ಅಡಿಕೆಯಲ್ಲಿ ಯಾವ ತಳಿ ಬೆಸ್ಟ್? ಯಾವುದು ಉತ್ತಮ ಸಸಿ? ಸಸಿ ಮಾಡುವುದರಲ್ಲೂ ನಡೆಯುತ್ತಾ ಮೋಸ?

Which variety is the best in arecanut? Which is the best sapling? Cheating in planting saplings?

ಅಡಿಕೆಯಲ್ಲಿ ಯಾವ ತಳಿ ಬೆಸ್ಟ್?  ಯಾವುದು ಉತ್ತಮ ಸಸಿ?  ಸಸಿ ಮಾಡುವುದರಲ್ಲೂ ನಡೆಯುತ್ತಾ ಮೋಸ?

KARNATAKA NEWS/ ONLINE / Malenadu today/ May 28, 2023 SHIVAMOGGA NEWS

ಅಡಿಕೆ ತೋಟದಲ್ಲಿ ಅಧಿಕ ಇಳುವರಿ ಬರಲು ನೆಡುವ ಗಿಡಗಳು ಸಶಕ್ತವಾಗಿರ ಬೇಕು. ನಿಜ. ಹಾಗಾದರೆ ಅಂತಹ ಉತ್ತಮ ಅಡಿಕೆ ಬೀಜದ ಆಯ್ಕೆ ಮಾಡುವುದು ಹೇಗೆ?  ಬಹಳಷ್ಟು ರೈತರು ಸೋಲುವುದು ಗಿಡ ಮಾಡಲು ಬೇಕಾದ ಬೀಜಗಳ ಆಯ್ಕೆಯ ವಿಚಾರದಲ್ಲಿ. ಅಡಿಕೆ ಕೊಯ್ಲು ಯಾವಾಗಲಾದರೂ ಮಾಡಿ ಅದರಲ್ಲಿ ಸದೃಢವಾಗಿ ಬಲಿತ ಹಣ್ಣಾದ ಅಡಿಕೆ ಆಯಬೇಕು. 30ವರ್ಷ ಮೇಲ್ಪಟ್ಟ 70 ವರ್ಷ ಒಳಗಿನ ಅಂದರೆ ಪ್ರಾಯದ ಅಧಿಕ ಕೊನೆ ಬಿಡುವ ಯಾವುದೇ ಗಿಡದಿಂದ ಬೀಜದ ಆಯ್ಕೆ ಮಾಡಬಹುದು.

ತಾಯಿಮರಗಳ ಆಯ್ಕೆ

ಬೀಜಕ್ಕಾಗಿ ತಾಯಿ ಮರಗಳನ್ನು ಗುರುತಿಸುವುದು ಮುಖ್ಯ. ಕೇವಲ ಎಲ್ಲೋ ಒಂದೆರಡು ಬಾರಿ ಉತ್ತಮ ಫಸಲು ಕೊಟ್ಟ ಮರಗಳಾದರೆ ಸಾಲದು. ಪ್ರತಿವರ್ಷ ಉತ್ತಮ ಫಸಲು ಕೊಟ್ಟ ಮರಗಳಾಗಿರಬೇಕು. ಮೇಲೆ ಹೇಳಿದಂತೆ 30 ವರ್ಷ ಪ್ರಾಯದ ಮರಗಳಾದರೆ ಸಾಕು. ಕೆಲವರು ತೀರ ಹಳೆಯ ಮರಗಳನ್ನು ಗುರುತಿಸುವುದುಂಟು.  

ಆದರೆ ಎಳೆಯ ಮರಗಳು ಸೂಕ್ತವಲ್ಲ. ಬಿತ್ತನೆ ಬೀಜದ ಅಡಿಕೆಗಾಗಿ ಗುರುತಿಸುವ ಅಡಿಕೆ ಮರ ನಿರಂತರ ಫಸಲು ಕೊಡುವುದರ ಜೊತೆಗೆ ರೋಗ ಮುಕ್ತವಾಗಿರುವುದು ಮುಖ್ಯ. ಉತ್ತಮ ಗುಣಮಟ್ಟದ ಗರಿಗಳು, ದೊಡ್ಡ ಹಿಂಗಾರ, ಆರೋಗ್ಯಪೂರ್ಣ ಮರಗಳಿಂದ ಸಂಗ್ರಹಿಸುವುದು ಸೂಕ್ತ. ಬೀಜದ ಅಡಿಕೆ ಕೊಯ್ಲು ಮಾಡುವಾಗ ಸಾಧ್ಯವಾದರೆ ಗೊನೆಯನ್ನು ಹಗ್ಗದ ಸಹಾಯದಿಂದ ಇಳಿಸಿದರೆ ಅಡಿಕೆಗೆ ಏಟಾಗುವುದು ತಪ್ಪುತ್ತದೆ. ನುರಿತ ಕಾರ್ಮಿಕರು ಗೊನೆಯನ್ನು ಕೈಯಿಂದಲೆ ಕಿತ್ತು ಹಿಡಿದು ಗೊನೆಯನ್ನು ಹಿಡಿದುಕೊಂಡೇ ಮರದಿಂದ ಇಳಿಯುತ್ತಾರೆ. ಇದರಿಂದಾಗಿ ಬಿತ್ತನೆ ಅಡಿಕೆಗಳ ಸಿಪ್ಪೆ ಜಾರುವುದು, ಕಲ್ಲಿಗೆ ಜಜ್ಜಿಹೋಗುವುದು ತಪ್ಪುತ್ತದೆ.

ನೈಸರ್ಗಿಕ ಬೀಜೋಪಚಾರ

ಬೀಜದ ಅಡಿಕೆಯನ್ನು ಒಂದಿಷ್ಟು ದಿನ ನೆರಳಿನಲ್ಲಿ ಬಾಡಿಸಿ ನಂತರ ದಪ್ಪ ಸೆಗಣಿ ನೀರಿನಲ್ಲಿ ಅದ್ದಿ ತೆಗೆದು ಮತ್ತೆ ಒಂದು ದಿನವಾದರೂ ಬಿಸಿಲಿಗೆ ಇರಿಸುವುದು ಸಾಂಪ್ರದಾಯಿಕ ಬೀಜೋಪಚಾರ. ಮಡಿಗಳನ್ನು ತಯಾರಿಸುವಾಗ ಕಳೆತ ಸಗಣಿ ಗೊಬ್ಬರ ದಪ್ಪ ಹರಡಿ ಬೀಜ ಇಟ್ಟು ಮೇಲೆ ಮತ್ತೆ ಗೊಬ್ಬರದಿಂದ ಮುಚ್ಚಬೇಕು. ಬಿಸಿಲು ಬೀಳದಂತೆ ನೆರಳು ಮಾಡಬೇಕು. ಪ್ರಾಣಿ ಪಕ್ಷಿಗಳು ಕೆದರದಂತೆ ಬಿತ್ತನೆಯ ನಂತರ ಮಡಿಗಳ ಮೇಲೆ ಸೋಗೆಯಿಂದ ಮುಚ್ಚುಲೇ ಬೇಕು. ಎರಡು ಹೊತ್ತು ನೀರುಹಾಯಿಸ ಬೇಕು.


ಎರಡನೇ ಹಂತ

ಪಾಲಿಥೀನ್ ಚೀಲಗಳಲ್ಲಿ ಕಾಡಿನ ಗೋಡು ಮಣ್ಣು ತಂದು ಹದವಾಗಿ ತುಂಬಿ ಸಾಲು ಮಾಡಿ ಇಡಬೇಕು. ಕಳೆ ತೆಗೆಯುತ್ತಿರಬೇಕು. ಸಾಧ್ಯವಾದರೇ ಸಗಣಿ ನೀರು ಮಾಡಿ ಹಾಕಿದರೂ ನಡೆಯುತ್ತದೆ. ಸಹಜವಾಗಿ ಬಿಟ್ಟರು ಗೋಡು ಮಣ್ಣಿನಲ್ಲಿ ನಿಧಾನವಾಗಿ ಕುಬ್ಜವಾಗೇ ಬೆಳೆದರು ಉತ್ತಮ. ಹಲವರು ಎತ್ತರದ ಗಿಡ ಕೇಳುತ್ತಾರೆ ಅದು ಮುಖ್ಯವಲ್ಲ. ರಾಸಾಯನಿಕ ಮುಕ್ತವಾಗಿ ಸಹಜವಾಗಿ ಬೆಳೆದ ಸಸಿಗಳು ಮುಖ್ಯ. 

 

ರೈತರು ಎತ್ತರದ ಗಿಡ ಬಯುಸುತ್ತಾರೆಂದು, ಅಡಿಕೆ ಸಸಿ ಮಾಡುವ ಕೆಲವೆಡೆ  ರಾಸಾಯನಿಕ ಬಳಸಿ ಎತ್ತರವಾಗಿ ಬೆಳಸಿ ಮೋಸ ಮಾಡಿ ಮಾರುತ್ತಾರೆ. ಇಂತಹ ಸಸಿ ಕೊಂಡು ಓಯ್ದ ರೈತ ತನ್ನ ಜಮೀನಿನಲ್ಲಿ ಗಿಡಗಳು ಸರಿಯಾಗಿ ಮೇಲೆ ಏಳದೆ ಹಳದಿ ಆಗುವುದು ಕೀಟಗಳಿಗೆ ತುತ್ತಾಗುವುದು ನೋಡಿ ಬೇಸರ ಪಟ್ಟುಕೊಳ್ಳುತಾರೆ.ಎಷ್ಟೋ ಸಲ ಮೋಸ ಹೋದ ವಿಚಾರ ಗೊತ್ತಾಗುವುದೇ ಇಲ್ಲ. ಇಂತಹ ರಾಸಾಯನಿಕ ಬಳಸಿದ ಗಿಡಗಳು ಮುಂದೆ ಶಾರೀರಿಕ ತೊಂದರೆಗೆ ಒಳಪಟ್ಟು ಹಾಳಗುತ್ತವೆ ಇಲ್ಲ ಇಳುವರಿ ಕಡಿಮೆ ಆಗುತ್ತದೆ.  

 

ತಳಿಯ ಆಯ್ಕೆ ಬಹಳ ಮುಖ್ಯ

ಅಡಿಕೆ ಬೆಳೆಯುವವರು ಪ್ರಪ್ರಥಮ ಆಯ್ಕೆ ಮಾಡಬೇಕಾದದ್ದು ತಳಿಯನ್ನ. ಉತ್ತಮ ತಳಿಯನ್ನು ಆಯ್ಕೆ ಮಾಡಿದ್ದೇ ಆದರೆ ಮುಂದಿನ ಬಹುತೇಕ ಕೆಲಸ ಸುಲಭ ಮತ್ತು ಭವಿಷ್ಯ ಸುಧೀರ್ಘ. ಇದು ಮನೆ ಕಟ್ಟುವುದಕ್ಕೆ ಪೌಂಡೇಷನ್ ಹಾಗೂ ಪಂಚಾಂಗ ಹಾಕಿದಂತೆ. ನಿಮಗೆ ಗೊತ್ತಿರುವಂತೆ ಅಡಿಕೆ ತೆಂಗು ಬೆಳೆ ಮುಂತಾದ ಧೀರ್ಘಾವಧಿ ಬೆಳೆಗಳಲ್ಲಿ ಸೂಕ್ತ ತಳಿಯ ಬೀಜ ಆಯ್ಕೆ ಮಾಡಿಕೊಳ್ಳದೆ ಇದ್ದರೆ ಮುಂದೆ ಅದನ್ನು ಸರಿಪಡಿಸಲಿಕ್ಕೆ ಆಗುವುದಿಲ್ಲ.  

 

ಕ್ಯಾಸನೂರು ಅಡಿಕೆ ತಳಿ ಉತ್ತಮ

ಕರ್ನಾಟಕದಲ್ಲಿ ಈಗ ಕರಾವಳಿ, ಮಲೆನಾಡು, ಅರೆ ಮಲೆನಾಡು ಹಾಗೂ ಅದಕ್ಕೆ  ತಾಗಿಕೊಂಡ ಬಯಲು ಸೀಮೆ ಪ್ರದೇಶಗಳಲ್ಲಿ ಅಡಿಕೆ ಬೆಳೆ ಬೆಳೆಯುತ್ತಿದ್ದು,   ಇದರಷ್ಟು  ಆದಾಯ ಕೊಡಬಲ್ಲ ಬೆಳೆ ಬೇರೊಂದು ಇಲ್ಲದ ಕಾರಣ  ಇನ್ನೂ ಇನ್ನೂ ಬೆಳೆ ಪ್ರದೇಶ ವಿಸ್ತರಣೆ ಆಗುತ್ತಲೇ ಇರುತ್ತದೆ.
ಲೋಕಲ್ ತಳಿಗಳಲ್ಲಿ ಕರಾವಳಿ ಭಾಗದ ತಳಿಯೇ ಬೇರೆ. (ದಕ್ಷಿಣ ಕನ್ನಡ, ಮಂಗಳೂರು, ಚಿಕ್ಕಮಗಳೂರು, ಇತ್ಯಾದಿ) ಉಳಿದೆಡೆಯ ತಳಿಯೇ ಬೇರೆ. ದಾವಣಗೆರೆ, ಭೀಮ ಸಮುದ್ರ, ಸಾಗರದ ಕೆಳದಿ ಕ್ಯಾಸನೂರು ಸೀಮೆಯಲ್ಲಿ ಬೆಳೆಯುತ್ತಿರುವ ಅಡಿಕೆ ಎಲ್ಲಾ ಪ್ರದೇಶಕ್ಕೂ ಹೊಂದಿಕೆಯಾಗುವ ವಿಶಿಷ್ಟ ಗುಣದ ತಳಿ.


ಇದಷ್ಟೆ ಅಲ್ಲದೆ ಅಭಿವೃದ್ಧಿ ಪಡಿಸಿದ ತಳಿಗಳು ಇವೆ .  ಮಂಗಳ (ಚೀನಾ ಮೂಲದ್ದು), ಸುಮಂಗಳ (ಇಂಡೋನೇಷ್ಯಾ) ಶ್ರೀ ವರ್ಧನ ( ಮಹಾರಾಷ್ಟ್ರ), ಶ್ರೀಮಂಗಳ (ಸಿಂಗಾಪುರ್), ಮೋಹಿತ್ ನಗರ (ಪಶ್ಚಿಮ ಬಂಗಾಳ), ಹಿರೇಹಳ್ಳಿ ( ಕರ್ನಾಟಕದ ಮಂಡ್ಯ, ಹಾಸನ, ಬೆಂಗಳೂರು, ತುಮಕೂರು) ಸಮೃದ್ದಿ (ಅಂಡಮಾನ್ ಮತ್ತು ನಿಕೋಬಾರ್), ಸ್ವರ್ಣಮಂಗಳ ( ಕೇರಳ), ಕಾಹಿಕುಚಿ (ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳು), ಮಧುರಮಂಗಳ (ಕರ್ನಾಟಕದ ಕೊಂಕಣ್ ಪ್ರದೇಶ), ನಲ್ ಬರಿ (ಉತ್ತರ ಬಂಗಾಳ), ಶತಮಂಗಳ, ಸಂಕರಣ ಮಾಡಿದ ತಳಿಗಳಾದ ವಿಟಿಎಲ್ಎಹೆಚ್ -1 ಮತ್ತು ವಿಟಿಎಲ್ಎಹೆಚ್ -2  

ಕ್ಯಾಸನೂರು ಅಡಿಕೆ ತಳಿಯಲ್ಲಿ,  ವರ್ಷಕ್ಕೆ ಗಿಡ ಒಂದರಲ್ಲಿ ಸರಾಸರಿ 3.7 ರಿಂದ 4.9 kg ವರೆಗೆ ಇಳುವರಿ ನೀಡುತ್ತಿದೆ. ಬಹಳ ಮುತುವರ್ಜಿ ಮತ್ತು ಸಾವಯವ ಗೊಬ್ಬರದಲ್ಲಿ ಬೆಳೆದರೆ 5 ರಿಂದ 6 kg ಇಳುವರಿ ಇದೆ. ಕೆಲವರು ಇದನ್ನೇ ಹೈಟೆಕ್ ಆಗಿ ರಸಗೊಬ್ಬರಗಳು, ರಾಸಾಯನಿಕ ಸೂಕ್ಷ್ಮ ಪೋಷಕಾಂಶಗಳನ್ನ ಹಾಗೂ ಹಲವು ಒಳಸುರಿಗಳನ್ನ ಹಾಕಿ ಬೆಳೆದು ಸರಾಸರಿ 10 ಕೆಜಿಗೂ ಅಧಿಕ ಇಳುವರಿ ಪಡೆದ ದಾಖಲೆ ಇದೆ. ಮರದ ಬಾಳಿಕೆ ಅಧಿಕ ರೋಗಬಾದೆ ತೀರ ಕಡಿಮೆ. ಸುಮಾರು 400 ವರ್ಷಗಳಿಗೂ ಹೆಚ್ಚಿನ ಇತಿಹಾಸ ಇರುವ ಸ್ಥಳೀಯ ತಳಿ. ಕೆಳದಿಯ ಅರಸರ ಕಾಲದಲ್ಲಿ  ಅಂದರೆ 15-16 ನೇ ಶತಮಾನದಲ್ಲಿ ಅಡಿಕೆ ಬೇಸಾಯ ಹೇಗೆ ಮಾಡಬೇಕು, ಅಂತರ ಎಷ್ಟು ಇಡಬೇಕು, 18 ಅಡಿ ಅಂತರ ಮತ್ತು ಮತ್ತೆ 9 ಅಡಿಗೆ ಎಡೆ ಸಸಿ ಆದರೆ ಆಯಾಗಿಡ ನೆಡಬೇಕು ಎಂಬ ಪದ್ದತಿ ಇತ್ತು. ಯಾವ ಯಾವ ಪ್ರದೇಶದಲ್ಲಿ ಹೇಗೇಗೆ ಬೆಳೆಸಬೇಕು ಎಂಬ ಬಗ್ಗೆ ಅಧ್ಯಯನಗಳೂ ನಡೆದಿತ್ತು ಎನ್ನುತ್ತಾರೆ ಹಿರಿಯ ಕೃಷಿಕರು