15 ದಿನದ ಹಿಂದೆ ನಡೆದಿದ್ದ ಘಟನೆ ಬೆನ್ನಲ್ಲೆ ನಡೆದಿತ್ತು ಭೀಕರ ಘಟನೆ/ ಜ್ಞಾನಭಾರತಿ ಕಾಡಲ್ಲಿ ಅಂದು ನಡೆದಿದ್ದು ಏನು? DYSP ಬಾಲರಾಜ್​ Investigation part-2

ಲೈಂಗಿಕ ಹಲ್ಲೆ ನಡೆದ ಪ್ರಕರಣದಲ್ಲಿ ಸಾಮಾನ್ಯವಾಗಿ ಉಂಟಾಗುವ ಯಾವುದೇ ರೀತಿಯ ಕುರುಹುಗಳು ಕಂಡು ಬರದೇ ಇದ್ದರೂ ಕೂಡ ಆಟೋ ಚಾಲಕನ ಹೆಂಡತಿ ಸುಳ್ಳು ಹೇಳುತ್ತಿರುವಂತೆ ನನಗೆ ಭಾಸವಾಗುತ್ತಿತ್ತು

15 ದಿನದ ಹಿಂದೆ ನಡೆದಿದ್ದ ಘಟನೆ ಬೆನ್ನಲ್ಲೆ ನಡೆದಿತ್ತು ಭೀಕರ ಘಟನೆ/ ಜ್ಞಾನಭಾರತಿ ಕಾಡಲ್ಲಿ ಅಂದು ನಡೆದಿದ್ದು ಏನು? DYSP ಬಾಲರಾಜ್​ Investigation part-2
DySP Balaraj, Jnanabharathi Police Station Case, ಡಿವೈಎಸ್​ಪಿ ಬಾಲರಾಜ್​, ಜ್ಞಾನಭಾರತಿ ಪೊಲೀಸ್ ಸ್ಟೇಷನ್ ಕೇಸ್,

ಓದುಗರೆ ಡಿವೈಎಸ್​ಪಿ ಬಾಲರಾಜ್​ರವರು ಕೈಗೊಂಡ ತನಿಖೆಗೆ ಅವರಿಗೆ ಅತ್ಯುನ್ನತ ಪ್ರಶಸ್ತಿ ಲಭಿಸಿದೆ. ಒಂದು ಪ್ರಶಸ್ತಿಗೆ ಅರ್ಹವಾಗುವುದು ಡಿಪಾರ್ಟ್​​ಮೆಂಟ್​ನಲ್ಲಿ ಸಹಜವಾದ ಮಾತಲ್ಲ, ಹಾಗಾಗಿ ಬಾಲರಾಜ್​ರವರಿಗೆ ಲಭಿಸಿದ ಪ್ರಶಸ್ತಿಗೆ ಕಾರಣವಾದ ಕೇಸ್​ ಯಾವುದು? ಅದರ ತನಿಖೆ ಹೇಗೆ ಸಾಗಿತ್ತು? ಅಂತಿಮವಾಗಿ ಆ ಪ್ರಕರಣದಲ್ಲಿ ಏನೇನಲ್ಲಾ ಆಯ್ತು ಎಂಬುದರ ವಿವರವೇ ಈ ಸರಣಿ. ಇಲ್ಲಿ ಡಿವೈಎಸ್​ಪಿ ಬಾಲರಾಜ್​ರವರು ತಾವು ನಡೆಸಿದ ತನಿಖೆಯ ವಿವರವನ್ನು ನಮೂದಿಸಿದ್ದಾರೆ. ಇದರ ಮೊದಲ ಪಾರ್ಟ್​ ಇಲ್ಲಿದೆ ಓದಿ... DYSP ಬಾಲ್​ರಾಜ್​ಗೆ ಸಿಕ್ತು ಕೇಂದ್ರ ಮಂತ್ರಿ ಪದಕ/ ಅತ್ಯುನ್ನತ ಪ್ರಶಸ್ತಿ ಸಿಗಲು ಕಾರಣವಾದ ಕೇಸ್​ ಯಾವುದು ಗೊತ್ತಾ? ಇಲ್ಲಿದೆ ಪ್ರಕರಣ ರೋಚಕ ತನಿಖೆಯ ಸರಣಿ

DySP Balaraj, Jnanabharathi Police Station Case,  ಡಿವೈಎಸ್​ಪಿ ಬಾಲರಾಜ್​, ಜ್ಞಾನಭಾರತಿ ಪೊಲೀಸ್ ಸ್ಟೇಷನ್ ಕೇಸ್, 

ಮೊದಲ ಭಾಗವನ್ನು ಓದಿದ ಓದುರಗರ ಮುಂದೆ ಇಡೀ ರಾಜ್ಯವೆ ಬೆಚ್ಚಿಬಿದ್ದಿದ್ದ, ಹಾಗೂ ರಾಷ್ಟ್ರ ಅಂತಾರಾಷ್ಟ್ರಿಯ ಮಟ್ಟದಲ್ಲಿ ಸುದ್ದಿಯಾಗಿ, ರಾಜ್ಯ ಸರ್ಕಾರವೊಂದರ ಮೇಲೆ ಭರಪೂರ ಒತ್ತಡಕ್ಕೆ ಕಾರಣವಾಗಿ ಜ್ಞಾನಭಾರತಿ ರೇಪ್​ ಕೇಸ್​ ಪ್ರಕರಣದ ತನಿಖೆ ಡಿವೈಎಸ್​​ಪಿ ಬಾಲರಾಜ್​ರವರು ಮಂಡಿಸಿದ ಹಾಗೆ ನಿಮ್ಮ ಮುಂದೆ ಇಡುತ್ತಿದ್ದೇವೆ. ಮುಂದಿನದ್ದು, ತನಿಖಾಧಿಕಾರಿಯ ಮಾತುಗಳಲ್ಲಿ

15 ದಿನದ ಹಿಂದೆ ನಡೆದಿದ್ದ ಮುಂದೆ ಲಿಂಕ್​ ಆಯ್ತು ಹೇಗೆ ಗೊತ್ತಾ?

ಘಟನೆ ನಡೆದ ಸ್ಥಳ, ಸಮಯ, ರೀತಿ ಮತ್ತು ಸಂಧರ್ಭ, ಆಟೋ ಚಾಲಕನ ಮತ್ತು ಆತನ ಹೆಂಡತಿಯ ವಿಚಾರಣೆಯಿಂದ ನನಗೆ ಸದರಿ ಹೆಂಗಸಿನ ಮೇಲೆ ಲೈಂಗಿಕ ಹಲ್ಲೆಯಾಗಿರಬಹುದೆಂದು ದಟ್ಟ ಅನುಮಾನವಿತ್ತು. ಆಕೆಯ ದೇಹದ ಮೇಲೆ ಮತ್ತು ಮುಖದ ಮೇಲೆ ಬಲತ್ಕಾರದ ಯಾವುದೇ ಕುರುಹುಗಳು ಇಲ್ಲದಿರುವುದು, ಆಕೆ ಧರಿಸಿದ್ದ ಬಟ್ಟೆಯೂ ಕೂಡ ಎಲ್ಲಿಯೂ ಹರಿದಿಲ್ಲದಿರುವುದು, ಲೈಂಗಿಕ ಹಲ್ಲೆ ನಡೆದ ಪ್ರಕರಣದಲ್ಲಿ ಸಾಮಾನ್ಯವಾಗಿ ಉಂಟಾಗುವ ಯಾವುದೇ ರೀತಿಯ ಕುರುಹುಗಳು ಕಂಡು ಬರದೇ ಇದ್ದರೂ ಕೂಡ ಆಟೋ ಚಾಲಕನ ಹೆಂಡತಿ ಸುಳ್ಳು ಹೇಳುತ್ತಿರುವಂತೆ ನನಗೆ ಭಾಸವಾಗುತ್ತಿತ್ತು. ಲೈಂಗಿಕ ಹಲ್ಲೆ ಆಗಿರುವ ವಿಚಾರ ತನ್ನ ಗಂಡನಿಗೆ, ಅಕ್ಕನ ಮನೆಯವರಿಗೆ ಹಾಗೂ ಸಮಾಜಕ್ಕೆ ತಿಳಿದಲ್ಲಿ ತನ್ನ ಸಂಬಂಧಗಳಿಗೆ, ತನ್ನ ಮಯ್ಯಾದೆಗೆ ಧಕ್ಕೆ ಬರಬಹುದೆಂಬ ಭಯದಿಂದ ಆಕೆ ಸುಳ್ಳು ಹೇಳಿರಬಹುದು. ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಲ್ಲಿ ಲೈಂಗಿಕ ಹಲ್ಲೆಯ ವಿಚಾರ ಗೊತ್ತಾಗುತ್ತದೆ ಎಂದು ತಿಳಿದು ಆಕೆ ವೈದ್ಯಕೀಯ ಪರೀಕ್ಷೆಗೆ ನಿರಾಕರಿಸಿರಬಹುದು. ಆಗಲೇ ರಾತ್ರಿ 3:00 ಗಂಟೆಯಾದ್ದರಿಂದ ಅಂದಿನ ತನಿಖೆಯನ್ನು ಅಲ್ಲಿಗೆ ನಿಲ್ಲಿಸಿದೆ. 

ಇದನ್ನು ಸಹ ಓದಿ : 15 ವರ್ಷದಿಂದ ಕಾಡು ಬಿಟ್ಟು ಬರದ ರೌಡಿ ಗಣೇಶ ಮಧ್ಯಪ್ರದೇಶಕ್ಕೆ! 6 ಮಂದಿಯನ್ನು ಕೊಂದ ಸಕ್ರೆಬೈಲ್​ ಬಿಡಾರದ ಈ ಆನೆ ಎಷ್ಟೊಂದು ಉಗ್ರ ಸ್ವರೂಪಿ ಗೊತ್ತಾ?

ಮರುದಿನ ಬೆಳಿಗ್ಗೆ ಈ ವಿಷಯವನ್ನು ಡಿಸಿಪಿಯವರೊಂದಿಗೆ ಮತ್ತು ಜಂಟಿ ಕಮೀಷನರ್ (ಅಪರಾಧ) ರವರೊಂದಿಗೆ ಚರ್ಚಿಸಿದ್ದು, ಅವರಿಬ್ಬರು ಇಂತಹ ಪ್ರಕರಣಗಳು ಮರುಕಳಿಸದಂತೆ ಸೂಕ್ತ ಕ್ರಮಗಳನ್ನು ತಗೆದುಕೊಳ್ಳುವಂತೆ ಸೂಚಿಸಿದರು. ನಾನು ಅದೇ ದಿನ ಬೆಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಇರುವ ಕಾಡು ಮತ್ತು ಅದರ ಮೂಲಕ ಹಾದು ಹೋಗುವ ರಸ್ತೆಗಳನ್ನು ಅತಿ ಸೂಕ್ಷ್ಮವಾಗಿ ಮತ್ತು ಕೂಲಂಕುಶವಾಗಿ ಪರಿಶೀಲಿಸಿದಾಗ ಸದರಿ ಕಾಡಿಗೆ ಯಾವುದೇ ಕೌಂಪೌಂಡ್ ಆಗಲಿ, ತಂತಿಬೇಲಿ ಆಗಲಿ ಅಥವಾ ರಕ್ಷಣಾ ಸಿಬ್ಬಂದಿಯಾಗಲಿ ಇಲ್ಲದಿರುವುದು ತಿಳಿಯಿತು ಮತ್ತು ಸದರಿ ಕಾಡನ್ನು ಸಂಪೂರ್ಣವಾಗಿ ಬೆಂಗಳೂರು ನಗರವು ಸುತ್ತುವರೆದಿದ್ದು, ಜ್ಞಾನಭಾರತಿ ಅರಣ್ಯವು ನಗರದ ಮಧ್ಯದಲ್ಲಿರುವ ದ್ವೀಪದಂತೆ ಇತ್ತು ಮತ್ತು ಸದರಿ ಕಾಡಿಗೆ ಯಾರು ಬೇಕಾದರೂ, ಯಾವಾಗ ಬೇಕಾದರೂ ಬಂದು ಹೋಗಬಹುದಿತ್ತು. ನಾನು ಗಾಂಧಿ ಭವನದ ರಸ್ತೆಯಲ್ಲಿ ನಡೆದುಕೊಂಡು ಮುಂದೆ ಹೋದಾಗ ನ್ಯಾಷನಲ್ ಲಾ ಕಾಲೇಜಿನ ಕೌಂಪೌಂಡ್ ಹತ್ತಿರ ಬೆಂಗಳೂರು ವಿಶ್ವವಿದ್ಯಾನಿಲಯದ ಸರಹದ್ದಿನಲ್ಲಿ ಸುಮಾರು 15 ಅಡಿ ಎತ್ತರದ ಕಬ್ಬಿಣದ ಗೇಟ್ ಸದರಿ ರಸ್ತೆಗೆ ಇರುವುದು ಕಂಡು ಬಂತು, ಹತ್ತಿರ ಹೋಗಿ ಪರಿಶೀಲಿಸಿದಾಗ ಸದರಿ ಗೇಟ್‌ನ್ನು ಬಹಳ ವರ್ಷದಿಂದ ಬಳಸದೇ ಇರುವುದು ತಿಳಿಯಿತು. ಬಹಳ ವರ್ಷಗಳ ಹಿಂದೆ ಯಾವುದೋ ಕಾರಣಕ್ಕೆ ಸದರಿ ಗೇಟ್‌ನ್ನು ನಿರ್ಮಿಸಲಾಗಿತ್ತು. 

ಇದನ್ನು ಸಹ ಓದಿ :ಕೇಸ್​ ವಾಪಸ್​ತೆಗೆದುಕೊಳ್ಳುವಂತೆ ಬೆದರಿಕೆ/ ತಡರಾತ್ರಿ ಮನೆ ಬಾಗಿಲಿಗೆ ಬಂದು ಕಾರಿಗೆ ಬೆಂಕಿ ಹಚ್ಚಿದ್ರು/ ರಕ್ಷಣೆಯಿಲ್ಲ ಎಂದು ಕಣ್ಣಿರಿಟ್ಟ ಸಂತ್ರಸ್ತೆ

ಅದೇ ದಿನ ನಾನು ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳನ್ನು ಭೇಟಿಯಾಗಿ ಹಿಂದಿನ ರಾತ್ರಿ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಸಾರ್ವಜನಿಕರ ಭದ್ರತೆಯ ಬಗ್ಗೆ ಚರ್ಚಿಸಿದ್ದು ರಾತ್ರಿ 09:00 ಗಂಟೆಯ ನಂತರ ಗಾಂಧಿ ಭವನದ ರಸ್ತೆಯನ್ನು ಮುಚ್ಚುವುದಾಗಿಯೂ ಅದಕ್ಕೆ ಈಗಾಗಲೇ ನಿರ್ಮಿಸಿರುವ ಕಬ್ಬಿಣದ ಗೇಟ್‌ಗಳನ್ನು ಬಳಸಿಕೊಳ್ಳುವುದಾಗ್ಯೂ ಮತ್ತು ಆಡಳಿತ ಭವನದ ಹತ್ತಿರ ಬ್ಯಾರಿಕೇಡ್ ಇಟ್ಟು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ರಾತ್ರಿ 08:30ಗಂಟೆಯಿಂದ ಬೆಳಗಿನ ಜಾವ 04:00ಗಂಟೆಯವರೆಗೆ ಗಾಂಧಿಭವನದ ರಸ್ತೆಯನ್ನು ಮುಚ್ಚುವುದಾಗಿ ತಿಳಿಸಿ ಅವರ ಅನುಮತಿಯನ್ನು ಪಡೆದುಕೊಂಡೆನು.ಅಂದಿನಿಂದಲೇ ಬೆಂಗಳೂರು ವಿಶ್ವವಿದ್ಯಾನಿಲಯದ ಗಾಂಧಿ ಭವನ ರಸ್ತೆ ರಾತ್ರಿ 8:30 ಗಂಟೆಗೆ ಬಂದ್ ಆಗಲು ಶುರು ಆಯಿತು. ಸಾರ್ವಜನಿಕರಿಂದ ಸಾಕಷ್ಟು ಒತ್ತಡ ಬಂದರೂ ಸಹ ರಸ್ತೆ ಬಂದ್ ಮಾಡುವ ತೀರ್ಮಾನವನ್ನು ನಾನು ಬದಲಿಸಲಿಲ್ಲ. ಆಡಳಿತ ಭವನದ ಹತ್ತಿರ ಬ್ಯಾರಿಕೇಡ್‌ಗಳನ್ನು ಹಾಕಿ ಅಲ್ಲಿ ಪ್ರತಿದಿನ ಇಬ್ಬರು ಪೊಲೀಸ್‌ ಸಿಬ್ಬಂದಿಗಳನ್ನು ಹಾಗೂ ನ್ಯಾಷನಲ್ ಲಾ ಕಾಲೇಜ್ ಹತ್ತಿರ ಕಬ್ಬಿಣದ ಗೇಟನ್ನು ಕ್ಲೋಸ್ ಮಾಡಿ ಅಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ನೇಮಕ ಮಾಡಲಾಗುತ್ತಿತ್ತು. ಮತ್ತು ಮುಚ್ಚಿದ ರಸ್ತೆಯ ಒಳಕ್ಕೆ ಸುಮಾರು 3 ಕಿಲೋ ಮೀಟರ್‌ನಲ್ಲಿ ಗಸ್ತು ತಿರುಗಲು ಇಬ್ಬರು ಸಿಬ್ಬಂದಿಗಳಿಗೆ ಮೋಟಾರ್ ಸೈಕಲ್‌ ಮತ್ತು ರೈಫಲ್‌ಗಳೊಂದಿಗೆ ಫೋಕಸ್‌ ಲೈಟ್‌ ನೀಡಿ ರಾತ್ರಿ 8:30 ಗಂಟೆಯಿಂದ ಬೆಳಗ್ಗೆ 4:00 ಗಂಟೆವರೆಗೆ ಪೆಟ್ರೋಲಿಂಗ್‌ನ ವ್ಯವಸ್ಥೆ ಮಾಡಿದೆನು.

ಇದನ್ನು ಸಹ ಓದಿ : ಶಿವಮೊಗ್ಗ ಪೊಲೀಸರಿಂದ ತತ್ತಕ್ಷಣದ ಕಾರ್ಯಾಚರಣೆ/ 20 ಚೆಕ್​ಪೋಸ್ಟ್​ನಲ್ಲಿ 46 ಕೇಸ್​/ ಏನಿದು? ವಿವರ ನೋಡಿ

ಫುಲ್ ಸೆಕ್ಯುರಿ ನಡುವೆ ನಡೆದಿತ್ತು ಆ ಘಟನೆ 

ಮೇಲಿನ ಘಟನೆಯ ಕುರಿತು ಆಳವಾಗಿ ಯೋಚಿಸಿದಾಗ ವಿಶ್ವವಿದ್ಯಾನಿಲಯದ ಕಾಡಿಗೆ ದುರುಳರ ಗುಂಪೊಂದು ಎಲ್ಲಿಂದಲೋ ಬಂದು ಈ ಕೃತ್ಯವನ್ನು ಎಸಗಿರುವುದು ಖಾತ್ರಿಯಾಯಿತು.ಬಹಳವರ್ಷಗಳಿಂದ ಸದರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳೊಂದಿಗೆ ಮತ್ತು ಈ ಹಿಂದೆ ಈ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಪೊಲೀಸ್ ಇನ್ಸ್‌ಪೆಕ್ಟರ್‌ಗಳೊಂದಿಗೆ ಹಾಗೂ ಕ್ರೈಂ ಸಿಬ್ಬಂದಿಗಳೊಂದಿಗೆ ಈ ಘಟನೆಯ ಕುರಿತು ಚರ್ಚಿಸಿದಾಗ ಬಹಳಷ್ಟು ವರ್ಷಗಳಿಂದ ವಿಶ್ವವಿದ್ಯಾನಿಲಯದ ಕಾಡಿನಲ್ಲಿ ರಾತ್ರಿ ಸಮಯದಲ್ಲಿ ಗಂಧದ ಮರ ಕದಿಯಲು ಕಳ್ಳರು ಬರುತ್ತಿದ್ದು ಅನೇಕ ಕಳ್ಳತನದ ಪ್ರಕರಣಗಳು ಈ ಹಿಂದೆ ದಾಖಲಾಗಿರುವ ವಿಷಯ ತಿಳಿದು ಬಂತು. ಈ ಹಿಂದೆ ದಾಖಲಾಗಿದ್ದ ಗಂಧದ ಮರ ಕಳ್ಳತನದ ಪ್ರಕರಣಗಳ ಬಗ್ಗೆ ಹಳೆಯ ಕೈಂ ರಿಜಿಸ್ಟರ್‌ಗಳನ್ನು ತಗೆದು ನೋಡಿದಾಗ ಬಹಳಷ್ಟು ಪ್ರಕರಣಗಳು ದಾಖಲಾಗಿದ್ದರೂ ಕೂಡ ಯಾವುದೇ ಪ್ರಕರಣ ಪತ್ತೆಯಾಗಿರಲಿಲ್ಲ. ನಾನು ಸಿಸಿಆರ್‌ಬಿ ಮತ್ತು ಎಸ್‌ಇಆರ್‌ಬಿ ಯಿಂದ ಗಂಧದ ಮರಗಳ್ಳರ ಪಟ್ಟಿಯನ್ನು ಪಡೆದು ನಮ್ಮ ಠಾಣೆಯ ಕ್ರೈಂ ಸಿಬ್ಬಂದಿಯವರಿಗೆ ಸದರಿ ಕಳ್ಳರನ್ನು ಪತ್ತೆ ಹಚ್ಚುವಂತೆ ತಿಳಿಸಿ, ಶನಿವಾರದಂದು ನಡೆದ ಪ್ರಕರಣವನ್ನು ಪತ್ತೆ ಹಚ್ಚಲು ಪ್ರಯತ್ನದಲ್ಲಿದ್ದಾಗಲೆ, ಇದಾಗಿ ಹದಿನೈದು ದಿನಗಳ ನಂತರ ಮತ್ತೊಂದು ಶನಿವಾರ, ನ್ಯಾಷನಲ್ ಲಾ ಕಾಲೇಜಿನ ವಿದೇಶಿ ವಿದ್ಯಾರ್ಥಿನಿಯ ಗ್ಯಾಂಗ್  ರೇಪ್‌ನಂತರಹ ಮತ್ತೊಂದು ದುರ್ಘಟನೆ ನಡೆದುಹೋಯಿತು.

 ಇದನ್ನು ಸಹ ಓದಿ : 15 ವರ್ಷದಿಂದ ಕಾಡು ಬಿಟ್ಟು ಬರದ ರೌಡಿ ಗಣೇಶ ಮಧ್ಯಪ್ರದೇಶಕ್ಕೆ! 6 ಮಂದಿಯನ್ನು ಕೊಂದ ಸಕ್ರೆಬೈಲ್​ ಬಿಡಾರದ ಈ ಆನೆ ಎಷ್ಟೊಂದು ಉಗ್ರ ಸ್ವರೂಪಿ ಗೊತ್ತಾ?

ಯುವತಿ ಮೇಲೆ ನಡೆದಿತ್ತು ಗ್ಯಾಂಗ್​ ರೇಪ್​

ದಿನಾಂಕ:13.10.2012ರ ರಾತ್ರಿ ನಾನು ಎಂದಿನಂತೆ ನನ್ನ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ರಾತ್ರಿ ಹಾಜರಾತಿ ತೆಗೆದುಕೊಂಡು, ರಾತ್ರಿ ಪಾಳಿಯ ಕರ್ತವ್ಯಗಳಿಗೆ ನೇಮಕ ಮಾಡಿ 08:15ಗಂಟೆಗೆ ಅವರಿಗೆ ನಿಗದಿ ಮಾಡಿದ ಕರ್ತವ್ಯಗಳಿಗೆ ತೆರಳುವಂತೆ ಸೂಚನೆ ನೀಡಿ ಕಳುಹಿಸಿದೆನು. ಅಂದು ಶನಿವಾರವಾದ್ದರಿಂದ ಹದಿನೈದು ದಿನದ ಹಿಂದೆ ನಡೆದಿದ್ದ ಘಟನೆಯ ಬಗ್ಗೆ ಅವರಿಗೆ ಮತ್ತೊಮ್ಮೆ ಜ್ಞಾಪಿಸಿತುಂಬಾ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುವಂತೆ ಹಾಗೂ ಗಾಂಧಿ ಭವನ ರಸ್ತೆಯನ್ನು ಕ್ಲೋಸ್ ಮಾಡಲುಅವರಿಗೆ ಸೂಚನೆ ನೀಡಿ ಕಳುಹಿಸಿಕೊಟ್ಟಿದ್ದೆನು. ನಂತರ, ಸರಿಯಾಗಿ ರಾತ್ರಿ 09:00 ಗಂಟೆಗೆ ಗಾಂಧಿ ಭವನ ರಸ್ತೆಯಲ್ಲಿ ಪೆಟ್ರೋಲಿಂಗ್ ಕರ್ತವ್ಯಕ್ಕೆ ನೇಮಕ ಮಾಡಿದ್ದ ರೆಹಮಾನ್‌ವುಲ್ಲಾ ಷರೀಫ್ ಎಂಬ ಸಿಬ್ಬಂದಿ ನನ್ನ ಮೊಬೈಲ್‌ಗೆ ಕರೆ ಮಾಡಿ ಗಾಂಧಿ ಭವನದ ರಸ್ತೆಯಲ್ಲಿರುವ ಪರೀಕ್ಷಾ ಭವನದ ಹತ್ತಿರದಿಂದ ಕಾರಿನಲ್ಲಿ ಕುಳಿತಿದ್ದ ಯುವಕ ಮತ್ತು ಯುವತಿಯನ್ನು ಯಾರೋ ಎಳೆದು ಕೊಂಡು ಕಾಡಿನೊಳಕ್ಕೆ ಹೋಗಿದ್ದು ಆ ಸಮಯಕ್ಕೆ ತಾನು ಕಾರಿನ ಹತ್ತಿರ ಹೋಗಿದ್ದರಿಂದ ತನ್ನನ್ನು ನೋಡಿ ಅವರು ಹುಡುಗನನ್ನು ಪರೀಕ್ಷಾ ಭವನದ ಹತ್ತಿರವೇ ಬಿಟ್ಟು ಹುಡುಗಿಯನ್ನು ಕಾಡಿನ ಒಳಕ್ಕೆ ಎಳೆದುಕೊಂಡು ಹೋದರೆಂದು ಆ ಹುಡುಗ ಈಗ ತನ್ನ ಜೊತೆಯಲ್ಲಿ ಇರುವನೆಂದು ತಿಳಿಸಿದನು.

ಇದನ್ನು ಸಹ ಓದಿ : ಪ್ರಯಾಣಿಕರ ಗಮನಕ್ಕೆ/ ಶಿವಮೊಗ್ಗ ಟೌನ್​ - ಎಂಜಿಆರ್​ ಚೆನ್ನೈ ಸೆಂಟ್ರಲ್ ಸ್ಪೆಷಲ್​ ಟ್ರೈನ್​ ಸೌಲಭ್ಯ ವಿಸ್ತರಣೆ/ ವಿವರ ಇಲ್ಲಿದೆ ಓದಿ

ಕೂಡಲೇ ನಾನು ಮತ್ತು ಆ ಸಮಯದಲ್ಲಿ ಪೊಲೀಸ್ ಠಾಣೆಯಲ್ಲಿದ್ದ ಪಿ.ಎಸ್.ಐ ಶ್ರೀ ಇಮ್ಮಿಯಾಜ್ ಪಟೇಲ್‌ ಮತ್ತು ಠಾಣೆಯಲ್ಲಿ ಲಭ್ಯವಿದ್ದ ಸಿಬ್ಬಂದಿಗಳೊಂದಿಗೆ,ರೈಫಲ್‌ಗಳು ಹಾಗೂ ಪೋಕಸ್ ಲೈಟ್‌ಗಳನ್ನು ತೆಗೆದುಕೊಂಡು ಸ್ಥಳಕ್ಕೆ ತೆರಳಿದೆನು. ಠಾಣೆಯಿಂದ ಸದರಿ ಸ್ಥಳವು ಸುಮಾರು 02 ಕಿಲೋಮೀಟರ್ ದೂರದಲ್ಲಿದ್ದು, ನಾನು ಆ ಸ್ಥಳಕ್ಕೆ ಹೋಗುವಾಗ ಆಡಳಿತ ಭವನದ ಹತ್ತಿರದ ಬ್ಯಾರಿಕೇಡ್‌ನ್ನು ಇನ್ನೂ ಮುಚ್ಚಿರಲಿಲ್ಲ ಆಗ ಸಮಯ 09:15 ಆಗಿತ್ತು. ರಾತ್ರಿ 8:30ಕ್ಕೆ ಬ್ಯಾರಿಕೇಡ್‌ನ್ನು ರಸ್ತೆಯಲ್ಲಿಟ್ಟು ರಸ್ತೆಯನ್ನು ಬಂದ್‌ ಮಾಡಬೇಕಾದ ಸಿಬ್ಬಂದಿ ಅಲ್ಲಿ ಹಾಜರಿರಲಿಲ್ಲ. ಆಡಳಿತ ಭವನದಿಂದ ಪರೀಕ್ಷಾ ಭವನ ಸುಮಾರು 100 ಮೀಟರ್ ದೂರದಲ್ಲಿದ್ದು ಸರಿಯಾದ ಸಮಯಕ್ಕೆ ಸಿಬ್ಬಂದಿ ಹಾಜರಿದ್ದು ರಸ್ತೆಯನ್ನು ಬಂದ್ ಮಾಡಿದ್ದಲ್ಲಿ ಅಂದು ಈ ಘಟನೆ ನಡೆಯುತ್ತಿರಲಿಲ್ಲ. ನಾನು ಅಲ್ಲಿಂದ ಮುಂದುವರೆದು ಪರೀಕ್ಷಾ ಭವನದ ಕ್ರಾಸ್‌ಗೆ ಬಂದೆನು.

ಇದನ್ನು ಸಹ ಒದಿ :ಜನ ಸ್ವಯಂಸೇವಕರಾದ್ರು/ ರಾಜಕಾರಣಿ ಡಾಕ್ಟರ್​ ಆದ್ರು/ ಸಾಗರಿಕರ ಮಾನವೀಯತೆಗೆ ಸಾಕ್ಷಿಯಾದ ಆಕ್ಸಿಡೆಂಟ್

ಬಾಲರಾಜ್​ರ ಹೆಗಲಿಗೆ ಬಿದ್ದಿತ್ತು ಗಂಭೀರ ಕೇಸ್​

ಮೊದಲು ನಾನು ನನ್ನ ಸಿಬ್ಬಂದಿಯಾದ ರೆಹಮಾನುಲ್ಲಾ ಷರೀಫ್‌ನನ್ನು ವಿಷಯ ಏನೆಂದು ಕೇಳಲಾಗಿ, ಠಾಣೆಯಲ್ಲಿ 08:15ಕ್ಕೆ ಹಾಜರಾತಿ ಮುಗಿಸಿಕೊಂಡು, ಉಳ್ಳಾಲ ರಸ್ತೆಯಲ್ಲಿರುವ ಹೋಟೆಲ್‌ನಲ್ಲಿ ಊಟ ಮಾಡಿಕೊಂಡು ಬರಲು ಹೋಗಿದ್ದು, ಸ್ವಲ್ಪ ತಡವಾಗಿ ಅಂದರೆ 8:30ರ ಬದಲಿಗೆ 9:00 ಗಂಟೆಗೆ ಪೆಟ್ರೋಲಿಂಗ್ ಕರ್ತವ್ಯವನ್ನು ಪ್ರಾರಂಭಿಸಿದ್ದಾಗಿ ತಿಳಿಸಿದರು. ತಾನು ಪರೀಕ್ಷಾ ಭವನದ ಕ್ರಾಸ್ ಹತ್ತಿರ ಬಂದಾಗ 7 ರಿಂದ 8 ಜನರ ಗುಂಪು ಕೈಯಲ್ಲಿ ರಾಡಿನಂತಹ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಒಬ್ಬ ಯುವಕ ಮತ್ತು ಯುವತಿಯನ್ನು ಎಳೆದುಕೊಂಡು ಹೋಗುತ್ತಿರುವುದನ್ನು ತಾನು ನೋಡಿದ್ದು.ರಸ್ತೆಯಲ್ಲಿ ನಿಂತಿದ್ದ ಕಾರಿನ ಹತ್ತಿರ ಬರುವ ಸಮಯಕ್ಕೆ ಅವರು ಸದರಿ ಯುವಕ ಮತ್ತು ಯುವತಿಯನ್ನು ಪರೀಕ್ಷಾ ಭವನದ ಹಿಂದಿನ ಕಾಡಿನಲ್ಲಿ ನಿಲ್ಲಿಸಿಕೊಂಡು ಯುವಕನಿಗೆ ಹೊಡೆಯುತ್ತಿದ್ದಾಗ್ಯೂ, ಆಗ ತಾನು ಜೋರಾಗಿ ಕೂಗಾಡಿದಾಗ ಅವರು ಆ ಯುವಕನನ್ನು ಅಲ್ಲಿಯೇ ಬಿಟ್ಟು ಯುವತಿಯನ್ನು ಮಾತ್ರ ಕಾಡಿನೊಳಕ್ಕೆ ಎಳೆದುಕೊಂಡು ಹೋದರೆಂದು, ಕೂಡಲೇ ತಾನು ಮೊಬೈಲ್ ಪೋನ್ ಮುಖಾಂತರ ವಿಷಯವನ್ನು ತಮಗೆ ತಿಳಿಸಿದ್ದಾಗಿ ಹೇಳಿದನು. ಈ ಸಿಬ್ಬಂದಿಯೂ ಕೂಡ ಸರಿಯಾದ ಸಮಯಕ್ಕೆ ಅಂದರೆ ರಾತ್ರಿ 8:30 ಗಂಟೆಗೆ ಪೆಟ್ರೋಲಿಂಗ್ ಪ್ರಾರಂಭಿಸಿದ್ದರೆ ಅಂದು ಘನಘೋರ ಅಪರಾಧ ಪ್ರಕರಣವನ್ನು ತಡೆಯಬಹುದಿತ್ತು.

ಇದನ್ನು ಸಹ ಓದಿ : ಪ್ರಯಾಣಿಕರ ಗಮನಕ್ಕೆ/ ಶಿವಮೊಗ್ಗ ಟೌನ್​ - ಎಂಜಿಆರ್​ ಚೆನ್ನೈ ಸೆಂಟ್ರಲ್ ಸ್ಪೆಷಲ್​ ಟ್ರೈನ್​ ಸೌಲಭ್ಯ ವಿಸ್ತರಣೆ/ ವಿವರ ಇಲ್ಲಿದೆ ಓದಿ

ದುರುಳರ ಕೈಗೆ ಸಿಕ್ಕಿದ್ದ ಹುಡುಗ ಹೇಳಿದ್ದೇನು?

ನಂತರ ನಾನು ಸಿಬ್ಬಂದಿಯ ಜೊತೆಯಲ್ಲಿ ನಡುಗುತ್ತ ಮತ್ತು ಅಳುತ್ತ ನಿಂತಿದ್ದ ಸುಮಾರು 25-26 ವರ್ಷದ, ಸುಶಿಕ್ಷಿತನಂತೆ ಕಾಣುವ ಹಾಗೂ ಉತ್ತಮವಾದ ಉಡುಗೆಯನ್ನು ಧರಿಸಿದ್ದ ಯುವಕನನ್ನು ನೀನು ಯಾರು? ಮತ್ತು ಏನು ನಡೆಯಿತು? ಎಂದು ವಿಚಾರಿಸಿದಾಗ, ಆತ ತನ್ನ ಹೆಸರು .....ಎಂದು, ತಾನು ಕೇರಳ ರಾಜ್ಯದ .... ನಗರದವನೆಂದು, ತಾನುಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಬೆಂಗಳೂರು ನಗರದ ಒಂದು ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದನು. ನಾನು ಈ ದಿನ ಏನು ನಡೆಯಿತು ಎಂದು ವಿಚಾರಿಸಿದಾಗ, ಆತನು ನ್ಯಾಷನಲ್ ಲಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ನೇಪಾಳ ದೇಶದ ವಿದ್ಯಾರ್ಥಿನಿ(ಹೆಸರನ್ನು ಗೌಪ್ಯವಾಗಿ ಇಡಲಾಗಿದೆ ಇನ್ನು ಮುಂದೆ ವಿದೇಶಿ ವಿದ್ಯಾರ್ಥಿನಿಯೆಂದು ಆಕೆಯನ್ನು ಕರೆಯಲಾಗುವುದು)ಯೊಬ್ಬಳು ತನಗೆ ಫೇಸ್‌ಬುಕ್ ಮುಖಾಂತರ ಸುಮಾರು ಒಂದು ವರ್ಷದಿಂದ ಫ್ರೆಂಡ್ ಆಗಿದ್ದರು,

ಇದನ್ನು ಸಹ ಓದಿ : 15 ವರ್ಷದಿಂದ ಕಾಡು ಬಿಟ್ಟು ಬರದ ರೌಡಿ ಗಣೇಶ ಮಧ್ಯಪ್ರದೇಶಕ್ಕೆ! 6 ಮಂದಿಯನ್ನು ಕೊಂದ ಸಕ್ರೆಬೈಲ್​ ಬಿಡಾರದ ಈ ಆನೆ ಎಷ್ಟೊಂದು ಉಗ್ರ ಸ್ವರೂಪಿ ಗೊತ್ತಾ?

ಆಗಾಗ ನಾವು ಫೇಸ್‌ ಬುಕ್ ಮುಖಾಂತರವೇ ಚಾಟ್ ಮಾಡುತ್ತಿದ್ದೆವು, ಇಂದು ಶನಿವಾರವಾದ್ದರಿಂದ ನನಗೆ ರಜೆ ಇದ್ದು, ಇಂದು ಬೆಳಗ್ಗೆ ನಾನು ಮೊದಲ ಬಾರಿಗೆ ತನ, ಮೊಬೈಲ್ ನಂಬರ್‌ನಿಂದ ಆಕೆಯ ಮೊಬೈಲ್ ನಂಬರ್‌ಗೆ ಕರೆ ಮಾಡಿ ಭೇಟಿಯಾಗಲು ವಿನಂತಿಸಿದ್ದು,ಆಕೆಯೂ ಅದನ್ನು ಒಪ್ಪಿಕೊಂಡು ಸಂಜೆ 06:00ಗಂಟೆಗೆ ನ್ಯಾಷನಲ್ ಲಾ ಕಾಲೇಜಿನ ಗೇಟಿನ ಹತ್ತಿರ ಪಿಕ್ಆಪ್ ಮಾಡುವಂತೆ ತಿಳಿಸಿದ್ದು, ಅದರಂತೆ ತಾನು ಆಕೆಯನ್ನು ಸಂಜೆ 06:00ಗಂಟೆಗೆ ಪಿಕ್ ಅಪ್ ಮಾಡಿಕೊಂಡು ಬೆಂಗಳೂರು ವಿಶ್ವವಿದ್ಯಾನಿಲಯದ ಮುಖಾಂತರ ರಿಂಗ್ ರಸ್ತೆಗೆ ಬಂದಿದ್ದು, ಅಲ್ಲಿಂದ ಕೆಂಗೇರಿ ಮುಖಾಂತರ ಮೈಸೂರು ರಸ್ತೆಯಲ್ಲಿ ಒಂದು ಲಾಂಗ್‌ ಡ್ರೈವ್ ತೆಗೆದುಕೊಂಡು, ಆಕೆಗೆ ಮರುದಿನ ಪರೀಕ್ಷೆ ಇದ್ದುದರಿಂದ ವಾಪಸ್ಸು ಬಿಡಲು ಅದೇಮಾರ್ಗವಾಗಿ ಮರಳಿ ಬರುವಾಗ ಸುಮಾರು ರಾತ್ರಿ 8:30ಕ್ಕೆ ನ್ಯಾಷನಲ್ ಲಾ ಕಾಲೇಜಿನಿಂದ ಸ್ವಲ್ಪ ದೂರದಲ್ಲಿರುವ ಮತ್ತು ಗಾಂಧಿ ಭವನದ ರಸ್ತೆಯಲ್ಲಿರುವ ಪರೀಕ್ಷಾ ಭವನದ ಹತ್ತಿರದ ರಸ್ತೆಯ ಪಕ್ಕದಲ್ಲಿ ಕಾರನ್ನು ನಿಲ್ಲಿಸಿಕೊಂಡು, ಬೀದಿ ದೀಪದ ಬೆಳಕಿನಲ್ಲಿ ಕಾರಿನಲ್ಲಿಯೇ ಕುಳಿತು ಮಾತನಾಡುತ್ತಿದ್ದುದಾಗಿ ತಿಳಿಸಿದನು.

ರಾಡು, ಹಗ್ಗ, ಕೊಡಲಿಯಿಂದ ಹೆದರಿಸಿದ್ರು

ತನ್ನ ಕಾರಿನಲ್ಲಿ ಎಸಿ ಇದ್ದುದರಿಂದ ಕಾರಿನ ಡೋರ್ ಮತ್ತು ಕಿಟಕಿಗಳನ್ನು ಬಂದ್‌ ಮಾಡಿಕೊಂಡು ಕೂತಿದ್ದು, ಸುಮಾರು ರಾತ್ರಿ 9:00 ಗಂಟೆಗೆ ಸುಮಾರು 07ರಿಂದ 08 ಜನ ಯುವಕರ ಗುಂಪು ಇದ್ದಕ್ಕಿದ್ದಂತೆ ಪರೀಕ್ಷಾ ಭವನದ ಕಟ್ಟಡದ ಕಡೆಯಿಂದ ಓಡಿ ಬಂದು ತಾವು ಕುಳಿತಿದ್ದ ಕಾರನ್ನು ಸುತ್ತುವರೆದು ಕಾರಿನ ಡೋರ್‌ಗಳನ್ನು ತೆರೆಯಲು ಪ್ರಯತ್ನಿಸಿದರು. ಕಾರಿನ ಡೋರ್‌ಗಳನ್ನು ತಾನು ಸೆಂಟ್ರಲ್ ಲಾಕ್ ಮಾಡಿದ್ದರಿಂದ ಅವುಗಳನ್ನು ತೆರೆಯಲು ಅವರಿಗೆ ಸಾಧ್ಯವಾಗಲಿಲ್ಲ. ಅವರುಗಳುತಮ್ಮ ಕೈಗಳಲ್ಲಿ ಕಬ್ಬಿಣದ ರಾಡ್, ಹಗ್ಗ, ಗರಗಸ, ಕೊಡಲಿ ಮತ್ತು ಮಚ್ಚುಗಳಂತಹ ಆಯುಧಗಳನ್ನು ಹಿಡಿದಿದ್ದರು ಹಾಗೂ ಅವುಗಳನ್ನು ನನಗೆ ತೋರಿಸಿ ಹೊರಬರುವಂತೆ ಸನ್ನೆ ಮಾಡುತ್ತಿದ್ದರು. ಈ ಘಟನೆಯಿಂದ ತಾನು ಸಂಪೂರ್ಣವಾಗಿ ಗಾಬರಿಗೊಂಡಿದ್ದು ತನ್ನ ಜೊತೆಯಲ್ಲಿ ಕುಳಿತಿದ್ದ ಯುವತಿಯೂ ಕೂಡ ಗಾಬರಿಯಾಗಿದ್ದರು. ಗಾಬರಿಯಲ್ಲಿ ತಾನು ಏನು ಮಾಡಬೇಕೆಂದು ತಿಳಿಯದೆ ಗರಬಡಿದವನಂತೆ ಕುಳಿತುಬಿಟ್ಟಿದ್ದೆನು. ಏನು ನಡೆಯುತ್ತಿದೆ ಎಂದು ಅರ್ಥಮಾಡಿಕೊಂಡು ಕಾರನ್ನು ಸ್ಟಾರ್ಟ್ ಮಾಡಲು ಪ್ರಯತ್ನಿಸುವ ಮೊದಲೇ ಆ ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿ ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡ್‌ನಿಂದ ಯುವತಿ ಕುಳಿತಿದ್ದ ಬದಿಯ ಕಾರ್‌ಡೋರ್‌ನ ಗಾಜನ್ನು ಹೊಡೆದು, ಕಾರ್‌ನ ಡೋರನ್ನು ತೆರೆದು ಯುವತಿಯ ತಲೆಗೂದಲನ್ನು ಹಿಡಿದು ಕಾರ್‌ನಿಂದ ಹೊರಕ್ಕೆ ಎಳೆದುಕೊಂಡನು. ಸೆಂಟ್ರಲ್ ಲಾಕ್ ಓಪನ್ ಆಗಿದ್ದರಿಂದ ಆ ಗುಂಪಿನಲ್ಲಿದ್ದ. ಕೈಯಲ್ಲಿ ಹಗ್ಗವನ್ನು ಹಿಡಿದುಕೊಂಡಿದ್ದ ಮತ್ತೊಬ್ಬ ವ್ಯಕ್ತಿಯು ತನ್ನ ಕಡೆಯ ಡೋರನ್ನು ತೆಗೆದು,ತನ್ನನ್ನು ಕೂಡ ಕಾರ್‌ನಿಂದ ಹೊರಕ್ಕೆ ಎಳೆದುಕೊಂಡನು.

ಇದನ್ನು ಸಹ ಓದಿ : ಪ್ರಯಾಣಿಕರ ಗಮನಕ್ಕೆ/ ಶಿವಮೊಗ್ಗ ಟೌನ್​ - ಎಂಜಿಆರ್​ ಚೆನ್ನೈ ಸೆಂಟ್ರಲ್ ಸ್ಪೆಷಲ್​ ಟ್ರೈನ್​ ಸೌಲಭ್ಯ ವಿಸ್ತರಣೆ/ ವಿವರ ಇಲ್ಲಿದೆ ಓದಿ

ನಂತರ ಅವರುಗಳು ತನ್ನನ್ನು ಮತ್ತು ಆ ಯುವತಿಯನ್ನು ಪರೀಕ್ಷಾ ಭವನದ ಕಟ್ಟಡದ ಕಡೆಗೆ ಎಳೆದುಕೊಂಡು ಹೋದರು ಎಂದು ತಿಳಿಸಿದರು. ಗುಂಪಿನಲ್ಲಿದ್ದ ಒಬ್ಬ ಕೈಯಲ್ಲಿ ಹಗ್ಗವನ್ನು ಹಿಡಿದುಕೊಂಡಿದ್ದನು. ಅವನು ನನ್ನ ಭುಜಕ್ಕೆ ಹೊಡೆದು ನನ್ನ ಕೈಯಲ್ಲಿದ್ದ ಮತ್ತು ಆ ಯುವತಿಯ ಕೈಯಲ್ಲಿದ್ದ ಮೊಬೈಲ್‌ಗಳನ್ನು ಕಿತ್ತುಕೊಂಡನು. ಇನ್ನೊಬ್ಬ ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ಹೊಡೆಯುವಂತೆ ಹೆದರಿಸಿ ಹಣವನ್ನು ನೀಡುವಂತೆ ಹೇಳಿದನು ಮತ್ತು ನನ್ನ ಶರ್ಟ್ ಮತ್ತು ಪ್ಯಾಂಟಿನ ಜೇಬುಗಳಿಗೆ ಕೈ ಹಾಕಿ ಪರಿಶೀಲಿಸಿದನು. ನಾನು ನನ್ನ ಪರ್ಸು ಕಾರಿನಲ್ಲಿ ಇರುವುದಾಗಿ ಹಾಗೂ ಹಣ ಸದರಿ ಪರ್ಸನಲ್ಲಿ ಇರುವುದಾಗಿ ತಿಳಿಸಿ ಜೊತೆಯಲ್ಲಿ ಬಂದರೆ ಕಾರಿನಿಂದ ತಗೆದುಕೊಡುವುದಾಗಿ ಅವರಿಗೆ ತಿಳಿಸಿದಾಗ ಇಬ್ಬರು ಯುವಕರು ನನ್ನನ್ನು ಕರೆದುಕೊಂಡು ಕಾರಿನ ಕಡೆಗೆ ಬರುತ್ತಿರುವಾಗ ನನಗೆ ಕಾರಿನ ಹತ್ತಿರ ಯೂನಿಫಾರಂ ತೊಟ್ಟಿದ್ದ ಒಬ್ಬ ಪೊಲೀಸ್ ತನ್ನ ಕಾರಿನ ಹತ್ತಿರ ನಿಂತಿರುವುದು ಕಂಡುಬಂದಿದ್ದರಿಂದ ನಾನು ಪೊಲೀಸ್ ಪೊಲೀಸ್ ಎಂದು ಕಿರುಚಾಡತೊಡಗಿದೆ. ಆಗ ನನ್ನ ಜೊತೆಯಲ್ಲಿ ಬಂದಿದ್ದವರು ಅಲ್ಲಿ ನಿಂತಿದ್ದ ಪೊಲೀಸನ್ನು ನೋಡಿ ನನ್ನನ್ನು ಅಲ್ಲಿಯೇ ಬಿಟ್ಟು ಕಾಡಿನ ಒಳಗೆ ಓಡಿ ಹೋದರು. ನಾನು ಗಾಬರಿಯಿಂದ ಪೊಲೀಸ್ ಕಾನ್ಸ್ಟೇಬಲ್ ನಿಂತಿದ್ದ ಸ್ಥಳಕ್ಕೆ ಓಡಿ ಬಂದು ನಡೆದ ವಿಷಯವನ್ನು ಅವರಿಗೆ ತಿಳಿಸಿದೆ. ಅವರು ತನ್ನ ಕೈಯಲ್ಲಿ ಒಂದು ಟಾರ್ಚ್‌ನ್ನು ಹಿಡಿದುಕೊಂಡಿದ್ದರು ನಾವಿಬ್ಬರು ಸದರಿ ಯುವಕರು ಕಾಡಿನ ಒಳಗೆ ಹೊದ ದಾರಿಯಲ್ಲಿ ಸ್ವಲ್ಪ ದೂರ ಟಾರ್ಚ್ ಲೈಟಿನಲ್ಲಿ ಹುಡುಕಾಡಿದೇವು ಕತ್ತಲದ್ದರಿಂದ ಮುಂದೆ ಯಾವುದೇ ದಾರಿಯಲ್ಲಿದ್ದರಿಂದ ನಾವು ಮರಳಿ ಕಾರಿನ ಬಳಿ ಬಂದೆವು ಮತ್ತು ಸದರಿ ಪೊಲೀಸ್‌ ಕಾನ್ಸ್ ಟೇಬಲ್‌ರವರು ನಡೆದ ಘಟನೆಯ ಬಗ್ಗೆ ತಮ್ಮ ಮೊಬೈಲ್ ಪೋನ್ ಮುಖಾಂತರ ಅಳುತ್ತ ನಡೆದ ಘಟನೆಯ ಬಗ್ಗೆ ಮಾಹಿತಿಯನ್ನು ನನಗೆ ತಿಳಿಸಿದನು.

ಇದನ್ನು ಸಹ ಓದಿ : 15 ವರ್ಷದಿಂದ ಕಾಡು ಬಿಟ್ಟು ಬರದ ರೌಡಿ ಗಣೇಶ ಮಧ್ಯಪ್ರದೇಶಕ್ಕೆ! 6 ಮಂದಿಯನ್ನು ಕೊಂದ ಸಕ್ರೆಬೈಲ್​ ಬಿಡಾರದ ಈ ಆನೆ ಎಷ್ಟೊಂದು ಉಗ್ರ ಸ್ವರೂಪಿ ಗೊತ್ತಾ?

ವೃಷಾಭವತಿ ನದಿಯ ದಂಡೆ ಮೇಲೆ

ನಾನು ಮತ್ತು ನನ್ನ ಜೊತೆಯಲ್ಲಿ ಬಂದಿದ್ದ ಸಿಬ್ಬಂದಿಯವರು ಸರ್ಚ್ ಲೈಟ್‌ನೊಂದಿಗೆ ಯುವತಿಯನ್ನು ಕರೆದುಕೊಂಡು ಹೋಗಿದ್ದ ದಿಕ್ಕಿನಲ್ಲಿ ವೃಷಭಾವತಿ ನದಿಯ ದಂಡೆಯವರೆಗೆ ಸುಮಾರು ಒಂದು ಕಿಲೋ ಮೀಟರ್ ಕಾಡಿನ ಒಳಗೆ ನಡೆದುಕೊಂಡು ಹೋಗಿ ಹುಡುಕಿದರೂ ಸಹ ಆ ಯುವತಿಯ ಸುಳಿವು ಪತ್ತೆಯಾಗಲಿಲ್ಲ.  ಆ ಸಮಯಕ್ಕೆ ಬಂದಿದ್ದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಅನೇಕ ತಂಡಗಳನ್ನಾಗಿ ಮಾಡಿ ಕಾಡಿನಲ್ಲಿ ಯುವತಿಯನ್ನು ಪತ್ತೆ ಮಾಡಲು ಕಳುಹಿಸಿದನು ಮತ್ತು ಸ್ಥಳಕ್ಕೆ ಬಂದಿದ್ದ ಡಾಗ್ ಸ್ಟ್ಯಾಡ್‌ನೊಂದಿಗೆ ಕಾಡಿನ ಒಳಕ್ಕೆ ಹೋದಾಗ ಕಾರಿನಲ್ಲಿ ಕುಳಿತಿದ್ದ ಯುವತಿಯ ವಾಸನೆಯನ್ನು ಗುರುತು ಹಿಡಿದ ಶ್ವಾನವೂ ಕಾಡಿನೊಳಗೆ ಸುಮಾರು 100 ಮೀಟರ್‌ನಷ್ಟು ಒಳಗೆ ಕರೆದುಕೊಂಡು ಹೋಗಿ ಅಲ್ಲಿ ಬಿದ್ದಿದ್ದ ಯುವತಿಯ ಎರಡು ಚಪ್ಪಲಿಗಳನ್ನು ಪತ್ತೆ ಮಾಡಿತ್ತು

ಇದನ್ನು ಸಹ ಓದಿ : 15 ವರ್ಷದಿಂದ ಕಾಡು ಬಿಟ್ಟು ಬರದ ರೌಡಿ ಗಣೇಶ ಮಧ್ಯಪ್ರದೇಶಕ್ಕೆ! 6 ಮಂದಿಯನ್ನು ಕೊಂದ ಸಕ್ರೆಬೈಲ್​ ಬಿಡಾರದ ಈ ಆನೆ ಎಷ್ಟೊಂದು ಉಗ್ರ ಸ್ವರೂಪಿ ಗೊತ್ತಾ?

ಅದೇ ದಾರಿಯಲ್ಲಿ ಮುಂದೆ ಸಾಗಿ ವೃಷಭಾವತಿ ನದಿಯ ದಂಡೆಗೆ ಬಂದು ನಿಂತು ಬಿಟ್ಟಿತ್ತು. ಸುಮಾರು ಮಧ್ಯರಾತ್ರಿಯವರೆಗೆ ಪೊಲೀಸರ ಅನೇಕ ತಂಡಗಳು ಸಂಪೂರ್ಣವಾಗಿ ಜ್ಞಾನಭಾರತಿ ಕಾಡಿನ ಇಂಚು ಇಂಚನ್ನು ಹೂಡುಕಿದರೂ ಸಹ ಯುವತಿಯ ಮತ್ತು ಯುವತಿಯನ್ನು ಕರೆದುಕೊಂಡು ಹೋದವರ ಸುಳಿವು ಸಿಗಲಿಲ್ಲ. ಆ ಸಮಯದಲ್ಲಿ ಬೆಂಗಳೂರು ನಗರದ ಕಾನೂನು ಸುವ್ಯವಸ್ಥೆಯ ಅಡಿಷನಲ್ ಕಮೀಷನರ್ ಆಗಿದ್ದ ಶ್ರೀ ಸುನೀಲ್ ಕುಮಾರ್ ಐ.ಪಿ.ಎಸ್. ನವರು ನನಗೆ ಪೋನ್ ಮಾಡಿ ಮಾತನಾಡಿದರು. ನ್ಯಾಷನಲ್ ಲಾ ಕಾಲೇಜಿನಲ್ಲಿ ಅವರ ಪುತ್ರ ಓದುತ್ತಿದ್ದು ಅಲ್ಲಿಯೇ ಹಾಸ್ಟೆಲ್‌ನಲ್ಲಿದ್ದುದರಿಂದ ನನಗೆ ಗೊತ್ತಿದ್ದ ವಿಷಯಕ್ಕಿಂತ ಹೆಚ್ಚಿನ ವಿಷಯಗೊತ್ತಿದ್ದು ಈ ಮೊದಲೇ ಅವರೊಂದಿಗೆ ನಾನು ರಾಯಚೂರಿನಲ್ಲಿ ಕೆಲಸ ಮಾಡಿದ್ದರಿಂದ ಅವರು ನನಗೆ ಧೈರ್ಯ ತುಂಬಿ ಪ್ರಕರಣವನ್ನು ಪತ್ತೆ ಮಾಡುವಂತೆ ತಿಳಿಸಿದರು.

ಇನ್ನೂ ಇದೆ : ವಿಶೇಷ ಸೂಚನೆ : ಓದುಗರೆ ಈ ಕೇಸ್​ನ ಮುಂದಿನ ಭಾಗವನ್ನು ಸದ್ಯದಲ್ಲಿಯೇ ಪ್ರಕಟಿಸುತ್ತೇವೆ, ನಿರೀಕ್ಷಿಸಿ.. 

ಇದನ್ನು ಸಹ ಒದಿ :ಜನ ಸ್ವಯಂಸೇವಕರಾದ್ರು/ ರಾಜಕಾರಣಿ ಡಾಕ್ಟರ್​ ಆದ್ರು/ ಸಾಗರಿಕರ ಮಾನವೀಯತೆಗೆ ಸಾಕ್ಷಿಯಾದ ಆಕ್ಸಿಡೆಂಟ್

 ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link