ಇವರ ವೃತ್ತಿಯ ಮುಖ್ಯ ಧ್ಯೇಯವಾಗಿತ್ತು..
ಗೇಣಿದಾರ ಹೋರಾಟಗಳು ಗಟ್ಟಿಯಾಗುವ ಸಂದರ್ಭದಲ್ಲಿ ರೈತರ ವಿರುದ್ಧ ಅನೇಕ ಕೇಸುಗಳು ದಾಖಲಾಗಿರುತ್ತದೆ.ಸಾವಿರಾರು ಜನ ಗೇಣಿದಾರರ ಪರ ಬಂಗಾರಪ್ಪ ವಾದ ಮಂಡಿಸಿ,ಗೆಲುವು ಕಾಣುತ್ತಾರೆ.
ಇದು ಬಂಗಾರಪ್ಪರ ಜನಪ್ರೀಯತೆಯನ್ನು ಮುಗಿಲೆತ್ತರಕ್ಕೆ ಏರಿಸುತ್ತರೆ.ಸಾಗರ ತಾಲೂಕಿನ ಮುಳುಗಡೆ ಪ್ರದೇಶಗಳಿಗೆ ಸೇರಿದ ಜಮೀನು ಕಳೆದುಕೊಂಡ ರೈತ ಸಂತ್ರಸ್ಥರ ಪರವಾಗಿ ವಕೀಲ ಬಂಗಾರಪ್ಪ ಬಲವಾಗಿ ನಿಲ್ಲುತ್ತಾರೆ.
ಪೊಲೀಸ್ ಕೋರ್ಟ್ ಕಛೇರಿ ಎಂದರೆ ಹೆದರಿಕೆಯಿಂದ ಹಿಂಜರಿಯುತ್ತದ್ದ ರೈತರನ್ನು ಸಂಘಟಿಸಿ ಅವರಲ್ಲಿ ಧೈರ್ಯ ತುಂಬಿ ಕಾನೂನಿನ ಪರಿಧಿಯಲ್ಲಿ ಅವರಿಗೆ ಸಿಗಬೇಕಾದ ಸವಲತ್ತುಗಳನ್ನು ಒದಗಿಸಿಕೊಡುತ್ತಾರೆ.
ಅವರ ಯಶಸ್ವಿ ಕಾನೂನು ಹೋರಾಟಗಳಿಂದಾಗಿ ಶಿವಮೊಗ ಜನ ಭವಿಷ್ಯದಲ್ಲಿ ತಮಗೊಬ್ಬ ನಿರ್ಭೀತ ನಾಯಕ ಸಿಕ್ಕನೆಂಬ ಸಂತೋಷಪಡುತ್ತಾರೆ.

1967 ರಲ್ಲಿ ರಾಜಕೀಯ ರಂಗಕ್ಕೆ ಅಧಿಕೃತ ಪ್ರವೇಶ

  • 1967 ರ ಸಾರ್ವತ್ರಿಕ ಚುನಾವಣೆಯ್ಲಲಿ ಬಂಗಾರಪ್ಪ ಸ್ಪರ್ಧಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ.ಕ್ಷೇತ್ರ ವಿಭಜನೆಯಾಗಿ ಸೊರಬ ಸಾಗರದಿಂದ ಪ್ರತ್ಯೇಕಗೊಳ್ಳುತ್ತದೆ.
  • ಹೊಸ ಕ್ಷೇತ್ರಕ್ಕೊಬ್ಬ ಹೊಸ ಅಭ್ಯರ್ಥಿಯ ಶೋಧನೆ ನಡೆದಾಗ ಪಕ್ಷದ ನಾಯಕರಿಗೆ ಕಂಡವರೇ ಬಂಗಾರಪ್ಪ. ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಿದ ಬಂಗಾರಪ್ಪ ಗೆಲ್ಲುತ್ತೇನೆಂಬ ವಿಶ್ವಾಸ ಹೊಂದಿರಲಿಲ್ಲ.
  • ಆದರೆ ಭರವಸೆಯ ನಾಯಕನಿಗಾಗಿ ಪರಿತಪಿಸುತ್ತಿದ್ದ ಸೊರಬದ ಜನತೆ,ಬಂಗಾರಪ್ಪರನ್ನು ಕಾಂಗ್ರೇಸ್ ಪಕ್ಷಧ ಎದುರಾಳಿ ಎಂ,ಪಿ ಈಶ್ವರಪ್ಪ ಎದುರು 12,500 ಮತಗಳ ಅಂತರಿಂದ ಗೆಲ್ಲಿಸಿದರು.
  • ಅಂದು ಗೆದ್ದ ಬಂಗಾರಪ್ಪ ನಾಲ್ಕು ದಶಕಗಳ ಕಾಲ ಸೋಲು ಕಾಣಲಿಲ್ಲ.ಕಡುಬಡತನದಲ್ಲಿ ಹುಟ್ಟಿ ಬೆಳೆದ ಮೈಕ್ರೋ ಮಿನಾರಿಟಿ ಯುವಕ ಮುಂದೆ ರಾಜ್ಯ ರಾಜಕಾರಣವನ್ನು ತನ್ನ ಅಂಗೈನಲ್ಲಿ ನಿಯಂತ್ರಿಸುವಷ್ಟರ ಮಟ್ಟಿಗೆ ಬೆಳಿದಿದ್ದು ಮಾತ್ರ ಇತಿಹಾಸ.

ಅರಸುರವರ ಬಡವರ ಪರ ಕಾಳಜಿ,ಬಂಗಾರಪ್ಪರಿಗೆ ಆಯ್ತು ಪ್ರೇರಣೆ

ಬಂಗಾರಪ್ಪ ಏಳು ಬಾರಿ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆಯುತ್ತಾರೆ.

1994 ರಿಂದ ಸತತತವಾಗಿ ಪಾರ್ಲಿಮೆಂಟ್ ಸದಸ್ಯರಾಗಿರುತ್ತಾರೆ.1999 ರಲ್ಲಿ ಮಾತ್ರ ಒಮ್ಮೆ ಸೋಲನ್ನು ಅನುಭವಿಸುತ್ತಾರೆ.

1972 ರಲ್ಲಿ ಸಂಯುಕ್ತ ಸೋಷಲಿಸ್ಟ್ ಪಕ್ಷಧಿಂದ ಎರಡನೇ ಬಾರಿ ಪುನರಾಯ್ಕೆ ಆಗುತ್ತಾರೆ.ತಮ್ಮ ಬಡವರ ಪರವಾದ ಕಾರ್ಯಕ್ರಮ ಮುಂದುವರೆಸಿಕೊಂಡು ಹೋಗುವ ಹೊತ್ತಿಗೆ ಶಾಂತವೇರಿ ಗೋಪಾಲಗೌಡರು ಇಹಲೋಕ ತ್ಯಜಿಸುತ್ತಾರೆ.

ಗೋಪಾಲಗೌಡರಿಲ್ಲದ ಸೋಷಲಿಸ್ಟ್ ಪಕ್ಷದಲ್ಲಿ ಉಂಟಾದ ರಾಜಕೀಯ ಹಾಗು ಸೈದ್ಧಾಂತಿಕ ತಾರತಮ್ಯ ಹಾಗು ಪಲ್ಲಟಗಳ ಬಗ್ಗೆ ಬಂಗಾರಪ್ಪನವರಿಗೆ ಅಸಹನೆ ಉಂಟಾಗಿತ್ತು.

ಪಕ್ಷದಲ್ಲಿನ ಗುಂಪುಗಾರಿಕೆ ಭಿನ್ನಾಭಿಪ್ರಾಯ ರಾಜಕೀಯ ಅಸಮಾನತೆಗಳ ವಿರುದ್ಧ ಬಂಡೆದ್ದರು.

ಆಗಿನ ಕಾಲಘಟ್ಟದಲ್ಲಿ ಗೋಪಾಲಗೌಡರಂತಹ ಸಮಾಜವಾದಿಗಳ ಕನಸುಗಳನ್ನು ಕಾಂಗ್ರಸ್ ಪಕ್ಷದಲ್ಲಿ ನನಸು ಮಾಡುವ ಚಟುವಟಿಕೆಗಳಲ್ಲಿ ದೇವರಾಜು ಅರಸು ತೊಡಗಿಸಿಕೊಂಡಿದ್ದರು,.
ಕಾಂಗ್ರೇಸ್ ನ ಸಾಂಪ್ರದಾಯಿಕ ರಾಜಕಾರಣಕ್ಕಿಂತ ಭಿನ್ನವಾದ ಜನಪರ ಆಶಯಗಳ ಆಡಳಿತಕ್ಕೆ ಅರಸು ಚಾಲನೆ ಕೊಟ್ಟರು.ಹಿಂದುಳಿದ ವರ್ಗಗಳ ಆತ್ಮಸ್ಥೈರ್ಯಕ್ಕೆ ವೇದಿಕೆ ರೂಪಿಸಿದ್ದರು.
ಭೂ ಸುಧಾರಣ ಮಸೂದೆಯನ್ನು ಕಾರ್ಯಗತಗೊಳಿಸುವ ಯೋಜನೆ ರೂಪಿಸಿದ್ದರು.ಶೋಷಿತ ಸಮುದಾಯದ ಉತ್ಸಾಹಿ ಯುವ ರಾಜಕಾರಣಿಗಳನ್ನು ಕಾಂಗ್ರೇಸ್ ನತ್ತ ಸೆಳೆಯುವಲ್ಲಿ ಅವರು ಯಶಸ್ವಿಯಾಗಿದ್ದರು.
ಅರಸುರವರ ಒತ್ತಡಕ್ಕೆ ಮಣಿದ ಬಂಗಾರಪ್ಪ ಕಾಂಗ್ರೇಸ್ ಪಕ್ಷವನ್ನು ಸೇರಿದರು.ಬಂಗಾರಪ್ಪನವರ ಸಮಾಜವಾದಿ ಸಿದ್ದಾಂತ ಹಾಗು ದ್ಯೇಯ ಧೋರಣೆಗಳನ್ನು ಗ್ರಹಿಸಿದ ಅರಸುರವರು
ಬಂಗಾರಪ್ಪರನ್ನು ತಮ್ಮೆಡೆಗೆ ಸೆಳೆದುಕೊಂಡು 1972 ರಲ್ಲಿ ಗೃಹಮಂತ್ರಿಯನ್ನಾಗಿ ನೇಮಿಸುತ್ತಾರೆ.
1975 ರಲ್ಲಿ ಅಸರು ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾದ ಬಂಗಾರಪ್ಪ ರಾಜ್ಯದಲ್ಲಿ ಸಣ್ಣ ಮತ್ತು ದೊಡ್ಡ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡು ಕಾರ್ಯಗತಗೊಳಿಸುತ್ತಾ ರಾಷ್ಟ್ರದ ಆರ್ಥಿಕಾಭಿವೃದ್ಧಿಗೆ ಬುನಾದಿ ಹಾಕುತ್ತಾರೆ.

ರಾಷ್ಟ ಮತ್ತು ರಾಜ್ಯ ರಾಜಕಾರಣದಲ್ಲಿನ ವಿದ್ಯಾಮಾನಗಳಲ್ಲಿ ಬಂಗಾರಪ್ಪ ನಿರ್ಣಾಯಕ

1969 ರಲ್ಲಿ ಕಾಂಗ್ರೇಸ್ ಇಬ್ಭಾಗವಾದಾಗ ಇಂದಿರಾಗಾಂಧಿ ನೇತ್ರತ್ವದ ಆಡಳಿತ ಕಾಂಗ್ರೇಸ್ ಹಾಗು ನಿಜಲಿಂಗಪ್ಪ ನೇತ್ರತ್ವದ ಸಂಯುಕ್ತ ಕಾಂಗ್ರೇಸ್ ಪಕ್ಷಗಳು ಅಸ್ತಿತ್ವಕ್ಕೆ ಬಂದವು.

ಕರ್ನಾಟಕದಲ್ಲಿ ಡಿ.ದೇವರಾಜು ಅರಸುರವರು ಶ್ರೀಮತಿ ಇಂದಿರಾಗಾಂಧಿಯವರ ಪಕ್ಷದ ಬೆಂಬಲಿಗರಾಗಿ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುತ್ತಾರೆ.1972 ರಿಂದ 1979 ರ ಅವಧಿಗೆ ಮುಖ್ಯಮಂತ್ರಿಯಾಗಿ ಜನಪ್ರೀಯ ಆಡಳಿತ ನೀಡುತ್ತಾರೆ.

1975ರ ನಂತರ ರಾಯ್ ಬರೇರಿಯಲ್ಲಿ ಸೋತಿದ್ದ ಇಂದಿರಾಗಾಂಧಿಯವರಿಗೆ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಗೆಲ್ಲಿಸಿ ಪುನಃ ದೇಶದ ಪ್ರಧಾನಿಯಾಗುವಂತೆ ಮಾಡುವ ಮೂಲಕ ರಾಜಕೀಯ ಭವಿಷ್ಯ ನೀಡಿದವರು ದೇವರಾಜ ಅರಸು ಮತ್ತು ಬಂಗಾರಪ್ಪ.

ಇಂದಿರಾ ಗೆಲುವು ಅರಸು ಅವರನ್ನು ಕಿಂಗ್ ಮೇಕರ್ ಮಾಡುತ್ತದೆ.ಆದರೆ ರಾಜಕಾರಣದಲ್ಲಿ ವ್ಯಕ್ತಿ ಪ್ರಭಲನಾದರೆ ಮಟ್ಟ ಹಾಕುವುದು ಕೇಂದ್ರದ ವರಿಷ್ಠರ ಜಾಯಮಾನ.

ಅರಸು ನನ್ನ ಕೈಗೊಂಬೆಯಾಗಿರಬೇಕೆಂದು ಇಂದಿರಾ ಬಯಸುತ್ತಿದ್ದರು.ಅರಸು ಅವರ ಬೆಂಬಲಕ್ಕಿದ್ದ ಬಂಗಾರಪ್ಪ ಮುಂತಾದ ಹಿಂದುಳಿದ ವರ್ಗಕ್ಕೆ ಸೇರಿದ ಬಲಿಷ್ಠ ರಾಜಕಾರಣಿಗಳನ್ನು ಅರಸು ಅವರಿಂದ ದೂರ ಮಾಡುವಲ್ಲಿ ಇಂದಿರಾ ಯಶಸ್ವಿಯಾದರು.

ಅರಸು ಪಾಳೆಯದಿಂದ ಬಂಗಾರಪ್ಪರನ್ನು ಹೊರಬರುವಂತೆ ಮಾಡಿ,ಅರಸು ಅವರನ್ನು ಏಕಾಂಗಿಯನ್ನಾಗಿ ಮಾಡಲಾಯಿತು.ಕಾಂಗ್ರೇಸ್ ತೊರೆದ ಅರಸುರವರು ಕರ್ನಾಟಕ ಕ್ರಾಂತಿರಂಗ ಪಕ್ಷ ಕಟ್ಟುತ್ತಾರೆ.

ಅರಸುರವನ್ನು ಪದಚ್ಯುತಿ ಗೊಳಿಸಿದ ಬಂಗಾರಪ್ಪ ಕಾಂಗ್ರೇಸ್ ನಲ್ಲಿ ಪ್ರಭಾವಿ ನಾಯಕರಾಗಿ ಬೆಳೆಯುತ್ತಾರೆ.

1979 ರಲ್ಲಿ ಇಂದಿರಾಗಾಂಧಿಯವರು ಬಂಗಾರಪ್ಪರನ್ನು ಕಾಂಗ್ರೇ ನ ಅಧ್ಯಕ್ಷರಾಗಿ ನೇಮಿಸುತ್ತಾರೆ.ಈ ಸಂದರ್ಭದಲ್ಲಿ ಬಂಗಾರಪ್ಪ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಬಲಪಡಿಸುತ್ತಾರೆ.

ಆದರೆ ಅರಸು ಅವರನ್ನು ಕೈಬಿಟ್ಟು ಬಂಡಾಯ ಕಾಂಗ್ರೇಸ್ ನ ಅಧ್ಯಕ್ಷ್ಯ ಸ್ಥಾನ ವಹಿಸಿಕೊಂಡ ಬಂಗಾರಪ್ಪನವರು ಮುಖ್ಯಮಂತ್ರಿ ಸ್ಥಾನದಿಂದ ವಂಚಿತರಾಗುತ್ತಾರೆ.

ಆದರೆ 1980 ರ ಮುಖ್ಯಮಂತ್ರಿ ಗುಂಡುರಾವ್ ಅವರ ಮಂತ್ರಿ ಮಂಡಲದಲ್ಲಿ ಬಂಗಾರಪ್ಪ ಕೃಷಿ ಮತ್ತು ಕಂದಾಯ ಸಚಿವರಾಗುತ್ತಾರೆ.

ಈ ಸಂದರ್ಭದಲ್ಲಿ ಗೇಣಿದಾರರಿಗೆ ಕೃಷಿ ಕಾರ್ಮಿಕರಿಗೆ ಸಣ್ಣ ರೈತರಿಗೆ,ಭೂ ಹಿನರಿಗೆ ನೆರವಾಗುತ್ತಾರೆ.

ಆದರೆ ದುರ್ಬಲರ ಕಲ್ಯಾಣಕ್ಕೆ ಗುಂಡುರಾವ್ ಸರ್ಕಾರ ಅಡ್ಡಿಯಾಗುತ್ತಿದೆ ಎಂದು ಹೊರಬಂದು ಭಿನ್ನಮತಿಯರಾಗಿ 1982 ರಲ್ಲಿ ತಮ್ಮ ಮಂತ್ರಿ ಪದವಿಗೆ ರಾಜೀನಾಮೆ ಸಲ್ಲಿಸುತ್ತಾರೆ.

ರಾಜಕೀಯದಲ್ಲಿ ಯಾರೆ ಮೋಸ ಮಾಡಿದ್ರೂ ಅವರನ್ನು ದ್ವಂಸ ಮಾಡುವ ಶಕ್ತಿಯನ್ನು ನಾವು ಇಟ್ಟುಕೊಳ್ಳಬೇಕೆಂಬ ತಂತ್ರಗಾರಿಕೆ ಬಂಗಾರಪ್ಪರಲ್ಲಿತ್ತು,

ನಂತರ ಬಂಗಾರಪ್ಪ ದೇವರಾಜು ಅರಸು ಸ್ಥಾಪಿಸಿದ್ದ, ಕರ್ನಾಟಕ ಕ್ರಾಂತಿರಂಗ ಪಕ್ಷದ ಉತ್ತರಾಧಿಕಾರಿಯಾಗಿ ನಿಂತು,ಅಬ್ದಲ್ ನಜೀರ್ ಸಾಬ್ ಅವರೊಂದಿಗೆ ಪಕ್ಷದ ಬಲವರ್ಧನೆಗಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತಾರೆ.

1983 ರಲ್ಲಿ ಕಾಂಗ್ರೇಸೇತರ ಪಕ್ಷ ರಾಜ್ಯದಲ್ಲಿ ಸ್ಥಾಪನೆಗೊಳ್ಳುತ್ತದೆ.ರಾಜ್ಯದಲ್ಲಿ 1983 ರ ಚುನಾವಣೆಯಲ್ಲೂ ಜನತಾ ಪಕ್ಷ ರೂಪಿಸಿಕೊಂಡ ಒಕ್ಕೂಟವನ್ನು ಕ್ರಾಂತಿರಂಗ ಪಕ್ಷ ಬೆಂಬಲಿಸುತ್ತದೆ.

ಬಂಗಾರಪ್ಪರು ಜನತಾಪಕ್ಷಧ ವಿಜಯಕ್ಕೆ ಗಣನೀಯ ಪ್ರಮಾಣದಲ್ಲಿ ಶ್ರಮಿಸಿದ್ದರೂ ಸಹ ಅವರಿಗೆ ಮುಖ್ಯಮಂತ್ರಿ ಸ್ಥಾನ ಒಲಿದು ಬರಲಿಲ್ಲ.

ದೆಹಲಿಯ ವರಿಷ್ಠರಿಂದ ನೇಮಿಸಲ್ಪಟ್ಟ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗುತ್ತಾರೆ.ರಾಜ್ಯದ ಬಹು ಸಂಖ್ಯಾತ ನಾಯಕರ ಪಿತೂರಿಯಿಂದ ಬಂಗಾರಪ್ಪರಿಗೆ ಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲ ಎನ್ನುವುದು ಸರಳ ಸತ್ಯವಾಗಿತ್ತು.

ಬಂಗಾರಪ್ಪರ ನಾಯಕತ್ವದ ಗುಣ ಹಾಗು ಸಂಘಟನಾ ಸಾಮರ್ಥ್ಯವನ್ನು ಮನಗಂಡಿದ್ದ ರಾಮಕೃಷ್ಣ ಹೆಗಡೆ ಸರ್ಕಾರ ಬಂಗಾರಪ್ಪರಿಗೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಲು ನಿರ್ಧರಿಸಿದ್ದಾಗ

ಅದಕ್ಕೆ ಸೊಪ್ಪು ಹಾಕದ ಬಂಗಾರಪ್ಪ ಕ್ರಾಂತಿರಂಗ ಪಕ್ಷದಿಂದ ಹೊರಬಂದು, ಮತ್ತೆ ಕಾಂಗ್ರೇಸ್ ಪಕ್ಷ ಸೇರುತ್ತಾರೆ.

1983 ರಲ್ಲಿ ಕಾಂಗ್ರೇಸ್ ಗೆ ಮರಳುವ ಬಂಗಾರಪ್ಪ ಮುಂದೆ 8 ವರ್ಷಗಳ ಕಾಲ ವಿರೋಧ ಪಕ್ಷದ ಸ್ಥಾನದಲ್ಲಿದ್ದು ದುರ್ಬಲ ವರ್ಗದವರ ಹಿತರಕ್ಷಣೆಗೆ ಧ್ವನಿಯಾಗುತ್ತಾರೆ.ಆಡಳಿತ ಪಕ್ಷದ ಲೋಪದೋಷಗಳನ್ನು ಎತ್ತಿ ಹಿಡಿಯುತ್ತಾರೆ.

1989 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ 177 ಸ್ಥಾನ ಪಡೆದು ಜಯಗಳಿಸುತ್ತದೆ,ಕಾಂಗ್ರೇಸ್ ಪಕ್ಷದ ಗೆಲುವಿಗೆ ಬಂಗಾರಪ್ಪನವರು ನಡೆಸಿದ ಬಿರುಸಿನ ಪ್ರಚಾರವೇ ಕಾರಣವಾಗಿತ್ತು.ಆ ಸಂದರ್ಭದಲ್ಲಿ ವೀರೇಂದ್ರ ಪಾಟಿಲ್ ಮುಖ್ಯಮಂತ್ರಿಯಾಗುತ್ತಾರೆ.ಹೈಕಮಾಂಡ್ ತಿರ್ಮಾನದಂತೆ ಬಂಗಾರಪ್ಪ,ವೀರೇಂದ್ರ ಪಾಟೀಲ್ ಸರ್ಕಾರದಲ್ಲಿ ಕೃಷಿ ಮತ್ತು ತೋಟಗಾರಿಕಾ ಸಚಿವರಾಗಿ ಕಾರ್ಯ ನಿರ್ವಹಿಸುತ್ತಾರೆ.

ಮುಖ್ಯಮಂತ್ರಿಯಾಗಿ ಬಂಗಾರಪ್ಪ

1989 ರಲ್ಲಿ ವೀರೇಂದ್ರ ಪಾಟೀಲ್ ಸರ್ಕಾರದಲ್ಲಿ ಭಿನ್ನಮತಿಯರ ವಿರೋಧ ಆರಂಭವಾಗುತ್ತದೆ.ಹಾಗೆ ಬಂಗಾರಪ್ಪ ಹಾಗು ಪಾಟೀಲರ ನಡುವೆ ವೈಮನಸ್ಸು ಉಂಟಾಗುತ್ತದೆ.

ವೀರೇಂದ್ರ ಪಾಟೀಲ ಆಡಳಿತದ ವಿರುದ್ಧ ಬಂಗಾರಪ್ಪ ಅವರು ಹೈಕಮಾಂಡ್ ಗೆ ದೂರು ಸಲ್ಲಿಸುತ್ತಾರೆ..

ವೀರೇಂದ್ರ ಪಾಟೀಲರು ಬಂಗಾರಪ್ಪರನ್ನು ಪಕ್ಷದಿಂದ ಉಚ್ಚಾಟನೆಗೆ ಮುಂದಾಗುತ್ತಾರೆ.

ಆದರೆ ರಾಷ್ಟ್ರೀಯ ಕಾಂಗ್ರೇಸ್ ಅಧ್ಯಕ್ಷರಾಗಿದ್ದ ರಾಜೀವ್ ಗಾಂಧಿ ಅವರು ರಾಜ್ಯದ ವಿಧ್ಯಾಮಾನಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಾರೆ.

ಪಕ್ಷದ ಶಾಸಕರ ವಿರೋಧ ಹಾಗು ಆಡಳಿತ ವೈಫಲ್ಯತೆ ಕಾರಣದಿಂದಾಗಿ ಲಘುಪಾರ್ಶ್ವವಾಯು ಖಾಯಿಲೆಗೆ ತುತ್ತಾಗುವ ವೀರೇಂದ್ರ ಪಾಟೀಲರಿಗೆ, ರಾಮನಗರದಲ್ಲಾದ ಕೋಮುಗಲಭೆ ಹಾಗು ರೈತ ಚಳುವಳಿಯ ಪರಿಣಾಮಗಳು ವೀರೇಂದ್ರ ಪಾಟಿಲ್ ಸರ್ಕಾರದ ಪತನಕ್ಕೆ ಕಾರಣವಾಗುತ್ತದೆ.

ನಂತರ 1990 ರ ಅಕ್ಟೋಬರ್ 17 ರಂದು ಎಸ್ ಬಂಗಾರಪ್ಪ ಹೈಕಮಾಂಡ್ ನಿರ್ಣಯದಂತೆ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ.

1983 ರಲ್ಲಿಯೇ ಮುಖ್ಯಮಂತ್ರಿಯಾಗಬೇಕಿದ್ದ ಬಂಗಾರಪ್ಪರಿಗೆ ಸಿಎಂ ಸ್ಥಾನ ಒಲಿದು ಬಂದಿದ್ದು 1990 ಅಕ್ಟೋಬರ್ 17 ರಲ್ಲಿ,

ಸಿಕ್ಕ ಅವಕಾಶವನ್ನು ಒಬ್ಬ ಮುಖ್ಯಮಂತ್ರಿ ಹೇಗೆ ಸಮರ್ಥವಾಗಿ ಬಳಿಸಿಕೊಳ್ಳಬಹುದು ಎಂಬುದಕ್ಕೆ ಬಂಗಾರಪ್ಪ ದೇಶಕ್ಕೆ ಮಾದರಿಯಾದರು.ಅವರು ಜಾರಿಗೊಳಿಸದ ಅಕ್ಷಯ,ಆಶ್ರಯ ಶುಶ್ರುಷಾ,ವಿಶ್ವ ಆರಾಧನಾ,ಯೋಜನೆಗಳು ಇಂದಿಗೂ ಅಜರಾಮರವಾಗಿದೆ.

ಯೋಜನೆಗಳು

  • 1.ಹಳ್ಳಿಗಾಡಿನ ಬಡಮಕ್ಕಳನ್ನು ಶಾಲೆಗೆ ದಾಖಲಿಸಲು ಆ ಮೂಲಕ ಸಾಕ್ಷರತೆ ಸಾಧಿಸುವಲ್ಲಿ ಕೈಗೊಂಡ ಅಕ್ಷಯ ಯೋಜನೆ ಹೆಚ್ಚು ಅರ್ಥಪೂರ್ಣವಾಯಿತು.
  • 2.ವಸತಿ ಹೀನರಿಗೆ ಲಕ್ಷಾಂತರ ಮನೆ ನಿವೇಶನ ನೀಡುವ ಆಶ್ರಯ ಯೋಜನೆ ದೇಶದಲ್ಲಿ ಜನಮನ್ನಣೆಗಳಿಸಿತು.
  • 3.ಗ್ರಾಮೀಣ ಪ್ರದೇಶದ ಬಡರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವಲ್ಲಿ ಸಹಕಾರಿಯಾದ ಶುಶ್ರುಷಾ ಯೋಜನೆ ಮಾನವೀಯತೆಯ ಸಂಕೇತವಾಗಿತ್ತು.
  • 4.ಗ್ರಾಮೀಣ ಹಾಗು ಗುಡಿ ಕೈಗಾರಿಕೆಗಳ ಮೂಲಕ ಬಡವರ ಆರ್ಥಿಕ ಸ್ಥಿತಿ ಸುಧಾರಿಸಲು ಕೈಗೊಂಡ ವಿಶ್ವಯೋಜನೆ ದುರ್ಬಲ ವರ್ಗದವರ ಬಾಳಿಗೆ ಬೆಳಕಾಯಿತು.
  • 5.ರಾಜ್ಯದ ಸಾಂಸ್ಕೃತಿಕ ವಿಕಾಸ ಹಾಗು ಪರಂಪರೆಯ ರಕ್ಷಿಸಲು ಕೈಗೊಂಡ ಆರಾಧನಾ ಯೋಜನೆ ಸಾಮಾಜಿಕ ಸಾಮರಸ್ಯ ಉಂಟು ಮಾಡಲು ಸಾಧನವಾಗಿತ್ತು.
  • 6.ಹಳ್ಳಿ ವಿದ್ಯಾರ್ಥಿಗಳು ಪಟ್ಟಣದ ವಿದ್ಯಾರ್ಥಿಗಳೊಂದಿಗೆ ಸಮಾನವಾಗಿ ಸ್ಪರ್ಧಿಸಲು ಸಾಧ್ಯವಾಗದ ಕಾರಣ ಈ ಹಳ್ಳಿಯ ಮಕ್ಕಳು ಕಾಲೇಜು ಪ್ರವೇಶಕ್ಕೆ ಹಾಗು ಸ್ಪರ್ದಾತ್ಮಕ ಪರೀಕ್ಷೆಗೂ ಸಹಾಯವಾಗಲು ಜಾರಿಗೆ ತಂದ ಗ್ರಾಮೀಣ ಕೃಪಾಂಕ ಬಡವಿದ್ಯಾರ್ಥಿಗಳ ಭವಿಷ್ಯವನ್ನೇ ಬದಲಿಸಿತು.
  • 7.ಕೃಷಿ ಕ್ಷೇತ್ರಕ್ಕೆ ಬಂಗಾರಪ್ಪ ಸರ್ಕಾರ ವಿಶೇಷವಾಗಿ ಗಮನ ಹರಿಸಿ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡುವುದರೊಂದಿಗೆ ಬಡರೈತರ ಕಷ್ಟಗಳನ್ನು ಪರಿಹರಿಸಲು ಮುಂದಾದರು.
  • 8.ಕನ್ನಡ ಅಭಿವೃದ್ಧಿಯ ಬಗ್ಗೆ ಬಂಗಾರಪ್ಪರಿಗೆ ವಿಶೇಷ ಕಾಳಜಿಯಿದ್ದ ಕಾರಣದಿಂದಾಗಿ 1992 ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂತು.1992 ರಲ್ಲಿ ಪುಸ್ತಕ ಪ್ರಾಧಿಕಾರವನ್ನು ರಚಿಸಲಾಯಿತು.ರಾಷ್ಟ್ರ ಕವಿ ಕುವೆಂಪು ಪ್ರತಿಷ್ಠಾನ ಹಾಗು ಬೇಂದ್ರೆ ಪ್ರತಿಷ್ಠಾನಗಳಿಗೆ ಸರ್ಕಾರ ಬುನಾದಿ ಹಾಕಿತು.ಹಂಪಿ ವಿಶ್ವ ವಿದ್ಯಾನಿಲಯ ಆರಂಭಗೊಂಡಿತು.

ಕಾವೇರಿ ವಿವಾದ ಬುಗಿಲೆದ್ದಾಗ ಸುಗ್ರಿವಾಜ್ಞೆ ಹೊರಡಿಸಿದ ಬಂಗಾರಪ್ಪ

ಕಾವೇರಿ ಜಲವಿವಾದ ಬುಗಿಲೆದ್ದಾಗ ತಮ್ಮದೇ ಪಕ್ಷ ಕೇಂದ್ರದಲ್ಲಿದ್ದರೂ,ಕ್ಯಾರೆ ಅನ್ನದ ಬಂಗಾರಪ್ಪ ಸುಗ್ರಿವಾಜ್ಞೆ ಹೊರಡಿಸುವ ಮೂಲಕ ನಾಡುನುಡಿ ನೆಲಜಲದ ಬಗ್ಗೆ ಕಾಳಜಿ ಮೆರೆದಿದ್ದರು.

1990 ರಲ್ಲಿ ರಚಿತವಾಗಿದ್ದ ಕಾವೇರಿ ನ್ಯಾಯಮಂಡಳಿಯ ತಮಿಳು ನಾಡಿಗೆ 205 ಟಿಎಂಸಿ ನೀರು ಬಿಡುವಂತೆ ಮಧ್ಯಂತರ ತೀರ್ಪು ನೀಡಿದ್ದನ್ನು ಬಂಗಾರಪ್ಪ ಸರ್ಕಾರ ಸುಪ್ರಿಂ ಕೋರ್ಟ್ ನಲ್ಲಿ ಪ್ರಶ್ನಿಸಿತು.

ಆದರೆ 1991ರ ಎಪ್ರಿಲ್ 2 ರಂದು ಸುಪ್ರಿಂ ಕೋರ್ಟ್ ಮದ್ಯಂತರ ತೀರ್ಪು ನೀಡಲು ನ್ಯಾಯಾಧಿಕರಣಕ್ಕೆ ಅಧಿಕಾರವಿದೆ ಎಂದು ಘೋಷಿಸಿತು.ತದನಂತರ ಮಂಡಳಿ ಅದೇ ವರ್ಷ ಜೂನ್ 25 ರಂದು ಮಧ್ಯಂತರ ತೀರ್ಪು ನೀಡಿತು.

ಅದರ ಪ್ರಕಾರ ಕರ್ನಾಟಕವು ವಾರ್ಷಿಕವಾಗಿ 205 ಟಿಎಂಸಿ ನೀರನ್ನು ತಮಿಳುನಾಡಿಗೆ ತಿಂಗಳುವಾರು ಹರಿಸುವಂತೆ ಸೂಚಿಸಿತು.ಹಾಗೆ ಬಿಡಲು ಒಂದುವಾರ ಕೊರತೆ ಬಿದ್ದರೆ ಮುಂದಿನವಾರ ಅದನ್ನು ತುಂಬಿಕೊಡುವಂತೆಯೂ ಸೂಚಿಸಿತು.

ತೀರ್ಪಿನ ಮಾರಕವನ್ನು ಗಮನಿಸಿದ ಬಂಗಾರಪ್ಪ ಆಕ್ರೋಶಗೊಂಡರು.ರಾಜ್ಯ ಮತ್ತು ರೈತರಿಗೆ ಆಗುವ ಅನ್ಯಾಯ ಇದನ್ನು ಸಹಿಸಲು ತಮ್ಮಿಂದಾಗದು ಎಂಬ ನಿರ್ಣಯಕ್ಕೆ ಬಂದರು.
ತಕ್ಷಣ ನೀರಾವರಿ ತಜ್ಞರು ಮತ್ತಿತ್ತರ ಪರಿಣಿತರನ್ನು ಕರೆಸಿಕೊಂಡು ಗಂಭೀರವಾಗಿ ಚರ್ಚೆ ಮಾಡಿದರು.ಕೇಂದ್ರ ಸರ್ಕಾರ ಗೆಜೆಟ್ ನಲ್ಲಿ ಪ್ರಕಟಿಸುವ ಮುನ್ನವೇ ಪ್ರತಿತಂತ್ರ ರೂಪಿಸಲು ಸಜ್ಜಾದರು.ಅಂತಹ ಪ್ರತಿತಂತ್ರವೇ ರಾಜ್ಯದ ಇತಿಹಾಸದಲ್ಲಿ ಪ್ರಥಮ ಎಂದು ಕರೆಯಲಾಗುತ್ತದೆ.
1991 ರ ಜುಲೈ 25 ರಂದು ವಿಧಾನಮಂಡಲದ ಉಭಯ ಸದನಗಳ ಅನುಮೋದನೆ ಪಡೆದು ಕಾವೇರಿ ಜಲಾನಯನ ಪ್ರದೇಶದ 8,49,700 ಹೆಕ್ಟೇರ್ ಪ್ರದೇಶದ ನೀರಾವರಿ ಮತ್ತು ಉಪನದಿಗಳ ನೀರನ್ನು ರಾಜ್ಯದ ಒಳಗೆ ಬಳಸಬೇಕು ಎಂಬ ಸುಗ್ರಿವಾಜ್ಞೆ ಹೊರಡಿಸಿದರು.ಇದು ಬಂಗಾರಪ್ಪರ ದಿಟ್ಟ ಹಾಗು ಸಂಕಲ್ಪಶಕ್ತಿಯಿಂದ ಸಾಧ್ಯವಾದ ನಡೆಯಾಗಿತ್ತು.

ಹೀಗೆ ಹತ್ತು ಹಲವು ಜನಪರ ದೀನದಲಿತರ ಪರ ಶಾಶ್ವತ ಯೋಜನೆಗಳನ್ನು ರೂಪಿಸಿದ ಬಂಗಾರಪ್ಪ ಪೂರ್ಣಾವಧಿ ಅಧಿಕಾರ ನಡೆಸಲು ಸಾಧ್ಯವಾಗುದಿಲ್ಲ.

1992 ರಲ್ಲಿ ರಾಜೀವ್ ಗಾಂಧಿ ಹತ್ಯೆ ನಂತರ ಪಿ.ವಿ ನರಸಿಂಹರಾವ್ ದೇಶದ ಪ್ರಧಾನಿಯಾದ ಸಂದರ್ಭದಲ್ಲಿ ಇಂದಿರಾ ಕುಟುಂಬದ ನಿಕಟವರ್ತಿಗಳನ್ನು ಟಾರ್ಗೇಟ್ ಮಾಡುವ ನರಸಿಂಹರಾವ್ ಬಂಗಾರಪ್ಪನವರ ರಾಜೀನಾಮೆಯನ್ನು ಕೇಳುತ್ತಾರೆ.

ಶಾಸಂಕಾಗವನ್ನೇ ತನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡಿದ್ದ ಬಂಗಾರಪ್ಪ ಪಿವಿ ನರಸಿಂಹರಾವ್ ಗೆ ಶೆಡ್ಡುಹೊಡೆಯುವ ಎಲ್ಲಾ ಅವಕಾಶಗಳಿದ್ದರೂ,ಅಧಿಕಾರಕ್ಕೆ ಜೋತುಬೀಳದ ಬಂಗಾರಪ್ಪ,

1992,ನವಂಬರ್ 19 ರಂದು ರಾಜೀನಾಮೆಯನ್ನು ನೀಡುತ್ತಾರೆ.ನಂತರ ಕರ್ನಾಟಕ ಕಾಂಗ್ರೇಸ್ ಪಕ್ಷ (ಕೆ.ಸಿ.ಪಿ)ಸ್ಥಾಪನೆ ಮಾಡುವ ಬಂಗಾರಪ್ಪ ಆ ಮೂಲಕ ಕಾಂಗ್ರೇಸ್ ಗೆ ದೊಡ್ಡ ಎದುರಾಳಿಯಾಗಿ ಪರಿಣಮಿಸುತ್ತಾರೆ.

ಬಂಗಾರಪ್ಪ ನಿರ್ದೋಷಿಯಾಗಲು ಬೇಕಾಯಿತು 18 ವರ್ಷ

ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಕ್ಲಾಸಿಕ್ ಕಂಪ್ಯೂಟರ್ ಖರೀದಿ ವಿವಾದ ರಾಜಕೀಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸುತ್ತದೆ.

ಬಂಗಾರಪ್ಪ ಸೇರಿದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ಅಲೆಕ್ಸಾಂಡರ್ ಮತ್ತು ಗೋಪಾಲಕೃಷ್ಣ ಎಂಬುವರ ವಿರುದ್ಧ ಸಿಬಿಐ ಮೊಕದ್ದಮ್ಮೆ ದಾಖಲಿಸುತ್ತದೆ.

ಒಂದು ಕಂಪ್ಯೂಟರ್ ಗೆ 5 ಲಕ್ಷದ ಮೂವತ್ತು ಸಾವಿರ ರೂಪಾಯಿ ನಂತೆ ನೂರು ಕಂಪ್ಯೂಟರ್ ಗಳನ್ನು ಖರೀದಿಸಲಾಗಿದೆ.

ಇದರಿಂದ ಸರ್ಕಾರದ ಬೊಕ್ಕಸಕ್ಕೆ 5 ಕೋಟಿ ರೂಪಾಯಿ ನಷ್ಟವಾಗಿದೆ ಎಂಬುದು ವಿವಾದಕ್ಕೆ ಕಾರಣವಾಯ್ತು.

ಸಿಬಿಐ ವಿಚಾರಣೆ ನಡೆಸಿ ಹೂಡಿದ ಮೊಕದ್ದಮ್ಮೆಯನ್ನು ಅದೀನ ನ್ಯಾಯಾಯಲ ಬಂಗಾರಪ್ಪ ನಿರ್ದೋಷಿ ಎಂಬ ತೀರ್ಪು ನೀಡಿತು.

ಆದರೆ ಸಿಬಿಐ ಅಧೀನ ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ಮಸಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತದೆ.

ಹೈಕೋರ್ಟ್ ಸಹ ಅದೀನ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿಯುವ ಮೂಲಕ ಬಂಗಾರಪ್ಪ ನಿರ್ದೋಷಿ ಎಂದು ತೀರ್ಪು ನೀಡುತ್ತದೆ.

ಆದರೆ ಬಂಗಾರಪ್ಪ ಈ ಹಗರಣದಲ್ಲಿ ನಿರ್ದೋಷಿಯಾಗಲು ಬೇಕಾಗಿದ್ದು ಸರಿಸುಮಾರು 18 ವರ್ಷ.ಇದು ಬಂಗಾರಪ್ಪರ ರಾಜಕೀಯ ವೇಗಕ್ಕೂ ಸ್ವಲ್ಪ ಕಡಿವಾಣ ಹಾಕಿತು ಎಂದೇ ಅರ್ಥೈಸಲಾಗಿದೆ.

ಪಕ್ಷ ಕಟ್ಟೋದು ಬಂಗಾರಪ್ಪರ ಜಾಯಮಾನ

ಹಲವು ಬಾರಿ ಪಕ್ಷ ತೊರೆದು ಹೊಸ ಪಕ್ಷ ಕಟ್ಟಿ ರಾಜಕೀಯದ ಚದುರಂಗದಾಟ ಆಡಿದ ಬಂಗಾರಪ್ಪ ರಾಜಕೀಯದ ಉತ್ಸಾಹ ಇಳಿ ವಯಸ್ಸಿನಲ್ಲೂ ಕಡಿಮೆಯಾಗಿತ್ತು.

ತಮ್ಮ ಕಠಿಣ ನಿರ್ಧಾರಗಳಿಂದ ರಾಜಕಾರಣದಲ್ಲಿ ಸೋಲಿಲ್ಲದ ಸರದಾರನಂತೆ ವಿರಾಜಮಾನವಾಗಿದ್ದ ಬಂಗಾರಪ್ಪ ನಂತರದ ದಿನಗಳಲ್ಲಿ ತಾವು ತೆಗೆದುಕೊಂಡ ತಪ್ಪು ನಿರ್ಧಾರಗಳಿಂದಾಗಿ ಮತದಾರರ ಕೆಂಗಣ್ಣಿಗೂ ಗುರಿಯಾಗಬೇಕಾಯಿತು.

  • 1994 ರಲ್ಲಿ ನಡೆದ ಸಾರ್ವತ್ರಿಕ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕೆಸಿಪಿ 10 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲವು ಸಾಧಿಸುವ ಮೂಲಕ ಬಂಗಾರಪ್ಪ
  • ಕಾಂಗ್ರೇಸ್ ಪಕ್ಷದ ಸೋಲಿಗೆ ಕಾರಣರಾಗುತ್ತಾರೆ ಈ ಚುನಾವಣೆಯಲ್ಲಿ ಜನತಾದಳ ಅಧಿಕಾರದ ಗದ್ದುಗೆ ಏರುತ್ತೆ.
  • ಈ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ದೇವೇಗೌಡರು,ಬಂಗಾರಪ್ಪ ಹುಟ್ಟುಹಾಕಿದ್ದ ಕೆಸಿಪಿ ಪಕ್ಷದ 5 ಶಾಸಕರನ್ನು ಆಪರೇಷನ್ ಮಾಡುತ್ತಾರೆ.
  • 1996 ರ ಮೇ ತಿಂಗಳಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಂಗಾರಪ್ಪ ಕೆಸಿಪಿ ಪಕ್ಷದಿಂದ ಎಂಪಿ ಆಗುತ್ತಾರೆ.
  • ರಾಜಕೀಯದ ಪಟ್ಟು ಅರಿತಿದ್ದ ಬಂಗಾರಪ್ಪ ಇದೇ ವರ್ಷ ಕೆಸಿಪಿಯನ್ನು ಕಾಂಗ್ರೇಸ್ ನಲ್ಲಿ ವಿಲೀನಗೊಳಿಸುವ ಮೂಲಕ ಕಾಂಗ್ರೇಸ್ ನ್ನು ಅಧಿಕೃತ ವಿರೋಧಪಕ್ಷವಾಗಿ ಹೊರಹೊಮ್ಮುವಂತೆ ಮಾಡುತ್ತಾರೆ.

ಇದಾದ ನಂತರ ಮತ್ತೆ ಕಾಂಗ್ರೇಸ್ ನೊಂದಿಗೆ ಅಸಮಧಾನಗೊಳ್ಳುವ ಬಂಗಾರಪ್ಪ 1998ಲ್ಲಿ ಕರ್ನಾಟಕ ವಿಕಾಸ ಪಕ್ಷ ರಚಿಸುತ್ತಾರೆ.
1998ರಲ್ಲಿ ನಡೆಯುವ ಮದ್ಯಂತರ ಲೋಕಸಭಾ ಚುನಾವಣೆಯಲ್ಲಿ ಕೆವಿಪಿ ಪಕ್ಷ ಪ್ರತಿನಿಧಿಸುವ ಬಂಗಾರಪ್ಪ,ಬಿಜೆಪಿ ಅಭ್ಯರ್ಥಿ ಆಯನೂರು ಮಂಜುನಾಥ್ ಎದುರು ಪರಾಭವಗೊಳ್ಳುತ್ತಾರೆ.
ರಾಜಕೀಯದಲ್ಲಿ ಎಂದು ಸೋಲನ್ನೇ ಕಾಣದ ಬಂಗಾರಪ್ಪ ಮೊದಲ ಆಯನೂರು ಮಂಜುನಾಥ್ ಎದುರಿಗೆ ಸೋಲನ್ನು ಅನುಭವಿಸುತ್ತಾರೆ.
ಐದು ಬಾರಿ ಬಂಗಾರಪ್ಪರಿಗೆ ಎದುರಾಳಿಯಾಗಿರುವ ಆಯನೂರು ಮಂಜುನಾಥ್ ಬಂಗಾರಪ್ಪರ ಚುನಾವಣೆಯನ್ನು ಹತ್ತಿರದಿಂದ ಕಂಡ ವ್ಯಕ್ತಿಗಳಲ್ಲೊಬ್ಬರು.

1999 ರಲ್ಲಿ ಮತ್ತೆ ಚುನಾವಣೆ ಎದುರಾದ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾಗಿದ್ದ ಎಸ್.ಎಂ ಕೃಷ್ಣ ಮತ್ತೆ ಬಂಗಾರಪ್ಪರನ್ನು ಕಾಂಗ್ರೇಸ್ ಗೆ ಬರುವಂತೆ ಮಾಡುತ್ತಾರೆ.
ಕಾಂಗ್ರೇಸ್ ಪಕ್ಷದಿಂದ ಬಂಗಾರಪ್ಪ ಮತ್ತೆ ಲೋಕಸಭೆಗೆ ಆಯ್ಕೆಯಾಗುತ್ತಾರೆ.2004 ರಲ್ಲಿ ಕಾಂಗ್ರೇಸ್ ಪಕ್ಷದೊಂದಿಗೆ ಭಿನ್ನಾಭಿಪ್ರಾಯ ಹೊಂದುವ ಬಂಗಾರಪ್ಪ,ಅನಿರೀಕ್ಷಿತ ಬೆಳವಣಿಗೆ ಎಂಬಂತೆ ಬಿಜೆಪಿ ಸೇರುತ್ತಾರೆ.ಅಲ್ಲಿಯವರೆಗೂ ಬಂಗಾರಪ್ಪರ ಸ್ವಂತ ನಿರ್ಧಾರಗಳ ಬಗ್ಗೆ ಚಕಾರವೆತ್ತದ ಮತದಾರ ನಂತರ ವಿಚಲಿತರಾಗುತ್ತಾರೆ.

ರಾಜ್ಯದಲ್ಲಿ ಬಿಜೆಪಿಗೆ ಶಕ್ತಿ ತುಂಬಿದವರು ಬಂಗಾರಪ್ಪ.

ಬಂಗಾರಪ್ಪರ ಆಗಮನ ಬಿಜೆಪಿ ಪಾಲಿಗೆ ಅಧೃಷ್ಟದ ಬಾಗಿಲನ್ನೇ ತೆರೆದುಬಿಡುತ್ತದೆ.ಅಲ್ಲಿಯವರೆಗೂ ಜಿಲ್ಲೆ ಹಾಗು ರಾಜ್ಯದಲ್ಲಿ ನೆಲೆಕಾಣಲು ಪರಿತಪಿಸುತ್ತಿದ್ದ ಬಿಜೆಪಿ ನಾಯಕರಾದ ಕೆ.ಎಸ್.ಈಶ್ವರಪ್ಪ ಬಿಎಸ್​ಯಡಿಯೂರಪ್ಪರಿಗೆ ಶಕ್ತಿ ತುಂಬಿದ್ದು ಬಂಗಾರಪ್ಪರ ಸಂಘಟನಾ ಶಕ್ತಿ.

ಬಂಗಾರಪ್ಪನರ ಎಂಟ್ರಿಯಿಂದ 2004 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 79 ಎಂಎಲ್ಎ ಹಾಗು 16 ಎಂಪಿ ಸ್ಥಾನ ಗಳಿಸಿತು.ಅಂದಿನ ಚುನಾವಣೆಯಲ್ಲಿ ಬಂಗಾರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸುತ್ತಾರೆ.ಬಿಜೆಪಿಯ ಕೋಮುವಾಗಿ ತತ್ವ ಸಿದ್ದಾಂತದಿಂದ ಬೇಸೆತ್ತ ಬಂಗಾರಪ್ಪ ಆ ಪಕ್ಷವನ್ನು ತೊರೆದು ಎಂಪಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ.

  • ಅಲ್ಲಿಯವರೆಗೂ ಬಂಗಾರಪ್ಪ ಸೇರುತ್ತಿದ್ದ ಪಕ್ಷಗಳಿಗೆ ಸಾಗರೋಪಾದಿಯಲ್ಲಿ ಸೇರುತ್ತಿದ್ದ ಕಾರ್ಯಕರ್ತರು,ಬಂಗಾರಪ್ಪ ಬಿಜೆಪಿಗೆ ಹೋದಾಗ ಮನಸ್ಸಿಲ್ಲದ ಮನಸ್ಸಿನಿಂದ ಕೈ ಜೋಡಿಸಿದರು.
  • ಬಂಗಾರಪ್ಪ ಬಿಜೆಪಿ ತೊರೆದಾಗ ಹರತಾಳು ಹಾಲಪ್ಪ ಗೋಪಾಲಕೃಷ್ಷ ಬೇಳೂರು ಸೇರಿದಂತೆ ಬಹುತೇಕ ಮುಖಂಡರು ಬಿಜೆಪಿಯಲ್ಲಿಯೇ ಉಳಿದುಕೊಂಡರು.
  • ಇದು ಬಂಗಾರಪ್ಪರನ್ನು ಮೊದಲ ಹಂತದಲ್ಲಿ ನಿರಾಸೆ ಮೂಡಿಸಿತು.ಕಾಂಗ್ರೇಸ್ ತೊರೆದು ಬಿಜೆಪಿಗೆ ಹೋದಾಗ ಪುತ್ರ ಕುಮಾರ್ ಬಂಗಾರಪ್ಪ ಕೂಡ ಕೈ ಜೋಡಿಸಲಿಲ್ಲ.
  • ಇದು ಕುಟುಂಬದ ಬಿರುಕಿಗೆ ಕಾರಣವಾಯ್ತು. ಬಂಗಾರಪ್ಪರ ಬಿಜೆಪಿ ಪಕ್ಷ ಸೇರಿ ವಾಪಸ್ಸು ಬಂದಿದ್ದು,ಅವರ ರಾಜಕೀಯ ಭವಿಷ್ಯವನ್ನೇ ಹಾಳು ಮಾಡಿತು.ಆದರೆ ಬಿಜೆಪಿಗೆ ರಾಜ್ಯದಲ್ಲಿ ನೆಲೆಕಂಡುಕೊಳ್ಳಲು ಶಕ್ತಿಯಾಯಿತು.

ಯಾವಾಗ ಬಂಗಾರಪ್ಪ ಬಿಜೆಪಿ ಪಕ್ಷ ಸೇರಿದರೋ ಜಿಲ್ಲೆಯ ಜನರ ಮನೋಭಾವಗಳೇ ಬದಲಾಗತೊಡಗಿದವು. ಜನರ ನಾಡಿ ಮಿಡಿತ ಅರಿತ ಬಂಗಾರಪ್ಪರಿಗೆ ಬಿಜೆಪಿ ಸೇರುವಾಗ ಮತದಾರರ ಮನೋಭಾವ ಅರಿಯುವ ಪ್ರಯತ್ನ ನಡೆಸದಿರುವುದು ಮುಂದಿನ ಸೋಲಿನ ಹಾದಿಗೆ ಸೋಪಾನವಾಯಿತು.ನಲ್ವತ್ತು ದಶಕಗಳ ಕಾಲ ಜಿಲ್ಲಾ ರಾಜಾಕರಣವನ್ನು ತಮ್ಮ ಕೈಬೆರಳಲ್ಲಿ ಆಡಿಸುತ್ತಿದ್ದ ಬಂಗಾರಪ್ಪ ಕೇವಲ ನಾಲ್ಕು ವರ್ಷಗಳಲ್ಲಿ ಆದ ರಾಜಕೀಯ ಪಲ್ಲಟಗಳಿಗೆ ದಾಳವಾಗಬೇಕಾಯಿತು.