VISL ಗೇ ಶಾಹಿ ಗಾರ್ಮೆಂಟ್ಸ್​ ಪರ್ಯಾಯವೇ? ಅಪ್ಪ ಕಳ್ಳ-ಮಗ ಸುಳ್ಳ! ಭದ್ರಾವತಿಯಲ್ಲಿ ಸಂಸದರಿಗೆ ಘೇರಾವ್​! ಬಿಜೆಪಿಗೆ ಮುಖಭಂಗ! ಫೆ.3 ಕ್ಕೆ ಹೆಚ್​​ಡಿಕೆ ಎಂಟ್ರಿ

VISL factory Workers gherao MP B Y Raghavendra in Bhadravathi, The protest by the workers to save the VISL factory has intensified.

VISL ಗೇ ಶಾಹಿ ಗಾರ್ಮೆಂಟ್ಸ್​ ಪರ್ಯಾಯವೇ? ಅಪ್ಪ ಕಳ್ಳ-ಮಗ ಸುಳ್ಳ! ಭದ್ರಾವತಿಯಲ್ಲಿ ಸಂಸದರಿಗೆ ಘೇರಾವ್​! ಬಿಜೆಪಿಗೆ ಮುಖಭಂಗ! ಫೆ.3 ಕ್ಕೆ ಹೆಚ್​​ಡಿಕೆ ಎಂಟ್ರಿ
ಭದ್ರಾವತಿಯಲ್ಲಿ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದೆ. ಹಾಲಿ ಶಾಸಕ ಸಂಗಮೇಶ್ವರ್ ಹಾಗೂ ಮಾಜಿ ಶಾಸಕರ ಪತ್ನಿ ಹಾಗೂ ಜೆಡಿಎಸ್​ ಅಭ್ಯರ್ಥಿ ಶಾರದಾ ಅಪ್ಪಾಜಿಗೌಡ ಹೋರಾಟಕ್ಕೆ ಪೂರ್ಣ ಬೆಂಬಲ ಘೋಷಿಸಿದ್ದಾರೆ. ಇದು ಪ್ರತಿಭಟನೆಯ ಕಾವನ್ನ ಇನ್ನಷ್ಟು ತೀವ್ರಗೊಳಿಸಿದೆ. ಈ ಮಧ್ಯೆ ಆಕ್ರೋಶದ ಬಿಸಿ ಎದುರಾಗುವ ಸಾಧ್ಯತೆಯ ನಡುವೆಯೂ ಬಿಜೆಪಿ ಭದ್ರಾವತಿಯಲ್ಲಿ ಕಾರ್ಯಕಾರಣಿ ಸಭೆ ನಡೆಸಲು ಮುಂದಾಗಿತ್ತು. ಪರಿಣಾಮ ಬಿಜೆಪಿ ಮುಖಂಡರಿಗೆ ನಿನ್ನೆ ಭದ್ರಾವತಿಯಲ್ಲಿ ಸಿಟ್ಟು, ಹತಾಶೇ, ಆಕ್ರೋಶ, ನಿಂದನೆ ಮತ್ತು ಪ್ರತಿಭಟನೆಯು ವ್ಯಕ್ತವಾಯ್ತು. 

ಸಂಸದ ಬಿ.ವೈ ರಾಘವೇಂದ್ರರಿಗೆ ಘೇರಾವ್

ನಿನ್ನೆ ಭದ್ರಾವತಿಯಲ್ಲಿ ಪಕ್ಷದ ಜಿಲ್ಲಾ ಕಾರ್ಯಕಾರಿಣಿ ಸಭೆ ನಡೆಸಲು ಮುಂದಾದ ಬಿಜೆಪಿಗೆ ಹೊಸ ಸೇತುವೆಯ ಬಳಿಯಲ್ಲಿಯೇ ಕಾರ್ಮಿಕರ ಪ್ರತಿಭಟನೆ ವ್ಯಕ್ತವಾಯ್ತು. ಸಂಸದರ ರಾಘವೇಂದ್ರರಿಗೆ  ಮುತ್ತಿಗೆ ಹಾಕಿ, ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದ್ರು. ಜಿಲ್ಲಾ ಕಾರ್ಯಕಾರಣಿ ಸಮಿತಿ ಸಭೆಗೆ ಸಂಸದ ರಾಘವೇಂದ್ರರವರು ಭದ್ರಾವತಿಗೆ ಬರುತ್ತಿದ್ದರು. ಈ ವೇಳೇ ಬಸ್​ಸ್ಟಾಂಡ್​ ಬಳಿಯಲ್ಲಿ ಬರುವ ಹೊಸಸೇತುವೆಯ ಬಳಿಯಲ್ಲಿಯೇ ಕಾರ್ಮಿಕರು ಪ್ರತಿಭಟನೆಗೆ ಮುಂದಾದರು.ಅಸಲಿಗೆ ಕಾರ್ಮಿಕರು ಕಾರ್ಯಕಾರಣಿ ಸಮಿತಿ ಸಭೆ ನಡೆಯುವ ಜಾಗಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಅವರನ್ನು ಪೊಲೀಸರು ಸೇತುವೆ ಬಳಿಯಲ್ಲಿ ತಡೆದರು. ಆದರೆ ಪೊಲೀಸರ ಬ್ಯಾರಿಕೇಡ್ ನ್ನು ತಳ್ಳಾಡಿ ಕಾರ್ಮಿಕರು ಮುನ್ನುಗ್ಗುವ ಪ್ರಯತ್ನ ಮಾಡಿದ್ರು. ಅಷ್ಟೊತ್ತಿಗೆ ಅಲ್ಲಿಗೆ ಬಂದ ಸಂಸದ ರಾಘವೇಂದ್ರರಿಗೆ ಕಾರ್ಮಿಕರು ಮುತ್ತಿಗೆ ಹಾಕಿದ್ರು. ಸಂಸದರ ಜೊತೆಯಲ್ಲಿ ಈಶ್ವರಪ್ಪನವರು ಸಹ ಪ್ರತಿಭಟನೆಯ ಬಿಸಿ ಎದುರಿಸಿದ್ರು. 

ಧಿಕ್ಕಾರ, ಕಣ್ಣೀರು, ಬೈಗುಳ ಮತ್ತು ಶಾಪ

ಕೆಲವರು ಧಿಕ್ಕಾರ ಹಾಕುವ ಮೂಲಕ ತಮ್ಮ ಅಳಲು ತೋರ್ಪಡಿಸಿಕೊಂಡರೇ,  ಕೆಲವು ಕಾರ್ಮಿಕರು ಸಂಸದರ ಕಾಲಿಗೆ ಬಿದ್ದರು, ಇನ್ನೂ ಕೆಲವು ಕಾರ್ಮಿಕರು ಕಣ್ಣೀರು ಹಾಕಿದ್ರು, ಮತ್ತೆ ಕೆಲವರು ಅಪ್ಪ ಕಳ್ಳ ಮಗ ಮಳ್ಳ  ಎಂದು ಘೋಷಣೆ ಕೂಗಿದ್ರು. ಮಹಿಳಾ ಕಾರ್ಮಿಕರು ಬಿ.ವೈ ರಾಘವೇಂದ್ರ ಹಾಗು ಬಿ.ಎಸ್ ಯಡಿಯೂರಪ್ಪನವರಿಗೆ ಶಾಪ ಹಾಕುತ್ತಿರುವುದು ಸಹ ಕಂಡು ಬಂದಿತು. ಕಾರ್ಮಿಕರ ಪ್ರತಿಭಟನೆ ತೀವ್ರಗೊಂಡ ಹಿನ್ನಲೆಯಲ್ಲಿ ಸಂಸದರು 2 ದಿನಗಳ ಒಳಗಾಗಿ ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿ ಸ್ಥಳದಿಂದ ಕಾಲ್ಕಿತ್ತರು.ಸಂಸದರು ಹಿಂದಿರುಗಿದ ನಂತರವೂ ಪ್ರತಿಭಟನೆ  ಅಂಬೇಡ್ಕರ್ ವೃತ್ತದಲ್ಲಿ ಮುಂದುವರಿದಿತ್ತು.  

ವಿಐಎಸ್​ಎಲ್​ ಮತ್ತು ಶಾಹಿ ಗಾರ್ಮೆಂಟ್ಸ್​! 

ಇನ್ನೊಂದೆಡೆ ಹೊಸಸೇತುವೆ ರಸ್ತೆಯ ಸಿದ್ದರೂಢನಗರದ ಬಸವೇಶ್ವರ ಸಭಾಭವನದಲ್ಲಿ ನಿನ್ನೆ ನಡೆದ ಬಿಜೆಪಿ ಕಾರ್ಯಾಕಾರಿಣಿಯಲ್ಲಿಯು ವಿಐಎಸ್​ಎಲ್​​ನದ್ದೇ ಮಾತು ಗಂಭೀರ ಸ್ವರೂಪ ಪಡೆದುಕೊಂಡಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದ ಬಿವೈ ರಾಘವೇಂದ್ರ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಇಂದಿನ ಸ್ಥಿತಿಗೆ ಬಿಜೆಪಿ  ಕಾರಣವಲ್ಲ. ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳ ಅಭಿವೃದ್ಧಿಗೆ ಸೂಕ್ತ ಸಂದರ್ಭದಲ್ಲಿ ಅಂದಿನ ಸರ್ಕಾರಗಳು ಪೂರಕವಾಗಿ ಸ್ಪಂದಿಸಲಿಲ್ಲ. ಈ ಹಿನ್ನಲೆಯಲ್ಲಿ ಸಮಸ್ಯೆ ಎದುರಾಗಿದೆ. ಬಿಜೆಪಿ ಪಕ್ಷದ ಅಧಿಕಾರಕ್ಕೆ ಬಂದ ನಂತರ ಎರಡು ಕಾರ್ಖಾನೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದೆ ಎಂದರು. ಇಲ್ಲಿನ ಕಾರ್ಮಿಕರ ಹಿತಕ್ಕಾಗಿ ಯಡಿಯೂರಪ್ಪನವರು ತಮ್ಮ ಅಧಿಕಾರದ ಅವಧಿಯಲ್ಲಿ ಶಾಹಿ ಗಾರ್ಮೆಂಟ್ಸ್ ಆರಂಭಗೊಳ್ಳಲು ಕಾರಣಕರ್ತರಾಗಿದ್ದಾರೆ. ಇದರಿಂದಾಗಿ ಕ್ಷೇತ್ರದ ಸುಮಾರು 2 ಸಾವಿರ ಮಂದಿಗೆ ಉದ್ಯೋಗ ಲಭಿಸಿದೆ ಅಂತಾ ಮಾಹಿತಿ ನೀಡಿದ್ರು. 

ಪಾದಯಾತ್ರೆ ಮತ್ತು ದೆಹಲಿ ಚಲೋ ಹಾಗೂ ಎಚ್​ಡಿಕೆ ಎಂಟ್ರಿ

ಇನ್ನೂ ಸಂಸದರು 2 ದಿನಗಳ ಒಳಗಾಗಿ ಒಳಗಾಗಿ ಕಾರ್ಖಾನೆ ಆಡಳಿತ ಮಂಡಳಿ, ಕಾರ್ಮಿಕ ಸಂಘಟನೆಗಳ ಪ್ರಮುಖರು ಹಾಗು ಗಣಪ್ರತಿನಿಧಿಗಳ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಸಭೆ ನಂತರ ನಮ್ಮ ಮುಂದಿನ ಹೋರಾಟಕ್ಕೆ ತೀರ್ಮಾನಿಸಲು ಸ್ಥಳೀಯ ಶಾಸಕ ಬಿಕೆ ಸಂಗಮೇಶ್ವರ್​ ಕಾರ್ಮಿಕರಲ್ಲಿ ಮನವಿ ಮಾಡಿದ್ರು
ಇನ್ನೊಂದೆಡೆ  ಕಾರ್ಖಾನೆ ಉಳಿವಿಗಾಗಿ ಶಿವಮೊಗ್ಗ ಜಿಲ್ಲಾಧಿಕಾರಿ ಕಛೇರಿ ವರೆಗೂ ಪಾದಯಾತ್ರೆ ನಡೆಸಲಾಗುವುದು. ಕಾರ್ಮಿಕರ ಎಲ್ಲಾ ರೀತಿಯ ಹೋರಾಟಕ್ಕೂ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ  ನೀಡುವುದಾಗಿ ಶಾರದಾ ಅಪ್ಪಾಜಿ ತಿಳಿಸಿದ್ರು.
ಇವೆಲ್ಲದರ ನಡುವೆ ಕಾರ್ಮಿಕರ ನಿಯೋಗ ಮಾಜಿ ಸಿಎಂ ಕುಮಾರಸ್ವಾಮಿಯವರನ್ನ ಭೇಟಿಯಾಗಿದ್ದು, ಪ್ರತಿಭಟನೆಗೆ ಬೆಂಬಲ ನೀಡುವಂತೆ ಮನವಿ ಮಾಡಿದೆ. ಇದಕ್ಕೆ ಒಪ್ಪಿದ ಹೆಚ್​ಡಿಕೆ ಇದೇ ಫೆಬ್ರವರಿ 3 ಕ್ಕೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ.
ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ನಿವೃತ್ತ ಕಾರ್ಮಿಕರು ಇವತ್ತು  ದೆಹಲಿ ಜಾಥಾ ನಡೆಸಲಿದ್ದಾರೆ. ನಿವೃತ್ತ ಕಾರ್ಮಿಕರ ನಿಯೋಗ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಧ್ಯಕ್ಷ ಬಿ.ಜಿ ರಾಮಲಿಂಗಯ್ಯ ನೇತೃತ್ವದಲ್ಲಿ ದೆಹಲಿಗೆ ತೆರಳಲಿದ್ದು, ಅಲ್ಲಿ ಸಂಬಂಧಪಟ್ಟ ಸಚಿವರು ಹಾಗು ರಾಜ್ಯದ ಎಲ್ಲಾ ಸಂಸದರನ್ನು ಭೇಟಿಯಾಗುವ ನಿರೀಕ್ಷೆಯಿದೆ.