ಆಟೋ ಚಾಲಕರು ಮತ್ತು ಭದ್ರಾವತಿ ಪೊಲೀಸರಿಂದ ಬದಲಾಯ್ತು ಬೀದಿಗೆ ಬಿದ್ದ ಮಹಿಳೆಯ ಬದುಕು! ಏನಿದು ಘಟನೆ?

Malenadu Today

KARNATAKA NEWS/ ONLINE / Malenadu today/ Sep 3, 2023 SHIVAMOGGA NEWS

ಕಾಲ ಪ್ರತಿಯೊಬ್ಬರಿಗೂ ಉತ್ತರಿಸುತ್ತೆ! ಕಾಲದ ಮಹಿಮೆಯ ಫಲವಾಗಿ ಕೆಲವೊಮ್ಮೆ ಬದುಕು ಬೀದಿಗೆ ಬಿದ್ದು ಬಿಡುತ್ತದೆ. ಅಂತಹ ಸ್ಥಿತಿಯಲ್ಲಿರುವ ವ್ಯಕ್ತಿಗಳಿಗೆ ಸಹಾಯ ಮಾಡುವುದೇ ಮಾನವೀಯತೆ.. ಭದ್ರಾವತಿಯಲ್ಲಿ ಕಾಲ ತಂದಿಟ್ಟ ಪರಿಸ್ಥಿತಿಯಿಂದಾಗಿ ಬೀದಿಗೆ ಬಿದ್ದಿದ್ದ ಮಹಿಳೆಯೊಬ್ಬಳನ್ನು ಆಟೋ ಚಾಲಕರು ವೃದ್ಧಾಶ್ರಮಕ್ಕೆ ಸೇರಿಸಿ ಪುಣ್ಣಕಟ್ಟಿಕೊಂಡಿದ್ದಾರೆ. 

ಏನಿದು ವಿಚಾರ

ಭದ್ರಾವತಿ ನಗರದ ಉಂಬ್ಳೆಬೈಲು ರಸ್ತೆ ಸಮೀಪದ ರೈಲ್ವೆ ಅಂಡರ್ ಬ್ರಿಡ್ಜ್ ಬಳಿಯಲ್ಲಿ ಆಟೋ ಸ್ಟ್ಯಾಂಡ್ ಒಂದು ಇದೆ. ಇಲ್ಲಿಗೆ ಬಂದಿದ್ದ ಮಹಿಳೆಯೊಬ್ಬರು, ಕಳೆದ ಆರು ತಿಂಗಳಿನಿಂದ ನಿಲ್ದಾಣದ ಬಳಿಯಲ್ಲಿಯೇ ಠಿಕಾಣಿ ಹೂಡಿದ್ದರು. ಯಾರ ಬಳಿಯು ಹೆಚ್ಚು ಮಾತನಾಡದ ಮಹಿಳೆ, ಯಾರಿಂದಲೂ ಕೈ ಚಾಚಿ ಬೇಡುತ್ತಿರಲಿಲ್ಲ. ಅವರಾಗಿಯೇ ಏನಾದರೂ ಕೊಟ್ಟರೇ ತೆಗೆದುಕೊಳ್ಳುತ್ತಿದ್ದಳು. ಮೇಲಾಗಿ ಯಾರಾದರೂ ಪೂರ್ವಪರ ವಿಚಾರಿಸಿದರೇ ಮೌನಕ್ಕೆ ಶರಣಾಗುತ್ತಿದ್ದಳು. 

ಈಕೆಯ ಜೊತೆಗೆ ನಿಲ್ದಾಣದಲ್ಲಿ ನಿಲ್ಲಿಸುತ್ತಿದ್ದ ಆಟೋಗಳ ಚಾಲಕರು ಹಲವು ಸಲ ಮಾತನಾಡಿದ್ದಾರೆ. ಆದರೆ ಮಹಿಳೆಯು ಯಾವೊಂದು ವಿಚಾರವನ್ನು ಸಹ ಹೇಳಿಲ್ಲ. ಹಾಗಾಗಿ ಆಗಾಗ ಊಟ, ತಿಂಡಿ ವಿಚಾರಿಸಿ ಕೈಲಾದ ಸಹಾಯ ಮಾಡುತ್ತಿದ್ದರು ಆಟೋ ಚಾಲಕರು. 

ಈ ನಡುವೆ ಚಾಲಕರೊಬ್ಬರು ಮಹಿಳೆಯ ಬಗ್ಗೆ ನ್ಯೌಟೌನ್​ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಗೆ ನೆರವಾಗುವ ಪ್ರಯತ್ನ ಮಾಡಿದ್ದಾರೆ. ಆಟೋ ಚಾಲಕರು ಹಾಗೂ ಪೊಲೀಸರ ಸಹಾಯದೊಂದಿಗೆ , ಪುಟ್​ಪಾತ್​ ಮೇಲಿದ್ದ ಮಹಿಳೆಯು ಸದ್ಯ ಎಂಪಿಎಂ ಬಡಾವಣೆಯಲ್ಲಿರುವ ಸಂಜೀವಿನಿ ವೃದ್ಧಾಶ್ರಮ ಸೇರಿದ್ದಾಳೆ. 

  

ಭದ್ರಾವತಿ ಪೊಲೀಸರು ಹಾಗೂ ಆಟೋ ಚಾಲಕರ ಪ್ರಯತ್ನದಿಂದಾಗಿ ಮನೆಬಿಟ್ಟು ಅನಾಥೆಯಾಗಿದ್ದ ಮಹಿಳೆಗೆ ಮತ್ತೆ ಆಸರೆ ಸಿಕ್ಕಂತಾಗಿದೆ. ಈ ಘಟನೆಯ ಬಗ್ಗೆ ತಿಳಿದ ಸಾರ್ವಜನಿಕರು ಪೊಲೀಸರಿಗೆ ಆಟೋ ಚಾಲಕರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ 


ಇನ್ನಷ್ಟು ಸುದ್ದಿಗಳು 


 

 

Share This Article