ಹೇಗಿದೆ ಗೊತ್ತಾ ಕಾಳ್ಗಿಚ್ಚಿಗೆ ಬಳಿಯಾದ ಸುಂದರೇಶ್ ಸಾವನ್ನಪ್ಪಿದ ಅರಣ್ಯ ಪ್ರದೇಶ
ಫೆಬ್ರವರಿ 16, ಗುರುವಾರ ಮಧ್ಯಾಹ್ನ..ರಾಜ್ಯವೇ ಬೆಚ್ಚಿಬೀಳಿಸುವ ಘಟನೆಯೊಂದು ಹಾಸನ ಜಿಲ್ಲೆಯಲ್ಲಿ ನಡೆದು ಹೋಯ್ತು. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಪಶ್ಚಿಮ ಘಟ್ಟದ ಕಾಡುಮನೆ ಎಸ್ಟೇಟ್ ಪಕ್ಕದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆ ಪರಿಸರಲ್ಲಿ ಬೆಂಕಿ ನಂದಿಸಲು ಹೋದ ಅರಣ್ಯ ಸಿಬ್ಬಂದಿಗಳ ತಂಡದಲ್ಲಿ ಗಾರ್ಡ್ ಸುಂದರೇಶ್ ಅಗ್ನಿಗಾಹುತಿಯಾಗಿ ಸಾವನ್ನಪ್ಪಿದ್ರು…ಹೇಗಾಯ್ತು ಘಟನೆ ಎಂಬ ಸತ್ಯಶೋಧನೆಯಲ್ಲಿ ಹೊರಟ ಟುಡೆ ತಂಡಕ್ಕೆ ಸಾಕಷ್ಟು ಮಾಹಿತಿಗಳು ಲಭಿಸಿದ್ವು..
ಇದನ್ನು ಸಹ ಓದಿ : ಕಾಡಿನ ಸಮಸ್ಯೆಗಳೇ ಸುಂದರೇಶ್ರ ಕುಟುಂಬವನ್ನು ಕಾಡಿದವು, ಭಾದಿಸಿದವು..ಜೀವ ಬಲಿ ಪಡೆದವು! ಅರಣ್ಯ ರಕ್ಷಕನ ಹೋರಾಟದ ಬದುಕಿನ ವರದಿಯಿದು ! ಜೆಪಿ ಬರೆಯುತ್ತಾರೆ
ಅದು ಅಂತಿಂಥಾ ಸ್ಥಳವಲ್ಲ
ಮೊದಲನೆಯದಾಗಿ ಸುಂದರೇಶ್ ಸಾವು ಸಂಭವಿಸಿದ ಪ್ರದೇಶ ನೋಡಿದರೆ..ಎಂತವರೂ ಬೆಚ್ಚಿ ಬೀಳುತ್ತಾರೆ. ಮಾನವರು ಹೋಗುವ ಸ್ಥಳವೇನ್ರಿ ಎಂದು ಪ್ರಶ್ನಿಸುತ್ತಾರೆ.ಹೌದು ಸಕಲೇಶಪುರ ಬಳಿ ಕಾಡುಮನೆ ಎಂಬ ಆರುವರೆ ಸಾವಿರ ಎಕರೆಯ ಎಸ್ಟೇಟ್ ಇದ್ದು, ತಮಿಳು ನಾಡು ಮೂಲದ ಕಂಪನಿಯೊಂದರ ಒಡೆತನಲ್ಲಿದೆ. ಕಾಡುಮನೆ ಎಸ್ಟೇಟ್ ನಿಂದ 8-10 ಕಿಲೋಮೀಟರ್ ದೂರದಲ್ಲಿ ಮಣಿಬೀಗತಿ ಎಂಬ ಹಳೆ ಕಾಲದ ಎಸ್ಟೇಟ್ ಇದೆ. ಅದು ಈಗ ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿದೆ.
ಬ್ರಿಟೀಷರ ಕಾಲದಲ್ಲಿ ಅಲ್ಲಿ ಮನೆ ಕಟ್ಟಿರುವ ಹಳೆ ಇಟ್ಟಿಗೆ ಅವಶೇಷಗಳು ಈಗಲೂ ಇದೆ. ಇದು ಹುಲ್ಲುಗಾವಲಿನ ಕಡಿದಾದ ಪ್ರದೇಶ. ಆ ಸ್ಥಳಕ್ಕೆ ಯಾವುದೇ ಜೀಪ್ ರೂಟ್ ಗಳಿಲ್ಲ.ಯಾವುದೇ ವಾಹನಗಳ ಸಂಚಾರವೂ ಸಾಧ್ಯವಿಲ್ಲ. ಕೇವಲ ಕಾಲ್ನಡಿಗೆಯಲ್ಲಿಯೇ ಸಾಗಬೇಕು ಈ ಎಸ್ಟೇಟ್ ಸುತ್ತಮುತ್ತಲ ಪ್ರದೇಶವೆಲ್ಲಾ ಶೋಲಾ ಕಾಡಿನಿಂದ ಆವೃತವಾಗಿದ್ದು, ಹುಲ್ಲುಗಾವಲಿನ ಪ್ರದೇಶವಾಗಿದೆ. ಮನುಷ್ಯರ ಎದೆ ಎತ್ತರಕ್ಕೆ ಹುಲ್ಲುಗಳು ಇಲ್ಲಿ ಬೆಳೆಯುತ್ತವೆ. ಬೇಸಿಗೆ ಸಂದರ್ಭದಲ್ಲಿ ಈ ಭಾಗದಲ್ಲಿ ಬೇಟೆಯಾಡುವವರ ಸಂಖ್ಯೆ ಹೆಚ್ಚಿದೆ..
ಇಂತಹ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಚ್ಚುವ ಸಂದರ್ಭ ಹೆಚ್ಚಿರುತ್ತದೆ..ಕಡಿದಾದ ಜಾಗದಲ್ಲಿ ಅದು ಹತ್ತು ಕಿಲೋಮೀಟರ್ ದೂರದ ಮಣಿಬೀಗತಿಯಲ್ಲಿ ಬೆಂಕಿ ಬಿದ್ದಿದೆ ಎಂಬ ಸಂದೇಶ ಡಿ.ಆರ್.ಎಫ್.ಓ ಮಂಜುನಾಥ್ ಕಿವಿಗೆ ಬೀಳುತ್ತೆ. ಈ ಮಾಹಿತಿಯನ್ನು ಹಿರಿಯ ಅಧಿಕಾರಿಗಳು ಕೊಟ್ಟಿರಬೇಕು ಅಂತಾ ಮೇಲ್ನೋಟಕ್ಕೆ ಕಂಡು ಬಂದಿದೆ. ಯಾಕೆಂದರೆ ಈ ಸೆಕ್ಷನ್ ಅಥವಾ ಬೀಟ್ ಆಗಲಿ ಮಂಜುನಾಥ್ ವ್ಯಾಪ್ತಿಗಾಗಲಿ..ಅಥವ ಗಾರ್ಡ್ ಸುಂದರೇಶ್ ಬೀಟ್ ಗಾಗಿ ಸೇರಿರೋದಿಲ್ಲ. ಅಕ್ಕಪಕ್ಕದ ಸೆಕ್ಷನ್ ಪಾರೆಸ್ಟರ್ ಇದ್ದರೋ ಇಲ್ಲವೋ ಗೊತ್ತಿಲ್ಲ. ಆದ್ರೆ ಮೇಲಿಂದ ಬಂದ ಮಾಹಿತಿಯನ್ನು ಪಾಲಿಸಬೇಕಾಗಿದ್ದು, ಮಂಜುನಾಥ್ ಆದ್ಯ ಕರ್ತವ್ಯವಾಗಿತ್ತು. ಕಾಡಿನ ರಕ್ಷಣೆಗಾಗಿ ತಮ್ಮ ಸಿಬ್ಬಂದಿ ಗಾರ್ಡ್ ಸುಂದರೇಶ್ ವಾಚರ್ ತುಂಗೇಶ್ ಮತ್ತು ಮಹೇಶ್ರನ್ನು ಕರೆದುಕೊಂಡು ಮಂಜುನಾಥ್ ಕಾಲ್ನಡಿಗೆಯಲ್ಲಿಯೇ ಹತ್ತು ಕಿಲೋಮೀಟರ್ ನಡೆದು…ಬೆಂಕಿ ಕಾಣಿಸಿಕೊಂಡ ಜಾಗಕ್ಕೆ ಸಾಗುತ್ತಾರೆ.
ಅದು ಮಧ್ಯಾಹ್ನ, ಕೇಳಬೇಕೆ..ಬಿಸಿಲಿನ ಧಗೆ ಹೆಚ್ಚಿತ್ತು. ಗಾಳಿ ರಭಸದಲ್ಲಿ ಬೀಸುತ್ತಿತ್ತು. ಎದೆ ಎತ್ತರಕ್ಕೆ ಬೆಳೆದ ಹುಲ್ಲಿನ ತಳಭಾಗದಲ್ಲಿ ಬೆಂಕಿ ಪಸರಿಸುವ ದಿಕ್ಕನ್ನು ಮಂಜುನಾಥ್ ಗಾಗಲಿ ಸುಂದರೇಶ್ ಗಾಗಿ ಅಂದಾಜು ಮಾಡಲು ಸಾಧ್ಯವಾಗಲಿಲ್ಲ. ಬೆಂಕಿ ಬರುತ್ತಿದ್ದ ದಿಕ್ಕಿಗೆ ವಿರುದ್ಧವಾಗಿ ಸೊಪ್ಪಿನ ತುಂಡಿನಿಂದ ಬೆಂಕಿ ನಂದಿಸುತ್ತಾ ಸಾಗಿದ್ದಾರೆ. ಕಾಡಿನ ಬಗ್ಗೆ ಅಪಾರ ಅನುಭವಹೊಂದಿದ್ದ ಸುಂದರೇಶ್ಗೆ ಅಂದು ಅದೃಷ್ಟ ಕೈಕೊಟ್ಟಿತ್ತು. ಬೆಂಕಿಯನ್ನು ನಂದಿಸುತ್ತಾ ಕಡಿದಾದ ಆ ಜಾಗದಲ್ಲಿ ಹೋದಂತೆ ಮಂಜುನಾಥ್ ಮತ್ತು ಸುಂದರೇಶ್ ಇಬ್ಬರಿಗೂ ವಿಧಿ ಆವರಿಸಿತ್ತು. ಮಂಜುನಾಥ್ ಮತ್ತು ಸುಂದರೇಶ್ ಗೆ ಉಸಿರಾಟದ ಸಮಸ್ಯೆ ಎದುರಾಯಿತು. ಆಗ ತುಂಗೇಶ್ ಮತ್ತು ಮಹೇಶ್ ಬೆಂಕಿ ಬರುತ್ತಿದ್ದ ದಿಕ್ಕನ್ನು ಅಂದಾಜು ಮಾಡಿ ಬೆಂಕಿಯಿಂದ ತಪ್ಪಿಸಿಕೊಳ್ವುವ ಪ್ರಯತ್ನ ಮಾಡಿದ್ದಾರೆ. ಆದರೂ ಅವರಿಬ್ಬರಿಗೂ ಬೆಂಕಿ ಹೊತ್ತಿಕೊಂಡಿದೆ..ಆದ್ರೆ ಸುಂದರೇಶ್ ಇದ್ದ ಸ್ಥಳದಲ್ಲಿ ಹುಲ್ಲಿನ ಬೆಂಕಿ ಕೆನ್ನಾಲಿಗೆ ಸ್ಪರೂಪ ಪಡೆಯುತ್ತಿದ್ದಂತೆ ಬೆಂಕಿ ಸುತ್ತಲೂ ಆವರಿಸತೊಡಗಿತು. ದಟ್ಟ ಹೊಗೆ ಅಮ್ಲಜನಕವನ್ನೇ ನುಂಗಿ ಹಾಕಿತು. ಉಸಿರಾಟದ ತೊಂದರೆಯಿಂದ ಬಳಲಿದ ಇಬ್ಬರು ಅಲ್ಲಿಯೇ ಕುಸಿದು ಬಿದ್ದರು. ಬೆಂಕಿ ಇವರನ್ನು ಆಪೋಶಿಸಿ ಮುಂದೆ ಸಾಗಿ ಹೋಗಿತ್ತು. ಮೈ ಮೇಲೆ ಬಟ್ಟೆಯೆಲ್ಲಾ ಸುಟ್ಟು ಕರಕಲಾಗಿ ಹೋಗಿತ್ತು.
ಅಧಿಕಾರಿಯನ್ನು ರಕ್ಷಿಸಲು ಹೋಗಿ..ಪ್ರಾಣ ತೆತ್ತರೇ ಸುಂದರೇಶ್.
ಹೌದು ಹೀಗೊಂದು ಅನುಮಾನ ದಟ್ಟವಾಗಿ ಕಾಡತೊಡಗಿದೆ. ಕಾಡಿನ ಅಪಾರ ಅನುಭವ ಹೊಂದಿದ್ದ ಸುಂದರೇಶ್ ವಾಚರ್ ಗಳಿಬ್ಬರೂ ಬೆಂಕಿಯಿಂದ ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ಸುಂದರೇಶ್ ಕೂಡ ತಪ್ಪಿಸಿಕೊಳ್ಳಬಹುದಾದ ಅವಕಾಶಗಳು ಹೆಚ್ಚಿದ್ದವು. ಅಬ್ಬಬ್ಬಾ ಅಂದರೂ ಸಣ್ಣಪುಟ್ಟ ಗಾಯಗಳಾಗುತ್ತಿದ್ದವು ಅಷ್ಟೆ..ಆದ್ರೆ ಅಲ್ಲಿ ನಡೆದ ಸನ್ನಿವೇಶವೇ ಬೇರೆಯಾದಂತಿದೆ. ಡಿ.ಆರ್.ಎಫ್.ಓ ಮಂಜುನಾಥ್ ಬೆಂಕಿಯ ಸೆಳೆತಕ್ಕೆ ಬಲವಾಗಿ ಸಿಕ್ಕಿಬಿದ್ದಿದ್ದಾರೆ…ಆಗ ಅವರ ರಕ್ಷಣೆ ಮಾಡಲು ಪ್ರಾಣದ ಹಂಗು ತೊರೆದು ಸುಂದರೇಶ್ ಮುನ್ನುಗ್ಗಿದ್ದಾರೆ… ಆದ್ರೆ ಘಟನೆಯಲ್ಲಿ ಮಂಜುನಾಥ್ ಗಿಂತಲೂ ಸುಂದರೇಶ್ ಗೆ ಹೆಚ್ಚಿನ ಗಾಯಗಳಾಗಿದ್ದು, ಪ್ರಾಣ ಬಿಟ್ಟಿದ್ದಾರೆ.
ಸುಟ್ಟಗಾಯಗಳ ನಡುವೆ ಹತ್ತು ಕಿಲೋಮೀಟರ್ ನಡೆದ ವಾಚರ್.,.
ಇದು ಅತ್ಯಂತ ಮನಕಲುಕುವ ಸನ್ನಿವೇಶಕ್ಕೆ ಸಾಕ್ಷಿ ಎನ್ನಬಹುದಾದ ಘಟನೆ. ತನ್ನ ಕಣ್ಣೆದುರೇ..ಇಬ್ಬರು ಅಧಿಕಾರಿಗಳು ಬೆಂಕಿಗೆ ಆಹುತಿಯಾಗಿದ್ದನ್ನು ಕಣ್ಣಾರೆ ಕಂಡ ವಾಚರ್ ತುಂಗೇಶ್..ಗೆ ಏನು ಮಾಡಬೇಕೆಂದು ತಿಳಿಯಲಾಗಲಿಲ್ಲ. ತುಂಗೇಶ್ ಮೈ ಕೈಗಳೆಲ್ಲಾ ಸುಟ್ಟು, ನಡೆಯಲಾರದ ಸ್ಥಿತಿಯಲ್ಲಿದ್ದರು. ಯಾರಾದ್ರೂ ಊರುಗೋಲಾದ್ರೆ ಸಾಕಪ್ಪ ಎನ್ನುವ ದಯನೀಯ ಸ್ಥಿತಿಯಲ್ಲಿದ್ದರು. ಆದ್ರೆ..ಆ ಪರಿಸರದಲ್ಲಿ ಇವರ ಅರಣ್ಯ ರೋಧನ ಕೇಳುವವರು ಯಾರು ಇರಲಿಲ್ಲ..ಕುಂಟುತ್ತಲೇ ಸುಮಾರು ಹತ್ತು ಕಿಲೋಮೀಟರ್ ನಡೆದು ಬಂದು ಕಾಡುಮನೆ ಎಸ್ಟೇಟ್ ನಲ್ಲಿ ನಡೆದ ದುರಂತದ ಬಗ್ಗೆ ಮಾಹಿತಿ ನೀಡಿದ ತುಂಗೇಶ್, ತುಂಗೇಶ್ ಹತ್ತು ಕಿಲೋಮೀಟರ್ ನಡೆಯುವಾಗಲೇ ಘಟನೆ ನಡೆದು ಎರಡುವರೆ ಗಂಟೆಯಾಗಿತ್ತು….

ಇನ್ನು ಮಣಿಬೀಗತಿ ಪ್ರದೇಶದಲ್ಲಿ ಸುಟ್ಟು ಕರಕಲಾದ ಮಂಜುನಾಥ್ ಮತ್ತು ಸುಂದರೇಶ್ ಉಸಿರು ಗಟ್ಟಿಯಾಗಿಯೇ ಹಿಡಿದುಕೊಂಡಿದ್ರು..ಸ್ಥಳೀಯರ ಸಹಕಾರದಿಂದ ಅರಣ್ಯಾಧಿಕಾರಿಗಳು ಮಣಿಬೀಗತಿ ಪ್ರದೇಶಕ್ಕೆ ಹೋಗುವಷ್ಟರಲ್ಲಿ ಸಾಕಷ್ಟು ಸಮಯವಾಗಿತ್ತು.ಗಾಯಾಳುಗಳನ್ನು ಝಿರೋ ಟ್ರಾಫಿಕ್ ನಲ್ಲಿ ಬೆಂಗಳೂರಿಗೆ ಸಾಗಿಸಿದ್ರೂ, ಸುಂದರೇಶ್ ಜೀವ ಮಾತ್ರ ಬದುಕುಳಿಯಲಿಲ್ಲ. ಮಂಜುನಾಥ್ ಇನ್ನು ಸಾವು ನೋವಿನ ಮದ್ಯೆ ಹೋರಾಟ ಮಾಡುತ್ತಿದ್ದಾರೆ..ಅರಣ್ಯ ರಕ್ಷಕನ ಹುದ್ದೆಯಲ್ಲಿದ್ದು, ಅರಣ್ಯ ರಕ್ಷಣೆ ಮಾಡಲು ಹೋಗಿ ಹುತಾತ್ಮನಾದ ಸುಂದರೇಶ್…ಇಲಾಖೆಯಲ್ಲಿನ ಸಾಕಷ್ಟು ನ್ಯೂನ್ಯತೆ ಹಾಗು ಸಮಸ್ಯೆಗಳನ್ನು ತೆರೆದಿಟ್ಟು ಹೋಗಿದ್ದಾರೆ…ಅರಣ್ಯ ಇಲಾಖೆಯ ಫ್ರಂಟ್ ಲೈನ್ ಸ್ಪಾಫ್ ಬಗ್ಗೆ ಸರ್ಕಾರಕ್ಕಿರುವ ನಿರ್ಲಕ್ಷ್ಯವನ್ನು ಅದು ಬೊಟ್ಟು ಮಾಡಿ ತೋರಿಸಿದೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರದ ಬಳಿ ಭೀಕರ ಅಪಘಾತ! ಭದ್ರಾವತಿಯ ಯುವತಿ ಸಾವು
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
